ಇಂದು ಓದಿದ ವಚನ: ರಸವನರಿವುದಕ್ಕೆ: ಶಿವಲೆಂಕ ಮಂಚಣ್ಣ

0
ಇಂದು ಓದಿದ ವಚನ
ರಸವನರಿವುದಕ್ಕೆ ಜಿಹ್ವೆಯಾಗಿ ಬಂದು
ಗಂಧವನರಿವುದಕ್ಕೆ ನಾಸಿಕವಾಗಿ ಬಂದು
ರೂಪವನರಿವುದಕ್ಕೆ ಅಕ್ಷಿಯಾಗಿ ಬಂದು
ಶಬ್ದವನರಿವುದಕ್ಕೆ ಶ್ರೋತ್ರವಾಗಿ ಬಂದು
ಸ್ಪರ್ಶವನರಿವುದಕ್ಕೆ ತ್ವಕ್ಕಾಗಿ ಬಂದು
ಇಂತೀ ಘಟದ ಮಧ್ಯದಲ್ಲಿ ನಿಂದು
ಪಂಚವಕ್ತ್ರನಾದೆಯಲ್ಲ
ಈಶಾನ್ಯ ಮೂರ್ತಿ ಮಲ್ಲಿಕಾರ್ಜುನ ಲಿಂಗವೇ
[ಇದು ಶಿವಲೆಂಕ ಮಂಚಣ್ಣನ ವಚನ. ಈತ ಮೂಲತಃ ಕಾಶಿಯವನು, ಪಂಡಿತ ಪರಂಪರೆಗೆ ಸೇರಿದವನು. ಉರಿಲಿಂಗದೇವ ಎಂಬ ಮತ್ತೊಬ್ಬ ಶರಣನ ಗುರು. ಕಾಲ ಕ್ರಿಶ ೧೧೬೦. ಇವನ ೧೩೨ ವಚನಗಳು ಸಿಕ್ಕಿವೆ.
ಘಟ-ಮಡಕೆ, ಪಾತ್ರೆ, ದೇಹ; ಪಂಚವಕ್ತ್ರ-ಐದು ಮುಖಗಳಿರುವನು, ಶಿವ; ಸದ್ಯೋಜಾತ, ಅಘೋರ, ತತ್ಪುರುಷ, ವಾಮದೇವ, ಈಶಾನ ಇವು ಶಿವನ ಐದು ಮುಖಗಳ ಹೆಸರು] 
ದೇವರು ಹೊರಗೆ ಎಲ್ಲೋ ಇಲ್ಲ, ಇರುವುದು ನಮ್ಮೊಳಗೇ ಅನ್ನುವುದು ವಚನಕಾರರ ನಿಲುವು. ಇಲ್ಲಿಯೂ ಅಧೇ ಮಾತು ಇದೆ. ರುಚಿ ತಿಳಿಯುವ ನಾಲಗೆ, ವಾಸನೆ ಹಿಡಿಯುವ ಮೂಗು, ರೂಪವನ್ನು ಕಾಣುವ ಕಣ್ಣು, ಸ್ಪರ್ಶವನ್ನು ಅರಿಯುವ ಚರ್ಮವಾಗಿ ದೇವರು ಈ ಘಟದ ಮಧ್ಯದಲ್ಲಿ ಬಂದು ಪ್ರತ್ಯಕ್ಷನಾಗಿದ್ದಾನೆ.

ಅರಿವುದಕ್ಕೆ ಎಂದು ಮತ್ತೆ ಮತ್ತೆ ಬರುವ ಮಾತು ನೋಡಿ. ದೇವರಿಗೆ ರುಚಿ, ಪರಿಮಳ, ರೂಪ, ಶಬ್ದ, ಸ್ಪರ್ಶ ಇವೆಲ್ಲವೂ ಬೇಕು ಅನ್ನಿಸಿದ್ದರಿಂದ ದೇಹದೊಳಗೆ ಬಂದು ನೆಲೆಸಿದ್ದಾನೆ. ಅವನು ಹಾಗೆ ಬಯಸಿ ಬಂದು ನಿಂತು ಐದು ಇಂದ್ರಿಯಗಳೇ ತಾನಾದ ಕಾರಣ ಅವನು ಪಂಚಮುಖಿ ಆದ. ಶಿವನಿಗೆ ಐದು ಮುಖಗಳು ಅನ್ನುವ ಕಲ್ಪನೆಯನ್ನು ಮನುಷ್ಯನ ಐದು ಇಂದ್ರಿಯಗಳ ಸಾಮರ್ಥ್ಯದೊಂದಿಗೆ ಹೋಲಿಸಿರುವುದು ಚೆನ್ನಾಗಿದೆ.
ಇನ್ನು ಘಟ ಅನ್ನುವುದು ಮಡಕೆ. ಅದು ದುರ್ಬಲವೂ ಹೌದು, ತುಂಬಿಟ್ಟುಕೊಳ್ಳುವುದಕ್ಕೆ ಬಳಕೆಯಾಗುವುದೂ ಹೌದು. ಘಟದ ತುಂಬ ದೇವರೇ ಇರುವಾಗ ಇನ್ನು ಏನು, ಹೇಗೆ ತುಂಬಿಕೊಳ್ಳುವುದು! ಅಥವಾ ಕಾಣುವುದೆಲ್ಲವೂ ದೇವರ ಪ್ರಕಟರೂಪವೇ ಆಗಿದ್ದರೆ ನಮ್ಮೊಳಗೆ ತುಂಬಿಕೊಂಡದ್ದಕ್ಕೆಲ್ಲ ದೈವತ್ವದ ಗುಣ ಇದ್ದೇ ಇರುತ್ತದೆ!
ಇದು ಕೇವಲ ಬುದ್ಧಿಯ ಮಾತೋ? ’ಈ ಘಟಕ್ಕೆ ಬಂದು’ ಅನ್ನುವುದನ್ನು ನೋಡಿದರೆ ಶಿವಲೆಂಕ ಮಂಚಣ್ಣ ತನ್ನೊಳಗೇ ದೇವರನ್ನು ಅನುಭವಿಸಿ ಹೇಳಿರಬಹುದು ಅನ್ನಿಸುತ್ತದೆ. 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೋ ! ಇದನ್ನು ಮೊನ್ನೆ ಕೊ೦ಡ ಹೊಸ ವಚನದ ಪುಸ್ತಕದಲ್ಲಿ ಓದಿದ್ದೆ . ಅರ್ಥ ಆಗಿರಲಿಲ್ಲಾ. ನೀವು ಹೇಳಿದ ಮೇಲೆ ಸ್ವಲ್ಪ ಅರ್ಥ ಆಯ್ತು .
ಆದರೂ ಇದರ ಭಾವ ಇನ್ನು ತಿಳಿಬೇಕು.ಅಲ್ಲಮ್ಮ ಹೇಳಿದ ಹಾಗೇ ಎತ್ತಣ ಮಾಮರ ..ಎತ್ತಣ ಕೋಗಿಲೆ...ಇ೦ತಹ ಸ೦ಬ೦ಧ ನಮ್ಮ ಜೀವನದಲ್ಲಿ
ಸೃಷ್ಟಿ ಆಗುವುದಕ್ಕೆ ಇದೊ೦ದು ನಿದರ್ಶನ. ತು೦ಬಾ ಥ್ಯಾ೦ಕ್ಸ್..
ಅಲ್ಲಮ್ಮನ "ಭಾಷೆ ಮಹಾಪಾತಕ" ಅನ್ನುವ ವಚನವನ್ನು ಮೌನದಿ೦ದ ಮೆಲುಕಾಗ್ತಾಯಿದ್ದೇನೆ..
ಅದರ ಬಗ್ಗೆ ಬರೆಯುವೆ.
ಮುರಳಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದು ತಪ್ಪೊಪ್ಪು. ’ಅಲ್ಲಮ್ಮ’ ಅಲ್ಲ ಅದು ಅಲ್ಲಮ. ಅಲ್ಲಮಪ್ರಭು ಈಗಿನ ಶಿವಮೊಗ್ಗಜಿಲ್ಲೆಯ ಬಳ್ಳಿಗಾವಿಯಲ್ಲಿ ಹುಟ್ಟಿ ಮುಂದೆ ಕಲ್ಯಾಣಕ್ಕೆ ಹೋದ ಶಿವಶರಣ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದು ಓದಿದ ವಚನ
ರಸವನಱಿವುದಕ್ಕೆ ಜಿಹ್ವೆಯಾಗಿ ಬಂದು
ಗಂಧವನಱಿವುದಕ್ಕೆ ನಾಸಿಕವಾಗಿ ಬಂದು
ರೂಪವನಱಿವುದಕ್ಕೆ ಅಕ್ಷಿಯಾಗಿ ಬಂದು
ಶಬ್ದವನಱಿವುದಕ್ಕೆ ಶ್ರೋತ್ರವಾಗಿ ಬಂದು
ಸ್ಪರ್ಶವನಱಿವುದಕ್ಕೆ ತ್ವಕ್ಕಾಗಿ ಬಂದು
ಇಂತೀ ಘಟದ ಮಧ್ಯದಲ್ಲಿ ನಿಂದು
ಪಂಚವಕ್ತ್ರನಾದೆಯಲ್ಲ
ಈಶಾನ್ಯ ಮೂರ್ತಿ ಮಲ್ಲಿಕಾರ್ಜುನ ಲಿಂಗವೇ

ಇದು ಮೂಲರೂಪ. ಱಕಾರ ಇದ್ದ ಹಾಗೆ ಬೞಸಿದರೆ ನಮಗೆ ಅನುಕೂಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓ ಎಲ್ ಏನ್ ಅವರೇ ತುಂಬ ತುಂಬ ನನ್ನೀ. ..ಇಲ್ಲಿ ನಮ್ಮೊಂದಿಗೆ ನಿಮ್ಮ ವಚನಗಳ ಓದನ್ನು ಹಂಚಿ ಕೊಳ್ಳುತ್ತಿರುವದಕ್ಕೆ.
ದಯವಿಟ್ಟು ವಚನಗಳ ಮೇಲೆ / ವಚನಕಾರರ ಮೇಲೆ ನಿಮ್ಮ ಒಳನೋಟವನ್ನು ಇಲ್ಲಿ ಹಾಕುತ್ತಾ ಇರಿ.

ನಾನು ಕಂಡಂತೆ ವಚನಗಳಲ್ಲಿ ಘಟ ಅನ್ನುವ ಪದ ಮತ್ತೆ ಮತ್ತೆ ಬಳಕೆಯಾಗಿದೆ. ಇದರ ಅರ್ಥ ಮಡಕೆ ಅಷ್ಟೆ ಅಲ್ಲದೆ ಅದು ಒಂದು ರೂಪಕ ಪದವಾಗಿರಬಹುದು ಅನ್ನಿಸುತ್ತೆ. ಉಪನಿಷತ್ತುಗಳಲ್ಲಿ ಕಣ್ಣಾಡಿಸಿರುವವರು ಇದರ ಮೇಲೆ ಹೆಚ್ಚು ಬೆಳಕು ಚೆಲ್ಲಬಹುದು ಅಂತ ಕಾಯ್ತಾ ಇದ್ದೀನಿ.

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.