ಪಯಣ

0

ಸ್ವಲ್ಪ ದಿನಗಳ ಹಿಂದೆ ಕೆಲಸದಮೇಲೆ ನಾನು ಉತ್ತರ ಕರ್ನಾಟಕದ ಹೊಸಪೇಟೆಗೆ ಹೋಗಬೇಕಾಯಿತು. ಒಂದು ಹೊಸಾ ತಂತ್ರಾಂಶವನ್ನ ಅಲ್ಲಿಯ ಕಂಪನಿಯಲ್ಲಿ ಅಳವಡಿಸಿಕೊಡಬೇಕಾಗಿತ್ತು. ನಾನು ನಮ್ಮ ಕಾರ್ಯಾಲಯದಲ್ಲಿ ಅದನ್ನು ಒಮ್ಮೆ ಪರೀಕ್ಷಿಸಿದ್ದರೂ ಆ ವಾತಾವರಣಕ್ಕೆ, ಆ ಕಂಪನಿಯವರ ಬೇಡಿಕೆಗೆ ಈ ತಂತ್ರಾಂಶ ಹೊಂದಿಕೆಯಾಗುತ್ತದೋ ಇಲ್ಲವೋ ಅನ್ನುವ ಅನುಮಾನ...

ನಾನು ನನ್ನ ಆಫೀಸನ್ನ ಸಂಜೆ ಸರಿ ಸುಮಾರು ೫.೪೫ಕ್ಕೆ ಬಿಟ್ಟು ಮನೆಗೆ ಬಂದೆ. ಇನ್ನೂ ಹೊರಡುವ ತಯಾರಿ ಆಗಿಲ್ಲದ ಕಾರಣ ಸ್ವಲ್ಪ ಗಡಿಬಿಡಿಯಾಗುತ್ತಿತ್ತು. ಮನೆಗೆ ಬರುವ ಮುನ್ನ ಗಟ್ಟಿ ಅವಲಕ್ಕಿ, ಸ್ಲೈಸ್, ಮತ್ತೆ ಖರ್ಜೂರವನ್ನ ಮನೆಗೆ ತಂದಿದ್ದೆ. ನನ್ನ ಮನೆಯಿಂದ ಹೊರಟು ಕೆಂಪೇಗೌಡ ಬಸ್ ನಿಲ್ದಾಣವನ್ನ ತಲುಪಲು ಕನಿಷ್ಟಪಕ್ಷ ೧ ಘಂಟೆಯಾದರೂ ಬೇಕು. ಬೆಂಗಳೂರಿನ ಅದರಲ್ಲೂ ಬನ್ನೆರುಘಟ್ಟ ರಸ್ತೆಯ ವಾಹನದಟ್ಟಣೆಯಲ್ಲಿ ಸಿಕ್ಕಿಕೊಂಡರೆ ಬಿಡಿಸಿಕೊಳ್ಳಲು ಹರಸಾಹಸ ಮಾಡಬೇಕು. ಹಾಗಾಗಿ ಅಡುಗೆ ಮಾಡಿಕೊಂಡು ಊಟಮಾಡಿ ಹೊರಡಲು ನನ್ನ ಬಳಿ ಸಮಯದ ಅಭಾವವಿತ್ತು. ಹೇಗಿದ್ದರೂ ಆಗತಾನೆ ತಂದಿದ್ದ ಅವಲಕ್ಕಿ ಕೈಗೆ ಸಿಕ್ಕಿದ್ದರಿಂದ ಅದನ್ನೇ ಸ್ವಲ್ಪ ನೆನೆಸಿಕೊಂಡು ಮೊಸರಿನೊಂದಿಗೆ ತಿಂದು ಬಸ್ಸನ್ನು ಹುಡುಕುತ್ತಾ ಹೊರಟೆ. ನಾನಿರುವ ಮನೆಯ ಹತ್ತಿರದಲ್ಲಿ ಯಾವುದೇ Busstop ಇಲ್ಲದ್ದರಿಂದ ನಡೆದುಕೊಂಡು ಬನ್ನೇರುಘಟ್ಟ ಮುಖ್ಯರಸ್ತೆಗೆ ಬಂದೆ. ರಾತ್ರಿ ೧೦.೪೫ ಕ್ಕೆ ಗಂಗಾವತಿಗೆ ಹೊರಡುವ ಐರಾವತ ಬಸ್ಸನ್ನು ನಾನು ಹತ್ತಬೇಕಿತ್ತು. ನಾನು ಕೆಂಪೇಗೌಡ ನಿಲ್ದಾಣದ ಬಸ್ಸನ್ನು ಹತ್ತಿದಾಗಲೇ ೯ ಘಂಟೆ ಸಮಯವಾಗಿತ್ತು. ಮನದಲ್ಲೇ Traffic jamನ ಭಯಂಕರ ರೂಪವನ್ನ ನೆನೆಸಿಕೊಂಡು ನಾನು ಅದರಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಐರಾವತವನ್ನೇರಿದರೆ ಸಾಕೆನ್ನಿಸಿತ್ತು.

ಗ್ರಾಮಾಂತರ ಬಸ್ ನಿಲ್ದಾಣಕ್ಕೆ ನಾನು ಬಂದಾಗ ಇನ್ನೂ ಘಂಟೆ ೧೦ರ ಸಮಯ. ೪೫ ನಿಮಿಷ ಸಮಯವಿದ್ದದ್ದರಿಂದ ಅಲ್ಲೇ ಕುಳಿತುಕೊಳ್ಳುವ ಆಸನ ಖಾಲಿ ಇದ್ದದ್ದನ್ನು ಹುಡುಕಿ ಕುಳಿತೆ. ನಾನೇನೋ ಸಮಯಕ್ಕೆ ಮುಂಚಿತವಾಗಿ ಬಂದು ನಿರಾಳವಾಗಿ ಕುಳಿತಿದ್ದೆ. ಆದರೆ ನನ್ನ ಸುತ್ತ ಮುತ್ತ ಸ್ವಲ್ಪ ತಡವಾಗಿ ಬಂದವರ ಮುಖದಲ್ಲಿ ತಮ್ಮ ಬಸ್ಸು ತಪ್ಪಿಹೋದಬಗ್ಗೆ ಬೇಸರ, ಗಂಡ ಹೆಂಡತಿಗೆ ಹೆಂಡತಿ ಗಂಡನಿಗೆ ಪರಸ್ಪರ ದೂಷಿಸುತ್ತಿದ್ದ ದೃಷ್ಯ, ಆ ಜನಜಂಗುಳಿಯ ನಡುವೆ ಕುಡುಕರ ಕಾಟ, ಅವನನ್ನು ಬೆನ್ನಟ್ಟಿ ಬರುತ್ತಿದ್ದ ಪೋಲೀಸ್ ಪೇದೆಗಳು, ಭಿಕ್ಷುಕಿಯೊಬ್ಬಳು ತಾನು ಸಾಕಿದ ನಾಯಿಯ ಜೊತೆಯಲ್ಲಿ ತಿನ್ನುತ್ತಿದ್ದ Tigerಬಿಸ್ಕತ್ತಿನ ದೃಷ್ಯ ನನ್ನ ಸುತ್ತ ಸುಳಿದಾಡುತ್ತಿದ್ದವು. ಮನೆಯಿಂದ, ಮನೆಯವರಿಂದ ತಿರಸ್ಕಾರಕ್ಕೊಳಗಾದ ಹಲವಾರುಮಂದಿ ಇದೇರೀತಿ ರೈಲ್ವೇ ನಿಲ್ದಾಣದಲ್ಲೋ, ಬಸ್ ನಿಲ್ದಾಣದಲ್ಲೋ ತಮ್ಮ ಆಶ್ರಯವನ್ನ ಕಾಣಬೇಕಾಗುತ್ತದೆ. ಅದೇ ವಿಚಾರವನ್ನ ಯೋಚಿಸುತ್ತಿದ್ದಂತೆ ಅಲ್ಲಿ ಸಂತಸದ ಕ್ಷಣಗಳೂ ಕಂಡು ಬಂದವು. ಎಂದೋ ಭೇಟಿಯಾಗಿ ಸ್ನೇಹಿತರಾಗಿದ್ದು ನಂತರ ಜೀವನದ ಓಟದಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗದೇ ಇದ್ದ ಸ್ನೇಹಿತರು ಆ ನಿಲ್ದಾಣದಲ್ಲಿ ಭೇಟಿಯಾಗಿದ್ದರು. ಪರಸ್ಪರ ಹಸ್ತಲಾಘವಮಾಡುತಾ ಒಬ್ಬರನ್ನೊಬ್ಬರು ಖುಷಿಯಾಗಿ ಮಾತನಾಡಿಸುತ್ತಾ ಇದ್ದದ್ದನ್ನು ಕಾಣುತ್ತಿದ್ದಂತೇ ನಾ ಕಾದು ಕುಳಿತಿದ್ದ ಬಸ್ಸು ನಿಲ್ದಾಣಕ್ಕೆ ಬಂದು ನಿಂತಿತು.

ಹೊಸಪೇಟೆಗೆ ಇದು ನನ್ನ ೨ನೇ ಪಯಣ. ಆ ಸ್ಥಳದ ಪರಿಚಯ ಹೆಚ್ಚಾಗಿ ಇರದ ಕಾರಣ ಆ ಬಸ್ಸಿನ ನಿರ್ವಾಹಕನನ್ನ ಸ್ವಲ್ಪ ಹೊಸಪೇಟೆ ಬಂದಾಗ ನನ್ನನ್ನು ಎಚ್ಚರಿಸುವಂತೆ ಕೇಳಿಕೊಂಡು ನನ್ನ ಜಾಗಕ್ಕೆ ಹೋಗಿ ಕುಳಿತೆ. ಬಸ್ಸಿನ ಒಳಗಡೆ ಕನ್ನಡ ಚಲನಚಿತ್ರಗಳ ಗಾನಸುಧೆ ಹರಿದು ಬರುತ್ತಿತ್ತು. ಆದರೆ ಅದನ್ನು ಆಸ್ವಾದಿಸಲು ಬಸ್ಸಿನ ಒಳಗೆ ಕುಳಿತಿದ್ದ ಇಬ್ಬರು ಆಂಗ್ಲಭಾಷಿಗ ಕನ್ನಡಿಗರು ಅವಕಾಶ ನೀಡುತ್ತಿರಲಿಲ್ಲ. ದಾರಿಯುದ್ದಕ್ಕೂ ಪರಸ್ಪರ ಆಂಗ್ಲಭಾಷೆಯಲ್ಲೇ ಸಂಭಾಷಿಸುತ್ತಾ ತಮ್ಮ ದೂರವಾಣಿಯಲ್ಲಿ ಕನ್ನಡ ಮಾತನಾಡುತ್ತಾ (ಅಲ್ಲಾದರೂ ಕನ್ನಡದಲ್ಲಿ ಮಾತನಾಡಿದರೆನ್ನುವುದೇ ಸಮಾಧಾನ) ಕಿರಿಕಿರಿ ಉಂಟುಮಾಡುತ್ತಿದ್ದರು. ಅವರಿ ಕಿರಿಕಿರಿ ತಾಳಲಾಗದೇ ನಾನು ನನ್ನ ಕಿವಿಗೆ ಎಫ್ ಎಂ ಅನ್ನು ಚುಚ್ಚಿಕೊಂಡೆ. ರಾತ್ರಿಯ ಹೊತ್ತು ಬಸ್ಸು ದಾರಿಯನ್ನು ಸವೆಸುತ್ತಾ ಮುಂದೆಸಾಗಿತ್ತು. ಎಲ್ಲಾ ಸಹಪ್ರಯಾಣಿಗರು ನಿದ್ರಾದೇವಿಯ ವಶವಾದರೂ ನಾನವರ ಗೊರಕೆ ಸದ್ದಿಗೆ ನಿದ್ರಿಸಲಾಗದೇ ನಿದ್ರಿಸುವ ಪ್ರಯತ್ನ ಮಾಡುತ್ತಿದ್ದೆ. ಅಂತೂ ಇಂತೂ ಕತ್ತಲು ಕಳೆದು ಬೆಳಗಿನ ಚುಮುಚುಮು ಬೆಳಕಿನೊಂದಿಗೆ ಹೊಸಪೇಟೆ ನನ್ನನ್ನು ಸ್ವಾಗತಿಸಿತು.

ಬಸ್ ನಿಲ್ದಾಣದಿಂದ ಮೊದಲೇ ಕಾದಿರಿಸಿದ್ದ ಪ್ರಿಯದರ್ಶಿನಿ ಹೋಟೆಲಿಗೆ ನಡೆದುಕೊಂಡು ಬಂದು ನಿತ್ಯಕರ್ಮಗಳನ್ನು ಮುಗಿಸಿ ನಾ ತಂತ್ರಾಂಶವನ್ನ ಅಳವಡಿಸಿಕೊಡಬೇಕಾದ ಕಂಪನಿಗೆ ಹೊರಟೆ. ಮೊದಲೇ ಸ್ವಲ್ಪ ತಡವಾಗಿದ್ದದ್ದರಿಂದ ಗಡಿಬಿಡಿಯಲ್ಲಿ ಬಸ್ ನಿಲ್ದಾಣದತ್ತ ಹೆಜ್ಜೆ ಹಾಕುತ್ತಿದ್ದೆ. ಹಿಂದಿನಿಂದ ಒಂದು ಧ್ವನಿ ನನ್ನ ಕೂಗಿದಂತಾಯಿತು. ಪರಿಚಯವಿಲ್ಲ ಈ ಊರಿನಲ್ಲಿ ನನ್ನ ಯಾರಾದರೂ ಏತಕ್ಕಗಿ ಕರೆದಾರು ? ಅವರು ಯಾರನ್ನೋ ಕರೆದಿರಬೇಕೆಂದು ಮುಂದೆ ಸಾಗಿದೆ. ನಂತರ ಹಿಂದಿನಿಂದ ಬಂದ ಬಾಲಕನೊಬ್ಬ ತನ್ನ ಕೈನಲ್ಲಿ ನಾ ಕಾದಿರಿಸಿದ್ದ ಬಸ್ಸಿನ ಟಿಕೇಟನ್ನು ಹಿಡಿದು ತಂದಿದ್ದ. ತಡವಾಯಿತೆಂದು ಗಡಿಬಿಡಿಯಲ್ಲಿ ಹೆಜ್ಜೆಹಾಕುವಾಗ ಪುಸ್ತಕದೊಳಗಿನಿಂದ ಟಿಕೇಟು ಬಿದ್ದುಹೋದದ್ದು ನನ್ನ ಗಮನಕ್ಕೇ ಬಂದಿರಲಿಲ್ಲ. ಆ ಹುಡುಗನಿಗೆ ಧನ್ಯವಾದಗಳನ್ನು ಹೇಳಿ ಟಿಕೇಟನ್ನ ಭದ್ರವಾಗಿರಿಸಿಕೊಂಡೆ.

ಅಲ್ಲಿಂದ ಗ್ರಾಹಕರ ಕಂಪನಿಗೆ ಹೋಗಿ ಅಲ್ಲಿ ಆ ಹೊಸಾ ತಂತ್ರಾಂಶವನ್ನ ಅಳವಡಿಸಿ ಅದರಬಗ್ಗೆ ಅವರಿಗೆ ವಿವರಿಸಿ ನಂತರ ನಾನು ಮರಳಿ ಬೆಂಗಳೂರಿಗೆ ಪಯಣ ಬೆಳೆಸಿದೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಉತ್ತರ ಕನ್ನಡದಲ್ಲಿ ಹೊಸಪೇಟೆ???

ಅದು ಉತ್ತರ ಕರ್ನಾಟಕದಲ್ಲಿ ಅಲ್ಲವೇ?

ವಂದನೆಗಳೊಂದಿಗೆ,
ಸುಧೀಂದ್ರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಸುಧೀಂದ್ರ ಅವರಿಗೆ,
ಅದು ಕಣ್ತಪ್ಪಿನಿಂದ ಆದ ತಪ್ಪು... ಅದನ್ನ ಬದಲಾಯಿಸಿದ್ದೇನೆ. :)

ವಂದನೆಗಳೊಂದಿಗೆ,
ಪ್ರಶಾಂತ ಜಿ ಉರಾಳ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.