ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ

3.714285

ಕಾಲಿಲ್ಲದ ಕುದುರೆ

ಕಾಲಿಲ್ಲದ ಕುದುರೆಯೇರಿ ರಾವುತಿಕೆಯಮಾಡಬೇಕು
ಕಡಿವಾಣವಿಲ್ಲದ ಕುದುರೆಯ ನಿಲ್ಲಿಸಬೇಕು
ಕಾಲಿಲ್ಲದ ಕುದುರೆಯ ಬೀದಿಯಲ್ಲಿಕುಣಿಸಾಡಬಲ್ಲಡೆ
ಇಹಲೋಕಕ್ಕೆ ವೀರನೆಂಬೆ ಪರಲೋಕಕ್ಕೆ ಧೀರನೆಂಬೆ
ಆಮುಗೇಶ್ವರಲಿಂಗಕ್ಕೆ ಅಧಿಕನೆಂಬೆ

[ಅಮುಗೆ ರಾಯಮ್ಮನ ವಚನ ಇದು. ಅಮುಗೆ ರಾಯಮ್ಮನ ೧೧೫ ವಚನಗಳು ದೊರೆತಿವೆ. ವರದಾನಿಯಮ್ಮ ಎಂಬುದು ಇವಳ ಇನ್ನೊಂದು ಹೆಸರು. ಅಮುಗೆ ದೇವಯ್ಯ ಎಂಬಾತನ ಹೆಂಡತಿ. ಈ ಗಂಡಹೆಂಡಿರು ಸೊನ್ನಲಾಪುರದಲ್ಲಿ ನೇಯ್ಗೆಯ ಕೆಲಸಮಾಡಿಕೊಂಡಿದ್ದವರು. ಬದುಕಿನ ವಿವರ ಹೆಚ್ಚು ತಿಳಿಯದು. ಅಮುಗೆ ರಾಯಮ್ಮ ಎಂಬ ಹೆಸರಿನ ಇನ್ನೊಬ್ಬ ವಚನಕಾರ್ತಿ, ರಾಯಸದ ಮಂಚಣ್ಣನ ಹೆಂಡತಿ ಕೂಡ ಇದ್ದಾಳೆ. ಈ ಹೆಸರಿನವರು ಇಬ್ಬರೋ ಒಬ್ಬರೋ ಅನ್ನುವ ಬಗ್ಗೆ ವಿದ್ವಾಂಸರಲ್ಲಿ ಚರ್ಚೆ ನಡೆದಿದೆ. ರಾಯಮ್ಮ ಎಂಬ ಹೆಸರಿನ ಇನ್ನೂ ಇಬ್ಬರು ವಚನಕಾರ್ತಿಯರು ಇದ್ದಾರೆ.]  

ಇಲ್ಲಿರುವ ಸಂಕೇತ ತೀರ ಸ್ಪಷ್ಟವಾಗಿಯೇ ಇದೆ. ಕುದುರೆಯ ಸವಾರಿಕಷ್ಟವಿರಬಹುದು ಆದರೆ ಅಸಾಧ್ಯವಲ್ಲ. ಕಲಿತುಕೊಂಡರೆ ಯಾರು ಬೇಕಾದರೂ ರಾವುತರಾಗಬಹುದು. ಕಲಿತುಕೊಂಡರೆಯಾರು ಬೇಕಾದರೂ ಕುದುರೆಯನ್ನುಕುಣಿಸಬಹುದು. ಓಡುತ್ತಿರುವ ಕುದುರೆಯನ್ನು ನಿಲ್ಲಿಸಲೂಬಹುದು.

ಆದರೆ ಮನಸ್ಸು ಅನ್ನುವುದು ಕಾಲಿಲ್ಲದಕುದುರೆ, ಅದರ ಸವಾರಿ (ರಾವುತಿಕೆ)ಸಾಧ್ಯವಾಗುವುದಾದರೆ


ಮನಸ್ಸು ಅನ್ನುವುದು ಕಾಲಿಲ್ಲದ ಕುದುರೆ,ಆದ್ದರಿಂದಲೇ ಎತ್ತ ಹೋಗುವುದೆಂದು ಅರಿವಾಗದು.ಅದನ್ನು ನಿಲ್ಲಿಸಲು ಸಾಧ್ಯವಾಗುವುದಾದರೆ,


ಮನಸ್ಸು ಅನ್ನುವುದು ಕಾಲಿಲ್ಲದ ಕುದುರೆ,ಅದು ನಮ್ಮಿಚ್ಛೆಯಂತೆ ಬೀದಿಯಲ್ಲಿ, ಇತರರಿಗೂ ತಿಳಿಯುವಂತೆ, ಕುಣಿಸಲು ಆಗುವುದಾದರೆ,

ಆಗ ಅಂಥವರನ್ನು ಈ ಲೋಕದ ವೀರರು, ಪರಲೋಕದ ವಿವೇಕಿಗಳು (ಧೀರ-ಧೀ=ವಿವೇಕ, ಬುದ್ಧಿ) ಎನ್ನುತ್ತೇನೆ ಅನ್ನುವುದು ರಾಯಮ್ಮನ ಮಾತು.

ನಾವು ಬಹಳಷ್ಟು ಜನ ಮನಸ್ಸಿನ ಕುದುರೆಯ ಸವಾರರಲ್ಲ, ಕುದುರೆಗೆ ವಶರಾಗಿರುವುದು ಕೂಡ ಗೊತ್ತಿರದಂತೆ ಅದರಿಚ್ಛೆಯಂತೆ ನಡೆಯುತ್ತಾ ಸ್ವತಂತ್ರರೆಂಬ, ಧೀರರೆಂಬ, ವೀರರೆಂಬ ಭ್ರಮೆಯಲ್ಲಿರುವವರು,ಅಲ್ಲವೇ?

ಈ ವಚನದೊಂದಿಗೆ ಅಲ್ಲಮನ ಸುಪ್ರಸಿದ್ಧವಾದ ಕೊಟ್ಟ ಕುದುರೆಯನೇರಬಹುದುಅನ್ನುವ ವಚನವನ್ನು ಜ್ಞಾಪಿಸಿಕೊಳ್ಳಿ. ಅಲ್ಲೂ ಕುದುರೆಯ ರೂಪಕ ಬಳಕೆಯಾಗಿದೆ, ಬೇರೆಯರೀತಿಯಲ್ಲಿ, ಬೇರೆಯ ಉದ್ದೇಶಕ್ಕೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (7 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಈ ವಚನ ತುಂಬಾ ಸರಳ, ನೇರ ಮತ್ತು ಬೇಗ ಅರ್ಥ ಆಗೋಹಾಗಿದೆ. ಇಲ್ಲಿ ಅರ್ಥೈಸಿದ್ದಕ್ಕೆ ಥ್ಯಾಂಕ್ಸ್. ಧೀರ ಅನ್ನುವುದಕ್ಕೆ ಸ್ಥಿರಚಿತ್ತನಾದವನು ಅನ್ನುವ ಅರ್ಥವೂ ಇದೆ. ಬಹುಶ: ಅದೇ ಇಲ್ಲಿ ಹೆಚ್ಚು ಪ್ರಸ್ತುತವಾಗಬಹುದೇನೋ.

"ಏರಿದವನು ಚಿಕ್ಕವನಿರಬೇಕು"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಲಿಲ್ಲದ ಕುದುರೆಯೇಱಿ ರಾವುತಿಕೆಯಮಾಡಬೇಕು
ಕಡಿವಾಣವಿಲ್ಲದ ಕುದುರೆಯ ನಿಲ್ಲಿಸಬೇಕು
ಕಾಲಿಲ್ಲದ ಕುದುರೆಯ ಬೀದಿಯಲ್ಲಿಕುಣಿಸಾಡಬಲ್ಲಡೆ
ಇಹಲೋಕಕ್ಕೆ ವೀರನೆಂಬೆ ಪರಲೋಕಕ್ಕೆ ಧೀರನೆಂಬೆ
ಆಮುಗೇಶ್ವರಲಿಂಗಕ್ಕೆ ಅಧಿಕನೆಂಬೆ

ನೋಡಿ. ನಾನು ಹೇೞಿದಂತೆ ಶಿವಶರಣರ ಕಾಲಕ್ಕೆ ಱಕಾರ ಇನ್ನೂ ಪ್ರಚುರವಾಗಿತ್ತು. ದಯವಿಟ್ಟು ಱಕಾರವನ್ನು ವಚನಗಳಲ್ಲಿ ಇದ್ದ ಹಾಗೆ ಉೞಿಸಿಕೊಳ್ಳಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಾಮಿಯವರೇ,
ವಚನ ಮತ್ತು ವಿವರಣೆ ಎರಡೂ ಓದಿ ನಲಿವಾಯ್ತು :) ಕುದುರೆ ರೂಪಕದ ಬಳಕೆಯ ಬಗ್ಗೆ ಕಗ್ಗದೆಳೆಯಿಂದ...

ದೇಹವೆಂಬುದು ಕುದುರೆಯಾತ್ಮನದರಾರೋಹಿ|
ವಾಹನವನುಪವಾಸವಿರಿಸೆ ನಡದೀತೆ?||
ರೋಹೆ ಜಾಗ್ರತೆದಪ್ಪೆ ಯಾತ್ರೆ ಸುಖ ಸಾಗೀತೆ?|
ಸ್ನೇಹವೆರಡಕಮುಚಿತ- ಮಂಕುತಿಮ್ಮ||

ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ |
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ||
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು |
ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ |

-ಸವಿತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.