ಕನ್ನಡ ಶಾಸ್ತ್ರೀಯ ಸ್ಥಾನಕ್ಕೆ ಅರ್ಹವೇ? ಎಳ್ಳಷ್ಟೂ ಸಂಶಯ ಬೇಡ!

3

ಕಳೆದ ಕೆಲವು ವರ್ಷಗಳಿಂದ ಕನ್ನಡ ಶಾಸ್ತ್ರೀಯ ಸ್ಥಾನಮಾನಕ್ಕೆ ಅರ್ಹವಲ್ಲ ಎಂಬ ಕಿಡಿಗೇಡಿಗಳ ಮಾತಿನಿಂದ ಎಷ್ಟೋ ಕನ್ನಡಿಗರ ಮನಸ್ಸು ನೊಂದುಕೊಂಡಿತ್ತು. ನೊಂದ ಮನಸ್ಸು ಹೋರಾಟದ ಹಾದಿ ಹಿಡಿಯಿತು. ಹೋರಾಟದ ಹಾದಿ ಶಾಸ್ತ್ರೀಯ ಸ್ಥಾನವನ್ನು ಮತ್ತಷ್ಟು ಹತ್ತಿರಗೊಳಿಸಿತು. ಕೊನೆಗೂ ಕೇಂದ್ರ ಸರಕಾರ ತಲೆದೂಗಿ, ತೆಲೆಬಾಗಿ ಕನ್ನಡಿಗರ ಬೇಡಿಕೆಯನ್ನು ಈಡೇರಿಸಿತು. ಕರ್ನಾಟಕದ ಹುಟ್ಟುಹಬ್ಬದ ದಿನ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಬಂದದ್ದು ಕನ್ನಡಿಗರಿಗೆಲ್ಲ ಒಂದು ಅಪೂರ್ವ ಸಂಗಮದಂತೆ ತೋರುತ್ತಿದೆ.

ಅದಿರಲಿ, ಕನ್ನಡ ಭಾಷೆ ಶಾಸ್ತ್ರೀಯ ಸ್ಥಾನಕ್ಕೆ ಅರ್ಹವೇ? ಶಾಸ್ತ್ರೀಯ ಸ್ಥಾನದಿಂದ ಕನ್ನಡಕ್ಕಾಗುವ ಲಾಭಗಳೇನು? ಇಂತಹ ಕಿಡಿಗೇಡಿ ಪ್ರಶ್ನೆಗಳನ್ನು ಬೇರು ಸಹಿತ ಕಿತ್ತು ಹಾಕಲು ನನ್ನದೊಂದು ಸಣ್ಣ ಪ್ರಯತ್ನ ಇಲ್ಲಿದೆ.

ಯಾವುದೇ ಒಂದು ಭಾಷೆ ಶಾಸ್ತ್ರೀಯ ಸ್ಥಾನ ಪಡೆಯಲು ಬೇಕಾದ ಅರ್ಹತೆಗಳೆಂದರೆ,
(೧) ಭಾಷೆ ಸಾಕಷ್ಟು ಪ್ರಾಚೀನವಾಗಿರಬೇಕು, ಕೇಂದ್ರ ಸರಕಾರದ ಪ್ರಕಾರ ಭಾಷೆ ೧೫೦೦-೨೦೦೦ ವರ್ಷಗಳಷ್ಟು ಹಳೆಯದಾಗಿರಬೇಕು.
(೨) ಆ ಭಾಷೆಗೆ ತನ್ನದೇ ಆದ ಸ್ವತಂತ್ರ ಸಂಸ್ಕೃತಿಯಿರಬೇಕು.
(೩) ಅದರ ಉಗಮ (ಹುಟ್ಟು) ಬೇರೊಂದು ಭಾಷೆ/ಸಂಸ್ಕೃತಿಯ ಪ್ರಭಾವಕ್ಕೊಳಪಡದೇ, ತನ್ನದೇ ಆದ ಸ್ವತಂತ್ರ ನೆಲೆಯಲ್ಲಾಗಿರಬೇಕು.
(೪) ಆ ಭಾಷೆಯ ಪ್ರಾಚೀನ ಸಾಹಿತ್ಯ ವಿಪುಲವಾಗಿರಬೇಕು ಮತ್ತು ವಿಶಿಷ್ಟವಾಗಿರಬೇಕು.

ಕನ್ನಡಕ್ಕೆ ಆ ಎಲ್ಲ ಅರ್ಹತೆಗಳಿವೆಯೇ? ಎಳ್ಳಷ್ಟೂ ಸಂಶಯ ಬೇಡ!

(೧) ಕನ್ನಡದ ಪ್ರಾಚೀನತೆ:

  • ಕ್ರಿ. ಪೂ. ಮೂರನೇ (300 B.C.) ಶತಮಾನಕ್ಕೆ ಸೇರಿದ, ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಶಸನವೊಂದರಲ್ಲಿ ಕಾಣಿಸಿಕೊಳ್ಳುವ ’ಇಸಿಲ’ ಎಂಬ ಪದವೇ, ತೇದಿಯುಳ್ಳ ಪ್ರಾಚೀನತಮ ಪದ ಎಂದು ವಿದ್ವಾಂಸರಾದ ಡ್.ಎಲ್.ನರಸಿಂಹಾಚಾರ್ಯರ ಅಭಿಪ್ರಾಯ.
  • ಈಜಿಪ್ಟ್ ದೇಶದ ಟಾಲೆಮಿ ಎಂಬ ಭೂಗೋಲ ಶಾಸ್ತ್ರಜ್ಞನು ಬರೆದ ಗ್ರಂಥದಲ್ಲಿ, ಭಾರತದ ಅನೇಕ ಊರುಗಳ ಹೆಸರುಗಳನ್ನು ಹೇಳುವಲ್ಲಿ ಕರ್ನಾಟಕದ ಅನೇಕ ಊರುಗಳ ಹೆಸರುಗಳೂ ಉಲ್ಲೇಖಿತವಾಗಿವೆ. ಇದರ ಕಾಲ ಕ್ರಿ.ಶ.೧೪೦.
  • ಕ್ರಿ.ಶ. ೨ನೇ ಶತಮಾನಕ್ಕೆ ಸೇರಿದ ಗ್ರೀಕ್ ನೆಗೆನಾಟಕವೊಂದರಲ್ಲಿನ ಕೆಲವು ಪದಗಳನ್ನು, ಕನ್ನಡ ಭಾಷೆಯವೆಂದು ಊಹಿಸಲಾಗಿದೆ.
  • ಕಿ.ಶ. ೪೫೦ ರಲ್ಲಿ "ಹಲ್ಮಿಡಿ ಶಾಸನ"ದ ರಚನೆಯಾಯಿತು. ಹಲ್ಮಿಡಿ ಶಾಸನದ ಭಾಷೆ ಪ್ರೌಢವಾದ ಗದ್ಯ.

ಮೇಲಿನ ಮೊದಲ ಮೂರು ಅಂಶಗಳಿಂದ ಕನ್ನಡದ ಪ್ರಾಚೀನತೆ ೨೦೦೦ ವರ್ಷಗಳಿಗಿಂತ ಹಳೆಯದೆಂದು ಸಾಬೀತಾಗುತ್ತದೆ. ಅದರಲ್ಲೇನಾದರು ಸಂದೇಹವಿದ್ದರೆ ಹಲ್ಮಿಡಿ ಶಾಸನದ ಕಾಲವನ್ನು ಗಮನಿಸಿ. ಒಂದು ಶಾಸನದ ಭಾಷೆ ಪ್ರೌಢ ಗದ್ಯವಾಗಬೇಕಾದರೆ ಅದರ ಹಿಂದ ಕೊನೆಯ ಪಕ್ಷ ಒಂದು ಶತಮಾನದ ಚಾರಿತ್ರಿಕ/ಸಾಂಸ್ಕೃತಿಕ ಹಿನ್ನೆಲೆಯಿರಬೇಕು. ಅದಕ್ಕಿಂತ ಮುಂಚೆ ಆ ಭಾಷೆ ಸರಿಸುಮಾರು ೨-೩ ಶತಮಾನಗಳಷ್ಟಾದರೂ ಜನರ ಆಡು ಮಾತಾಗಿ ಬಳಕೆಯಾಗಿರಬೇಕು. ಆದ್ದರಿಂದ ಕೊನೆಯ ಪಕ್ಷ, ಕನ್ನಡ ಸಾಹಿತ್ಯಕ್ಕೆ ೧೬೦೦-೧೬೫೦ ವರ್ಷಗಳ ಇತಿಹಾಸವಿರುದಂತೂ ಗಟ್ಟಿ.

(೨) ಕನ್ನಡದ ಸ್ವತಂತ್ರ ಸಂಸ್ಕೃತಿ: "ಕನ್ನಡ ಭಾಷೆ ಸಂಸ್ಕೃತದಿಂದ ಹುಟ್ಟಿದ್ದು ಎಂದು ಕೆಲವರ ಆಭಿಪ್ರಾಯ. ಆದರೆ ಇದು ಸರಿಯಲ್ಲ. ಕನ್ನಡ ಪಂಚದ್ರಾವಿಡ ಭಾಷೆಗಳಲ್ಲಿ ಒಂದು. ತಮಿಳು, ಕನ್ನಡ, ತೆಲುಗು, ಮಲೆಯಾಳಂ ಮತ್ತು ತುಳು, ಇವುಗಳನ್ನು ಪಂಚ ದ್ರಾವಿಡ ಭಾಷೆಗಳೆಂದು ಕರೆಯಲಾಗಿದೆ. ಈ ಐದೂ ದ್ರಾವಿಡ ಭಾಷೆಗಳಿಗೆ ತಾಯಂತಿದ್ದ ಮೂಲದ್ರಾವಿಡ ಭಾಷೆಯೊಂದು ಇದ್ದು, ಈ ಐದೂ ಕಾಲಕ್ರಮೇಣ ಕವಲೊಡೆದು ಬೇರೆ ಬೇರೆ ಭಾಷೆಗಳಾದುವುವೆಂದು ಭಾಷಾಶಾಸ್ತ್ರಜ್ಞರ ಅಭಿಪ್ರಾಯ [ಜಿ.ಎಸ್.ಶಿವರುದ್ರಪ್ಪ]." ಆದ್ದರಿಂದ ತಮಿಳಿಗೆ ಸ್ವತಂತ್ರ ಸಂಸ್ಕೃತಿಯಿದೆ, ಕನ್ನಡಕ್ಕಿಲ್ಲವೆಂಬ ಮಾತು ಮಲತಾಯಿ ಧೋರಣೆಯೇ ವಿನಾ ಬೇರೆನಲ್ಲ. ಭಾಷಾಶಾಸ್ತ್ರಜ್ಞರ ಲೆಕ್ಕದಲ್ಲಿ ಕನ್ನಡದ ಇತಿಹಾಸ ತಮಿಳಿನಷ್ಟಾದರೂ ಹಳೆಯದು ಎಂದು ಸಾಬೀತಾಗುತ್ತದೆ. ಚಾರಿತ್ರಿಕವಾಗಿ, ಸಾಂಸ್ಕೃತಿಕವಾಗಿ ಕನ್ನಡ ತನ್ನದೇ ಆದ ಸ್ವತಂತ್ರ ಸಂಸ್ಕೃತಿಯನ್ನು ಹೊಂದಿದೆಯೆಂಬುದು ಸ್ಪಷ್ಟ.

(೩) ಕನ್ನಡಕ್ಕೆ ಸ್ವಂತ ನೆಲೆಯಿದೆ, ಸಂಸ್ಕೃತದಂತಹ ಭಾಷೆಗಳ ಪ್ರಭಾವ ಶಿಖರದ ತುದಿ ಮುಟ್ಟಿಲ್ಲ: ಸುಮಾರು ೧೬೦೦-೨೦೦೦ ವರ್ಷಗಳಷ್ಟು ಪ್ರಾಚೀನವಾಗಿರುವ ಭಾಷೆಯಲ್ಲಿ ಸಾಹಿತ್ಯ ರಚನೆ ಆರಂಭವಾದದ್ದು ಯಾವಾಗ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಎಲ್ಲಾ ಭಾಷೆಗಳಿಗೂ ಇರುವಂತೆ, ಲಿಖಿತರೂಪವನ್ನು ತಾಳದ, ಬಾಯಿಂದ ಬಾಯಿಗೆ ಹರಿದು ಬರುವ ಸಾಹಿತ್ಯಾಭಿವ್ಯಕ್ತಿ ಕನ್ನಡ ಭಾಷೆಗೂ ಇದ್ದಿರಬೇಕು. ಕನ್ನಡದ ಮೊದಲ ಗ್ರಂಥವೆಂದು ಭಾವಿತವಾದ ’ಕವಿರಾಜಮಾರ್ಗದಲ್ಲಿ ಇಂತಹ ಸಾಹಿತ್ಯ ಇದ್ದ ಬಗ್ಗೆ ಸಾಕಷ್ಟು ಸೂಚನೆಗಳಿವೆ. ಹೇಗೆ? ಯಾವ ಸೂಚನೆಗಳು? ಕವಿರಾಜ ಮಾರ್ಗ ಒಂದು ಲಕ್ಷಣ ಗ್ರಂಥ. ಎಂದರೆ, ಕವಿಗಳಿಗೆ ಕಾವ್ಯ ಲಕ್ಷಣವನ್ನು ತಿಳಿಸುವ, ಚರ್ಚಿಸುವ ಗ್ರಂಥ. ಕಾವ್ಯ ಎಂದರೇನು, ಕಾವ್ಯದ ಪರಿಕರಗಳು ಯಾವುವು, ಕಾವ್ಯದ ಸ್ವಾರಸ್ಯ ಎಲ್ಲಿದೆ, ಕಾವ್ಯದ ಗುಣ ಯಾವುದು, ದೋಷ ಯಾವುದು, ಕಾವ್ಯದ ಉದ್ದೇಶ ಪ್ರಯೋಜನಗಳು ಯಾವುದು ಇತ್ಯಾದಿ ಸಂಗತಿಗಳನ್ನು ಕುರಿತ ಗ್ರಂಥ. ಇಂತಹ ಕೃತಿ ಯಾವಾಗಲೂ ಸಮೃದ್ಧವಾದೊಂದು ಸಾಹಿತ್ಯವಿದ್ದಾಗ ಮಾತ್ರ ಹುಟ್ಟಲು ಸಾಧ್ಯ. ಕೆಲವರು ’ಕವಿರಾಜಮಾರ್ಗ’ ಸಂಸ್ಕೃತ ಕವಿ ದಂಡಿಯು ಬರೆದ ’ಕಾವ್ಯಾದರ್ಶ’ ಎಂಬ ಅಲಂಕಾರ ಗ್ರಂಥದ ಅನುವಾದ ಮಾತ್ರ ಎಂದು ಮೇಲೆ ಹೇಳಿದ ಮಾತನ್ನು ಅಲ್ಲಗಳೆಯುವುದುಂಟು. ಸಾಹಿತ್ಯ ಪ್ರಜ್ಞೆಯಿರುವ ಯಾರೇ ಆಗಲಿ, "ಕವಿರಾಜಮಾರ್ಗ ದಂಡಿಯ ಕಾವ್ಯಾದರ್ಶದ ಅನುವಾದ ಮಾತ್ರವಾಗಿಲ್ಲ, ತಕ್ಕಷ್ಟು ಸ್ವತಂತ್ರ ದೃಷ್ಟಿಯನ್ನೂ, ವೈಚಾರಿಕತೆಯನ್ನೂ ಪ್ರಕಟಿಸುವ ಕೃತಿಯಾಗಿದೆ" ಎಂಬ ಸತ್ಯ ಎದ್ದು ಕಾಣುತ್ತದೆ. ಒಂದು ಭಾಷೆಯ ಲಕ್ಷಣ ಗ್ರಂಥದಲ್ಲಿ ಇಷ್ಟೊಂದು ಸ್ವತಂತ್ರ ದೃಷ್ಟಿ ಇದ್ದಮೇಲೆ ಅದಕ್ಕ ಸ್ವತಂತ್ರವಾದ ನೆಲೆ, ಸಂಸ್ಕೃತಿ ಇರಲೇ ಬೇಕು ಎಂಬ ಮಾತು ನಿಸ್ಸಂಶಯವಾದದ್ದು.

(೪) ಪ್ರಾಚೀನ ಕನ್ನಡ ಸಾಹಿತ್ಯ ವಿಪುಲ್ಲವಾದುದು ಮತ್ತು ವಿಶಿಷ್ಟವಾದುದು: ಕನ್ನಡ ಸಾಹಿತ್ಯದ ಸಮಗ್ರ ಇತಿಹಾಸವನ್ನು ಅವಲೋಕಿಸಿದಾಗ ಕಾಣುವುದಿಷ್ಟು. ಕವಿರಾಜಮಾರ್ಗದಲ್ಲಿ ಉಲ್ಲೇಖವಾದ ಚೆತ್ತಾಣೆ ಬೆದಂಡೆಗಳ ಕಾವ್ಯರೂಪಗಳಿಂದ ಹಿಡಿದು, (ಅ) ಚಂಪು (ಆ) ವಚನ-ರಗಳೆ-ಷಟ್ಪದಿ (ಇ) ಕೀರ್ತನ-ತ್ರಿಪದಿ-ಸಾಂಗತ್ಯ (ಈ) ಭಾವಗೀತೆ-ಗದ್ಯ ಮತ್ತು (ಉ) ಕಥೆ-ಕಾದಂಬರಿಗಳವರೆಗಿನ ಕನ್ನಡ ಸಾಹಿತ್ಯದ ಉದ್ದಗಲಗಳು ಒಂದು ಶಾಸ್ತ್ರೀಯ ಭಾಷೆಗೆ ಬೇಕಾದ ಉದ್ದಗಲಗಳಿಂತ ಒಂದು ಪಟ್ಟು ಹೆಚ್ಚೆ ಎನ್ನಬೇಕು. ಒಂದು ದೇಶದ ಸಂಸ್ಕೃತಿ, ಧರ್ಮ, ಚರಿತ್ರೆ, ಮತ್ತು ಜನಜೀವನದ ಚೌಕಟ್ಟಿನಲ್ಲಿಟ್ಟು ಭಾಷೆಯನ್ನು ನೋಡಿದಾಗ ಮಾತ್ರ ಅದರ ವೈವಿಧ್ಯತೆಯ ಅರಿವಾಗುತ್ತದೆ. ಆ ವೈವಿಧ್ಯತೆ ಕನ್ನಡಕ್ಕಿದೆ, ಅದರ ಬಗ್ಗೆ ಅನುಮಾನವಿದ್ದವರು ಮೇಲೆ ತಿಳಿಸಿದ ಎಲ್ಲಾ ಪ್ರಕಾರದ ಕನ್ನಡ ಸಾಹಿತ್ಯವನ್ನು ಸಿಂಹಾವಲೋಕಿಸಿ ಒರೆಗೆ ಹಚ್ಚಿ ನೋಡಬೇಕು.

ಮೇಲಿನ ಎಲ್ಲ ವಿಶಯಗಳಿಂದ ಸ್ಪಷ್ಟವಾಗುವುದು ಇಷ್ಟು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ದೊರಕಿದ್ದು ಕೇವಲ ಕನ್ನಡಿಗರ ಹೋರಾಟದ ಪ್ರತಿಫಲವಲ್ಲ, ಅದು ಇಡೀ ಸಾಹಿತ್ಯ ವೃಂದ ಕನ್ನಡ ಸಾಹಿತ್ಯಕ್ಕೆ ತೋರಿಸಿದ ಗೌರವ ಮಾತ್ರ. ಅಷ್ಟಾದ ಮಾತ್ರಕ್ಕೆ ಕನ್ನಡದ ಮುಂದೆ ಉಳಿದ ಭಾಷೆಗಳು ಗೌಣ ಎಂದರ್ಥವಲ್ಲ. ಕನ್ನಡಿಗರೆಲ್ಲರ ಆಚಾರ ವಿಚಾರ, ನಡೆ ನುಡಿಯಲ್ಲಿ ಬೆರೆತ ಪರಭಾಷೆ-ಪರಸಂಸ್ಕೃತಿಯ ಬಗ್ಗೆ ಇರುವ "ಸಹಿಷ್ಣುತೆ" ಇಂದು ಮತ್ತು ಮುಂದೆಯೂ ಪ್ರತಿಬಿಂಬಿಸಬೇಕು. ಎಲ್ಲಾ ಭಾಷೆಗಳನ್ನು ಪ್ರೀತಿಸು, ಕನ್ನಡವನ್ನು ಪೂಜಿಸು ಎಂಬ ಕವಿಯ ಆಶಯ ಸದಾ ಅಮರವಾಗಿರಬೇಕು. ಕನ್ನಡಕ್ಕೆ ಬಂದ ಶಾಸ್ತ್ರೀಯ ಸ್ಥಾನಕ್ಕೆ ನಮ್ಮೆಲ್ಲರಲ್ಲಿ ಹೆಮ್ಮೆಯಿರಲಿ ಅಹಂಕಾರ (Chauvinism) ಬೇಡ!


ಕನ್ನಡಕ್ಕೆ ಶಾಸ್ತ್ರೀಯ ಸ್ಥಾನದಿಂದಾಗುವದೇನಿದೆ?

(೧) ಭಾರತ ಸರಕಾರದ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ವಿಶ್ವದ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಶಾಸ್ತ್ರೀಯ ಕನ್ನಡ ಕಲಿಕೆಗೆ ಪೀಠಗಳ (Professional Chairs) ಸ್ಥಾಪನೆಯಾಗಲಿದೆ.
(೨) ಪ್ರಪಂಚದೆಲ್ಲೆಡೆ ಕನ್ನಡಕ್ಕೆ ವಿಶೇಷ ಮನ್ನಣೆ ದೊರೆಯಲಿದೆ. ಶಾಸ್ತ್ರೀಯ ಕನ್ನಡ ಭಾಷಾ ಬೆಳವಣಿಗೆಗೆ ದೇಶ ವಿದೇಶಗಳಿಂದ ಬೆಂಬಲ/ಸಹಕಾರ ದೊರೆಯಲಿದೆ.
(೩) ಕನ್ನಡಕ್ಕಾಗಿ ದುಡಿದ ವಿದ್ವಾಂಸರಿಗೆ ಗೌರವಿಸಲು ಎರಡು ಅಂತರಾಷ್ಟ್ರೀಯ ಬಹುಮಾನಗಳನ್ನು ಪ್ರತಿಷ್ಟಾಪಿಸಲಾಗುವುದು.
(೪) ಕೇಂದ್ರ ಸರಕಾರದಿಂದ ಕನ್ನಡದ ಅಭಿವೃದ್ಧಿಗೆ ೧೦೦ ಕೋಟಿ ರೂಪಾಯಿ ಲಭ್ಯವಾಗಲಿದೆ.
(೫) ಪ್ರತಿ ವರ್ಷದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಕನ್ನಡದ ಕೆಲಸಕ್ಕಾಗಿ ೫ ಕೋಟಿ ರೂಪಾಯಿ ದೊರೆಯಲಿದೆ.
(೬) ಕನ್ನಡ ಭಾಷಾ ಅಭಿವೃದ್ಧಿ ಮಂಡಳಿ (Kannada Language Promotion Board) ಸ್ಥಾಪನೆಯಾಗಲಿದೆ.
(೭) ಕನ್ನಡ ಸಾಹಿತ್ಯ ಚರಿತ್ರೆಯ ಅಧ್ಯಯನಕ್ಕೆ ಮತ್ತು ಸಂಶೋಧನೆಗೆ ವಿಶೇಷ ನೆರವು ದೊರೆಯಲಿದೆ.

ಕನ್ನಡ ಭಾಷೆಯ ಸರ್ವತೋಮುಖ ಬೆಳವಣಿಗೆಗೆ ಶಾಸ್ತ್ರೀಯ ಸ್ಥಾನ ದೊರಕಿದ್ದು ಕನ್ನಡಕ್ಕೆ ಸಂದ ಅರ್ಹ ಗೌರವ. ಸರಕಾರದವರು, ಸಾಹಿತಿಗಳು, ವಿಧ್ಯಾರ್ಥಿಗಳು, ವಿಶ್ವವಿದ್ಯಾನಿಲಯಗಳು ಮತ್ತು ಉಳಿದೆಲ್ಲ ಕನ್ನಡಿಗರು ದೊರೆತಿರುವ ಅವಕಾಶವನ್ನು ಪರಿಣಾಮಕಾರಿಯಾಗೆ ಉಪಯೋಗಿಸಿ ಕನ್ನಡದ ಸಂಸ್ಕೃತಿ, ಇತಿಹಾಸವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದರೆ ಸಂದ ಗೌರವ ಸಾರ್ಥಕವಾಗುತ್ತದೆ.

ಸೂ: ಇದೇ ಲೇಖನವನ್ನು ಇಲ್ಲಿಯೂ ಓದಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲೇಖನ ಚೆನ್ನಾಗಿದೆ.
'ಇಸಿಲ' ಪದದ ಅರ್ಥ ಏನು?
-ಸವಿತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಸಿಲ=ಋಷಿಶಿಲಾ. ಪ್ರಾಯಶಃ ರಿಸಿಯೊಬ್ಬ ಇಲ್ಲಿ ಬಂಡೆಯೊಂದಱ ಬೞಿ ಕುಳಿತು ತಪಸ್ಸು ಮಾಡಿದ್ದನೇನೋ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕಂದರೇ.
-ಸವಿತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲಿ ಇತರರು ಹೇೞಿದ ಅಭಿಪ್ರಾಯ ಹಾಗೂ ಅಂಕಿಅಂಶಗಳನ್ನು ನಮೂದಿಸುವುದಱ ಜೊತೆಗೆ ನಿಮ್ಮದೇ ಅಭಿಪ್ರಾಯ ವಿಶ್ಲೇಷಣೆಯನ್ನೂ ಕೂಡ ಸೇರಿಸಿದ್ದರೆ ಚೆನ್ನಿತ್ತೇನೋ?!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.