ಅಪಾಯದ ಅಂಚಿನಲ್ಲಿರುವ ಭಾಷೆಗಳು

0
ಅಪಾಯದ ಅಂಚಿನಲ್ಲಿರುವ ಭಾಷೆಗಳನ್ನು ಕುರಿತು ಭಾಷಾಶಾಸ್ತ್ರಜ್ಞರು ಕಳೆದ ಹತ್ತು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದಾರೆ. ಹಲವಾರು ಕಾರಣಗಳಿಂದ ಒಂದು ಭಾಷೆಯನ್ನಾಡುವ ಜನ ತಮ್ಮ ಭಾಷೆಯನ್ನು ಕೈಬಿಟ್ಟು ದ್ವಿತೀಯಭಾಷೆಯನ್ನು ಪರಸ್ಪರ ಬಳಸತೊಡಗಿದಾಗ ಮತ್ತು ತಂದೆತಾಯಂದಿರು ತಮ್ಮ ಮಕ್ಕಳೊಡನೆ ದ್ವಿತೀಯ ಭಾಷೆಯನ್ನು ಬಳಸತೊಡಗಿದಾಗ ಕ್ರಮೇಣ ಆ ಭಾಷೆಯನ್ನು ಮೊದಲಭಾಷೆಯಾಗಿ ಬಳಸುವ ಜನರೇ ಇಲ್ಲವಾಗಿ ಹೋಗುವ ಅಪಾಯ ಹುಟ್ಟುತ್ತದೆ. ಹೀಗಾದಾಗ ಭಾಷೆ ಸಂಪೂರ್ಣ ಕಣ್ಮರೆಯಾಗದಿದ್ದರೂ ಕೇವಲ ಬರವಣಿಗೆಯ ಭಾಷೆಯಾಗಿ, ಪ್ರಾಚೀನ ಪಠ್ಯಗಳ ಭಾಷೆಯಾಗಿ ಉಳಿದೀತು. ದ್ವಿಭಾಷಿಕತೆ, ನಗರೀಕರಣ, ಆಧುನೀಕರಣ, ವಲಸೆ, ಕೈಗಾರಿಕೀಕರಣ, ಮಕ್ಕಳು ಪ್ರಥಮ ಭಾಷೆಯಾಗಿ ಕಲಿಯದಿರುವುದು ಭಾಷೆಗೆ ಅಪಾಯ ಒದಗುವುದಕ್ಕೆ ಕಾರಣಗಳು. ಕನ್ನಡದ ಬಳಕೆಯಲ್ಲಿ ಈಗ ಈ ಲಕ್ಷಣಗಳು ಕಾಣಿಸುತ್ತಿವೆಯೇ? ಕೊನೆಯ ಪಕ್ಷ ದೊಡ್ಡ ನಗರಗಳಲ್ಲಿರುವ ಸುಶಿಕ್ಷಿತರ ಮಟ್ಟಿಗೆ ಈ ಅಂಶಗಳು ಪ್ರಧಾನವಾಗಿ ಕಾಣುತ್ತಿವೆಯಲ್ಲವೆ? ಈಗ ನಮ್ಮ ಕನ್ನಡದ ಬಗ್ಗೆ: ಕನ್ನಡಿಗರು ಪರಸ್ಪರ ಮಾತನಾಡುವುದಕ್ಕೆ ಹಿಂದಿಯನ್ನೋ ಇಂಗ್ಲಿಷನ್ನೋ ಬಳಸುತ್ತಿದ್ದೇವೆ. ಮಕ್ಕಳು ಇಂಗ್ಲಿಷ್ ಚನ್ನಾಗಿ ಕಲಿಯದಿದ್ದರೆ ಅವರು ಉದ್ಧಾರವಾಗುವುದಿಲ್ಲ ಎಂದು ಭಾವಿಸಿ ಮಕ್ಕಳೊಡನೆ ನಗರಪ್ರದೇಶದ ತಂದೆತಾಯಂದಿರು ಇಂಗ್ಲಿಷಿನಲ್ಲಿ ಮಾತನಾಡುವ ಅಭ್ಯಾಸ ಹೆಚ್ಚಾಗಿದೆ. ಪರೀಕ್ಷೆಯಲ್ಲಿ ಅಂಕ ಹೆಚ್ಚು ಬರುವುದಿಲ್ಲವೆಂದು, ಕೆಲಸ ದೊರೆಯುವುದು ಕಷ್ಟವೆಂದು ಮಕ್ಕಳು ಕನ್ನಡ ಕಲಿಯುವುದನ್ನು, ಬಳಸುವುದನ್ನು, ಮನೆಯಲ್ಲಿ ಶಾಲೆಯಲ್ಲಿ ಪ್ರತಿಬಂಧಿಸುವುದು ಹೆಚ್ಚಾಗುತ್ತಿದೆ. ಕನ್ನಡವನ್ನು ಮಾತ್ರ ಬಲ್ಲವರು ಕೌಶಲಹೀನರಾಗಿ, ಆಧುನಿಕ ಮಾರುಕಟ್ಟೆ ಆರ್ಥಿಕತೆಯ ಲಾಭಗಳಿಂದ ವಂಚಿತರಾಗಿ, ನಗರದ ಬದುಕಿಗೆ ಒಗ್ಗದವರಾಗಿ, ಅಸ್ಪೃಶ್ಯರಾಗಿ ಉಳಿದುಬಿಡುವ ವಾಸ್ತವ ಸೃಷ್ಟಿಯಾಗಿದೆ. ಭಾಷೆ ಅಸಮಾನತೆಯನ್ನು ಸೃಷ್ಟಿಸುವ ಉಪಕರಣವಾಗಿದೆ. ಭಾಷೆಗೂ ಸಂಸ್ಕೃತಿಗೂ ನಿಕಟ ಸಂಬಂಧವಿರುವುದರಿಂದ ಭಾಷೆಯೊಂದು ನಾಶವಾದರೆ ಸಮಾಜದ, ಸಂಸ್ಕೃತಿಯ ವಿನ್ಯಾಸಕ್ಕೂ, ವೈವಿಧ್ಯಕ್ಕೂ ಧಕ್ಕೆಯಾಗುತ್ತದೆ. ಭಾಷೆಯನ್ನಾಡುವ ಜನ ಕಡಮೆಯಾಗುವುದು ಮಾತ್ರವಲ್ಲದೆ ಭಾಷೆಯ ಬಳಕೆಯ ವಲಯಗಳು ಕಡಮೆಯಾಗುವುದು ಕೂಡ ಭಾಷೆಗೆ ಅಪಾಯವೇ. ಜಗತ್ತಿನಾದ್ಯಂತ ಈಗ ೪೯೭ ಭಾಷೆಗಳು ಅಪಾಯದ ಅಂಚಿನಲ್ಲಿವೆ. ಅವುಗಳಲ್ಲಿ ಕನ್ನಡವೂ ಒಂದು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.