ವೃತ್ತಿಜೀವನದ ಹಂತಗಳು...

0

ಇವತ್ತಿವೆ ಸರಿ ಸುಮಾರು ೭ ವರುಷ ಕಳೆದಿದೆ, ನಾನು ನನ್ನೂರು ನನ್ನ ಜನರನ್ನ ಬಿಟ್ಟು ಬಂದು. ಕೆಲಸದ ಹುಡುಕಾಟದಲ್ಲಿ, ನನಗರಿವಿಲ್ಲದಂತೆ ನಾನೇ ವಲಸೆ ಬಂದಿದ್ದೇನೆ. ಇಂದಿಗೂ ಆ ನನ್ನ ಹಳೆಯ ನೆನಪುಗಳು ಕಾಡುತ್ತವೆ, ಕೊನೆತನಕ ಕಾಡುತ್ತಲೇ ಇರುತ್ತವೆ. ಮೈಸೂರಿನಲ್ಲಿ ೧.೫೦೦ ರೂಪಾಯಿಗೆ ಕೆಲಸ ಮಾಡುತ್ತಿದ್ದ ನಾನು ಇಂದು ಬೆಂಗಳೂರಿನಲ್ಲಿ ೫ ಅಂಕಿಯ ಸಂಬಳ ಪಡೆಯುತ್ತಿದ್ದೇನೆ. ಇದರ ಹಿಂದೆ ಸಾಕಷ್ಟು ಜನರ ಹಾರೈಕೆ, ಒಲವು ಪ್ರೋತ್ಸಾಹಗಳು ನನ್ನನ್ನು ಕಾಪಾಡಿಕೊಂಡು ಬಂದಿವೆ. ಮೈಸೂರಿನಿಂದ ನನ್ನ ಟಿ.ವಿ.ಎಸ್ ನಲ್ಲಿ ನಾನು ಮತ್ತೆ ನನ್ನ ನಲ್ಮೆಯ ಅಣ್ಣ ಜೊತೆಗೆ ನನ್ನ ಬಟ್ಟೆಗಳನ್ನ ಹೊತ್ತುಕೊಂಡು ಹೊರಟು ಬಂದಿದ್ದೆವು. ಬೆಂಗಳೂರಿಗೆ ಬಂದ ಹೊಸದರಲ್ಲಿ ಇಲ್ಲಿನ ಟ್ರಾಫಿಕ್ ನಲ್ಲಿ ನಮ್ಮ ಪುಟ್ಟದಾದ ಟಿ.ವಿ.ಎಸ್ ಅನ್ನು ಓಡಿಸುವುದೇ ಒಂದು ದೊಡ್ಡ ಪರೀಕ್ಷೆ. ಅಲ್ಲಿಂದ ಬಂದ ನಾನು ನನ್ನ ಸಂಭಂದಿಕರ ಮನೆಯಲ್ಲಿ ವಾಸ್ತವ್ಯ ಹೂಡಿದೆ.

ಏನೇ ಆದರೂ ಒಂದುರೀತಿಯ ಸಂಕೋಚ, ಭಯ. ನನ್ನ ಸಂಭಂದಿಯೇ ಆದರೂ ಅವರಲ್ಲಿ ನಾನು ಮನಬಿಚ್ಚಿ ಮಾತನಾಡುತ್ತಿರಲಿಲ್ಲ. ಕಾಲೇಜಿನಲ್ಲಿ ಬಿಕಾಂ ಓದಿದ್ದರೂ ಅದರ ಕಡೆಗೆ ಒಲವಿಲ್ಲದ ಕಾರಣ ನನ್ನ ಆಸಕ್ತಿ ಕಂಪ್ಯೂಟರಿನ ಕಡೆಗೆ ಇತ್ತು. ನನ್ನ ಅಣ್ಣನ ಸಹಾಯದಿಂದ ಕಂಪ್ಯೂಟರ್ ಹಾರ್ಡ್ವೇರ್ ಶಿಕ್ಷಣವನ್ನ ಮುಗಿಸಿದ್ದೆ. ಆಗ ನನಗೆ ತಿಳಿದಿದ್ದು ಕೇವಲ ಕಂಪ್ಯೂಟರ್ ಮದರ್ ಬೋರ್‍ಡ್ assembel ಮಾಡೋದು, ಆಪರೇಟಿಂಗ್ ಸಿಸ್ಟಮ್ install ಮಾಡೋದು, ಮತ್ತೆ ಕೆಲವು ಹಂತದ ಕಂಪ್ಯೂಟರಿನ ಸಮಸ್ಯೆಗಳಿಗೆ ಪರಿಹಾರ ನೀಡುವುದು. ನನ್ನ ಆ skillset ಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿದ್ದು. ನಾನು ನನ್ನ ಅಣ್ಣನಿಗೆ ಚಿರರುಣಿ. ಬೆಂಗಳೂರಿನ ನನ್ನ ಮೊದಲ ಕೆಲಸ ಪೂರ್‍ಣವಾಗಿ ಕಂಪ್ಯೂಟರ್ ಅನ್ನು ಜೋಡಿಸಿ ಅದರ ಗ್ರಾಹಕರ ಮನೆಗೆ ತಲುಪಿಸುವುದು, ಏನಾದರೂ ತಾಂತ್ರಿಕ ತೊಂದರೆ ಇದ್ದಲ್ಲಿ ಅದನ್ನ ನಿವಾರಿಸುವುದು ಆಗಿತ್ತು. ನನ್ನ ಆ ಕೆಲಸಕ್ಕೆ ನಾಲ್ಕಂಕಿಯ ಸಂಬಳ ಕೊಡುತ್ತಿದ್ದರು. ನನ್ನ ಜೊತೆಯಲ್ಲಿ ನಮ್ಮ ಟ್ರಕ್ಕಿಂಗ್ ಟೀಮಿನ ಮತ್ತೊಬ್ಬ ಪ್ರಮುಖ ಸದಸ್ಯ ರಾಜೇಶ್ ಕೆಲಸ ಮಾಡುತ್ತಿದ್ದರು. ಪ್ರಾರಂಭದಲ್ಲಿ ಬೆಂಗಳೂರಿನ ದರುಶನ ಆದದ್ದು ಆತನಿಂದಲೇ. ನಂತರವಷ್ಟೇ ನಾನು ಸ್ವಂತವಾಗಿ ತಿರುಗಾಡಲು ಪ್ರಾರಂಭಿಸಿದ್ದು.

ಹೀಗೇ ಹೆಚ್ಚುಕಡಿಮೆ ಒಂದು ಆರುತಿಂಗಳ ನಂತರ ನನ್ನದಲ್ಲದ ತಪ್ಪಿನಿಂದ ನನ್ನ ಸಂಭಂದಿಕರ ಮನೆ ಬಿಟ್ಟು ನಮ್ಮ ಟ್ರಕ್ಕಿಂಗ್ ಟೀಮಿನ ಕ್ಯಾಪ್ಟನ್ ಮನೆ ಸೇರಿಕೊಂಡೆ. ನೇರ ನಡೆ ನುಡಿಯ ಅವರ ಮನೆಯಲ್ಲಿ ವಾಸ ಮಾಡತೊಡಗಿದೆ. ನನ್ನ ಕಾರ್ಯಾಲಯಕ್ಕೆ ದೂರದ ಪ್ರಯಾಣ ಮಾಡಬೇಕಾದರೂ ನನಗೆ ಇಲ್ಲಿ ನೆಮ್ಮದಿ ಸಿಕ್ಕುತ್ತಿತ್ತು. ಹೀಗೇ ಸರಿ ಸುಮಾರು ಒಂದು ವರುಷ, ಆರು ತಿಂಗಳ ನಂತರ ನನ್ನ ಅಣ್ಣನ ಸ್ನೇಹಿತರ ಮೂಲಕ ವಾಸು ಅಗರಬತ್ತಿಯ ಅಂಗ ಸಂಸ್ಥೆಯಲ್ಲಿ System administrator ಹುದ್ದೆ ಇರುವ ವಿಷಯ ತಿಳಿಯಿತು. ಅಲ್ಲೂ ಒಂದು ಪ್ರಯತ್ನ ಮಾಡೇ ಬಿಡೋಣವೆಂದು Interview attend ಮಾಡಿದೆ. ನನ್ನ ಅದೃಷ್ಟಕ್ಕೆ ನನಗೆ ಅಲ್ಲಿ ಕೆಲಸ ಸಿಕ್ಕಿತು. ಮನೆಯಿಂದ ಸರಿ ಸುಮಾರು ೨೦ ಕಿ.ಮೀ ದೂರದಲ್ಲಿದ್ದ ಆ ಕಾರ್ಯಾಲಯಕ್ಕೆ ನನ್ನ ಕ್ಯಾಪ್ಟನ್ ಜೊತೆಯಲ್ಲೇ ಹೋಗುತ್ತಿದ್ದೆ. ಅವರು ಐಟಿಪಿಎಲ್ ನಲ್ಲಿ ಕೆಲಸ ಮಾಡುತ್ತಿದ್ದರಿಂದ ನನ್ನ ಕಾರ್ಯಾಲಯ ಮಾರತ್ ಹಳ್ಳಿಯಲ್ಲಿ ಇದ್ದದ್ದರಿಂದ ಅವರ ಐರಾವತ (ಸ್ಯಾಂಟ್ರ್‍ಓ) ದಲ್ಲಿ ನನ್ನನ್ನು ಕರೆದುಕೊಂದು ಹೋಗುತ್ತಿದ್ದರು. ಪುನಃ ಅವರಜೊತೆಯಲ್ಲೇ ಮನೆಗೆ ಬರುತ್ತಿದ್ದೆ. ಅಲ್ಲಿ ಕೂಡಾ ನನಗೆ ಬರುತ್ತಿದ್ದದ್ದು ೪ ಅಂಕಿಯ ಸಂಬಳ. ಏನಾದರೂ ಆಗಲಿ ಕೆಲವು ವರುಷಗಳು ಇಲ್ಲಿಯೇ ಇದ್ದು Experience ಪಡೆಯಬೇಕೆಂದು ನಿರ್ಧರಿಸಿದ್ದೆ. ಕೆಲಸದ ವಾತಾವರಣ ನನಗೆ ಬಹಳವಾಗಿ ಹಿಡಿಸಿತ್ತು. ನಮ್ಮ ಕಾರ್ಯಾಲಯದ ಮುಖ್ಯಸ್ತರಾದ ರವಿಶಂಕರ ಬಹಳ ಆತ್ಮೀಯರಾಗಿದ್ದರು. ತಮ್ಮ ಸಂಸ್ಥೆಯ ಯಾವುದೇ ಉದ್ಯೋಗಿಯನ್ನಾಗಲಿ ನಗುನಗುತ್ತಾ ಮಾತನಾಡಿಸಿ ಕೆಲಸದಲ್ಲಿ ಹುರಿದುಂಬಿಸುತ್ತಿದ್ದರು. ಅವರ ಪ್ರೋತ್ಸಾಹದ ಮಾತುಗಳು ಆ ಕಾರ್ಯಾಲಯದ ವಾತಾವರಣವನ್ನೇ ಬದಲಾಯಿಸಿತ್ತು. ಎಲ್ಲಾ ಒಂದೇ ಮನೆಯ ಸದಸ್ಯರಂತೆ ಸೇರಿ ದುಡಿಯುತ್ತಿದ್ದೆವು. ಅಲ್ಲಿ ಸತತವಾಗಿ ೩ ವರುಷದ ಅನುಭವದ ನಂತರ ನನ್ನ ಪಯಣ Computer Securities ನತ್ತ ಹೊರಳಿತು. ಅಲ್ಲಿಯೂ ನನ್ನ ಟ್ರಕ್ಕಿಂಗ್ ಟೀಮಿನ ಸಹಾಯ ಬಹಳವಾಗೇ ಇತ್ತು. ಟೀಮಿನ ಕ್ಯಾಪ್ಟನ್ ಹೇಳಿದ್ದರಿಂದ ಪ್ರವೀಣ್, ನಮ್ಮ ಟೀಮಿನ ಮತ್ತೊಬ್ಬ ಸದಸ್ಯ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಉದ್ಯೋಗಾವಕಾಶ ಮೂಡಿಬಂತು. ಅದಕ್ಕೆ ನಾನು ಪ್ರವೀಣ್ ಮನೆಗೆ ಹೋಗಿ ತಯಾರಾಗುತ್ತಿದ್ದೆ. ಅಲ್ಲಿನ ಕೆಲಸ ಸಿಕ್ಕಮೇಲೆ ಒಂದು ಪ್ರಖ್ಯಾತ Antivirus ಅನ್ನು Support ಮಾಡುವ ಕೆಲಸ ಸಿಕ್ಕಿತು. ಪ್ರವೀಣ್ ಜೊತೆಯಲ್ಲೇ ನನ್ನ ಕೆಲಸ ಸಾಗುತ್ತಿತ್ತು. ಮನೆಯಿಂದ ಕೇವಲ ೪ ಕಿ.ಮೀ ದೂರದಲ್ಲಿದ್ದ ಕಾರ್ಯಾಲಯಕ್ಕೆ ಹೋಗಿ ಅಲ್ಲಿಂದ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದೆ. ಹೆಚ್ಚು ಕಡಿಮೆ ೯ರಿಂದ ೧೦ ತಿಂಗಳುಗಳ ಕಾಲ ಅಲ್ಲಿ ದುಡಿದೆ. ಅಲ್ಲಿಯ ವಾತಾವರಣ ನನಗೆ ಹಿಡಿಸಲಿಲ್ಲ... ನನ್ನ ಸೀನಿಯರ್ ಗಳ ದಬ್ಬಾಳಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯಿತು. ಸ್ವಾಭಿಮಾನಿಯಾದ ನಾನು ಅಲ್ಲಿಂದ ಬೇರೆಡೆಗೆ ಹೊರಡುವ ಆಲೋಚನೆ ಮಾಡಿದೆ.

ಅಮರನಾಥ, ನನ್ನ ಸಹೋದ್ಯೋಗಿ ಕೂಡಾ ಅದೇ ರೀತಿಯಲ್ಲಿ ಕೆಲಸ ಬಿಟ್ಟು ಮತ್ತೊಂದು ಕಡೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ಆತನ ಸಹಾಯದಿಂದ ನನಗೆ ಅವನ ಕಾರ್ಯಾಲಯದಲ್ಲಿ ಕೆಲಸ ಸಿಕ್ಕಿತು. ಮೊದಲ ಬಾರಿ ೫ ಅಂಕಿಯ ಸಂಬಳ ಪಡೆಯುವ ಸುಯೋಗ ಕೂಡಿಬಂದಿತ್ತು. ಆ ಸಂತಸವನ್ನ ನನ್ನ ಹಳೆಯ ಕಂಪನಿಯವರಿಗೆ ತಿಳಿಯದಂತೆ ಅಕ್ಟೋಬರಿನ ತಿಂಗಳಲ್ಲಿ ಅವರು ಕೊಟ್ಟ ೩೦೦೦ ರೂ ಗಳ ಬೋನಸ್ ಚೆಕ್ಕನ್ನು ಪಡೆದುಕೊಂಡು ಆ ಕಂಪನಿಗೆ ಒಂದು ಸಲಾಮ್ ಹೊಡೆದು ನನ್ನ ಹೊಸ ಕಂಪನಿಯತ್ತ ನನ್ನ ಪಯಣ ಬೆಳೆಸಿದೆ. ಅಲ್ಲಿಂದ ಪ್ರಾರಂಭಿಸಿದ ಪಯಣ ಇಂದಿಗೂ ಮುಂದುವರಿಯುತ್ತಲೇ ಇದೆ... ಇಲ್ಲಿನ ವಾತಾವರಣ ನನ್ನ ಹಿಂದಿನ ಕಂಪನಿಗೆ ಹೋಲಿಸಿದರೆ ಉತ್ತಮವಾಗಿದೆ. ಇಲ್ಲಿ ನಾನು ಸರಿ ಸುಮಾರು ೨ ವರುಷಗಳಿಂದ ಕೆಲಸ ಮಾಡುತ್ತಿದ್ದೇನೆ. ಕೇವಲ ಕಂಪ್ಯೂಟರಿನ ಹಾರ್ಡ್ವೇರ್ ತಿಳಿದಿದ್ದ ನಾನು ಇಂದು ಕಂಪ್ಯೂಟರಿನ ನೆಟ್ವರ್ಕ್ ಸೆಕ್ಯೂರಿಟಿಯನ್ನು ತಿಳಿದಿದ್ದೇನೆ. ಅಷ್ಟೇ ಅಲ್ಲದೇ ಅದರಲ್ಲಿ ಬರುವ ಬೇರೆ ಬೇರೆ ಹಂತಗಳನ್ನು ಅರಿತಿದ್ದೇನೆ...

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.