ಸೀ ಅಪ್ಪು ಮತ್ತು ಲಾಲಿ ಪಪ್ಪು

0

ಕುವೆಂಪು "ನೆನಪಿನ ದೋಣಿಯಲ್ಲಿ" ತಮ್ಮ ಅಜ್ಜಿಯನ್ನು ನೆನಪಿಸಿಕೊಳ್ಳುವ ಸಂದರ್ಭ ಸ್ವಾರಸ್ಯಕರವಾಗಿದೆ. ಅಡುಗೆ ಮನೆಯಲ್ಲಿ ಮೊಮ್ಮಗನಿಗಾಗಿ, ಅನ್ನ ಅಕ್ಕಿ ಹಿಟ್ಟಿಗೆ ಬಾಳೆಯ ಹಣ್ಣನ್ನು ಕಲಸಿ ನುರಿದು, ಸೀ ಅಪ್ಪು ತಯಾರಿಸುತ್ತಿರುತ್ತಾರೆ. ನಂತರ ದಪ್ಪ ರೊಟ್ಟಿ ತಟ್ಟಿ ಹೆಂಚಿನಲ್ಲಿ ಬೇಯಿಸುತ್ತಿರುತ್ತಾರೆ. ಕತ್ತಲೆಯ ಗವಿಯಂತಹ ಅಡುಗೆ ಕೋಣೆಯಲ್ಲಿ ಕೇವಲ ಒಲೆಯ ಕೆಂಬೆಳಕು ಅಜ್ಜಿಯ ಶೀರ್ಣವದನದ ಮೇಲೆ ಬಿದ್ದು ತನ್ನ ಛಾಯಾಲೀಲೆಯನ್ನು ತೋರಿಸುತ್ತಿರುತ್ತದೆ. ಹಾಗೆಯೇ ಆ ಸೀ ಕಂಪಿನ ಆಘ್ರಾಣ ಅಪ್ಯಾಯಮಾನವಾಗಿರುವಂತೆಯೇ ಅದರ ರುಚಿಯೂ ಕೂಡ ಸವಿಯಾಗಿಯೇ ಇದ್ದಿರಬಹುದು ಎಂದು ನೆನೆದು, ನೆನಪನ್ನು ಮಡದಿಯ ಬಳಿ ಹೇಳಿಕೊಳ್ಳುತ್ತಾರೆ. ಆದರೆ ಅವರ ಮಡದಿ "ಅದು ನಿಮಗೆ ಅಂದು ರುಚಿಯಾಗಿ ಕಂಡಿರಬಹುದು, ಈಗ ಅದನ್ನು ಮಾಡಿದರೆ ನೀವು ತಿನ್ನುತ್ತೀರೋ ಇಲ್ಲವೋ" ಎಂದು ಸಂಶಯ ವ್ಯಕ್ತ ಪಡಿಸುತ್ತಾರೆ. ಇದನ್ನು ನಿರಾಕರಿಸಿ ಕುವೆಂಪು "ನೋಡೋಣ, ನೀವು ಮಾಡಿ ಕೊಡಿ; ನಂತರ ಹೇಳುತ್ತೇನೆ" ಎಂದುತ್ತರಿಸುತ್ತಾರೆ.

ಇವರ ಸವಾಲನ್ನು ಸ್ವೀಕರಿಸಿ, ಅವರ ಮಡದಿ ಸೀ ಅಪ್ಪು ತಯಾರಿಸಿ ಅವರ ಮುಂದಿಟ್ಟರೆ, ಅದು ನೋಡುವುದಕ್ಕೂ ಕನಿಕರಕ್ಕೆ ಅರ್ಹವಾದ ವಸ್ತುವಾಗಿ ತೋರುತ್ತದೆ. ಅವರ ಮಾತಿನಲ್ಲೇ ಹೇಳುವುದಾದರೆ "ತುಟಿಗೆ ರಂಗು ಬಳಿದು ಕೊಂಡು, ಅತ್ಯಂತ ನವೀನ ಶೈಲಿಯಲ್ಲಿ ಕೇಶವಿನ್ಯಾಸ ರಚಿಸಿಕೊಂಡು, ಮನ ಮೋಹಿಸುವ ತೆಳು ಬಣ್ಣದ ಸೀರೆಯುಟ್ಟು ದರ್ಶನೀಯವಾದ ಅಂಗಭಾಗಗಳನ್ನು ಧ್ವನಿಪೂರ್ವಕವೆಂಬಂತೆ ಪ್ರದರ್ಶಿಸುತ್ತಾ ನಿಂತಿರುವ ಅರ್ವಾಚೀನ ’ಅಂಗಡಿ ಹುಡುಗಿ’ಯರ ಮುಂದೆ ಹರಳೆಣ್ಣೆ ಹಚ್ಚಿ, ಮರದ ಬಾಚಣಿಗೆಯಲ್ಲಿ ಬಾಚಿ, ಹರಳೆಲೆ ಹಾಕಿ ಮಂಡೆ ಕಟ್ಟಿಕೊಂಡು, ಮೈಯೆಲ್ಲಾ ಮುಚ್ಚುವಂತೆ ಜಡ್ಡು ಸೀರೆಯುಟ್ಟಿರುವ ಗತಕಾಲದ ಮುದುಕಿಯಂತೆ ಈ ಸೀ ಅಪ್ಪು, ಜಾಮೂನು, ಜಿಲೇಬಿ ಮೊದಲಾದ ಆಧುನಿಕ ತಿಂಡಿಗಳ ಮುಂದೆ". ಆದರೆ ಏನೂ ಮಾಡುವ ಹಾಗಿಲ್ಲ ಸೀ ಅಪ್ಪುವಿನ ಮರ್ಯಾದೆ ಹಾಗೂ ಅಜ್ಜಿಯ ಗೌರವದ ಪ್ರಶ್ನೆ ಎಂದು ತಿನ್ನಲು ಆರಂಭಿಸುತ್ತಾರೆ. ಆದರೆ ಮೊದಲನೇ ತುತ್ತು ಅವರ ನೆನಪಿನ ರುಚಿಯನ್ನು ಸುಳ್ಳಾಗಿಸುತ್ತದೆ. ಆದರೆ ಅದನ್ನು ಮಡದಿಗೆ ಹೇಳಿ, ಸೀ ಅಪ್ಪುವಿನ ಮರ್ಯಾದೆ ಕಳೆಯಬಾರದೆಂಬ ಉದ್ದೇಶದಿಂದ, ಅಗಿದು ನಾಲಗೆಗೆ ರುಚಿ ತೋರಿಸದೆ ನುಂಗತೊಡಗುತ್ತಾರೆ. ಇವರು ತಿನ್ನುವುದನ್ನು ಗಮನಿಸುತ್ತಿದ್ದ ಮಡದಿ "ಅಜ್ಜಿಯ ಸೀ ಅಪ್ಪು ಚೆನ್ನಾಗಿದೆಯಲ್ಲವೇ" ಎಂದು ಕುಹಕದಿಂದ ಪ್ರಶ್ನಿಸುತ್ತಾರೆ. ಆದರೆ ಕುವೆಂಪು ಸೋಲನ್ನೊಪ್ಪದೆ "ನಿಮಗೆ ಅಜ್ಜಿಯ ಪರಿಣತೆ ಎಲ್ಲಿಂದ ಬರಬೇಕು" ಎಂಬ ಉತ್ತರ ನೀಡಿ ಸೀ ಅಪ್ಪುವಿನ ಮರ್ಯಾದೆ ಉಳಿಸುತ್ತಾರೆ.

ಕಳೆದ ಬಾರಿ ಊರಿಗೆ ಹೋಗಿದ್ದಾಗ ನನ್ನ ಅಜ್ಜಿಯ ನೆನಪಾಗದಿದ್ದರೂ ಚಿಕ್ಕಂದಿನಲ್ಲಿ ನಾನು ತಯಾರಿಸಿಕೊಳ್ಳುತ್ತಿದ್ದ ಲಾಲಿ ಪಪ್ಪಿನ ನೆನಪಾದದ್ದಂತೂ ನಿಜ. ಇದನ್ನು ತಯಾರಿಸಲು ಯಾರು ಹೇಳಿಕೊಟ್ಟರೋ ಸರಿಯಾಗಿ ನೆನಪಿಲ್ಲ, ಊಹಿಸುವುದಾದರೆ ನನ್ನ ಚಿಕ್ಕ ಅಕ್ಕನೇ ಇರಬೇಕು. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಹುಣಸೇ ಹಣ್ಣು, ಬೆಲ್ಲ, ಮೆಣಸಿನ ಪುಡಿ ಅಥವಾ ಹಸಿ ಮೆಣಸು, ಉಪ್ಪು, ಜೀರಿಗೆಯ ಮಿಶ್ರಣವನ್ನು ಕಲ್ಲು ಗುಂಡಿನ ಸಹಾಯದಿಂದ ಒಂದಕ್ಕೊಂದು ಹೊಂದಿಕೊಳ್ಳುವಂತೆ ಗುದ್ದಿ,ಉಂಡೆಮಾಡಿ, ಅದಕ್ಕೊಂದು ತೆಂಗಿನ ಗರಿಯ ಕಡ್ಡಿಯೊಂದನ್ನು ಸಿಕ್ಕಿಸಿ, ಜೊಲ್ಲು ಸುರಿಸುತ್ತಾ ಸವಿಯುತ್ತಿದ್ದೆ. ಅದನ್ನು ಕಲ್ಲು ಗುಂಡಿನಲ್ಲಿ ಗುದ್ದುತ್ತಿರಬೇಕಾದರೇ ಲಾಲಾರಸ ಉಕ್ಕುವಾಗ, ಇನ್ನು ತಿನ್ನುವಾಗ ಜೊಲ್ಲು ಸುರಿಯದೇ ಇದ್ದೀತೆ? ಅಂಗಡಿಯ ಲಾಲಿ ಪಪ್ಪಾದರೆ ಬರೀ ಸಿಹಿ, ಆದರೆ ನಾವು ತಾಯಾರಿಸಿದ್ದೋ, ಹುಳಿ, ಸಿಹಿ, ಖಾರ, ಉಪ್ಪು; ಆಹಾ ಎಂತಹ ರುಚಿ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಇದನ್ನು ಮಾಡಿಕೊಳ್ಳಲು ಅಂದಿನ ಕಾರಣ ಹಿರಿಯರಿಂದ ಬೈಯ್ಯಿಸಿಕೊಳ್ಳಬಾರದೆಂದು. ಆದರೆ ಬೆಳೆದು ನಿಂತ ಮಗ, ಹೀಗೆ ತೆಂಗಿನ ಗರಿಯ ಕಡ್ಡಿ ಸಿಕ್ಕಿಸಿಕೊಂಡು ಲಾಲಿ ಪಪ್ಪನ್ನು ತಿನ್ನುತ್ತಿದ್ದರೆ, ಹಿರಿಯರು ಏನೆಂದುಕೊಂಡಾರು ಎಂಬುದು ಇಂದಿನ ಕಾರಣ. ಅದೊಂದು ಮಧ್ಯಾಹ್ನ ಅಪ್ಪ, ಅಮ್ಮ ಊರ ಕೇರಿಯ ಮನೆಯೊಂದರಲ್ಲಿ ಯಾವುದೋ ಪೂಜೆಯ ನಿಮಿತ್ತ ತೆರಳಿದ್ದರು. ನಾನು ಮಾತ್ರ ಜನರಿಂದ ಕೆಲವು ದಿನವಾದರೂ ದೂರ ಇರುವ ನೆಪದಿಂದ ಕಾರ್ಯಕ್ರಮ ತಪ್ಪಿಸಿಕೊಂಡು ಮನೆಯಲ್ಲೇ ಉಳಿದಿದ್ದೆ. ಆಗ ಮೊದಲಿಗೆ ನನ್ನ ನೆನಪಿಗೆ ಬಂದಿದ್ದೇ ಈ ನನ್ನ ಲಾಲಿ ಪಪ್ಪು. ಮನೆಯ ಬಾಗಿಲನ್ನು ಸರಿದು, ಅಡುಗೆ ಮನೆಯನ್ನು ತಡಕಾಡಿ ನನಗೆ ಬೇಕಿದ್ದ ಸಾಮಗ್ರಿಯನ್ನು ತೆಗೆದುಕೊಂಡು, ಕಳಸದ ಅಂಬಾ ತೀರ್ಥದಲ್ಲಿ ಆರಿಸಿಕೊಂಡು ತಂದಿದ್ದ ಕಲ್ಲು ಗುಂಡಿನಿಂದ ಆ ಮಿಶ್ರಣವನ್ನು ಗುದ್ದಲಾರಂಭಿಸಿದೆ. ಗುದ್ದುವಾಗ ಮತ್ತದೇ ಲಾಲಾ ರಸದ ಸ್ರವಿಕೆ! ಅಂತೂ ಮಿಶ್ರಣ ಹದವಾಗಿ ಬೆರೆತ ನಂತರ, ತೋಟಕ್ಕೆ ತೆರಳಿ ತೆಂಗಿನ ಗರಿಯೊಂದರಿಂದ ಕಡ್ಡಿಯನ್ನು ಸಿಗಿದು, ಮಿಶ್ರಣದ ಉಂಡೆಗೆ ಚುಚ್ಚಿ ಬಾಯಲ್ಲಿರಿಸಿದೆ. ಹುಳಿ, ಸಿಹಿ, ಖಾರ, ಉಪ್ಪು, ಮತ್ತದೇ ಬಾಲ್ಯದ ರುಚಿ ಹಾಗೂ ಅದು ಕೇವಲ ನೆನಪಿನ ರುಚಿಯಾಗಿರಲಿಲ್ಲ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಪಾಲಚಂದ್ರ, ನೆನಪಿನ ಜೊಲ್ಲು ಸುರಿಸುವಂತೆ ಮಾಡಿತು ಬರವಣಿಗೆ. ಒಂದೆರಡು ಸೊಗಸಾದ ಚಿತ್ರಗಳನ್ನೂ ನೆಂಚಿಕೊಳ್ಳಲು ಕೊಡಬೇಕಿತ್ತು ಮಾರಾಯ್ರೇ.

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ, ನಾನು ಲಾಲಿ ಪಪ್ಪು ತಿಂತಾ ಇರೋ ಒಂದು ಚಿತ್ರ ಇದೆ ಅಷ್ಟೆ. ಆದ್ರೆ ಅದನ್ನ ಹಾಕಿದ್ರೆ ನನ್ನ ಮಾನ, ಮರ್ಯಾದೆ ಎಲ್ಲಾ ಹರಾಜಾಗತ್ತೆ :)
ಮುಂದಿನ ಬಾರಿ ಈ ಹೋ೦ ಮೇಡ್ ಲಾಲಿ ಪಪ್ಪಿನ ಚಿತ್ರ ಹಾಕ್ತೀನಿ :)
--
PaLa

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಚಿತ್ರವನ್ನೇ ಹಾಕಿ. ಜೊತೆಗೆ ಒಂದು ಶೀರ್ಷಿಕೆ ಸೇರಿಸಿ: ಚಿತ್ರದಲ್ಲಿರುವವರನ್ನು ಪತ್ತೆ ಹಚ್ಚಿದರೆ ಒಂದು ಲಾಲಿ ಪಪ್ಪು ಫ್ರೀ ಅಂತ. :)

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜವಾಗಿಯೂ ಹಾಕಿದ್ದೇನೆ :) ಅಂತೆಯೇ ಈ ಚಿತ್ರದಲ್ಲಿ ಇಬ್ರಿದಾರೆ, ನನ್ನನ್ನ ಕಂಡು ಹಿಡಿದವರಿಗೆ ಒಂದು ಲಾಲಿ ಪಾಪ್ ಬಹುಮಾನ.
--
PaLa

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರದಲ್ಲಿ, ಎಡಗಡೆಯಲ್ಲಿರುವವರು ನೀವು... :)

-ಅನಿಲ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಚಂದ್ರ ಅವರೇ,

ಕಾಕತಾಳಿಯವೆಂಬಂತೆ, ನಾನೂ ನನ್ನ ಮಗಳಿಗೆ ನಿನ್ನೆ ರಾತ್ರಿ (೭ ವರ್ಷ) ಇದೆ ಲಾಲಿ ಪಾಪ್ಪಿನ ಬಣ್ಣನೆ ಮಾಡ್ತಾ ಇದ್ದೆ (ನಾನು ಹುಣಿಸೆ ಗೊಜ್ಜು ಮಾಡ್ತಾ ಇದ್ದೆ, ಹುಗ್ಗಿಯ ಜೊತೆಗೆ, ಹುಣಿಸೆ ಲಾಲಿ ಪಾಪ್ಪಿನ ಹಳೆ ನೆನಪು ಗುದ್ದಿಕೊಂಡು ಬಂದಿತ್ತು). ನನ್ನ ಮಗಳು ಕೇಳಿದ್ದಾಳೆ ನನಗೂ ಮಾಡಿಕೊಡು ಅಂತ. ನಿಮ್ಮ ಲೇಖನ ಓದಿ ಈಗ ನನಗೂ ಅದನ್ನು ಮಾಡಲೇ ಬೇಕು ಎನ್ನುವ ಉತ್ಸಾಹ ಬರುತ್ತಿದೆ (ಕುವೆಂಪುರವರಿಗಾದಂತೆ ರಸಭಂಗವಾಗದಿರಲಿ ಅಂದುಕೊಳ್ಳುವೆ). :)

ಧನ್ಯವಾದಗಳು.

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಮಲಾ ಅವರೇ,
ಖಾರದ ಹುಗ್ಗೀನಾ/ಸೀ ಹುಗ್ಗೀನಾ? ಹುಗ್ಗಿಯ ಜೊತೆ ಹುಣಸೆ ಗೊಜ್ಜು ಸಕ್ಕತ್ತಾಗಿರುತ್ತೆ, ಸೀ ಹುಗ್ಗಿಗೆ ತುಪ್ಪ. ನನಗಂತೂ ಆಗ್ಲಿಲ್ಲ ರಸಭಂಗ, ನಿಮಗಾದ್ರೂ ನಿಮ್ಮ ಮಗಳಿಗಂತೂ ಆಗಲ್ಲ :)

ನಿಮ್ಮ ಲಾಲಿ ಪಪ್ಪಿಗೆ ಸವಿ ರುಚಿ ಬರಲಿ(ಹಾರೈಕೆ :))
--
PaLa

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಾರದ ಹುಗ್ಗೀನೆ! ನಮ್ಮ ಮನೆಯಲ್ಲಿ ಸಿಹಿ ಹುಗ್ಗಿ (ಪೊಂಗಲ್) ಯಾರಿಗೂ ಹಿಡಿಸುವುದಿಲ್ಲ, ಅದಕ್ಕೆ ಸಿಹಿ ಬೇಕೆನಿಸಿದವರಿಗೆ ಖಾರ ಹುಗ್ಗೀಗೆ ಹಸಿ ಕಾಯಿತುರಿ, ಬೆಲ್ಲ ಮತ್ತೆ ಏಲಕ್ಕಿ ಪುಡಿ ಹಾಕಿ ಕೊಡ್ತೀನಿ :)
ಬಿಸಿ ಬಿಸಿ ಖಾರದ ಹುಗ್ಗಿ, ಹುಣಿಸೆ ಗೊಜ್ಜು ಚಳಿ ಕಾಲದಲ್ಲಿ ಒಳ್ಳೆ comfort food ಆಲ್ವಾ?

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೂ, ಸಂಕ್ರಾಂತಿ ಬಂತಲ್ಲ, ರಜಾ ದಿನ ಆವತ್ತು ಮಾಡ್ಕೊಂಡು ಹೊಟ್ಟೆ ತುಂಬಾ ತಿನ್ಬೇಕು :)
--
PaLa

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Very Sorry! ಹಂಚಿಕೊಳ್ಳದೆ ಹುಗ್ಗಿ ತಿಂದದ್ದಕ್ಕೆ!

ಮಕರ ಸಂಕ್ರಾಂತಿಗೆ ಸಂಪದಿಗರೆಲ್ಲರಿಗೂ ಶುಭ ಹಾರೈಸಿ, ಹಾಗೇ ಸಾಧ್ಯವಾದವರೆಲ್ಲರೂ ಖಾರ ಹುಗ್ಗಿ, ಸಿಹಿ ಹುಗ್ಗಿ ಸವಿಯಲೆಂದು ಆಶಿಸುವೆ.

ವಿ. ಸೂ: ಹಳೇ ಕನ್ನಡ ಪಠ್ಯ ಪುಸ್ತಕದಲ್ಲಿ ನೋಡಿದ್ದ ಒಂದು ಪಾಠ ನೆನಪಿಗೆ ಬಂತು- 'ಹುಗ್ಗಿಯ ಹೊಳೆ' ಅಂತಾನೋ ಏನೋ!

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಕ್ರಾಂತಿಯ ಶುಭ ಹಾರೈಕೆ ನಿಮಗೂ ಕೂಡ.
--
PaLa

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಹುಳಿ, ಸಿಹಿ, ಖಾರ, ಉಪ್ಪು, ಮತ್ತದೇ ಬಾಲ್ಯದ ರುಚಿ
ರೆಸಿಪಿಯೊಂದಿಗೆ..ಭಾವನೆಗಳ ಬರಹ...ಚೆನ್ನಾಗಿದೆ ಪಾಲ :)
-ಸವಿತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೋಡಿ ಹೊಸ ಅಡುಗೆ ಕಲ್ಸಿ ಕೊಟ್ಟಿದ್ದೀನಿ :)
--
PaLa

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಹಾ!!!

ಲಾಲಿ ಪಪ್ಪು ನೆನೆಸಿಕೊಂಡರೆ ಈಗಲೂ......... ಆಹಾ!!!
ಬಾಲ್ಯದ ನೆನಪಾಗುವುದು.

ಲಾಲಿ ಪಪ್ಪು ಸವಿದವರಿಗೇ ಗೊತ್ತು ಅದರ ರುಚಿ...

ಚೆನ್ನಾಗಿದೆ ಪಾಲ. :)

-ಅನಿಲ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.