ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?

0
ಹೇಳಿದ್ದ ಕೇಳಲೊಂದು ಶಬುದವಾಯಿತ್ತಯ್ಯ
ತೋರಿದ್ದ ಹಿಡಿಯಲೊಂದು ರೂಪಾಯಿತ್ತಯ್ಯ
ನಚ್ಚಿನ ಮಚ್ಚಿಕೆ ಅದು ನಿಶ್ಚಿಂತವೆಂತಪ್ಪುದು
ಸಿಮ್ಮಲಿಗೆಯ ಚೆನ್ನರಾಮಲಿಂಗನೆಂಬನ್ನಕ್ಕ
 
ಚಂದಿಮರಸನ ವಚನ ಇದು. ಈತ ಬಸವಣ್ಣನವರ ಹಿರಿಯ ಸಮಕಾಲೀನ. ಕಾಲ, ಕ್ರಿಶ. ಸುಮಾರು ೧೧೬೦. ಕೃಷ್ಣಾ ನದಿಯ ತೀರದ ಚಿಮ್ಮಲಿಗೆ ಇವನ ಊರು. ಹುಟ್ಟಿನಿಂದ ಬ್ರಾಹ್ಮಣನಾದ ಚಂದಿಮರಸ ನಿಗುಣಯೋಗಿ ಎಂಬ ಗುರುವಿನಿಂದ ದೀಕ್ಷೆ ಪಡೆದು ಶರಣನಾದ. ಸಿಮ್ಮಲಿಗೆಯ ಚೆನ್ನರಾಮ ಇವನ ಅಂಕಿತ. ಇವನ ೧೫೭ ವಚನಗಳು ದೊರೆತಿವೆ.
ಬೇರೆಯವರು ಹೇಳಿದ್ದು, ನಾನು ಹೇಳಿದ್ದು ಎಲ್ಲವೂ ಬರಿಯ ಶಬ್ದ. ತೋರಿದ್ದನ್ನು ಹಿಡಿದರೆ ಅದು ಬರಿಯ ರೂಪ. ಎರಡೂ ನಂಬಿಕೆಯ ಕಾರಣದಿಂದ ಹುಟ್ಟಿಕೊಂಡ ಪ್ರಿಯ ಸಂಗತಿಗಳು ಅಷ್ಟೆ. ಹೀಗಿರುವಾಗ ನಿಶ್ಚಿಂತವಾಗುವುದು ಹೇಗೆ? 
 
ಗುರುವೇ ಆಗಲಿ ಆತ ಹೇಳಿದ್ದು ಕೇವಲ ಶಬ್ದ. ಅದರ ಅರ್ಥವೆಲ್ಲ ನಾವು ಊಹಿಸಿಕೊಂಡದ್ದು. ಕಣ್ಣಿಗೆ ಕಂಡದ್ದು ಕೇವಲ ರೂಪ. ಅರ್ಥ ರೂಪ ಎರಡೂ ನಮ್ಮ ನಮ್ಮ ನಂಬಿಕೆಯನ್ನು, ನೆಚ್ಚಿಕೆಯನ್ನು ಆಧರಿಸಿದವು. ಅವು ನಿಜ ಹೌದೋ ಅಲ್ಲವೋ ಗೊತ್ತಿಲ್ಲ. 
 
ಕೇವಲ ಅರ್ಥವಿರುವ ಶಬ್ದ ಮಾತ್ರವಲ್ಲದ, ನಂಬಿಕೆಗೆ ಮಾತ್ರ ಪ್ರಿಯವಾಗಿ ಕಾಣುವ ರೂಪಮಾತ್ರವಲ್ಲದ ದೇವರು ಅನುಭವಕ್ಕೆ ಬರುವವರೆಗೆ ಚಿಂತೆ ಇದ್ದೇ ಇರುತ್ತದೆ.
ಈ ವಚನ ಸತ್ಯದ ಸ್ವರೂಪದ ಬಗ್ಗೆಯೇ ನಡೆದ ಚಿಂತನೆಯಂತಿದೆ. ನಂಬಿಕೆ ಅನ್ನುವುದು ದಣಿದ ಮನಸ್ಸಿನ ಅಥವ ಶ್ರಮಪಡಲೊಲ್ಲದ ಮನಸ್ಸಿನ ಒಂದು ಊರುಗೋಲು. ನಂಬಿಕೆ ನಿಜವಾಗಿರಲೇಬೇಕೆಂದಿಲ್ಲ ಅಲ್ಲವೇ? ಹಾಗೆಯೇ ಅಪನಂಬಿಕೆ ನಂಬಿಕೆ ಅನ್ನುವುದಕ್ಕೆ ವಿರುದ್ಧವಾದ ಸ್ಥಿತಿಯಲ್ಲ. ಅಪನಂಬಿಕೆಯೂ ಒಂದು ಬಗೆಯ ನಂಬಿಕೆಯೇ ಅಲ್ಲವೇ? ಅರ್ಥವಾಗಲೀ ರೂಪವಾಗಲೀ ನಮ್ಮ ಮನಸ್ಸಿನ ಪ್ರೀತಿಯನ್ನು ಅನುಸರಿಸಿ 'ಮಹತ್ವ'ಪಡೆಯುತ್ತವೆ. 
 
ಕೇವಲ ನಂಬಿಕೆ ಮಾತ್ರವಲ್ಲದ ಸತ್ಯ ಅರಿವಿಗೆ ಬರುವವರೆಗೆ ಚಿಂತೆ ಕಳವಳ ತಪ್ಪಿದ್ದಲ್ಲ. ಆದರೆ ನಂಬಿಕೆಗಳನ್ನೇ ಸತ್ಯವೆಂದು ಒಪ್ಪಲು ಬಯಸುವ ಮನಸ್ಸು ಚಂದಿಮರಸನದಲ್ಲ. ನಂಬಿಕೆಗೆ ವಿರುದ್ಧ ಸ್ಥಿತಿ ಇದ್ದರೆ ಅದು ಸಂಶಯದ್ದು. ಸಂಶಯಾತ್ಮರು ವಿನಾಶ ಹೊಂದುವುದಿಲ್ಲ, ಬೆಳೆಯಲು ತೊಡಗುತ್ತಾರೆ. 
 
ಕೇವಲ ಶಬ್ದ-ಅರ್ಥಗಳನ್ನು, ಅಥವ ರೂಪವನ್ನು ನಂಬಲೊಲ್ಲದೆ ಸಂಶಯಪಡುತ್ತಾ ನಿಜಕ್ಕೆ ಕಾತರಿಸುವ ತಳಮಳ ಈ ವಚನದಲ್ಲಿದೆ.
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

1160 ರಲ್ಲೇ ರೂಪಾಯಿಯ ಬಳಕೆ ಇದ್ದದ್ದು ತಿಳಿದಿರಲಿಲ್ಲ! ಆಶ್ಚರ್ಯವೇ ಆಯಿತು!

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೂಪಾಯಿಯ ಮೂಲ ರೂಪ್ಯ, ರೂಪ್ಯಕಂ ಅಂದರೆ ಬೆಳ್ಳಿ. ಹಿಂದೆ ಚಲಾವಣೆಯಲ್ಲಿದ್ದದ್ದು ಬೆಳ್ಳಿಯ ನಾಣ್ಯಗಳು. ಹಾಗಾಗಿ ರೂಪಾಯಿ ಎಂಬುದನ್ನು ಹಣ ಎಂಬರ್ಥದಲ್ಲಿ ಬೞಸಿರುವುದಕ್ಕೆ ಆಶ್ಚರ್ಯ ಪಡಬೇಕಿಲ್ಲ.
ಈ ರೂಪ್ಯ, ರೂಪ್ಯಕದಿಂದಲೇ ಇಂಡೋನೇಶ್ಯಾದ ರುಪಯ್ಯಾ, ರಷ್ಯಾದ ರೂಬೆಲ್ ಬಂದಿದೆ ಎಂದು ನಿಘಂಟುಗಳು ಕೂಡ ಹೇೞುತ್ತವೆ.

ವಚನದ ಮೂಲರೂಪ ಈ ರೀತಿಯಿದೆ.

ಹೇಳಿದ್ದ ಕೇಳಲೊಂದು ಶಬುದವಾಯಿತ್ತಯ್ಯ
ತೋಱಿದ್ದ ಹಿಡಿಯಲೊಂದು ರೂಪಾಯಿತ್ತಯ್ಯ
ನಚ್ಚಿನ ಮಚ್ಚಿಕೆ ಅದು ನಿಶ್ಚಿಂತವೆಂತಪ್ಪುದು
ಸಿಮ್ಮಲಿಗೆಯ ಚೆನ್ನರಾಮಲಿಂಗನೆಂಬನ್ನಕ್ಕ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆದರೆ ಇಲ್ಲಿ ರೂಪಾಯಿತ್ತಯ್ಯ ಎಂದರೆ ರೂಪವಿತ್ತು ಎಂಬರ್ಥ ನನಗೆ ಕಾಣುತ್ತಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡಕಂದರೆ, ನೀವು ಹೇಳಿದ್ದು ತೀರ ನಿಜ. ಹಂಸಾನಂದಿಯವರು ಯಾಕೆ ತಪ್ಪರ್ಥ ಮಾಡಿಕೊಂಡರೋ ಗೊತ್ತಿಲ್ಲ. ರೂಪ+ಆಯಿತ್ತಯ್ಯ=ರೂಪಾಯಿತ್ತಯ್ಯ (ಬಹುಶ: ರೂಪವಾಯಿತ್ತಯ್ಯ ಅಂದಿದ್ದರೆ ಹಂಸಾನಂದಿಗಳಿಗೆ ಈ ಗೊಂದಲವಾಗುತ್ತಿರಲಿಲ್ಲವೇನೋ)
ಇಲ್ಲಿ ರೂಪಾಯಿಯ ಗೊಡವೆಯೇ ಇಲ್ಲವಲ್ಲ? ನಾಗಭೂಷಣಸ್ವಾಮಿಗಳೂ ಸರಳವಾಗಿ ಗೊಂದಲವಿಲ್ಲದಂತೆಯೇ ಬರೆದಿದ್ದಾರೆ.

"ಏರಿದವನು ಚಿಕ್ಕವನಿರಬೇಕು"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ನಂಬಿಕೆ ಅನ್ನುವುದು ದಣಿದ ಮನಸ್ಸಿನ ಅಥವ ಶ್ರಮಪಡಲೊಲ್ಲದ ಮನಸ್ಸಿನ ಒಂದು ಊರುಗೋಲು"

ಈ ಮಾತು ನಿಜವಾದರೂ ಅದರ ವ್ಯಾಪ್ತಿ ತೀರ ಕಿರಿದು. ಸತ್ಯದ ಅನ್ವೇಷಣೆಯಲ್ಲಿ ಗುರುವಿನ ಪಾತ್ರದ ಬಗ್ಗೆ ನಿಮ್ಮ ತಿಳಿವೇನೋ ಗೊತ್ತಿಲ್ಲ.ಆದರೆ ನನ್ನ ಅರಿವಿನಂತೆ ಗುರುವಿನ ಬೋಧನೆ ಮತ್ತು ಅದರಲ್ಲಿ ನಂಬಿಕೆ ಸಾಧಕನ ಪರಿಶ್ರಮದಷ್ಟೇ ಮುಖ್ಯ. ಬೋಧನೆಯಿಲ್ಲದ ಪರಿಶ್ರಮ ಹೆಚ್ಚಿನಂಶ ದಾರಿತಪ್ಪುವ ಸಾಧ್ಯತೆಯೇ ಹೆಚ್ಚು. "ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ" ಅನ್ನುವ ಮಾತು ಗುರುವಿನ ಮಾತಿನ ಮೇರೆಗೇ ನಮ್ಮ ಪರಿಶ್ರಮವನ್ನು ನಿರ್ದೇಶಿಸಬೇಕಾದ ಅಗತ್ಯವನ್ನು ಪ್ರತಿಪಾದಿಸುವುದಿಲ್ಲವೆ? ಮುಕ್ತಿಯ ಹಾದಿಯಲ್ಲಿ ನಂಬಿಕೆ ಮತ್ತು ಶ್ರದ್ಧೆಗಳು ದಾರಿದೀಪಗಳಂತೆ. ಆದರೆ ಗುರುವನ್ನು ಆರಿಸಿಕೊಳ್ಳುವುದರಲ್ಲೇ ಶಿಷ್ಯನ ಜಾಣ್ಮೆ ಇದೆ ಎನ್ನುವುದು ಸತ್ಯ. ಒಬ್ಬ ವ್ಯಕ್ತಿಗೆ ದೊರೆತ ಸತ್ಯಬೋಧೆಯೇ ಅವನನ್ನು ಗುರುಪಟ್ಟಕ್ಕೇರಿಸುತ್ತದೆ. ಹಾಗಾಗಿ ನಂಬಿಕೆಯ ಬಗ್ಗೆ ತಮ್ಮ ಟಿಪ್ಪಣಿ ನಿಜವಾಗಿದ್ದರೆ, ಬುದ್ಧ, ಬಸವ, ಪರಮಹಂಸ ಮೊದಲಾದವರ ಬೋಧನೆ ತೀರ ವ್ಯರ್ಥವೆನಿಸಿಕೊಳ್ಳುತ್ತದೆ.

"ಏರಿದವನು ಚಿಕ್ಕವನಿರಬೇಕು"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹಾಗೆಯೇ ನಾನೂ ಕೂಡ ಗುರುವನ್ನು ಆರಿಸಿಕೊಳ್ಳುವುದು ಹೇಗೆ, ಸರಿಯಾದ ಗುರುವನ್ನು ಆರಿಸಿಕೊಳ್ಳುವುದಕ್ಕೆ ದಾರಿ, ವಿಧಾನ ಯಾವುದು ಎಂದು ಎಷ್ಟೋ ಕಾಲ ತಳಮಳಪಟ್ಟು ಎಷ್ಟೋ ’ಗುರು’ಗಳನ್ನು ಕೇಳಿದ್ದೆ. ಆದರೆ ಈ ಬಗ್ಗೆ ಹೊಸ ಬೆಳಕು ನೀಡಿದ ಈ ಮಾತುಗಳನ್ನು ಆಸಕ್ತರ ಗಮನಕ್ಕೆ ತರಲು ಬಯಸುತ್ತೇನೆ.
"ನೀವು ಗುರುವನ್ನು ಅರಸುವುದಿಲ್ಲ. ಗುರುವನ್ನು ಅರಸಲಾರಿರಿ. ನಿಮ್ಮಲ್ಲಿ ಒಂದು ಹಂಬಲ ಸೃಷ್ಟಿಸಿಕೊಳ್ಳುತ್ತೀರಿ, ಅರಿಯುವ ಆಳವಾದ ಹಂಬಲವನ್ನು ಸೃಷ್ಟಿಸಿಕೊಳ್ಳುತ್ತೀರಿ, ಆಗ ಗುರು ಸಂಭವಿಸುತ್ತಾನೆ. ಒಳ್ಳೆಯ ಗುರುವನ್ನು ಆರಿಸಿಕೊಳ್ಳಲು ಹೋಗಬೇಡಿ. ನೀವು ಆಯ್ಕೆಮಾಡಿಕೊಳ್ಳಲಾರಿರಿ. ಆಳವಾದ ಹಂಬಲವನ್ನು ಸೃಷ್ಟಿಸಿಕೊಳ್ಳಿ. ನೀವು ಗುರು ಎಂದು ಕರೆಯುವಂಥದ್ದು ಸಂಭವಿಸುತ್ತದೆ. ಗುರು ಅನ್ನುವುದು ವ್ಯಕ್ತಿಯಲ್ಲ. ಗುರು ಅನ್ನುವುದು ನಿರ್ದಿಷ್ಟವಾದ ’ಅವಕಾಶ’, ನಿರ್ದಿಷ್ಟವಾದ ಚೈತನ್ಯ. ಅದು ನಿಮಗೆ ’ಆಗ’ಬಹುದು, ಅಷ್ಟೆ. ಗುರುವೆಂದರೆ ನೀವು ಭೇಟಿಯಾಗುವ, ಕೈಕುಲುಕುವ, ನಮಸ್ಕಾರಮಾಡುವ, ಇದನ್ನೋ ಅದನ್ನೋ ನೀಡಿ ಎಂದು ನೀವು ಬೇಡಿಕೊಳ್ಳುವ ವ್ಯಕ್ತಿಯಲ್ಲ. ನೀವು ಗುರು ಎಂದು ಕರೆಯುವ ಆ ’ಅವಕಾಶ’, ಆ ಚೈತನ್ಯ ನಿಮಗೆ ’ಆಗುತ್ತದೆ’ ನಿಮ್ಮನ್ನು ಮುಳುಗಿಸಿಬಿಡುತ್ತದೆ, ನೀವು ಇರುವ ರೀತಿಯನ್ನು ನಾಶಮಾಡಿ ನೀವು ಅಪರಿಮಿತರಾಗುವಂತೆ ಮಾಡುತ್ತದೆ. ಸೃಷ್ಟಿಕರ್ತನು ನೀವು ಏನಾಗಬೇಕೆಂದು ಬಯಸಿದ್ದನೋ ಅದು ಆಗುತ್ತೀರಿ."
ಈ ಮಾತುಗಳನ್ನು ಓದಿದ ಹಿನ್ನೆಲೆಯಲ್ಲಿಯೇ ಚಂದಿಮರಸನ ವಚನದ ಬಗ್ಗೆ ಆ ಮಾತುಗಳು ಬಂದವು.

ನಾಗಭೂಷಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಘಂಟು ನೋಡಿ, ರೂಪ, ರೂಪು, ರೂಹು ಮೂಱೂ ಒಂದೇ ಅರ್ಥದ ಒಂದೇ ಪದದ ಮೂಱು ರೂಪಗಳು
ಆಗ ರೂಪು+ಆಯಿತ್ತಯ್ಯಾ=ರೂಪಾಯಿತ್ತಯ್ಯಾ ಎಂದಾಗುತ್ತದೆ. ಇದು ನಿಮ್ಮೆಲ್ಲರ ಅನುಮಾನ ಪರಿಹರಿಸಬಹುದೆಂದುಕೊಳ್ಳುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು. ಸ್ವಾಮಿ ಅವರ ಬರಹವನ್ನು ಪೂರ್ತಿಯಾಗಿ ಓದುವ ಮೊದಲೇ ಟಿಪ್ಪಣಿ ಮಾಡಿದ್ದರಿಂದಾದ ಅನಾಹುತ ಇದು :( ಸರಿಯಾಗಿ ಓದಿದ್ದರೆ ಈ ಪ್ರಶ್ನೆ ಬರುತ್ತಿರಲೇ ಇಲ್ಲ!

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.