ಇಂದು ಓದಿದ ವಚನ: ನೀರಿನಂಥ ಮನಸ್ಸು: ಸಿದ್ಧರಾಮ

5

ಅನೇಕ ತೆರದ ಯೋನಿಮುಖಂಗಳ ಪೊಕ್ಕು
ನೀರ್ಗುಡಿಯಲೆಂದು ಪೋದಡೆ
ಸುಡು ಪೋಗೆಂದು ನೂಂಕಿತ್ತೆ ಜಲ
ಅದರಂತಿರಬೇಡಾ ಹಿರಿಯರ ಮನ
ಮನವಿಚ್ಛಂದವಾಗದೊಂದೆಯಂದದಲಿಪ್ಪಂತಪ್ಪಾ
ನಿಮ್ಮದೊಂದು ಸಮತಾಗುಣವನ್ನನೆಂದು ಪೊದ್ದಿರ್ಪುದು ಹೇಳಾ
ಕಪಿಲಸಿದ್ಧಮಲ್ಲಿಕಾರ್ಜುನಾ

[೫ನೆಯ ಸಾಲು: ಓದಿನ ಅನುಕೂಲಕ್ಕೆ ಹೀಗೆ ಬಿಡಿಸಿಕೊಳ್ಳಿ:ಮನ-ಇಚ್ಛಂದ-ಆಗದೆ-ಒಂದೆ-ಅಂದದಲಿ-ಇಪ್ಪಂತೆ-ಅಪ್ಪ-ಆ; ಪೊದ್ದಿರ್ಪುದು-ಹೊಂದಿರುವುದು]

ಹಿಂದಿನ ಜನ್ಮದಲ್ಲಿ ಏನೇ ಆಗಿರಲಿ, ಅಥವಾ ಮಾಡಬಾರದ ಕೆಲಸಗಳನ್ನೇ ಮಾಡಿರಲಿ, ಅಂಥವನು ನೀರು ಕುಡಿಯಲೆಂದು ಹೋದರೆ ’ನೀನು ಅಯೋಗ್ಯ’ ಎಂದು ಅವನ ದಾಹವನ್ನು ತಣಿಸಲು ನಿರಾಕರಿಸುತ್ತದೆಯೇ ನೀರು? ಇಲ್ಲವಲ್ಲಾ. ನಿಜವಾದ ಹಿರಿಯರ ಮನ ಹಾಗೆ ಇರಬೇಕಲ್ಲವೇ? ಯಾವುದರ ಬಗ್ಗೆಯೂ ತಿರಸ್ಕಾರದ ಲವಲೇಶವೂ ಇಲ್ಲದಂತಿರುವುದೇ ನಿಜವಾದ ಹಿರಿತನ. ಮನಸ್ಸು ಇಚ್ಛಂದವಾಗದೆ (ಇಬ್ಭಾಗವಾಗು) ಒಂದೇ ಅಂದದಲ್ಲಿ ಇರುವಂಥ ನಿಮ್ಮ ಸಮತಾಗುಣವನ್ನು ನನ್ನ ಮನಸ್ಸು ಎಂದು ಹೊಂದೀತು ಎಂದು ಸಿದ್ಧರಾಮ ಕೇಳುತ್ತಾನೆ.

ದೇವರು ಎಂಬುದಿದ್ದರೆ ಅದು ಸಮತಾಗುಣವೇ. ಸಿದ್ಧರಾಮನ ದೃಷ್ಟಿಯಲ್ಲಿ ಏನನ್ನೂ ತಿರಸ್ಕರಿಸಿದ ಗುಣವೇ, ಯಾವ ಗುಣದಿಂದಲೂ ಮನಸ್ಸು ಇಚ್ಛಂದವಾಗದೇ ಇರುವುದೇ, ದೇವರ ಗುಣ. ಅಂಥ ಗುಣ ಬೇಕು ಅನ್ನುವುದು ಬಯಕೆ.

ನಿಸರ್ಗಕ್ಕೆ ಇಂಥ ಸಮತಾಗುಣವಿರುವುದರಿಂದಲೇ ನಾವು ಬದುಕಿದ್ದೇವೆ. ಕೇವಲ 'ಒಳ್ಳೆ'ಯವರಿಗೆ ಮಾತ್ರವೇ ಮಳೆ ಸುರಿಯುವುದು, ಸೂರ್ಯ ಹೊಳೆಯುವುದು, ನದಿ ಹರಿಯುವುದು, ಮರ ಹಣ್ಣು ಕೊಡುವುದು ಎಂದಾಗಿದ್ದರೆ ಲೋಕದಲ್ಲಿ ನೂರಕ್ಕೆ ತೊಂಬತ್ತೊಂಬತ್ತು ಜನ ಬದುಕುವುದಕ್ಕೇ ಆಗುತ್ತಿರಲಿಲ್ಲವೇನೋ! ಸೇಡಿಲ್ಲದ, ಅವಜ್ಞೆ ಇಲ್ಲದ, ತಿರಸ್ಕಾರವಿಲ್ಲದ ಗುಣ ಎಂದು ಸಮತೆಯನ್ನು ವರ್ಣಿಸಿರುವುದು ಹೊಸತೆಂಬಂತಿದೆ.

ಛಂದ ಮತ್ತು ಅಂದ ಪದಗಳನ್ನು ಒಟ್ಟುಗೂಡಿಸಿರುವ ರೀತಿಯೂ ಗಮನಾರ್ಹ. ಛಂದ ಅನ್ನುವುದು ಛಂದಸ್ಸನ್ನೂ ಚಂದವನ್ನೂ ಒಟ್ಟಿಗೆ ಸೂಚಿಸೀತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸರಳವೂ, ಆಳವಾದ ಅರ್ಥವುಳ್ಳದ್ದೂ ಆಗಿದೆ. ತುಂಬಾ ಹಿಡಿಸಿತು. ಸಂಸ್ಕೃತ ಸುಭಾಷಿತದ ಒಂದು ಭಾಗ "न हि संहरते ज्योत्स्नां चन्द्रश्चण्डालवेश्मन:" - "ಚಂದ್ರನು ಚಂಡಾಲರ ಮನೆಯ ಮೇಲೆ ಬೀರುವ ಬೆಳುದಿಂಗಳನ್ನು ತಡೆಹಿಡಿಯುವುದಿಲ್ಲ" ಅನ್ನುವುದು ನೆನಪಾಯಿತು.
ಹಾಗೆಯೇ ಭಗವದ್ಗೀತೆಯಲ್ಲಿ ಬರುವ
"विद्याविनयसम्पन्ने ब्राह्मणे गवे हस्तिनि।
शुनि चैव श्वपाके च पण्डिता: समदर्शिन:।
(ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ
ಶುನಿ ಚೈವ ಶ್ವಪಾಕೇ ಚ ಪಂಡಿತಾ: ಸಮದರ್ಶಿನ:)

"ಆತ್ಮಜ್ಞಾನ ಪಡೆದ ಯೋಗಿಗಳು ವಿದ್ಯಾವಿನಯಸಂಪನ್ನನಾದ ಬ್ರಾಹ್ಮಣ, ಹಸು, ಆನೆ, ನಾಯಿ ಮತ್ತು ಚಂಡಾಲ, ಎಲ್ಲರನ್ನೂ ಸಮನಾಗಿ ಕಾಣುತ್ತಾರೆ" ಎಂಬ ಮಾತನ್ನೂ ನೆನಪಿಸಿತು.

"ಏರಿದವನು ಚಿಕ್ಕವನಿರಬೇಕು"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದೇವರು ಎಂಬುದಿದ್ದರೆ ಅದು ಸಮತಾಗುಣವೇ. ಸಿದ್ಧರಾಮನ ದೃಷ್ಟಿಯಲ್ಲಿ ಏನನ್ನೂ ತಿರಸ್ಕರಿಸಿದ ಗುಣವೇ, ಯಾವ ಗುಣದಿಂದಲೂ ಮನಸ್ಸು ಇಚ್ಛಂದವಾಗದೇ ಇರುವುದೇ, ದೇವರ ಗುಣ. ಅಂಥ ಗುಣ ಬೇಕು ಅನ್ನುವುದು ಬಯಕೆ.

----------- ಆದರೆ ಇದು ಸಾಧ್ಯವೇ? ಸಾಧ್ಯವಾದರೆ, ಸಜ್ಜನರಿಗೆ, ಮಾನವೀಯ ಗುಣಗಳಿಗೆ ಮನ್ನಣೆಯಾದರು ಏನು?
"ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ" ದೇವರೆ ನಮಗೆ ಬೇಕು. ಅಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನೇಕ ತೆಱದ ಯೋನಿಮುಖಂಗಳ ಪೊಕ್ಕು
ನೀರ್ಗುಡಿಯಲೆಂದು ಪೋದಡೆ
ಸುಡು ಪೋಗೆಂದು ನೂಂಕಿತ್ತೆ ಜಲ
ಅದಱಂತಿರಬೇಡಾ ಹಿರಿಯರ ಮನ
ಮನವಿಚ್ಚಂದವಾಗದೊಂದೆಯಂದದಲಿಪ್ಪಂತಪ್ಪಾ
ನಿಮ್ಮದೊಂದು ಸಮತಾಗುಣವನ್ನನೆಂದು ಪೊದ್ದಿರ್ಪುದು ಹೇಳಾ
ಕಪಿಲಸಿದ್ಧಮಲ್ಲಿಕಾರ್ಜುನಾ

ಱಕಾರ ಮತ್ತು ಒಂದು ತಪ್ಪೊಪ್ಪು. ಇಲ್ಲಿ ಛಂದ ಅಂದ ಸೇರಿಲ್ಲ. ಬದಲಿಗೆ ಇರ್(ಎರಡು)+ಚಂದ=ಇರ್ಚಂದ (ಹೞಗನ್ನಡ) ಇಚ್ಚಂದ (ನಡು ಮತ್ತು ಹೊಸಗನ್ನಡ). ಅರ್ಥ ಹೇೞುವಾಗ ಕೆಲವೊಮ್ಮೆ ಭಾಷೆಯೂ ಗೊತ್ತಿದ್ದು ಸರಿಯಾಗಿ ಅರ್ಥ ತಿಳಿಯಬೇಕಾಗುತ್ತದೆ. ಇಲ್ಲಿ ಇಚ್ಚಂದ=ಎರಡು ಬಗೆ. ಛಂದ ಶಬ್ದವಿರುವ ಬಗ್ಗೆ ನಾ ಕಾಣೆ. ದಯವಿಟ್ಟು ಮೂಲಪ್ರತಿ ಅಥವಾ ಎರಡು ಮೂಱು ಬೇಱೆ ಬೇಱೆ ಪ್ರತಿಗಳಿದ್ದರೆ ಅವನ್ನು ನೋಡಿ ತಿಳಿಸುವುದು ಒಳ್ಳೆಯದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯರೆ, ನಿಮ್ಮ ಪ್ರಶ್ನೆಗೆ ಧನ್ಯವಾದ. ಆದರೆ ರ್ಕನಾಟಕ ರಾಜ್ಯ ರ್ಸಕಾರದ ಸಂಸ್ಕೃತಿ ಇಲಾಖೆಯು ಪ್ರಕಟಿಸಿರುವ ಸಮಗ್ರ ವಚನ ಸಂಪುಟ, ೪, ಸಿದ್ಧರಾಮೇಶ್ವರ ವಚನಗಳು ಪುಸ್ತಕದ ೩೩ನೆಯ ವಚನ, ಪುಟ ೧೦, ಛಂದ ಎಂಬ ಮಹಾಪ್ರಾಣ ಬಳಕೆಯಾಗಿದೆ. ಆದ್ದರಿಂದಲೇ ಛಂದ ಅನ್ನುವ ಅರ್ಥವೂ ಇಲ್ಲಿ ಗಮನಾರ್ಹ ಎಂದು ಹೇಳಿದ್ದೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.