ದೊಡ್ಡವರಾಗುವುದೆಂದರೆ....?

4.57143

"ಮಗಳು ದೊಡ್ಡವಳಾಗಿದ್ದಾಳೆ" ಎಂದು ಮಾವನ ಮನೆಯಿಂದ ಕರೆ ಬಂದಾಗ, ನನ್ನ ಅಪ್ಪ ಅಮ್ಮ ಎಲ್ಲರೂ ಸ್ವೀಟ್ಸ್ ತೆಗೊಂಡು ಮಾವನ ಮನೆಗೆ ದೌಡಾಯಿಸಿದ್ದು ಈಗಲೂ ನೆನಪಿದೆ. ಆವಾಗ ನಾನು ತುಂಬಾ ಚಿಕ್ಕವಳು. ಅಕ್ಕ (ಮಾವನ ಮಗಳು) ದೊಡ್ಡವಳಾಗಿದ್ದಾಳೆ ಎಂದು ಗಡದ್ದಾಗಿ ಫಂಕ್ಷನ್ ಮಾಡಿದಾಗ, ಅವಳಿಗೆ ಸಿಕ್ಕಿದ ಉಡುಗೊರೆ, ಸ್ವೀಟ್ಸ್ ಎಲ್ಲಾ ನೋಡಿ ಇದೆಲ್ಲಾ  ಯಾಕೆ ಮಾಡ್ತಾರೆ ಅಂತಾ ಅಮ್ಮನಿಗೆ ಕೇಳಿದ್ದೆ. ಅವಳು ದೊಡ್ಡವಳಾಗಿದ್ದಾಳೆ ಎಂದು ಅಮ್ಮ ಹೇಳಿದಾಗ, ಅಕ್ಕ ಮೊದಲಿನಂತೆಯೇ ಇದ್ದಾಳೆ. ಉದ್ದನೂ ಆಗಿಲ್ಲ, ದಪ್ಪನೂ ಆಗಿಲ್ಲ. ಮೊದಲ ಬಾರಿ ಸಾರಿ ಉಟ್ಟು ಮದುಮಗಳಂತೆ ಕಾಣಿಸ್ತಾ ಇದ್ಳು. ಅದು ಬಿಟ್ರೆ ಬೇರೇನೂ ವ್ಯತ್ಯಾಸ ನನಗೆ ಗೊತ್ತಾಗಿಲ್ಲ. ಆವಾಗ ನನ್ನ ಇನ್ನೊಬ್ಬಳು ಕಸಿನ್, ನಾವೂ ದೊಡ್ಡವರಾದ್ರೆ ಇಷ್ಟೆಲ್ಲಾ ಗೌಜಿ ಮಾಡ್ತಾರಂತೆ, ತುಂಬಾ ಸ್ವೀಟ್ಸ್ ತಿನ್ಬಹುದಲ್ವಾ ಅಂದಿದ್ಳು. ಅದಕ್ಕೆ ಇನ್ನೊಬ್ಬಳು ನಿನ್ನ ಅಕ್ಕ ಮೊದಲು ದೊಡ್ಡವಳಗ್ತಾಳೆ ಮತ್ತೆ ನೀನು ಅಂದಾಗ ನನ್ನ ಅಕ್ಕ ಬೇಗ ದೊಡ್ಡವಳಾಗಲಿ ಆವಾಗ ನನಗೂ ತುಂಬಾ ಸ್ವೀಟ್ಸ್ ತಿನ್ನೋಕೆ ಸಿಗುತ್ತೆ ಅಂತಾ ಪುಟ್ಟ ಮನಸ್ಸಿನಲ್ಲೇ ಲೆಕ್ಕ ಹಾಕಿದ್ದೆ.


ಅದಿರಲಿ ಬಿಡಿ, ಮನೆಯಲ್ಲಿ ನಾನು ಏನು ಹೇಳಿದ್ರೂ 'ನೀನು ಚಿಕ್ಕವಳು' ಎಂಬ ಮಾತು by Default ಆಗಿ ಎಲ್ಲರ ಬಾಯಿಂದ ಬರುತ್ತಿತ್ತು. ಅದು ಮಾಡಿಕೊಡಲಾ? ಇದು ಮಾಡಬಹುದಾ? ಅಂತಾ ಕೇಳಿದರೂ ಇದೇ ಉತ್ತರ. ಏಳನೇ ಕ್ಲಾಸಿಗೆ ತಲುಪಿದ್ರೂ 'ಚಿಕ್ಕವಳು' ಎಂಬ ಪಟ್ಟ ನಂಗೇನೇ. ಅಕ್ಕ ಹಾಸ್ಟೆಲ್್ನಲ್ಲಿದ್ದುದರಿಂದ ಮನೆಯಲ್ಲಿ ನಾನೊಬ್ಬಳೇ ಹೆಣ್ಮಗಳು. ಕೆಲವೊಮ್ಮೆ ಅಮ್ಮ 'ನೀನು ಚಿಕ್ಕ ಹುಡುಗಿಯೇನಲ್ಲ' ಅಂತಾ ಹೇಳಿದ್ರೆ ಅದೇ ಹೊತ್ತಿಗೆ ಪಪ್ಪ, ಅವಳು ಇನ್ನೂ ಚಿಕ್ಕವಳು ಯಾಕೆ ಬೈತಿದ್ದೀಯಾ ಅಂತಾ ಅಮ್ಮನಿಗೆ ಕೇಳ್ತಿದ್ರು. ಶಾಲೆ ಮುಗಿಸಿ ಹೈಸ್ಕೂಲ್ ಸೇರಬೇಕಾದಾಗ ಗೆಳತಿಯರೆಲ್ಲರೂ ಅವರವರ ಇಷ್ಟದ ಹೈಸ್ಕೂಲ್್ನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ನನ್ನ ಇಷ್ಟದ ಹೈಸ್ಕೂಲ್ ಹೇಳಿದಾಗ ನಿಂಗೇನು ಗೊತ್ತು ನೀನು ಚಿಕ್ಕವಳು... ನಾವು ಹೇಳಿದ ಹೈಸ್ಕೂಲ್್ಗೆ ಸೇರಬೇಕು. ಅಲ್ಲಿಯ ಬಗ್ಗೆ ಎಲ್ಲಾ ವಿಚಾರಿಸಿ ಆಗಿದೆ ಅಂತಾ ಪಪ್ಪ ಹೇಳಿದ್ದರು.


ಸರಿ, ಹೈಸ್ಕೂಲ್ ಹತ್ತಿದಾಗ ನಾನಿನ್ನು 'ದೊಡ್ಡವಳು' ಎಂಬ ಭಾವನೆ ಬರತೊಡಗಿತ್ತು. ಯಾಕೆಂದರೆ ಕ್ಲಾಸಿನಲ್ಲಿ ಟೀಚರ್ ಇನ್ನೇನು ನೀವು ಚಿಕ್ಕ ಮಕ್ಕಳಲ್ಲ, ಹೈಸ್ಕೂಲ್ ಹುಡುಗೀರು ಅಂತಾ ಹೇಳುವಾಗ ಮುಖದಲ್ಲಿ ಗಂಭೀರತೆ ಬರುತ್ತಿತ್ತು. ಇಂತಿರ್ಪ, ಮನೆಗೆ ಬಂದ್ರೆ ಪುಟ್ಟ ಹುಡುಗಿಯೇ ಆಗಬೇಕಾಗಿತ್ತು. ಅಷ್ಟೊತ್ತಿಗೆ ನನ್ನಕ್ಕಿಂತ ಎರಡು ವರ್ಷ ಚಿಕ್ಕವನಾಗಿದ್ದ ತಮ್ಮನೂ ಅಣ್ಣನಂತೆ  ವರ್ತಿಸುತ್ತಿದ್ದ. ಅವನೂ ಕೂಡಾ ನೀನು ಇನ್ನೂ ಚಿಕ್ಕವಳು ಅಂತಾ ಅಪ್ಪ ಅಮ್ಮನ ಜೊತೆ ರಾಗ ಎಳೆಯುತ್ತಿದ್ದರೆ ಸಿಟ್ಟು ಬರುತ್ತಿತ್ತು. ಅಂತೂ ಇಂತೂ ಹೈಸ್ಕೂಲ್ ಅವಧಿಯಲ್ಲಿ 'ದೊಡ್ಡವಳಾದರೂ' ಯಾವುದೇ ಫಂಕ್ಷನ್ ಮಾಡಿಲ್ಲ. ಆ ಸಂಭ್ರಮಾಚರಣೆ ಬೇಕಿತ್ತು, ಸ್ವೀಟ್ಸ್ ತಿನ್ಬೇಕು ಎಂಬ ಆಶೆ ಆವಾಗ ಉಳಿದಿರಲೂ ಇಲ್ಲ. ನಾನಿನ್ನು ಚಿಕ್ಕವಳಲ್ಲ ಎಂದು ಮನಸ್ಸಲ್ಲೇ ಬೀಗುತ್ತಿದ್ದರೂ, ಯಾಕಪ್ಪ ದೊಡ್ಡವಳಾದೆ ಎಂಬ ಪ್ರಶ್ನೆ ಪದೇ ಪದೇ ಕಾಡುತ್ತಿತ್ತು. ಯಾಕೆಂದರೆ ಹುಡುಗಿ ದೊಡ್ಡವಳಾದಳು ಅಂದ ಮೇಲೆ ಎಷ್ಟೊಂದು ನಿರ್ಬಂಧಗಳು. ಅಲ್ಲಿಯ ವರೆಗೆ ಮಾವನ ಮಕ್ಕಳ (ಅಣ್ಣಂದಿರು) ಜೊತೆ ಸ್ವಚ್ಛಂದವಾಗಿ ಆಡುತ್ತಿದ್ದ ನನಗೆ ಇನ್ಮುಂದೆ ಅವರ ಜೊತೆ ಅಷ್ಟೊಂದು ಆಪ್ತವಾಗಿರಬೇಡ ಎಂಬ ಅಮ್ಮನ ಸಲಹೆ. ಇಂತಿಂತ ಡ್ರೆಸ್ ಹಾಕ್ಬೇಕು, ಅದನ್ನು ಹಾಗೆ ಹಾಕ್ಬೇಕು, ಹೀಗೆ ಹಾಕ್ಬಾರ್ದು ಎಂಬ ಸಲಹೆ ಒಂದೆಡೆಯಾದರೆ 'ಆ ದಿನಗಳಲ್ಲಿ' ದೂರವಿರಬೇಕು. ಅದು ಮುಟ್ಟುವಂತಿಲ್ಲ, ಅಪ್ಪನ ಜೊತೆಯೂ ಸಲುಗೆಯಿಂದ ಇರುವಂತಿಲ್ಲ. ಅಪ್ಪನಿಂದ ದೂರವಿರಬೇಕಾಗಿ ಬಂದಾಗ ಹಿಂಸೆ ಅನಿಸ್ತಾ ಇತ್ತು. ಆವಾಗ ಯಾಕೆ ಹೆಣ್ಣಾಗಿ ಹುಟ್ಟಿದೆನೋ, ಹುಡುಗ ಆಗಿದ್ರೆ ಈ ಸಮಸ್ಯೆ ಇರುತ್ತಿರಲಿಲ್ಲವಲ್ಲಾ ಅಂತಾ ಯೋಚಿಸ್ತಿದ್ದೆ. ಹೈಸ್ಕೂಲ್ ಮುಗಿದು ಪ್ಲಸ್ ಟು, ನಂತರ ಇಂಜಿನಿಯರಿಂಗ್ ಕಾಲೇಜು, ಕೋರ್ಸು ಎಲ್ಲವೂ ಮನೆಯವರದ್ದೇ ಚಾಯ್ಸ್. ಆವಾಗ ಅಕ್ಕ ಕೂಡಾ ನಿಂಗೇನು ಗೊತ್ತು? ಸ್ಕೋಪ್ ಇರುವ ಕೋರ್ಸಿಗೇ ಸೇರ್ಬೇಕು ಎಂದು, Information Technology ಆಯ್ಕೆ ಮಾಡಿಕೊಂಡದ್ದು ಆಯ್ತು.


ಇಂಜಿನಿಯರಿಂಗ್ ಸೇರಿದ ಮೊದಮೊದಲಿಗೆ ಕಷ್ಟವಾದರೂ ಆಮೇಲೆ ಇಷ್ಟವಾಗತೊಡಗಿತು. ಕಾಲೇಜಿನಲ್ಲಿ ಮೊದಲ ದಿನ ನಮ್ಮ ಟೀಚರೊಬ್ಬರು ಐಟಿ ಕೋರ್ಸಿಗೆ ಇಷ್ಟಪಟ್ಟು  ಸೇರಿದವರ್ಯಾರು ಕೈ ಎತ್ತಿ ಎಂದಾಗ ಬೆರಳೆಣಿಕೆಯ ಮಂದಿಯಷ್ಟೇ 'ಹೂಂ' ಅಂದಿದ್ದರು. ಬಾಕಿ ಉಳಿದವರೆಲ್ಲಾ ಅಮ್ಮ, ಅಪ್ಪ ಹೇಳಿದ್ರು, ಬೇರೆ ಬ್ರಾಂಚ್್ನಲ್ಲಿ ಸೀಟು ಸಿಕ್ಕಿಲ್ಲ, ಹೈಯರ್ ಆಪ್್ಶನ್ ಕೊಟ್ಟಿದ್ದೇವೆ ಎಂದು ಹೇಳಿದ್ದರು. ಆಮೇಲೆ 'ನೀವು ಇಂಜಿನಿಯರಿಂಗ್ ಮುಗಿಸಿ ಏನಾಗ್ಬೇಕು ಅಂತಿದ್ದೀರಾ?' ಎಂದು ಕೇಳಿದಾಗ ಹೆಚ್ಚಿನವರ ಉತ್ತರ ಬೆಂಗಳೂರು ಹೋಗಿ ಸಾಫ್ಟ್್ವೇರ್ ಕಂಪೆನಿಯಲ್ಲಿ ಕೆಲಸ ಮಾಡ್ಬೇಕು. ಕೆಲವು ಹುಡುಗರು ಗಲ್ಫ್ ಅಂತಲೂ, ಹುಡುಗಿಯರು ಕೋರ್ಸ್ ಮುಗಿದ ನಂತರ ನೋಡ್ಬೇಕು ಅಂತಾ ಉತ್ತರಿಸಿದ್ದರು. ನನ್ನದು ಲಾಸ್ಟ್್ಬೆಂಚ್ ಆದ ಕಾರಣ, ಕೊನೆಗೆ ನಮ್ಮಲ್ಲಿ ನೀವು? ಅಂತಾ ಕೇಳಿದಾಗ ನನ್ನ ಗೆಳತಿಯರಿಬ್ಬರು ಈವಾಗ ಯಾವುದೇ ನಿರ್ಧಾರ ತೆಗೊಂಡಿಲ್ಲ ಅಂತಾ ಜೊತೆಯಾಗಿ ಹೇಳುವುದೇ? ಮತ್ತೆ ನನ್ನ ನಂಬರ್, 'YOU?' ಅಂತಾ ಪ್ರಶ್ನಾರ್ಥಕವಾಗಿ ಟೀಚರ್ ಕೇಳಿದಾಗ ನಂಗೆ ಏನು ಹೇಳಬೇಕೆಂದು ತೋಚದೆ ಒಂದು ನಿಮಿಷ ಮೌನವಾಗಿಯೇ ಇದ್ದೆ. ಕ್ಲಾಸು ನಿಶ್ಶಬ್ದವಾಗಿತ್ತು. Yes, Tell me ಅಂದಾಗ i want to become a writer ಅಂದು ಬಿಟ್ಟೆ. ಕ್ಲಾಸಿಗೆ ಕ್ಲಾಸೇ ನನ್ನತ್ತ ನೋಡುತ್ತಿದ್ದೆ. ಆ ಮೌನವನ್ನು ಸೀಳಿಕೊಂಡು ಮೇಡಂ " ಮತ್ಯಾಕೆ ನೀನಿಲ್ಲಿಗೆ ಬಂದೆ. ಯಾವುದಾದರೂ ಆರ್ಟ್ಸ್ ಕಾಲೇಜಿಗೆ ಸೇರಬಹುದಿತ್ತಲ್ವಾ, ಅದೂ ಅಲ್ಲದೆ ನೀನು ಕನ್ನಡ ಮೀಡಿಯಂನಲ್ಲಿ ಓದಿದ ಹುಡುಗಿ, ಸರಕಾರಿ ಕಾಲೇಜಿಗೆ ಸೇರಿದ್ದರೆ ರ್ಯಾಂಕ್ ಬರುತ್ತಿದ್ದಿ" ಎಂದರು. ನಂಗೂ ಆ ಆಸೆಯಿತ್ತು ಆದರೆ ಎಲ್ಲವೂ ನಾನು ಅಂದುಕೊಂಡಾಗೆ ಆಗಲ್ವಲ್ಲಾ?


ಹೇಗೋ ಕಾಲೇಜು ಮುಗಿಯಿತು. ನಂತರ ಕೆಲಸ ಹುಡುಕ್ಬೇಕು. ಒಂದೆರಡು ತಿಂಗಳು NIIT instituteನಲ್ಲಿಯೂ, ಸರಕಾರಿ ಐಟಿಐನಲ್ಲಿ ನನ್ನಕ್ಕಿಂತ ದೊಡ್ಡವರಿಗೆ ಪಾಠ ಹೇಳಿಕೊಟ್ಟು ನಾನೂ 'ಮೇಡಂ' ಅಂತಾ ಕರೆಸಿಕೊಂಡೆ. ಬಿಡುವು ಸಿಕ್ಕಾಗೆಲ್ಲಾ ಪತ್ರಿಕೆಗಳಿಗೆ ಬರೆಯುತ್ತಿದ್ದರಿಂದ ಜರ್ನಲಿಸಂನತ್ತ ಮನಸ್ಸು ವಾಲತೊಡಗಿತ್ತು.  ಅದೇ ವೇಳೆ ಚೆನ್ನೈ ವೆಬ್್ದುನಿಯಾದಲ್ಲಿ ಆನ್್ಲೈನ್ ಜರ್ನಲಿಸ್ಟ್್ಗೆ ಸಲ್ಲಿಸಿದ ಅರ್ಜಿಗೆ ಉತ್ತರ ಬಂದಿತ್ತು. ಇದೇ ಛಾನ್ಸು, ಜರ್ನಲಿಸ್ಟ್ ಆಗಲು ಎಂದು ಮನೆಯವರನ್ನೆಲ್ಲಾ ಒಲಿಸಿ, ಅಪ್ಪನನ್ನು ಬಿಟ್ಟು ಹೋಗಲು ಮನಸ್ಸಿಲ್ಲದಿದ್ದರೂ, ಇದು ಕೈ ಬಿಟ್ಟು ಹೋದ್ರೆ ನಾನು ಯಾವುದೋ ಇನ್ಸಿಟ್ಯೂಟ್್ನಲ್ಲಿ ಪ್ರೋಗ್ರಾಮಿಂಗ್ ಲಾಂಗ್ವೇಜ್ ಹೇಳಿಕೊಡ್ಬೇಕು, ಇಲ್ಲದಿದ್ರೆ ಗೆಸ್ಟ್ ಲೆಕ್ಚರ್ ಆಗ್ಬೇಕು ಅಂತಾ ಚೆನ್ನೈಗೆ ಹೋದೆ. ಅಲ್ಲಿ ನನಗೆ ಉತ್ತಮ ಅವಕಾಶ ಸಿಕ್ಕಿತು. ಲೋಕಲೈಸೇಷನ್ ಟೀಮ್್ನಲ್ಲಿ ಕೆಲಸ ಮಾಡುವುದರ ಜೊತೆಗೆ ನನ್ನ ಬರವಣಿಗೆ ಕಾಗದದಿಂದ ಇಂಟರ್ನೆಟ್್ಗೆ ಬರತೊಡಗಿತು. ಕೆಲಸದ ಜೊತೆ ಬ್ಲಾಗ್್ಲೋಕ ಪರಿಚಯವಾಗುವ ಮೂಲಕ ಹಲವಾರು ಬ್ಲಾಗ್ ಗೆಳೆಯರನ್ನೂ ಸಂಪಾದಿಸಿಕೊಂಡೆ.


ಚೆನ್ನೈಯಲ್ಲಿ ಒಬ್ಬಳೇ ಇರಬೇಕಾದಾಗ ನನ್ನಷ್ಟಕ್ಕೇ ನಾನು ಪ್ರಬುದ್ಧಳಾಗುತ್ತಿದ್ದೆ. ಮನೆಯಲ್ಲಿ ಎಲ್ಲ ಕಾರ್ಯವೂ ಅಪ್ಪ ಅಮ್ಮನ ಸಹಾಯದಿಂದ ಮಾಡುತ್ತಿದ್ದ ದಿನಗಳು ಮುಗಿದವು. ನನ್ನ ಕೆಲಸ ನಾನೇ ಮಾಡ್ಬೇಕು, ಬಿದ್ದರೂ, ಎದ್ದರೂ ನೋವು ನಗು ಎಲ್ಲವೂ ನನಗೆ ಮಾತ್ರ. ಜೀವನಕ್ಕೆ ಹೊಸ ತಿರುವು ಲಭಿಸಿದ್ದು ಅಲ್ಲಿ. ಅಲ್ಲಿಯವರೆಗೆ ಮಕ್ಕಳಾಟವಾಡುತ್ತಿದ್ದ ನಾನು ಜೀವನದ ಬಗ್ಗೆ ಕೆಲಸದ ಬಗ್ಗೆ ಗಂಭೀರವಾಗಿ ಚಿಂತಿಸತೊಡಗಿದೆ. ಪತ್ರಿಕೆಯಲ್ಲಿ ಕೆಲಸ ಮಾಡಬೇಕೆಂಬ ಹಂಬಲ ತೀವ್ರವಾಗುತ್ತಿದ್ದಂತೆ 'ಕನ್ನಡ ಪ್ರಭ'ದಲ್ಲಿ ಕೆಲಸ ಸಿಕ್ಕಿ ಬೆಂಗಳೂರಿಗೆ ಬಂದೆ.  ಚಿಕ್ಕಂದಿನಲ್ಲಿ ಉದಯವಾಣಿ ಓದಿ, ಹೈಸ್ಕೂಲ್್ನಲ್ಲಿ ಪ್ರಜಾವಣಿಯತ್ತ ಆಕರ್ಷಿತಳಾಗಿ, ಕಾಲೇಜು ದಿನಗಳಲ್ಲಿ ವಿಜಯಕರ್ನಾಟಕದ 'ಸುದ್ದಿಮನೆ ಕತೆ' 'ನೂರೆಂಟು ಮಾತು', 'ಬೆತ್ತಲೆ ಜಗತ್ತು' ಅಂಕಣದ ಫ್ಯಾನ್ ಆಗಿ 'ಕನ್ನಡಪ್ರಭ' ಪತ್ರಕರ್ತೆಯಾದೆ. ಈವಾಗ ಬೆಂಗಳೂರು ಬಂದು ಎರಡು ವರ್ಷಗಳಾಯಿತು. ಈ ಎರಡು ವರ್ಷಗಳಲ್ಲಿ ಸಾಕಷ್ಟು ಕಲಿತಿದ್ದೇನೆ. ಹುಚ್ಚು ಪ್ರೀತಿಯಲ್ಲಿ ಬಿದ್ದು ಇನ್ನು ಜೀವನವೇ ಬೇಡ ಎಂದು ಅತ್ತು, ಆಮೇಲೆ ಸಾವರಿಸಿ 'ನೀನಿಲ್ಲದಿದ್ದರೂ ನಾನು ಬದುಕ್ತೇನೆ ನೋಡು' ಎಂದು ಧೈರ್ಯದಿಂದ ನಿಂತ ಆ ಹುಡುಗಿ ನಾನೇನಾ? ಅಂತಾ ನನಗೆ ಅಚ್ಚರಿಯಾಗುತ್ತಿದ್ದೆ. ಅಲ್ಲಿಯವರೆಗೆ ವಿಶ್ವಾಸರ್ಹರಾಗಿದ್ದ್ದ ಫ್ರೆಂಡ್ಸ್ ಏನೋ ನೆಪ ಹೇಳಿ ದೂರ ಸರಿದಾಗ, ಅಲ್ಲಿಯವರೆಗೆ ಪರಿಚಯವೇ ಇಲ್ಲದ ಬ್ಲಾಗಿಗರು, ಸಹೋದ್ಯೋಗಿಗಳು ಸಾಂತ್ವನದ ಮಾತುಗಳನ್ನಾಡಿದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟ ಆ ಅಳುಮುಂಜಿ ಹುಡುಗಿ ನಾನೇನಾ? ಸರಿದು ಹೋದ ದಿನಗಳು ನನಗೆ ಜೀವನವೇನೆಂಬುದನ್ನು ಕಲಿಸಿದೆ. ಈವಾಗ ನನ್ನ ಅಪ್ಪ ಅಮ್ಮ ನೀನು ಚಿಕ್ಕವಳು ಅಂದ್ರೂ ಬದುಕಿನ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಜವಾಬ್ದಾರಿ ಬಂದಿದೆ ಎನ್ನುವಾಗ ಸಂತೋಷ ಆಗ್ತಿದೆ. ಕೆಲವೊಮ್ಮೆ ಮಕ್ಕಳಂತೆಯೇ ಚಿಕ್ಕವಳಾಗಿದ್ದರೆ ಒಳ್ಳೆಯದೂ ಅಂತಾ ಅನಿಸಿದರೂ ಇದು ಜೀವನ....ALL IS WELL ಅಂತಾ ನಮ್ಮ ಎದೆಯನ್ನು ನಾವೇ ತಟ್ಟಿಕೊಂಡು ಮುಂದೆ ಸಾಗಬೇಕಾಗಿದೆ. ಜೀವನದ ಏಳು ಬೀಳುಗಳಿಂದ ಕಲಿಯುತ್ತಾ ನಾವು ದೊಡ್ಡವರಾಗ್ತೇವೆ ಎಂದು ಪಪ್ಪ ಹೇಳಿದ್ದು ಈಗ ನಿಜ ಅಂತಾ ಅನಿಸ ತೊಡಗಿದೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (7 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ [ ಅಥವ ಸಾಧಾರಣವಾಗಿ ನಮ್ಮ ಸಮಾಜದ ಬಹುತೇಕ ಹೆಣ್ಣು ಮಕ್ಕಳ] ಜೀವನದ ಮಜಲುಗಳ ಅಭಿವ್ಯಕ್ತಿ ಬಹಳ ಚೆನ್ನಾಗಿ ಮೂಡಿದೆ . ಚೊಕ್ಕವಾದ ಲೇಖನ . ಅಂತು ಇಂತು ನಿಮ್ಮ ಮನಸ್ಸಿಗೆ ಹತ್ತಿರವಾದ ಕೆಲಸವನ್ನು ಹುಡುಕಿಕೊಂಡಿದ್ದೀರಿ . ಅಭಿನಂದನೆ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ, ನೀವೂ ನಮ್ಮೂರಿನವರೇ ಆದುದರಿಂದ ನೀವು ಯಾರಿರಬಹುದು ಎಂದು ನಿಮ್ಮ ಬಗ್ಗೆ ಕುತೂಹಲವಿತ್ತು !!!, ಈ ಲೇಖನದಲ್ಲಿ ನಿಮ್ಮ ಸಂಕ್ಷಿಪ್ತ ಪರಿಚಯ ಸಿಕ್ಕಿದಂತಾಯಿತು. ನಿಮ್ಮವ ಕಾಮತ್ ಕುಂಬ್ಳೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಲಕ್ಕಿ೦ತ ಮತ್ತೊಬ್ಬ ಉತ್ತಮ ಗುರುವಿಲ್ಲ.. ಒಳ್ಳೆಯ ಲೇಖನ ರಶ್ಮಿ. ಓದಿಸಿಕೊ೦ಡು ಹೋಯಿತು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮ ಬರಹ. ಲೇಖಕಿಯಾಗಬೇಕೆನ್ನುವಾಗ ಎ೦ಜಿನೀರಿ೦ಗಿಗೇಕೆ ಬ೦ದೆ, ಆರ್ಟ್ಸ್ ಕಾಲಿಜಿಗೆ ಸೇರಬಹುದಿತ್ತು; ಕನ್ನಡ ಮೀಡಿಯಮ್ ನಲ್ಲಿ ಓದಿ ಬ೦ದದ್ದರಿಂದ rank ತೊಗೊಳ್ಬಹುದಿತ್ತು.. ಎ೦ದೆಲ್ಲಾ ಅ೦ದದ್ದು ಆ ಲೆಕ್ಚರರರ ಅಜ್ಞಾನದ ಪ್ರತಿಬಿಂಬ. ಹೇಗೂ ನೀವೀಗ ಎ೦ಜಿನೀರ್. Technical articles ಬರೆಯುವುದಕ್ಕೆ ಪ್ರಯತ್ನಿಸಿ. ಕನ್ನಡದಲ್ಲಾದರೆ ತು೦ಬಾ ಒಳ್ಳೆಯದು; ಇಂಗ್ಲಿಶಲ್ಲಾದರೂ ಸರೀನೇ. ಪ್ರಯತ್ನಿಸಿ. ಈ ಲೇಖನದಲ್ಲಿ ನಿಮ್ಮ CV ನೋಡಿದ ಮೇಲೆ you can do it ಎ೦ದೆನ್ನಿಸುತ್ತೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿಯವರೆ, ಬಹುದಿನಗಳ ನ೦ತರ ಬರೆದರೂ ಒ೦ದು ಉತ್ತಮ ಲೇಖವನ್ನೇ ಕೊಟ್ಟಿದ್ದೀರಿ. <<ಸರಿದು ಹೋದ ದಿನಗಳು ನನಗೆ ಜೀವನವೇನೆಂಬುದನ್ನು ಕಲಿಸಿದೆ>>ತು೦ಬಾ ಸತ್ಯವಾದ ಮಾತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಕೆಲವೊಮ್ಮೆ ಮಕ್ಕಳಂತೆಯೇ ಚಿಕ್ಕವಳಾಗಿದ್ದರೆ ಒಳ್ಳೆಯದೂ>> ಹೌದು ಆ ಕಾಲಘಟ್ಟವನ್ನು ಬಿಟ್ಟು ಬಂದಾಗಲೇ ನಿಮಗೆ ಆದರ ಅರಿವಾಗುವುದು , ಅದರಲ್ಲು ಬಾಲ್ಯವನ್ನು ಮರೆಯಲು ಸಾಧ್ಯವೇ . ಒಳ್ಳೆಯ ಲೇಖನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.