ನಳ್ಳಿಯಲ್ಲಿ ಇವತ್ತೂ ನೀರಿಲ್ಲ...

0

ಕಾಸರಗೋಡು ಸಿಟಿಯಲ್ಲಿರುವ ನನ್ನ ದೊಡ್ಡಮ್ಮನ ಮನೆಗೆ ಹೋದ ದಿನ. ಅಂದು ಅನಿವಾರ್ಯವಾಗಿ ಅಲ್ಲಿ ಉಳಕೊಳ್ಳಬೇಕಾಗಿ ಬಂದಿದ್ದರೂ ಅದೇಕೋ ಹಳ್ಳಿಯಲ್ಲಿರುವ ನನ್ನ ಮನೆಯಲ್ಲಿ ಆರಾಮವಾಗಿ ಮಲಗಿ ನಿದ್ದೆ ಹೋಗುವ ನನಗೆ ಅಲ್ಲಿನ ದೊಡ್ಡ ದೊಡ್ಡ ಸೊಳ್ಳೆ, ವಾಹನಗಳ ಗದ್ದಲದಿಂದ ಮಧ್ಯರಾತ್ರಿಯ ವರೆಗಂತೂ ನಿದ್ದೆ ಬರಲಿಲ್ಲ. ಆಮೇಲೆ ಯಾವಾಗ ನಿದ್ದೆ ಬಂತೋ ಎಂದು ಗೊತ್ತಿಲ್ಲ. ಅಂತೂ ಮುಂಜಾನೆ ಸುಮಾರು ನಾಲ್ಕು ಗಂಟೆಗೆ ಮನೆಯಲ್ಲಿ ಪಾತ್ರೆಗಳ ಸದ್ದು ಕೇಳಿಸಿ ಎಚ್ಚೆತ್ತು ಕೊಂಡೆ. ರೈಲ್ವೇ ನಿಲ್ದಾಣದ ಪಕ್ಕದಲ್ಲೇ ಇರುವ ಮನೆಯಾಗಿದ್ದರಿಂದ ಅಣ್ಣಂದಿರು ಯಾರೋ ಬೆಳಗ್ಗಿನ ರೈಲಿಗೆ ಹೋಗುತ್ತಿರಬೇಕು ಅದಕ್ಕಾಗಿಯೇ ಇಷ್ಟೊಂದು ಗೌಜಿ ಅಂದುಕೊಂಡೆ. ಆದ್ರೆ ಅದಾಗಿರಲಿಲ್ಲ. ದೊಡ್ಡಮ್ಮನಂತೂ ನನ್ನ ಅಕ್ಕ ಅಣ್ಣಂದಿರನ್ನೆಲ್ಲಾ ಎಬ್ಬಿಸಿ ಬಿಂದಿಗೆ, ಪಾತ್ರೆ ಹಿಡಿದು ಕೊಂಡು ಅವಸರವಾಗಿ ಮನೆಯಿಂದ ಹೊರ ನಡೆದರು. ಆಗಲೇ ಗೊತ್ತಾದದ್ದು. ಮನೆಯ ಮುಂದಿರುವ ಸಾರ್ವಜನಿಕ ನಳ್ಳಿಯಲ್ಲಿ ನೀರು ಬಂದಿದೆ ಎಂದು. ಆ ಬೆಳಗ್ಗಿನ ಜಾವದಲ್ಲೇ ನಳ್ಳಿ ಮುಂದೆ ಪಾತ್ರೆಗಳ ಸಾಲು ಜೊತೆಗೆ ನಿದ್ದೆಗಣ್ಣಲ್ಲೇ ತಮ್ಮ ಸರದಿ ಯಾವಾಗ ಬರುವುದೋ ಎಂದು ಕಾದು ಕುಳಿತು ಕೊಂಡಿರುವ ಮಂದಿಯನ್ನು ಕಂಡರೆ ಅಯ್ಯೋ ಪಾಪ ಎನಿಸದಿರಲಾರದು.

ಅಂತೂ ಈ ದಿನ ನೀರು ಸಿಕ್ಕಿತು ಎಂಬ ಸಮಾಧಾನದಲ್ಲಿ ಎಲ್ಲರೂ ಪಾತ್ರೆಯಲ್ಲಿ ನೀರು ತುಂಬಿಕೊಂಡು ಮನೆಯತ್ತ ನಡೆದರು. ಇದೆಲ್ಲವೂ ನನಗೆ ಹೊಸತು ಎನಿಸಿದರೂ, ಇದು ಇಲ್ಲಿಯವರ ದಿನಚರಿ ಎಂದು ದೊಡ್ಡಮ್ಮ ಹೇಳಿದ್ದರು. ಈ ಬಗ್ಗೆ ಮಾತಾಡುತ್ತಿರುವಾಗ ಯಾವಾಗ ನೆರೆಹೊರೆಯವರ ಪಾತ್ರದ ಸದ್ದು ಕೇಳಿಸುತ್ತದೆ, ನೀರಿನ ಸದ್ದು ಕೇಳಿಸುತ್ತದೆ ಎಂಬ ಆಲೋಚನೆಯಲ್ಲೇ ದೊಡ್ಡಮ್ಮ ನಿದ್ದೆ ಹೋಗುತ್ತಾರೆ ಎಂದು ಅಣ್ಣ ಹೇಳಿ ನಕ್ಕಿದ್ದ. ಇದು ನಿಜವೂ ಹೌದು. ನೀರಿಲ್ಲದಿದ್ದರೆ ಏನು ಮಾಡಲು ಸಾಧ್ಯ? ಬೇಸಿಗೆ ಚುರುಕಾದರೆ ಇಲ್ಲಿ ವಾರಕ್ಕೊಂದು ಬಾರಿ ನೀರು ಬರುತ್ತದೆ. ಕೆಲವೊಮ್ಮೆ ಉಪ್ಪು ನೀರು. ಕುಡಿಯಲು ನೀರು ಬೇಕಾದರೆ ಯಾವುದಾದರೂ ಬಾವಿ, ಬೋರ್್ವೆಲ್ ಹುಡುಕಿ ನೀರು ತಂದಿಡಬೇಕು. ಎಲ್ಲದಕ್ಕೂ ಮಿತವಾದ ಬಳಕೆ. ಎರಡು ಬಾರಿ ಸ್ನಾನ ಮಾಡುವುದು ಒಂದೇ ಬಾರಿಯಾಗುತ್ತದೆ. ನೀರಿನ ಅಭಾವದಿಂದಾಗಿ ಮನೆ ಮುಂದೆ ಕಾಲುತೊಳೆಯಲು ಇರಿಸಿದ ನೀರಿನ ಪಾತ್ರೆ ಮಾಯವಾಗುತ್ತದೆ...ಏನೆಲ್ಲಾ ನಿರ್ಬಂಧಗಳು! ಕೆಲವೊಮ್ಮೆ ಕಾದು ಕುಳಿತು ಕೊಂಡರೂ ನಳ್ಳಿಯಲ್ಲಿ ಒಂದು ತೊಟ್ಟು ನೀರು ಬರುವುದಿಲ್ಲ. ಈ ದಿನ ನೀರಿಲ್ಲ ಅಂತಾ ಪೆಚ್ಚು ಮೋರೆ ಹಾಕಿಕೊಂಡು ಖಾಲಿ ಬಿಂದಿಗೆಯಲ್ಲೇ ವಾಪಾಸಾಗುವ ಮನೆ ಮಂದಿ, ನಾಳೆ ನೀರು ಬರುತ್ತದೆ ಎಂಬ ನಿರೀಕ್ಷೆಯಲ್ಲೇ ಇದ್ದ ನೀರಿನಲ್ಲೇ ಅಡ್ಜೆಸ್ಟ್ ಮಾಡಿಕೊಳ್ಳುತ್ತಾರೆ.

ನಮ್ಮ ತರವಾಡು ಮನೆ (ಅಪ್ಪ ಹುಟ್ಟಿ ಬೆಳೆದ ಮನೆ) ಸಿಟಿಯಲ್ಲಿದ್ದು, ಅಲ್ಲಿಯೇ ಮನೆ ಕಟ್ಟಿ ವಾಸಿಸಬೇಕೆಂದು ಕರ್ನಾಟಕದ ಕಡು ಹಳ್ಳಿಯಲ್ಲಿ ಬೆಳೆದ ಅಮ್ಮನ ಆಗ್ರಹವಾಗಿತ್ತು. ಆದರೆ ನಗರ ಜೀವನದಿಂದ ಬೇಸತ್ತ ಅಪ್ಪ ಹಳ್ಳಿಯಲ್ಲೇ ವಾಸಿಸಲು ಆಶಿಸಿದ್ದರು. ಯಾವಾಗಲೂ ಅತ್ತಿಗೆಯವರಂತೆ ನಗರದಲ್ಲಿ ಇರುತ್ತಿದ್ದರೆ ಎಷ್ಟು ಚೆನ್ನ ಎಂದು ಅಮ್ಮ ರಾಗ ಎಳೆಯುತ್ತಿದ್ದರೂ, ನಗರವಾಸಿಗಳಿಗೇ ಗೊತ್ತು ಅವರ ಕಷ್ಟ ಎಂದು ನಾವು ಅಮ್ಮನಿಗೆ ಹೇಳುತ್ತಿದ್ದೆವು. ಅಲ್ಲಿಯ ಸದ್ದು ಗದ್ದಲಗಳಿಂದ ಮುಕ್ತವಾಗಿ ಸ್ವಚ್ಛಂದ ವಾತಾವರಣದ ಹಳ್ಳಿಯಲ್ಲಿ ಜೀವಿಸುವುದು ಭಾಗ್ಯವೆಂದೇ ನಾನು ತಿಳಿದುಕೊಂಡಿದ್ದೇನೆ.

ನಮ್ಮ ಹಳ್ಳಿಯಲ್ಲಂತೂ ಈವರೆಗೆ ನೀರಿನ ಬರ ಅನುಭವಕ್ಕೆ ಬಂದಿರಲಿಲ್ಲ. ಆದರೆ ಕೆಲವು ವರ್ಷಗಳಿಂದೀಚೆಗೆ ಅಲ್ಪ ಸ್ವಲ್ಪ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಮೊದಲು ಬಾವಿ ತೋಡಿಸಿಕೊಳ್ಳುತ್ತಿದ್ದ ಮಂದಿ ಬೋರ್್ವೆಲ್್ಗೆ ಮೊರೆ ಹೋಗಿರುವುದೇ ಅಂತರ್ಜಲ ಮಟ್ಟ ಕುಸಿಯಲು ಕಾರಣ. ಮನೆಯ ಬಾವಿಯಲ್ಲಿ ನೀರು ಅಲ್ಪ ಕುಸಿದರೆ ಸಾಕು ನೀರೆತ್ತುವ ಮೋಟರ್್ಗೆ ತಾತ್ಕಾಲಿಕ ವಿರಾಮ. ನೀರು ಸೇದುವುದೇ ಗತಿ. ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ದನಗಳನ್ನು ಸ್ನಾನ ಮಾಡಿಸುವುದು ಎಲ್ಲಾ ಒಂದೊಂದು ದಿನ ಒಂದೊಂದು ತೆಂಗಿನ ಮರದ ಬುಡದಲ್ಲಿ..ಹೀಗೆ ಸಾಗುತ್ತದೆ ನಮ್ಮ ಮನೆಯ ನೀರು ಉಳಿಕೆ ಕಾರ್ಯಕ್ರಮ. ಮಳೆಗಾಲದಲ್ಲಿ ನೀರಿಂಗಿಸುವ ಪದ್ಧತಿಯೂ ನಮ್ಮನೆಯಲ್ಲಿರುವುದರಿಂದ ನೀರಿನ ಅಭಾವದಲ್ಲಿ ಕಂಗೆಡುವ ಸ್ಥಿತಿ ಇಲ್ಲಿಯವರೆಗೂ ನಮಗೆ ಬಂದಿಲ್ಲ.

ಆದಷ್ಟು ಮನೆಯ ಬಾವಿ ನೀರನ್ನು ಉಳಿಸಿಕೊಳ್ಳುವುದಕ್ಕಾಗಿ ಇತರ ಖರ್ಚಿಗೆ ಬೋರ್್ವೆಲ್ ನೀರೇ ಬೇಕು. ಇದೀಗ ಪಂಚಾಯತ್ ವತಿಯಿಂದ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಬೋರ್್ವೆಲ್ ಕೈ ಹಿಡಿದು ನೇತಾಡಬೇಕಾದ ಪರಿಸ್ಥಿತಿ ನಮ್ಮೂರಿನವರಿಗಿಲ್ಲ ಎಂಬುವುದೇ ಸಮಾಧಾನದ ವಿಷಯ.

ಹಳ್ಳಿಯಲ್ಲಿ ಹೇಗೋ ಅಡ್ಜೆಸ್ಟ್ ಮಾಡಬಹುದು ಆದ್ರೆ ಪಟ್ಟಣದಲ್ಲಿರುವವರ ಅವಸ್ಥೆಯನ್ನು ನೋಡಿದರೆ ಮರುಕವುಂಟಾಗುತ್ತದೆ. ನೀರಿಲ್ಲದೆ ಏನು ಮಾಡಲಿಕ್ಕಾಗುತ್ತದೆ? ಈ ಮೊದಲು ಚೆನ್ನೈ ಮಹಾನಗರದಲ್ಲಿ ವಾಸಿಸುವಾಗ ಹಾಸ್ಟೆಲ್್ನಲ್ಲಿ ನೀರಿಗಾಗಿ ಕಾದು ಕುಳಿತದ್ದು, ನೀರು ಪೋಲು ಮಾಡಿದಾಗ ಹಾಸ್ಟೆಲ್ ವಾರ್ಡನ್್ನಿಂದ ಬೈಸಿಕೊಂಡದ್ದು ಹೀಗೆ ನೀರಿನ ಬಳಕೆಯ ಬಗ್ಗೆ ಬಹಳಷ್ಟು ಕಾಳಜಿ ವಹಿಸಲು ಕಲಿತುಕೊಂಡಿದ್ದೇನೆ. ಬೆಂಗಳೂರಿನಲ್ಲಿಯೂ ಜಲಕ್ಷಾಮವಿದೆ ಅಲ್ವಾ..ಆದ್ರೆ ನಾನು ವಾಸಿಸುವ ಪಿ.ಜಿಯಲ್ಲಿನ ಕತೆಯೇ ಬೇರೆ ಮಾರಾಯ್ರೆ. ಅಲ್ಲಿನ ಹುಡುಗೀರು ನೀರು ಕರೆಂಟ್ ಪೋಲು ಮಾಡುವುದನ್ನು ಕಂಡರೆ ಹೊಟ್ಟೆ ಉರಿಯುತ್ತದೆ. ಹೀಗೆ ಪೋಲು ಮಾಡುವ ನೀರು ಕರೆಂಟ್್ನ ಬಗ್ಗೆ ಸ್ವಲ್ಪವಾದರೂ ಕಾಳಜಿ ನಮಗೆ ಇರುತ್ತಿದ್ದರೆ, ಬೆಂಗಳೂರಲ್ಲಿ ಜಲಕ್ಷಾಮ, ಪವರ್ ಕಟ್್ಗಳು ಕಂಡು ಬರುತ್ತಿಲ್ಲವೇನೋ ಎಂದು ಅನಿಸುತ್ತದೆ. ಇದನ್ನು ಕಂಡು ಸಹಿಸಲಾರದೆ ನಾನೊಮ್ಮೆ ಕೆಲವು ಹುಡುಗಿಯರಿಗೆ ಉಪದೇಶ ನೀಡಲು ಹೋಗಿದ್ದೆ (ಇದು ಅಧಿಕ ಪ್ರಸಂಗಿತನ ಅಂತಾ ಅವರಿಗೆ ಅನಿಸಿರಬೇಕು). ನನ್ನ ಮಾತು ಕೇಳಿದ ಅವರು ಹೇಳಿದ್ದೇನು ಗೊತ್ತೇ?

"ಇಟ್ಸ್ ನೋಟ್ ಯುವರ್ ಹೋಮ್. ಇಟ್ಸ್ ಪಿ.ಜಿ. ಏಂಡ್ ವಿ ಆರ್ ಪೇಯಿಂಗ್ ರೆಂಟ್ ಫೋರ್ ದೇಟ್."

ಹೌದು, ಅವರು ಹೇಳಿದ್ದೂ ಸರಿ, ಆದ್ರೆ ರೆಂಟ್ ಕೊಡುತ್ತೇವೆ ಅಂದ ಮಾತ್ರಕ್ಕೆ ಕರೆಂಟ್ ನೀರು ವೇಸ್ಟ್ ಮಾಡಬೇಕೆ? ಅಗತ್ಯವಿದ್ದಷ್ಟು ಬಳಸಿ, ನಾಳೆಗಾಗಿ ಉಳಿಸುವ ಬುದ್ಧಿಯನ್ನು ನನ್ನ ಗೆಳತಿಯರಿಗೆ ಹೇಳಿಕೊಡುವರಾರು? ಸದ್ಯ ನನ್ನಲ್ಲಿ ಉತ್ತರವಿಲ್ಲ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಳ ಹೌದು ...ನಳ್ಳಿ ಕೇಳಿರಲಿಲ್ಲ ...:)
ಒಂದು ಅಂದಾಜಿನ ಪ್ರಕಾರ ೨೦೨೦ ಬರೋದ್ರಲ್ಲಿ ಭಾರತದಲ್ಲಿ ನೀರಿನ ಅಭಾವ ತುಂಬಾ ಆಗುತ್ತಂತೆ ... ಈಗಾದ್ರು ಜನ, ಸರಕಾರ ಎಲ್ರು ಎಚ್ಚರವಾಗಬೇಕು ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವರ್ ಏನ್ ಹೇಳ್ತಾಯಿದ್ದಾರೆ ಅನ್ನುವ ಕಡೆ ಗಮನ ಕೊಡು !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಳ್ಳಿ ಅಂತಾ ಹೇಳುವುದು ನಮ್ಮೂರಲ್ಲಿ ಚಾಲ್ತಿಯಲ್ಲಿದೆ. ಏಡಿಗೆ ಏಡಿ ಅಂತಾನೇ ಹೇಳ್ತಾರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಮನೆಗೆ ಹೋಗಿದ್ದಾಗ, ನಾಲ್ಕು ದಿನ ನೀರು ಬರ್ಲೆ ಬಾರದು. ನೀರಿಲ್ಲದೆ ಎಲ್ಲಾದಕ್ಕೂ ತೊಂದ್ರೆ ಆದಾಗ ಬುದ್ದಿ ಕಲಿತಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಳೆನೀರು ಬೆಂಗಳೂರಿನಲ್ಲಿ ಹರಿದು ಹೋಗುವುದನ್ನು ನೋಡಿದಾಗ ನನಗೆ ಬಹಳ ಬೇಸರವಾಗುತ್ತದೆ. ಅದನ್ನು ಪ್ರತಿಯೊಂದು ಕಟ್ಟಡವೂ ಇಂಗಿಸಿದರೆ, ಇಲ್ಲವೇ ಉಪಯೋಗಿಸಿದರೆ ನೀರಿನ ಕ್ಷಾಮ ಸ್ವಲ್ಪ ವಾದರೂ ಕಡಿಮೆಯಾಗುವುದು. ನಮ್ಮ ಮನೆಯಲ್ಲಿ ವರ್ಷದ ೪ - ೫ ತಿಂಗಳು ಮಳೆನೀರನ್ನೇ ಉಪಯೋಗಿಸುತ್ತೇವೆ. ಎಷ್ಟು ಶುದ್ಧ ನೀರು ಅದು. ನಮ್ಮ ಲೇಔಟ್ ನಲ್ಲಿ ೬೦೦ ಅಡಿಯವರೆಗೂ ತೋಡಿಸಿದರೂ ಸಿಗದಿದ್ದ ನೀರು, ನಮ್ಮನೆಯಲ್ಲಿ ೧೫೦ ಅಡಿಗೆ ಸಿಕ್ಕಿದೆ. ಅದು ೩ ಇಂಚು ದಪ್ಪದ ಸಿಹಿ ನೀರು. ಇದಕ್ಕೆ ಕಾರಣ ನಮ್ಮ ಮಳೆನೀರಿನ ಇಂಗುಗುಂಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ಬರಹ.. ನೀರಿನ ಸಮಸ್ಯೆ ಬಗ್ಗೆ ನಾಗರೀಕರು ಗಂಭೀರವಾಗಿ ಯೋಚಿಸಬೇಕಾಗಿದೆ.
ಪ್ರತಿ ವಾರ ತಾನು ಸ್ನಾನ ಮಾಡದಿದ್ದರೂ, ತನ್ನ ಮೋಟಾರ್ ಸೈಕಲ್ ತೊಳೆಯಲು ಕೊಪ್ಪರಿಗೆ ನೀರು ಚೆಲ್ಲುವ ನನ್ನ ಗೆಳೆಯನ ಜೊತೆ ಜಗಳವಾಡಿದ್ದ ಘಟನೆಯ ನೆನಪು ಬಂತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಛೆ ಛೆ ೩೫೦೦ ಮಿ.ಮೀ ಮಳೆ ಬೀಳುವ ಪ್ರದೇಶದಲ್ಲೂ ಈ ದೃಷ್ಯವೇ :(. ಕರಾವಳಿಯಲ್ಲಿ ಮಳೆಕೊಯ್ಲು ಬಗ್ಗೆ ಅರಿವು ಮತ್ತಷ್ಟು ಹೆಚ್ಚಾಗಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ದೊಡ್ಡಮ್ಮನಂತೂ ನನ್ನ ಅಕ್ಕ ಅಣ್ಣಂದಿರನ್ನೆಲ್ಲಾ ಎಬ್ಬಿಸಿ ಬಿಂದಿಗೆ, ಪಾತ್ರೆ ಹಿಡಿದು ಕೊಂಡು ಅವಸರವಾಗಿ ಮನೆಯಿಂದ ಹೊರ ನಡೆದರು.

ರಶ್ಮಿ ಲೇಖನ ಚೆನ್ನಾಗಿದೆ..ಓದುವಾಗ ನಮ್ಮ ಆ ದಿನಗಳು ನೆನಪಾದವು :) ಸಾಲುದ್ದ ಕೊಡಗಳನ್ನಿಟ್ಟು ಸರತಿ ಬರುವವರೆಗೂ ಕಾದು ನಮ್ಮ ಕೊಡ ಇಟ್ಟೊಡನೆ ನೀರು ನಿಂತೋದಾಗ...ಸೇಡು ತೀರಿಸಿಕೊಳ್ಳುವಂತೆ ಬಿರು ಬಿಸಿಲಿನಲ್ಲಿ,ಮುಂಜಾವಿನಲ್ಲಿ ಇಲ್ಲ ಮಳೆ ಬರುವಾಗ ನೀರು ಬಿಡುತ್ತಿದ್ದದ್ದು...ತಾಮ್ರದ/ಹಿತ್ತಾಳೆಯ ಕೊಡ ಭಾರವೆಂದು ಪ್ಲಾಸ್ಟಿಕ್ ಕೊಡಕ್ಕೆ ಸ್ವಿಚ್ ಆದದ್ದು.....ದೊಡ್ಡ ಕೊಡ ಎತ್ತಲಾಗದೆ ಬೀಳಿಸಿ ಒಡೆದು ಹಾಕಿ ಬೈಸಿಕೊಂಡದ್ದು...ನೀರು ಬರದ ದಿನಗಳು ಹೆಚ್ಚಾಗಿ....ಬೆಳೆಸಿದ ನೆಚ್ಚಿನ ಗಿಡಗಳು ಒಣಗಿ ನಲುಗಿದ್ದು....ಗಡಸು ನೀರನ್ನ ಬಳಸಲು ಗೊಣಗಿದ್ದು....ಕುಡಿಯುವ ನೀರನ್ನ ಬೆಲೆ ಕೊಟ್ಟು ಕೊಂಡದ್ದು....ನೀರಿನ ಬಗ್ಗೆ ಸಾಕ್ಷ್ಯ ಚಿತ್ರಗಳನ್ನ ನೋಡಿದ್ದು.....ಈ ಪ್ರಕ್ರಿಯೆಗಳಲ್ಲೇ ನಮ್ಮನೇಲಿ ನಾವು ನೀರಿನ ಮಿತ ಬಳಕೆಯನ್ನ ಕಲಿತದ್ದು.
-ಸವಿತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.