ಇಂದು ಓದಿದ ವಚನ: ಅಸಾಧ್ಯ: ಘಟ್ಟಿವಾಳಯ್ಯ

5

ಅರಿವಿಂಗೆ ಸಿಕ್ಕದುದ ನೆನೆಯಲಮ್ಮಬಹುದೆ  

ಅಯ್ಯಾ

ನೆನಹಿಂಗೆ ಬಾರದುದ ಕಾಂಬುದು ಹುಸಿ 

ಮುಟ್ಟಿ ಪೂಜಿಸುವ ಮಾತು ಮುನ್ನವೇ ದೂರ 

ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲನಿಲ್ಲು ಮಾಣು

 

ಘಟ್ಟಿವಾಳಯ್ಯನ ಮೊದಲ ಹೆಸರು ಮುದ್ದಣ್ಣ. ಗಂಧ ತೇಯುವ ಕಾಯಕದವನು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು’ ಅನ್ನುವುದು ಅವನ ಅಂಕಿತ. ಇಡೀ ಒಂದು ವಾಕ್ಯದಂತೆ ಈ ಇರುವ ಈ ಅಂಕಿತ ಅವನ ವಚನಗಳಲ್ಲಿ ವಿಶೇಷವಾದ ಅರ್ಥ ಛಾಯೆಗಳನ್ನು ಮೂಡಿಸುತ್ತದೆ. ಈತನ ೧೫೦ ವಚನಗಳು ದೊರೆತಿವೆ. 

ಘಟ್ಟಿವಾಳಯ್ಯ ಈ ವಚನದಲ್ಲಿ ಅರಿವನ್ನು  ಕುರಿತ ನಮ್ಮ ಕಲ್ಪನೆಗಳನ್ನೆಲ್ಲ ಪ್ರಶ್ನಿಸುತ್ತಿದ್ದಾನೆ.

ಅರಿವು ಅನ್ನುವುದು ನೆನಪಿಗೆ ಕೂಡ ಸಂಬಂಧಿಸಿದ್ದು ಎಂದುಕೊಂಡಿದ್ದೇವೆ. ನಮ್ಮ ಇಡೀ  ಶಿಕ್ಷಣ, ಸಂಸ್ಕೃತಿ ಎಲ್ಲವೂ ನೆನಪಿಗೆ  ಸಂಬಂಧಿಸಿದ್ದು, ನೆನಪನ್ನೇ  ಆಧರಿಸಿದ್ದು ಅಲ್ಲವೇ? ಆದರೆ ಸತ್ಯ ಅನ್ನುವುದು ಇದ್ದರೆ ಅದು ನೆನಪಿಗೆ ಸಿಲುಕದು. ಅರಿವಿಗೆ ಸಿಲುಕದು. ಅರಿವಿಗೆ ಬಾರದಿರುವ ಸತ್ಯ ನೆನಪಿಗೆ ಬರುತ್ತದೆಯೇ? ನೆನಪಿಗೆ ಬರುವುದೇನಿದ್ದರೂ ನಮ್ಮ ಹಳೆಯ ಅನುಭವ, ಕೇಳಿದ ಮಾತು ಇಂಥವೇ ಅಲ್ಲವೇ? ಯವುದು ನಮ್ಮ ನೆನಪಿನಲ್ಲಿ ದಾಖಲಾಗಿದೆಯೋ ಅದನ್ನು ಮಾತ್ರ ನಾವು ಈಗ  ಗುರುತಿಸುತ್ತೇವೆ. ಯಾವುದು ನೆನಪಿಗೆ ಬಾರದೋ ಅದು ನಮಗೆ ಕಾಣುವುದೂ ಇಲ್ಲ. ನೆನಪನ್ನೇ ಆಧರಿಸಿಕೊಂಡಿರುವ ನಮ್ಮ  ಕಾಣ್ಕೆ, ನಮ್ಮ ಅರಿವು ಸಸತ್ಯವನ್ನು  ಕಾಣಿಸಿಕೊಡಲಾರದು. ಹೀಗಿರುವಾಗ ಮಾತಿಗೆ ಸಿಲುಕದ, ನೆನಪಿಗೆ ಆಹಾರವಾಗದ ಸತ್ಯವನ್ನೋ ದೇವರನ್ನೋ ಮುಟ್ಟುವುದು ಪೂಜಿಸುವುದು ಅಸಾಧ್ಯ  ಅನ್ನುತ್ತಾನೆ ಘಟ್ಟಿವಾಳಯ್ಯ.

ಇಂಗ್ಲಿಷಿನ ರಿಕಾಗ್ನಿಶನ್ ಎಂಬ ಮಾತು ನೆನೆದುಕೊಳ್ಳೋಣ. ಅದು ರಿ(ಮತ್ತೆ) ಕಾಗ್ನಿಶನ್ (ಗ್ರಹಿಸುವುದು,ಗುರುತಿಸುವುದು). ನಮ್ಮ ಜ್ಞಾನದ ಕಲ್ಪನೆ,ಅರಿವಿನ ಕಲ್ಪನೆ ಎಲ್ಲವೂ ನೆನಪನ್ನು ಮಾತ್ರ  ಆಧರಿಸಿದ್ದು. ಅದರಂತೆ ನಾವು ಈ ಮೊದಲು ದೇವರನ್ನು, ಸತ್ಯವನ್ನು ಕಂಡಿಲ್ಲವಾದರೆ, ಕಂಡ ನೆನಪು ನಮ್ಮಲ್ಲಿಲ್ಲವಾದರೆ ಈಗ ಒಂದು ವೇಳೆ ದೇವರು, ಸತ್ಯ ನಮ್ಮ ಕಣ್ಣೆದುರಿಗೇ ಇದ್ದರೂ ಗುರುತಿಸಲಾರೆವು. ಹೀಗಿರುವಾಗನಾನು ಸತ್ಯವನ್ನು ಕಂಡೆ, ದೇವರನ್ನು  ಕಂಡೆ ಅನ್ನುವ ಮಾತುಗಳೇ ಸರಿಯಲ್ಲ, ಅದು  ಅಸಾಧ್ಯ ಅನ್ನುತ್ತಿರುವಂತಿದೆ ಘಟ್ಟಿವಾಳಯ್ಯ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಱಿವಿಂಗೆ ಸಿಕ್ಕದುದ ನೆನೆಯಲಮ್ಮಬಹುದೆ

ಅಯ್ಯಾ

ನೆನಹಿಂಗೆ ಬಾರದುದ ಕಾಂಬುದು ಹುಸಿ

ಮುಟ್ಟಿ ಪೂಜಿಸುವ ಮಾತು ಮುನ್ನವೇ ದೂರ

ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲನಿಲ್ಲು ಮಾಣು

ತಪ್ಪೊಪ್ಪುಗಳು

ಯವುದು->ಯಾವುದು
ಸಸತ್ಯವನ್ನು->ಸತ್ಯವನ್ನು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೀತಿಯ ಓ ಎಲ್ ಎನ್ ಅವರೆ, ಅರಿವು ಮತ್ತು ನೆನಹುಗಳನ್ನು ಜಿಡ್ಡು ಪರಿಭಾಷೆಯಲ್ಲಿ ಗ್ರಹಿಸಿದರೆ ಈ ವಚನ ಸ್ಪಷ್ಟವಾಗುತ್ತದೆ ಅನಿಸುತ್ತದೆ. ಅಂದರೆ, ದೇವರು ಮತ್ತು ಸತ್ಯ ಎಂಬುದು, ಎಂದಿಗೂ ನೆನೆಯಬಲ್ಲ, ಅರಿಯಬಲ್ಲ ವಿಷಗಳಲ್ಲ ಎಂದು ತಿಳಿಸಲು ಬೆಟ್ಟದ ಬಂಡೆಯೊಂದರ ಸಂಧಿಯಲ್ಲಿ ಅಕಸ್ಮಾತ್ ಕಂಡು, ಮಿಂಚಿ ಮರೆಯಾಗುವ ಹಾವಿನ ರೀತಿಯಲ್ಲಿ ದೇವರ ಕಾಣ್ಕೆ ಎಂದು ಜೆ.ಕೆ ಹೇಳುವುದು ಇಲ್ಲಿ ನೆನಪಾಯಿತು. ಹಾಗೆ ಕಂಡ ಹಾವನ್ನು ನಾವು ನೆನಹಿನ ಮೂಲಕ ಬರಮಾಡಿಕೊಳ್ಳಲು ಬರುವುದಿಲ್ಲ, ಅಥವಾ ಗುರುಪ್ರೇರಿತ ಅರಿವಿನಿಂದಲೂ ಸಂಪಾದಿಸಲು ಸಾಧ್ಯವಿಲ್ಲ. ಹಾಗಾಗಿ ಪೂಜೆಯ ಮಾತೂ ಅಸಾಧ್ಯ ಎಂದು ಇಲ್ಲಿ ಧ್ವನಿಸಲಾಗುತ್ತಿದೆ ಅನಿಸಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.