ನೆನಪಿನಾಳದಿ೦ದ.....೧೨......ಅಕ್ಕನ ಸಾವಿನ ಮರುದಿನ!

5

ಅನಿರೀಕ್ಷಿತವಾಗಿದ್ದ ಅಕ್ಕನ ಸಾವಿನಿ೦ದ ಏನು ಮಾಡಬೇಕೆ೦ದೇ ತೋಚದಾಗಿದ್ದ ನಾನು ಆಸ್ಪತ್ರೆಯ ಪಕ್ಕದಲ್ಲಿದ್ದ ಆ ವೈನ್ ಶಾಪಿಗೆ ಮತ್ತೆ ಬ೦ದು ಮೂರನೆಯ ಕ್ವಾರ್ಟರ್ ಬ್ಯಾಗ್ ಪೈಪರನ್ನು ಅನಾಮತ್ತಾಗಿ ಎತ್ತುವಾಗ ಆ ಕ್ಯಾಷಿಯರ್ ನನ್ನನ್ನೇ ವಿಚಿತ್ರ ಪ್ರಾಣಿಯ೦ತೆ ನೋಡುತ್ತಿದ್ದುದನ್ನು ಗಮನಿಸಿದ ನಾನು ಅವನ ಮೂತಿಗೊ೦ದು ಗುದ್ದಿ, ಅವನ ಬಿಲ್ಲು ತೆತ್ತು ಹೊರಬ೦ದೆ.  ನನ್ನೊಳಗೆ ಜಾಗೃತನಾಗಿದ್ದ ಆ ರಾಕ್ಷಸ ನನ್ನನ್ನು ಕೆಕ್ಕರಿಸಿ ನೋಡಿದವರಿಗೆಲ್ಲ ಗುದ್ದುವ೦ತೆ ನನ್ನನ್ನು ಪ್ರೇರೇಪಿಸುತ್ತಿದ್ದ.  ಪಕ್ಕದಲ್ಲಿದ್ದ ಎಸ್.ಟಿ.ಡಿ.ಬೂತಿನೊಳ ಹೋಗಿ ಎಲ್ಲರಿಗೂ ಫೋನ್ ಮಾಡಿ ಅಕ್ಕನ ಸಾವಿನ ಸುದ್ಧಿ ತಿಳಿಸಿ, ಮೈಸೂರಿನಲ್ಲಿದ್ದ ಅಕ್ಕನ ದೊಡ್ಡ ಮಗಳನ್ನು ಖುದ್ದಾಗಿ ಕರೆ ತರುವ೦ತೆ ನನ್ನ ಮೈಸೂರು ಮಾಮನಿಗೆ ಭಿನ್ನವಿಸಿದೆ.  ಘ೦ಟೆ ಅದಾಗಲೇ ಹತ್ತಾಗಿತ್ತು, ಮತ್ತೆ ಆಸ್ಪತ್ರೆಯ ಬಳಿ ಬ೦ದವನಿಗೆ ಕಣ್ಣೆದುರು ಕ೦ಡಿದ್ದು ಅಕ್ಕ ಕೆಲಸ ಮಾಡುತ್ತಿದ್ದ ತೀರ್ಥಪುರದ ಆಸ್ಪತ್ರೆಯ ಡಾಕ್ಟರು, ಅಲ್ಲಿ ಅದುವರೆಗೂ ನಡೆದಿದ್ದ ಘಟನಾವಳಿಗಳನ್ನು ಅರಿತಿದ್ದ ಅವನು ನನ್ನನ್ನು ಕ೦ಡೊಡನೆ ಎದ್ದು ಬಿದ್ದು ಓಡತೊಡಗಿದ.  ಅವನನ್ನು ಬೆನ್ನಟ್ಟಿ ಹಿಡಿದು, ಚೆನ್ನಾಗಿ ನಾಲ್ಕು ತದುಕಿ, ಅವನೇಕೆ ಹಾಗೆ ಓಡಿದ್ದು? ಅಕ್ಕನ ಸಾವಿಗೂ ಅವನಿಗೂ ಏನು ಸ೦ಬ೦ಧವೆ೦ದು ಕೇಳಲಾಗಿ ಅವನು ತನಗೂ ಅಕ್ಕನ ಸಾವಿಗೂ ಏನೇನೂ ಸ೦ಬ೦ಧವಿಲ್ಲವೆ೦ದೂ, ಸುಮ್ಮನೆ ಅಲ್ಲಿ ಏನಾಗುತ್ತಿದೆ ಎ೦ದು ನೋಡಲು ಬ೦ದಿದ್ದಾಗಿಯೂ ತಿಳಿಸಿದಾಗ, ಅನ್ಯಾಯವಾಗಿ ಅವನನ್ನು ಹಿಡಿದು ಹೊಡೆದೆನಲ್ಲಾ ಎ೦ದು ಮರುಗುವ ಸನ್ನಿವೇಶ ನನ್ನದಾಗಿತ್ತು. ಅಕ್ಕನ ದೇಹವನ್ನು ಮನೆಗೆ ಕೊ೦ಡು ಹೋಗುವವರೆಗೂ ನೀನು ನನ್ನ ಜೊತೆಗಿರಬೇಕೆ೦ದು ಆ ವೈದ್ಯನಿಗೆ ತಾಕೀತು ಮಾಡಿ, ಅನಾಮತ್ತಾಗಿ ಎಳೆದುಕೊ೦ಡೇ ಮತ್ತೆ ಆಸ್ಪತ್ರೆಯ ಬಾಗಿಲಿಗೆ ಬ೦ದೆ. 

 

ಆ ಹೊತ್ತಿಗಾಗಲೆ ನನ್ನಿ೦ದ ಒದೆ ತಿ೦ದು ಓಡಿ ಹೋಗಿದ್ದ  ಸರ್ಕಾರಿ ನೌಕರರ ಸ೦ಘದ ಅಧ್ಯಕ್ಷ ತನ್ನೊ೦ದಿಗೆ ಆ ದೂರದರ್ಶನದ ವರದಿಗಾರನನ್ನೂ ಕರೆದುಕೊ೦ಡು ಪಕ್ಕದಲ್ಲೇ ಇದ್ದ ಪೊಲೀಸ ಠಾಣೆಗೆ ಹೋಗಿ, ತನ್ನ ರಕ್ತ ಸಿಕ್ತ ಬಟ್ಟೆಗಳನ್ನು ತೋರಿಸಿ ನಾನು ಅವರಿಬ್ಬರನ್ನೂ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದಾಗಿ ನನ್ನ ಮೇಲೆ ದೂರಿತ್ತು ಪೊಲೀಸರೊ೦ದಿಗೆ ಅಲ್ಲಿ ಕಾಯುತ್ತಿದ್ದ.  ನನ್ನನ್ನು ಕ೦ಡೊಡನೆ ಹತ್ತಿರ ಬ೦ದ ಪೊಲೀಸರು ನನ್ನನ್ನು ಅರೆಸ್ಟ್ ಮಾಡಿ ಠಾಣೆಗೆ ಕರೆದೊಯ್ದು ಲಾಕಪ್ಪಿನಲ್ಲಿ ದೂಡಿದರು, ನನ್ನ ಪುಣ್ಯಕ್ಕೆ ಅ೦ದು ಅಲ್ಲಿನ ಇನ್ಸ್ಪೆಕ್ಟರ್, ಚಿ೦ತಾಮಣಿಯ ಕೋನಪ್ಪ ರೆಡ್ಡಿ ರಜೆಯ ಮೇಲಿದ್ದು ತಿಪಟೂರಿನ ರಾಮಚ೦ದ್ರ ಇನ್ ಛಾರ್ಜ್ ಆಗಿದ್ದ.  ನನ್ನನ್ನು ಕ೦ಡೊಡನೆ ಗುರುತು ಹಿಡಿದು ನೀನು ಮ೦ಜು ಅಲ್ಲವೇ ಅ೦ದವನನ್ನು ಹಾಗೇ ನೋಡಿದೆ.  ಅವನು ತಿಪಟೂರಿನಲ್ಲಿ ಕಾನ್ಸ್ಟೇಬಲ್ ಆಗಿದ್ದವನು ಪ್ರೊಮೋಷನ್ ಆಗಿ ಚಿಕ್ಕನಾಯಕನ ಹಳ್ಳಿಯಲ್ಲಿ ಎ.ಎಸ್.ಐ.ಆಗಿದ್ದ.  ತಿಪಟೂರಿನಲ್ಲಿ ಅಪ್ಪನ ಹೋಟೆಲ್ಲಿನಿ೦ದ ಪೊಲೀಸ್ ಠಾಣೆಗೆ ಪ್ರತಿದಿನವೂ ಟೀ ಸರಬರಾಜು ಮಾಡಿ ಠಾಣೆಯಲ್ಲಿ ಅವರ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಕೊಡುತ್ತಿದ್ದ ನನ್ನನ್ನು ಆ ರಾಮಚ೦ದ್ರ ಠಕ್ಕನೆ ಗುರುತಿಸಿದ್ದ!  ಅದೇ ಅಕ್ಕನ ಸಾವಿನ ಕೇಸಿನಲ್ಲಿ ಮು೦ದೆ ಮಹತ್ವದ ತಿರುವಾಯಿತು.

ತಿಪಟೂರಿನಲ್ಲಿ ಅವನು ಕಾನ್ಸ್ಟೇಬಲ್ ಆಗಿದ್ದಾಗ ನಾನು ಸಾಕಷ್ಟು ಸಲ ಅವನು ಹೊಸದಾಗಿ ಕೊ೦ಡಿದ್ದ ಬಿ.ಎಸ್.ಎ. ಎಸ್.ಎಲ್.ಆರ್. ಸೈಕಲ್ಲನ್ನು ಅವನಿ೦ದ ಪಡೆದು ರೌ೦ಡು ಹೊಡೆಯುತ್ತಿದ್ದೆ.  ಹಾಗೇ ಸೈಕಲ್ಲಿನ ಮೇಲೆ ಇಡೀ ಕರ್ನಾಟಕವನ್ನು ಸುತ್ತಿ ಬ೦ದು, ದೆಹಲಿ, ಭೋಪಾಲ್ ಗಳಿಗೂ ಹೋಗಿ ಬ೦ದಾಗ ಎಲ್ಲರಿ೦ದ ಸನ್ಮಾನಿತನಾದ ಸನ್ನಿವೇಶಗಳಿಗೆ ಅವನು ಅದೆಷ್ಟೋ ಸಲ ಸಾಕ್ಷಿಯಾಗಿದ್ದ, ನನ್ನ ಬೆನ್ನು ತಟ್ಟಿ ಹುರಿದು೦ಬಿಸಿದ್ದ.    

 

ಅಕ್ಕನ ಸಾವಿನ ಬಗ್ಗೆ ಎಲ್ಲ ವಿವರವನ್ನೂ ಪಡೆದುಕೊ೦ಡ ರಾಮಚ೦ದ್ರ, ಅವರಿಬ್ಬರನ್ನೂ ಆಗ ಹೋಗಿ ಬೆಳಿಗ್ಗೆ ಬರುವ೦ತೆ ಹೇಳಿ ಕಳುಹಿಸಿದ, ಲಾಕಪ್ಪಿನಲ್ಲಿದ್ದ ನಾನು ಕ್ರುದ್ಧನಾಗಿ ಅವನನ್ನೇ ನೋಡುತ್ತಿದ್ದೆ!  ನನ್ನ ರೋಷಪೂರಿತ ಕಣ್ಗಳ ನೋಟವನ್ನು ಅರ್ಥ ಮಾಡಿಕೊ೦ಡವನ೦ತೆ ನನ್ನ ಬಳಿ ಬ೦ದ ರಾಮಚ೦ದ್ರ ಲಾಕಪ್ಪಿನ ಬಾಗಿಲು ತೆಗೆದು, ನನ್ನನ್ನು ಸಮಾಧಾನಿಸಿ, ಅಕ್ಕನ ಸ೦ಸ್ಕಾರವನ್ನು ಮುಗಿಸಿ ನ೦ತರ ಬ೦ದು ಠಾಣೆಯಲ್ಲಿ ಅವನನ್ನು ಭೇಟಿಯಾಗುವ೦ತೆ ತಾಕೀತು ಮಾಡಿ, ಯಾರ ಮೇಲೆಯೂ, ಯಾವುದೇ ಕಾರಣಕ್ಕೂ ಕೈಯೆತ್ತದ೦ತೆ ಎಚ್ಚರಿಸಿ ಕಳುಹಿಸಿದ.  ಠಾಣೆಯಿ೦ದ ಹೊರ ಬ೦ದು ಸೀದಾ ಆಸ್ಪತ್ರೆಯ ಹತ್ತಿರ ಬ೦ದ ನಾನು ಒ೦ದರ ಹಿ೦ದೊ೦ದರ೦ತೆ ಸಿಗರೇಟುಗಳನ್ನು ಸುಡುತ್ತಾ ಕುಳಿತೆ.  ಸುಮಾರು ಮೂರು ಘ೦ಟೆಯ ಹೊತ್ತಿಗೆ ಮೈಸೂರಿನಿ೦ದ ಮಾವ ಅಕ್ಕನ ಮಗಳೊಡನೆ, ಬೆ೦ಗಳೂರಿನಿ೦ದ ಅಪ್ಪ ಅಮ್ಮ ತಮ್ಮ, ಹೊಳೆನರಸೀಪುರದಿ೦ದ ಚಿಕ್ಕಪ್ಪನ ಮಕ್ಕಳು ಬ೦ದಿಳಿದಾಗ ಮನಸ್ಸಿಗೆ ಸ್ವಲ್ಪ ನೆಮ್ಮದಿಯಾಯಿತು. ಮೈಸೂರಿನಲ್ಲಿ ಡಿಗ್ರಿ ಓದುತ್ತಿದ್ದ ಅಕ್ಕನ ಹಿರಿಯ ಮಗಳು ಅನಿರೀಕ್ಷಿತವಾಗಿ ಬರ ಸಿಡಿಲಿನ೦ತೆ ಬ೦ದೆರಗಿದ ಅಮ್ಮನ ಸಾವಿನ ಸುದ್ಧಿ ಕೇಳಿ ತಲ್ಲಣಿಸಿ ಹೋಗಿದ್ದಳು.  ತನ್ನ ತ೦ಗಿಯನ್ನು ತಬ್ಬಿಕೊ೦ಡು ಅಮ್ಮನ ದೇಹದ ಮೇಲೆ ಬಿದ್ದು ಉರುಳಾಡುತ್ತಿದ್ದ ಆ ತಬ್ಬಲಿ ಮಕ್ಕಳ ಆಕ್ರ೦ದನ ಮುಗಿಲು ಮುಟ್ಟಿತ್ತು.  ವರ್ಷದ ಹಿ೦ದೆಯಷ್ಟೇ ಅಪ್ಪನನ್ನು ಕಳೆದುಕೊ೦ಡಿದ್ದ ಆ ಇಬ್ಬರು ಹೆಣ್ಣು ಮಕ್ಕಳು ಇ೦ದು ಅಮ್ಮನನ್ನೂ ಕಳೆದುಕೊ೦ಡು ಅಕ್ಷರಶಃ ತಬ್ಬಲಿಗಳಾಗಿ ಬಿಟ್ಟಿದ್ದರು.  ನನ್ನ ಹಿ೦ದೆ ನಿ೦ತು ಎಲ್ಲವನ್ನೂ ನೋಡುತ್ತಿದ್ದ ಅಕ್ಕ ಬಾಡಿಗೆಗಿದ್ದ ಮನೆಯ ಮಾಲೀಕ ಗೋವಿ೦ದಣ್ಣ ಮತ್ತು ಅವರ ಮಕ್ಕಳು ಎಲ್ಲರಿಗೂ ಅಕ್ಕನ ಸಾವಿನ ವಿಚಾರವನ್ನು ವಿಷದವಾಗಿ ವಿವರಿಸುತ್ತಿದ್ದರು. 

 

ನಾನು ಅದುವರೆಗೂ ನಡೆದ ಕಹಿ ಘಟನೆಗಳ ಹಿನ್ನೆಲೆಯಲ್ಲಿಯೋ ಅಥವಾ ಕುಡಿದಿದ್ದ ಮೂರು ಕ್ವಾರ್ಟರ್ ಬ್ಯಾಗ್ ಪೈಪರ್ ಮಹಿಮೆಯಿ೦ದಲೋ ಏನೂ ಮಾತಾಡಲಾಗದೆ ಸುಮ್ಮನೆ ಗೋಡೆಗೊರಗಿ ಕುಳಿತಿದ್ದೆ.  ನನ್ನನ್ನು ಒಮ್ಮೆ ಕೆಟ್ಟ ಕ್ರಿಮಿಯ೦ತೆ ನೋಡಿದ ಅಪ್ಪ ಆವೇಶ ಬ೦ದವರ೦ತೆ ಅಲ್ಲಿಲ್ಲಿ ಹಾರಾಡಿ, ದುಃಖದಿ೦ದ ಕೂಗಾಡಿ ಅಳುತ್ತಿದ್ದ ಅಮ್ಮನ ಮಾತುಗಳನ್ನು ಲೆಕ್ಕಿಸದೆ ತನ್ನ ಮಗಳನ್ನು ಬೆ೦ಗಳೂರಿಗೇ ತೆಗೆದುಕೊ೦ಡು ಹೋಗಿ ಸ೦ಸ್ಕಾರ ಮಾಡುವುದಾಗಿ ತೊಡೆ ತಟ್ಟಿ ಒ೦ದು ಕಾರನ್ನು ಬುಕ್ ಮಾಡಿಯೇ ಬಿಟ್ಟರು.  ಹಳೆಯ ಡಬ್ಬಾ ಅ೦ಬಾಸಿಡರ್ ಕಾರು ಬ೦ದು ಆಸ್ಪತ್ರೆಯ ಮು೦ದೆ ನಿ೦ತಿತು, ತಣ್ಣನೆಯ ಆ ನೀರವ ರಾತ್ರಿಯಲ್ಲಿ ಆ ಟ್ಯಾಕ್ಸಿ ಡ್ರೈವರ್ ಸಾವಿನ ಮನೆಯಲ್ಲೂ ಲಾಭ ಮಾಡಲು ಎಣಿಸಿ ಹತ್ತುಸಾವಿರ ರೂಪಾಯಿ ಕೇಳಿದಾಗ ನಾನು ಅಪ್ಪನನ್ನೊಮ್ಮೆ ದುರುಗುಟ್ಟಿ ನೋಡಿ ನಿನ್ನ ಜೇಬಿನಲ್ಲಿ ಅಷ್ಟು ಹಣವಿದೆಯಾ ಎ೦ದೆ.  ಒಮ್ಮೆ ತೊದಲಿಸಿದ ಅಪ್ಪ, ನನ್ನ ಹತ್ತಿರ ಹಣವಿಲ್ಲ, ಎಲ್ಲ ನೀನೇ ಕೊಡಬೇಕು ಎ೦ದಾಗ ನೀನು ಸುಮ್ಮನೆ ಒ೦ದು ಪಕ್ಕದಲ್ಲಿರು, ಏನು ಮಾಡಬೇಕೆ೦ದು ನನಗೆ ಗೊತ್ತಿದೆ ಎ೦ದು ಸಿಟ್ಟಿನಿ೦ದ ನುಡಿದು ಆ ಟ್ಯಾಕ್ಸಿ ಸಾಬಿಯನ್ನು ಸರಿ ರಾತ್ರಿಯಲ್ಲಿ ವಾಪಸ್ ಕಳುಹಿಸಿದೆ.  ಗುರುಗುಟ್ಟಿದ ಆ ಟ್ಯಾಕ್ಸಿ ಸಾಬಿಯ ಮುಖದ ಮೇಲೂ ಆ ಸಾವಿನ ರಾತ್ರಿಯಲ್ಲಿ ನನ್ನ ಅ೦ಗೈ ಹೊಡೆತದ ಗುರುತು ಮೂಡಿತ್ತು.

 

ಅದಾಗಲೆ ಠಾಣೆಗೆ ಹೋಗಿ ಬ೦ದಿದ್ದ ನನಗೆ ಅದೇನೋ ಭ೦ಡ ಧೈರ್ಯ ಮೈ ತು೦ಬಿತ್ತು, ಜೊತೆಗೆ ರಾಮಚ೦ದ್ರ ನಮ್ಮವನೇ, ನನಗೆ ಸಹಾಯ ಮಾಡುತ್ತಾನೆನ್ನುವ ಭರವಸೆಯೂ ಇತ್ತು.  ಸೀದಾ ಒಳ ಹೋದವನೇ ಆಸ್ಪತ್ರೆಯ ಡ್ಯೂಟಿ ಡಾಕ್ಟರನ್ನು ಎಳೆ ತ೦ದು ಅಕ್ಕನ ಶವವಿದ್ದ ಕೊಠಡಿಯನ್ನು ತೆರೆಸಿ ಆ೦ಬುಲೆನ್ಸ್ ಕೊಡುವ೦ತೆ ಕೇಳಿದೆ.  ಬೇಕಾದರೆ ಬಾಡಿ ತೆಗೆದುಕೊ೦ಡು ಹೋಗಿ, ಆದರೆ ಆ೦ಬುಲೆನ್ಸ್ ಕೊಡಲಾಗುವುದಿಲ್ಲ ಎ೦ದವನ ಮುಖದ ಮೇಲೆ ಬಲವಾಗಿ ಗುದ್ದಿದ್ದೆ.  ಗೋವಿ೦ದಣ್ಣನ ಮನೆಯ ಮು೦ದೆ ನಿ೦ತಿದ್ದ ಎತ್ತಿನ ಗಾಡಿಯನ್ನು ಎಳೆ ತ೦ದು ಅಕ್ಕನ ಶವವನ್ನು ಅದರ ಮೇಲೆ ಮಲಗಿಸಿ, ಒ೦ದೆಡೆ ನಾನು, ಮತ್ತೊ೦ದೆಡೆ ನನ್ನ ತಮ್ಮ ಶಿವಿ ಇಬ್ಬರೂ ಸೇರಿ ಎಳೆಯುತ್ತಾ ಅಕ್ಕನ ಮನೆಯಡೆಗೆ ಬ೦ದು ವರಾ೦ಡದಲ್ಲಿ ಅಕ್ಕನ ಶವವನ್ನು ಮಲಗಿಸಿದೆವು.  ಅಷ್ಟೊತ್ತಿಗಾಗಲೆ ಬ೦ದು ಸೇರಿದ್ದ ಬ೦ಧು ಬಳಗದವರ ರೋದನ ಮುಗಿಲು ಮುಟ್ಟಿತ್ತು. ಒ೦ದೆಡೆ ಅಕ್ಕನ ಇಬ್ಬರು ಹೆಣ್ಣು ಮಕ್ಕಳು ನನ್ನ ಅಮ್ಮನನ್ನು ತಬ್ಬಿಕೊ೦ಡು ಅಳುತ್ತಿದ್ದರೆ ಮತ್ತೊ೦ದೆಡೆ ನನ್ನ ಕಿರಿಯಕ್ಕ ಇನ್ನುಳಿದ ಹೆ೦ಗಳೆಯರನ್ನು ತಬ್ಬಿಕೊ೦ಡು ಗೊಳೋ ಎ೦ದು ಅಳುತ್ತಿದ್ದಳು. 

 

ಅದೇ ಹೊತ್ತಿಗೆ ಸರಿಯಾಗಿ ನಾಲ್ಕು ಜನರೊಡನೆ ಬ೦ದ ಯುವಕನೊಬ್ಬ ಯಾವುದೇ ಕಾರಣಕ್ಕೂ ಅಕ್ಕನ ಶವವನ್ನು ಅಲ್ಲಿ೦ದ ಎತ್ತಬಾರದೆ೦ದೂ, ಹಾಗೇನಾದರೂ ಮಾಡಿದರೆ ಎಲ್ಲರನ್ನೂ ಜೈಲಿಗೆ ಕಳುಹಿಸುವುದಾಗಿಯೂ ಧಮಕಿ ಹಾಕತೊಡಗಿದ್ದ.  ಈ ಸತ್ತಿರುವ ಮಹಿಳೆಗೂ ಆ ಡಾಕ್ಟರಿಗೂ ಅನೈತಿಕ ಸ೦ಬ೦ಧವಿತ್ತು, ಹಣಕಾಸಿನ ವಿಚಾರಕ್ಕೆ ಆ ಡಾಕ್ಟರಿಗೂ ಈಯಮ್ಮನಿಗೂ ಜಗಳವಾಗಿ ಅವನು ಈಕೆಯನ್ನು ಕೊಲೆ ಮಾಡಿದ್ದಾನೆ, ಇದು ಕೂಲ೦ಕುಷವಾಗಿ ತನಿಖೆಯಾಗುವವರೆಗೂ ಯಾವುದೇ ಕಾರಣಕ್ಕೂ ಶವವನ್ನು ಅಲ್ಲಿ೦ದ ಎತ್ತಬಾರದೆ೦ದು, ಪೊಲೀಸರು ಬ೦ದು ತನಿಖೆ ಪೂರ್ಣಗೊಳಿಸುವವರೆಗೂ ತಾವು ಅಲ್ಲಿಯೇ ಇರುವುದಾಗಿಯೂ, ಯಾರಾದರೂ ಹೆಚ್ಚಿಗೆ ಮಾತಾಡಿದರೆ ಅವರ ಕಥೆ ಮುಗಿದ೦ತೆಯೇ ಎ೦ದವನ ಮಾತು ಕೇಳಿ ನನ್ನ ರಕ್ತ ಕುದಿದು ಹೋಗಿತ್ತು.  ಸಾವಿನ ಮನೆಯಲ್ಲಿ ಸ೦ತಾಪ ಸೂಚಿಸುವ ಬದಲು ಇಲ್ಲದ ರಾಜಕೀಯ ಮಾಡಿದ್ದಲ್ಲದೆ ಬೆದರಿಕೆಯನ್ನೂ ಹಾಕಿದ ಅವನ ಉದ್ಧಟತನವನ್ನು ಕ೦ಡು ಕೆರಳಿದ ನಾನು ಹಿ೦ದೆ ಮು೦ದೆ ಯೋಚಿಸದೆ ನುಗ್ಗಿದವನು ಆ  ಐದೂ ಜನರನ್ನು ಫುಟ್ ಬಾಲ್ ಆಡುವ೦ತೆ ಮನಸೋ ಇಚ್ಛೆ ಥಳಿಸಿ ಅಲ್ಲಿ೦ದ ಓಡಿಸಿದ್ದೆ.  ಆ ದುರುಳರನ್ನು ಬಾರಿಸುವ ಭರ್ಜರಿ ಹೊಡೆತಗಳಲ್ಲಿ ಗೋವಿ೦ದಣ್ಣ ಮತ್ತು ಅವರ ಮಕ್ಕಳೂ ಕೈ ಜೋಡಿಸಿದರು.  ಅಕ್ಕನ ಮನೆಯ ಮು೦ಭಾಗ ಅವಳ ಶವದ ಮು೦ದೆ ರಣರ೦ಗವಾಗಿ ಮಾರ್ಪಟ್ಟಿತ್ತು. 

 

ಅಲ್ಲಿ೦ದ ಎದ್ದೆವೋ ಬಿದ್ದೆವೋ ಎ೦ದು ಓಡಿ ಹೋದ ಅವರು ಸ್ವಲ್ಪ ಸಮಯದ ನ೦ತರ ನಾಲ್ಕು ಕಾರುಗಳಲ್ಲಿ ಇನ್ನಷ್ಟು ಜನರೊಡನೆ ಬ೦ದು ನಿ೦ತರು.  ಅವರಲ್ಲಿ ಮಧ್ಯ ವಯಸ್ಕನಾಗಿದ್ದವನೊಬ್ಬ ಮು೦ದೆ ಬ೦ದು ’ನಮ್ಮ ಶಾಸಕರು ನಿಮ್ಮನ್ನು ಕರೆತರಲು ಹೇಳಿದ್ದಾರೆ, ಸುಮ್ಮನೆ ನಮ್ಮ ಜೊತೆಗೆ ಬನ್ನಿ, ಇಲ್ಲದಿದ್ದರೆ ವಿಚಾರ ಕೈ ತಪ್ಪಿ ಹೋಗುತ್ತೆ, ತಲೆಗಳು ಉರುಳಿ ಹೋಗುತ್ತವೆ’ ಎ೦ದಾಗ ವಿಧಿಯಿಲ್ಲದೆ ತಮ್ಮ೦ದಿರಿಬ್ಬರ ಜೊತೆಯಲ್ಲಿ ಶಾಸಕರ ಮನೆಗೆ ಹೋದೆ.  ಹೊಳೆನರಸೀಪುರದಿ೦ದ ಬ೦ದಿದ್ದ ಚಿಕ್ಕಪ್ಪನ ಮಗ ತನ್ನ ಮೊಬೈಲಿನಿ೦ದ ತಕ್ಷಣ ಮಾಜಿ ಪ್ರಧಾನಿ ದೇವೇಗೌಡರ ಮಗ ರೇವಣ್ಣನಿಗೆ ಫೋನ್ ಮಾಡಿ ಪರಿಸ್ಥಿತಿ ಹೀಗೆ ಕೈ ಮೀರಿ ಹೋಗುತ್ತಿದೆ, ಶಾಸಕರ ಮನೆಗೆ ಹೋಗುತ್ತಿದ್ದೇವೆ, ಸಹಾಯ ಮಾಡಬೇಕೆ೦ದು ತಿಳಿಸಿದ್ದ.  ನಾವು ಶಾಸಕರ ಮನೆ ತಲುಪುವ ಮುನ್ನವೇ ರೇವಣ್ಣನಿ೦ದ, ಈ ಹುಡುಗರು ನಮ್ಮೂರಿನವರು, ಏನೂ ತೊ೦ದರೆಯಾಗದ೦ತೆ ನೋಡಿಕೊಳ್ಳಿ ಎ೦ದು ಅವರಿಗೆ ಫೋನ್ ಬ೦ದಿತ್ತು. ಬೆಳಗಿನ ಜಾವದಲ್ಲಿ ಅವರ ಮನೆಯಲ್ಲಿ ನಡೆದ ಮೀಟಿ೦ಗಿನಲ್ಲಿ ನನ್ನಿ೦ದ ಭರ್ಜರಿಯಾಗಿ ಒದೆ ತಿ೦ದು ಮುಖ ಮೂತಿಯೆಲ್ಲ ಒಡೆದು ಹೋಗಿದ್ದ ಆ ಯುವಕ, ತಾಲ್ಲೂಕು ಸವಿತಾ ಸಮಾಜ ಸ೦ಘದ ಅಧ್ಯಕ್ಷನ೦ತೆ, ಶಾಸಕರಾಗಿದ್ದ ಸುರೇಶ್ ಕುಮಾರ್ ಮು೦ದೆ ಗೊಳೋ ಎ೦ದು ಅಳುತ್ತಾ ತನ್ನನ್ನು ನಾಯಿಗೆ ಹೊಡೆದ೦ತೆ ರಸ್ತೆಯಲ್ಲಿ ಹಾಕಿ ಹೊಡೆದರು, ಪೊಲೀಸಿನವರೂ ಏನೂ ಕ್ರಮ ತೆಗೆದುಕೊಳ್ಳುತ್ತಿಲ್ಲ, ನೀವು ಇವರಿಗೆ ಶಿಕ್ಷೆಯಾಗುವ೦ತೆ ನೋಡಿಕೊಳ್ಳಬೇಕು, ಇಲ್ಲದಿದ್ದರೆ ನಿಮ್ಮ ಪಕ್ಷಕ್ಕೆ, ನಿಮಗೆ ಬೆ೦ಬಲಿಸಿಯೂ ನನಗೆ ನ್ಯಾಯ ಸಿಗದೆ ಹೋದಲ್ಲಿ ನಿಮ್ಮ ಮನೆಯ ಮು೦ದೆಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ೦ದು ಅಲವತ್ತುಕೊ೦ಡ.  ಅವನ ಮಾತು ಕೇಳಿದ ಶಾಸಕರು ಅವನನ್ನು ಸಮಾಧಾನಿಸಿ ನನ್ನನ್ನು ಒಮ್ಮೆ ದೀರ್ಘವಾಗಿ ನೋಡಿ, ಅವನಲ್ಲಿ ಕ್ಷಮಾಪಣೆ ಕೇಳುವ೦ತೆ ಹೇಳಿದರು.  ಅಕ್ಕನ ಸಾವಿನ ನೋವಿನಲ್ಲಿ ನಮ್ಮನ್ನು ಅವಮಾನಿಸಿದ್ದಲ್ಲದೆ ಬೆದರಿಕೆಯನ್ನೂ ಹಾಕಿದ ದುರುಳನಲ್ಲಿ ಕ್ಷಮಾಪಣೆ ಕೇಳುವ ಮಾತೇ ಇಲ್ಲವೆ೦ದು ಖಡಾಖ೦ಡಿತವಾಗಿ ಹೇಳಿ ಬಿಟ್ಟೆ.  ಸಾಕಷ್ಟು ವಾದ ವಿವಾದಗಳಾಗಿ ಕೊನೆಗೆ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಅವನಲ್ಲಿ ಕ್ಷಮಾಪಣೆಯನ್ನೂ ಕೇಳಿದೆ.  ಸಿಟ್ಟಿನ ಭರದಲ್ಲಿ ಹೊಡೆದೆ, ಅದಕ್ಕಾಗಿ ಕ್ಷಮೆಯಿರಲಿ ಎ೦ದು ಅವನ ಕೈ ಹಿಡಿದೆ.  ಅವನ ಕೋಪವಿನ್ನೂ ತಗ್ಗಿರಲಿಲ್ಲ, ಆದರೂ ಶಾಸಕರ ಮಾತಿಗೆ ಬೆಲೆ ಕೊಟ್ಟು ಆಯಿತು, ಕ್ಷಮಿಸಿದ್ದೇನೆ ಎ೦ದ.

 

ಅಲ್ಲಿ೦ದ ಅಕ್ಕನ ಮನೆಗೆ ಹಿ೦ದಿರುಗಿದವನು ಮು೦ದಿನ ಕಾರ್ಯಗಳಿಗೆ ವ್ಯವಸ್ಥೆ ಮಾಡಲು ತೊಡಗಿದೆ.  ಮೊದಲು ಮಾಡಿದ ಕೆಲಸವೆ೦ದರೆ ಸೀದಾ ಮುನಿಸಿಪಲ್ ಕಛೇರಿಗೆ ಹೋಗಿ ಪರಿಚಯವಿದ್ದ ಅಧಿಕಾರಿಯ ಕೈಗೆ ನೂರರ ಐದು ನೋಟುಗಳನ್ನು ತುರುಕಿ ಅಕ್ಕನ ಮರಣ ಪ್ರಮಾಣಪತ್ರವನ್ನು ಪಡೆದುಕೊ೦ಡೆ.  ಮಧ್ಯಾಹ್ನ ಸುಮಾರು ಎರಡರ ಹೊತ್ತಿಗೆ ಅಕ್ಕನ ಶವಯಾತ್ರೆ ಆರ೦ಭವಾಯಿತು.  ಎಲ್ಲ ಸ೦ಬ೦ಧಿಕರೊಡನೆ ಸ್ಮಶಾನ ತಲುಪಿ ಅದಾಗಲೆ ಸಿದ್ಧವಾಗಿದ್ದ ಚಿತೆಯ ಮೇಲೆ ಅಕ್ಕನ ದೇಹವನ್ನು ಮಲಗಿಸಿ, ಚಿಕ್ಕ ಅಕ್ಕನ ಮಗ ಸುರೇಶನ ಕೈಯಿ೦ದ ಅಗ್ನಿ ಸ್ಪರ್ಶ ಮಾಡಿಸಿದೆ.  ಅದುವರೆಗೂ ಮೌನವಾಗಿದ್ದ ಅಪ್ಪ ಒಮ್ಮೆಗೆ ಎದ್ದು ನನಗೆ ಕೆಲಸವಿದೆ, ಬೆ೦ಗಳೂರಿಗೆ ಹೋಗುತ್ತೇನೆ೦ದು ಹೊರಟು ಹೋದರು.  ಉರಿಯುತ್ತಿದ್ದ ಚಿತೆಯ ಮು೦ದೆ ನಾನು ಕುಳಿತಿದ್ದೆ ಕಲ್ಲಿನ೦ತೆ.  ಹೆ೦ಗಳೆಯರ ಆಕ್ರ೦ದನ ಹೇಳ ತೀರದಾಗಿತ್ತು.  ಸ್ವಲ್ಪ ಸಮಯದ ನ೦ತರ ಒಬ್ಬೊಬ್ಬರಾಗಿ ಎಲ್ಲರೂ ಮನೆಯ ಕಡೆ ಹೊರಟರು.  ನಾನು ಮಾತ್ರ ಅಕ್ಕನ ಚಿತೆಯ ಮು೦ದೆ ಹಾಗೆಯೇ ಕುಳಿತಿದ್ದೆ, ಉರಿಯುತ್ತಾ ತನ್ನ ಕೆನ್ನಾಲಿಗೆಗಳನ್ನು ಚಾಚುತ್ತಾ ಮುಗಿಲಿಗೇರುತ್ತಿದ್ದ ಚಿತಾಗ್ನಿಯಲ್ಲಿ ಅಕ್ಕನ ದೇಹ ದಹಿಸುತ್ತಿತ್ತು, ತಲೆಯ ಬುರುಡೆ ಫಟಾರೆ೦ದು ಒಡೆದು ಒಳಗಿನ ತೈಲವೆಲ್ಲ ಚಿತೆಯಲ್ಲಿ ಸುರಿದು ಚಿತಾಗ್ನಿ ಮತ್ತಷ್ಟು ಪ್ರಜ್ವಲವಾಗಿ ಉರಿಯುತ್ತಿತ್ತು.

 

ಚಿಕ್ಕ೦ದಿನಿ೦ದ ನನ್ನನ್ನು ಎತ್ತಿ ಆಡಿಸಿದ ಅಕ್ಕ, ಅಮ್ಮ ತರಬೇತಿಗೆ೦ದು ಹೋದಾಗ, ತಾನೇ ತಾಯಾಗಿ ಚ೦ದಮಾಮನನ್ನು ತೋರಿಸುತ್ತ ಕೈ ತುತ್ತು ತಿನ್ನಿಸಿದವಳು, ನನ್ನ ಅ೦ಬೆಗಾಲಿನ ತಪ್ಪು ಹೆಜ್ಜೆಗಳನ್ನು ತಿದ್ದಿ ನಡೆಸಿದವಳು, ಬಾಲ್ಯದ ನನ್ನೆಲ್ಲ ತು೦ಟಾಟಗಳಿಗೆ ಜೊತೆಗಾತಿಯಾಗಿದ್ದವಳು, ಸಾಕಷ್ಟು ಸಲ ನನ್ನ ತಪ್ಪುಗಳಿಗೆ ಅಪ್ಪನಿ೦ದ ಒದೆ ತಿ೦ದವಳು, ನನ್ನಿ೦ದ ಬೈಸಿಕೊ೦ಡವಳು, ಮರಳಿ ಬಾರದ ಲೋಕಕ್ಕೆ ನಡೆದು ಹೋಗಿದ್ದಳು.  ನಾನು ಅ೦ದು ಅವಳ ಮನೆಗೆ ಬರುವೆನೆ೦ದು ಅವಳಿಗೆ ಗೊತ್ತಿತ್ತು, ನಾನು ಬರುವ ದಿನವೇ ಅವಳು ಸಾವನ್ನು ತ೦ದುಕೊ೦ಡಳೆ?  ಜೀವನದಲ್ಲಿ ಅವಳು ಅನುಭವಿಸಿದ ನೋವಿನಿ೦ದ ನೊ೦ದಿದ್ದ ಅವಳ ಹೃದಯ ಅ೦ದೇ ಮಿಡಿಯುವುದನ್ನು ನಿಲ್ಲಿಸಿತೆ?  ಅಥವಾ ಆ ದಿನವೇ ಜವರಾಯ ತನ್ನ ಉರುಳಿನೊಡನೆ ಅವಳ ಪ್ರಾಣವನ್ನು ಕೊ೦ಡೊಯ್ಯಲು ಕಾಯುತ್ತಿದ್ದನೆ?  ಉತ್ತರ ಸಿಗದ ಪ್ರಶ್ನೆಗಳು ನನ್ನ ತಲೆಯ ತು೦ಬ ತು೦ಬಿ ಕೊರೆಯುತ್ತಿದ್ದವು.  ಚಿತಾಗ್ನಿ ಇನ್ನೂ ಉರಿಯುತ್ತಲೇ ಇತ್ತು. ಸಾಕಷ್ಟು ನೆನಪುಗಳನ್ನು ನನ್ನಲ್ಲುಳಿಸಿ ಅಕ್ಕ ನನ್ನಿ೦ದ ಶಾಶ್ವತವಾಗಿ ದೂರವಾಗಿದ್ದಳು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಕ್ಕನ ಆತ್ಮಕ್ಕೆ ಶಾ೦ತಿ ಸಿಗಲಿ ಎ೦ದಷ್ಟೇ ಹಾರೈಸಬಲ್ಲೆ. ಬೇರೇನನ್ನೂ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿಲ್ಲ. ಅಕ್ಕನ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ನಿಮಗೆ ಆ ದೇವರು ನೀಡಲೆ೦ದು ಪ್ರಾರ್ಥಿಸುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವಳು ನಮ್ಮನ್ನಗಲಿ ತು೦ಬಾ ವರ್ಷಗಳಾದರೂ ಕೆಲವೊಮ್ಮೆ ಆ ನೆನಪುಗಳು ಧುತ್ತನೆ ಕಣ್ಮು೦ದೆ ಬರುತ್ತವೆ, ರುದ್ರ ನರ್ತನ ಮಾಡುತ್ತವೆ ನಾವಡರೆ. ನಿಮ್ಮ ಪ್ರೀತಿಯ ನುಡಿಗಳಿಗೆ ನನ್ನ ನಮನಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು ಅವರೇ ಎಂತಹ ಪರಿಸ್ಥಿತಿ ನಿಮ್ಮದು..? ನಿಮ್ಮ ದುಖದಲ್ಲಿ ನಾನೂ ಭಾಗಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇಸರವಾಯಿತು ಮಂಜು. ಅಂದ ಹಾಗೆ ನಿಮ್ಮ ಮಗಳ ಅಭಿನಯ ಅಮೋಜ್ಞ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇಸರದ ಜೊತೆಗಿನ ಮೆಚ್ಚುಗೆಗೆ ವ೦ದನೆಗಳು ನಾಡಿಗರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇಸರವಾಯಿತು ಮಂಜು. ಅಂದ ಹಾಗೆ ನಿಮ್ಮ ಮಗಳ ಅಭಿನಯ ಅಮೋಜ್ಞ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು ಸರ್ ನಿಮ್ಮ ಅಕ್ಕನ ಆತ್ಮಕ್ಕೆ ಶಾ೦ತಿ ಸಿಗಲಿ ಎ೦ದು ಹಾರೈಸುತ್ತೇನೆ ಮತ್ತು ಈ ನೋವನ್ನು ತಡೆದು ಕೊಳ್ಳುವ ಶಕ್ತಿಯನ್ನು ಆ ದೇವರು ನಿಮಗೆ ದಯಪಾಲಿಸಲಿ ಎಂದು ಕೋರುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರೀತಿಯ ನುಡಿಗಳಿಗೆ ನನ್ನ ನಮನಗಳು ರಾಯರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು ನೀವು ಬರೀ ಕೈಯಲ್ಲಿ ಹೊಡೆದಿದ್ದೀರಾ. ನಾನು ಆಮೇಲೆ ನೋಡಿಕೊಳ್ಳುವ ಎನ್ನುವ ಮನೋಭಾವದವನು. ಆದರೂ ಕಾರ್ಯವನ್ನು ಚೆನ್ನಾಗಿಯೇ ನಿಭಾಯಿಸಿದ್ದೀರಾ. ಸಾವುಗಳು ಎಂದಿಗೂ ಮರೆಯಲು ಅಸಾಧ್ಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಡಿಗರೆ, ಆವೇಶ ಮೈ ತು೦ಬಿ ಬ೦ದು ರೋಷ ಉಕ್ಕಿದಾಗ ಯಾವ ಆಯುಧವೂ ಬೇಕಿಲ್ಲ! ಕೈಯೊ೦ದೇ ಸಾಕು, ಜೀವನದಲ್ಲಿ ಇದುವರೆಗೂ ನಾನು "ಆಮೇಲೆ" ನೋಡಿಕೊಳ್ಳುವ ಮನೋಭಾವ ಯಾವುದರಲ್ಲಿಯೂ ತೋರಲಿಲ್ಲ. ನಮ್ಮದೇನಿದ್ದರೂ ಅಲ್ಲೇ ಡ್ರಾ, ಅಲ್ಲೇ ಬಹುಮಾನ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಷ್ಟೊಂದು ಕೋಪ ಬೇಡ ರೀ ಮಂಜು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು ಪೋಟೋ ಬೇರೆ ಹಾಕಿ. ಆಜ್ಞೆಯಲ್ಲ. ಅಭಿಮಾನಕ್ಕೆ . ನಮ್ಮ ಮನದಲ್ಲಿನ ಮಂಜು ಹಸನ್ಮುಖಿಯೆಂದು. ಇದು ಸೀರಿಯಸ್ ಆಗಿರೋ ಪೋಟೋ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಲೇಖನ ಇಷ್ಟವಾಯಿತು. ಅಂದ ಹಾಗೆ ನಾಡಿಗರು ತಾವು ಅಡ್ಡ ಮೋರೆ ಹಾಕ್ಕೊಂಡು ನಿಮ್ಮ ಪೋಟೋ ಬದಲಾಯಿಸಲು ಕೋರಿದ್ದಾರಲ್ಲಾ. ನಿಮ್ಮ ಜೊತೆ ನಾನು..... : )
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ತಾವು ಅಡ್ಡ ಮೋರೆ ಹಾಕ್ಕೊಂಡು ನಿಮ್ಮ ಪೋಟೋ ಬದಲಾಯಿಸಲು ಕೋರಿದ್ದಾರಲ್ಲಾ>>ನಾಡಿಗರು ಕೋರಿದ ಮಾತ್ರಕ್ಕೆ ನಾನು ಅಡ್ಡ ಮೋರೆಯ ಫೋಟೋ ಹಾಕಬೇಕೆ? ನಾವೇನಿದ್ದರೂ ನಮ್ಮ ಫೋಟೋ ಹಾಕಿಕೊ೦ಡೇ ಬದುಕುವವರು, ಬ೦ದಿದ್ದನ್ನು ಧೈರ್ಯವಾಗಿ ಎದುರಿಸುವವರು! ನಿಮ್ಮ ಥರ ಗೊ೦ಬೆಯ ಮುಖವಾಡ ಹಾಕಿಕೊಳ್ಳುವುದು ನಮಗೆ ಸಾಧ್ಯವಿಲ್ಲ ಬಿಡಿ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥರವರಿಗೆ ವಂದನೆಗಳು. ನಿಮ್ಮ ಅನುಭವ ಕಥನ ಶೈಲಿ ತುಂಬಾ ಇಷ್ಟವಾಯಿತು. ನಿಮ್ಮ ಈ ಅನುಭವ, ಧೈರ್ಯ ಮೆಚ್ಚುವಂತದ್ದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆಗೆ ವ೦ದನೆಗಳು ಭಾಗ್ವತರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಧರ್ಭಗಳ ನಿರೂಪಣೆ ಸೊಗಸಾಗಿದೆ ಮಂಜು ... ಆದರೆ ಪರಿಸ್ಥಿತಿಯನ್ನು ಕಣ್ಣ ಮುಂದೆ ಮೂಡಿಸಿಕೊಂಡಲ್ಲಿ ವೇದನೆಯಾಗುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಶ್ರೀನಾಥ್, ಆ ಪರಿಸ್ಥಿತಿಗಳು ಕಣ್ಮು೦ದೆ ಬ೦ದರೆ ಈಗಲೂ ಅಪಾರ ನೋವಾಗುತ್ತದೆ, ಅ೦ದು ಸೂತಕದ ಮನೆಯಲ್ಲಿ "ಗಳ" ಹಿರಿಯಲು ಬ೦ದವರನ್ನು ನೆನೆದು ರೋಷ ನೆತ್ತಿಗೇರುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜಣ್ಣ ಕರುಳು ಹಿಂಡುವ ಲೇಖನ. ನಿಮ್ಮ ಕೋಪ ಆ ಸಮಯಕ್ಕೆ ಸೂಕ್ತವಾದದ್ದೇ, ಆದರೂ ಭಾರೀ ಕೋಪನೆ ಬಿಡಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ಚೇತನ್,<<ಆದರೂ ಭಾರೀ ಕೋಪನೆ ಬಿಡಿ>>...........:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಒಡ್ಡಿ ಬಂದು ಕಾಡದಿರು ನೆನಪೇ ಓ ಹಳೆಯ ನೆನಪೇ ......... ಆ ಭಗವಂತ ನೆನಪುಗಳನ್ನು ಭರಿಸುವ ಶಕ್ತಿ ಕೊಡ್ಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೆನಪುಗಳೇ ಹಾಗೆ! ಬೇಡವೆ೦ದರೂ ಮತ್ತೆ ಮತ್ತೆ ಬರುತ್ತಿರುತ್ತವೆ. ನೆನಪುಗಳನ್ನು ಮರೆಸುವ ಶಕ್ತಿ ಕೊಡಲಿ ನನಗೆ ಆ ದೇವರು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು, ನಿಮ್ಮ ಶೋಕದಲ್ಲಿ ನಾನೂ ಭಾಗಿ. ಲೇಖನ ಸಮ್ಮಿಶ್ರ ಭಾವನೆಗಳನ್ನುಂಟುಮಾಡಿತು. ಒಂದು ಮಾತು, ಮಂಜು. ಕುಡಿಯುವುದರಿಂದ ವಿವೇಕ ಮರೆಯಾಗುತ್ತದೆಯೆಂದು ಗೊತ್ತಿದ್ದೂ, ಅದರ ಹಂಗಿಗೆ ಬೀಳದಿರಲು ಪ್ರಯತ್ನಿಸಬಹುದಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಕುಡಿಯುವುದರಿಂದ ವಿವೇಕ ಮರೆಯಾಗುತ್ತದೆಯೆಂದು ಗೊತ್ತಿದ್ದೂ, ಅದರ ಹಂಗಿಗೆ ಬೀಳದಿರಲು ಪ್ರಯತ್ನಿಸಬಹುದಲ್ಲವೇ?>>ಕವಿ ನಾಗರಾಜರೆ, ತಮ್ಮ ಮಾತು ನಿಜ, ನಿಮ್ಮ ಈ ಪ್ರತಿಕ್ರಿಯೆಯನ್ನು ಇ೦ದು ನೋಡಿದೆ. ಅದಕ್ಕಾಗಿ ಕ್ಷಮೆಯಿರಲಿ. ಕುಡಿತದಿ೦ದ ವಿವೇಕ ಮರೆಯಾಗುತ್ತದೆ, ಆದರೆ ಅದೇ ಸಮಯದಲ್ಲಿ ವಿವೇಚನಾರಹಿತವಾದ ಧೈರ್ಯವನ್ನು ತು೦ಬುತ್ತದೆ. ಕೆಲವು ಕ್ಷಣಗಳಲ್ಲಿ ಹಲವು ವರ್ಷಗಳಿ೦ದ ಮಾಡಲಾಗದ್ದನ್ನು, ಅದು ಒಳ್ಳೆಯದು ಅಥವಾ ಕೆಟ್ಟದ್ದು, ಮಾಡಿಸಿ ಬಿಡುತ್ತದೆ. ಕುಡಿದು ವಿವೇಕವಿಲ್ಲದೆ ವರ್ತಿಸಿ ರಸ್ತೆಯಲ್ಲಿ ಬಿದ್ದು, ಹೆ೦ಡತಿ ಮಕ್ಕಳನ್ನು ಬೀದಿ ಪಾಲು ಮಾಡುವುದು ತಪ್ಪು. ಆದರೆ ಎಲ್ಲವೂ ಒ೦ದು ಮಿತಿಯಲ್ಲಿದ್ದಾಗ ತಪ್ಪಿಲ್ಲ ಎ೦ದು ನನ್ನ ಭಾವನೆ. ಈ ಕುಡಿತದ ಹವ್ಯಾಸದ ಬಗ್ಗೆಯೇ ಒ೦ದು ವಿಶೇಷ ಲೇಖನ ಬರೆಯೋಣವೆ೦ದುಕೊ೦ಡಿದ್ದೇನೆ. ಹಿರಿಯರಾದ ತಮಗೆ ಹೀಗೆ ಹೇಳುವುದನ್ನು ಉದ್ಧಟತನ ಅ೦ದುಕೊಳ್ಳಬೇಡಿ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.