ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ

3.5
ದೊರಕೊಂಡಂತೆ ತಣಿದಿಹ ಮನದವರ ತೋರಾ
ದುಃಖಕ್ಕೆ ದೂರವಾಗಿಹರ ತೋರಾ
ಸದಾನಂದದಲ್ಲಿ ಸುಖಿಯಾಗಿಪ್ಪವರ ತೋರಾ
ಸಕಳೇಶ್ವರ ದೇವಾ 
ಎನಗಿದೇ ವರವು ಕಂಡಾ ತಂದೇ
[ಸಕಳೇಶ ಮಾದರಸ-೧೧೩೦. ಬಸವಣ್ಣನ ಹಿರಿಯ ಸಮಕಾಲೀನ. ಕಲ್ಲುಕುರಿಕೆ ಎಂಬ ಊರಿನ ಅರಸ. ತಂದೆಯ ಹೆಸರು ಮಲ್ಲಿಕಾರ್ಜುನ. ನಂತರದ ಕಾಲದಲ್ಲಿ ಬಂದ ಕೆರೆಯ ಪದ್ಮರಸ, ಕುಮಾರ ಪದ್ಮರಸ, ಪದ್ಮಣಾಂಕ ಎಂಬ ಕವಿಗಳು ಇವನ ವಂಶದವರು. ಮಾದರಸನ ೧೩೩ ವಚನಗಳು ದೊರೆತಿವೆ]
ಈ ವಚನವನ್ನು ಇವತ್ತು ಓದಿದಾಗ ’ದರ್ಶನ’ ಅನ್ನುವ ಮಾತಿನ ಇನ್ನೊಂದು ಅರ್ಥ ಹೊಳೆಯಿತು. 
ಏನು ದೊರೆಯುತ್ತದೆಯೋ ಅದರಲ್ಲೇ ತಣಿವನ್ನು, ತೃಪ್ತಿಯನ್ನು ಪಡೆದಿರುವವರನ್ನು ತೋರಿಸು. ದುಃಖಕ್ಕೆ ದೂರವಾಗಿರುವವರನ್ನು ತೋರಿಸು. ಸದಾ ಆನಂದದಲ್ಲಿ ಅಥವಾ ಸತ್ (ದೇವರು, ಸತ್ಯ) ಆನಂದದಲ್ಲಿ ಇರುವವರನ್ನು ತೋರಿಸು. ಇದೇ ನೀನು ಕೊಡಬಹುದಾದ ದೊಡ್ಡ ವರ.
ವಚನಕಾರ ಹೇಳುವ ಗುಣಗಳಿರುವವರು ಅಪೂರ್ವವೇ ಅಲ್ಲವೇ! ನೋಡುವುದಿದ್ದರೆ ಅಂಥವರನ್ನು ನೋಡಬೇಕು! ಆದರೆ ಅಂಥವರು ಎಷ್ಟು ಅಪೂರ್ವವೆಂದರೆ ಸ್ವತಃ ದೇವರೇ ನಮಗೆ ವರಕೊಟ್ಟು ಅವರು ಕಾಣುವ ಹಾಗೆ ಮಾಡಬೇಕು. ಅಂಥ ಗುಣಗಳು ಇರುವವರು ಇದ್ದರೆ ಅವರೇ ದೇವರು ತಾನೇ! ದೇವರಿಗೆ ಬಯಕೆ ಇಲ್ಲ, ದುಃಖವಿಲ್ಲ, ಅವನು ಸದಾನಂದ ಸ್ವರೂಪಿ ಅನ್ನುವ ಮಾತುಗಳು ಇವೆಯಲ್ಲ. ನಾವು, ನಮ್ಮಲ್ಲಿಲ್ಲದವನ್ನು, ಇರಬೇಕಾದವನ್ನು, ದುಃಖ ರಹಿತ, ತೃಪ್ತ, ಆನಂದ ಗುಣವನ್ನು ಒಟ್ಟಾಗಿಸಿ ದೇವರ ಕಲ್ಪನೆ ಮಾಡಿಕೊಂಡಿದ್ದೇವೆ. ಕಲ್ಪನೆಯ ದೇವರನ್ನು ಕಾಣುವುದಕ್ಕಿಂತ ಈ ಗುಣ ಇರುವ ಮನುಷ್ಯರನ್ನೇ ಕಂಡರೆ ಅದೇ ದೊಡ್ಡದು. 
’ದರ್ಶನ’ ವೆಂದರೆ ಇದೇ ಅಲ್ಲವೇ? ದೈವತ್ವವನ್ನು ಕಾಣುವುದು, ಅದೂ ನಮ್ಮ ಜೊತೆಯಲ್ಲೇ ಇರುವ ಮನುಷ್ಯರಲ್ಲಿ.
ಗೆಳೆಯ, ಕನ್ನಡದ ಮುಖ್ಯ ಕವಿ ಎಸ್. ಮಂಜುನಾಥ, ಇತ್ತೀಚೆಗೆ ’ಮಗಳು ಸೃಜಿಸಿದ ಸಮುದ್ರ’ ಎಂಬ ಕವನ ಸಂಕಲನ ತಂದವರು, ಒಮ್ಮೆ ಹೇಳಿದರು. ’ಶ್ರೀಮಂತಿಕೆ ಅಂದರೆ ಏನು? ನನಗೆ ಬೇಕಾದದ್ದು ಬೇಕಾದಾಗ ಸಿಕ್ಕರೆ ನಾನೇ ಶ್ರೀಮಂತ. ಹಸಿವಾದಾಗ ಊಟ, ಮಾತಾಡಿಸಬೇಕು ಅನ್ನಿಸಿದಾಗ ಗೆಳೆಯರು, ಬಿಸಿಲಲ್ಲಿ ನಡೆಯುವಾಗ ನೆರಳು, ದಣಿದಾಗ ನಿದ್ರೆ-ಬೇಕಾದಾಗ ಸಿಕ್ಕರೆ ಸಾಕು. ಬೇಕಾದದ್ದು, ಬೇಕಾದ ಹೊತ್ತಿನಲ್ಲಿ ಯಾರಿಗೆ ದೊರೆಯುವುದೋ ಅವರೇ ಶ್ರೀಮಂತರು.’ ಬೇಡವಾದದ್ದನ್ನೆಲ್ಲ ಬೇಕು ಅಂದುಕೊಳ್ಳುತ್ತಾ ಅವನ್ನು ಪಡೆಯುವುದಕ್ಕೆ ’ಶ್ರೀಮಂತ’ರಾಗಲು ಹೆಣಗುತ್ತೇವಲ್ಲವೇ. ಮಾದರಸ ಹೇಳುವಂಥವರು ಕಂಡರೆ ಪುಣ್ಯ. ನಾವೇ ಹಾಗಾದರೆ ಬಲು ದೊಡ್ಡ ಭಾಗ್ಯ. 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪ್ರಿಯ ಒ.ಎಲ್.ಎನ್ ಅವರಲ್ಲಿ
ನಮಸ್ಕಾರ. ದಯೆಯಿಟ್ಟು ’ಇಂದು ಓದಿದ ವಚನ’ ತಪ್ಪದೇ ಪ್ರಕಟಿಸಿ. ಬಸವ, ಅಕ್ಕ ಅಲ್ಲಿ ಇಲ್ಲಿ ಸಿಕ್ಕಬಹುದಾದರೂ ಇಂಥ ವಚನಕಾರರು ಸುಲಭಕ್ಕೆ ಸಿಕ್ಕುವವರಲ್ಲ. ಅಲ್ಲಮನನ್ನು ನೀವು ತೆರೆದು ತೋರಿಸುವ ಹಾಗೆ ಸ್ವಂತ ಓದಿಗೆ ಅವನು ದಕ್ಕುವುದಿಲ್ಲ. -ಡಿ.ಎಸ್.ರಾಮಸ್ವಾಮಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಎಲ್‌ಎನ್‌ರವರೆ,
ಅಪೂರ್ವ ವಚನಗಳ ಜತೆಗಿರುವ ನಿಮ್ಮ ಟಿಪ್ಪಣಿಯೂ ಅಪೂರ್ವ! ವಚನ ದಕ್ಕುವುದಕ್ಕೆ ತುಂಬಾ ನೆರವಿಗೆ ಬರುತ್ತದೆ.
ಥ್ಯಾಂಕ್ಸ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಾಮಿಗಳೇ ,
ಶರಣು. ಹದುಳವೇ?
ನಿಮ್ಮನ್ನು ಮತ್ತೆ ಇಲ್ಲಿ ನೋಡಿ ಸಂತಸವಾಯಿತು .
ಹೊಸ ಹೊಸ ಹೊಳಹುಗಳಿಗೆ ಕಾದಿಹೆವು.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಶ್ರೀಕಾಂತ್‍ರವರೇ,
ಆರೋಗ್ಯವೆಂದು ಭಾವಿಸುತ್ತೇನೆ. ನಿಮ್ಮನ್ನು ಅಥವಾ ಧಾರವಾಡದವರೆಂದು ನಾವು ಕೆಣಕದಿದ್ದರೆ ನೀವು ನಮ್ಮ ಲೇಖನಗಳನ್ನೇ ಓದುವುದಿಲ್ಲ. :) ;) :D

ಹದುಳದೊಂದಿಗೆ
ಕನ್ನಡಕಂದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಗೇನಿಲ್ರೀ ...

ಎಲ್ಲ ಲೇಖನಗಳು ನನ್ನ ತಲೆಗೆ ಹೋಗಬೇಕಲ್ಲ ? ನನ್ನ ಹಳೆಗನ್ನಡ / ವ್ಯಾಕರಣ ಜ್ಞಾನವು ಅಷ್ಟಕ್ಕಷ್ಟೇ . ಗೊತ್ತಿಲ್ಲದ್ದರಲ್ಲಿ ತಲೆ ಹಾಕುವುದು ಹೇಗೆ ? ಹಾಕಲೂಬಾರದು ಕೂಡ.

ಬಾಕಿಯಂತೆ

ದೊರಕೊಂಡಂತೆ ತಣಿದಿಹ ಮನದವನಾಗಿರ್ಪೆನು !
ದುಃಖಕ್ಕೆ ದೂರವಾಗಿಹೆನು !!
ಸದಾನಂದದಲ್ಲಿ ಸುಖಿಯಾಗಿಪ್ಪೆನು !!!

:)

ಕುಶಲ ವಿಚಾರಿಸಿದ್ದಕ್ಕೆ ಧನ್ಯವಾದಗಳು.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದೊರಕೊಂಡಂತೆ ತಣಿದಿಹ ಮನದವರ ತೋಱಾ
ದುಃಖಕ್ಕೆ ದೂರವಾಗಿಹರ ತೋಱಾ
ಸದಾನಂದದಲ್ಲಿ ಸುಖಿಯಾಗಿಪ್ಪವರ ತೋಱಾ
ಸಕಳೇಶ್ವರ ದೇವಾ
ಎನಗಿದೇ ವರವು ಕಂಡಾ ತಂದೇ

ನನ್ನ ಮನವಿ ಎಂದಿನಂತೆ. ಱಕಾರ ಉೞಿಸಿಕೊಳ್ಳಿ. ಉೞಿದಂತೆ ಒಳ್ಳೆಯ ವಚನ. ಮನುಷ್ಯ ಹೇಗೆ ನೆಮ್ಮದಿಯಿಂದ ಇರಬಹುದು ಎಂದು ಈ ವಚನ ಹೇೞುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆದರೂ ನನ್ನ ಲೇಖನಗಳನ್ನು ಒದ್ತಾ ಇರಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.