ಇಂದು ಓದಿದ ವಚನ: ಲೀಢವಾಗಿರಬಾರದು: ಸಿದ್ಧರಾಮ

0

ನೋಡುವುದು ನೋಡಲೇ ಬೇಕು
ಮಾಡುವುದು ಮಾಡಲೇ ಬೇಕು
ನೋಡಿ ಮಾಡಿ ಮನದಲ್ಲಿ ಲೀಢವಾಗಿರಬಾರದು ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನಾ

[ಲೀಢ-ನೆಕ್ಕು, ಆಸ್ವಾದಿಸು, ರುಚಿ ನೋಡು].

ಸಿದ್ಧರಾಮನ ಈ ವಚನ ವೈರಾಗ್ಯವೆಂಬ ಕಲ್ಪನೆಯ ಭಾಷ್ಯದಂತಿದೆ.

ವೈರಾಗ್ಯವೆಂದರೆ ಪಲಾಯನವಾದವಲ್ಲ. ಏನೂ ಮಾಡದೆ ಇರುವುದೂ ಅಲ್ಲ. ಏನೇನನ್ನು ನೋಡಬೇಕೋ ಅದನ್ನೆಲ್ಲ ನೋಡಲೇಬೇಕು, ಮಾಡಬೇಕಾದುದನ್ನೆಲ್ಲ ಮಾಡಲೇ ಬೇಕು. ಆದರೆ ಹಾಗೆ ನೋಡಿದ್ದನ್ನು, ಮಾಡಿದ್ದನ್ನು, ಚಪ್ಪರಿಸುತ್ತಾ, ಮತ್ತೆ ಮತ್ತೆ ನೆನೆಯುತ್ತಾ ಆಸ್ವಾದಿಸುತ್ತಾ ಇರಬಾರದು. ಹಾಗೆ ನೋಡಿಯೂ ಮಾಡಿಯೂ ಅದರೊಳಗಾಗದೆ ಇರುವುದು ನಿಜವಾದ ವಿರಕ್ತಿ ಎಂದು ಸಿದ್ಧರಾಮ ಹೇಳುತ್ತಾನೆ.

ಸುಖವೋ ದುಃಖವೋ, ಮಾಡಿದ್ದೋ, ಮಾಡದೆ ಹೋದದ್ದೋ ನಮ್ಮ ಮನಸ್ಸು ಹಳೆಯದನ್ನು ನೆನೆದುಕೊಳ್ಳುತ್ತಾ ಚಪ್ಪರಿಸುತ್ತಾ ಇರುತ್ತದಲ್ಲ ಅದನ್ನು ಬಿಟ್ಟರೆ, ಅಥವ ನಾಳೆಯ ಸುಂದರ ಕಲ್ಪನೆಯನ್ನು ಚಪ್ಪರಿಸುತ್ತಾ ಇರುತ್ತದಲ್ಲ ಅದನ್ನು ಬಿಟ್ಟರೆ ನಿಜವಾದ ವೈರಾಗ್ಯ ಸಾಧ್ಯವಾದೀತು. ಆ ಕ್ಷಣದ ಅನುಭವವನ್ನು ಆ ಕ್ಷಣವೇ ಪೂರ್ತಿಯಾಗಿ ಅನುಭವಿಸಿ-ಬಿಡುವುದೇ, ಅನುಭವಿಸಿ ’ಬಿಟ್ಟುಬಿಡುವುದೇ’ ಮನಸ್ಸಿನ ನೆಮ್ಮದಿಯ ದಾರಿ ಅನ್ನುವ ಹಾಗಿದೆ ಈ ವಚನ. ಮನೆಯ ಅಟ್ಟದ ಮೇಲೆ ತುಂಬಿಕೊಂಡಿರುವ, ಯಾವತ್ತೋ ಬೇಕಾದೀತು ಎಂದು, ನೆನಪಿಗೆ ಇರಲಿ ಎಂದು, ಬಿಸಾಕದೆ ಸುಮ್ಮನೆ ತುಂಬಿಟ್ಟುಕೊಂಡಿರುವ ವಸ್ತುಗಳ ಹಾಗೆಯೇ ಭಾವಗಳನ್ನೂ ನೆನಪುಗಳನ್ನೂ ಸಂಕಟಗಳನ್ನೂ ಮನಸ್ಸಿನಲ್ಲಿ ತುಂಬಿಟ್ಟುಕೊಂಡು ಮಾಡಬೇಕಾದ್ದನ್ನು ಮಾಡದೆ ಇರುವುದು ವೈರಾಗ್ಯವಲ್ಲ ಅನ್ನುವ ಅರ್ಥ ಮನಸ್ಸಿಗೆ ಹೊಳೆಯುವ ಹಾಗಿದೆ ಈ ವಚನ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

" ಆ ಕ್ಷಣದ ಅನುಭವವನ್ನು ಆ ಕ್ಷಣವೇ ಪೂರ್ತಿಯಾಗಿ ಅನುಭವಿಸಿ-ಬಿಡುವುದೇ, ಅನುಭವಿಸಿ ’ಬಿಟ್ಟುಬಿಡುವುದೇ’ ಮನಸ್ಸಿನ ನೆಮ್ಮದಿಯ ದಾರಿ ಅನ್ನುವ ಹಾಗಿದೆ ಈ ವಚನ"

ಅನುಭವಿಸು = enjoy? ಅಥವಾ experience?

ಬುದ್ಧನ ಅನುಭವ ಮತ್ತು ಬೋಧನೆಯಂತೆ-ನಾವು ಪ್ರತಿಕ್ಷಣ ಪಂಚೇಂದ್ರಿಯಗಳ ಮೂಲಕ ಶಬ್ಚ , ಸ್ಪರ್ಶ, ರೂಪ, ರಸ ಮತ್ತು ಗಂಧಗಳ ದಾಳಿಗೊಳಗಾಗುತ್ತಲೇ ಇರುತ್ತೇವೆ. ಹಾಗಾಗಿ ಮನಸ್ಸು ಪ್ರತಿಕ್ಷಣವೂ ಎಲ್ಲ ಮೂಲಗಳಿಂದ ಬಂದ ಅನುಭವಗಳನ್ನು ಬೇಕಾದ, ಬೇಡದ ಮತ್ತು ಎರಡೂ ಅಲ್ಲದವೆಂದು ವಿಂಗಡಿಸುತ್ತಲೇ ಇರುತ್ತದೆ. ಹಾಗಾಗಿ ಪ್ರತಿಕ್ಷಣವೂ ರಾಗ, ದ್ವೇಷದಾಟ ನಮಗರಿವಿಲ್ಲದಂತೆಯೇ ನಡೆದಿರುತ್ತದೆ. ಇದು ನಮಗರಿವಿಲ್ಲದಂತೆ ನಡೆದಾಗ ಒಂದು ಋಣಾತ್ಮಕ ಸಂವೇದನೆಯಾಗಿ ಮನಸ್ಸಿನ ಮೂಲೆಯಲ್ಲಿ ಅವಿತಿರುತ್ತದೆ. ಸರಿಯಾದ ಸಮಯ ಬಂದಾಗ ಪುಟಿದು ಹೊರಬರುತ್ತದೆ. ಆದ್ದರಿಂದ ಪ್ರತಿಕ್ಷಣ ಜಾಗೃತರಾಗಿರುವುದೇ- ಅರ್ಥಾತ್, ಮೈಮರೆಯದೇ ಇರುವುದೇ ನಿರ್ವಾಣದ ಹಾದಿ.

ಒಂದು ಕ್ಷಣದ ಅನುಭವವನ್ನು "ಅನುಭವಿಸಿ"ದ ಮೇಲೆ ಬಿಟ್ಟುಬಿಡುವುದು ಹೇಗೆ? ಅದು ಅಷ್ಟು ಸುಲಭಸಾಧ್ಯವಲ್ಲ. ಅನುಭವಿಸುವುದು ಅಂದರೆ ಅಂಟಿಕೊಂಡಂತಲ್ಲವೆ? ಸುಖದು:ಖದ ಸಂವೇದನೆಗಳ ಅನುಭವವನ್ನು "ಅನುಭವಿಸದೆ" ಸಾಕ್ಷೀಭಾವದಿಂದ ಗಮನಿಸಿದರೆ ಮಾತ್ರ ರಾಗದ್ವೇಷದ ಈ ವಿಷವೃತ್ತದಿಂದ ಹೊರಬರುವುದ ಸಾಧ್ಯವೆನ್ನುತ್ತಾನೆ ಬುದ್ಧ

"ಏರಿದವನು ಚಿಕ್ಕವನಿರಬೇಕು"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಾಢವಾದ (ಪ್ರಬುದ್ಧ) ಟಿಪ್ಪಣಿಗಳು.

ಬಾಲಗಂಚಿಯವರೆ, "ಮಾಡುವುದು ಮಾಡಲೇ ಬೇಕು" ಎಂದು ಸಿದ್ದರಾಮ ಹೇಳುವಾಗ ಅದು ನಮ್ಮ ಕೈಯಲ್ಲಿಲ್ಲ ಎಂದು ಹೇಳುತ್ತಿರುವಂತಿದೆ. ಹೀಗಾಗಿ ಆ experience ಅನ್ನೋದು ಕಟ್ಟಿಟ್ಟ ಬುತ್ತಿಯಾಗಿದ್ದಿರಬಹುದಾದ ಸಂದರ್ಭದಲ್ಲಿ ಅಲ್ಲಿಗಲ್ಲಿಗೆ "ಬಿಟ್ಟುಬಿಡುವುದು" (ಪ್ರೊ. ಓ ಎಲ್ ಎನ್ ಟಿಪ್ಪಣಿ ಮಾಡಿರುವಂತೆ) ನೆಮ್ಮದಿಯ ದಾರಿ ಎಂದು ವಚನ ಹೇಳುತ್ತಿರುವಂತಿದೆ, ಅದು ಬಹಳ ನಿಜ ಅನಿಸುತ್ತದೆ, ಕೂಡ :-)
- HPN
ನನ್ನ ಬ್ಲಾಗುಗಳು: [:http://sampada.net/blog/hpn|ಪರಿವೇಶಣ] | [:http://hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲೀಢ ಅಂದರೆ ನೆಕ್ಕು ಅಂತಲ್ಲ. ಲೀಢ=ಲಿಹ್ ಧಾತುವಿನ ಭೂತಕೃದಂತ ಕ್ತ ಪ್ರತ್ಯಯ. ಆಗಲೇ ನೆಕ್ಕಿದ್ದು. ನೆಕ್ಕಿ ಅಂಟಿಕೂಡಿದ್ದು ಎಂದರ್ಥಬರುತ್ತದೆ. ಅಂದರೆ ನೆಕ್ಕಿ ಹಾಗೆಯೇ ಅಂಟಿಕೊಳ್ಳಬಾರದು. ಉದಾಹರಣೆಗೆ ನೋಡುವುದನ್ನು ನೋಡುತ್ತೇವೆ (ಅಥವಾ ಕಂಡುಬಿಡುತ್ತದೆ) ಆದರೆ ಕಂಡ ಸೌಂದರ್ಯವನ್ನು ಮನಸ್ಸಿನಲ್ಲಿ ನೆನಪಿಸಿಕೊಂಡು ಮಂಡಿಗೆ ತಿನ್ನಬಾರದು. ಅದು ಮೋಹವಾಗಿಬಿಡುತ್ತದೆ. ಇದು ವಚನದ ತಾತ್ಪರ್ಯವೆನಿಸುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹುಶ ಈ ವಚನ ಇಬ್ಬರು ಸನ್ಯಾಸಿಗಳು ಮತ್ತು ಒಬ್ಬ ತರುಣಿ ಅನ್ನೋ ಕಥೆಯಿಂದ ಇನ್ನೂ ಚೆನಾಗಿ ಮನದಟ್ಟಾಗುತ್ತೆ.

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದೌದು. ನನಗೂ ಸರಿಯೆನಿಸುತ್ತಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ವೈರಾಗ್ಯವೆಂದರೆ ಪಲಾಯನವಾದವಲ್ಲ. ಏನೂ ಮಾಡದೆ ಇರುವುದೂ ಅಲ್ಲ. ಏನೇನನ್ನು ನೋಡಬೇಕೋ ಅದನ್ನೆಲ್ಲ ನೋಡಲೇಬೇಕು, ಮಾಡಬೇಕಾದುದನ್ನೆಲ್ಲ ಮಾಡಲೇ ಬೇಕು. ಆದರೆ ಹಾಗೆ ನೋಡಿದ್ದನ್ನು, ಮಾಡಿದ್ದನ್ನು, ಚಪ್ಪರಿಸುತ್ತಾ, ಮತ್ತೆ ಮತ್ತೆ ನೆನೆಯುತ್ತಾ ಆಸ್ವಾದಿಸುತ್ತಾ ಇರಬಾರದು. ಹಾಗೆ ನೋಡಿಯೂ ಮಾಡಿಯೂ ಅದರೊಳಗಾಗದೆ ಇರುವುದು ನಿಜವಾದ ವಿರಕ್ತಿ
[/quote]

ನನಗೆ ಇಲ್ಲಿ ಒಂದು ಕತೆ ನೆನಪಾಯಿತು. ಒಬ್ಬ ರಾಜ, ಅವನ ಹಿರಿಯ ಮಗನಿಗೆ ವೈರಾಗ್ಯದತ್ತ ಒಲವು. ರಾಜನ ಮರಣದ ನಂತರ , 'ನೀನು ರಾಜನಾಗಿ ಪ್ರಜೆಗಳ ಕುರಿತು ನಿನ್ನ ಕರ್ತವ್ಯ ನಿಭಾಯಿಸಲೇಬೇಕೆಂ'ದು ಅವನನ್ನು ಮಂತ್ರಿಗಳು ಒತ್ತಾಯಿಸಿ ಕೆಲವು ಕಾಲ ರಾಜನಾಗಿರುವಂತೆ ಅವನನ್ನ ಒಪ್ಪಿಸುತ್ತಾರೆ . ರಾಜನ ಕರ್ತವ್ಯಗಳನ್ನು ಚೆನ್ನಾಗಿಯೇ ನಿಭಾಯಿಸಿದನು. ಆದರೆ ರಾಜಭೋಗಗಳನ್ನು ಅವನು ಒಲ್ಲ . ' ನೀನು ವೈಭೋಗಗಳನ್ನು ನಿರಾಕರಿಸಲಾಗದು ; ಅದು ಕೂಡ ರಾಜಪದವಿಯ ಮರ್ಯಾದೆಯ , ಕರ್ತವ್ಯದ ಪ್ರಶ್ನೆ.' ಎ೦ದು ವಾದಿಸುವರು. ಆಗ ಅವನು ಒಂದು ಶರತ್ತನ್ನು ಹಾಕುವನು- 'ಆಯಿತು , ನನಗೆ ಯಾವ ಯಾವ ವೈಭೋಗಗಳಿವೆಯೋ ಅವನ್ನು ಒದಗಿಸಿ . ಆದರೆ ಯಾವದೂ ಮರುಕಳಿಸಕೂಡದು' ಅಂತ . ಅವರೂ ಸರಿ ಎ೦ದು ಹಾಗೆಯೇ ಮಾಡುವರು . ಒಂದು ದಿನ ಅವನಲ್ಲಿಗೆ ಬಂದು -' ಎಲ್ಲ ವೈಭೋಗಗಳನ್ನು ನೀನು ಅನುಭವಿಸಿ ಆಯಿತು' ಅಂದರು . ಆಗ ಅವನು ರಾಜ್ಯವನ್ನು ಕಿರಿಯನಿಗೆ ಒಪ್ಪಿಸಿ , ತಪಸ್ಸಿಗೆ ತೆರಳಿದನು.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.