ಚಾಮುಂಡಿ ಎಕ್ಸ್ಪ್ರೆಸ್ಸ್ ರೈಲಿನಲ್ಲಿ ಮೂರು ಘಂಟೆ

0

ಏಪ್ರಿಲ್ ೧೨, ೨೦೦೯

ಬೆಂಗಳೂರಿನಲ್ಲಿ ಕಾರ್ಯಕ್ರಮ ಇದ್ದರಿಂದ ಸಂಜೆ ಹೊರಡುವ ಬದಲು ಬೆಳಿಗ್ಗೆ ೬:೪೫ಕ್ಕಿರುವ ಮೈಸೂರಿ-ಬೆಂಗಳೂರು ಚಾಮುಂಡಿ ಎಕ್ಸ್ಪ್ರೆಸ್ಸ್ ರೈಲು ಹತ್ತಿದೆ. ಹಿಂದಿನ ದಿನವೇ ಚೀಟಿ ತೆಗೆದುಕೊಂಡಿದ್ದರಿಂದ ಸೀದಾ ರೈಲು ಹತ್ತಿದೆ. ಮೊದಮೊದಲಿಗೆ ಜನ ಇಲ್ಲದಿದ್ದರೂ ನಂತರ ರೈಲು ತುಂಬಿಹೋಯಿತು. ನನ್ನ ಎದುರು ಒಬ್ಬ ೪೦ ವರುಷದ ವ್ಯಕ್ತಿಯೊಬ್ಬರು ಕುಳಿತಿದ್ದರು. ಇನ್ನೆನು ರೈಲು ಹೊರಡಬೇಕೆನ್ನುವಷ್ಟರಲ್ಲಿ ಯಾರೊ ಒಬ್ಬರು ಬಂದು ಮುಂದಿನ ಆಸನದಲ್ಲಿ ಕುಳಿತಿದ್ದ ವ್ಯಕ್ತಿಯನ್ನು "ಇದು ರಿಸೆರ್ವ್ಡ್ ಸೀಟ್, ನೀವು ಏಳಿ" ಎಂದರು. ಆ ವ್ಯಕ್ತಿಗೆ ಸಿಕ್ಕಾಪಟ್ಟೆ ಕೋಪ ಬಂತು. "ಅಲ್ಲಯ್ಯ ಸುಮಾರ್ ವರ್ಷದಿಂದ ಇದೇ ರೈಲಲ್ಲಿ ಹೋಗ್ತಾ ಇದೀನಿ, ನೀನು ರಿಸೆರ್ವ್ಡ್ ಅಂತ ಜಗಳಕ್ಕೆ ಇಳಿತಿಯಲ್ಲಾ. ರಿಸೆರ್ವ್ಡ್ ಬೋಗಿ ಕಡೆಗಿರೋದು. ಬೇಕಾದರೆ ಟಿಟಿಇ ವಿಚಾರಿಸು" ಎಂದು ಜೋರು ಮಾಡಿದನು. ಸರಿ ರಿಸರ್ವ್ಡ್ ಚೀಟಿ ಇದ್ದವನು ಹೊರಕ್ಕೆ ಹೋಗಿ ಟಿಟಿಇ ವಿಚಾರಿಸಿದಾಗ, ರಿಸೆರ್ವ್ಡ್ ಬೋಗಿ ಬೇರೆ ಎಂದು ಹೇಳಿದನು. ಇದು ಮುಂದಿದ್ದ ವ್ಯಕ್ತಿಗೂ ತಿಳಿಯಿತು. ಸ್ವಲ್ಪ ಹೊತ್ತಿನ ನಂತರ ಅಲ್ಲಿದ್ದವರಲ್ಲಿ "ಸುಮಾರು ವರ್ಷದಿಂದ ಇದೇ ರೈಲ್ನಾಗೆ ಹೋಗ್ತಿವ್ನಿ. ಅಲ್ಲಾ ರಿಸೆರ್ವ್ಡ್ ಅಂತ ಜಗಳಕ್ಕೆ ಇಳಿತಾರೆ. ನಾವು ಸ್ವಲ್ಪ ಕಮ್ಮಿ ಒದೋರ್ತರ ಕಂಡ್ರು ಜಾಸ್ತಿ ದುಡ್ ಕೊಟ್ಟು ಹೋಗೊರ್ಗೆ ಈತರ ಮೋಸ ಮಾಡಲ್ಲ. ಇವ್ರು ಬಿಹಾರದ ಕಡೆ ಮಂದಿನ ನೋಡ್ಲಿ. ಅಲ್ಲಿ ರಿಸೆರ್ವ್ಡ್ ಅಂತ ಇದ್ರು ಅಲ್ಲಿನ್ ಜನ ದಬಾಯ್ಸಿ ಸುಮ್ನೆ ಆಚಿಕ್ಕೆ ಕಳಿಸ್ತಾರೆ" ಎಂದು ತನ್ನ ಬೇಸರ ವ್ಯಕ್ತಪಡಿಸಿದನು. ಹಾರ್ನ್ ಮಾಡುತ್ತಾ ನಿಗದಿತ ಸಮಯಕ್ಕೆ ರೈಲು ಹೊರಡಿತು.

ಪಾಂಡವಪುರದಲ್ಲಿ ಈ ರೈಲಿಗೆ ನಿಲುಗಡೆಯಿದೆ. ಅಲ್ಲಿಯೊಬ್ಬರು ರೈತರು ರೈಲನ್ನು ಹತ್ತಿದರು. ನಮ್ಮ ಬಳಿ ಆಸನ ಇದ್ದರಿಂದ ಅಲ್ಲಿಯೇ ಕುಳಿತುಕೊಂಡರು. ಅವರು ಕೆಂಗೇರಿಗೆ ಹೋಗುವವರು. ಸ್ವಲ್ಪ ಸಮಯದ ನಂತರ ಮುಂದಿರುವ ವ್ಯಕ್ತಿ ಆ ರೈತರ ಬಳಿ ಮಾತಿಗೆ (ಸೌಹಾರ್ದ) ಇಳಿದನು.

ವ್ಯಕ್ತಿ: ಎಲ್ಲಿ ಗೌಡ್ರೇ ನಿಮ್ ಊರು, ಏನ್ ಮಾಡ್ಕೊಂಡಿದ್ದಿರಾ? (ಮಾತ್ರೆ ನುಂಗುತ್ತಾ)
ರೈತ: ಪಾಂಡವಪುರ ಪಕ್ಕ ಕಣಪ್ಪ. ನೋಡ್ದಾಗ ತಿಳಿಯಕ್ಕಿಲ್ವ ರೈತ ಅಂತ (ಬಿಳಿ ಶಾಲು, ಬಿಳಿ ಪಂಚೆ). ಅದೇನಪ್ಪ ನೀರಿಲ್ದೆ ಮಾತ್ರೆ ನುಂಗ್ತಾ ಇದಿಯಲ್ಲ?

ಲಗ್ಗೇಜ್ ರ್ಯಾಕ್ ನಿಂದ ನೀರಿನ ಬಾಟಲ್ ಎತ್ತುತ್ತಾ

ವ್ಯಕ್ತಿ: ಇಲ್ಲ ಗೌಡ್ರೇ ತಂದಿದ್ದೀನಿ ನೋಡಿ
ರೈತ: ಬಹಳ ಬುದ್ಧಿವಂತ ಕಣಪ್ಪ ನೀನು.

ಬಿಸಿ ಬಿಸಿ ಮಸಾಲೆ ದೋಸೆ, ರೈಸ್ ಬಾತ್, ಇಡ್ಲಿ-ವಡ, ಕೇಳಿತು ರೈಲಿನಲ್ಲಿ ತಿಂಡಿ ಮಾರುವವನ ಧ್ವನಿ. ಇತ್ತೀಚಿಗೆ ನಡೆದ ಕೆಲವು ಘಟನೆಗಳಿಂದಾಗಿ ಸಮವಸ್ತ್ರ ಇಲ್ಲದವರ ಬಳಿ ಪ್ರಯಾಣಿಕರು ತಿಂಡಿ ತೆಗೆದುಕೊಳ್ಳುವುದಿಲ್ಲ. ಅಕ್ಕ ಬಿಸಿ-ಬಿಸಿ ರುಚಿಯಾದ ದೋಸೆ ಮಾಡಿಕೊಟ್ಟಿದ್ದರಿಂದ ನಾನೇನು ತೆಗೆದುಕೊಳ್ಳಲಿಲ್ಲ.

ವ್ಯಕ್ತಿ: ಒಂದು ಮಸಾಲೆ ದೋಸೆ ಕೊಡಯ್ಯ. ಎಷ್ಟಪ್ಪ
ದೋಸೆ ಮಾರುವವ: ತಗೊಳ್ಳಿ ಸಾರ್. ಹತ್ತು ರುಪಾಯಿ

ಮಸಾಲ ದೋಸೆ ಪೊಟ್ಟಣ ತೆರೆಯುತ್ತ ಗೌಡರತ್ತ ಮುಖ ಮಾಡಿದನು.

ವ್ಯಕ್ತಿ: ನೋಡಿ ಗೌಡ್ರೆ. ಎಷ್ಟು ಕಮ್ಮಿ ಚಟ್ನಿ ಹಾಕವ್ನೇ. (ದೋಸೆ ಮಾರುವವನ ಬಳಿ) ಏನಯ್ಯಾ ಚಟ್ನಿನೇ ಇಲ್ವಲ್ಲಯ್ಯಾ?
ದೋಸೆ ಮಾರುವವ: ಗಟ್ಟಿ ಚಟ್ನಿ ಸಾರ್. ಹತ್ತು ರುಪಾಯ್ಗೆ ಅಷ್ಟೆ ಬರೋದು
ವ್ಯಕ್ತಿ: ನೋಡಿ ಗೌಡ್ರೆ ಇವ್ರೂ ಹಿಂಗಾಡ್ತಾರೆ

ದೋಸೆ ತಿಂದ ನಂತರ...

ವ್ಯಕ್ತಿ: ಏನ್ ಗೌಡ್ರೇ, ಯಡಿಯೂರಪ್ಪನವ್ರು ನಿಮ್ಗೆ ಫ್ರೀಯಾಗಿ ಕರೆಂಟ್ ಕೊಟ್ಟವ್ರೆ. ಖರ್ಚ್ ತುಂಬಾ ಇಳಿದಿರ್ಬೇಕಲ್ವ
ರೈತ: ಹೆಸ್ರಿಗೆ ಮಾತ್ರ ಬಿಟ್ಟಿ ಕಣಪ್ಪ. ಯಾವಗ್ ನೋಡಿದ್ರೂ ಸಿಂಗಲ್ ಫೇಸ್. ನೀನೆ ಹೇಳು ಗದ್ದೆ ಮೋಟಾರ್ಗೆ ಸಿಂಗಲ್ ಫೇಸ್ ಸಾಕಾಯ್ತದ. ಮೂರು ಫೇಸ್ ಸರಿ ಮಾಡ್ಸೋಕೆ ಕರೆಂಟ್ನವ್ರಿಗೆ ಸ್ವಲ್ಪ ಕೊಡ್ಲಿಲ್ಲಾಂದ್ರೆ ಏನ್ ಕೆಲ್ಸನೂ ಆಗಲ್ಲ ಕಣಪ್ಪ. ಪುಣ್ಯಕ್ಕೆ ಕಾಲುವೆ ನೀರು ಇದ್ಯಲ್ಲ ಅದ್ರಿಂದ ಸ್ವಲ್ಪ ಸುಧಾರ್ಸ್ಕೊತೀವಿ. ಈ ರೈತರ ಪಾಡು ನಿಂಗೆ ತಿಳಿಯಾಕ್ಕಿಲ್ಲ
ವ್ಯಕ್ತಿ: ಹೌದಾ ಗೌಡ್ರೆ!! ಅಂದ ಹಾಗೆ ನಿಮ್ದೆಷ್ಟು ಜಮೀನ್ ಅಯ್ತೆ. ಏನ್ ಬೆಳೆಸ್ತೀರಾ
ರೈತ: ಮೂರು ಎಕ್ರೆ ಕಣಪ್ಪಾ. ಭತ್ತ ಬೆಳಿತೀವಿ
ವ್ಯಕ್ತಿ: ಒಳ್ಳೆ ಬೆಳೆ ಬರುತ್ತಾ ಹೇಗೆ? ಈಗೀಗ ಅಕ್ಕಿ ಕೂಡ ಬಾಳ ಕಾಸ್ಲಿಯಾಗೈತೆ ಅಲ್ವಾ, ತುಂಬಾ ಸಂಪಾದನೆಯಾಗುತ್ತನ್ನಿ
ರೈತ: ಹಾಗೇನೂ ಇಲ್ಲ ಕಣಪ್ಪ. ಕಾಸ್ ಮಾಡೋರು ದಲ್ಲಾಳಿಗಳು ಮಾತ್ರ. ನಮ್ಗೆ ಇನ್ನು ಅದೇ ಹಳೇ ರೇಟೆ ಹೇಳ್ತಾರೆ. ಗದ್ದೆ ಮಾಡೋದು ಸುಲ್ಭ ಅನ್ಕೊಡಿದ್ದಿಯಾ. ಮೊನ್ನೆ ನಮ್ ಭತ್ತಕ್ಕೆ ಸುಳಿ ರೋಗ ಬಂದಿತ್ತು. ಈತರ ರೋಗ ಬಂದ್ರೆ ನಮ್ ಬೆಳೆ ಎಲ್ಲಿ ನಿಲ್ತಾವೆ ಹೇಳು. ಗದ್ದೆ ಕೆಲ್ಸ ಮಾಡೋಕೆ ಜನ ಸಿಗ್ಬೇಕಲ್ಲ
ವ್ಯಕ್ತಿ: ನೀವು ರೈತ್ರು ಅದೇನೊ ಕೆಮಿಕಲ್ ಎಲ್ಲಾ ಹಾಕಿ ನಾವು ತಿನ್ನೊರಿಗೂ ಕಾಯ್ಲೆ ಬರಿಸ್ತೀರಾ ಅಲ್ವಾ. ಮುಂಚೆ ಕೆಮಿಕಲ್ ಬದ್ಲು ಬೇವಿನ್ ನೀರು ಬಳಸ್ತಾ ಇದ್ರು
ರೈತ: ಮೊನ್ನೆ ಸುಳಿ ರ‍ೋಗ ಬಂದಾಗ ನಾವು ಕೃಷಿ ಇಲಾಖೆಯವ್ರನ್ನು ಕೇಳ್ದ್ವಿ. ಅವ್ರು ಯಾವ್ದೊ ಹೊಸ ಗೊಬ್ರ ತೋರ್ಸಿದ್ರು. ಎರಡು ಸಲ ಹಾಕುದ್ರೂನೂ ರೋಗನೇ ಇಳಿತಾ ಇಲ್ಲ. ಅದಾದ್ ಮ್ಯಾಕೆ ನೀವ್ ಹೇಳುದ್ರಲ್ಲ ಅದನ್ನೇ ಬಳಸ್ದೆ. ಸ್ವಲ್ಪ ದಿನ್ದಲ್ಲೇ ರ‍ೋಗ ಮಾಯ್ವಾಯ್ತು
ವ್ಯಕ್ತಿ: ಅಲ್ಲಾ ಗೌಡ್ರೆ, ಕೆಲ್ಸಕ್ಕೆ ಆಳು ಯಾಕೆ ಈಗ ಮೆಶಿನ್ ಬಂದಿದ್ಯಲ್ಲಾ
ರೈತ: ಹೂ ಕಣಪ್ಪಾ ಬಂದಿದೆ. ಅದಕ್ಕೂ ಕರ್ಚಿದೆ. ಭತ್ತ ಕಟಾವು ಮಾಡೊವಾಗ ಭತ್ತ ಏನೋ ಬೇಗ ಸಿಗುತ್ತೆ ಆದ್ರೆ ಅದ್ರ ಹುಲ್ಲು ಎಲ್ಲಾ ಪುಡಿಯಾಗುತ್ತಪ್ಪಾ. ಸುಮ್ನೆ ದಂಡ ಆಗುತ್ತೆ.
ವ್ಯಕ್ತಿ: ನಿಮ್ಗೆ ಭತ್ತ ಸಿಕ್ರೆ ಸಾಕಲ್ವ ಹುಲ್ಲು ಯಾಕೆ
ರೈತ: ಏಏಏ.. ಅಷ್ಟು ಗೊತ್ತಿಲ್ವೇನ್ಲಾ. ಒಣಗಿದ ಹುಲ್ಲುಗಳು ನಮ್ ಹಸುಗಳಿಗೆ ಆಹಾರ ಕಣ್ಲಾ. ಅದ್ರಲ್ಲೂ ಒಂದು ಗದ್ದೆ ಹುಲ್ನಿಂದ ೨೦೦೦ ರುಪಾಯಿ ಆದಾಯ ಕೂಡ ಬರುತ್ತೆ
ವ್ಯಕ್ತಿ: ಹೌದಾ ಗೌಡ್ರೆ. ಕೂಲಿ ಎಷ್ಟ್ ಕೊಡ್ಬೆಕಾಯ್ತದೆ
ರೈತ: ಕೂಲಿ ೬ ಜನ ಬೇಕಾಯ್ತದೆ. ಅವ್ರಿಗೆ ಕಟಾವು ಮಾಡಕ್ಕೆ ಒಬ್ಬೊಬ್ರಿಗೆ ೧೦೦೦ ಹಿಡಿಯುತ್ತೆ ಕಣಪ್ಪಾ
ವ್ಯಕ್ತಿ: ನೀವೆ ಕಟಾವು ಮಾಡ್ಬಹುದಲ್ಲಾ?
ರೈತ: ೩ ಎಕ್ರೆ ಕಟಾವು ಮಾಡೋದು ಸುಲ್ಭ ಅನ್ಕೊಡಿದ್ದೀಯಾ. ಅದ್ರಲ್ಲೂ ಮಧ್ಯ ಮಳೆ-ಗಿಳೆ ಬಂದ್ರೆ ಬೆಳೆನೂ ಹೊಂಟೋಯ್ತದೆ ಗೊತ್ತಾ
ವ್ಯಕ್ತಿ: ಮಳೆ ಬಂದ್ರೆ ಮುಂದಿನ ದಿನ ಒಣಗಕ್ಕ ಬಿಟ್ರೆ ಆಯ್ತಲ್ವಾ?
ರೈತ: ಒಂದ್ಸಲ ನೀರ್ ಬಿದ್ರೆ ಮುಗ್ದೋಯ್ತು ಕಣಪ್ಪ. ಇನ್ನು ಅದು ಬರಿ ಮೇವಿಗೆ ಹುಲ್ಲು ಅಷ್ಟೇ (ಬೇಸರದಿಂದ)
ವ್ಯಕ್ತಿ: ಒಂದ್ಸಲ ಬೆಳೆ ತೆಗುದ್ರೆ ಎಷ್ಟು ಇಳುವರಿ ಬರುತ್ತೆ ನಿಂಗೆ
ರೈತ: ಒಂದ್ಸಲಕ್ಕೆ ೪೦ ಮೂಟೆ ಬರುತ್ತೆ ಕಣಪ್ಪ ಅದು ಯಾವ ರೋಗ ಬರ್ದೇ ಇದ್ರೆ. ಒಂದು ಮೂಟೆ ೭೦ ಕೆ.ಜಿ ಲೆಕ್ಕ. ಅದ್ರಲ್ಲೂ ಕೂಲಿ ಕರ್ಚೆ ಜಾಸ್ತಿ

ಅಷ್ಟೊತ್ತಿಗಾಗಲೆ ಮಂಡ್ಯ ಬಂದಿತ್ತು. ಇಬ್ಬರಿಗೂ ನಿದ್ದೆ ಬರುತ್ತಿತ್ತೇನೊ, ನಿದ್ರಾದೇವಿಗೆ ಶರಣಾದರು. ರೈಲು ಬಹಳ ವಿಳಂಬವಾಗಿತ್ತು. ದ್ವಿಪಥ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಹಲವೆಡೆ ಕ್ರಾಸಿಂಗ್ ತೊಂದರೆ. ಎಲ್ಲಾ ಕಡೆ ಇವನೇ ನಿಲ್ಲಿಸುತ್ತಿದ್ದ. ಬ್ಯಾಟರಾಯನಹಳ್ಳಿ, ಹನಕೆರೆ, ಶೆಟ್ಟಿಹಳ್ಳಿ ಹೀಗೆ ಮೂರು ಬಾರಿ ಹತ್ತು ನಿಮಿಷ ಕ್ರಾಸಿಂಗ್. ಒಟ್ಟು ೩೦ ನಿಮಿಷ ಸಮಯ ವ್ಯರ್ಥ. ಎಲ್ಲರೂ ತಲೆಕೆರೆದುಕೊಳ್ಳುತ್ತಿದ್ದರು. ರೈಲು ಕೂಡ ಬಹಳ ರಶ್ ಇತ್ತು. ಮೈಸೂರಿನಿಂದ-ಮದ್ದೂರು ವರೆಗಿನ ಪ್ರಯಾಣ ಬಹಳ ಸಂತಸ ನೀಡಿತ್ತು. ಸಣ್ಣ ಕಾಲುವೆಗಳು, ಭತ್ತದ, ತೆಂಗಿನ, ಕಬ್ಬಿನ ತೋಟ, ಆಗಾಗ ಸಿಗುತ್ತಿದ್ದ ಮಾವಿನ ತೋಟಗಳು ಮನಸ್ಸಿಗೆ ಉಲ್ಲಾಸ ನೀಡುತ್ತವೆ. ರಾಮನಗರದ ನಂತರ ಸಂಪೂರ್ಣ ಡಬಲ್ ಟ್ರಾಕ್. ರಾಮನಗರ-ಚನ್ನಪಟ್ಟಣ ಮಾರ್ಗದಲ್ಲಿ ತುಸು ವೇಗವಾಗಿಯೆ ಕಾಮಗಾರಿಗಳು ನಡೆಯುತ್ತಿವೆ. ಬ್ರಿಡ್ಜ್ಗಳು, ಪೇವ್ಮೆಂಟ್ಗಳನ್ನು ಬೇಗನೆ ಮುಗಿಸಿದ್ದಾರೆ. ಕೆಲವು ಕಡೆ ಎತ್ತರದ ಪ್ರದೇಶದಲ್ಲಿ ಮಣ್ಣು ತೆಗೆಯುವ ಕಾಮಗಾರಿ ನಡೆಯುತ್ತಿದೆ. ರಾಮನಗರದ ನಂತರ ರೈಲು ತುಸು ವೇಗವಾಗಿ ಹೋಗಬಹುದು ಎಂದುಕೊಂಡರೆ ಸಿಂಗಲ್ ಟ್ರಾಕ್ ಗಿಂತ ನಿಧಾನವಾಗಿ ಚಲಿಸುತ್ತಿತ್ತು. ಹೊಸ ಟ್ರಾಕ್ ಅಲ್ಲವೇ ಸ್ವಲ್ಪ ಸೆಟ್ ಆಗಲಿ ಅಂತ ತಿಳಿದುಕೊಳ್ಳಬೇಡಿ. ಇದೇ ಟ್ರಾಕ್ ನಲ್ಲಿ ಮೈಸೂರು-ಚೆನ್ನೈ ಶತಾಬ್ಧಿ ಘಂಟೆಗೆ ನೂರು ಕಿ.ಮೀ ವೇಗದಲ್ಲಿ ಚಲಿಸುತ್ತದೆ. ರಾಮನಗರದ ನಂತರ ಮತ್ತೆ ಇಬ್ಬರು ಮಾತಿಗೆ ಇಳಿದರು.

ವ್ಯಕ್ತಿ: ಅಲ್ಲ ಗೌಡ್ರೇ ಭತ್ತ ಬೆಳೆಯೊಕ್ಕಿಂತ ಸ್ವಲ್ಪ ತೆಂಗಿನ್ ತೋಟನು ಮಾಡ್ಬಹುದಲ್ವಾ?
ರೈತ: ಅದ್ರಾಗೂ ಕಷ್ಟ ಇದೆ ಕಣಪ್ಪಾ. ಸ್ವಲ್ಪ ವರ್ಶದ್ ಹಿಂದೆ ನುಸಿ ರೋಗ ಹಿಡ್ದಿದ್ದು ನೆನ್ಪಿಲ್ವಾ. ಆವಾಗಿಂದ ಮರಕ್ಕೆ ೨೦ ಕಾಯಿ ಬಿಟ್ರೆ ಹೆಚ್ಚು. ಅದ್ಕಿಂತ ಮುಂಚೆ ೫೦ ಕಾಯಿನಾದ್ರು ಬರೋದು
ವ್ಯಕ್ತಿ: ನಿಮ್ಗೆ ಮರ ಹತ್ತೋಕೆ ಬರುತ್ತಾ?
ರೈತ: ಇಲ್ಲಪ್ಪಾ. ಅದಕ್ಕೂ ಕೂಲಿಯವ್ರನ್ನೇ ಕರಿಸ್ಬೇಕು. ಮರದಲ್ಲಿ ಕಾಯಿ ಎಷ್ಟಿದ್ರೇನು ಒಂದು ಮರಕ್ಕೆ ೧೦ ರುಪಾಯಿ ಕೊಡ್ಲಿಲ್ಲಾಂದ್ರೆ ಯಾವನೂ ಬರಕ್ಕಿಲ್ಲಾ
ವ್ಯಕ್ತಿ: ಹೌದಾ ಗೌಡ್ರೇ!! ಮತ್ತೆ ಕೆಲ್ವುರು ಕೆಲ್ಸಾನೇ ಇಲ್ಲಾಂತಾರಲ್ಲ
ರೈತ: ಅದೆಲ್ಲಾ ಹಳೆ ಕಾಲ ಕಣಪ್ಪ. ಈಗೆಲ್ಲ ಯಾರ್ ಬೇಸಾಯ ಮಾಡ್ತಾರೆ. ಎಲ್ಲ ಸಿಟಿ ಕಡೆಗೆ ಹೋಯ್ತಾವ್ರೆ. ಅದಿಕ್ಕೆ ಕೂಲಿಗ್ಳ ರೇಟ್ ಕೂಡ ಏರ್ಬಿಟ್ಟಿದೆ. ಹಿಂದಿನ ಕಾಲ್ದಲ್ಲಿ ಮದ್ವೆಗೆ ಬಂದೊವ್ರು ನಮ್ ಕಡೆಯವ್ರ ಅತ್ವಾ ಹೊರ್ಗಿಂದ ಬೇರೆ ಯಾರ ಅಂತ ನೋಡ್ತಿದ್ವಿ. ಈಗ್ ನೋಡಪ್ಪಾ ಮನೆಯಲ್ಲಿ ಕಾರ್ಯಕ್ರಮ್ ಅಯ್ತೆ ಬನ್ನಿ ಅಂತ ಹೇಳಿದ್ರೂ ಯಾವನೂ ಬರಲ್ಲ ಅಂತಾರೆ. ನಾವೆ ಸ್ವಲ್ಪ ಕರ್ಚ್ ಮಾಡ್ಕೊಂದು ಫೋನ್ ಮಾಡ್ದ್ರೂನೂ ಯಾವನೂ ಬರಲ್ಲಾ ನೋಡು.
ವ್ಯಕ್ತಿ: ಅದು ಸರೀನೆ ಬಿಡಿ. ಎಳನೀರ್ ಮಾರೋರ್ಗೆ ಏನ್ ಲಾಭ ಅಲ್ವಾ. ಬೆಂಗ್ಳೂರ್ನಾಗೆ ಎಷ್ಟೊಂದು ಮಾರಾಟ ಆಯ್ತದಲ್ವಾ?
ರೈತ: ಇಲ್ಲ ಕಣಪ್ಪ. ನಾವು ಎಳನೀರು ಮಾರಿದ್ರೆ ನಮ್ಗೆ ಬರ‍ೊದು ಬರಿ ಮೂರು ರುಪಾಯಿ ಅಷ್ಟೆಯಾ. ಉಳ್ದಿದ್ದು ದಲ್ಲಾಳಿಗಳಿಗೆ. ನಾವು ಮಾರೋದು ೩ ರುಪಾಯಿ, ಅದನ್ನ ಕೊಂಡ್ಕೊಂಡೊವ್ನು ಮೈಸೂರ್ನಾಗೆ ೫ ರುಪಾಯಿಗೆ ಮಾರ್ತಾನೆ. ಗಾಡಿ ಚಾರ್ಜ್ ಕೂಡ ಇದ್ಯಲ್ಲ. ಬೆಂಗ್ಳೂರಿಗೆ ಹೋದಾಗ ೧೦ ರುಪಾಯಿ ಆಗತ್ತೆ. ಕೆಲ್ವು ಬೊಂಬಾಯಿಗೂ ಹೋಗ್ತಾವಂತೆ. ಅಲ್ಲಿ ೨೦ ರುಪಾಯಿಗೆ ಮಾರಾಟ ಅಂತೆ.

ಆಗ ಕೆಂಗೇರಿ ಬಂದಾಗಿತ್ತು. ರೈತ ಮಿತ್ರರು ಅಲ್ಲಿಯೇ ಇಳಿದರು. ಎಲ್ಲರಿಗೂ "ಬರ್ತೀನ್ ಕಣ್ರಪ್ಪಾ" ಅಂತ ಹೇಳಿ ಹೋದರು. ಬಹಳ ಇಷ್ಟವಾಗಿದ್ದು ಅವರ ನಯವಾದ ತಾಳ್ಮೆಯ ಉತ್ತರಗಳು. ಅದಕ್ಕೆ ಸ್ವಲ್ಪ ಬರೆಯಬೇಕೆಂದೆನಿಸಿತು. ರೈಲಿನಲ್ಲಿ ಪ್ರಯಾಣಿಸುವಾಗ ಬಹಳಷ್ಟು ಅನುಭವವಾಗಿತ್ತು, ಆಗುತ್ತಿದೆ ಕೂಡ. ಇದೊಂದು ರೀತಿಯ ಅನುಭವ ಅಷ್ಟೆ. ರೈತರ ಮಾತುಗಳು ನನಗೆ ಹೊಸತಲ್ಲ. ನಮ್ಮ ಹಳ್ಳಿಯಲ್ಲೂ ಇದೇ ವಿಷಯ ಮಾತನಾಡುತ್ತಾರೆ.

ಮುಕ್ಕಾಲು ಘಂಟೆ ತಡವಾಗಿ ಅಂದರೆ ೧೦:೧೫ಕ್ಕೆ ರೈಲು ಬೆಂಗಳೂರು ತಲುಪಿತು. ನಾನು ಇಳಿದುಕೊಂಡು ಸೇರಬೇಕಾದ ಸ್ಥಳ ತಲುಪಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಆ ರೈತರು ಹೇಳಿದ್ದು ನಮ್ಮದೇ ಮನೆ ಕತೆ.. ನಮ್ಮ ಅಪ್ಪನಿಗೆ ಯಾರಾದ್ರು ಇದೇ ಪ್ರಶ್ನೆಗಳ್ನ ಕೇಳಿದ್ರೆ ಹಿಂಗೇ ಉತ್ರ ಕೊಟ್ಟಿರೋರು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕರಾವಳಿ ಕಡೆ ರೈತರೂ ಇದೇ ಉತ್ತರವನ್ನು ನೀಡುತ್ತಾರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೆಂಗಳೂರಿನಿಂದ ಮೈಸೂರಿಗೆ ಹೋದಾಗಲೂ ಮುಕ್ಕಾಲು ಘಂಟೆ ತಡ ಆಯ್ತು ಅಂತ ಹೇಳಿದ್ರಿ.
ಮೈಸೂರಿನಿಂದ ಬೆಂಗಳೂರಿಗೆ ಬರುವಾಗಲೂ ಮುಕ್ಕಾಲು ಘಂಟೆ ತಡವಾಯ್ತಾ? :(

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಬೆಂಗಳೂರಿನಿಂದ ಮೈಸೂರಿಗೆ ಹೋದಾಗಲೂ ಮುಕ್ಕಾಲು ಘಂಟೆ ತಡ ಆಯ್ತು ಅಂತ ಹೇಳಿದ್ರಿ.>>
ಹೊರಟಿದ್ದು ಮುಕ್ಕಾಲು ಘಂಟೆ ತಡ (ರೈಲು ಹುಬ್ಬಳ್ಳಿ ಇಂದ ಬರೋದು. ರೈಲ್ವೆ ಅವರ ಕೋಚ್ ಶೇರಿಂಗ್ ತಂತ್ರ). ತಲುಪಿದಾಗ ೭೫ ನಿಮಿಶ ತಡ :(. ಹೆಸರಿಗೆ ಸುಪರ್ಫಾಸ್ಟ್ ಬೇರೆ.

<<ಮೈಸೂರಿನಿಂದ ಬೆಂಗಳೂರಿಗೆ ಬರುವಾಗಲೂ ಮುಕ್ಕಾಲು ಘಂಟೆ ತಡವಾಯ್ತಾ?>>
ಹೂ. ಭಾನುವಾರದಂದು ಯಾವ್ದೇ ಪ್ಯಾಸೆಂಜರ್ ರೈಲುಗಳಿಲ್ಲ ಅದ್ರಿಂದ ಕ್ರಾಸಿಂಗ್ ಕೂಡ ಕಡಿಮೆ ಇರುತ್ತೆ. ಅದ್ರೂ ತಡವಾಗಿ ಬಂದ. ದ್ವಿಪಥ ಪೂರ್ತಿ ಆದ ನಂತರ ಸರಿ ಹೋಗ್ಬಹುದು. ರೈತ್ರು ಇದ್ರಲ್ಲ ಸಮಯ ಹೋಗಿದ್ದೆ ಗೊತ್ತಾಗಿಲ್ಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.