ಬದುಕು ಮತ್ತು ಒಂಟಿತನದ ನಡುವೆ...

4.57143

ಬೆಂಗಳೂರು ಎಂಬ ಮಾಯಾನಗರಿಗೆ ಬಂದು ಒಂದೂವರೆ ವರ್ಷಗಳಾಗುತ್ತಾ ಬಂತು. ಓದು ಮುಗಿಸಿ, ಚೆನ್ನೈಯಲ್ಲಿ ಕೆಲಸ ಸಿಕ್ಕಿ ಮನೆಯಿಂದ ಹೊರಟು ನಿಂತಾಗ ಅಮ್ಮ ಹೇಳಿದ್ದು "ಲೈಫ್್ನಲ್ಲಿ ಇನ್ನಾದರೂ ಸೀರಿಯಸ್ಸಾಗಿರು. ಮಕ್ಕಳಾಟ ಸಾಕು". ಅಪ್ಪ ಹೇಳಿದ್ದು" ಲೈಫ್್ನಲ್ಲಿ ಏನೇ ಸಮಸ್ಯೆ ಬಂದರೂ ಕೂಲ್ ಆಗಿ ತೆಗೋ. ಬದುಕು ಯಾವಾಗಲೂ ಒಂದೇ ತರ ಇರಲ್ಲ. ಪ್ರತಿಯೊಂದು ಕ್ಷಣವೂ ನಿನಗೆ ಅಮೂಲ್ಯವಾದ್ದು, ಈ ಬದುಕು ನಿನಗೆ ಎಲ್ಲವನ್ನೂ ಕಲಿಸುತ್ತದೆ". ನಿಜ, ಬದುಕು ಎಂಬುದು ಏನೆಂದು ಸರಿಯಾಗಿ ಅರ್ಥವಾದದ್ದೇ ನಾನು ಒಂಟಿಯೆನಿಸಿಕೊಂಡಾಗ. ಅಲ್ಲಿಯವರೆಗೆ ಅಪ್ಪನನ್ನು ಬಿಟ್ಟು ದೂರ ಹೋಗಿರದ ನಾನು ಒಂದು ವರ್ಷ ಚೆನ್ನೈಯಲ್ಲಿ ಕಳೆದ. ಆದರೆ ಅಲ್ಲಿ ನಾನು ಒಂಟಿಯಾಗಿರಲಿಲ್ಲ. ಅಲ್ಲಿ ನನಗೆ ಸಿಕ್ಕಿದ್ದು ಅಣ್ಣನ ಪ್ರೀತಿ, ಅಕ್ಕನ ಅಕ್ಕರೆ ಮತ್ತು ಗುರುಗಳಂತೆ ಉಪದೇಶ ನೀಡುವ ಸಹೋದ್ಯೋಗಿಗಳು, ಪ್ರೀತಿಯ ಗೆಳತಿಯರು. ಇವೆಲ್ಲಾ ಇದ್ದರೂ ಅಪ್ಪ ಅಮ್ಮ, ಮತ್ತು ನನ್ನ ಕುಟುಂಬದವರ ಪ್ರೀತಿಯಿದೆಯಲ್ಲ್ಲಾ ಅದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ಅಕಸ್ಮಾತ್ ಸೀನಿದರೆ ಸಾಕು, "ಪುಟ್ಟಾ.. ನೆಗಡಿಯಾಗಿದೆಯಾ? ತಲೆ ಕೂದಲು ಸರಿಯಾಗಿ ಒಣಗಿಲ್ಲವಾ? ಶೀತ ಗಾಳಿ ಬೀಸುತ್ತಿದೆ ಇನ್ನು ಹೊರಗೆ ಹೋಗ್ಬೇಡ"ಎಂದು ಬಲವಂತವಾಗಿ ಸ್ವೆಟರ್, ಮಂಕಿ ಕ್ಯಾಪ್ ತೊಡಿಸುವ ಅಮ್ಮ, ಟೀವಿ ನೋಡುತ್ತಾ ಕುಳಿತಲ್ಲೇ ನಿದ್ದೆ ಹೋದರೆ ಎತ್ತಿ ಕೊಂಡು ಹೋಗಿ ಮಲಗಿಸುವ ಅಪ್ಪ, ಮನಸ್ಸಿಗೆ ಬೇಜಾರಾಗಿದೆ ಎಂದು ಹೇಳಿದರೆ ಸಾಕು, ಬೈಕ್ ಸ್ಟಾರ್ಟ್ ಮಾಡಿ "ಬಾ ಒಂದು ರೌಂಡ್ ಹೊಡೆದು ಬರೋಣ" ಎಂದು ಹೇಳಿ ಹೊರಗೆ ಕರೆದುಕೊಂಡು ಹೋಗುವ ಅಣ್ಣ...ಮನೆಯಲ್ಲಿ ಚಿಕ್ಕವಳು(ನನ್ನ ತಮ್ಮ ಇದ್ದರೂ) ಅಂದ ಮಾತ್ರಕ್ಕೆ ಮುದ್ದು ಮಾಡಿ ಬೆಳೆಸಿದ್ದ ನಾನು ಬದುಕು ಏನೆಂದು ಕಲಿತದ್ದು, ಕಲಿಯುತ್ತಾ ಇರುವುದು ಕೂಡಾ ಯಾರೂ ನನ್ನೊಂದಿಗೆ ಇಲ್ಲದೇ ಇರುವಾಗ ಎಂಬುದು ನನ್ನ ಅನುಭವಕ್ಕೆ ಬಂದ ವಿಷಯ.

ಬದುಕು ಎಂದರೆ ಏನು? ಒಂಟಿತನವಾ? ದುಗುಡಗಳ ಸರಣಿಯಾ? ಸಂತಸದ ಹಾಸಿಗೆಯೂ ಅಲ್ಲ ಮುಳ್ಳಿನ ಬೇಲಿಯೂ ಅಲ್ಲ! ಬದುಕು ಅಂದರೆ ಬದುಕು. ಅದಕ್ಕೆ ಪಕ್ಕಾ ವ್ಯಾಖ್ಯಾನವನ್ನು ಕೊಡಲು ಸಾಧ್ಯನಾ? ಈ ಪ್ರಶ್ನೆಗಳಿಗೆ ಉತ್ತರವನ್ನು ಅನುಭವದ ಮೂಲಕವೇ ಕಂಡುಕೊಳ್ಳಲು ಸಾಧ್ಯ ಎಂದು ಹೇಳುತ್ತಿದ್ದರೂ ಬದುಕು ಎಂಬ ಯಾತ್ರೆ ಅಂತ್ಯವಿಲ್ಲದಂತೆ ಮುಂದುವರಿಯುತ್ತಿರುತ್ತದೆ. ಅಂದ ಹಾಗೆ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಪ್ರೇಮ, ಸಹಾನುಭೂತಿ, ದ್ವೇಷ, ಅಸೂಯೆ, ವಂಚನೆ, ವಿಶ್ವಾಸ, ಕಾಮ ಎಲ್ಲವೂ ಮಿಳಿತವಾಗಿರುತ್ತದೆ ಜೊತೆಗೆ ಒಂಟಿತನವೂ ಮನದಾಳದಲ್ಲಿ ನೆಲೆಸಿರುತ್ತದೆ. ಇಂತಹ ಒಬ್ಬಂಟಿತನವು ನಮ್ಮನ್ನು ಆಗಾಗ ಕಾಡುತ್ತಲೇ ಇರುತ್ತದೆ. ನಮ್ಮ ಸುತ್ತಮುತ್ತಲೂ ಸಾವಿರಾರು ಜನರು ಇದ್ದರೂ ನಾವು ಒಂಟಿ. ಎಲ್ಲವೂ ಶೂನ್ಯ...ಏನೋ ಅನಾಥ ಪ್ರಜ್ಞೆ ಕಾಡುತ್ತಿರುತ್ತದೆ. ಇದ್ಯಾಕೆ ಹೀಗೆ? ಮನೆಯಲ್ಲಿ ಅಷ್ಟೊಂದು ಮುದ್ದಿಸಿ ಯಾವುದಕ್ಕೂ ಕೊರತೆಯಿಲ್ಲದೆ ಬೆಳೆಸಿದ ಅಪ್ಪ ಅಮ್ಮ, ಸುಖ ದುಃಖಗಳಲ್ಲಿ ಸಾಥ್ ನೀಡಿದ ಗೆಳೆಯ ಗೆಳತಿಯರಿದ್ದರೂ ಯಾವನೋ ಒಬ್ಬ ಹುಡುಗನತ್ತ ಪ್ರೀತಿಯ ಆಕರ್ಷಣೆ ಯಾಕೆ? ಅಂದ್ರೆ ಮನಸ್ಸು ಯಾವಾಗಲೂ ಹೊಸದರೆಡೆಗೆ ತುಡಿಯುತ್ತದೆ ಅಂತಾನಾ? ವಾತ್ಯಲ್ಯ, ಮಮತೆ, ಕರುಣೆ, ಪ್ರೀತಿ ಎಲ್ಲವೂ ಕುಟುಂಬದಿಂದ ಲಭಿಸಿದ್ದರೂ ಅವನ ಪ್ರೇಮದತ್ತ ಮನಸ್ಸು ವಾಲುವುದು ಯಾಕೆ? ಅವನ ಪ್ರೀತಿಯೇ ಎಲ್ಲದಕ್ಕಿಂತಲೂ ಮಿಗಿಲು ಎನಿಸುವ ಆ ಒಂದು ಹುಚ್ಚು...ಆಮೇಲೆ ಆ ಪ್ರೀತಿ ಭಗ್ನವಾದಾಗ ಅನುಭವಿಸುವ ಯಾತನೆ, ಎಲ್ಲವೂ ಮುಗಿದು ಹೋಯಿತು ಇನ್ನು ಬದುಕೇ ಬೇಕಾಗಿಲ್ಲ ಎಂದು ನಿರ್ಧರಿಸಿದಾಗ ಮನಸ್ಸಿನ ಎಲ್ಲೋ ಮೂಲೆಯಲ್ಲಿ ಈಸ ಬೇಕು ಈಸಿ ಜೈಸಬೇಕು ಎಂಬ ಪ್ರತಿಧ್ವನಿ ಕೇಳಿಸುತ್ತದೆ. ಬದುಕಿಗೆ ಅಲ್ಲೊಂದು ಹೊಸ ತಿರುವು ಆರಂಭವಾಗುತ್ತದೆ. ಅವನಿಲ್ಲದಿದ್ದರೂ ನಾ ಬದುಕಬಲ್ಲೆ, ಪ್ರೀತಿ ಜೀವನದ ಒಂದು ಭಾಗ ಅಷ್ಟೇ...ಜೀವನ ಅಲ್ಲ ಎಂದು ಅರ್ಥವಾಗುವ ಆ ಕ್ಷಣವಿದೆಯಲ್ಲಾ ಅಲ್ಲಿ ನಾವು ಬದುಕಿನ ಹೊಸತೊಂದು ಹೆಜ್ಜೆಗೆ ಮುನ್ನುಡಿ ಬರೆದಿರುತ್ತೇವೆ. ಅಲ್ಲಿಯೂ ಬದುಕು ನಮಗೆ ಹೊಸತೊಂದು ಪಾಠವನ್ನು ಕಲಿಸಿ ಮುಂದುವರಿಯುತ್ತದೆ. ಅದೇನು ಕಲಿಸಿದೆ ಎಂಬುದನ್ನು ಅರಿಯಬೇಕಾದರೆ ಒಂಟಿಯಾಗಿ ಒಮ್ಮೆ ಇದ್ದು ಬಿಡೋಣ. ಆವಾಗ ಗೊತ್ತಾಗುತ್ತೆ ನಮ್ಮ ಬದುಕಿನ ಯಾವ ಮಜಲಿನಲ್ಲಿ ನಾವು ನಿಂತಿದ್ದೇವೆ? ಮತ್ತು ಮತ್ತೊಬ್ಬರ ಬದುಕಿನಲ್ಲಿ ನಾವು ಏನಾಗಿದ್ದೇವೆ? ಎಂದು.

ಒಂಟಿತನ ಕಾಡಬೇಕಾದರೆ ಭಗ್ನ ಪ್ರೇಮಿಯೇ ಆಗಬೇಕೆಂದಿಲ್ಲ. ಅದು ಯಾರಿಗೂ ಕಾಡಬಹುದು. ಭಾವನೆಗಳು ವಿಭಿನ್ನವಾಗಿರುವಂತೆ ಈ ಒಂಟಿತನದ ಕಾರಣವೂ ವೇದನೆಯೂ ಭಿನ್ನವಾಗಿರಬಹುದು. ಆಟಿಕೆಗಾಗಿ ಪುಟ್ಟ ಮಕ್ಕಳು ರಚ್ಚೆ ಹಿಡಿವಂತೆ ಅರಚಿಕೊಳ್ಳಲೂ ಆಗದ, ದುಃಖವನ್ನು ನುಂಗಿಕೊಳ್ಳಲೂ ಆಗದಂತಹಾ ಆ ಯಾತನೆಯಿದೆಯಲ್ಲಾ ಅದು ವರ್ಣನೆಗೆ ಅತೀತವಾದದ್ದು. ಯಾರನ್ನೋ ಕಳೆದುಕೊಂಡಾಗ ಕಾಡುವ ಅನಾಥ ಪ್ರಜ್ಞೆ ಹಾಗೂ ಎಲ್ಲರೂ ಇದ್ದರೂ ಕಾಡುವ ಅನಾಥ ಪ್ರಜ್ಞೆಯಿದೆಯಲ್ಲಾ ಇವೆರಡರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಅಪ್ಪ ಅಮ್ಮ ಕಳೆದುಕೊಂಡವರ ಮನಸ್ಸು ವಾತ್ಸಲ್ಯಕ್ಕಾಗಿ ಗೋಗರೆಯುತ್ತಿದ್ದರೆ ಅಲ್ಲಿ ಸೃಷ್ಟಿಯಾಗಿರುವ ಅನಾಥ ಪ್ರಜ್ಞೆ, ಒಂಟಿ ಭಾವನೆಯಿದೆಯಲ್ಲಾ ಅದು ಅತೀವ ವೇದನೆಯನ್ನುಂಟು ಮಾಡುವಂತಹದ್ದು. ಇಂತದರಲ್ಲಿ ಎಲ್ಲವೂ ಇದ್ದ ನಮಗೆ ಕಾಡುವ ಒಂಟಿತನ ಇದೆಯಲ್ಲ್ಲಾ ಅದು ಏನೇನೂ ಅಲ್ಲ. ಮನಸ್ಸಿನ ಒಳಗೊಳಗೆ ವೇದನೆಯಿದ್ದರೂ ಸಂತಸದಿಂದರಬೇಕು, ಪರಿಹಾರವಿಲ್ಲದ ಸಮಸ್ಯೆಯೇ ಇಲ್ಲ. ಅದಕ್ಕೆ ನಾವೇ ಉತ್ತರವನ್ನು ಕಂಡುಕೊಳ್ಳಬೇಕು ಎಂಬುದನ್ನು ಕೂಡಾ ಕಲಿಸಿಕೊಟ್ಟದ್ದು ಕೂಡಾ ಬದುಕಿನ ಅನುಭವಗಳೇ.

ನಾವು ಏನೇ ಮಾಡಿದರೂ ಬದುಕು ಸಾಗುತ್ತಲೇ ಇರುತ್ತದೆ. ಒಮ್ಮೊಮ್ಮೆ ಕವಲು ದಾರಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾ, ನೇರ ದಾರಿಯಲ್ಲಿಯೂ ಮುಗ್ಗರಿಸುತ್ತಾ ಅದು ತನ್ನ ಪಯಣವನ್ನು ಮುಂದುವರಿಸುತ್ತದೆ. ಆದಾಗ್ಯೂ, ಬದುಕು ಹಲವಾರು ಸಮಸ್ಯೆಗಳನ್ನು ನೀಡುವ ಮೂಲಕ ಮೊದಲು ನಮ್ಮನ್ನು ಪರೀಕ್ಷಿಸುತ್ತದೆ ಮತ್ತೆ ಪಾಠ ಕಲಿಸುತ್ತದೆ. ತಪ್ಪುಗಳನ್ನು ಮಾಡಿಸುತ್ತದೆ ಜೊತೆಗೆ ಅದನ್ನು ತಿದ್ದಿ ನಡೆಯಲು ಅವಕಾಶವನ್ನೂ ನೀಡುತ್ತದೆ. ಹೀಗೆ ಬದುಕಿನ ಪಾಠಶಾಲೆಯಲ್ಲಿ ನಾವೆಲ್ಲರೂ ವಿದ್ಯಾರ್ಥಿಗಳೇ. ಬದುಕಿನ ಸಮಸ್ಯೆಗಳನ್ನು ಎದುರಿಸಲು ಗಂಭೀರ ಮುಖ ಹೊತ್ತು ನಡೆಯಬೇಕಾಗಿಲ್ಲ ಆದರೆ ಮನಸ್ಸು ಗಟ್ಟಿಯಾಗಿರಬೇಕು, ತೆಗೆದು ಕೊಂಡ ನಿರ್ಧಾರದಲ್ಲಿ ಅಚಲರಾಗಿರಬೇಕು, ತಪ್ಪುಗಳನ್ನು ಒಪ್ಪಿಕೊಂಡು ಮತ್ತೊಮ್ಮೆ ಅದೇ ತಪ್ಪನ್ನು ಪುನರಾವರ್ತಿಸದಂತೆ ನೋಡಿಕೊಳ್ಳಬೇಕು ಎಂಬುದನ್ನು ಜೀವನ ಈಗಾಗಲೇ ಕಲಿಸಿಕೊಟ್ಟಿದೆ. ಎಲ್ಲವೂ ಅನುಭವದಿಂದ ಕಲಿತ ಪಾಠಗಳು. ಒಂಟಿತನ ಕಾಡಿದಾಗ ಇದೆಲ್ಲಾ ನೆನಪಿಗೆ ಬಂತು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (7 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅದಿಕ್ಕೆ ದೇವ್ರು ಸ್ನೇಹಿತರನ್ನ ಸೃಷ್ಟಿಸಿರುವುದು... ಕೆಲವೊಮ್ಮೆ ಪಾಲಕರ ನಡುವೆ ಹೇಳಿಕೊಳ್ಳಲಾಗದ ಸಮಸ್ಯೆಯನ್ನು ಸ್ನೇಹಿತರ ಮುಂದೆ ಹೇಳಿಕೊಂಡು, ಅವ್ರಿಂದ ಫಟಕ್ಕನೆ ಉತ್ತರ ದೊರೆತು, ಅಯ್ಯಬ್ಬ ಅಂತೇಳಿ ನಿರುಮ್ಮಳವಾಗುವ ಮಜ ಬೇರೆಲ್ಲೂ ಸಿಗಲ್ಲ... ಮತ್ತೆ, ಬಾಲ್ಯದಲ್ಲಿ ಸ್ನೇಹಿತರು, ಯೌವನದಲ್ಲಿ ಸಂಗಾತಿಯ ಜೊತೆ, ಅದಾದ ಸ್ವಲ್ಪದರಲ್ಲಿ ಮಕ್ಕಳು, ಮೊಮ್ಮಕ್ಕಳು, ಹೀಗೆ ಜೀವನದಲ್ಲಿ ಬರುವ ಪ್ರತಿಯೊಬ್ಬರ ಜೊತೆ ಪ್ರತಿಯೊಂದು ಕ್ಷಣಗಳನ್ನು, ಹಂತಗಳನ್ನು ಪೂರ್ಣವಾಗಿ ತೊಡಗಿಸಿಕೊಳ್ಳುತ್ತಾ, ಅನುಭವಿಸುತ್ತಾ ಸವಿಯುತ್ತಾ ಇದ್ರೆ ಜೀವನದಲ್ಲಿ ಒಂಟಿತನ ಕಾಡೋದು ಕಡಿಮೆ ಆಗುತ್ತೆ... ಜೀವನವೆಂಬ ನಾಟಕದಲ್ಲಿ ಬರುವ ಪಾತ್ರಗಳು ಹಲವು, ಕೆಲವೊಮ್ಮೆ ಮಗು, ಸಂಗಾತಿ, ಸ್ನೇಹಿತ, ಸಹೋದರ/ರಿ ಹೀಗೆ ಹಲವಾರು ಪಾತ್ರಗಳಿಗೆ ಸರಿಯಾಗಿ ಜೀವ ತುಂಬುತ್ತಾ ಪ್ರೇಕ್ಷಕರಿಗೂ ಸವಿ ಉಣಿಸಿ, ನಾವೂ ಅದರ ಸವಿ ಉಂಡು ಎಂಜಾಯ್ ಮಾಡ್ತಾ ಹೋದ್ರೆ, ಜೀವನವೆಂಬುದು ಸಾರ್ಥಕ ಅಲ್ವೆ??
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳಿದ್ದು ನಿಜ.. ಥ್ಯಾಂಕ್ಸ್...ಪ್ರತಿಕ್ರಿಯೆಗೆ... -ರಶ್ಮಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.