ದೇವರಿಗೆ ಹಿಪ್ನಾಟಿಸಂ, ಹೀಗೊಂದು ನನ್ನ ಅನುಭವ.

4

ಮೊನ್ನೆ ಆಪ್ತಮಿತ್ರ ಚಲನಚಿತ್ರ ನೋಡುತ್ತಿದ್ದಾಗ ಕೊನೆಯ ದೃಶ್ಯದಲ್ಲಿ ಯು ಆರ್ ಗಂಗಾ, ಹೌ ಡು ಯು ಫೀಲ್ ಎಂಬ ಸಂಭಾಷಣೆ ಕೇಳಿದವನಿಗೆ ನನ್ನ ಕಾಲೇಜ್ ದಿನಗಳಲ್ಲಿ ನಡೆದ ಒಂದು ಪ್ರಸಂಗವನ್ನು ಬರಹದಲ್ಲಿ ಹಿಡಿದಿಡುವ ಮನಸ್ಸಾಯಿತು ಅದರ ಫಲವೆ ಈ ಲೇಖನ.

ಒಂದು ಬೆಳಿಗ್ಗೆ ನಮ್ಮ ಗುಂಪಿನ ಹುಡುಗರಾದ (ಇದ್ದದ್ದೇ ೩ ಮತ್ತೊಂದು ಜನ ಅದರಲ್ಲಿ ಗುಂಪೇನು ಇರಲಿಲ್ಲ ಆದರೂ ಸಿವಿಲ್ ಮತ್ತು ಎಲೆಕ್ಟ್ರಾನಿಕ್ಸ್ ಗುಂಪುಗಳಿದ್ದದ್ದು ನಿಜ) ಮುರಳಿ,ಮಂಜು, ಸಂಜೀವ್ ಬದಾಮಿ, ಎಲ್ಲರೂ ನಿನ್ನೆ ನಡೆದ ಹಿಪ್ನಾಟಿಸಂ ಬಗ್ಗೆ ಮಾತನಾಡುತ್ತಿದ್ದರು. ಪಕ್ಕದೂರಿನ ಬಸ್ಸಿಳಿದು ಅವರ ಜೊತೆ ಸೇರಿದ ನನಗೆ ಇದು ಹೆಚ್ಚು ಕುತೂಹಲ ಮೂಡಿಸಿತು. ನಮ್ಮ ಪ್ರಾಧ್ಯಾಪಕರ ಸಂಬಂಧಿ ಮತ್ತು ಸ್ನೇಹಿತರಾದ ವೈದ್ಯರೊಬ್ಬರು ( ಇವರ ಮನೆಯಲ್ಲಿದ್ದ ಸುಂದರ ಹುಡುಗಿಯಿಂದ ಇವರು ನಮಗೆಲ್ಲ ಚಿರಪರಿತರು) ನಡೆಸಿದ ಅಥವ ಪ್ರಯೋಗಿಸಿದ ಹಿಪ್ನಾಟಿಸಂಗೆ ಒಳಗಾದ ಮುರಳಿ ತನ್ನ ಅನುಭವವನ್ನು ಬಿಡಿ ಬಿಡಿಯಾಗಿ ಅರುಹಿದ. ನನಗಂತೂ ಕುತೂಹಲ ನೂರ್ಮಡಿಸಿತು. ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ ’ಅಘೋರಿಗಳ ನಡುವೆ’ ಕಾದಂಬರಿಯನ್ನು ಪ್ರತಿವಾರ ಕಾಯುತ್ತ ಓದಿದ್ದು ನೆನಪಿನಲ್ಲಿತ್ತು ಮತು ಅದೇ ಪುಸ್ತಕ ರೂಪದಲ್ಲಿ ಪ್ರಕಟಗೊಂಡಾಗ ಲೈಬ್ರರಿಯಿಂದ ತಂದು ೨-೩ ಬಾರಿ ಓದಿದ್ದೆ. ಅಘೋರಿಗಳು ಗಳಿಸಿರುವ ಅಗಾಧ ಮಾನಸಿಕ ಶಕ್ತಿ ಮತ್ತು ಅವರಿಗಿರುವ ಏಕಾಗ್ರತೆಯನ್ನು ಮತ್ತು ಇಡೀ ಕಾದಂಬರಿಯ ಹೂರಣವನ್ನು ಒಂದೇ ಸಾಲಿನಲ್ಲಿ ಹಿಡಿದಿಟ್ಟ ಆ ಪುಸ್ತಕ ನನಗೆ ಅತ್ಯಂತ ಪ್ರಿಯವಾಗಿತ್ತು.

ಮುರಳಿಯ ಕೈಯನ್ನು ಕಭ್ಭಿಣದಂತೆ ಗಟ್ಟಿಯೆಂದು ಆದೇಶವಿತ್ತು. ನಂತರ ಸೂಜಿಯಿಂದ ಆಳಕ್ಕೆ ಚುಚ್ಚಿದ್ದರೂ ಆತನಿಗೆ ನೋವಾಗದಿದ್ದದ್ದು ನನಗೆ ಕುತೂಹಲದ ವಿಷಯ ಆದರೆ ಇದನ್ನೆಲ್ಲಾ ಹೇಳುವಾಗ ಅದರ ನೋವನ್ನುಣ್ಣುತ್ತಿದ್ದ. ಹಿಪ್ನಾಟಿಸಂ ಮುಖಾಂತರ ಕೆಲವು ಮಾನಸಿಕ ಜನ್ಯ ಖಾಯಿಲೆಗಳನ್ನು ಗುಣಪಡಿಸುವ ಸಾಧ್ಯತೆಯ ಬಗ್ಗೆ ಆಗತಾನೆ ಅದೇ ವಿಷಯದಲ್ಲಿ ಸ್ನಾತಕೋತ್ತರ ಪದವಿಗೇರುವ ಪ್ರಯತ್ನದಲ್ಲಿದ್ದ ಆ ವೈದ್ಯರ ಮಾತುಗಳು ನನ್ನನ್ನು ಆ ಕಡೆಗೆ ಬಲವಾಗಿ ಸೆಳೆಯಿತು. ಅಂತೂ ಒಂದು ಶನಿವಾರ ಮತ್ತೊಮ್ಮೆ ಪ್ರಯೋಗ ಮಾಡಿ ತೋರಿಸಲು ಆ ವೈದ್ಯರನ್ನು ಒಪ್ಪಿಸಿ ನಾವೆಲ್ಲ ಆ ಶನಿವಾರಕ್ಕಾಗಿ ಕಾಯುತ್ತಾ ಕುಳಿತೆವು.

ರಾತ್ರಿ ಹತ್ತೂವರೆಯ ಸುಮಾರಿಗೆ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಅವರ ಕ್ಲೀನಿಕ್ ಸೇರಿ ಮುಂದಿನ ಶಟರ್ ಮುಚ್ಚಿದೆವು.. ವೈದ್ಯರು ನಮ್ಮನ್ನೆಲ್ಲ ಮಾತನಾಡಿಸಿ ೧೦-೧೫ ನಿಮಿಷ ಹಿಪ್ನಾಟಿಸಂ ಬಗ್ಗೆ ಸಣ್ಣ ವಿವರಣೆಯೊಂದಿಗೆ ಪ್ರಾರಂಭಿಸಿದರು. ಹಿಪ್ನಾಟಿಸಂ ಗೆ ಒಳಗಾಗುವ ಇಚ್ಚೆಯಿದ್ದವರನ್ನು ಒಂದೆಡೆ ಸಾಲಾಗಿ ನಿಲ್ಲಿಸಿ, ಅವರಿಗೆ ಮಾನಸಿಕ ಸಮಸ್ಯೆಗಳೇನಾದರೂ ಇದ್ದರೆ ಅದನ್ನು ಬರೆದುಕೊಂಡರು. ಚಂಚಲತೆ ಮನಸಿನವರು ಮತ್ತು ಹೆಚ್ಚು ಮಾನಸಿಕ ಏಕಾಗ್ರತೆಯಿರುವವರು ಈ ಹಿಪ್ನಾಟಿಸಂಗೆ ಒಳಗಾಗುವುದಿಲ್ಲ ಎಂದು ತಿಳಿಸಿ ಅಂತಹವರನ್ನು ಗುರುತಿಸಿ ತಾನೆ ಹಿಂದಕ್ಕೆ ಕರೆಯುತ್ತೇನೆಂದರು. ಸಾಧಾರಣ ಹಿಪ್ನಾಟಿಸಂ (ವೈದ್ಯ ಭಾಷೆಯಲ್ಲಿ ಏನೋ ಹೇಳಿದ ನೆನಪು ಈಗ ಉಳಿದಿಲ್ಲ) ಪ್ರಯೋಗಕ್ಕೆ ಸಣ್ಣದೊಂದು ಪ್ರಕಾಶಮಾನವಾದ ಕೆಂಪು ದೀಪವನ್ನುರಿಸಿ ಮಿಕ್ಕೆಲ್ಲ ದೀಪಗಳನ್ನು ಆರಿಸಿ ಸಂಪೂರ್ಣ ಕತ್ತಲನ್ನು ಮಾಡಿ ಎಲ್ಲರನ್ನು ಬಲಗೈಯನ್ನು ಭೂಮಿಗೆ ಸಮಾನಾಂತರವಾಗಿ ನೇರವಾಗಿ ಮೇಲೆತ್ತಿ ಹಿಡಿದು ದೀಪವನ್ನೆ ನೋಡುವಂತೆ ಸೂಚಿಸಿದರು. ತದೇಕ ಚಿತ್ತದಿಂದ ಏಕಾಗ್ರತೆಯಿಂದ ಆ ದೀಪವನ್ನೆ ನೋಡುತ್ತಿದ್ದರೆ ಆ ದೀಪವೇ ದೊಡ್ಡದಾಗಿ ಮೇಲೆದ್ದು ಬಂದಂತೆ ನನಗೆ ಭಾಸವಾಗತೊಡಗಿತು. ವೈದ್ಯರ ಧ್ವನಿಯೊಂದನ್ನು ಬಿಟ್ಟು ಬೇರೇನೂ ನನಗೆ ಕೇಳಿಸುತ್ತಿರಲಿಲ್ಲ. ವೈದ್ಯರು ಈಗ ನಾನು ೧ ರಿಂದ ೧೦೦ ರವರೆಗೆ ಅಂಕಿಗಳನ್ನು ಎಣಿಸುತ್ತಾ ಹೋಗುತ್ತೇನೆ ನಾನು ಎಣಿಸುತ್ತಾ ಹೋದಂತೆಲ್ಲ ಕೈಭಾರವಾದಂತೆ ಭಾಸವಾಗುತ್ತಾ ಹೋಗುತ್ತದೆ ಮತ್ತು ನಿದ್ರೆ ಆವರಿಸುತ್ತಾ ಹೋಗುತ್ತದೆ ಆರಾಮವಾಗಿ ನಿದ್ರಿಸಿ ಎಂದು ಆದೇಶವಿತ್ತರು. ಹೌದು ನನಗೂ ೨೫ರವರೆಗೆ ಎಣಿಸುವಷ್ಟರಲ್ಲಿ ಕೈ ಭಾರವಾದಂತೆನೆಸಿ ಕಣ್ಣುಗಳು ಭಾರವಾಗಿ ನಿದ್ರೆ ಬಂದಂತೆ ಭಾಸವಾಗತೊಡಗಿತು (ಬಹುಶಃ ೧೦ ಘಂಟೆಯನಂತರ ಎಚ್ಚರವಿದ್ದು ಅಭ್ಯಾಸವಲ್ಲದಿದ್ದರಿಂದ ಇರಬೇಕೆಂದು ನನ್ನ ಅನಿಸಿಕೆ). ಏಕೋ ನನ್ನ ಮನಸ್ಸು ಇದ್ದಕ್ಕಿದ್ದಂತೆ ಜಾಗೃತವಾಗಿ ನನ್ನನ್ನು ಹತೋಟಿಗೆ ತೆಗೆದುಕೊಂಡಿತು. ಮುಂದೇನು ಎಂಬ ಕುತೂಹಲ ನನ್ನನ್ನು ಆವರಿಸುವಷ್ಟರಲ್ಲಿ ನಮ್ಮ ಪ್ರಾಧ್ಯಾಪಕರು ಬಂದು ನನ್ನು ಮುಟ್ಟಿ ನೀನು ಇತ್ತ ಬಾ ಎನ್ನುವಂತೆ ಸಂಜ್ಙೆ ಮಾಡಿದರು. ನನ್ನಂತೆಯೆ ಮಂಜು ಸತೀಶ ಕೂಡ ಸಾಲಿನಿಂದ ಹೊರಬಂದರು.

ಪ್ರಯೋಗದಲ್ಲಿ ಉಳಿದವರು ೩ ಜನ, ಸಿದ್ದಲಿಂಗದೇವರು, ನಟರಾಜ ಮತ್ತು ಸಂಜೀವ್ ಬದಾಮಿ. ಕ್ಷಣಗಣನೆ ನಿಲ್ಲುವಷ್ಟರಲ್ಲಿ ಈ ಮೂವರು ಗಾಢ ನಿದ್ರೆಯಲ್ಲಿದ್ದರು ನನಗಂತೂ ಯಾವುದೋ ಚಮತ್ಕಾರವನ್ನು ನೋಡಿದಂತೆ ಭಾಸವಾಗುತ್ತಿತ್ತು ಅವರು ನಿದ್ರಿಸುತ್ತಿದ್ದ ಪರಿ.
ವೈದ್ಯರು ಆ ೩ ಜನರಲ್ಲಿ ಸಂಜೀವ ಬದಾಮಿ ಮತ್ತು ನಟರಾಜನನ್ನು ಕೋಣೆಗೆ ಕರೆದೊಯ್ದು ನಾನು ಮುಟ್ಟಿ ನಿಮ್ಮನ್ನು ಮಾತನಾಡಿಸುವವರೆಗೂ ನಿದ್ರಿಸುತ್ತಿರಬೇಕೆಂದು ಆದೇಶವಿತ್ತು ಪ್ರಯೋಗ ಕೋಣೆಗೆ ಬಂದರು. ಈಗ ಸಿದ್ದಲಿಂಗ ದೇವರು ನಮ್ಮ ಪ್ರಯೋಗದ ಸಧ್ಯದ ಬಲಿಪಶು. ಅವನನ್ನು ಮಾತನಾಡಿಸಲು ವೈದ್ಯರು ಆರಂಭಿಸಿದರು ಅವನ ಹೆಸರು ತಂದೆ ತಾಯಿ ಊರು ಮನೆಗಳ ಬಗ್ಗೆ ಕೇಳಿ ಖಚಿತಪಡಿಸಿಕೊಂಡರು. ಪ್ರಾದ್ಯಪಕರನ್ನು ಅವನೊಡನೆ ಮಾತನಾಡಲು ಬಿಟ್ಟರು. ನಮ್ಮ ಪ್ರಾಧ್ಯಾಪಕರು ಅವನನ್ನು ಕಾಲೇಜಿನ ಬಗ್ಗೆ ಅಲ್ಲಿ ಅವನಿಗಿರುವ ಸಮಸ್ಯೆಗಳ ಬಗ್ಗೆ ಮತ್ತು ಆತನಿಗೆ ಹೆಚ್ಚು ಆಸಕ್ತಿಕರ ವಿಷಯಗಳು ಮತ್ತು ತೊಡಕಿರುವ ವಿಷಯಗಳನ್ನು ತೊಂದರೆ ಕೊಡುವ ಸಹಪಾಠಿಗಳ ಬಗ್ಗೆ (ಸದ್ಯ ಆತ ನನ್ನ ಹೆಸರು ಹೇಳಲಿಲ್ಲ ಅದೇ ಸಮಾಧಾನ) ಕೇಳಿ ತಿಳಿದುಕೊಂಡರು.

ವೈದ್ಯರು ಈಗ ಆತನನ್ನು ತಮ್ಮ ಕೆಲವು ಪ್ರಯೋಗಕ್ಕೆ ಒಳಪಡಿಸಲು ಮುಂದಾದರು. ಆತನನ್ನು ಸುಮಾರು ೫ ಅಡಿಗಳಷ್ಟು ಮದ್ಯೆ ಜಾಗವಿರುವ ಎರಡು ಮರದ ಖುರ್ಚಿಗಳ ಮೇಲೆ ಮಲಗುವಂತೆ ಹೇಳಿದರು. ಮತ್ತೆ ಆತನಿಗೆ ಆದೇಶ ಕೊಡುತ್ತಾ ಸಾಗಿದರು. ಈಗ ನೀನು ಕಬ್ಬಿಣದ ತೊಲೆ. ನಿನ್ನ ದೇಹದ ಮೇಲೆ ಭಾರ ಹೇರಲಾಗುತ್ತೆ ಎಂದು ತಿಳಿಸಿದರು. ತಕ್ಷಣವೇ ಆತ ಜೋರಾಗಿ ಉಸಿರೆಳೆದು ಕೊಳ್ಳುತ್ತಾ ತನ್ನ ದೇಹವನ್ನು ಸೆಟೆಸಿಕೊಂಡ, ನಮ್ಮಲ್ಲಿ ೩ ಜನರನ್ನು ಆತನ ಮೇಲೆ ಹೇರಿಕೊಂಡೆವು ಆತ ಏನೂ ಆಗದವನಂತಿದ್ದ. ಮತ್ತೂ ಸ್ವಲ್ಪ ಜನ ಒಬ್ಬ ಸಾಮಾನ್ಯ ಮನುಷ್ಯ ತಡೆದು ಕೊಳ್ಳಲಾಗದಷ್ಟು ಭಾರ ಆತನ ಮೇಲೆ ಹೇರಿದೆವು ಆಗಲೂ ಆತ ಜಗ್ಗಲಿಲ್ಲ. ಇನ್ನೂ ಸ್ವಲ್ಪ ಜನ ಕೂರುವ ಅನಿಸಿಕೆಗೆ ವೈದ್ಯರು ತಡೆ ಹಿಡಿದರು. ಅದಕ್ಕೆ ಕಾರಣ ಮಾನಸಿಕ ಶಕ್ತಿ ದೈಹ ಬಲದ ಸಂಪೂರ್ಣ ಪ್ರಯೋಜನ ಪಡೆದರೂ, ದೈಹಿಕ ಶಕ್ತಿಯನ್ನು ಮೀರಿದರೆ ಮಾನಸಿಕ ಬಲ ಆತನಿಗೆ ನೋವು ತರದಿದ್ದರೂ ದೇಹ ತಡೆದುಕೊಳ್ಳುವುದಿಲ್ಲ ಎಂದು ತಿಳಿಸಿದರು. ಉದಾಹರಣೆಗೆ ವಶೀಕರಣಕ್ಕೊಳಪಟ್ಟ ವ್ಯಕ್ತಿಯನ್ನು ನೀನೊಂದು ಕಲ್ಲುಬಂಡೆ ಎಂದು ಜಡಗೊಳಿಸಿ ರಸ್ತೆ ಮದ್ಯೆ ಮಲಗಿಸಿ ಭಾರವಾದ ವಾಹನವೊಂದನ್ನು ಆತನ ಮೇಲೆ ಹರಿಸಿದರೆ ಆತನಿಗೆ ನೋವು ಗೊತ್ತಾಗದಿರಬಹುದು ಆದರೆ ದೇಹ ಅಪ್ಪಚ್ಚಿಯಾಗಿ ಆತ ಸತ್ತು ಹೋಗುವುದನ್ನು ತಪ್ಪಿಸಲು ಸಾಧ್ಯವಿಲ್ಲವೆಂದು ಎಳೆ ಎಳೆಯಾಗಿ ಬಿಡಿಸಿ ಹೇಳಿದರು.

ಸರಿ ನಮ್ಮ ಮುಂದಿನ ಪ್ರಯೋಗ ನಾಯಿ ಪರೀಕ್ಷೆ! ಗಾಭರಿಯಾಗಬೇಡಿ. (ಸಿದ್ದಲಿಂಗ) ದೇವರನ್ನು ಈಗ ವೈದ್ಯರು ನೀನೀಗ ನಾಯಿ ಹಾಗಾಗಿ ಇಲ್ಲೊಂದು ಕೈಗಡಿಯಾರ ಕಾಣೆಯಾಗಿದೆ ಅದರ ವಾಸನೆ ಹಿಡಿದು ಕೈಗಡಿಯಾರವನ್ನು ಪತ್ತೆ ಹಚ್ಚ ಬೇಕೆಂದರು. ನಮ್ಮ ಪ್ರಾಧ್ಯಾಪಕರು ತಮ್ಮ ಕೈಗಡಿಯಾರವನ್ನು ಬಿಚ್ಚಿ ನನಗೆ ಕೊಟ್ಟು ಮುಚ್ಚಿಡುವಂತೆ ತಿಳಿಸಿದರು. ನಾನು ಅದನ್ನು ಸ್ವಲ್ಪ ಸಮಯ ನನ್ನ ಕೈಗೆ ಕಟ್ಟಿಕೊಂಡೆ ನಂತರ ಅದನ್ನು ಅಲ್ಲೆ ಇದ್ದ ಮೇಜಿನ ಒಳಗೆ ಮುಚ್ಚಿರಿಸಿದೆ. ದೇವರು ಈಗ ನಿಜವಾದ ನಾಯಿಯಂತೆ ಮುಸ ಮುಸ ಮೂಸಿರಿಯಲು ಪ್ರಾರಂಭಿಸಿದ. ನಮ್ಮ ಪ್ರಾಧ್ಯಾಪಕರ ಕೈಯಿನ ವಾಸನೆಯನ್ನು ಅವನಿಗೆ ತೋರಿಸಲಾಯಿತು. ನಿಜದ ನಾಯಿಯಂತೆ ಅವರ ವಾಸನೆಯನ್ನು ಧೀರ್ಘವಾಗಿ ಎಳೆದು ಕೊಂಡ ನಂತರ ಅಲ್ಲೆಲ್ಲ ಹುಡುಕತೊಡಗಿದ (ಸದ್ಯ ಬೊಗಳಲಿಲ್ಲ). ೨ ನಿಮಿಷದ ನಂತರ ನಾನು ಗಡಿಯಾರ ಕಟ್ಟಿದ್ದ ನನ್ನ ಕರವನ್ನೂ ಹುಡುಕಿಕೊಂಡು ಬಂದ ಸ್ವಲ್ಪ ಸಮಯ ನನ್ನ ಕರವನ್ನೆ ಮೂಸಿರಿದು ಬಿಟ್ಟು ಬಿಟ್ಟ. ೪-೫ ನಿಮಿಷದ ನಂತರ ಮೇಜಿನ ಬಳಿ ಬಂದು ನಿಂತ ವೈದ್ಯರನ್ನು ಒಮ್ಮೆ ನೋಡಿದ. ತನ್ನ ಕೈಯನ್ನು ನಾಯಿಯ ಮುಂಭಾಗದ ಕಾಲಿನಂತೆ ಎತ್ತಿ ಆ ಮೇಜಿನ ಖಾನೆಯನ್ನು ಪರಪರನೆ ಕೆರೆದು ನಿಂತ. ನನಗಂತೂ ಇದು ನಾಟಕೀಯವಾಗಿ ತೋರುತ್ತಿತ್ತು ಆದರೂ ನಂಬಲೇ ಬೇಕಾಯಿತು.

ನಮ್ಮ ಮುಂದಿನ ಪ್ರಯೋಗಕ್ಕೆ ಆತನನ್ನು ಕುಳಿತುಕೊಳ್ಳಲು ಹೇಳಿ ಮನಸ್ಸನ್ನು ಮಾತ್ರ ಹೊರಗೆ ಕಳುಹಿಸಿ ನೋಡುವ ಎಂದು ವೈದ್ಯರು ಸಲಹೆಯಿತ್ತರು. ಪ್ರಾರಂಭವಾಯಿತು ಪ್ರಯೋಗ. ಆತನಿಗೆ ಸಲಹೆ ಸೂಚನೆಗಳಿತ್ತ ವೈದ್ಯರು ಆತನನ್ನು ಖುರ್ಚಿಯ ಮೇಲೆ ಕುಳ್ಳಿರಿಸಿದರು. ಈಗ ನಿನ್ನ ಮನಸ್ಸು ನಮ್ಮ ಕೋಣೆಯನ್ನು ದಾಟಿ ಹೊರ ಹೋಗಲಿ ಎಂದರು. ಆತ ತಲೆಯಲ್ಲಾಡಿಸಿದ. ಹೊರಗೆ ಇರುವ ಪಕ್ಕದ ಅಂಗಡಿಯ ಹೆಸರು ಕೇಳಿದರು ಆತ ನಿಖರವಾಗಿ ಅಲ್ಲಿದ್ದ ಅಂಗಡಿಯ ಹೆಸರು ಹೇಳಿದ. ಹಾಗೆಯೆ ಮುಂದೆ ಹೋಗಲು ಸೂಚನೆಯಿತ್ತರು. ಅಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಕೇಳಿದಾಗ ಆತ ಅಲ್ಲಿ ನಾಲ್ಕೈದು ಜನ ನಿಂತಿರುವುದಾಗಿ ತಿಳಿಸಿದ. ತಕ್ಷಣ ನಾನು ವೈದ್ಯರಿಗೆ ತಿಳಿಸಿ ಇನ್ನೂ ಮುಂದೆ ಹೋಗಿ ವಾಹನ ನಿಲ್ದಾಣದ ಬಳಿಯಿರುವ ಆಟೋಗಳ ಮಾಹಿತಿ ತಿಳಿಸುವಂತೆ ಕೇಳಿದೆ. ೪ ಆಟೋಗಳು ನಿಂತಿರುವುದಾಗಿ ತಿಳಿಸಿದ. ಆದರೂ ಪರೀಕ್ಷಿಸಬೇಕಿತ್ತು. ಸರಿ ಸತೀಶ್ ಮತ್ತು ಅಶೋಕ್ ಕುಲಕರ್ಣಿ (ನಮ್ಮ ಮತ್ತೊಬ್ಬ ಪ್ರಾಧ್ಯಾಪಕರು) ಶಟರ್ ಜೋರಾಗಿ ಎಳೆದು ತೆಗೆದು ಹೊರಗೆ ಓಡಿದರು ಅವರಿಗೆ ಅಲ್ಲಿನ ಆಟೋಗಳ ನೊಂದಣಿ ಸಂಖ್ಯೆಯನ್ನು ಗುರುತು ಹಾಕಿಕೊಳ್ಳುವಂತೆ ತಿಳಿಸಿದೆವು. ಇಲ್ಲಿ ವೈದ್ಯರು ಅಲ್ಲಿನ ಆಟೋಗಳ ಸಂಖ್ಯೆಗಳನ್ನು ಕೇಳುತ್ತಿದ್ದರು. ಅದನ್ನು ನಾವು ಒಂದು ಕಡೆ ಬರೆದಿಟ್ಟುಕೊಂಡೆವು. ಈಗ ದೇವರನ್ನು ಸತೀಶ್ ಮತ್ತು ಅಶೋಕ್ ಯಾವ ಭಾಗದಲ್ಲಿ ಬರುತ್ತಿದ್ದಾರೆಂದು ಕೇಳಿದಾಗ ಶಿಲ್ಪ ಬಾರ್ ಮುಂಭಾಗದಲ್ಲಿ ನಡೆದು ಬರುತ್ತಿದ್ದಾರೆಂದು ತಿಳಿಸಿದ. ಈ ಸಮಯದಲ್ಲಿ ಯಾವುದಾದರೂ ಆಟೋ ಆ ಸ್ಥಳದಿಂದ ಹೊರಟರೆ ಅದರ ಸಂಖ್ಯೆಯನ್ನು ತಿಳಿಸು ಎಂದಾಗ ೨-೩ ನಿಮಿಷಗಳ ನಂತರ ಒಂದು ಆಟೋ ಸಂಖ್ಯೆಯನ್ನು ಹೇಳಿ ಅದರಲ್ಲಿ ಇಬ್ಬರು ಪ್ರಯಾಣಿಕರಿದ್ದಾರೆಂದು ತಿಳಿಸಿದ. ಆತನನ್ನು ಕೆಲವು ವಯಕ್ತಿಕ ಪ್ರಶ್ನೆಗಳನ್ನು ಕೇಳಲು ಮುಂದಾದ ನನ್ನ ಸ್ನೇಹಿತರಿಗೆ ಡಾಕ್ಟರ್ ಆಸ್ಪದವೀಯಲಿಲ್ಲ.

ಹಿಂತಿರುಗಿ ಬರುವಂತೆ ಅವನಿಗೆ ಆದೇಶಿಸಿದ ವೈದ್ಯರು ಅವನನ್ನು ಒಳಗಿನ ಕೋಣೆಗೆ ಕರೆದು ಕೊಂಡು ಹೋದರು. ಹೊರಗೆ ಹೋಗಿದ್ದ ಸತೀಶ್ ಮತ್ತು ಅಶೋಕ್ ತಂದ ಆಟೋ ಸಂಖ್ಯೆಗಳನ್ನು ಕಂಡು ನಾವು ನಿಬ್ಬೆರಗಾಗಿದ್ದೆವು. ಇದ್ದ ನಾಲ್ಕು ಆಟೋ ಸಂಖ್ಯೆಗಳು ನಿಖರವಾಗಿ ಈತ ಹೇಳಿದ್ದ ಸಂಖ್ಯೆಗಳೇ. ಮತ್ತು ಅಲ್ಲಿಂದ ಹೊರಟಿತೆಂದು ಆತ ಹೇಳಿದ ಸಂಖ್ಯೆಯೂ ಸರಿಯಾಗಿತ್ತು ಮತ್ತು ಅದರಲ್ಲಿದ್ದ ಪ್ರಯಾಣಿಕರ ಸಂಖ್ಯೆ ಕೂಡ. ನಾನಂತೂ ಮಾನವನ ಮಾನಸಿಕ ಶಕ್ತಿಗೆ ಬೆರಗಾಗಿ ಹೋಗಿದ್ದೆ.

ಅವನನ್ನು ಒಳಗಿನ ಕೋಣೆಗೆ ಕರೆದುಕೊಂಡ ಹೋದ ವೈದ್ಯರು ಆತನಿಗೆ ಇದ್ದ ಒಂದು ಮಾನಸಿಕ ಸಮಸ್ಯೆಗೆ ಪರಿಹಾರ ಸೂಚಿಸಿದರು. ಪ್ರತಿರಾತ್ರಿ ಅವನಿಗೆ ನಿದ್ದೆಯಲ್ಲಿ ಒಬ್ಬ ವ್ಯಕ್ತಿ ದೇವರಂತೆ ಕಾಣಿಸಿಕೊಂಡು ಏನೋ ಹೇಳಿದಂತೆ ಭಾಸವಾಗುತ್ತಿತ್ತು. ಆ ಕ್ಷಣದಲ್ಲಿ ಆತ ತಾನು ಮಲಗಿದ್ದ ಕೋಣೆಯಲ್ಲೆಲ್ಲ ಒದ್ದಾಡಿ ವಸ್ತುಗಳನ್ನೆಲ್ಲ ಕಾಲಲ್ಲಿ ಒದೆದು ಬಿಡುತ್ತಿದ್ದ ಇದರ ಬಗ್ಗೆ ಆತನ ರೂಮಿನಲ್ಲಿದ್ದವರು ನಮಗೆ ತಿಳಿಸಿದ್ದರು. ಅದನ್ನು ವೈದ್ಯರು ಇನ್ನು ನಿನಗೆ ಆ ವ್ಯಕ್ತಿ ಇಂದಿನಿಂದ ಕಾಣಿಸಿಕೊಳ್ಳುವುದಿಲ್ಲ ಎಂದು ಆಣತಿಯಿತ್ತರು. ಸಖೇದಾಶ್ಚರ್ಯವೆಂದರೆ ಇದುವರೆಗೂ ಆ ಸಮಸ್ಯೆ ಅವನಿಗೆ ಮರುಕಳಿಸಿಲ್ಲ.

ಈ ಮಧ್ಯೆ ಸತೀಶ ಮತ್ತು ಅಶೋಕ್ ಹೊರ ಹೋಗಲು ಎಳೆದ ಶಟರ್‍ನ ಜೋರಾದ ಶಬ್ದ ವಶೀಕರಣಕ್ಕೊಳಗಾಗಿದ್ದ ಸಂಜೀವನನ್ನು ಎಚ್ಚರಿಸಿತು ಆತ ಹುಚ್ಚು ಹಿಡಿದವನಂತೆ ನಡೆದುಕೊಳ್ಳತೊಡಗಿದ. ವೈದ್ಯರು ಈಗ ನಿಜಕ್ಕೂ ಗಾಭರಿಯಾಗಿದ್ದರು. ಅವರ ಹಣೆಯಲ್ಲಿ ಬೆವರಿನ ಹನಿಗಳು ಕಾಣಿಸಿಕೊಳ್ಳತೊಡಗಿತು. ಅವನನ್ನು ಮತ್ತೆ ಮರು ಹಿಪ್ನಾಟಿಸಂಗೆ ಒಳಪಡಿಸಿ ನಂತರ ಹಿಪ್ನಾಟಿಸಂ ಸ್ಥಿತಿಯಿಂದ ಹೊರತಂದರು. ನಂತರ ಮಲಗಿದ್ದ ನಟರಾಜನನ್ನು ಹೊರತರಲು ಪ್ರಾರಂಭಿಸಿದರು. ಇಲ್ಲೊಂದು ಸಮಸ್ಯೆ ಶುರುವಾಯಿತು. ಎಷ್ಟೆ ಪ್ರಯತ್ನಿಸಿದರೂ ನಟರಾಜ ತನ್ನ ಮೊದಲ ಸ್ಥಿತಿಗೆ ಬರುತ್ತಿರಲಿಲ್ಲ. ಈಗಂತೂ ಡಾಕ್ಟರ್ ದೇಹದಿಂದ ಬೆವರಿ ಹೆದರಿದ್ದದ್ದು ಸ್ಪಷ್ಟವಾಗಿ ಎಲ್ಲರಿಗೂ ಗೋಚರವಾಗುತ್ತಿತ್ತು. ಸುಮಾರು ಅರ್ಧ ಗಂಟೆಯ ಪ್ರಯತ್ನದ ನಂತರ ಅವನನ್ನು ಯಶಸ್ವಿಯಾಗಿ ಹಿಂತಿರುಗಿ ಸಾಮಾನ್ಯ ಸ್ಥಿತಿಗೆ ಕರೆತಂದು ನಾವೆಲ್ಲರೂ ಮನೆಗೆ ನಡೆದಾಗ ರಾತ್ರಿ ಸುಮಾರು ೨ ಗಂಟೆಯಿರಬಹುದು.

ಇನೊಬ್ಬ ಸ್ನೇಹಿತ ಮುರಳಿ ನಿದ್ದೆಯಲ್ಲಿ ನಡೆದಾಡುತ್ತಿದ್ದ. ಅಕ್ಕನ ಮನೆಯಲ್ಲಿದ್ದವನಿಗೆ ಈ ಸಮಸ್ಯೆಯಿಂದ ಸರಿರಾತ್ರಿಯಲ್ಲಿ ಬೀಗ ತೆಗೆದು ಹೊರಗೆ ಹೋಗುತ್ತಿದ್ದದ್ದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿತ್ತು. ಮನೆಯವರು ಅದನ್ನು ತಪ್ಪಿಸಲು ಬಕೆಟ್ ಒಂದರಲ್ಲಿ ನೀರು ತುಂಬಿ ಅದರಲ್ಲಿ ಬೀಗದ ಕೈಗಳನ್ನು ಮುಳುಗಿಸಿಡುತ್ತಿದ್ದರು. ನೀರು ತಾಗಿ ಅವನಿಗೆ ಎಚ್ಚರವಾಗುತ್ತಿತ್ತು ಮತ್ತೆ ಹೋಗಿ ಮಲಗುತ್ತಿದ್ದ. ಈ ಹಿಪ್ನಾಟಿಸಂ ಪ್ರಯೋಗದ ನಂತರ ಮುರಳಿ ನಿದ್ದೆಯಲ್ಲಿ ನಡೆದಾಡುವುದನ್ನು ನಿಲ್ಲಿಸಿದ್ದ. ಹಿಪ್ನಾಟಿಸಂ ವಿಷಯ ಗೊತ್ತಿರದ ಆತನ ಅಕ್ಕ ನಮಗೆಲ್ಲ, ನಮ್ಮ ಮುರಳಿ ಈಗ ನಿದ್ದೆಯಲ್ಲಿ ಎದ್ದು ಓಡಾಡುತ್ತಿಲ್ಲ ಎಂದರೆ ನಾವೆಲ್ಲ ಒಬ್ಬರನ್ನೊಬ್ಬರು ನೋಡಿಕೊಂಡು ಮುಸಿ ಮುಸಿ ನಗುತ್ತಿದ್ದೆವು.
ಪ್ರತಿಯೊಂದು ಸಣ್ಣ ವಿಷಯಕ್ಕೂ ಗಾಭರಿಯಾಗುತ್ತಿದ್ದ ತನ್ನ ಸಮಸ್ಯೆ ಪರಿಹರಿಸಿಕೊಳ್ಳಲು ನಟರಾಜನಿಗೆ ಅವಕಾಶ ಸಿಗಲೇ ಇಲ್ಲ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

<< "ಸಖೇದಾಶ್ಚರ್ಯವೆಂದರೆ ಇದುವರೆಗೂ ಆ ಸಮಸ್ಯೆ ಅವನಿಗೆ ಮರುಕಳಿಸಿಲ್ಲ.">>

ಆಶ್ಚರ್ಯ ಓ ಕೆ, ಖೇದ ಯಾಕೆ ? ಸಮಸ್ಯೆ ಬರದಿದುದು ಒಳ್ಳೇದೇ ತಾನೇ ?

ಅನುಭವ ಸಕ್ಕತ್ತಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಖೇದ" ಕಾಣಿಸುತ್ತಿದ್ದ ದೇವರನ್ನು ಇಲ್ಲವಾಗಿಸಿದ್ದಕ್ಕೆ. ಪ್ರತಿಕ್ರಿಯೆಗೆ ಧನ್ಯವಾದಗಳು. ಶ್ರೀನಿವಾಸ ಐತಾಳರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ, ನಿಮ್ಮ ಅನುಭವವನ್ನು ಹಂಚಿಕೊಂಡಿದಕ್ಕೆ ಧನ್ಯವಾದಗಳು.

ಸಿಕ್ಕರೆ ಈ ಪುಸ್ತಕವನ್ನೊಮ್ಮೆ ನೋಡಿ:
"The Power of Your Subconscious Mind" by Joseph Murphy

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ನಿಜವೇ!!! ನಂಬುವುದಕ್ಕೆ ಕಷ್ಟವಾಗುತ್ತಿದೆಯಲ್ಲ ಸರ್. ನಿಜವಾಗಲೂ ಅತ್ಯಾಶ್ಚರ್ಯವಾಯಿತು!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೂ ನಂಬೋದಕ್ಕೆ ಆಗ್ತಾ ಇಲ್ಲ. ನಮ್ಮ ಆಸ್ಪತ್ರೆಯ ವಾರ್ಡ್ ಬಾಯ್ ಒಬ್ಬನಿಗೆ ಹೀಗೆ ಹಿಪ್ನಾಟೈಸ್ ಮಾಡಿ ಅವನ ಬಾಯಿಂದ ಕೆಲವು ಮಾತುಗಳನ್ನು ಹೊರಡಿಸಿದ್ದರು. ಆದ್ರೆ ಅವನು ಆ ಸ್ಥಿತಿಯಲ್ಲೂ ಕೂಡ ಸುಳ್ಳೇ ಹೇಳಿದ್ದ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವರು ಹೊರಗೆ ಹೋಗಿ ನೋಡಿದ್ದನ್ನು ಬಿಟ್ಟು ಉಳಿದಿದ್ದೆಲ್ಲಾ ನಾನೂ ನೋಡಿದ್ದೇನೆ. ನನ್ನ ಕೆಲವು ಗೆಳೆಯರಿಗೆ ಹೈಸ್ಕೂಲಿನಲ್ಲಿರುವಾಗ ಹಿಪ್ನೊಟೈಸ್ ಮಾಡಿದ್ದರು. ಅತಿ ಆಶ್ಚರ್ಯವಾಗಿದ್ದು ಅಂದ್ರೆ ೨ ಖುರ್ಚಿಯ ಮಧ್ಯೆ ಬರೀ ತಲೆ ಮತ್ತು ಕಾಲನ್ನು ಆಧಾರ ಇಟ್ಟು ಅವನ ದೇಹದ ಮೇಲೆ ಇನ್ನೊಬ್ಬ ಕೂತಿದ್ದು. ನೋಡಿ ತಲೆ ಕೆಟ್ಟೋಯ್ರು ನನಗೆ.
ಆದ್ರೆ ಹಿಪ್ನೊಟೈಸ್ ಮಾಡುವವರು ಪರಿಣಿತರಾಗಿರದಿದ್ದರೆ ಎಡವಟ್ಟು ಗ್ಯಾರ್ಂಟಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೂ ಸಾಧ್ಯವಿದೆ ತನ್ನನ್ನು ತಾನು ನಿಯಂತ್ರಿಸಿಕೊಳ್ಳಬಲ್ಲವರು ಸಾಧಾರಣ ಹಿಪ್ನೊಟೈಸ್ಗೆ ಒಳಗಾಗುವುದಿಲ್ಲ. ಕೆಲವರು ಡ್ರಗ್ ಹಿಪ್ನೊಟೈಸ್ಗೆ ಕೂಡ ಒಳಗಾಗುವುದಿಲ್ಲ ಎಂದು ಕೇಳಿದ್ದೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ನನ್ನಿ.
ನನಗೂ ಆಗ ಹಾಗೆ ಆಯಿತು, ವಿಮರ್ಷಿಸಿದೆ ಯಾವುದನ್ನೂ ಒಪ್ಪಿಕೊಳ್ಳದ ವಯಸ್ಸಿನಲ್ಲಿ ಎದುರಿಗೆ ನಡೆಯುತ್ತಿದ್ದದ್ದು ಒಪ್ಪಿಕೊಳ್ಳಲೇ ಬೇಕಾಯಿತು. ಮತ್ತೆ ಅವರೇನು ಡೋಂಗಿ ಸ್ವಾಮೀಜಿಗಳಾಗಲಿ, ಮೋಸ ಮಾಡುವವರಾಗಲಿ ಆಗಿರಲಿಲ್ಲ. ಸ್ವತಃ ವೈದ್ಯರಾಗಿ ಹೆಸರುಗಳಿಸಿದ್ದರು. ಆಟೋಗಳ ಸಂಖ್ಯೆ ನಿಖರವಾಗಿ ಹೇಳಿದಾಗ ನಂಬದೇ ಇರಲು ಸಾಧ್ಯವಿರಲಿಲ್ಲ. ಅಥವ ನಾನೂ ಕೂಡ ವಶೀಕರಣಕ್ಕೊಳಗಾಗಿದ್ದೇನೆಯೆ ಎಂದು ನನ್ನನ್ನೆ ಚಿವುಟಿಕೊಂಡದ್ದು ಇದೆ.
ಧೃತರಾಷ್ಟ ಸಂಜಯ ಆಗ ನನ್ನ ನೆನಪಿಗೆ ಬಂದರು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಶ್ಚರ್ಯ! .ಆದರೂ ಇಂತಹ ಘಟನೆಗಳು ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿದ್ದವು.ಹಿಪ್ನಾಟಿಸಂ ಅಲ್ಲದೆ ಬರೀ ಮಾನಸಿಕ ಶಕ್ತಿಯಿಂದ ಅನೇಕ ಅದ್ಭುತಗಳನ್ನು ನಮ್ಮ ಹಿರಿಯರು ಮಾಡ್ತಾ ಇದ್ದರು.
ಬೆಳೆಗೆರೆ ಕೃಷ್ಣ ಶಾಸ್ತ್ರಿ ಗಳು ಬರೆದ ಯೇಗ್ದಾಗೆಲ್ಲಾ ಐತೆ ,
ಮತ್ತು ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ ಕೃತಿಗಳಲ್ಲಿ ಬೇಕಾದಷ್ಟು ಉದಾಹರಣೆ ಸಿಗುತ್ತೆ.
ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿಪ್ನಾಟಿಸಂ ಎನ್ನುವುದೇ ಒಂದು ಮಾನಸಿಕ ಶಕ್ತಿಯ ಪ್ರಯೋಗವಲ್ಲವೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಹಿಪ್ನಾಟಿಸಂ ಎನ್ನುವುದೇ ಒಂದು ಮಾನಸಿಕ ಶಕ್ತಿಯ ಪ್ರಯೋಗವಲ್ಲವೆ?>
ಹೌದು,ಆದರೆ ನನ್ನ ಅಭಿಪ್ರಾಯ ಏನೆಂದರೆ ಹಿಪ್ನಾಟಿಸಂ ವಶೀಕರಣ ಎಂಬ ಸಂಕುಚಿತಾರ್ಥ ಕೊಡುತ್ತದೆ.
ಮಾನಸಿಕ ಶಕ್ತಿಗೆ ಇನ್ನೂ ಅನೇಕ ವೈಶಿಷ್ಟ್ಯಗಳಿವೆ ಎಂದು ನನ್ನ ಅನಿಸಿಕೆ.
ಹಿಪ್ನಾಟಿಸಂಗೆ ಸರಿಯಾದ ಅರ್ಥ ಬೇರೆ ಇದ್ದರೆ ತಿಳಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಾಸ್ಕಾರವರೆ

ಉತ್ತಮ ಬರಹ, ಹಿಪ್ನೋಟಿಸಂ ಬಗ್ಗೆ ತಿಳಿದುಕೊಳ್ಳುವ ಕಾತುರ ನನಗೂ ಇದೆ. ಆದರೆ ಇಲ್ಲಿನ ಕೆಲವು ವಿಚಾರಗಳು ಗೊಂದಲವನ್ನೂ ಮಾಡಿತು. ಹೊರಗಿರುವ ಆಟೋಗಳ ಸಂಖ್ಯೆಯನ್ನು ಇಲ್ಲಿ ಕುಳಿತಿರುವ ಮನುಷ್ಯ, ತನ್ನ ಮನಶಕ್ತಿಯನ್ನು ಉಪಯೋಗಿಸಿ ಹೇಳುವುದು ನನಗೆ ನಂಬಲಾಗಲಿಲ್ಲ.
ಇನ್ನೂ ನಿಮ್ಮ ಮತ್ತೊಬ್ಬ ಗೆಳೆಯ ನಟರಾಜ್ ಬಗ್ಗೆಯ ಅನುಭವವನ್ನು ಸ್ವಲ್ಪ ಹೇಳೀದ್ದರೆ ಚೆನ್ನಾಗಿತ್ತು. ಯಾಕೆಂದರೆ ನಿಮ್ಮ ಗೆಳೆಯರಿಬ್ಬರು ಎರಡು ರೀತಿಯ ಹಿಪ್ನೋಟಿಸಂ ಅನುಭವವನ್ನು ಏಕಕಾಲದಲ್ಲಿ ಪಡೆದಿದ್ದರು (ಒಬ್ಬರು ನಿದ್ರಿಸುವ ಮುಖೇನ, ಮತ್ತೊಬ್ಬರು ಮಾತಾನಾಡುತ್ತ)

ಈಗಲೂ ಸಾಧ್ಯವಾದರೆ ನಿಮ್ಮಿಬ್ಬರ ಸ್ನೇಹಿತರ ಅನುಭವವನ್ನು ಅವರ ಮಾತುಗಳಲ್ಲೇ ಕೇಳಿ ತಿಳಿಸಿ.

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾಕೆಂದರೆ ನಿಮ್ಮ ಗೆಳೆಯರಿಬ್ಬರು ಎರಡು ರೀತಿಯ ಹಿಪ್ನೋಟಿಸಂ ಅನುಭವವನ್ನು ಏಕಕಾಲದಲ್ಲಿ ಪಡೆದಿದ್ದರು (ಒಬ್ಬರು ನಿದ್ರಿಸುವ ಮುಖೇನ, ಮತ್ತೊಬ್ಬರು ಮಾತಾನಾಡುತ್ತ)

ನಿಮ್ಮ ಅನುಮಾನ ನನಗೆ ಅರ್ಥವಾಗಲಿಲ್ಲ. ಸ್ವಲ್ಪ ಬಿಡಿಸಿ ಹೇಳಿ. ನಟರಾಜ ಮತ್ತು ಸಂಜೀವನಿಗೆ ದೇವರ ಮೇಲಿನ ಪ್ರಯೋಗ ಈಗಲೂ ತಿಳಿದಿಲ್ಲ. ಅವರಿಬ್ಬರು ನಿದ್ರಾವಸ್ಥೆಯಲ್ಲಿದ್ದರು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಾಸ್ಕಾ

ನಾನು ಹೇಳಿದ್ದು ನಿಮ್ಮ ಲಿಂಗ ದೇವರು ಮತ್ತು ನಟರಾಜ್ ಬಗ್ಗೆ

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂದರೆ ನಟರಾಜನ ಪ್ರಯೋಗದ ಬಗ್ಗೆ ಕೇಳುತ್ತಿದ್ದೀರಾ? ಅವನಿಗೇನು ಪ್ರಯೋಗ ನಡೆಯಲಿಲ್ಲ. ಸಧ್ಯ ಅವನನ್ನು ಆಚೆ ಕರೆತಂದಿದ್ದೆ ದೊಡ್ಡ ಸಾಹಸವಾಯಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಾಸ್ಕಾ

ನನ್ನ ಪ್ರಶ್ನೆ ನಿಮಗೆ ಸರಿಯಾಗಿ ತಿಳಿಯಲಿಲ್ಲ ಎನಿಸುತ್ತದೆ, ಇಲ್ಲಿ ಪೂರ್ಣ ಹಿಪ್ನಾಟಿಸಂಗೆ ಒಳಗಾದ ನಿಮ್ಮ ಗೆಳೆಯ ಲಿಂಗದೇವರು ಅನುಭವವೂ. ಹಾಗೆ ಶವಾವಸ್ಥೆಯಲ್ಲಿದ್ದ ನಟರಾಜನ ಅನುಭವವೂ ಎರಡು ತೆರೆನಾಗಿದೆ ಅಲ್ಲವೇ, ಏನು ಪ್ರಯೋಗಕ್ಕೆ ಒಳಪಡದೆ (ಲಿಂಗದೇವರ ತರಹ) ಬರೀ ನಿದ್ರಾವಸ್ಥೆಯಲ್ಲಿದ ನಟರಾಜನ ಮನಸ್ಸಿನ ಅನುಭವವೇನಾದರೂ ತಿಳಿಯಿತೇ ಅಂತಾ, ಏಕೆಂದರೆ ನೀವೆ ಹೇಳಿದ ಹಾಗೆ ಅವನನ್ನು ಮೊದಲಿನ ಅವಸ್ಥೆಗೆ ತರಲು ಸಕ್ಕತ್ ಕಷ್ಟ ಪಟ್ಟಿರೆಂದು ಹೇಳಿದಿರಿ. ಆ ಸಂದರ್ಭದಲ್ಲಿ ನಟರಾಜನಿಗಾದ ಅನುಭವವೇನು ಎಂದು ಕೇಳಿದ್ದು ?

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ ನಟರಾಜನ ಮೇಲೆ ಯಾವ ಪ್ರಯೋಗವೂ ನಡೆಯಲಿಲ್ಲ. ಸಂಜೀವನ ತೊಂದರೆಯಿಂದ (ಇದೇ ಅವರಿಗೆ ಸಾಕಾಗಿ ಹೋಗಿತ್ತು) ಹೊರಬರುತ್ತಿದ್ದಂತೆ ನಟರಾಜನನ್ನು ಹಿಪ್ನಾಟಿಸಂ ಸ್ಥಿತಿಯಿಂದ ನೇರವಾಗಿ (ಯಾವುದೇ ಪ್ರಯೋಗವಿಲ್ಲದೆ) ಹೊರತರಲು ಆರಂಭಿಸಿದರು. ಅದರಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ೨-೩ ಪ್ರಯತ್ನಗಳ ನಂತರ ಅವನನ್ನು ಹೊರತರಲಾಯಿತು. ಪರಿಸ್ಥಿತಿ ತುಂಬಾ ಸೂಕ್ಷ್ಮ ಮತ್ತು ಗಂಭೀರವಾಗಿತ್ತು. ವೈದ್ಯರ ಪ್ರಕಾರ, ಯಶಸ್ವಿಯಾಗಿ ಹೊರತರಲಾಗದಿದ್ದರೆ ಆತನ ಮಾನಸಿಕ ಸ್ಥಿತಿ ಅಸ್ವಸ್ಥವಾಗುತ್ತಿತ್ತು. ಹುಚ್ಚು ಹಿಡಿಯುವ ಸಾಧ್ಯತೆಯೂ ಇರುತ್ತಿತ್ತು ಎಂದು ನಂತರ ತಿಳಿಸಿದರು. ಆಗ ನಮಗೆ ನಿಜಕ್ಕೂ ಗಾಭರಿಯಾಗಿತ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಾಸ್ಕಾ

ಹಿಪ್ನೋಟಿಸಂನಿಂದ ನಿದ್ರಾವಸ್ಥೆಯಲ್ಲಿದ್ದ ನಟರಾಜನಿಗೆ ಯಾವುದೇ ಅನುಭವ ಆಗಲಿಲ್ಲವಂತಾ, ಆ ಸಮಯದಲ್ಲಿ (ನೀವು ಅವನನ್ನು ಹೊರತರುವ ಪ್ರಯತ್ನದಲ್ಲಿದ್ದಾಗ) ಅವನಲ್ಲಾದ ಬದಲಾವಣೆಗಳು ಏನು ?

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವನಿಗೇನು ಗೊತ್ತೇ ಇಲ್ಲ. ಸಿದ್ದಲಿಂಗ ದೇವರಿಗೂ ಕೂಡ. ಮರೆತಿದ್ದೆ, ಹಿಪ್ನಾಟಿಸಂನಿಂದ ಹೊರತರುವಾಗ ವೈದ್ಯರು ನಿನ್ನ ನೆನಪಿನಲ್ಲಿ ಉಳಿಯುತ್ತವೆ ಎಂದು ಹೇಳಿದ ವಿಷಯಗಳು ಮಾತ್ರ ಅವರ ನೆನಪಿನಲ್ಲಿವೆ. ದೇವರಿಗೆ ನಾವು ಮಾಡಿದ ಯಾವ ಪ್ರಯೋಗಗಳು ನೆನಪಿನಲ್ಲಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸ್ಕ ರವರೇ,

ನಿಮ್ಮ ಅನುಭವ ಕಥನ ನಿಜಕ್ಕೂ ಚೆನ್ನಾಗಿದೆಯಾದರೂ, ಇದನ್ನು ಓದಿ [quote]ಎಷ್ಟೆ ಪ್ರಯತ್ನಿಸಿದರೂ ನಟರಾಜ ತನ್ನ ಮೊದಲ ಸ್ಥಿತಿಗೆ ಬರುತ್ತಿರಲಿಲ್ಲ. ಈಗಂತೂ ಡಾಕ್ಟರ್ ದೇಹದಿಂದ ಬೆವರಿ ಹೆದರಿದ್ದದ್ದು ಸ್ಪಷ್ಟವಾಗಿ ಎಲ್ಲರಿಗೂ ಗೋಚರವಾಗುತ್ತಿತ್ತು[/quote] ಯಾಕೊ ಭಯ ಹುಟ್ಟಿಸಿತು (ಅವರು ಮೊದಲ ಸ್ಥಿತಿಗೆ ಬರದೇ ಇದ್ದಿದ್ದರೆ ಅಂತ ಯೋಚಿಸಿ).

ಈ ಹಿಪ್ನಟಿಸಂ ಅನ್ನೋದು ಇನ್ನೊಂದು ರೀತಿಯಲ್ಲಿಯೂ ಇರುತ್ತದೆಯೇ? ನಾನು ಕೆಳಗೆ ಹೇಳಿರುವ ಮಾಹಿತಿಯನ್ನು ಓದಿ ಯಾರಿಗಾದರೂ ಗೊತ್ತಿದ್ದರೆ ತಿಳಿಸಿ.

(ಇದು ೭-೮ ವರ್ಷದ ಹಿಂದಿನ ಮಾತು) ನನ್ನ ಸ್ನೇಹಿತಿಯೊಬ್ಬಳು ಹೇಳಿದ ಮಾತು. ಅವಳ ಗಂಡ ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರ ಪರಿಚಯದವರೊಬ್ಬರಿದ್ದರಂತೆ. ಅವರ ಇಲಾಖೆಯೆ ಹಾಗು ಪರಿಚಯದವರ ಇಲಾಖೆ ಬೇರೆ ಬೇರೆಯಾಗಿತ್ತು. ಇವರು ಪೂರ್ಣ technical ಕಡೆ ಕೆಲಸಮಾಡುತ್ತಿದ್ದರು. ಅವರದು admin ಕಡೆ ಕೆಲಸ. ಇಬ್ಬರಿಗೂ ಪರಿಚಯವಾಗಿ, ಪ್ರತಿಯೊಂದಕ್ಕೂ ಇವರು ಅವರ ಸಲಹೆ ಕೇಳಿಯೇ ಎಲ್ಲ ವೈಯಕ್ತಿಕ ಕೆಲಸದಲ್ಲೂ ಮುಂದುವರೆಯುತ್ತಿದ್ದರಂತೆ. ಇವರು ಎಷ್ಟರಮಟ್ಟಿಗೆ ಅಂದರೆ ಸಣ್ಣ ಸಣ್ಣ ವಿಚಾರಕ್ಕೂ ಅವರ ಸಲಹೆ ಕೇಳಿ, ಅವರ ಮಾತು ಮೀರುತ್ತಿರಲಿಲ್ಲವಂತೆ. ಇವರ ಮದುವೆಯ ವಿಚಾರದಲ್ಲೂ ಅವರ ಸಲಹೆ ಪಡೆದಿದ್ದರಂತೆ. ಅವರು ಕರೆದಾಗ, ಇವರು ಅವರ ಇಲಾಖೆಗೆ ಹೋಗುತ್ತಿದ್ದರಂತೆ. ಹೀಗೆ ಇವರಿಗು ಮದುವೆಯಾಗಿ (ನನ್ನ ಸ್ನೇಹಿತೆಯ ಜೊತೆ), ನಂತರ ನನ್ನ ಸ್ನೇಹಿತೆಗೂ ಈ ವಿಚಾರ ಗೊತ್ತಾಯ್ತು. ಸ್ವಲ್ಪದಿನ ಇವಳು ಜಗಳವಾಡುತ್ತಿದ್ದಳು. ಕ್ರಮೇಣ ಅದಕ್ಕೆ ಹೊಂದಿಕೊಂಡುಹೋಗುತ್ತಿದ್ದಳು.

ಒಂದು ದಿನ ನಮ್ಮಿಬ್ಬರ (ನನ್ನ ಹಾಗು ನನ್ನ ಸ್ನೇಹಿತೆಯ) ಪರಿಚಯದವರ ಮದುವೆಯಲ್ಲಿ ಸಿಕ್ಕಾಗ, ನನ್ನ ಸ್ನೇಹಿತೆ ಹೀಗೆ ಹೇಳಿದಳು "ಅವರು ನನ್ನ ಗಂಡನನ್ನು ಹಿಪ್ನಟೈಸ್ ಮಾಡಿಬಿಟ್ಟಿದ್ದಾರೆ ಕಣೆ. ಎಷ್ಟು ಹೇಳಿದರು ಕೇಳೋದಿಲ್ಲ ಅಂತ. ನನಗೆ ಆಗ ನಿಜವಾಗಲೂ ಅರ್ಥವಾಗಿರಲಿಲ್ಲ. ಹೇಗಿರಬಹುದು ಈ ಹಿಪ್ನಟೈಸ್ ಅಂತೆಲ್ಲ ಯೋಚಿಸಿ ಅವಳ ಮಾತು ಕೇಳಿ ಸುಮ್ಮನಾಗಿದ್ದೆ.

ನಿಮ್ಮ ಅನುಭವ ಕಥನ ಓದಿದ ಮೇಲೆ ಅವಳು ಹೇಳಿದ ಮಾತು ನೆನೆಪಾಗಿ, ಈ ಹಿಪ್ನಟೈಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಆಸೆಯಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೊಂದು ಸಾಂಕೇತಿಕವಾಗಿ ಉಪಯೋಗಿಸಿದ ಪದವಿರಬೇಕು. ಹಾಗೆಲ್ಲ ಒಬ್ಬ ವ್ಯಕ್ತಿಯನ್ನು ಸದಾ ಅಥವ ಶಾಶ್ವತವಾಗಿ ಹಿಪ್ನೊಟೈಸ್ ಮಾಡಿ ಹಿಡಿದಿಡುವುದು ಸಾಧ್ಯವಿರಲಾರದು ಎಂದು ನನ್ನ ಅನಿಸಿಕೆ.
ನಂ ಹಳ್ಳಿ ಕಡೆ ಮಾಟ ಮಾಡ್ಸೊದು ಅಂತರೆ ನೀವು ಹೇಳಿದ ಉದಾಹರಣೆಗೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಾಸ್ಕಾ ರವರೆ ನನಗೆ ಇ ವಿಷ್ಯದ‌ ಬಗ್ಗೆ ಇನ್ನು ಹೆಚ್ಚು ಮಾಹಿತಿ ಕೊದುವಿರಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಾಸ್ಕಾ ರವರೆ ನಿಮ್ಮ‌ ಪ್ರತಿಕ್ರೀಯೆಗಾಗಿ ಕಾಯುತಿರುವೆನು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.