ಇಂದು ಓದಿದ ವಚನ:ಗೆಲುವೋ ಸೋಲೋ ಚಿಂತೆ ಬೇಡ:ಸಗರದ ಬೊಮ್ಮಣ್ಣ

0
ಗೆಲ್ಲ ಸೋಲ ಬಲ್ಲವರಿಗೇಕೆ
ಅದು ಬೆಳ್ಳರ ಗುಣ
ಪಥವೆಲ್ಲರಲಿ ನಿಹಿತನಾಗಿ
ಅತಿಶಯದ ವಿಷಯದಲ್ಲಿ ಗತನಾಗದೆ
ಸರ್ವವನರಿತು
ಗತಮಯಕ್ಕೆ ಅತೀತನಾಗು
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ
'ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ' ಎಂಬುದು ಸಗರದ ಬೊಮ್ಮಣ್ಣ ಎಂಬ ವಚನಕಾರನ ಅಂಕಿತನಾಮ. ಗುಲ್ಬರ್ಗಾ ಜಿಲ್ಲೆಯ ಸಗರದವನು ಈತ. ಕಾಲ ಸುಮಾರು ಕ್ರಿಶ. ೧೧೬೦. ಈತನ ಹೆಂಡತಿ ಶಿವದೇವಿ. ಈತ ಗಣಾಚಾರ ಪ್ರವೃತ್ತಿಯವನು (ಇಂದಿನ ಅರ್ಥದ ಮಿಲಿಟೆಂಟ್) ಎಂಬ ಮಾತಿದೆ. ಆತ ವಿಶೇಷವಾಗಿ ಜೈನ ವಿರೋಧಿಯಾಗಿದ್ದ ಎಂಬ ಮಾತಿದೆ.

ಗೆಲುವು ಸೋಲು ಎಂಬುದರ ಬಗ್ಗೆ ಬಲ್ಲವರು ತಲೆಕೆಡಿಸಿಕೊಳ್ಳಬಾರದು. ಹಾಗೆ ಚಿಂತೆ ಮಾಡುವುದು ಮೂರ್ಖರ (ಬೆಳ್ಳರ) ಗುಣ. ಸರಿಯಾದ ದಾರಿ ಹಿಡಿದು, ಎಲ್ಲರೊಡನೆ ಒಂದಾಗಿ ಸಾಗಬೇಕು, ಆದರೆ ಯಾವ ವಿಷಯದಲ್ಲೂ ಮುಳುಗಿ ಕಳೆದುಹೋಗಬಾರದು. ಎಲ್ಲವನ್ನೂ ಅರಿಯಬೇಕು, ಗತಕಾಲದ ಚಿಂತೆಯಲ್ಲಿ ಮುಳುಗದೆ ಅದಕ್ಕೆ ಅತೀತನಾಗಬೇಕು, ಇದು ಬದುಕುವ ದಾರಿ ಅನ್ನುತ್ತಾನೆ.
ಗೆಲುವಿನ ಆತಂಕಕ್ಕೆ ಸಿಲುಕಿರುವ, ಮಾಡಬಹುದಾಗಿದ್ದ, ಮಾಡದೆ ಹೋದ ಕೆಲಸಗಳ ಬಗ್ಗೆಯೇ ಚಿಂತೆಮಾಡುತ್ತ ನರಳುವವರಿಗೆ ಔಷಧದಂಥ ಮಾತು ಹೇಳಿದ್ದಾನೆ. 

 

ಈ ವಚನದಲ್ಲಿ ನಿಹಿತನಾಗಿ, ಅತಿಶಯ ವಿಷಯ, ಗತಮಯ ಅನ್ನುವ ಬಳಕೆಗಳು ಗಮನಸೆಳೆಯುತ್ತವೆ. ‘ನಿಹಿತ’ ಎಂದರೆ ‘ಇಡಲ್ಪಡು’ ಎಂದು ಅರ್ಥವಾಗುತ್ತದೆ. ಉಗ್ರ ಮನೋಧರ್ಮದವನು ಎಂದು ಹೇಳಲಾಗುವ ಬೊಮ್ಮಣ್ಣ ಎಲ್ಲ/ಎಲ್ಲರ ದಾರಿಗಳಲ್ಲಿ ಹೊಂದಿಕೊಂಡು ಹೋಗುವ ಮಾತನಾಡುವುದು ಆಶ್ಚರ್ಯ. ಆದರೂ ಅವನ ಒಳಮನಸ್ಸು ಗೆಲುವಿಗೆ ಸೋಲಿಗೆ ಹೋರಾಟ ಮಾಡುವುದು ಅನಗತ್ಯ ಎಂಬ ವಿವೇಕ ಹೇಳಿರಬಹುದು.‘ಅತಿಶಯ ವಿಷಯ’ ಅನ್ನುವಾಗ ವಿಷಯ ಅನ್ನುವುದು ಕಾಮಾಸಕ್ತಿ ಅನ್ನುವ ಅರ್ಥವನ್ನೂ ಸೂಚಿಸೀತು. ಅಥವ ಯಾವುದೇ ಒಂದು ವಿಷಯದ ಬಗ್ಗೆ ಅತಿಯಾಗಿ ಗೀಳಿಗೆ ಒಳಗಾಗುವ ಅನ್ನುವ ಅರ್ಥವೂ ಇದ್ದೀತು. ಯಾವುದಾದರೂ ಸರಿ, ಅವು ಗತಕಾಲದ ಕಾಡುವ ನೆನಪುಗಳೇ ಆಗಿರುತ್ತವೆ. ಮನಸ್ಸಿನ ವಿಕಾಸಕ್ಕೆ ಗತದಿಂದ ಬಿಡುಗಡೆ ಪಡೆಯುವುದು ಮುಖ್ಯವಲ್ಲವೇ? ಮುಕ್ತಿ ಅನ್ನುವ ಮಾತು ಕೂಡ ನಾವು ಬಿಡಲಾಗದ ಗತಸ್ಮರಣೆಗಳಿಂದ ಬಯಸುವ ಬಿಡುಗಡೆಯೇ ಅಲ್ಲವೇ? ಗತಮಯ ಅನ್ನುವ ಮಾತನ್ನು ‘ಆನಂದಮಯ’ ಅನ್ನುವಂಥ ರಚನೆಗಳೊಂದಿಗೆ ಮನಸ್ಸಿಗೆ ತಂದುಕೊಂಡರೆ ನಮ್ಮ ಮನಸ್ಸುಗಳು ಸಾಮಾನ್ಯವಾಗಿ ಗತದಲ್ಲೇ ಮುಳುಗಿ ಹೋಗಿರುವುದು ಅರಿವಾಗುತ್ತದಲ್ಲವೇ?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಸ್ವಾಮಿಯವರೇ,

ಸಗರದ ಬೊಮ್ಮಣ್ಣ ನ ಬಗ್ಗೆ ಬರೆದಿದ್ದಕ್ಕೆ ನನ್ನೀ. ಇಂತ ಅಪರೂಪದ ( ನಮ್ಮಂತವರಿಗೆ ಪರಿಚಯವಿಲ್ಲದ ) ವಚನಕಾರರ ಬಗ್ಗೆ / ವಚನಗಳ ಬಗ್ಗೆ ದಯವಿಟ್ಟಿ ಬರೀತಾ ಇರಿ.

ನಾನು ಅಂದುಕೊಂಡಂತೆ....

ಸೋಲಲು ಸಿದ್ದನಾಗಿರಿವವನು ಮಾತ್ರ ಗೆಲ್ಲಲು ಸಾಧ್ಯ. ಅಂದರೆ ಆತ ಎಲ್ಲಕ್ಕೂ ಸಿದ್ದನಿರುತ್ತಾನೆ. ಸ್ಥಿತ ಪ್ರಜ್ಞ ನಾಗಿರುವವನಿಗೇಕೆ "ಈ(?)" ತರದ ಬೆಳ್ಳರ ಗುಣ

ಹಾ.. ನಮ್ಮ ಊರಲ್ಲಿ "ಬೆಲ್ಗ್ಯ" ಒಂದು ಬೈಗುಳ (ಸರಿಯಾಗಿ ಹೇಳಬೇಕೆಂದರೆ ಕೀಟಲೆ ಪದ .. ಬಯ್ಗುಳವಲ್ಲ) ಇದೆ. ಈ ಪದದ ಮೂಲ ವಚನದಲ್ಲಿ ಬಂದ "ಬೆಳ್ಳ" ಪದವೇ ಇರಬೇಕು?!

>ಅದು ಬೆಲ್ಲರ ಗುಣ

ಇಲ್ಲಿ "ಅದು" ಅಂದ್ರೆ ವಚನಾದಾಚೆ ಬೇರೇನನ್ನೋ ಸೂಚಿಸುತ್ತಿದೆಯೇ? .. ಹಿಂದಿನ ವಚನ ದ ಮೇಲೆ ಈ ವಚನ ಆಧರಿತವೆ ? ..ನೀವೇ ನೋಡಿ ಹೇಳಬೇಕು.

>ಅತಿಶಯದ ವಿಷಯದಲ್ಲಿ ಗತನಾಗದೆ ಸರ್ವವನರಿತು
ಇಲ್ಲಿ ಇಹ ಪರ ವೆರಡಕ್ಕೊ ಸಮಾನ ಗೌರವ / ಆಸಕ್ತಿ ತಾಳಬೇಕೆಂದು ಆಶಯ. ಕೆಲವರು ಸಾವಿನಾಚೆಯ ಸುಖಕ್ಕಾಗಿ ಇಲ್ಲಿಯ ಜೀವನವನ್ನು ನರಕವನ್ನಾಗಿ ಮಾಡಿಕೊಳ್ಳುತ್ತಾರೆ. ಇಲ್ಲಿಯ ಖುಷಿಯನ್ನು ನಿರಾಕರಿಸುತ್ತಾರೆ. "ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ" ಎಂಬ ಬಸವಣ್ಣನ ವಾಕ್ಯವನ್ನೇ ಮತ್ತೊಂದು ರೀತಿಯಲ್ಲಿ ಇದು ಹೇಳ್ತಾ ಇದೆ.

> ಪಥವೆಲ್ಲರಲಿ ನಿಹಿತನಾಗಿ
ಎಲ್ಲರಲಿ ಒಂದಾಗಿ? .. ವರ್ತಮಾನದಲ್ಲಿ ಬದುಕಿ?

>ಗತಮಯಕ್ಕೆ ಅತೀತನಾಗು.

ನಾವು ನಿನ್ನೆ ( ಅತ್ವ ನಾಳೆ) ಯಲ್ಲೇ ಬದುಕುವುದು ಹೆಚ್ಚು. ನಮ್ಮನ್ನು "ಭೂತ" ಯಾವಾಗಲೂ ಕಾಡುತ್ತ ಇರುತ್ತೆ. ಅದಕ್ಕೆ ಅತೀತನಾಗು. ಮೀರಿ ನಡೆ

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಂದಿನಂತೆ ಱಕಾರ ನೋಡಿ. ಶಿವಶರಣ ತೀರಾ ಸರಳವಾಗಿ ಜೀವನ ಮಾಡುವ ರೀತಿ ತಿಳಿಹೇೞುತ್ತಾರೆ. ಇದು ನನಗೆ ಮೆಚ್ಚಿಗೆಯಾದ ವಿಷಯ. ಬೆಳ್ಳ, ಬೆೞ್ಪ, ಬೆಪ್ಪ=ದಡ್ಡ ಅರ್ಥದಲ್ಲಿ ಬೞಕೆಯಾಗಿರುವುದನ್ನು ನೋಡಬಹುದು. ಅತಿಶಯ=ವಿಪರೀತ

ಗೆಲ್ಲ ಸೋಲ ಬಲ್ಲವರಿಗೇಕೆ
ಅದು ಬೆಳ್ಳರ ಗುಣ
ಪಥವೆಲ್ಲರಲಿ ನಿಹಿತನಾಗಿ
ಅತಿಶಯದ ವಿಷಯದಲ್ಲಿ ಗತನಾಗದೆ
ಸರ್ವವನಱಿತು
ಗತಮಯಕ್ಕೆ ಅತೀತನಾಗು
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.