ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ

3

ನಾಯ ಕುನ್ನಿಯ ಕಚ್ಚಬೇಡ ಬಗುಳಬೇಡವೆಂದಡೆಮಾಣ್ಬುದೆ

ಹಂದಿಯನಶುದ್ಧವ ತಿನಬೇಡ ಹೊರಳಬೇಡವೆಂದಡೆಮಾಣ್ಬುದೆ

ನಯದಿ ಬುದ್ಧಿಗಲಿಸಿದಡೆ ಮಾಣ್ಬವೆ ತಮ್ಮ ಸಹಜವ

ದುರ್ವಿಷಯಿಗೆ ಸದ್ಗುರು ಬೋಧೆಯಿಂದ ನಿರ್ವಿಷಯವಪ್ಪುದೆ ಹೇಳಾ

ಸಿಮ್ಮಲಿಗೆಯ ಚೆನ್ನರಾಮಾ

ಬಸವಣ್ಣನಿಗಿಂತ ವಯಸ್ಸಿನಲ್ಲಿ ಹಿರಿಯನಾಗಿದ್ದ ಚಂದಿಮರಸ ಎಂಬಾತನ ವಚನವಿದು. ಕೃಷ್ಣಾ ನದಿಯ ದಡದ ಚಿಮ್ಮಲಿಗೆ ಎಂಬ ಊರಿನವನು. ಬಹುಶಃ ಒಬ್ಬ ಅರಸನಿದ್ದರೂ ಇರಬಹುದೆಂದು ಕೆಲವರ ಊಹೆ. ಈ ವಚನ ತೀರ ಚರ್ಚಾಸ್ಪದವಾದ ಒಂದು ಸಂಗತಿಯನ್ನು ಹೇಳುತ್ತಿದೆ.ಕಚ್ಚಬೇಡ, ಬೊಗಳಬೇಡ ಎಂದರೆ ನಾಯಿ ಮರಿ ಸುಮ್ಮನೆಇರುವುದಿಲ್ಲ, ಕೊಳಕು ತಿನ್ನಬೇಡ,ಕೊಳಕಿನಲ್ಲಿ ಹೊರಳಬೇಡ ಎಂದರೆ ಹಂದಿ ಕೇಳುವುದಿಲ್ಲ.ಹಾಗೆಯೇ ದುಷ್ಟರಿಗೆ ಸದ್ಗುರು ಬುದ್ಧಿ ಹೇಳಿದರೆ ಅವರು ಬದಲಾಗುವುದಿಲ್ಲ ಎಂಬ ನಿಲುವನ್ನು ಪ್ರತಿಪಾದಿಸುತ್ತದೆಈ ವಚನ. ಈ ಪ್ರಾಣಿಗಳು ಮತ್ತು ದುಷ್ಟರು ನಯದಿಂದ ಬುದ್ಧಿ ಕಲಿಸಿದರೆ ತಮ್ಮ `ಸಹಜ'ವನ್ನು ಬಿಡುವುದುಂಟೇ ಎಂಬ ಪ್ರಶ್ನೆಯನ್ನು ಕೇಳುತ್ತದೆ, ಇಲ್ಲ ಎಂಬ ಉತ್ತರವನ್ನೂ ಸೂಚಿಸುತ್ತದೆ.

ನಮ್ಮ ಎಲ್ಲ ಸಾಮಾಜಿಕ ಸುಧಾರಣೆಗಳೂ, ಶಿಕ್ಷಣ ಪದ್ಧತಿಯೂ ಮನುಷ್ಯರ `ಸಹಜ' ಸ್ವಭಾವವನ್ನು ಬದಲಿಸುವುದು ಸಾಧ್ಯ ಎಂಬ ನಂಬಿಕೆ, ನಿಲುವನ್ನು ಆಧರಿಸಿದವೇ ಆಗಿವೆ. ಆದರೆ ನಿಜವಾಗಿ ಮನುಷ್ಯರ `ಸಹಜ' ಸ್ವಭಾವಬದಲಾಗದು ಎಂಬುದೇ ನಿಜವಾದರೆ ನಮ್ಮ ಎಷ್ಟೋ ಸಾಮಾಜಿಕ ಚಟುವಟಿಕೆಗಳಿಗೆ ಅರ್ಥವೇ ಇರುವುದಿಲ್ಲ. ಬೋಧನೆಯಿಂದಬದಲಾವಣೆ ಅಸಾಧ್ಯ ಅನ್ನುವುದು ಅನೇಕ ವಚನಕಾರರ ನಿಲುವೂ ಹೌದು. ಬಸವಣ್ಣನ `ಅಂದಣವನೇರಿದ ಸೊಣಗ' ವಚನವನ್ನು ನೆನೆಪುಮಾಡಿಕೊಳ್ಳಿ.

ಆದರೆ ಈ ಮಾತು ಅರ್ಧಸತ್ಯಮಾತ್ರವಾಗಿರಬಹುದು. ಬದಲಾವಣೆ ಹೊರಗಿನಿಂದಬಲವಂತವಾಗಿ ಮೂಡಿದ್ದಾದರೆ ಅದು ಬದಲಾವಣೆಯೇ ಅಲ್ಲ. ಸುಶಿಕ್ಷಿತ ಅನ್ನುವ ಮಾತು ಬಲವಂತವಾಗಿ(ಶಿಕ್ಷೆ!) ಸಮಾಜ ಒಪ್ಪುವಂತೆ ನಡೆದುಕೊಳ್ಳುವ ವ್ಯಕ್ತಿ ಎಂಬುದನ್ನೇ ಹೇಳುತ್ತದಲ್ಲವೇ! ಸುಶಿಕ್ಷಿತನ ಸಹಜ ಸ್ವಭಾವ ದುಷ್ಟವೇ ಆಗಿದ್ದರೆಶಿಕ್ಷಣದಿಂದ ಆತ ಬದಲಾದಂತೆ ಆಗಲಿಲ್ಲ. ಬದಲಾವಣೆಯ ಆಸೆ ಒಳಗಿನಿಂದಲೇ ಮೂಡಿದ್ದಾದರೆ ಆಗ ಸಹಜವೂ ಬದಲಾದೀತು.ಒಳಗಿನಿಂದ ಬದಲಾಗುವ ಜವಾಬ್ದಾರಿ ವ್ಯಕ್ತಿಯದೇ.

ಅಂದರೆ ಬದಲಾವಣೆ ಅಸಾಧ್ಯ ಎಂದಲ್ಲ, ಬೋಧನೆಯಿಂದ ಸಹಜ ಸ್ವಭಾವದ ಬದಲಾವಣೆ ಆಗದು, ಅನುಭವದಿಂದ, ವ್ಯಕ್ತಿಯ ನಿಜವಾದ ಅಪೇಕ್ಷೆಯಿಂದ ಬದಲಾವಣೆ ಆದರೂ ಆದೀತು ಅನ್ನುವಂತಿದೆ ಈ ವಚನ ಅಲ್ಲವೇ?

[ಕುನ್ನಿಯ,
ಹಂದಿಯ ಇತ್ಯಾದಿ ಎಡೆಗಳಲ್ಲಿ ವಿಭಕ್ತಿ ಪಲ್ಲಟವನ್ನು ಗಮನಿಸಬಹುದು. ಈಗಿನ ಬಳಕೆಯಲ್ಲಿ
ಇಂಥ ವಾಕ್ಯಗಳನ್ನು ಬಳಸುವಾಗ ಕುನ್ನಿಗೆ, ಹಂದಿಗೆ ಎಂದು ಬಳಸುತ್ತೇವೆ.
ಮಾಣ್ಬವೆ-ಬಿಡುವವೆ]

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇಲ್ಲಿ ಮಾಣ್=ಬಿಡು ಎಂಬ ಕ್ರಿಯಾಪದದ ಭವಿಷ್ಯತ್ ರೂಪಗಳನ್ನು ಗಮನಿಸಬಹುದು
ಮಾಣ್+ವ+ಉದು=ಮಾಣ್ಬುದು. ಹೞಗನ್ನಡದಲ್ಲಿ ನ್ ಮತ್ತು ಣ್ ಇದ್ದಾಗ ಭವಿಷ್ಯತ್ಕಾಲದ/ವರ್ತಮಾನಕೃದ್ವಾಚಿಯ ವಕಾರ ಬಕಾರವಾಗುತ್ತದೆ.

ಉಣ್+ವ+ಉದು=ಉಣ್ಬುದು->ಉಂಬುದು ಹಾಗೆಯೇ ಭವಿಷ್ಯತ್ಕೃದ್ವಾಚಿಗಳು ಉಣ್ಬ, ಉಂಬ
ಕಾಣ್+ವ+ಉದು=ಕಾಣ್ಬುದು->ಕಾಂಬುದು, ಭವಿಷ್ಯತ್ಕೃದ್ವಾಚಿಗಳು ಕಾಣ್ಬ, ಕಾಂಬ
ತಿನ್+ವ+ಉದು=ತಿಂಬುದು, ಭವಿಷ್ಯತ್ಕೃದ್ವಾಚಿ ತಿಂಬ
ಎನ್+ವ+ಉದು=ಎಂಬುದು, ಭವಿಷ್ಯತ್ಕೃದ್ವಾಚಿ ಎಂಬ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂದರೆ ಮನುಷ್ಯ ತನ್ನ ಸಹಜ ದೌರ್ಬಲ್ಯಗಳನ್ನಱಿತು ಅದನ್ನು ಮೀಱಿ ಸಜ್ಜನನಾಗದ ಹೊಱತು ಗುರುಬೋಧೆ ಪ್ರಯೋಜನವಿಲ್ಲವೆಂದರ್ಥ. ಅಂದರೆ ಒಬ್ಬ ಗುರು ಮಾರ್ಗದರ್ಶನ ನೀಡಬಲ್ಲನೇ ಹೊಱತು ಅಱಿತುಕೊಳ್ಳಬೇಕಾದವನು ವ್ಯಕ್ತಿಯೇ ಹೊಱತು ಗುರುವಲ್ಲ. ಅದು ಹೇಗೆ ಎಂದರೆ ಚಂದ್ರನತ್ತ ನೋಡು ಎಂದು ಕೈದೋಱಿ ಹೇೞಬಹುದೇ ಹೊಱತು ಚಂದ್ರನೆಡೆಗೆ ಮುಖ ಮಾಡಬೇಕಾದವನು ಚಂದ್ರನನ್ನು ನೋಡಬೇಕೆನ್ನುವವನು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.