ಇಂದು ಓದಿದ ವಚನ: ಚಿಂತೆ ಎಂಬ ಹೂವಿನ ಗಿಡ: ಘಟ್ಟಿವಾಳಯ್ಯ

2.333335

ಚಿಂತೆಯೆಂಬ ಹೂವಿನ ಗಿಡುವನು ನೋಡಿರೆ

ಹೊಲಗೇರಿಯಲಿ ಬಿತ್ತುವನೆ ನೋಡಿರೆ

ಜಲಶೇಖರನ ಉದಕರವನೆರದಡೆ

ಆಸೆಯೆಂಬ ಹೂವ ಕೊಯ್ದು ಕಾಮಂಗೇರಿಸುವೆನು

ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ

ಚಿಂತೆಯನ್ನು ಯಾವ ಯಾವದಕ್ಕೋ ಹೋಲಿಸುವುದು ನೋಡಿದ್ದೇವೆ. ಆದರೆ  ಇಲ್ಲಿ ಚಿಂತೆ ಅನ್ನುವುದು ಹೂವಿನ ಗಿಡವಾಗಿದೆ. ಅದೇ ಒಂದು ಆಶ್ಚರ್ಯವಲ್ಲವೇ. ಅದರ ಬಿತ್ತ  ಹೊಲಗೇರಿಯಲ್ಲಿ ಅನ್ನುವಾಗ ವಿವಿಕಾರಗೊಂಡ ಮನಸ್ಸೇ ಹೊಲೆಯ ಎಂಬ ವಚನಕಾರರ ಮಾತು  ನೆನೆದುಕೊಳ್ಳೋಣ. ಚಿಂತೆಯೆಂಬ ಹೂವಿನ ಗಿಡದ ಬೀಜ ಇರುವುದು ವಿಕಾರಗೊಂಡ ಮನಸ್ಸು ಎಂಬ ಹೊಲಗೇರಿಯಲ್ಲಿ.  ಜಲಶೇಖರ (ಮೋಡ? ನೀರು ಎಂದರೆ ಮನಸ್ಸು ಅನ್ನುವ  ಅರ್ಥವೂ ವಚನಗಳಲ್ಲಿರುವುದರಿಂದ  ಮನಸ್ಸುಅಥವಾ ದೇವರ ತೀರ್ಥ?) ನೀರು ಎರೆದರೆ ಆಸೆ ಎಂಬ ಹೂ ಬಿಟ್ಟಿತ್ತು. ಚಿಂತೆ ಅನ್ನುವ ಹೂವಿನ  ಗಿಡದಲ್ಲಿ ಬಿಡುವ  ಹೂವಿನ ಹೆಸರು ಆಸೆ! ಆ ಹೂವನ್ನು ನಾನು ಕಾಮನಿಗೆ ಅರ್ಪಿಸಿದೆ ಅನ್ನುತ್ತಾನೆ.

ವಿಕಾರವೂ ಚಿಂತೆಯೂ ಆಸೆಯೂ ಕಾಮದ ಅಲಂಕಾರಗಳು. ಇಲ್ಲೆಲ್ಲ ದೇವರಿಗೆ ಏನೂ ಕೆಲಸವಿದ್ದಂತಿಲ್ಲ. ಅವನ ಅಂಕಿತಕ್ಕೆ ವಿಶೇಷ ಅರ್ಥ ಪ್ರಾಪ್ತವಾಗುತ್ತದೆ
ಘಟ್ಟಿವಾಳಯ್ಯ ರೂಪಕಗಳ ಮುಖಾಂತರ ದೊಡ್ಡಮ ನೋವೈಜ್ಞಾನಿಕ ಸತ್ಯವನ್ನೂ ಹೇಳುತ್ತಿರುವಂತಿದೆ.

[ಈ ತಿಂಗಳ ಕೊನೆಯವರೆಗೆ ತಿರುಗಾಟದಲ್ಲಿರುತ್ತೇನೆ. ಆದ್ದರಿಂದ ಸಂಪದ ಗೆಳೆಯರಿಗೆಲ್ಲ ಈಗಲೇ ಹೇಳಿಬಿಡುತ್ತೇನೆ-ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷ ಕಳೆದ ವರ್ಷಕ್ಕಿಂತ ಸುಖ, ನೆಮ್ಮದಿ, ಶಾಂತಿ ತರಲಿ.]  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇದೇ ಭಾವಾರ್ಥದ ಒಂದು ಇಂಗ್ಲೀಷ್ ಪದ್ಯವೂ ಇದೆ ಅಲ್ವಾ ಸರ್.

ಹೊಸ ವರ್ಷ ಎಲ್ಲರಿಗೂ ಹೊಸ ಹರುಷವ ತರಲಿ
ಹೊಸ ವಿಚಾರಗಳ ಧಾರೆಯನ್ನ ಹರಿಸಲಿ ಎಂದು ಹಾರೈಸುವೆ :)
-ಸವಿತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಮಾನ್ ಸ್ವಾಮಿಯವರಿಗೆ ನಮಸ್ಕಾರಗಳು. ತಾವು ಉದ್ದರಿಸಿರುವ ವಚನವನ್ನೂ ತಾವು ನೀಡಿರುವ ವಿಶ್ಲೇಷಣೆಯನ್ನೂ ಓದಿದೆ. ಆದರೆ ನನಗೆ ವಚನಕ್ಕೆ ಬೇರೆಯದೇ ರೀತಿಯ ಅರ್ಥ ಕಾಣಿಸುತ್ತಿದೆ. ಅನ್ಯಥಾ ಭಾವಿಸದೆ, ನನ್ನ ಅರ್ಥೈಸುವಿಕೆ ತಪ್ಪಿದ್ದರೆ ದಯವಿಟ್ಟು ತಿಳಿಸುವುದು. ಕೆಲವೊಂದು ವಚನಗಳು ಆನೆಯಿದ್ದಂತೆ, ಅರ್ಥೈಸುವವರು ಕುರುಡರಂತೆ (ನನ್ನನ್ನೂ ಸೇರಿ). ನಮ ನಮಗೆ ತಿಳಿದಂತೆ ಅರ್ಥೈಸುತ್ತೇವೆ ಅಲ್ಲವೆ? ನನ್ನ ಅನಿಸಿಕೆ ಹೀಗಿದೆ:
ಈ ವಚನದಲ್ಲಿ ವಿರೋಧಾಭಾಸ ಅಡಗಿದೆ. ಹೇಗೆಂದರೆ:

ಚಿಂತೆಯನ್ನು ಚುಚ್ಚುವ ಮುಳ್ಳಿಗೆ ಹೋಲಿಸಬಹುದೇ ಹೊರತು ಆಹ್ಲಾದಕರ ಹೂವಿಗಲ್ಲ. ಹಾಗಾಗಿ ಚಿಂತೆ ಎಂಬ ಹೂವನ್ನು ನೋಡುವುದು ಸಾಧ್ಯವೇ? . ಇದು ಮೊದಲ ಸಾಲಿನ ಅರ್ಥ
ಹೊಲ ಹಾಗು ಹೊಲಗೇರಿ ಎರಡರಲ್ಲಿಯೂ ಹೊಲ ಎಂಬ ಪದ ಅಡಗಿದ್ದರೂ ಅವುಗಳ ಅರ್ಥಗಳೇ ಬೇರೆ. ಹೊಲದಲ್ಲಿ ಗಿಡ ಮರಗಳನ್ನು ಬೆಳೆಯುವುದು ಸರಿ. ಆದರೆ ಹೊಲಗೇರಿ (ವಾಸಸ್ಥಳ)ಯಲ್ಲಿ ಬೀಜ ಬಿತ್ತಿ ಬೆಳೆ ತೆಗೆಯುವುದು ಸಾಧ್ಯವೇ?. ಇದು ಎರಡನೇ ಸಾಲಿನ ಅರ್ಥ
ನೆಟ್ಟ ಗಿಡಮರಗಳಿಗೆ ನಾವು ಆದಷ್ಟೂ ಸಿಹಿ ನೀರನ್ನೇ ಎರೆದು ಬೆಳೆಸುತ್ತೇವೆ. ಆದರೆ ಉಪ್ಪು ನೀರನ್ನಲ್ಲ. ಇಲ್ಲಿ ಜಲಶೇಖರ ಎಂದರೆ ಸಮುದ್ರ ಎಂದು ತಿಳಿಯಬೇಕು. ಸಮುದ್ರದ ನೀರಿನಲ್ಲಿ ನೆಲದಲ್ಲಿ ಬೆಳೆಯುವ ಬೆಳೆಗಳು ಚಿಗುರುವುದು ಸಾಧ್ಯವೇ?. ಇದು ಮೂರನೆ ಸಾಲಿನ ಅರ್ಥ.
ಆಸೆ ಎಂಬುದನ್ನು ಹೂವಿಗೆ ಹೋಲಿಸಿದ್ದೇನೋ ಸರಿ. ಆದರೆ ಆಸೆ ಹಾಗೂ ಕಾಮ ಎರಡೂ ಒಂದೇ. ಎಂದಮೇಲೆ ಆಸೆಯೆಂಬ ಹೂವನ್ನು ಕಾಮನಿಗೆ ಮುಡಿಸುವುದು ಹೇಗೆ ಸಾಧ್ಯ? ಇದು ನಾಲ್ಕನೇ ಸಾಲಿನ ಅರ್ಥ.
ಇದನ್ನೇ ಕೊನೆಯಲ್ಲಿ "ಇಲ್ಲ, ಇಲ್ಲ" ಎಂದು ಸಾಧ್ಯವಾಗದು ಎಂಬುದಾಗಿ ಕವಿ/ವಚನಕಾರ ತಿಳಿಸಿರುತ್ತಾನೆ.
ಧನ್ಯವಾದಗಳು ಉತ್ತಮವಾದ ವಚನವೊಂದನ್ನು ನೀಡಿದ್ದಕ್ಕೆ.
ಎ.ವಿ. ನಾಗರಾಜು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಱಕಾರ ಪ್ರಯೋಗ ನೋಡಿ

ಚಿಂತೆಯೆಂಬ ಹೂವಿನ ಗಿಡುವನು ನೋಡಿರೆ

ಹೊಲಗೇರಿಯಲಿ ಬಿತ್ತುವನೆ ನೋಡಿರೆ

ಜಲಶೇಖರನ ಉದಕರವನೆಱದಡೆ

ಆಸೆಯೆಂಬ ಹೂವ ಕೊಯ್ದು ಕಾಮಂಗೇಱಿಸುವೆನು

ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.