ಕರ್ನಾಟಕ ಶಾಸ್ತ್ರೀಯ ಸಂಗೀತ: ನನ್ನ ಅನುಭವಗಳು

0

ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರುನಾನು ಹುಟ್ಟಿದ್ದು ಬೆಳೆದಿದ್ದು ಹಳ್ಳಿಯಲ್ಲಿ. ನಮ್ಮ ಮನೆತನದವರೆಲ್ಲರೂ ಸಂಗೀತ ಕಲಿತವರು. ಹಾಗೆ ನಮ್ಮ ಹಳ್ಳಿಯಲ್ಲೂ ಅನೇಕ ಮಂದಿ ಸಂಗೀತ ಕಲಿಯುತ್ತಿದ್ದರು. ಸಂಗೀತ ಕಲಿಯದಿದ್ದರೆ ಆಗ ಒಂತರ ಅವಮಾನ. ಹಾಗೆ ನನ್ನ ತಂದೆಯೂ ಸಂಗೀತ ಕಲಿಯಲು ಜೋರು ಮಾಡಿದರು. ಆ ದಿನಗಳಲ್ಲಿ ಹಿರಿಯರ ಮಾತು ಕೇಳದಿದ್ದರೆ ಬೀಳುತ್ತಿದ್ದವು ಪೆಟ್ಟುಗಳು ಅಡಿಕೊಲಿನಲ್ಲಿ ಅದು ಬೆನ್ನಿಗೆ. ಅಂತೆಯೇ ೫ ವರ್ಷವಿದ್ದಾಗ ಶುರುವಾಯಿತು ನನ್ನ ಸಂಗೀತ ಪಾಠ. ಗುರುಗಳು ನಮ್ಮ ಊರಿನವರಾದ್ದರಿಂದ ಮನೆಗೆ ಬಂದೆ ಪಾಠ ಹೇಳಿಕೊಡುತ್ತಿದ್ದರು.

ಸರಿ ಶುರುವಾಯಿತು ಸಂಗೀತದ ಪಾಠ 'ಮಾಯಾಮಾಳವಗೌಳದ' ಆರೋಹಣ ಅವರೋಹಣದಿಂದ. ನಂತರ ಸರಳವರಸೆಗಳು, ತಾರಾಸ್ತಾಯಿವರಸೆಗಳು ಮತ್ತೆ ಜಂಟಿವರಸೆಗಳು. ತಾರಾಸ್ತಾಯಿವರಸೆಗಳ ಪಾಠ ಸ್ವಲ್ಪ ಜಾಸ್ತಿ ದಿನವೇ ನಡೆಯಿತು ಯಾಕೆಂದರೆ ಸ್ವರಗಳು ತುಂಬಾ ಮೇಲೆ ಹೋಗಬೇಕಲ್ಲವೇ.

ಮತ್ತೆ ಬಂತು ಕೀರ್ತನೆಗಳ ಸರಮಾಲೆ. ಮಲಹರಿ ರಾಗದ ಲಂಬೋದರ ಲಕುಮಿಕರ, ಪದುಮನಾಭ ಪರಮ ಪುರುಷ, ಕೆರೆಯ ನೀರನು ಕೆರೆಗೆ ಚೆಲ್ಲಿ; ಮೋಹನ ರಾಗದ ವರವೀಣ ಮೃದು ಪಾಣಿ; ಕಲ್ಯಾಣಿ ರಾಗದ ಕಮಲ ಜಾದಳ; ಬಿಲಹರಿ ರಾಗದ ರಾರವೇಣು; ಕಮಾಚ್ ರಾಗದ ಸಾಂಭ ಶಿವ ಯೇನವೇ; ಹೀಗೆ ನಡೆಯುತ್ತಿತ್ತು ಸಂಗೀತ ಪಾಠ. ಅಷ್ಟೊತ್ತಿಗಾಗಲೇ ಅಪ್ಪನಿಗೆ ಚಿಕ್ಕಮಗಳೂರಿಗೆ ವರ್ಗಾವಣೆ ಆಗಿತ್ತು. ನನ್ನ ಸಂಗೀತಾಭ್ಯಾಸ ಅರ್ಧಕ್ಕೇ ನಿಂತು ಹೋಯಿತು. ಸ್ವಲ್ಪ ಸಮಯದ ನಂತರ ಬೆಂಗಳೂರಿಗೆ ಹೋದೆವು. ಅಲ್ಲಿ ಸಂಗೀತಕ್ಕೆ ಸೇರಿದೆನಾದರೂ ಅವರೂ ಸಂಗೀತಕ್ಕಿಂತ ಭಾವಗೀತೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದರು. ನನಗೆ ಅದು ಅಷ್ಟು ಹಿಡಿಸಲಿಲ್ಲ. ಅಲ್ಲಿಗೆ ನನ್ನ ಸಂಗೀತ ಸ್ತಬ್ದವಾಯಿತು. ಇನ್ನೇನು ನನ್ನ ಸಂಗೀತ-ಯುಗ ಮುಗಿಯಿತು ಅಂದುಕೊಂಡೆ.

ಸ್ತಬ್ದವಾಗಿದ್ದ ನನ್ನ ಸಂಗೀತಾಸಕ್ತಿ ಮತ್ತೆ ಚಿಗುರಿದ್ದು ನನಗೆ ಸುಮಾರು ೧೮ ವರ್ಷವಿದ್ದಾಗ. ನನ್ನ ಆಸಕ್ತಿಗೆ ಸರಿಯಾಗಿ ನಾವು ಮೈಸೂರಿನಲ್ಲಿ ಇದ್ದೆವು. ಮೈಸೂರಿನಲ್ಲಿ ಇಲ್ಲದ ಕಚೇರಿಗಳಿಲ್ಲ. ಕರ್ನಾಟಕ ಸಂಗೀತದ ಅನೇಕ ಶ್ರೇಷ್ಠ ವಿದ್ವಾಂಸರ ಕಛೇರಿಗಳು ನಡೆಯುತ್ತಿದ್ದವು. ಟಿ.ವಿ. ಶಂಕರನಾರಾಯಣ್, ತ್ರಿಚುರ್ ರಾಮಚಂದ್ರನ್, ಆರ್.ಕೆ. ಶ್ರೀಕಂಠನ್, ಕುನ್ನಕುಡಿ-ವೈದ್ಯನಾಥನ್ ಅವರಂತಹ ಹಿರಿಯರಿಂದ ಹಿಡಿದು ಟಿ.ಎಮ್.ಕೃಷ್ಣ, ಸಂಜಯ್ ಸುಬ್ರಮಣ್ಯಮ್, ಮೈಸೂರು ಮಂಜುನಾಥ್/ನಾಗರಾಜ್ ಅವರಂತಹ ಕಿರಿಯರವರೆಗೆ(ಆಯಸ್ಸಿನಲ್ಲಿ) ಕಛೇರಿಗಳು ನಡೆಯುತ್ತಿದ್ದವು. ಹಾಗೆ ಅನೇಕ ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು. ರಾಮ ನವಮಿ, ಕೃಷ್ಣಾಷ್ಟಮಿ, ದಸರಾ, ಗಣೇಶ ಚತುರ್ಥಿ ಸಮಯದಲ್ಲಂತೂ ಸಂಗೀತದ ಜಾತ್ರೆಯೋ ಜಾತ್ರೆ. ಎಲ್ಲಿ ಹೋಗುವುದು ಎಂಬ ಗೊಂದಲವಾಗುತ್ತಿತ್ತು. ಮೈಸೂರಿನಲ್ಲಿ ಪ್ರಖ್ಯಾತಿಯಾದ ಸಂಗೀತ ಕಾರ್ಯಕ್ರಮಗಳು ನಾದಬ್ರಹ್ಮ ಸಂಗೀತ ಸಭಾ, ಬಿಡಾರಂ ಕೃಷ್ಣಪ್ಪ ಮಂದಿರ, ೮ನೆ ಕ್ರಾಸ್ ವಾಣಿ ವಿಲಾಸ್ ರಸ್ತೆಯಲ್ಲಿ ನಡೆಯುತ್ತಿದ್ದವು.

ಮೊದ-ಮೊದಲು ಹೆಚ್ಚಾಗಿ ರಾಗಗಳನ್ನು ಗುರುತಿಸಲು ಪ್ರಾರಂಭಿಸಿದೆ. ನಂತರ ಆಲಾಪನೆಗಳನ್ನು, ನೆರವಲ್, ಸ್ವರ-ಪ್ರಸ್ತಾರ ಮತ್ತು ತನಿ-ಆವರ್ತನೆಗಳನ್ನು ಸವಿಯುವುದು. ಹಂಸಧ್ವನಿ, ಕಲ್ಯಾಣಿ, ಆರಭಿ, ನಾಟ, ಕಾನಡ, ಅಟಾಣ, ಭೈರವಿ, ಆನಂದ-ಭೈರವಿ, ಕಾಂಭೋಜಿ, ಶಂಕರಾಭರಣ ರಾಗಗಳನ್ನು ಸುಲಭವಾಗಿ ಗುರುತಿಸುತ್ತಿದ್ದೆನು. ನಂತರ ಕೇದಾರ, ಕೇದಾರ-ಗೌಳ, ಪೂರ್ವಿ-ಕಲ್ಯಾಣಿ, ಪಂತುವರಾಳಿ, ದೇವಗಾಂಧಾರಿ, ರೇವತಿ, ಕೀರವಾಣಿಯಂತಹ  ರಾಗಗಳನ್ನು ಗುರುತಿಸಿದೆನು. ಇನ್ನು ಧರ್ಮವತಿ, ಹೇಮವತಿ, ಸಿಂಹೇಂದ್ರ-ಮಧ್ಯಮಗಳಂತಹ ರಾಗಗಳನ್ನು ಗುರುತಿಸುವುದು ಬಹಳ ಕ್ಲಿಷ್ಟವೆನಿಸಿತು. ಇದರ ಮಧ್ಯೆ ಅನೇಕ ಗೊಂದಲಗಳು ಕಾಣಿಸಿಕೊಳ್ಳುತ್ತಿದ್ದವು. ಅವುಗಳು ಆನಂದಭೈರವಿ-ರೀತಿಗೌಳ, ಭೈರವಿ-ಮುಖಾರಿ, ಮಧ್ಯಮಾವತಿ-ಶ್ರೀ-ಮಣಿರಂಗು, ಅಭೇರಿ-ಶುದ್ದದನ್ಯಾಸಿ, ಸರಸ್ವತಿ-ಮಲಯಮಾರುತ, ಭೌಳಿ-ರೇವಗುಪ್ತಿ ಹೀಗೆ ಹಲವಾರು. ತಂದೆಯ ಸಹಾಯದಿಂದ ಈ ಗೊಂದಲಗಳು ಪರಿಹಾರಗೊಂಡವು. ಆದರೆ ಸರಸ್ವತಿ-ಮಲಯಮಾರುತ, ಭೌಳಿ-ರೇವಗುಪ್ತಿ ಇವುಗಳ ಗೊಂದಲ ಈಗಲೂ ಕಾಡುತ್ತದೆ. ಈಗ ಅನೇಕ ರಾಗಗಳನ್ನು ಗುರುತಿಸುತ್ತೇನೆ. ಕಛೇರಿಗಳು ಹೆಚ್ಚು ಕೇಳಿದಂತೆ ರಾಗ ಗುರುತಿಸಲು ಬಹಳ ಸುಲಭವಾಯಿತು. ಆದರೆ ನಾಸಿಕಾಭೂಷಿಣಿ, ಸರಸ್ವತಿ-ಮನೋಹರಿಯಂತಹ ರಾಗಗಳು ಈಗಲೂ ಗುರುತಿಸಲು ಬಾರದು.

ಕರ್ನಾಟಕ ಸಂಗೀತದಲ್ಲಿ ಸಾಹಿತ್ಯದ ಜೊತೆಗೆ, ತಾಳಕ್ಕೆ ಹೆಚ್ಚು ಪ್ರಾಶಸ್ತ್ಯ. ಕಛೇರಿಗಳಲ್ಲಿ ಮೊದಲು ವರ್ಣ ಇಲ್ಲವೇ ಗಣೇಶನ ಹಾಡಿನಿಂದ ಪ್ರಾರಂಭಿಸುತ್ತಿದ್ದರು. ವರ್ಣ ಎಂಬುದು ಗಾಯಕರಿಗೆ warm-up ಇದ್ದ ಹಾಗೆ. ನಂತರ ಬರುವುದು ವಿನಾಯಕನ ಸ್ಮರಣೆ. ಅದಾದ ಮೇಲೆ ಯಾವುದಾದರೂ ಒಂದೆರಡು ಕೀರ್ತನೆ. ನಂತರ ದೀರ್ಘ ಆಲಾಪನೆ ಅದರೊಂದಿಗೆ ವಿಳಂಬ ಕಾಲದ ಕೀರ್ತನೆ. ಇದನ್ನು ಸುಮಾರು ೩೦ ನಿಮಿಷ ಹಾಡುತ್ತಾರೆ. ಈ ಕೀರ್ತನೆಯ ನಂತರ ಸಣ್ಣ ಹಾಡುಗಳನ್ನು ಹೇಳುತ್ತಾರೆ. ಅದಾದ ಮೇಲೆ ಕೆಲವರು ರಾಗ-ತಾನ-ಪಲ್ಲವಿ ಇಲ್ಲವೇ ಯಾವುದಾದರು ವಿಳಂಬ ಕಾಲದ ಕೀರ್ತನೆ ಹೇಳುತ್ತಾರೆ. ಇದರೊಟ್ಟಿಗೆ ತನಿ-ಆವರ್ತನೆ ಕೂಡ ಇರುತ್ತದೆ. ಸುಮಾರು ಒಂದು ಘಂಟೆ ಈ ಕೀರ್ತನೆ ಸಾಗುತ್ತದೆ. ಈ ಕೀರ್ತನೆಯ ನಂತರ ರಾಗಬದ್ಧವಾದ ಶ್ಲೋಕಗಳು ಅದರೊಟ್ಟಿಗೆ ದಾಸರ ಭಜನೆಗಳು ಇರುತ್ತವೆ. ಕೊನೆಗೆ ಮಂಗಳ ಗೀತೆಯೊಂದಿಗೆ ಕಚೇರಿ ಸಮಾಪ್ತಿ ಆಗುತ್ತದೆ. ಮಂಗಳ ಗೀತೆಗಳನ್ನು ಹೆಚ್ಚಾಗಿ ಮಧ್ಯಮಾವತಿ, ಸುರುಟಿ ಅಥವಾ ಸಿಂಧುಭೈರವಿ ರಾಗದಲ್ಲಿ ಹಾಡುತ್ತಾರೆ.

ನನ್ನ ಸಂಗೀತ ಆಸಕ್ತಿಗೆ ಮತ್ತಷ್ಟು ಉತ್ತೇಜನ ನೀಡಿದ್ದು ಸಂಗೀತಪ್ರಿಯ ತಾಣ. ಇಲ್ಲಿ ಹಿಂದಿನ ಕಾಲದ ಹಲವಾರು ಸಂಗೀತ ದಿಗ್ಗಜರ ಕಚೇರಿ ಕೇಳಿದಾಗ ಆಗಿದ್ದು ಅನುಭವ ಅದ್ಭುತ. ಟಿ.ಕೆ.ರಂಗಾಚಾರಿ ಯವರ ಸುಮಾರು ೨೫ ನಿಮಿಷದ ವಾಗದೀಶ್ವರಿ ಆಲಾಪನೆ ವರ್ಣಿಸಲು ಅಸಾಧ್ಯ. ಹಾಗೆ ಹೆಚ್ಚು ವ್ಯಾಪ್ತಿ ಇಲ್ಲದ ಅಟಾಣ ರಾಗವನ್ನು ಸುಮಾರು ೫ ನಿಮಿಷ ಆಲಾಪನೆ ಮಾಡಿದ್ದು ನಿಜಕ್ಕೋ ಬೆರಗಾಗುವಂತೆ ಮಾಡಿತು. ಹಾಗೆ ಟಿ.ವಿ. ಶಂಕರನಾರಾಯಣರ ಕಾನಡ ಆಲಾಪನೆ, ನಂತರದ ತ್ಯಾಗರಾಜರ 'ಸುಖಿ ಎವ್ವರೋ..' ಕೀರ್ತನೆ ಬಹಳ ಮುದ ನೀಡಿತು. ಕಾನಡ ರಾಗದ ಸ್ವರ-ಪ್ರಸ್ತಾರಗಳು [ಮದದ, ಮದದನಿನಿಸಸ, ಮದದನಿನಿಸಸರಿರಿ..] ಅವರ ಗುರುಗಳಾದ ಮಧುರೈ ಮಣಿ ಐಯ್ಯರ್ ಅವರನ್ನು ನೆನಪಿಸುವಂತಿತ್ತು. ಹಾಗೆ ಬೃಂದಾವನ-ಸಾರಂಗ ಮತ್ತು ದ್ವಿಜಾವಂತಿ ರಾಗದ 'ರಾಗ-ತಾನ-ಪಲ್ಲವಿ' ಎಷ್ಟು ಬಾರಿ ಕೇಳಿದರೂ ಬೇಜಾರಾಗುವುದಿಲ್ಲ. ಶೆಮ್ಮಂಗುಡಿ ಅವರು ಶ್ಯಾಮಶಾಸ್ತ್ರಿಗಳ ಭೈರವಿ ಸ್ವರಜತಿ ಕೇಳಿ ನಾನು ಕೂಡ ಭಾವುಕನಾದೆ. ಅಷ್ಟು ಭಕ್ತಿಯಿಂದ ಹಾಡಿದ್ದಾರೆ. ಕೆ.ವಿ.ನಾರಾಯಣಸ್ವಾಮಿ ಆನಂದ-ಭೈರವಿಯಲ್ಲಿ ಹಾಡಿದ 'ತ್ಯಾಗರಾಜ ಯೋಗ ವೈಭವಂ..' ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎಂದೆನಿಸುತ್ತದೆ. ಎಮ್.ಎಸ್.ಸುಬ್ಬಲಕ್ಷ್ಮಿ ಅವರ ಕಂಠದ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ? ಅವರು ಚಿಂತಾಮಣಿ ರಾಗದಲ್ಲಿ ಹಾಡಿದ ಶ್ಯಾಮಶಾಸ್ತ್ರಿಗಳ ಕೀರ್ತನೆ  'ದೇವಿ ಬ್ರೋವ ಸಮಯಮಿಧೆ..' ನಾನು ಆಗಾಗ ಕೇಳುತ್ತಿರುತ್ತೇನೆ. ಎಮ್.ಎಲ್.ವಸಂತಕುಮಾರಿ ಅವರು ಹಾಡಿರುವ ದಾಸರ ಪದಗಳು ಈಗಲೂ ನನ್ನ ಕಿವಿಗಳಲ್ಲಿ ಪ್ರತಿಧ್ವನಿಸುತ್ತದೆ. ಇನ್ನು ಅನೇಕ ಕಛೇರಿಗಳನ್ನು ಉಲ್ಲೇಖಿಸಬಹುದು ಆದರೆ ಒಂದು ಭಾಗದಲ್ಲಿ ವಿವರಿಸಲು ಆಗುವುದಿಲ್ಲ.

ಇನ್ನು ಲೈವ್-ಕಚೇರಿಗಳಿಗೆ ಬರುವ. ನನಗೆ ಬಹಳ ಇಷ್ಟವಾದ ಕಛೇರಿಗಳೆಂದರೆ ಡಾ||ಎಮ್.ಬಾಲಮುರಳಿಕೃಷ್ಣ, ಡಾ||ಜೇಸುದಾಸ್, ಟಿ.ವಿ.ಶಂಕರನಾರಾಯಣ್, ತ್ರಿಚುರ್ ವಿ,ರಾಮಚಂದ್ರನ್, ಆರ್.ಕೆ.ಶ್ರೀಕಂಠನ್, ಕದ್ರಿ ಗೋಪಾಲನಾಥ್, ಮಲ್ಲಾಡಿ ಸಹೋದರರು, ಟಿ.ಎಮ್.ಕೃಷ್ಣ, ಸಂಜಯ್-ಸುಬ್ರಮಣ್ಯಮ್, ಸುಧಾ ರಘುನಾಥನ್, ಬಾಂಬೆ ಜಯಶ್ರೀ, ಮ್ಯಾಂಡೊಲಿನ್-ಶ್ರೀನಿವಾಸ್, ಮೈಸೂರು ನಾಗರಾಜ್/ಮಂಜುನಾಥ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹಾಗೆಯೇ ಶ್ರೀ ವಿದ್ಯಾಭೂಷಣರ ದಾಸರ ಕಛೇರಿಗಳು. ಟಿ.ವಿ.ಶಂಕರನಾರಾಯಣ್ ಎಂದಾಗ ನೆನಪು ಬರುವುದು ಅವರ ಗುರುಗಳಾದ ಮಧುರೈ ಮಣಿ ಐಯ್ಯರ್ ಅವರು. ಅವರ ಗುರುಗಳ ಶೈಲಿಯಲ್ಲಿ ಸ್ವರ-ಪ್ರಸ್ತಾರಗಳನ್ನು ಹೇಳಿ ಕೇಳುಗರನ್ನು ಮೋಡಿ ಮಾಡುತ್ತಿದ್ದರು. ಕಾಪಿ-ನಾರಾಯಣಿ ರಾಗದ ಸರಸ-ಸಾಮದಾನ ಕೀರ್ತನೆ ಹೇಳುವಾಗ 'ಹಿತವು ಮಾಟಲೆಂತು...' ಎಂಬಲ್ಲಿ ನೆರವಲ್ ಹಾಡುತ್ತಿದ್ದರು. ಅದನ್ನು ವಿವರಿಸಲು ಅಸಾಧ್ಯ ಅಷ್ಟು ಸರಾಗವಾಗಿ ಹಾಡುತ್ತಿದ್ದರು. ಇನ್ನು ಟಿ.ಎಮ್ ಕೃಷ್ಣ, ವಿಜಯ-ಶಿವನ್, ಸಂಜಯ್-ಸುಬ್ರಮಣ್ಯಮ್ ಕಛೇರಿಗಳಲ್ಲಿ ಹೊಸ ದೀಕ್ಷಿತರ ಕೀರ್ತನೆಗಳು ಪರಿಚಯವಾಗುತ್ತದೆ. ಒಮ್ಮೆ ಟಿ.ಎಮ್.ಕೃಷ್ಣ ಅವರು ಸುಮಾರು ಒಂದುವರೆ ಘಂಟೆ ಶ್ರೀ-ಸುಬ್ರಮಣ್ಯಾಯ ನಮಸ್ತೆ ಹಾಡಿದ್ದರು. ಸುಮಾರು ೨೦ ನಿಮಿಷ ಕಾಂಭೋಜಿ ಆಲಾಪನೆ ಬಹಳ ರಸವತ್ತಾಗಿ ಮೂಡಿ ಬಂದಿತ್ತು. ಇದೆ ಕೀರ್ತನೆಯ 'ವಾಸವಾದಿ ಸಕಲ ದೇವ ವಂದಿತಾಯ..' ಎಂಬಲ್ಲಿ ವಿಜಯ್-ಶಿವನ್ ಅವರ ನೆರವಲ್ ಅತ್ಯದ್ಭುತವಾಗಿತ್ತು. ದೀಕ್ಷಿತರ ಮೊದಲ ಕೀರ್ತನೆ 'ಶ್ರೀ ನಾಥಾದಿ ಗುರುಗುಹೋ ಜಯತಿ ಜಯತಿ' ಹಾಡನ್ನು ಮೊದಲು ಕೇಳಿದ್ದು ವಿಜಯ್-ಶಿವನ್ ಅವರ ಕಂಠದಿಂದ. ಅಪ್ಪ ಹೇಳಿದ್ದರು ಅದರ ಸ್ವರಗಳು ಪ್ರಾರಂಭವಾಗುವುದು ಸಹ ಮಾಯಮಾಳವಗೌಳದ ಆರೋಹಣ ಅವರೋಹಣದಿಂದ ಎಂದು. ಒಮ್ಮೆ ವಿಜಯ್-ಶಿವನ್ ಅವರು ಆಕಾಶವಾಣಿ ಕಛೇರಿಯಲ್ಲಿ ಪುರಂದರದಾಸರ 'ಜಯತು ಗೋಕುಲ ವಾಸ....' ಕೀರ್ತನೆಯನ್ನು ಕೀರವಾಣಿ ರಾಗದಲ್ಲಿ ಬಹಳ ಸೊಗಸಾಗಿ ಹಾಡಿದ್ದರು. ಅದರ ಸಂಗ್ರಹ ಈಗಲೂ ನನ್ನ ಬಳಿ ಇದೆ. ಸಂಜಯ್-ಸುಬ್ರಮಣ್ಯಮ್ ಅವರು ನಾರಾಯಣ-ಗೌಳ ರಾಗದಲ್ಲಿ 'ಶ್ರೀ ರಾಮಂ ..' ಹಾಡನ್ನು ಬಹಳ ಭಕ್ತಿಯಿಂದ ಹಾಡಿದ್ದರು. ಹಾಗೆ ದಾಸರ 'ಹರಿವಾಸರದ ಉಪವಾಸದ ಭಾಗ್ಯ....' ಹಾಡನ್ನು ಬಹಳ ಭಾವಪೂರ್ಣರಾಗಿ ಸಿಂಧುಭೈರವಿ ರಾಗದಲ್ಲಿ ಹಾಡಿದ್ದಾರೆ. ಮಲ್ಲಾಡಿ ಸಹೋದರರು 'ಸಾಯಂಕಾಲೇ ವನಾಂತೆ..' ಶ್ಲೋಕವನ್ನು ಆನಂದ-ಭೈರವಿಯಲ್ಲಿ ಹಾಡಿ ನಮ್ಮೆಲ್ಲರ ಮನ ಅರಳುವಂತೆ ಮಾಡಿದ್ದರು. ಬಾಲಮುರಳಿ ಅವರ ಪ್ರತೀ ಕಚೇರಿಯಲ್ಲೂ ಭದ್ರಾಚಲ ರಾಮದಾಸರ, ಪುರಂದರದಾಸರ, ಸದಾಶಿವ ಬ್ರಹ್ಮೆಂದ್ರರ ಕೀರ್ತನೆಗಳು ಕಂಡು ಬರುತ್ತದೆ. ಅದರಲ್ಲೂ ಬಹುದಾರಿ ರಾಗದ 'ಸ್ಮರವಾರಂ ವಾರಂ...', ಮುಖಾರಿ ರಾಗದಲ್ಲಿ ದಾಸರ 'ಸತ್ಯವಂತರಿಗಿದು ಕಾಲವಲ್ಲ...' ಕೀರ್ತನೆಯನ್ನು ಹಲವು ಕಛೇರಿಗಳಲ್ಲಿ ಕೇಳಿದ್ದೇನೆ. ಉನ್ನಿಕೃಷ್ಣನ್ ಅವರು ಬಿಲಹರಿ ರಾಗದಲ್ಲಿ ಮೈಸೂರು ವಾಸುದೇವಾಚಾರ್ಯರ 'ಶ್ರೀ ಚಾಮುಂಡೇಶ್ವರಿ ಪಾಲಯಮಾಂ...' ಹಾಡಿದಾಗ ತಾಯಿ ಚಾಮುಂಡಿಯನ್ನೇ ದರ್ಶನ ಮಾಡಿದ ಅನುಭವ ಆಗುತ್ತಿತ್ತು. ಶ್ರೀ ವಿದ್ಯಾಭೂಷಣರು ದೇಶ್ ರಾಗದಲ್ಲಿ ವಿಜಯದಾಸರ 'ಗುರು ಪುರಂದರ ದಾಸರೇ....' ಕೀರ್ತನೆಯನ್ನು ಹಾಡಿದಾಗ ಕಣ್ಣು ತೇವವಾಗುತ್ತಿತ್ತು, ಈಗಲೂ ಸಹ. instrument ವರ್ಗಗಳಿಗೆ ಬಂದಾಗ ಹೆಚ್ಚಾಗಿ ನೆನಪಾಗುವುದು ಕದ್ರಿ ಗೋಪಾಲನಾಥ್ ಮತ್ತು ಕುನ್ನಕುಡಿ ವೈದ್ಯನಾಥನ್ ಅವರು. ಕದ್ರಿ ಗೋಪಾಲನಾಥ್ ಅವರು ಯಮನ್ ಕಲ್ಯಾಣಿ ರಾಗದಲ್ಲಿ ನುಡಿಸಿರುವ ದಾಸರ 'ಕೃಷ್ಣಾನೀ ಬೇಗನೆ ಬಾರೋ....' ಕೀರ್ತನೆಯನ್ನು ಕೇಳದ ಶ್ರೋತೃಗಳಿಲ್ಲ. ಹಾಗೆ ವಿವಿಧ ಸ್ವರಗಳನ್ನು ವಯೊಲಿನ್ ಅಲ್ಲಿ ನುಡಿಸುತ್ತಿದ್ದ ಕುನ್ನಕುಡಿ ಅವರ ಕಚೇರಿಗೆ ಮಂತ್ರಮುಗ್ಧರಾದ ಸಭಿಕರು ಇಲ್ಲ. ಒಮ್ಮೆ ಹಂಸನಾದ ರಾಗ ಆಲಾಪನೆಯಲ್ಲಿ ಅವರು ಹಕ್ಕಿಯ ಸ್ವರಗಳನ್ನು ನುಡಿಸಿ ಕೇಳುಗರು ತಲೆದೂಗುವಂತೆ ಮಾಡಿದ್ದರು.

ಇನ್ನು ನವರಾತ್ರಿ ಬಂದರೆ ದೇವಿಯ ಕೀರ್ತನೆಗಳು ಪ್ರಸಿದ್ಧ. ನವರಾತ್ರಿ ಎಂದಾಗ ನೆನಪಾಗುವುದು ಮುತ್ತುಸ್ವಾಮಿ ದೀಕ್ಷಿತರ ನವಾವರಣ ಕೀರ್ತನೆಗಳು, ಸ್ವಾತಿ ತಿರುನಾಳ್ ಮಹಾರಾಜರ ನವರಾತ್ರಿ ಕೀರ್ತನೆಗಳು ಹಾಗೂ ಶ್ಯಾಮಶಾಸ್ತ್ರಿಗಳ ದೇವಿ ಕೀರ್ತನೆಗಳು. ಈ ಕೀರ್ತನೆಗಳೆಲ್ಲವೂ ವಿಳಂಬ ಗತಿಯಲ್ಲಿ ಇದೆ. ಆಕಾಶವಾಣಿಯವರು ನವರಾತ್ರಿಯ ಪ್ರತಿ ದಿನವೂ ಈ ಕೀರ್ತನೆಗಳನ್ನು ಪ್ರಸಾರ ಮಾಡುತ್ತಾರೆ. ಹೆಚ್ಚಾಗಿ ಇಂತಹ ಕೀರ್ತನೆಗಳನ್ನು ಸಾಮೂಹಿಕವಾಗಿ ಹಾಡುತ್ತಾರೆ. ಈ ಕೀರ್ತನೆಗಳನ್ನು ಕೇಳುವುದೇ ಮನಸ್ಸಿಗೆ ಸಂತೋಷ.

ಇನ್ನು ಚಲನ-ಚಿತ್ರಕ್ಕೆ ಬಂದಾಗ ನೆನಪಾಗುವುದು ಅಣ್ಣಾವ್ರು. ಅವರ ಹಾಡಿರುವ 'ಮಾಣಿಕ್ಯ ವೀಣಾ' ಶ್ಲೋಕದಲ್ಲಿ ಒಟ್ಟು ೭ ರಾಗಗಳು (ಹಂಸಧ್ವನಿ, ಕಾಪಿ, ಹಿಂದೋಳ, ಕಾಪಿ, ಆರಭಿ, ಭೈರವಿ, ಮೋಹನ) ಕಂಡು ಬರುತ್ತವೆ. ಹಂಸಧ್ವನಿ ಇಂದ ಪ್ರಾರಂಭವಾಗಿ ಮೋಹನದಿಂದ ಕೊನೆಗೊಳ್ಳುವ ಶ್ಲೋಕಗಳು ಎಂತವರಿಗೂ ಇಷ್ಟವಾಗುತ್ತದೆ. ಮಧ್ಯದಲ್ಲಿ ಹಿಂದೊಳದಿಂದ ಕಲ್ಯಾಣಿಗೆ ರವಾನೆಯಾಗುವ ಭಾಗ ನನಗೆ ಬಹಳ ಇಷ್ಟ (ಕುರ್ಯಾತ್ ಕಟಾಕ್ಷಂ ಕಲ್ಯಾಣಿ.....). ಸಾಹಿತ್ಯಕ್ಕೆ ಸರಿಯಾಗಿ ರಾಗಗಳನ್ನು ಜೋಡಿಸಿದ ಸಂಗೀತ ನಿರ್ದೇಶಕರೂ ಅಭಿನಂದನಾರ್ಹರು. ಹಾಗೆ ಜೀವನ ಚೈತ್ರದ ತೋಡಿ ರಾಗದ 'ನಾದಮಯ ..' ಹಾಡು ಕೂಡ ಎಲ್ಲರಿಗೂ ಚಿರಪರಿಚಿತ. ಬಭ್ರುವಾಹನದ ಗಮಕ ಎಂದೆಂದಿಗೂ ಜನರ ಮನಸ್ಸಿನಲ್ಲಿ ನೆಲೆಸಿರುತ್ತದೆ. ಇದರಲ್ಲಿ ಕೂಡ ೪ ರಾಗಗಳು ಇದೆ (ಕೇದಾರ-ಗೌಳ, ಅಟಾಣ, ಕಾಪಿ, ಮೋಹನ). ಹೀಗೆ ಹಲವು ಉದಾಹರಣೆಗಳು ಕಾಣಸಿಗುತ್ತದೆ.

ಕರ್ನಾಟಕ ಸಂಗೀತದ ಕಛೇರಿಗಳು ಯಶಸ್ವಿಯಾಗಲು ಪಕ್ಕ ವಾದ್ಯದ ಪಾತ್ರ ಅಪಾರ. ವಯೊಲಿನ್, ಮೃದಂಗ, ಘಟ, ಕಂಜಿರ ಮುಂತಾದ ಪಕ್ಕವಾದ್ಯಗಳು ಸಂಗೀತಕ್ಕೆ ಮೆರುಗನ್ನು ನೀಡುತ್ತವೆ. ಅದರಲ್ಲಿ ವಯೊಲಿನ್, ಮೃದಂಗಕ್ಕೆ ಪ್ರಮುಖ ಸ್ಥಾನ. ತನಿ-ಆವರ್ತನೆ ಸಮಯದಲ್ಲಿ ಮಾತ್ರ ವಯೊಲಿನ್ ನುಡಿಸುವವರಿಗೆ ಸ್ವಲ್ಪ ವಿರಾಮ ದೊರೆಯುತ್ತದೆ. ವಯೊಲಿನ್ ಎಂದಾಗ ನೆನಪಾಗುವುದು ಪಿಟೀಲು ಚೌಡಯ್ಯ, ಟಿ.ಎನ್. ಕೃಷ್ಣನ್. ಸಮಕಾಲಿನರಲ್ಲಿ ಮೈಸೂರು ಸಹೋದರರು, ನಾಗೈ ಮುರಳೀಧರನ್, ಹೆಚ್.ಎನ್.ಭಾಸ್ಕರ್ ಮುಂತಾದವರು. ಹಾಗೆ ಮೃದಂಗ ವಾದಕರಲ್ಲಿ ಪಾಲ್ ಘಾಟ್ ಮಣಿ-ಐಯ್ಯರ್, ಹಾಗೆ ಪಾಲ್-ಘಾಟ್ ರಘು, ಚಿತ್ತೂರ್ ಸುಬ್ರಮಣ್ಯ ಪಿಳ್ಳೈ, ಉಮಯಾಳಪುರಂ ಶಿವರಾಮನ್, ಕಾರೈಕುಡಿ ಮಣಿ, ಮನ್ನಾರ್ಗುಡಿ ಈಶ್ವರನ್, ಶ್ರೀಮುಷ್ಣಂ ವಿ.ರಾಜಾರಾವ್ ಪರಿಣಿತರು. ಸಮಕಾಲಿನರಲ್ಲಿ ಸುಧೀಂದ್ರ, ಬೆಂಗಳೂರು ಪ್ರವೀಣ್, ಅರ್ಜುನಕುಮಾರ್, ತಿರುವಯ್ಯುರ್ ಭಕ್ತವತ್ಸಲಂ ಮೊದಲಾದವರು.

ಕರ್ನಾಟಕ ಸಂಗೀತದ ಸಾಹಿತ್ಯಗಳು ದೈವ-ಭಕ್ತಿಯನ್ನು ತೋರಿಸುತ್ತದೆ. ಭಕ್ತಿಯಿಂದ ರಚಿಸಿದ ಹಾಡುಗಳ ಸಾಹಿತ್ಯವನ್ನು ವಿಮರ್ಶಿಸಲು ಹೋದರೆ ಒಂದು ಪುಸ್ತಕವೇ ಆಗಬಹುದು. ಪುರಂದರದಾಸರ ಹರಿಯ ವರ್ಣನೆಯಾಗಲಿ, ದೀಕ್ಷಿತರ ರಾಮನ ಪಟ್ಟಾಭಿಷೇಕದ ವರ್ಣನೆಯಾಗಲಿ, ತ್ಯಾಗರಾಜರ ಶ್ರೀ ರಾಮನ ವರ್ಣನೆಯಾಗಲಿ, ಶ್ಯಾಮಶಾಸ್ತ್ರಿಗಳ ದೇವಿಯ ವರ್ಣನೆಗಳಾಗಲಿ ವಿವರಿಸಲು ಒಂದು ಪ್ಯಾರ ಸಾಲದು. ಹಾಗೆಯೇ ಅನೇಕ ಮಹನೀಯರ ಕೀರ್ತನೆಗಳನ್ನು ಕೂಡ. ಮುತ್ತುಸ್ವಾಮಿ ದೀಕ್ಷಿತರು ಒಮ್ಮೆ ಬರಗಾಲ ಪೀಡಿತ ಪ್ರದೇಶಕ್ಕೆ ಭೇಟಿ ಕೊಟ್ಟಾಗ ಜನರ ಪರಿಸ್ಥಿತಿಯನ್ನು ಕಂಡು ಮರುಕಾದರಂತೆ. ಆಗ ಅಮೃತವರ್ಷಿಣಿ ರಾಗದಲ್ಲಿ ಭಕ್ತಿಯಿಂದ 'ಅನಂದಾಮ್ರುತಾಕರ್ಶಿಣಿ ಅಮೃತವರ್ಷಿಣಿ...' ಎಂಬ ಹಾಡನ್ನು ಹಾಡಿ ಮಳೆ ಸುರಿಸಿದರಂತೆ. ಇದೊಂದು ಉದಾಹರಣೆಯಷ್ಟೇ ಅವರ ಭಕ್ತಿಗೆ. ಹೀಗೆ ಅನೇಕ ಮಹನೀಯರ ಉದಾಹರಣೆಗಳು ಸಿಗುತ್ತವೆ.

ಹಲವಾರು ವರ್ಷಗಳೇ ಕಳೆದವು ನಾನು ಸಂಗೀತ ಅಭ್ಯಾಸ ಮತ್ತು ಕಲಿಕೆ ಬಿಟ್ಟು. ಮತ್ತೆ ಕಲಿಯುವ ಆಸೆಯಾಗುತ್ತಿದೆ. ಅದಕ್ಕೆಂದೇ ಸೂಕ್ತ ಗುರುಗಳ ಹುಡುಕಾಟದಲ್ಲಿದ್ದೇನೆ.

**********************************************************************************************
ಇಲ್ಲಿ ಗುರು ಬಾಳಿಗರು ತಮ್ಮ ಹಿಂದೂಸ್ತಾನಿ ಸಂಗೀತದ ಅನುಭವವನ್ನು ಹಂಚಿಕೊಂಡಿದ್ದಾರೆ. ನನಗೂ ಕರ್ನಾಟಕ ಸಂಗೀತದ ಬಗ್ಗೆ ಬರೆಯಲು ಮನಸ್ಸಾಯಿತು. ಸ್ವಲ್ಪ ಅನುಭವಗಳನ್ನು ಹಂಚಿಕೊಂಡಿದ್ದೇನೆ. ಬರವಣಿಗೆಯ ಸಾಹಿತ್ಯ ಸರಿ ಇಲ್ಲದಿದ್ದರೆ ಅಥವಾ ವಿಷಯಗಳು ತಪ್ಪಿದ್ದರೆ ದಯವಿಟ್ಟು ತಿಳಿದವರು ತಿದ್ದಬೇಕೆಂದು ನನ್ನ ವಿನಂತಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ ಸಂಗೀತ ಪ್ರೇಮದ ಬಗ್ಗೆ ತಿಳಿದು ಸಂತಸವಾಯಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿರಿಯರ ಪ್ರತಿಕ್ರಿಯೆ ನಮ್ಮ ಬರಹಕ್ಕೆ ಸ್ಪೂರ್ತಿ. ಧನ್ಯವಾದಗಳು ಸರ್ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ನೆನಪಿನ ಸರಣಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದದಲ್ಲಿ ಶಾಸ್ತ್ರೀಯ ಸಂಗೀತದ ಬರಹಗಳಿಗೆ ಎಲ್ಲರೂ ನಿಮ್ಮ ಪ್ರತಿಕ್ರಿಯೆಯನ್ನೇ ಕಾಯುತ್ತಿರುತ್ತಾರೆ. ನಾನು ಸಹ :). ನಿಮ್ಮ ಪ್ರತಿಕ್ರಿಯೆ ನೋಡಿ ಬಹಳ ಸಂತಸವಾಯಿತು ಸರ್. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂದ,
ತುಂಬಾ ಚೆನ್ನಾಗಿ ಬರೆದಿದ್ದೀರ...
ಹೀಗೇ ಮುಂದುವರೆಸಿ.

>>ಹಲವಾರು ವರ್ಷಗಳೇ ಕಳೆದವು ನಾನು ಸಂಗೀತ ಅಭ್ಯಾಸ ಮತ್ತು ಕಲಿಕೆ ಬಿಟ್ಟು. ಮತ್ತೆ ಕಲಿಯುವ ಆಸೆಯಾಗುತ್ತಿದೆ. ಅದಕ್ಕೆಂದೇ ಸೂಕ್ತ ಗುರುಗಳ ಹುಡುಕಾಟದಲ್ಲಿದ್ದೇನೆ.
ನಿಮಗೆ ಒಳ್ಳೆ ಗುರುಗಳು ಆದಷ್ಟು ಬೇಗ ಸಿಗಲಿ ಎಂದು ಆಶಿಸುತ್ತೇನೆ.

-ಅನಿಲ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಯ ಮಾತುಗಳಿಗೆ ವಂದನೆಗಳು ಅನಿಲ್ ಅವರೇ.

>>ನಿಮಗೆ ಒಳ್ಳೆ ಗುರುಗಳು ಆದಷ್ಟು ಬೇಗ ಸಿಗಲಿ ಎಂದು ಆಶಿಸುತ್ತೇನೆ.
ನಿಮ್ಮ ಹಾರೈಕೆಗೆ ಮತ್ತೊಮ್ಮೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೆಂಗಳೂರಲ್ಲೇನ್ರೀ, ಬೇಕಾದಷ್ಟು ಒಳ್ಳೇ ಗುರುಗಳು ಸಿಗುತ್ತಾರೆ! ಬೇಕಾದ್ರೆ ನನಗೆ ಮಿಂಚೆ ಕಳಿಸಿ. ಕೆಲವರನ್ನು ಸೂಚಿಸಬಲ್ಲೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿ ಅವರೇ,

ನಿಮ್ಮ ಮಿಂಚೆ ವಿಳಾಸ ಕಳುಹಿಸುವಿರಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿ@ಜಿಮೆಯ್ಲ್.ಕಾಮ್ ಇಲ್ಲವೆ ಹಂಸಾನಂದಿ@ಸಂಪದ.ನೆಟ್ ಗೆ ಕಳಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಗೀತ ಸಾಗರದ ಆಳ ಅಗಲ ಅಪಾರ. ನೀವು ಚಿಕ್ಕದಾಗಿ ಚೊಕ್ಕವಾಗಿ ನಿಮ್ಮ ಅನುಭವ ಹಂಚಿಕೊಂಡಿದ್ದೀರಿ.
ನಿಮ್ಮ ಲಿಸ್ಟಿಗೆ (ಬರಹದಲ್ಲಿ ಬಿಟ್ಟುಹೋದ) ಸಂಗೀತಗಾರರ ಹೆಸರು
೧. ಟಿ.ಎನ್.ಶೇಷಗೋಪಾಲನ್ - ಇವರ ಧರ್ಮಾವತಿ ರಾಗ-ತಾನ-ಪಲ್ಲವಿ ಇಂದಿಗೂ ನನ್ನ ಮೆಚ್ಚಿನ playlistನಲ್ಲಿದೆ
೨. ಮಹಾಲಿಂಗಂ (ಮಾಲಿ) ಅವರ ಅದ್ಭುತ ಕೊಳಲುವಾದನ
೩. ಖಂಜೀರ - ಹರಿಶಂಕರ್ (http://www.youtube.com/watch?v=GOjAU_2OgUM)

ಅಂದಹಾಗೆ ನಿಮ್ಮ ಸಂಗೀತ ಸಾಧನೆ ಮುಂದುವರಿಯಲು ಸರಿಯಾದ ಗುರು ಸಿಗಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೆಳೆಯರೆ

ನಿಮ್ಮ ಲೇಖನ ತು೦ಬಾ ಚೆನ್ನಾಗಿದೆ. ನನಗೂ ಸ೦ಗೀತ್ತದಲ್ಲಿ ತು೦ಬಾ ಆಸಕ್ತಿ. ನಾನೂ ಕೂಡ ೨೦ ವರ್ಷಗಳ ಗ್ಯಾಪ್ ನ೦ತರ, ಈಗ ಮತ್ತೆ ೩ ವರ್ಷಗಳಿ೦ದ ಕಲಿಯುತ್ತಿದ್ಡೇನೆ. ಸ೦ಗೀತ ಎಲ್ಲವನ್ನೂ ಮರೆಸುತ್ತದೆ. ನಿಮಗೆ ಒಳ್ಲೆಯ ಗುರು ಆದಷ್ಟು ಬೇಗ ಸಿಗಲಿ ಎ೦ದು ಹಾರೈಸುವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆಯ ಮಾತಿಗೆ ಹಾಗೂ ಹಾರೈಕೆಗೆ ವಂದನೆಗಳು ಶ್ಯಾಮಲಾ ಅವರೇ.
ನಿಮ್ಮ ಸಂಗೀತ ಅಭ್ಯಾಸ ಹಾಗೂ ಕಲಿಕೆ ನಿರಂತರವಾಗಿರಲಿ ಎಂಬ ನನ್ನ ಹಾರೈಕೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀನಿಧಿ ಅವರೇ,

ಪ್ರತಿಕ್ರಿಯೆಗೆ ವಂದನೆಗಳು. ಹಾಗೆ ಹಾರೈಕೆಗೆ ಧನ್ಯವಾದಗಳು.

ಬಹಳಷ್ಟು ಹೆಸರುಗಳು ಸೇರಿಸಲು ಜಾಗ ಇರಲಿಲ್ಲ. ಅದಕ್ಕೆ ಕೆಲವು ತಪ್ಪಿಹೋಗಿವೆ. ಶೇಷಗೋಪಾಲನ್ ಹಾಡಿರುವ "ಬೃಂದಾವನ ಸಾರಂಗದ" ರಾಗದ 'ರಂಗಾಪುರ ವಿಹಾರ...' ನನಗೆ ಬಹಳ ಇಷ್ಟ.
ಮಹಾಲಿಂಗ ಅವರು ಮಧ್ಯೆ ಮಧ್ಯೆ ಕಚೇರಿ ನಿಲ್ಲಿಸುತ್ತಿದ್ದರು. ಅದು ಬಹಳ ಬೇಸರದ ಸಂಗತಿ. ಆದರೂ ಅವರ ಕೊಳಲಿನ ವಿದ್ವತ್ತು ನೀವು ಹೇಳಿದ ಹಾಗೆ ಅದ್ಬುತ. ಹಾಗೆ ಅವರ ಶಿಷ್ಯರಾದ ರಮಣಿಯವರದೂ ಕೂಡ. ಕೇರಳದವರಾದ ಕೆ.ಎಸ್.ಗೋಪಾಲಕೃಷ್ಣನ್ ಕೂಡ ಕೊಳಲು ಬಹಳ ಚೆನ್ನಾಗಿ ನುಡಿಸುತ್ತಾರೆ. ಅವರ ಕೊಳಲಿನ ಧ್ವನಿಯಲ್ಲಿ ರೇವಗುಪ್ತಿ ರಾಗದ "ಗೋಪಾಲಕ ಪಾಹಿಮಾಂ...", ಹಾಗೆ ಶ್ರೀ ರಾಗದ "ಶ್ರೀ ವರಲಕ್ಷ್ಮಿ" ಹಾಡುಗಳನ್ನು ಕೇಳುವುದು ನನಗೆ ಬಹಳ ಇಷ್ಟ. ಕಂಜಿರದಲ್ಲಿ ನನಗೆ ಬೆಂಗಳೂರು ರಾಮಾಚಾರ್ ಬಹಳ ಇಷ್ಟ ಅವರಿಗೆ ಈಗ ಸುಮಾರು ೮೫ ವರ್ಷ ಆದರೂ ಈಗಲೂ ಪಕ್ಕವಾದ್ಯ ನೀಡುತ್ತಾರೆ.
ಧರ್ಮವತಿ ರಾಗದಲ್ಲಿ ಮ್ಯಾಂಡೊಲಿನ್-ಶ್ರೀನಿವಾಸ್ ಅವರು ನುಡಿಸಿರುವ ದೀಕ್ಷಿತರ ಪರಂಧಾಮವತಿ ಬಹಳ ಇಷ್ಟ. ಆದರೆ ಈ ರಾಗ ಗುರುತಿಸುವುದು ಈಗಲೂ ನನಗೆ ಕಷ್ಟ.

ಹಾಗೆ ನೈವೇಲಿ ಸಂತನಗೊಪಾಲನ್, ನಾಗೈ ಮುರಳೀಧರನ್, ಟಿ.ಕೆ.ಗೋವಿಂದರಾವ್, ಮುಸಿರಿ ಸುಬ್ರಮಣ್ಯ ಐಯ್ಯರ್, ಅಲತ್ತೂರ್ ಸಹೋದರರು, ಸಿಕ್ಕಿಲ್ ಸಹೋದರಿಯರು, ಹೈದೆರಾಬಾದ್ ಸಹೋದರರು ಹೀಗೆ ಹಲವಾರು ಹೆಸರುಗಳು ತಪ್ಪಿಹೋಗಿವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂದಹಾಗೆ ಸಂಗೀತಪ್ರಿಯ ಸೈಟಿನಲ್ಲಿ ಒಂದು ಪುಟ ಹೊಂದಿರುವ ನಂದಕುಮಾರ್ (http://www.sangeethamshare.org/nanda/) ನೀವೇಯೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.