ಕ್ಷೇತ್ರ ಪರ್ಯಟನೆ: ಹಟ್ಟಿಯಂಗಡಿ, ಕೊಲ್ಲೂರು, ಕುಂಭಾಸಿ

0

ಮಾರ್ಚ್ ೨೯, ೨೦೦೯

ಪೂರ್ವಯೋಜಿತವಾಗಿ ಹಟ್ಟಿಯಂಗಡಿ, ಕೊಲ್ಲೂರು ಮತ್ತು ಕುಂಭಾಸಿ ಕ್ಷೇತ್ರಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದೆವು. ಅಂತೆಯೇ, ಭಾನುವಾರ ಬೆಳಿಗ್ಗೆ ಬೇಗ ಎದ್ದು ಪೂಜೆ ಮುಗಿಸಿ, ಮೊಸರವಲಕ್ಕಿ ತಿಂದು ಹೊರಟೆವು (ನಮ್ಮ ಕಾರಿನಲ್ಲಿ). ಒಟ್ಟಿಗೆ ೫ ಮಂದಿ. ನಾನು, ಅಪ್ಪ, ಅಮ್ಮ, ಹಿರಿಯಕ್ಕ ಮತ್ತು ಮುದ್ದಿನ ಅಳಿಯ(ಹಿರಿಯಕ್ಕನ ಮಗ). ಸರಿ ನಾನು ಇಂಜಿನ್ ಚಾಲು ಮಾಡಿದೆ. ಹೋಗುವಾಗ ನಾನು ಬರುವಾಗ ತಂದೆ ಕಾರು ಓಡಿಸುವ ಪ್ಲಾನ್ ಅಗಿತ್ತು. ನಮ್ಮ ಮನೆಯಿಂದ ಗಣಪನ ನೆನೆಸಿಕೊಂಡು ಸುಮಾರು ೭:೩೦ ಹೊತ್ತಿಗೆ ಹೊರಟೆವು. ೪ ಕಿ.ಮೀ ಹಳ್ಳಿ ರಸ್ತೆಯ ನಂತರ ರಾಹೆ-೧೭ ಕಾಣಿಸಿಕೊಂಡಿತು. ಹೆದ್ದಾರಿ ಇಲಾಖೆಯವರ ಕೃಪೆಯಿಂದ ರಸ್ತೆ ಸಮತಟ್ಟಾಗಿ ಸುಸ್ತಿತಿಯಲ್ಲಿತ್ತು :). ಕಾರು ಹೆದ್ದಾರಿಗೆ ಇಳಿದದ್ದೆ ತಡ, ವೇಗ ೯೦ ದಾಟಿತು. ಆರ್ಥಿಕ ಹಿಂಜರಿತದ ಪರಿಣಾಮವಾಗಿ ಮಣ್ಣಿನ ಲಾರಿಗಳು (ಗಣಿ ಲಾರಿಗಳು) ಇರಲಿಲ್ಲ :). ಆದ್ದರಿಂದ ಯಾವುದೆ ತೊಂದರೆ ಇಲ್ಲದೆ ಕಾರು ಮುನ್ನುಗ್ಗುತ್ತಿತ್ತು. ಆದರೆ ಅಗಾಗ ನಿಯಮ ಪಾಲಿಸದ ಸೈಕಲ್ ಸವಾರರು ತಲೆ ಕೆಡಿಸುತ್ತಿದ್ದರು. ೧೫ ನಿಮಿಷದ ನಂತರ ಉಡುಪಿಗೆ ಸೇರಿದ್ದೆವು. ಅಲ್ಲಿಂದ ರಸ್ತೆ ಹೇಗಿದೆಯೋ ಎಂಬ ತಳಮಳ. ಸರಿ ಧೈರ್ಯ ಮಾಡಿ ಹೊರಟೆವು. ಏನಾಶ್ಚರ್ಯ!! ಹೆದ್ದಾರಿ ಇಲಾಖೆಯಿಂದ ಮತ್ತೊಂದು ಗಿಫ್ಟ್. ಗದ್ದೆಯಂತಾಗಿದ್ದ ಉಡುಪಿ-ಕುಂದಾಪುರ ರಸ್ತೆಯಲ್ಲಿ ಯಾವುದೇ ಗೊಂದಲವಿಲ್ಲದೆ ಡ್ರೈವ್ ಮಾಡಬಹುದಾದಷ್ಟು ಉತ್ತಮ ರಸ್ತೆಯಾಗಿದೆ. ನವ ವಧುವಿನಂತೆ ಕಂಗೊಳಿಸುತ್ತಿತ್ತು ರಾಹೆ-೧೭. ಇಲ್ಲಿಯೂ ಕಾರಿನ ವೇಗ ೯೦ಕ್ಕಿಂತ ಕೆಳಗಿಳಿಯಲಿಲ್ಲ. ಕೆಲವೊಮ್ಮೆ ನಿಯಮ ಪಾಲಿಸದ ಸೈಕಲ್ ಸವಾರರ ಅಜಾಗರೂಕತೆಯಿಂದ ಮತ್ತು ಮಾರ್ಗ ಮಧ್ಯದಲ್ಲಿ ನಿಲ್ಲಿಸುತ್ತಿದ್ದ ಬಸ್ಸುಗಳಿಂದ ತೀವ್ರ ಸಂಕಷ್ಟ ಅನುಭವಿಸಬೇಕಾಗಿ ಬಂತು. ೪೦ ನಿಮಿಷದ ಪ್ರಯಾಣದ ಬಳಿಕ ಕುಂದಾಪುರ ತಲುಪಿದೆವು. ಒಂದು ಉಪಾಹಾರ ಗೃಹದಲ್ಲಿ ೨ ಇಡ್ಲಿ ಹೊಟ್ಟೆಗೆ ಇಳಿಸಿಕೊಂಡ ನಂತರ ಹಟ್ಟಿಯಂಗಡಿ ಕಡೆಗೆ ಪ್ರಯಾಣ. ಕಾಪು-ಕುಂದಾಪುರ ಮಧ್ಯೆ ಸಿಗುವ ಸುಮಾರು ೭ ಸೇತುವೆಗಳನ್ನು (ಪಾಂಗಾಳ, ಉದ್ಯಾವರ, ಕಲ್ಯಾಣಪುರ, ಕುಂದಾಪುರದ ಬಳಿ ಎರಡು, ಮತ್ತೊಂದು ಮರೆತು ಹೋಯ್ತು) ನೋಡಲು ಕಣ್ಣಿಗೆ ಹಬ್ಬ.

ಸ್ಪಷ್ಟ ಸೂಚನಾ ಫಲಕದಿಂದಾಗಿ ಎಲ್ಲಿ ಕೂಡ ದಾರಿ ತಪ್ಪುವ ಪ್ರಮೇಯವೇ ಬರಲಿಲ್ಲ. ಹಟ್ಟಿಯಂಗಡಿ ದೇವಸ್ಥಾನದ ಗೋಪುರ ರಸ್ತೆಯಲ್ಲಿ ಹೋಗುತ್ತಾ ದೇವಸ್ಥಾನ ಸೇರಿದೆವು. ಅಂತಹ ಬೃಹತ್ ದೇವಸ್ಥಾನವಲ್ಲ. ಐತಿಹಾಸಿಕ ಮಹತ್ವವಿರುವ ದೇವಸ್ಥಾನದಲ್ಲಿ ಆಗಲೇ ಬಹಳಷ್ಟು ಭಕ್ತರು ಇದ್ದರು. ದೇವರಿಗೆ ಹೂವು-ಹಣ್ಣು ಮನೆಯಿಂದಲೇ ತಂದಿದ್ದೆವು. ಸೇವಾ ಕಚೇರಿಗೆ ಹೋಗಿ ಹೂವಿನ ಪೂಜೆ ಜೊತೆಗೆ ಅಲಂಕಾರ ಪೂಜೆಗೆ ಚೀಟಿ ಬರೆಸಿದ್ದಾಯಿತು. ಅರ್ಚಕರು ಎಲ್ಲ ಪೂಜೆಯನ್ನು ಕ್ರಮಬದ್ಧವಾಗಿ ನೆರವೇರಿಸಿ ಪ್ರಸಾದವನ್ನು ಕೈಗಿತ್ತರು. ಗರ್ಭಗುಡಿಯ ಸುತ್ತಲೂ ವಿವಿಧ ಭಂಗಿಯ ಗಣಪನ ಮೂರ್ತಿಗಳಿವೆ. ಪಕ್ಕದಲ್ಲಿ ನವಗ್ರಹ ಮಂದಿರ ಕೂಡ ಇದೆ. ದೇವಾಲಯದಿಂದ ಸ್ವಲ್ಪ ದೂರದಲ್ಲಿ ವಾರಾಹಿ ನದಿ ಹರಿಯುತ್ತದೆ. ಅದನ್ನು ನೋಡಲು ಸಾಧ್ಯವಾಗಲಿಲ್ಲ. ಶಿವನ ದೇವಸ್ಥಾನ ಕೂಡ ಇದ್ದಿರಬೇಕು, ಏಕೆಂದರೆ ಕರಾವಳಿಯಲ್ಲಿ ಕೇವಲ ಗಣಪನ ದೇವಸ್ಥಾನ ಎಲ್ಲೂ ಇಲ್ಲ. ಹೊರಗಡೆ ಅಂಗಡಿಯಲ್ಲಿ ಮೊಮ್ಮನಿಗೆ ಕೆಲವು ಆಟದ ಸಾಮಾನನ್ನು ತಂದೆ ಕೊಡಿಸಿದರು. ಮೋದಕ ಪ್ರಸಾದ ಸಿಗಲಿಲ್ಲ, ಖಾಲಿಯಾಗಿತ್ತಂತೆ. ಸೇವಾ ಕಚೇರಿಯಲ್ಲಿ ಕ್ಷೇತ್ರ ಪರಿಚಯ ಪುಸ್ತಕವನ್ನು ಕೊಂಡ ನಂತರ ಕೊಲ್ಲೂರಿಗೆ ಹೋಗಲು ಅಣಿಯಾದೆವು. ದಾರಿ ಮಧ್ಯೆಯ ಗೋಡಂಬಿ ಮರಗಳು, ಬೆಟ್ಟಗಳು, ಅಂಕು-ಡೊಂಕು ರಸ್ತೆಗಳು ಮೈಮನ ಸೆಳೆಯುತ್ತವೆ.

ಹಟ್ಟಿಯಂಗಡಿ ಸ್ವಾಗತ ಗೋಪುರ ಮತ್ತು ದೇವಸ್ಥಾನ

--

ಕೊಲ್ಲೂರಿಗೆ ಹೋಗುವ ರಸ್ತೆ ಬಹಳ ಚೆನ್ನಾಗಿದೆ. ಒಂದೆ ಒಂದು ಹೊಂಡ ಇಲ್ಲ (ಎಲ್ಲಾ ಕಡೆ ಹೊಸ ಡಾಮರೀಕರಣ ಮಾಡಿದ್ದಾರೆ. ಕೆಲವು ಕಡೆ ರಸ್ತೆ ಅಗಲೀಕರಣವೂ ನಡೆಯುತ್ತಿದೆ). ಕೆಲವು ಕಡೆ ರಸ್ತೆ ಬದಿಯ ಮಣ್ಣು ಜರಿದಿದೆ. ಡ್ರೈವ್ ಮಾಡುವವರು ಸ್ವಲ್ಪ ಜಾಗರೂಕರಾಗಿರಬೇಕು, ಇಲ್ಲವಾದಲ್ಲಿ ಹೊಲಕ್ಕೆ ಬೀಳುವುದು ಖಂಡಿತ :). ಅದರ ಜೊತೆಗೆ ಘಾಟಿ ಚಾಲನೆಯ ಅನುಭವ. ನೇರ ರಸ್ತೆಗಳೇ ಇಲ್ಲ. ಬದಲಾಗಿ ಅಂಕು-ಡೊಂಕಾದ ಏರಿಳಿತದ ರಸ್ತೆಗಳು, ದಟ್ಟ ಕಾಡುಗಳು, ಬೆಟ್ಟಗಳು ಡ್ರೈವಿಂಗ್ ಅನ್ನು ಮರೆಯಲಾಗದ ಅನುಭವವವನ್ನು ನೀಡುತ್ತದೆ. ಇಲ್ಲಿ ೭೦ರ ಮೇಲೆ ಡ್ರೈವ್ ಮಾಡುವುದು ಸ್ವಲ್ಪ ಕಷ್ಟವಾಗಬಹುದು. ದಾರಿ ಮಧ್ಯೆ ಎರಡು ’ಮಂಗಳೂರು ಹೆಂಚಿನ’ ಕಾರ್ಖಾನೆಗಳು ಕಾಣಿಸಿದವು. ಅಂದು ಭಾನುವಾರವಾದ್ದರಿಂದ ಭಕ್ತರು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿದ್ದರು. ಆದ್ದರಿಂದ ಕಾರುಗಳ, ಮಾಕ್ಸಿಕ್ಯಾಬ್ ಗಳ ಸಂಖ್ಯೆ ಕೂಡ ಹೆಚ್ಚಾಗಿತ್ತು. ಬೇಸಿಗೆ ರಜೆಯಲ್ಲಿ ಮತ್ತಷ್ಟು ಹೆಚ್ಚಬಹುದು. ಕೊಲ್ಲೂರು ಹತ್ತಿರವಾದಂತೆ ಪಶ್ಚಿಮ ಘಟ್ಟದ ಸಾಲುಗಳು ಆಕರ್ಷಿಸಿದವು :). ನಿಗದಿಯಂತೆ ೧೧ ಘಂಟೆಗೆ ಕೊಲ್ಲೂರು ತಲುಪಿದ್ದಾಯಿತು. ಕುಂದಾಪುರದಿಂದ ಕೊಲ್ಲೂರಿಗೆ ಹೋಗುವಾಗ ಸ್ವಲ್ಪವೂ ದಾರಿ ತಪ್ಪುವುದಿಲ್ಲ. ಅಷ್ಟು ನಿಖರವಾದ ಮಾಹಿತಿ ಫಲಕಗಳನ್ನು ಕಾಣಬಹುದು. ದೇವಸ್ಥಾನದ ಕಾರ್ ನಿಲುಗಡೆಯಲ್ಲಿ ನಮ್ಮ ಕಾರ್ ನಿಲ್ಲಿಸಿ, ತಾಯಿಯ ದರ್ಶನಕ್ಕೆ ಹೊರಟೆವು. ನಾವು ಹೋದಾಗ ದೇವಿಗೆ ಅಲಂಕಾರವಾಗುತ್ತಿದ್ದರಿಂದ ಒಳ ಹೊಕ್ಕುವುದು ಸ್ವಲ್ಪ ತಡವಾಯಿತು. ಅಂದು ಬಹಳ ಜನ ಸೇರಿದ್ದರು. ಗೌರಿ ಹಬ್ಬ, ನವರಾತ್ರಿ ಮತ್ತು ಶುಕ್ರವಾರದಂದು ಕಾಲಿಡಲಾಗದಷ್ಟು ಜನ ಸೇರುತ್ತಾರಂತೆ. ಸರತಿಯಲ್ಲಿ ನಿಲ್ಲುವಾಗ ಆನಂದ ಭೈರವಿ ರಾಗದಲ್ಲಿ ’ಸರ್ವಮಂಗಲ ಮಾಂಗಲ್ಯೇ..’ ಶ್ಲೋಕ ನಿರಂತರವಾಗಿ ಕೇಳಿಬರುತ್ತಿತ್ತು. ಅದರ ಜೊತೆಗೆ ದೀಕ್ಷಿತರ ’ಕಮಲಾಂಬಾ ಸಂರಕ್ಷತುಮಾಂ...’ ನವಾವರಣ ಕೃತಿ ನೆನಪಾಯಿತು. ದೇವಿ ದರ್ಶನ ಹತ್ತಿರವಾದಂತೆ ನೂಕು ನುಗ್ಗಲು ಹೆಚ್ಚಾಯಿತು. ಇದರ ಮಧ್ಯೆಯೂ ದೇವಿ ದರ್ಶನ ಸುಸೂತ್ರವಾಗಿ ಆಯಿತು. ಕುಂಕುಮಾರ್ಚನೆ, ಮಹಾಪ್ರಸಾದ ಸೇವೆ ಮಾಡಿಸಿದೆವು. ಪ್ರಸಾದವನ್ನು ದೇವಸ್ಥಾನದ ಹೊರ ಆವರಣದಲ್ಲಿ ನೀಡುತ್ತಾರೆ. ಮಹಾಪ್ರಸಾದದಲ್ಲಿ ಕಡ್ಲೆ ಹಿಟ್ಟಿನ ಸಿಹಿಪುಡಿಯನ್ನು ಒಂದು ಡಬ್ಬಿಯಲ್ಲಿ ನೀಡುತ್ತಾರೆ. ಬಹಳ ರುಚಿಯಾಗಿತ್ತು :). ಕ್ಷೇತ್ರದ ಲಡ್ಡು ಪ್ರಸಾದ ಕೂಡ ಬಹಳ ರುಚಿಯಾಗಿದೆ. ಒಂದು ಲಡ್ಡುಗೆ ೧೦ ರುಪಾಯಿ. ತುಂಬಾ ಹಸಿವಾಗಿದ್ದರಿಂದ ಒಂದು ಲಡ್ಡನ್ನು ಅಲ್ಲಿಯೇ ಮುಗಿಸಿದೆವು :). ನಂತರ ಭೋಜನಕ್ಕೆ ಹೊರಟೆವು. ಸಾರಿನ ಘಮ ಘಮ ಪರಿಮಳ ಎಂತವರನ್ನು ಸೆಳೆಯುತ್ತದೆ. ಪ್ರತಿ ಮಧ್ಯಾಹ್ನ ಭೋಜನ ವ್ಯವಸ್ಥೆ ಇದೆ. ಅನ್ನ ಎರಡೇ ಬಾರಿ ಹಾಕುವುದರಿಂದ ಮೊದಲೇ ಬೇಕಾಗುವಷ್ಟು ಅನ್ನ ಹಾಕಿಕೊಳ್ಳುವುದು ಒಳಿತು. ಸಾರು, ಗಸಿ, ಗೋಧಿ ಪಾಯಸ, ಮಜ್ಜಿಗೆ ಎಲ್ಲಾ ಬೊಂಬಾಟ್. ಭರ್ಜರಿಯಾಗಿ ಊಟ ಮಾಡಿಯಾಯಿತು. ಹೊರಗಡೆ ಕೊಡಚಾದ್ರಿಯ ವಿಹಂಗಮ ನೋಟ ಮತ್ತು ಅದಕ್ಕೆ ಮುತ್ತಿಕ್ಕುತ್ತಿದ್ದ ಮೋಡಗಳು ಎಲ್ಲರನ್ನೂ ಆಕರ್ಷಿಸುತ್ತಿತ್ತು. ಊಟವಾದ ನಂತರ ಲೋಕಲ್ ಸೋಡಾ ಕುಡಿದು, ತಾಯಿ ಮೂಕಾಂಬಿಕೆಗೆ ಮತ್ತೊಮ್ಮೆ ನಮನ ಸಲ್ಲಿಸಿ, ೧೦ ರುಪಾಯಿ ಪಾರ್ಕಿಂಗ್ ಫೀ ತೆತ್ತು ಕುಂಭಾಸಿ ಕಡೆಗೆ ಕಾರನ್ನು ತಿರುಗಿಸಿದೆವು. ಕೊಲ್ಲೂರಿಗೆ ಸುಮಾರು ೬ ಕಿ.ಮೀ ಇದ್ದಾಗ ಮೂಕಾಂಬಿಕ ಅಭಯಾರಣ್ಯ ಪ್ರದೇಶ ಪ್ರಾರಂಭವಾಗುತ್ತದೆ. ಮಾರ್ಗ ಮಧ್ಯೆ ಸರ್ಕಾರದ ಪ್ರಕೃತಿ ಚಿಕಿತ್ಸೆ ಶಿಬಿರವೂ ಸಹ ಇದೆ (ನಾವು ಇಲ್ಲಿಗೆ ಭೇಟಿ ನೀಡಲಿಲ್ಲ).

ಕೊಲ್ಲೂರಿಗೆ ಹೋಗುವ ಅಂಕುಡೊಂಕಾದ ದಾರಿ ಮತ್ತು ಹೋಗುವ ದಾರಿಯಲ್ಲಿನ ಕಾಡು

--

ಕೊಲ್ಲೂರು ದೇವಸ್ಥಾನದ ಸ್ವಾಗತ ಗೋಪುರ ಮತ್ತು ದೇವಸ್ಥಾನ

--

ದೇವಸ್ಥಾನದ ಆನೆ ಹಾಗೂ ಕೊಡಚಾದ್ರಿ ಬೆಟ್ಟದ ನೋಟ

-----

ಕುಂಭಾಸಿ, ಉಡುಪಿ-ಕುಂದಾಪುರ ಮಧ್ಯೆ ಇರುವುದರಿಂದ, ನಾವು ಬಂದ ದಾರಿಯಲ್ಲಿ ವಾಪಸ್ ಹೋಗಬೇಕು. ಈಗ ಡ್ರೈವಿಂಗ್ ಮಾಡುವುದು ಅಪ್ಪನ ಸರತಿ. ನಾನು ಸ್ವಲ್ಪ ಹೊತ್ತು ಮಲಗಿಕೊಂಡೆ. ತಂದೆ ೬೦ರ ಮೇಲೆ ಕಾರನ್ನು ಓಡಿಸದ ಕಾರಣ ಕುಂಭಾಸಿ ತಲುಪಲು ಸ್ವಲ್ಪ ಸಮಯ ಹಿಡಿಯಿತು. ಸುಮಾರು ೩;೩೦ಕ್ಕೆ ಕುಂಭಾಸಿ ತಲುಪಿದೆವು. ಈ ದೇವಸ್ಥಾನ ಯಾವಗಲೂ ತೆರೆದಿರುತ್ತದೆ. ಅಂದರೆ ಮಧ್ಯಾಹ್ನ ಬಾಗಿಲು ಮುಚ್ಚುವುದಿಲ್ಲ. ಇಲ್ಲಿಯೂ ಮಧ್ಯಾಹ್ನ ಊಟ ಇದೆ. ಇಲ್ಲಿ ಸಹ ನಾವು ಹೂವಿನ ಪೂಜೆ ನೀಡಿದೆವು. ಪ್ರಸಾದ ಸ್ವೀಕರಿಸಿ, ಪೂಜೆ ಮುಗಿಸಿಕೊಂಡು ಪಕ್ಕದಲ್ಲಿದ್ದ ಶಿವನ ದೇವಸ್ಥಾನಕ್ಕೆ ತೆರಳಿದೆವು. ಅಲ್ಲಿನ ಪುಷ್ಕರಿಣಿ ಬಹಳ ಆಕರ್ಷಿಸಿತು. ಸಮೀಪದಲ್ಲಿ ಅಯ್ಯಪ್ಪನ ದೇವಸ್ಥಾನ ಕೂಡ ಇದೆ. ಕುಂಭಾಸಿಯ ಪಂಚಕಜ್ಜಾಯ ಪ್ರಸಾದ ಬಹಳ ರುಚಿ. ಹಾಗೆ ಇಲ್ಲಿನ ಮೂಡೆ ಒಲಿ ಕೂಡ ಬಹಳ ಪ್ರಸಿದ್ಧಿ. ಮೂಡೆ ಪ್ರಸಾದ ಯಾರಾದರೂ ಸೇವೆ ನೀಡಿದ್ದರೆ ಮಾತ್ರ ಸಿಗುತ್ತದೆ. ನಮ್ಮ ಅದೃಷ್ಟಕ್ಕೆ ನಮಗೆ ಅಂದು ಮೂಡೆ ಪ್ರಸಾದ ಲಭಿಸಿತು. ೪ ಮೂಡೆಗೆ ೨೦ ರುಪಾಯಿಗಳು. ಮೂಡೆ ಪ್ರಸಾದ ತೆಗೆದುಕೊಂಡು ಮನೆಯ ಹಾದಿ ಹಿಡಿದೆವು. ಕುಂಭಾಸಿಯಿಂದ ಮತ್ತೆ ನನ್ನ ಡ್ರೈವಿಂಗ್(ತಂದೆಗೆ ಹೆಚ್ಚು ಹೊತ್ತು ಡ್ರೈವ್ ಮಾಡಲು ಕಷ್ಟ).

 

ಆನೆಗುಡ್ಡೆ ದೇವಸ್ಥಾನದ ಸ್ವಾಗತ ಗೋಪುರ ಹಾಗೂ ಆನೆಗುಡ್ಡೆ ದೇವಸ್ಥಾನ

--

ಕುಂಭಾಸಿ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಿಣಿ

ಮನೆ ತಲುಪಿದಾಗ ಸಾಯಂಕಾಲ ೬ ಘಂಟೆಯಾಗಿತ್ತು. ಮಳೆ ಕೂಡ ಬಂದಿದ್ದರಿಂದ ಸ್ವಲ್ಪ ಹಿತವಾದ ವಾತಾವರಣವಿತ್ತು. ರಾತ್ರಿ ಊಟಕ್ಕೆ ಕುಂಭಾಸಿಯ ಮೂಡೆ ಪ್ರಸಾದವನ್ನು ತಿಂದೆವು. ಬಹಳ ರುಚಿಯಾಗಿತ್ತು. ಮಡಿಕೇರಿ ಘಾಟಿಯ ನಂತರ ನನ್ನದು ಇದು ಎರಡನೆಯ ಅನುಭವ. ಆದರೆ ಈ ಘಾಟಿ ಪ್ರದೇಶ ಅಷ್ಟು ಕ್ಲಿಷ್ಟವಾಗಿಲ್ಲ. ಹೆಚ್ಚೆಂದರೆ ೩೦ ಡಿಗ್ರಿ ತಿರುವುಗಳು ಇರಬಹುದು. ನಾಲ್ಕನೇ ಗೆಯರಿನಲ್ಲೆ ಗಾಡಿ ಓಡಿತು. ಶಿರಾಡಿ ಘಾಟಿಯಲ್ಲಿ ಕೆಲವು ಕಡೆ ೮ ಡಿಗ್ರಿ ತಿರುವುಗಳಿವೆ. ಅಲ್ಲಿ ಫರ್ಸ್ಟ್ ಗೆಯರ್ ನಲ್ಲೆ ಓಡಿಸಬೇಕು. ಹೀಗೆ ನನ್ನದೊಂದು ಕ್ಷೇತ್ರ ಪರ್ಯಟನೆಯ ಸಣ್ಣ ಅನುಭವ ಇಲ್ಲಿ ಹಂಚಿಕೊಂಡಿದ್ದೇನೆ. ಈಗಲೂ ಅಲ್ಲಿನೆ ನೆನಪುಗಳು ಕಾಡುತ್ತವೆ ಅದರಲ್ಲೂ ವಿಶೇಷವಾಗಿ ಕೊಲ್ಲೂರಿನದ್ದು. ಮುಂದಿನ ಬಾರಿ ಇಡಗುಂಜಿ ಹಾಗೂ ಮುರ್ಡೇಶ್ವರ ದರ್ಶನ ಮಾಡಬೇಕೆಂಬ ಯೋಜನೆ ಇದೆ. ಆದಷ್ಟು ಬೇಗ ದರ್ಶನ ಭಾಗ್ಯ ಸಿಗಲಿ ಎಂಬುದು ನನ್ನ ಬಯಕೆ :)

ಸಂಜೆ ಮನೆಯಲ್ಲಿ ಕಂಡ ನೋಟ


ಸೇತುವೆಗಳ ಚಿತ್ರಗಳನ್ನು ತೆಗೆಯಲಾಗಲಿಲ್ಲ. ಕುಂದಾಪುರದ ಒಂದು ಸೇತುವೆಯಿಂದ, ನದಿಯು ಸಮುದ್ರ ಸೇರುವ ದೃಶ್ಯ ಮನಮೋಹಕವಾಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

>>ಮತ್ತೊಂದು ಮರೆತು ಹೋಯ್ತು
ಸಾಸ್ತಾನ
ಹಟ್ಟಿಯಂಗಡಿ ಹತ್ರ "ನಮ್ಮ ಭೂಮಿಗೆ" ಹೋಯ್ಲಿಲ್ಯ?
ಕೊಲ್ಲೂರ್ ಹೊಳೆಲಿ ನೀರಿರ್ಲಿಲ್ಯ?

ಮೂಡೆ --> ಕೊಟ್ಟಿ ಕಡ್ಬ್ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂದಕುಮಾರ್ ಅವರೇ,
ನಿಮ್ಮ ಕ್ಷೇತ್ರದರ್ಶನದ ಲೇಖನ ಚೆನ್ನಾಗಿದೆ. ಶುಕ್ರವಾರ ಬೆಳಿಗ್ಗೆ ಶ್ರೀದೇವಿಯ ದೇವಸ್ತಾನದ ದರ್ಶನ ಮಾಡಿದ್ದು ಮನಸ್ಸಿಗೆ ಬಹಳ ಮುದ ತಂದಿತು.

ಧನ್ಯವಾದಗಳು

ಪಾಲ ಅವರೆ.
"ನಮ್ಮ ಭೂಮಿ" ಅಂದಿರಲ್ಲ ಏನದು? ನಾವೂ ಸಾಧ್ಯವಾದರೆ ಈ ಬೇಸಿಗೆಯಲ್ಲಿ ಕೊಲ್ಲೂರಿಗೆ ಹೋಗುವ ಎಂದುಕೊಂಡಿದ್ದೇವೆ. ನೋಡಬೇಕಾದ ಸ್ಥಳವಾದರೆ, ನೀವು ಹೇಳುವ "ನಮ್ಮ ಭೂಮಿಗೂ" ಹೋಗೋಣ ಅಂತ.

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಮೇಡಮ್ :).

ಮಳೆಗಾಲದಲ್ಲಿ ಹೋಗಿ ಬಹಳ ಸುಂದರವಾಗಿರುತ್ತದೆ :). ನಿಭಾಯಿಸುವುದು ಸ್ವಲ್ಪ ಕಷ್ಟವಾಗಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಮಲಾಅವ್ರೇ,
"ನಮ್ಮ ಭೂಮಿ" ಗೃಹ ಕೈಗಾರಿಕೆ ತರಭೇತಿ ಕೇಂದ್ರ. ಮರದ ಕೆಲ್ಸ, ಮಣ್ಣಿನ ಕೆಲ್ಸ, ಬಟ್ಟೆ ಹುಲಿಯೋ ಕೆಲ್ಸ, ತೋಟಗಾರಿಕೆ ಎಲ್ಲಾ ಕಲ್ಸಿ ಕೊಡ್ತಾರೆ. ಮಳೆ ನೀರು ಇಂಗಿಸೋದು, ನೀರನ್ನ ಮಿತವ್ಯಯವಾಗಿ ಉಪಯೋಗಿಸೋದು ಹೇಗೆ. ಸಿಮೆಂಟ್ ಇಲ್ದೆ , ಮಣ್ಣಿನ ಮನೆ ಕಟ್ಟೋದು ಎಲ್ಲಾ ಇವೆ. ಸುಮಾರು ೬ ಎಕ್ರೆ ಜಾಗದಲ್ಲಿದೆ ಇದು.

ತಲ್ಲೂರಿಂದ ಹಟ್ಟಿಯಂಗಡಿಗೆ ಹೋಗೋ ಮಾರ್ಗದಲ್ಲಿ ಸಿಗುತ್ತೆ. ಹಟ್ಟಿಯಂಗಡಿಗೆ ಬಲಗಡೆ ರೋಡಿದೆ, ಬಲ್ಗಡೆ ಹೋಗೆಕೆ ಮುಂಚೆ ಎಡಗಡೆ ಕಣ್ಣು ಹಾಯಿಸಿದ್ರೆ ಇದು ಕಾಣಿಸುತ್ತೆ. ಹಳೇ ಶೈಲಿ ಮನೆ, ಮರದ ಕಲಾಕೃತಿ, ಬಾಗಿಲು, ಸೂಪರ್ರಾಗಿದೆ,, ನೋಡ್ಕೊಂಡ್ ಬನ್ನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಸಾಸ್ತಾನ
ಧನ್ಯವಾದಗಳು :)

>>ಹಟ್ಟಿಯಂಗಡಿ ಹತ್ರ "ನಮ್ಮ ಭೂಮಿಗೆ" ಹೋಯ್ಲಿಲ್ಯ?
ಏನದು. ನಿಮ್ಮನ್ನು ಕೇಳಿ ಹೋಗಬೇಕಿತ್ತು. ವಾರಾಹಿ ನದಿ ದಡಕ್ಕೂ ಹೋಗಲಿಕ್ಕಾಗಲಿಲ್ಲ :(

>>ಕೊಲ್ಲೂರ್ ಹೊಳೆಲಿ ನೀರಿರ್ಲಿಲ್ಯ?
ಬರಿ ಗಲೀಜು ನೀರು ಇತ್ತು. ಅದಿಕ್ಕೆ ಚಿತ್ರ ಹಾಕಿಲ್ಲ :(

>>ಮೂಡೆ --> ಕೊಟ್ಟಿ ಕಡ್ಬ್
ಬಹಳ ರುಚಿ ಪಾಲರೆ ಅಲ್ಲಿನ ಕಡುಬು

ಕುಂದಾಪುರದ ಬಳಿಕ ಒಂದು ಸೇತುವೆ ಬರುತ್ತದೆ. ಅಲ್ಲಿ ನದಿ ಸಮುದ್ರಕ್ಕೆ ಸೇರುವ ನೋಟ ಬಹಳ ಚೆನ್ನಾಗಿದೆ. ಯಾವ ಸೇತುವೆಯದು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮ ಭೂಮಿ ಬಗ್ಗೆ ಮೇಲೆ ಹೇಳಿದೀನಿ. ವಿದ್ಯಾರ್ಥಿಗಳು ಅಲ್ಲೇ ಉಳ್ಕೊಂಡ್ ಕಲಿತಾರೆ ಅಲ್ಲಿ.

>>ಕುಂದಾಪುರದ ಬಳಿಕ ಒಂದು ಸೇತುವೆ ಬರುತ್ತದೆ
ಸೇತ್ವೆ ಹೆಸ್ರು ಗೊತ್ತಿಲ್ಲ :)
ತಲ್ಲೂರಲ್ಲಿ ಮೂರ್ಕೈ ಸಿಗುತ್ತಾಲ್ಲ ಅಲ್ಲಿಂದ ಎಡಕ್ಕೆ ತಿರ್ಗಿದ್ರೆ ಉಪ್ಪಿನ ಕುದ್ರು ಸಿಗುತ್ತೆ. ಕುದ್ರು ಅಂದ್ರೆ ಪರ್ಯಾಯ ದ್ವೀಪ ಅಂತ. ಹಾಗೇ ಮುಂದೆ ಹೋದ್ರೆ ಹೇರಿ ಕುದ್ರು ಅಂತೆಲ್ಲಾ ಬರುತ್ತೆ. "ಗುಲಾಬಿ ಟಾಕೀಸ್" ಫಿಲ್ಮ್ ಆ ಕಡೇನೆ ಚಿತ್ರಿಸಿರೋದು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುಂದಿನ ಬಾರಿ ಇಡಗುಂಜಿಗೆ ಹೋಗೊ ಯೋಚನೆ ಇದೆ. ಆವಾಗ ನೀವು ಉಲ್ಲೇಖಿಸಿದ ಪರ್ಯಾಯ ದ್ವೀಪ ಮತ್ತು ನಮ್ಮ ಭೂಮಿ ಖಂಡಿತಾ ನೋಡಿಕೊಂಡು ಬರಬೇಕು. ಇದರ ಬಗ್ಗೆ ಚಿತ್ರಗಳಿದ್ದರೆ (ಮಾಹಿತಿ ಜೊತೆಗೆ) ಸಂಪದದಲ್ಲಿ ಪ್ರಕಟಿಸಿ. ಉಡುಪಿ-ಹೊನ್ನಾವರ ಸ್ಟ್ರೆಚ್ ಬಹಳ ಅದ್ಭುತ ಪಾಲಚಂದ್ರರೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂದಕುಮಾರ್,

ನಮ್ಮ ಭೂಮಿ ಚಿತ್ರ ಇದೆ, ಆದ್ರೆ ಎಲ್ಲೂ ಹಾಕ್ಬಾರ್ದು ಅಂತ ಅಲ್ಲಿನ ಮಾಲೀಕರು ಹೇಳಿದ್ರಿಂದ ಹಾಕಿಲ್ಲ. ಹಂಗೆ ಹೇಳಿದ್ಮೇಲೆ ಅವ್ರು ಚಿತ್ರ ತೆಗಿಯೋಕೆ ಬಿಟ್ಟಿದ್ದು.
ಕುದ್ರು ಏನೂ ನೋಡ್ಲೇ ಬೇಕಂತಿಲ್ಲ ಬಿಡಿ, ಯಾರಾದ್ರೂ ನೆಂಟ್ರು ಇದ್ರೆ ಮಳೆಗಾಲದಲ್ಲಿ ಹೋಗಿ ೪ ದಿನ ಇದ್ದು ಬರಬಹುದು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮ ಸಚಿತ್ರ ಬರಹ. ಒಂದು ಚಿತ್ರವನ್ನು ಇನ್-ಲೈನ್ ಸೇರಿಸಿದ್ದರೆ ಚೆನ್ನಾಗಿರುತ್ತಿತ್ತು. ಜೊತೆಗೆ ಲೇಖನದೊಳಗೆ ಸ್ಮೈಲಿಗಳಿದ್ದರೆ ಓದೋಕೆ ಕಷ್ಟ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಒಂದು ಚಿತ್ರವನ್ನು ಇನ್-ಲೈನ್ ಸೇರಿಸಿದ್ದರೆ ಚೆನ್ನಾಗಿರುತ್ತಿತ್ತು. ಜೊತೆಗೆ ಲೇಖನದೊಳಗೆ ಸ್ಮೈಲಿಗಳಿದ್ದರೆ ಓದೋಕೆ ಕಷ್ಟ

ಮುಂದಿನ ಬಾರಿ ಈ ನಿಯಮಗಳನ್ನು ಪಾಲಿಸುತ್ತೇನೆ. ಧನ್ಯವಾದಗಳು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ, ನಿಮ್ಮ ಯಾತ್ರೆಯ ಅನುಭವ ಮುದನೀಡಿತು. ನಮ್ಮೂರಿನ ಚಿತ್ರಗಳು ಚೆನ್ನಾಗಿವೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೊಲ್ಲೂರು ಮಾರ್ಗ ಮಧ್ಯೆ ನೆಂಪು ಎಂಬ ಊರು ಸಿಕ್ಕಿತು. ನೀವು ಈ ಊರಿನವರೆ? ಕಾಡಿನ ಮಧ್ಯೆ ಬಹಳ ಸುಂದರವಾದ ಊರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ನಿಮ್ಮ ಕ್ಷೇತ್ರ ಪರ್ಯಟನೆ :)
ನಾವು ನಿಮ್ಮ ಕ್ಷೇತ್ರ ಪರ್ಯಟನೆಯ ಒಂದು ದಿನ ಮುಂಚೆ ಅಂದರೆ ಶನಿವಾರ ಕೊಲ್ಲೂರು ಹಾಗು ಹಟ್ಟಿಅಂಗಡಿಗೆ ಭೇಟಿ ನೀಡಿದ್ದೆವು.
ನಮ್ಮ ತೀರ್ಥಯತ್ರೆಯ ಮಾರ್ಗ ಸಿಗಂದೂರು - ಕೊಲ್ಲೂರು - ಹಟ್ಟಿಅಂಗಡಿಗೆ - ಸಾಲಿಗ್ರಾಮ
ಸಿಗಂದೂರು ರಮಣೀಯ ತಾಣ ಒಮ್ಮೆ ಭೇಟಿ ನೀಡಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಸಿಗಂದೂರು ರಮಣೀಯ ತಾಣ ಒಮ್ಮೆ ಭೇಟಿ ನೀಡಿ
ಮುಂದಿನ ಪರ್ಯಟನೆ ಇಡಗುಂಜಿಗೆ :). ಸಮಯ ಸಿಕ್ಕಾಗ ಭೇಟಿ ನೀಡುತ್ತೇನೆ. ನಿಮ್ಮ ಪ್ರವಾಸ ಅನುಭವ ಸಂಪದದಲ್ಲಿ ಹಂಚಿಕೊಳ್ಳಿ. ಅಲ್ಲಿಗೆ ಭೇಟಿ ನೀಡುವವರಿಗೆ ಸಹಾಯ ಆಗುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರಹ ಮತ್ತು ಚಿತ್ರಗಳು ಚೆನ್ನಾಗಿದೆ. ಮೂಡೆ ಅಂದರೆ ಏನು ಅಂತ ತಿಳೀಲಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೊಟ್ಟೆ ಕಡಬು
ಮುಂಡಕನ ಹಳು ಇರುತ್ತೆ, ಅದರ ಎಲೆ ಮುಳ್ಳು ಮುಳ್ಳು. ಆ ಎಲೇನ ಕೂಯ್ಕೊಂಡು ಬಂದು ಬೆಂಕಿಲಿ ಸುಟ್ಟು, ಮುಳ್ಳನ್ನ ತೆಗೆದು, ಲೋಟದ ತರ ಸುತ್-ತಾರೆ. ಇದ್ರಲ್ಲಿ ಇಡ್ಲಿ ಹಿಟ್ಟು ತುಂಬಿಸಿ, ಬೇಯಿಸಿದ್ರೆ ಕೊಟ್ಟೆ kaಡುಬು ರೆಡಿ.

ಮುಂಡಕನ ಓಲಿ ಸುವಾಸನೆ ಅದ್ಭುತ.. ಮುಂಡಕನ ಹಳು ಫೋಟೋ ಇಲ್ಲಿದೆ: http://picasaweb.google.co.in/palachandra/KadalaTeeraYana#53059520408394...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕಾಲಕ್ಕೆ ಸ್ಪಂದಿಸಿದ ಪಾಲಚಂದ್ರರಿಗೆ ಹಾಗೂ ಅನಂತ ಪ್ರಭುಗಳಿಗೆ ಧನ್ಯವಾದಗಳು. ನನ್ನಲ್ಲಿರುವ ಕೆಲವು ಮಾಹಿತಿ ಇಂತಿದೆ.

ಗಣೇಶ ಚತುರ್ಥಿಯಂದು ಕರಾವಳಿಯಲ್ಲಿ ಸಾಮಾನ್ಯವಾಗಿ ಕಂಡು ಬರುವ ತಿಂಡಿ ಇದು. ಮೂಡೆ ಒಲಿಯನ್ನು ಪೊರಕೆ ಕಡ್ಡಿಗಳ ಸಹಾಯದಿಂದ ಲೋಟೆಗಳಾಗಿ ಪರಿವರ್ತಿಸುತ್ತಾರೆ. ಮೂಡೆ ಕಟ್ಟುವುದು ಒಂದು ಸ್ಕಿಲ್ :). ಇದಕ್ಕೆ ಸಾಕಷ್ಟು ತಾಳ್ಮೆ ಹಾಗೂ ಅನುಭವ ಅಗತ್ಯ. ನಮ್ಮ ಮನೆಯಲ್ಲಿ ತಾಯಿಗೆ ಬಿಟ್ಟರೆ ಯಾರಿಗೂ ಮೂಡೆ ಕಟ್ಟಲು ಬರುವುದಿಲ್ಲ. ಅಕ್ಕಿ, ರವೆ ಹೀಗೆ ಎರಡು ಬಗ್ಗೆ ಮೂಡೆ ತಯಾರಿಸುತ್ತಾರೆ.

ಇದೆ ತರಹ ಹಲಸಿನ ಮರದ ಎಲೆಯಲ್ಲೂ ಲೋಟೆಗಳನ್ನು ಮಾಡಿ ಕಡುಬು ಬೇಯಿಸುತ್ತಾರೆ. ಇದು ಗುಂಡಗೆ ಇರುವುದರಿಂದ ನಮ್ಮ ಕಡೆ ಇದಕ್ಕೆ ಗುಂಡ ಎಂದು ಕರೆಯುತ್ತೇವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓದಿದವರಿಗೂ ಹಾಗೂ ಓದಿ ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದವರಿಗೆಲ್ಲರಿಗೂ ಧನ್ಯವಾದಗಳು. ನಾವು ಕೆಲವು ಸ್ಥಳಗಳನ್ನು ಭೇಟಿ ನೀಡಲು ಸಾಧ್ಯವಾಗಲಿಲ್ಲ. ನೀವು ಅಲ್ಲಿಗೆ ಭೇಟಿ ನೀಡಿದಾಗ ತಪ್ಪದೆ ಈ ಸ್ಥಳಗಳನ್ನು ವೀಕ್ಷಿಸಿ.

೧) ಹಟ್ಟಿಯಂಗಡಿ ಬಳಿಯ ವಾರಾಹಿ ನದಿ ತೀರ
೨) ಹಟ್ಟಿಯಂಗಡಿ ಬಳಿ ಇರುವ ’ನಮ್ಮ ಭೂಮಿ’ (ಪಾಲಚಂದ್ರರು ತಿಳಿಸಿದಂತೆ)
೩) ಕೊಲ್ಲೂರಿನ ಸೌಪರ್ಣಿಕಾ ನದಿ ತೀರ
೪) ಸಾಧ್ಯವಾದರೆ ಕೊಡಚಾದ್ರಿ ಬೆಟ್ಟ ಮಧ್ಯೆ ಇರುವ ಒಂದು ದೇವಸ್ಥಾನ (ಕ್ಷೇತ್ರ ಪರಿಚಯ ಪುಸ್ತಕ ನೋಡಿ)

ಹೋಗುವಾಗ ೧೫ ಲೀಟರ್ ಕುಡಿಯುವ ನೀರನ್ನು ತೆಗೆದುಕೊಂಡ ಹೋಗಲು ಮರೆಯಬೇಡಿ. ಬೇಸಿಗೆಯಲ್ಲಿ ಸಿಕ್ಕಾಪಟ್ಟೆ ಬೆವರುತ್ತದೆ. ಇಲ್ಲವಾದಲ್ಲಿ ಪ್ರಯಾಣಕ್ಕಿಂತ ದಣಿವೇ ಹೆಚ್ಚಾಗುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರಹದಲ್ಲಿನ, ಮತ್ತು ಇಲ್ಲಿರುವ ಹೆಚ್ಚಿನ ಮಾಹಿತಿಗಾಗಿ ಧನ್ಯವಾದಗಳು. ನಾನು ಹೈಸ್ಕೂಲಿನಲ್ಲಿದ್ದಾಗ ಸ್ಕೂಲಿ೦ದ ಪ್ರವಾಸ ಹೋಗಿದ್ದು ಇಲ್ಲಿಗೆಲ್ಲ, ಫೋಟೋ ಎಲ್ಲ ಏನಿಲ್ಲ, ಬರಿ ನೆನಪುಗಳಷ್ಟೇ. ಅದು ವಾರಾಹಿ ನದೀನೊ, ವರಾಹಿ ನದೀನೊ? ಚಕ್ರ ಡ್ಯಾಮ್ ಇದಕ್ಕೆ ಕಟ್ಟಿರೋದ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾರಾಹಿ, ವರಾಹಿ ಹೀಗೆ ಎರಡು ಪದಗಳು ಪ್ರಯೋಗದಲ್ಲಿದೆ. ಇದರ ಮೂಲ ಅರ್ಥ ತಿಳಿದಿಲ್ಲ.

>>ಚಕ್ರ ಡ್ಯಾಮ್ ಇದಕ್ಕೆ ಕಟ್ಟಿರೋದ?
ಈ ನದಿಗೆ ಒಂದು ಡ್ಯಾಮ್ ಕಟ್ಟಿದ್ದಾರೆ ಉಡುಪಿ ಜಿಲ್ಲೆಯ ಹೊಸಂಗಡಿ ಎಂಬ ಘಟ್ಟ ಪ್ರದೇಶದಲ್ಲಿ. ಅಲ್ಲಿ ಜಲವಿದ್ಯುತ್ ಉತ್ಪಾದಿಸುತ್ತಾರೆ.

ಪ್ರತಿಕ್ರಿಯೆಗೆ ಧನ್ಯವಾದಗಳು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂದ,
ಒಳ್ಳೇ ಲೇಖನ. ಚಿತ್ರಗಳೂ ಚೆನ್ನಾಗಿವೆ.

ಸಂಜೆಯ ಚಿತ್ರ ತುಂಬಾ ಇಷ್ಟ ಆಯ್ತು. :)

-ಅನಿಲ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು ಅನಿಲ್ ಅವರೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.