ಒಂದು ಕಾರ್ಡಿನ ಕಥೆ

4.666665

ಕಾರ್ಡು ಅಂದಾಗಲೇ ಪಕ್ಕನೆ ನೆನಪಿಗೆ ಬರುವುದೇ ಕ್ರೆಡಿಟ್ ಕಾರ್ಡು. ಹಣ ಪಾವತಿಸಲು ಬಾಕಿ ಇದ್ದರೆ ಕ್ರೆಡಿಟ್ ಕಾರ್ಡು ಎಂದು ಕೂಡಲೇ ಮಂಡೆಬಿಸಿಯಾಗುತ್ತೆ, ಸಂಬಳ ಬರುವ ದಿನವಾಗಿದ್ದರೆ ಡೆಬಿಟ್ ಕಾರ್ಡು ಸ್ವೈಪ್ ಮಾಡುವ ಸಂತಸ. ಆದರೆ ನಾನು ಹೇಳ ಹೊರಟಿರುವುದು ಕ್ರೆಡಿಟ್, ಡೆಬಿಟ್, ರೇಷನ್ ಕಾರ್ಡ್, ಐಡಿ ಕಾರ್ಡ್ ಅಥವಾ ನಮ್ಮ ವಿಸಿಟಿಂಗ್ ಕಾರ್ಡ್ ಬಗ್ಗೆ ಅಲ್ಲ. ಎಲ್ಲೋ ಮರೆತು ಹೋಗಿದ್ದ ಆ ಅಂಚೆ ಕಾರ್ಡ್ ಬಗ್ಗೆ. "ಅಲ್ಲಿ ತಲುಪಿದ ಕೂಡಲೇ ಒಂದು ಕಾರ್ಡನ್ನಾದರೂ ಬರೆದು ಹಾಕು" ಎಂದು ಹಳೆ ಕಾಲದಲ್ಲಿ ದೊಡ್ಡೋರು ಹೇಳುತ್ತಿದ್ದರೆ, ಈವಾಗ ನಾವು "ನೀನು ರೀಚ್ ಆದ ಕೂಡಲೇ ಒಂದು ಎಸ್ಸೆಮ್ಮೆಸ್ ಕಳುಹಿಸು" ಎಂದು ಹೇಳುತ್ತೇವೆ. ಕಾಲ ಬದಲಾಗಿದೆ. ಅಂಚೆ ಕಳುಹಿಸುವ ಬದಲು ನಾವು ಇಮೇಲ್ ಕಳುಹಿಸುತ್ತಿದ್ದೇವೆ. ಎಲ್ಲವೂ ಫಾಸ್ಟ್ ಫಾಸ್ಟ್.

ನಾನು ಚಿಕ್ಕವಳಿರುವಾಗ ಅಕ್ಕ ಹಾಸ್ಟೆಲ್್ನಿಂದ ಅಂಚೆ ಕಾರ್ಡಿನ ಮೂಲಕವೇ ಪತ್ರ ಬರೆಯುತ್ತಿದ್ದಳು. ಆವಾಗ ಆ ಕಾರ್ಡಿನ ಬೆಲೆ 15 ಪೈಸೆ. ಕಾರ್ಡು ಅಂದರೆ ಅಂತದ್ದು, ಇಲ್ಲಿ ಗೌಪ್ಯವಾಗಿಡುವ ವಿಷಯಗಳೇ ಇರುವುದಿಲ್ಲ. ಎಲ್ಲವೂ ಮುಕ್ತ ಮುಕ್ತ. ಇದು ಕೈಯಿಂದ ಕೈಗೆ ದಾಟಿ ಬರುವ ಹೊತ್ತಿಗೆ ಅಲ್ಲಿ ಬರೆದಿರುವಂತಹ ವಿಷಯಗಳು ಎಲ್ಲವೂ ಬಹಿರಂಗವಾಗಿರುತ್ತದೆ. ನಮ್ಮ ಮನೆಗೆ ಅಂಚೆ ತಂದುಕೊಡುವ ಪೋಸ್ಟ್ ಮ್ಯಾನ್ ಮಲಯಾಳಿಯಾಗಿದ್ದರೆ ಸದ್ಯ ಕಾರ್ಡಿನಲ್ಲಿ ಬರೆದಿರುವಂತಹ ವಿಷ್ಯ ಅವನಿಗೆ ಅರ್ಥವಾಗಲ್ಲ. ಅದೇ ವೇಳೆ ಕನ್ನಡಿಗನಾಗಿದ್ದರೆ ಅದರಲ್ಲಿರುವ ವಿಷಯವನ್ನೆಲ್ಲಾ ಓದಿ ಇರುತ್ತಾನೆ. ಆದಾಗ್ಯೂ, ಆತ ಆ ಕಾರ್ಡು ನಮ್ಮ ಕೈಗೆ ನೀಡುವ ಹೊತ್ತಿಗೆ ಅದರಲ್ಲಿರುವ ಯಾವುದಾದರೂ ಒಂದು ವಿಷಯ ಅಂದ್ರೆ, ಅವಳಿಗೆ ಆರಾಮ ಇಲ್ಲಂತೆ, ಮಾರ್ಕ್ಸ್ ಕಾರ್ಡು ಸಿಕ್ಕಿದೆಯಂತೆ ಎಂದು ಹೇಳಿರುತ್ತಾನೆ. ಅದಕ್ಕೇ ತುಂಬಾ ಸೀಕ್ರೆಟ್ ಆದ ವಿಷಯಗಳನ್ನು ಅದರಲ್ಲಿ ಬರೆಯುವಂತಿರಲಿಲ್ಲ. ಅದಕ್ಕೆಲ್ಲಾ ನಮ್ಮ ನೀಲಿ ಬಣ್ಣದ ಇನ್್ಲ್ಯಾಂಡ್ ಲೆಟರೇ ಉತ್ತಮ.

ಕಾರ್ಡಿನಲ್ಲಿ ಯಾವ ವಿಷಯಗಳನ್ನು ಬರೆಯಬೇಕು ಮತ್ತು ಯಾವುದನ್ನು ಬರೆಯಬಾರದು ಎಂಬುದರ ಬಗ್ಗೆ ಅವಳಿಗೆ ಚೆನ್ನಾಗಿ ತಿಳಿದಿರುತ್ತಿತ್ತು. ಮಾತ್ರವಲ್ಲದೆ ಆ ಕಾರ್ಡಿನ ಜಾಗವನ್ನು ಯಾವ ರೀತಿ ಬಳಸಬೇಕೆಂಬುದು ಕೂಡಾ ನಾನು ತಿಳಿದುಕೊಂಡದ್ದು ಅವಳಿಂದಲೇ. ಅಂದರೆ ಚಿಕ್ಕ ಅಕ್ಷರಗಳಲ್ಲಿ ಬರೆದು ಅದರ ಪ್ರತಿ ಚದುರ ಅಂಗಲವನ್ನೂ ಬಳಸುವ ಮೂಲಕ 15 ಪೈಸೆಯ ಸಂಪೂರ್ಣ ಉಪಯೋಗವನ್ನು ಆಕೆ ಪಡೆದುಕೊಳ್ಳುತ್ತಿದ್ದಳು. ಅಲ್ಲಿ ಬರೆಯುತ್ತಿದ್ದದ್ದು ಅಷ್ಟೇನು ಪ್ರಮುಖ ವಿಷಯಗಳೇನು ಅಲ್ಲ್ಲ. ಇವತ್ತು ಚಳಿ ಇತ್ತು. ಬೆಳಗ್ಗೆ ಏಳುವಾಗ ಲೇಟಾಯ್ತು. ಮುಂದಿನ ವಾರ ಬರುವಾಗ ಚಂದಮಾಮ, ಪುಣಾಣಿ, ಬಾಲ ಮಂಗಳ ತಪ್ಪದೇ ತನ್ನಿ. ಅಮ್ಮ ಕೊಟ್ಟು ಕಳುಹಿಸಿದ 'ಅವಲೋಸು ಪುಡಿ' ಮುಗಿದಿದೆ. ಹೀಗೆ ಹಾಸ್ಟೆಲ್ ವಿಶೇಷಗಳ ಜೊತೆಗೆ ದನ ಕರು ಹಾಕಿದಾ?, ಬೆಕ್ಕಿನ ಮರಿ ಹುಷಾರಿದೆಯಾ? ಅಣ್ಣ, ತಮ್ಮ,ತಂಗಿ ಹೇಗಿದ್ದಾರೆ? ಎಂಬ ಹಲವಾರು ಪ್ರಶ್ನೆಗಳೂ ಇರುತ್ತಿದ್ದವು.

ಆ ಹಳದಿ ಬಣ್ಣದ ಆ ಒಂದು ಪುಟ್ಟ ಕಾರ್ಡಿನಲ್ಲಿ ಎಲ್ಲಾ ವಿಷಯಗಳನ್ನು ಚಿಕ್ಕದಾಗಿ ಚೊಕ್ಕದಾಗಿ ಬರೆದಿರುವುದರಿಂದ ಒಂದು ನಿಮಿಷದಲ್ಲೇ ಅದನ್ನು ಓದಿ ಮುಗಿಸಬಹುದಾಗಿತ್ತು. ಇದನ್ನು ಕುಟುಂಬಗಳ ನಡುವಿನ ಸಂವಹನಕ್ಕೆ ಮಾತ್ರವಲ್ಲ ಕೆಲವೊಂದು ಸ್ಪರ್ಧಾತ್ಮಕ ಪ್ರಶ್ನೆಗಳಿಗೆ ಉತ್ತರವನ್ನೂ ಬರೆದು ಕಳುಹಿಸಲು ಬಳಸಲಾಗುತ್ತಿತ್ತು.

ನಿಮಗೆ ನೆನಪಿರಬಹುದು ಅಂದು ದೂರದರ್ಶನದಲ್ಲಿ (ಡಿ.ಡಿ 1) ಸುರಭಿ ಎಂಬ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಕಾರ್ಯಕ್ರಮದ ಕೊನೆಗೆ ಅದರಲ್ಲಿ ಒಂದು ಪ್ರಶ್ನೆಯನ್ನೂ ಕೇಳಲಾಗುತ್ತಿತ್ತು. ಈ ಪ್ರಶ್ನೆಗೆ ಉತ್ತರವನ್ನು ಪೋಸ್ಟ್ ಕಾರ್ಡು ಮೂಲಕವೇ ಕಳುಹಿಸಬೇಕು. ಆವಾಗ ನಾನು ಕೂಡಾ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಬರೆದು ಕಳುಹಿಸುತ್ತಿದೆ. ಹೀಗೆ ಸುರಭಿ ಕಾರ್ಯಕ್ರಮಕ್ಕೆ ತಲುಪುವ ಉತ್ತರಗಳ ಕಾರ್ಡುಗಳನ್ನು ರಾಶಿ ಹಾಕಿ ಅದರಲ್ಲಿ ಮೂವರು ಲಕ್ಕಿ ವಿನ್ನರ್್ಗಳನ್ನು ಆರಿಸಲಾಗುತ್ತಿತ್ತು. ನಾವು ಕಳುಹಿಸದ ಉತ್ತರಗಳು ಸರಿಯಾಗಿದ್ದರೆ ಪ್ರೋಗ್ರಾಂ ನೋಡುತ್ತಿದ್ದಂತೆ ಆ ಮಗು (ಕಾರ್ಡುಗಳನ್ನು ಹೆಕ್ಕಿ ತೆಗೆಯಲು ಹೆಚ್ಚಾಗಿ ಪುಟ್ಟ ಮಕ್ಕಳನ್ನೇ ಬಳಸುತ್ತಿದ್ದರು) ಹೆಕ್ಕಿ ತೆಗೆಯುವ ಕಾರ್ಡು ನನ್ನದೇ ಆಗಿರಲಿ ಎಂದು ಪ್ರಾರ್ಥಿಸುತ್ತಿದ್ದೆವು. ಆದರೆ 'ಆಜ್ ಕ ಲಕ್ಕಿ ವಿನ್ನರ್ ಹೈ... ಎಂದು ಕಾರ್ಡನ್ನು ತೋರಿಸಿ ಕಾರ್ಯಕ್ರಮ ನಿರೂಪಕರಾದ ರೇಣುಕಾ ಮತ್ತು ಸಿದ್ದಾರ್ಥ್ ಹೇಳುವಾಗ ಅಲ್ಲಿ ಹೆಚ್ಚಾಗಿ ಕಾಣುತ್ತಿದ್ದದ್ದು ಉತ್ತರ ಭಾರತದ ವ್ಯಕ್ತಿಗಳ ವಿಳಾಸಗಳೇ. ಅಪರೂಪಕ್ಕೆ ಎಂಬಂತೆ ಲಕ್ಕಿ ವಿನ್ನರ್ ಪಟ್ಟ ದಕ್ಷಿಣ ಭಾರತದ ವ್ಯಕ್ತಿಗಳಿಗೆ ಲಭಿಸುತ್ತಿತ್ತು.


 
'ಸುರಭಿ' ಎಂಬ ಕಾರ್ಯಕ್ರಮದಿಂದಾಗಿಯೇ ಭಾರತೀಯ ಅಂಚೆ ಇಲಾಖೆಯ ಈ ಪುಟ್ಟ ಕಾರ್ಡು ಬಹುತೇಕ ಖರ್ಚಾಗುತ್ತಿತ್ತು. ತದನಂತರ ಸುರಭಿ ಅಥವಾ ಇನ್ನಾವುದೇ ಕಾರ್ಯಕ್ರಮಗಳಿಗೆ ಉತ್ತರವನ್ನು ಕಳುಹಿಸಬೇಕಾದರೆ ಸ್ಪರ್ಧಾ ಪೋಸ್ಟ್ ಕಾರ್ಡು (ಕಾಂಪಟೀಷನ್ ಪೋಸ್ಟ್ ಕಾರ್ಡು) ಬಳಸಬೇಕಾಗುತ್ತಿತ್ತು. ಆವಾಗ ಅದರ ಬೆಲೆ 5 ರೂ. 5 ರೂ ದುಬಾರಿಯಾಗಿರುವ ಕಾರಣ ಕ್ರಮೇಣ ಇಂತಾ ಕಾರ್ಯಕ್ರಮಗಳಿಗೆ ಸಿಕ್ಕಾಪಟ್ಟೆ ಉತ್ತರ ಕಳುಹಿಸುವ ಚಾಳಿಗೆ ಬ್ರೇಕ್ ಬಿತ್ತು. ಅದೂ ಉತ್ತರ ಅಷ್ಟು ಪಕ್ಕಾ ಆಗಿದ್ದರೆ ಮಾತ್ರ ನಾನು 5 ರೂ ಖರ್ಚು ಮಾಡಿ ಉತ್ತರ ಕಳುಹಿಸುತ್ತಿದ್ದೆ. ಸಚಿನ್ ತೆಂಡೂಲ್ಕರ್್ಗೆ 25 ವರ್ಷ ತುಂಬಿದಾಗ ಡಿಡಿ.1ನಲ್ಲಿ ಪ್ರಸಾರವಾದ ವಿಶೇಷ ಕಾರ್ಯಕ್ರಮವೊಂದರಲ್ಲಿ ಕೇಳಲಾದ ಪ್ರಶ್ನೆಗೆ ಇದೇ ಸ್ಪರ್ಧಾ ಪೋಸ್ಟ್ ಕಾರ್ಡ್್ನಲ್ಲಿ ಉತ್ತರ ಕಳುಹಿಸಿ ನನಗೆ ಬಹುಮಾನವೂ ಬಂದಿತ್ತು. ಇನ್ನೊಂದು ವಿಷಯ, ಉತ್ತರ ಕಳುಹಿಸಿ ನಾವು ಲಕ್ಕಿ ವಿನ್ನರ್ ಆಗದಿದ್ದರೂ ಯಾವುದೋ (ಚೈನಾ ಕಂಪೆನಿಯ) ಕ್ಯಾಮೆರಾ ನಿಮಗೆ ಬಹುಮಾನವಾಗಿ ಲಭಿಸಿದೆ. ಅದಕ್ಕಾಗಿ 500 ರೂ ಮನಿ ಆರ್ಡರ್ ಮಾಡಿ ಎಂಬ ಯಾವುದೋ ನಕಲಿ ಪತ್ರ (ಕಾರ್ಡು) ಕೂಡಾ ನಮ್ಮ ವಿಳಾಸಕ್ಕೆ ಬರುತ್ತಿತ್ತು. ಎಷ್ಟೋ ಬಾರಿ ಹಲವಾರು ಜನರು ಇದು ನಿಜವೇ ಆಗಿರಬಹುದೆಂದು ನಂಬಿ 500 ರೂ ಕಳುಹಿಸಿ ಮೋಸ ಹೋದ ಪ್ರಸಂಗಗಳೂ ನಡೆದದ್ದೂ ಇದೆ. ಅಂದ ಹಾಗೆ ಕೆಲವೊಂದು ಪತ್ರಿಕೆಗಳಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರ ನೀಡಲು, ಸಂಪಾದಕರಿಗೆ ಪತ್ರ ಬರೆಯಲು ಕೂಡಾ ಕಾರ್ಡನ್ನು ಬಳಸುವ ಸಂಪ್ರದಾಯವಿತ್ತು. ವಾರ ಪತ್ರಿಕೆಯೊಂದು ಪೋಸ್ಟ್ ಕಾರ್ಡಿನಲ್ಲಿ ಲವ್ ಲೆಟರ್ ಬರೆದು ಬಹುಮಾನ ಗಳಿಸಿ ಎಂಬ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು ಎಂಬುದು ಕಾರ್ಡು ಬಗ್ಗೆಯಿರುವ ನನ್ನ ನೆನಪುಗಳಲ್ಲೊಂದು.

ಇದು ಮಾತ್ರವಲ್ಲದೆ "ನೀವು ಏಸುವಿನಲ್ಲಿ ನಂಬಿಕೆ ಇರಿಸುವುದಾದರೆ ನಿಮಗೆ ಬಂದ ಕಾರ್ಡಿನಲ್ಲಿ ಬರೆದಿರುವ ವಿಷಯಗಳನ್ನು ಇದೇ ರೀತಿ ಬರೆದು 15 ಮಂದಿಗೆ ಕಳುಹಿಸಿ. ಹೀಗೆ ಮಾಡಿದಲ್ಲಿ ನಿಮಗೆ ಹದಿನೈದು ದಿನಗಳೊಳಗೆ ಭಾಗ್ಯ ಬರುತ್ತದೆ". ಎಂಬ ಕಾರ್ಡು ನಮ್ಮ ವಿಳಾಸಕ್ಕೆ ಬರುತ್ತಿತ್ತು. ಭಾಗ್ಯ ಬರುತ್ತದೆ ಅಂದ್ರೆ ಯಾರಾದರೂ ಸುಮ್ಮನೆ ಇರುತ್ತಾರಾ? ವಿದ್ಯಾರ್ಥಿ ದೆಸೆಯಲ್ಲಿ ನಾನು ಕೂಡಾ ಹೀಗೆ 15 ಕಾರ್ಡುಗಳನ್ನು ಬರೆದು ಕಳುಹಿಸಿದ್ದೆ. ಕೆಲವೊಮ್ಮೆ ಸರಕಾರದಿಂದ ಪಠ್ಯಪುಸ್ತಕಗಳು ಲಭಿಸದೇ ಇದ್ದಾಗ ಶಾಲೆಯಿಂದ ಎಲ್ಲಾ ವಿದ್ಯಾರ್ಥಿಗಳು ಸೇರಿ ಕಾರ್ಡಿನಲ್ಲಿ ವಿನಂತಿಯೊಂದನ್ನು ಬರೆದು ಸರಕಾರಕ್ಕೆ ಸಲ್ಲಿಸುತ್ತಿದ್ದೆವು. ಕಾರ್ಡು ಅಲ್ಲಿಗೆ ತಲುಪುತ್ತಿತ್ತೋ, ಅದನ್ನು ನಮ್ಮ ವಿದ್ಯಾಭ್ಯಾಸ ಮಂತ್ರಿ ಓದುತ್ತಿದ್ದರೋ ಎಂಬುದು ನಮಗೆ ಗೊತ್ತಿಲ್ಲ ಆದರೆ ಪಠ್ಯ ಪುಸ್ತಕವಂತೂ ಬೇಗ ನಮ್ಮ ಕೈ ಸೇರುತ್ತಿತ್ತು. ಇನ್ನು ಯಾವುದಾದರೂ ಸ್ಪರ್ಧೆಯಲ್ಲಿ ಭಾಗವಹಿಸುವ ಸಲುವಾಗಿ ವಿವರಗಳನ್ನು ಕಳುಹಿಸಲು, ಚರ್ಚೆಗಳಲ್ಲಿ ಭಾಗವಹಿಸಲು ಆಮಂತ್ರಣವನ್ನು ಕಳುಹಿಸುತ್ತಿದ್ದು ಕೂಡಾ ಇದೇ ಕಾರ್ಡಿನಲ್ಲಿ. ಆದಾಗ್ಯೂ, ಹೊಸ ವರುಷ ಬಂದಾಗ ನಮ್ಮ ಮನೆಯಲ್ಲಿ ನನ್ನ ಅಕ್ಕ ಆ ಪುಟ್ಟ ಕಾರ್ಡಿನಲ್ಲಿ ಅಂದವಾದ ಚಿತ್ರವನ್ನು ಬಿಡಿಸುತ್ತಿದ್ದು, ಅದರಲ್ಲಿ ಶುಭಾಶಯವನ್ನು ಬರೆದು ನಾವು ಬಂಧು ಮಿತ್ರರಿಗೆ ಕಳುಹಿಸುತ್ತಿದ್ದೆವು. ಈ ಮೂಲಕ ಕ್ರಿಯೇಟಿವಿಟಿ ಪ್ರದರ್ಶಿಸುವುದರೊಂದಿಗೆ ಹಣವೂ ಉಳಿತಾಯವಾಗುತ್ತಿತ್ತು. ಆದರೆ

ನಾವೀಗ ಈ ಕಾರ್ಡನ್ನು ಬಹುತೇಕ ಮರೆತೇ ಬಿಟ್ಟಿದ್ದೇವೆ ಎಂದು ಹೇಳಬಹುದು. ಈ ಮೊದಲು 15 ಪೈಸೆಗೆ ಲಭಿಸುತ್ತಿದ್ದ ಕಾರ್ಡಿನ ಬೆಲೆ ಈಗ 50 ಪೈಸೆಯಾಗಿದೆ. ಜೊತೆಗೆ ರಿಪ್ಲೈ ಕಾರ್ಡು ಅಂತಾ ಬೇರೊಂದು ನಮೂನೆಯ ಕಾರ್ಡು. ಇದರ ಬೆಲೆ 50 ಪೈಸೆ, ಸ್ಪರ್ಧಾ ಪೋಸ್ಟ್ ಕಾರ್ಡು ಬೆಲೆ 2 ರೂ. ಅದಕ್ಕೆ 8 ರೂ ಸ್ಟ್ಯಾಂಪ್ ಅಂಟಿಸಬೇಕು, ಹಾಗಾದ್ರೆ ಇದರ ಒಟ್ಟು ಬೆಲೆ 10ರೂ. ಇನ್ನೊಂದು ಕಾರ್ಡು ಇದೆ ಅದರ ಹೆಸರು ಮೇಘದೂತ್ , ಬೆಲೆ 25 ಪೈಸೆ. ಇದರ ವಿಶೇಷವೇನೆಂದರೆ ಇದರ ಒಂದು ಭಾಗದಲ್ಲಿ ಅಂದರೆ, ವಿಳಾಸ ಬರೆಯುವ ಸ್ಥಳದ ಎಡಭಾಗದಲ್ಲಿ ಯಾವುದಾದರೊಂದು ಮಾಹಿತಿ ಜಾಹೀರಾತು ಇರುತ್ತೆ. ಸದ್ಯ ನನ್ನ ಕೈಯಲ್ಲಿರುವ ಮೇಗದೂತ್ ಕಾರ್ಡಿನಲ್ಲಿ ತೆಲುಗಿನಲ್ಲಿ ಕಲಿಯುಗ ಸಂಘಶಕ್ತಿ ಎಂಬ ಮಹಿಳಾ ಸ್ವ ಸಹಾಯ ಸಂಘದ ಬಗ್ಗೆ ಮಾಹಿತಿಯಿದೆ. 2002ರಲ್ಲಿ ಭಾರತೀಯ ಅಂಚೆ ಬಿಡುಗಡೆ ಮಾಡಿದ ಈ ಮೇಗದೂತ್ ಕಾರ್ಡಿನಲ್ಲಿ ರಜನೀಕಾಂತ್ ನಟಿಸಿದ ಬಾಬಾ ಚಿತ್ರದ ಜಾಹೀರಾತು ಕೂಡಾ ಕಾಣಿಸಿಕೊಂಡಿತ್ತು. ಹೀಗೆ ನಾವೆಲ್ಲಾ ಮರೆತು ಹೋಗಿದ್ದ ಈ ಕಾರ್ಡನ್ನು ಮತ್ತೆ ನೆನೆಪಿಸಿಕೊಳ್ಳುವ ನೆಪದಲ್ಲಿ ಕಾರ್ಡು ಖರೀದಿಸಲು ಅಂಚೆ ಕಚೇರಿಗೆ ಹೋದಾಗ ಸಿಬ್ಬಂದಿ ಆಶ್ಚರ್ಯದಿಂದ ಕೇಳಿದ ಪ್ರಶ್ನೆ .."ನೀವು ಈಗಲೂ ಕಾರ್ಡು ಬಳಸುತ್ತಿದ್ದೀರಾ?"

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಶ್ಮಿ ಪೋಸ್ಟಕಾರ್ಡಿನ ನೆನಪು ತಂದುಕೊಟ್ರಿ ಧನ್ಯವಾದಗಳು. ಸಣ್ಣವನಿದ್ದಾಗ ನನ್ನ ತಂದೆ ಹೇಳುತ್ತಿದ್ದರು ನಾ ಬರೆಯುತ್ತಿದ್ದೆ. ನಿಜ ಹದಿನೈದು ಪೈಸೆ ಮಾತ್ರ ಆದರೆ ಸುದ್ದಿ ತಿಳಿಸಲು ತಿಳಿದುಕೊಳ್ಳಲು ಎಂಥಾ ಮಾಧ್ಯಮ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮೀ, ಕಾರ್ಡ್ ಬಗ್ಗೆ ಓದು ಖುಷಿ ಆಯ್ತು. ಈ ಕಾರ್ಡ್ ಅಂದ ಕೂಡಲೇ ನನಗೆ ನೆನಪಾದದ್ದು ನಾನು, ಆಗ ತರಂಗ ವಾರಪತ್ರಿಕೆಯ ಸಂಪಾದಕರಾಗಿದ್ದ ಶ್ರೀ ಸಂತೋಷ್ ಕುಮಾರ್ ಗುಲ್ವಾಡಿಯವರಿಗೆ ರವಾನಿಸಿದ್ದ ಒಂದು ಕಾರ್ಡ್. ಶ್ರೀಮತಿ ಸಂಧ್ಯಾ ಪೈಯವರು ಸಕ್ರಿಯರಾಗಿ ಪತ್ರಿಕಾರಂಗಕ್ಕೆ ಧುಮುಕಿದ ಹೊಸದರಲ್ಲಿ, ತರಂಗದಲ್ಲಿ ಪ್ರಧಾನ ಸಂಪಾದಕರು : ಶ್ರೀಮತಿ ಸಂಧ್ಯಾ ಪೈ ಅಂತಲೂ ಸಂಪಾದಕ: ಸಂತೋಷ್ ಕುಮಾರ್ ಗುಲ್ವಾಡಿ ಅಂತಲೂ ಪ್ರಕಟವಾಗುತ್ತಿತ್ತು. ಅದಕ್ಕೆ ನಾನೊಂದು ಕಾರ್ಡಿನಲ್ಲಿ ಶ್ರೀ ಗುಲ್ವಾಡಿಯವರಿಗೆ: "ಮಾನ್ಯರೇ, ಪ್ರಧಾನ ಸಂಪಾದಕರು (ಬಹುವಚನ ಇದೆ) ನೀವು ಬರೇ ಸಂಪಾದಕ (ಏಕವಚನ). ಇದರರ್ಥ ನಿಮಗೆ ಸದ್ಯದಲ್ಲೆ ತರಂಗದಿಂದ ಅರ್ಧಚಂದ್ರ ಕಾದಿದೆ" ಅಂತ ಬರೆದು ಕಳುಹಿಸಿದ್ದೆ. ನನ್ನ ಪತ್ರವನ್ನು ಪ್ರಕಟಿಸಿಲ್ಲ ಹಾಗೂ ಪ್ರಕಟಿಸುವಂತದ್ದಲ್ಲವಾಗಿದ್ದರೂ, ಅವರು ಅಲ್ಲಿಂದ ಎತ್ತಂಗಡಿ ಆದದ್ದಂತೂ ನಿಜ. -ಆತ್ರಾಡಿ ಸುರೇಶ ಹೆಗ್ಡೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@umeshhubliwala @asuhegde ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.. -ರಶ್ಮಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.