'ಸ್ವಂತಿಕೆ'ಯ ಅನುಭವ ಅನುಭವಿಸಿದವನೇ ಬಲ್ಲ...

0

ಇಂದು ಬೆಳಗ್ಗೆ ಊರಿನಿಂದ ನನ್ನ ಸ್ನೇಹಿತ ಫೋನ್ ಮಾಡಿದಾಗ 'ಏನ್ ಮಾರಾಯ್ತಿ ಈವಾಗ ಏನೂ ಬರೆಯಲ್ವಾ?' ಅಂತಾ ಕೇಳಿದ್ದ. "ಸಿಕ್ಕಾಪಟ್ಟೆ ಬ್ಯುಸಿ ಮಾರಾಯಾ. ಆಫೀಸಿನಲ್ಲೇ ದಿನ ಪೂರ್ತಿ ಕಳೆದು ಹೋಗುತ್ತೆ. ಇನ್ನು ಬ್ಲಾಗ್ ಬರೆಯೋಕೆ ಸಮಯವೇ ಸಾಕಾಗ್ತಾ ಇಲ್ಲ" ಅಂತಾ ಹೇಳಿದ್ದೆ.
ನಿಜವಾಗಿಯೂ ನನ್ನ ಬ್ಲಾಗ್ ಅಪ್್ಡೇಟ್ ಆಗದೆ ತುಂಬಾ ಸಮಯ ಆಯ್ತು. ಏನಾದರೂ ಬರೆಯಬೇಕು ಅಂತ ಕುಳಿತುಕೊಂಡರೆ ಏನು ಬರೆಯಬೇಕು ಅಂತಾನೇ ಗೊತ್ತಾಗಲ್ಲ. ಯಾವ ವಿಷಯ ಬರೆಯ ಬೇಕು ಎಂದು ಯೋಚಿಸುತ್ತಲೇ ಆ ದಿನ ಕಳೆದು ಹೋಗುತ್ತದೆ. ಆಫೀಸಿಗೆ ಹೋದ ನಂತರ ಏನಾದರೂ ಬರೆಯಬೇಕು ಎಂದು ಯೋಚಿಸಿಕೊಂಡೇ ಪಿಜಿಯಿಂದ ಹೊರಡುತ್ತೇನೆ. ಆದರೆ ಆಫೀಸಿಗೆ ಬಂದ ಮೇಲೆ ಈ ಯೋಚನೆಗಳ್ಯಾವುದೂ ಅಕ್ಷರ ರೂಪಕ್ಕೆ ಇಳಿಯುವುದಿಲ್ಲ ಎಂಬುದು ಸತ್ಯ. ಹೆಚ್ಚಿನ ಯೋಚನೆಗಳು ತಲೆಯಲ್ಲಿ ಹೊಳೆಯುವುದೇ ಬಸ್ಸಿನಲ್ಲಿ ಸೀಟು ಸಿಕ್ಕದೆ ಚಡಪಡಿಸುವಾಗ, ಯಾವುದೋ ಪರೀಕ್ಷೆಗೆ ತುರಾತುರಿಯಲ್ಲಿ ಸಿದ್ದತೆ ನಡೆಸುವಾಗ ಇಲ್ಲದಿದ್ದರೆ ಬಾತ್್ರೂಮಲ್ಲಿ. ಆ ಸಮಯದಲ್ಲಿ ಬರೆಯಲಂತೂ ಸಾಧ್ಯವಿಲ್ಲ, ನಂತರ ಬರೆಯೋಣ ಅಂದ್ರೆ ಇನ್ನೊಂದು ಯೋಚನೆ ತಲೆಯೊಳಗೆ ಹೊಕ್ಕಿ ಅಲ್ಲಿ ಸಜ್ಜಿಗೆ ಬಜಿಲ್ ಆಗಿರುತ್ತೆ.

ಪತ್ರಿಕಾ ಕಚೇರಿ ಅಂದ ಮೇಲೆ ದಿನಾ ನಾವು ಬರೆಯುತ್ತಲೇ ಇರುತ್ತೇವೆ. ಅದೂ ಡೆಡ್್ಲೈನ್ ಇಟ್ಟುಕೊಂಡು. ಪ್ರತಿಯೊಂದು ದಿನವೂ ಹೊಸ ಹೊಸ ಐಡಿಯಾಗಳನ್ನು ಹುಡುಕಿ ನಮ್ಮನ್ನು ನಾವೇ ಅಪ್್ಡೇಟ್ ಮಾಡಿಕೊಳ್ಳಬೇಕು. ಅದೇನೋ ಇಂತಹ ವಿಷಯದ ಬಗ್ಗೆ ಬರೆಯಿರಿ ಅಂತಾ ಹೇಳಿದ್ರೆ, ಆ ವಿಷಯದ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಇಷ್ಟಾದ ಮೇಲೆ ಅದನ್ನು ಬರೆಯುವುದು ಹೇಗೆ ಎಂಬುದೇ ದೊಡ್ಡ ಸಮಸ್ಯೆ, ಅದೇ ಸ್ಟಾರ್ಟಿಂಗ್ ಪ್ಲಾಬ್ಲಂ. ಏನಂತಾ ಶುರು ಮಾಡಲಿ? ಎಂದು ಹತ್ತಾರು ಬಾರಿ ತಲೆಕೆರೆದು, ಕೀಬೋರ್ಡ್ ಕುಟ್ಟಿ ಸದ್ದು ಮಾಡಿ ಹಾಗೇ ಹೀಗೆ ಹೇಗೋ ಮೊದಲ ಪ್ಯಾರಾ ಪೂರ್ತಿಯಾದರೆ ಒಂದಿಷ್ಟು ಸಮಾಧಾನ. ಮತ್ತೆ ಅದು ಇದು ಅಂತಾ ಬರೆಯುತ್ತಾ ಹೋದರೆ ಲೇಖನ ಪೂರ್ಣವಾಗುತ್ತದೆ. ಏನೋ ಹುರುಪಿನಿಂದ ಸುದೀರ್ಘವಾಗಿ ಬರೆಯುತ್ತಲೇ ಹೋದಾಗ ಮತ್ತೊಂದು ಅಡಚಣೆ. ಅದೇ ಬೈಟ್ಸ್. ಲೇಖನದಲ್ಲಿ ಇಂತಿಷ್ಟು ಪದಗಳಿರಬೇಕು ಎಂದು ಮೊದಲೇ ಹೇಳಿರುತ್ತಾರೆ. 3000 ಪದಗಳ ಲೇಖನ ಹೇಳಿದರೆ ನಾವು ಬರೆದಾಗ ಅದು 4000ದ ಗಡಿ ದಾಟಿರುತ್ತದೆ. ಆವಾಗ ಮತ್ತೆ ಲೇಖನಕ್ಕೆ ಕತ್ತರಿ ಹಾಕಬೇಕು. ಪದಗಳ ಜೋಡಣೆಯನ್ನು ಬದಲಿಸಬೇಕು. ಕತ್ತರಿ ಹಾಕುವ ಲೇಖನಗಳು ಒಂದೆಡೆಯಾದರೆ ಇನ್ನು ಕೆಲವು ಲೇಖನಗಳಿಗೆ ನೀರು ಸೇರಿಸಬೇಕಾಗಿ ಬರುತ್ತದೆ. ನಾವು ಆಯ್ದು ಕೊಂಡ ವಿಷಯದ ಬಗ್ಗೆ ಹೆಚ್ಚೇನು ಹೇಳಲಿರುವುದಿಲ್ಲ ಆದರೆ ಅದನ್ನು ದೊಡ್ಡದಾಗಿ ಹೇಳಬೇಕು. ಆವಾಗ ಸಾರಿಗೆ ನೀರು ಸೇರಿಸಿದಂತೆ ಲೇಖನಕ್ಕೆ ಅದು ಇದು ಅಂತಾ ಸೇರಿಸಿ ಅದನ್ನು ಚ್ಯೂಯಿಂಗ್ ಗಂ ನಂತೆ ಎಳೆಯಬೇಕು. ಲೇಖನವೊಂದನ್ನು ಹಿಗ್ಗಿಸುವುದು ಮತ್ತು ಕುಗ್ಗಿಸುವ ಕಾರ್ಯ ಇದೆಯಲ್ವಾ ಅದು ಲೇಖನ ಬರೆಯುವುದಕ್ಕಿಂತಲೂ ಕಠಿಣವಾದುದು!

ಲೇಖನ ಬರೆಯಲು ಕುಳಿತರೆ ಕೆಲವೊಮ್ಮೆ ಮಾಹಿತಿಗಳಿಗಾಗಿ ತುಂಬಾ ತಡಕಾಡಬೇಕಾಗುತ್ತದೆ. ಇದ್ದ ಸರ್ಚ್ ಇಂಜಿನ್್ಗಳಲ್ಲೆಲ್ಲಾ ವಿವಿಧ ಕೀವರ್ಡ್ಸ್ ಕೊಟ್ಟು ಹುಡುಕಿ ಮಾಹಿತಿ ಕಲೆ ಹಾಕಬೇಕು. ಇಂಗ್ಲಿಷಿನಲ್ಲಿ ಸಿಕ್ಕ ಮಾಹಿತಿಯನ್ನು ಕನ್ನಡಕ್ಕೆ ಅನುವಾದ ಮಾಡಿ ಇಲ್ಲವೇ ಒಂದಿಷ್ಟು ಅನುಭವದಿಂದ ಸಿಕ್ಕ ಪಾಠಗಳನ್ನು ಗುಡ್ಡೆ ಹಾಕಿ ಹೇಗೋ ಲೇಖನ ಸಿದ್ಧವಾಗಿತ್ತದೆ. ಆಮೇಲೆ ಲೇಖನ ಪ್ರಕಟವಾದಾಗ ಒಂದಿಷ್ಟು ಜನರು ತುಂಬಾ ಚೆನ್ನಾಗಿ ಬರೆದಿದ್ದಿ ಅಂತಾ ಹೊಗಳ್ತಾರೆ. ಇಷ್ಟೆಲ್ಲಾ ಹೇಳಿದ್ರೂ ಮನಸ್ಸಲ್ಲಿ ಏನೋ ಅತೃಪ್ತ ಭಾವ. ನಾನು ಹೇಳಬೇಕೆಂದಿದ್ದನ್ನು ಅಲ್ಲಿ ಹೇಳಲಾಗಿಲ್ಲ...ನಾನು ಮುಕ್ತವಾಗಿಯೇ ಬರೆದಿದ್ದೆ ಪ್ರಕಟಣೆಗೆ ಹೋಗುವ ಮುನ್ನ ಅದಕ್ಕೆ ಕತ್ತರಿ ಪ್ರಯೋಗ ನಡೆದಿದೆ. ಭಾಷೆ ನನ್ನದು ಆದರೆ ವಿಷಯ ಎಲ್ಲಿಂದಲೋ ಭಟ್ಟಿಇಳಿಸಿದ್ದು, ಇನ್ನೊಂದಿಷ್ಟು ಕಾಲಾವಕಾಶ ಸಿಕ್ಕಿದ್ದರೆ ಇನ್ನೂ ಚೆನ್ನಾಗಿ ಬರೆಯಬಹುದಿತ್ತು ಎಂದು ಅನಿಸುತ್ತದೆ. ಪ್ರಕಟಗೊಂಡ ನಂತರವಂತೂ ಆ ವಿಷಯವನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದರೆ ಚೆನ್ನಾಗಿತ್ತು, ವಾಕ್ಯ ರಚನೆ ಏನೋ ಸರಿಹೋಗಿಲ್ಲ ನನಗೆ ನಾನೇ ಅಂದು ಕೊಳ್ಳುತ್ತೇನೆ. ಅದೇ ವೇಳೆ ನನ್ನದೇ ಅನುಭವವನ್ನು ಬರೆದು ಪ್ರಕಟಿಸಿದರೆ ಅದರಲ್ಲೇನೋ ತೃಪ್ತಭಾವ. ನನ್ನ ಅನುಭವ ನನ್ನದು...ಕಾಪಿರೈಟ್ ಸಮಸ್ಯೆಯಿಲ್ಲ...ಇದಕ್ಕಿಂತ ಮಿಗಿಲಾಗಿ ಆ ಲೇಖನದಲ್ಲಿ ಸ್ವಂತಿಕೆ ಇರುತ್ತದೆ. ಇಂತಹಾ ಸ್ವಂತಿಕೆಯಿರುವ ಲೇಖನಗಳು ಬರೆದಾಗ ಮನಸ್ಸು ಹಗುರವಾಗುತ್ತದೆ. 'ಇದು ನನ್ನದು' ಎಂದು ಎದೆಮುಟ್ಟಿ ಹೇಳುವಾಗ ಅನುಭವಿಸುವ ಆನಂದವಿದೆಯಲ್ವಾ ಅದನ್ನು ಅನುಭವಿಸಿದವನೇ ಬಲ್ಲ!.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಎಲ್ಲಾ ಸರಿ ರಶ್ಮಿಯವರೆ, ಆದರೆ ಸ೦ಪದದಿ೦ದ ಇಷ್ಟೊ೦ದು ದೀರ್ಘ ವಿರಾಮ! ಖ೦ಡಿತವಾಗಿಯೂ ಸಹ್ಯವಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು ಅವರೆ, ಸಂಪದದಲ್ಲಿ ಬರೆಯೋಕೆ ಸಮಯ ಸಿಗ್ತಾ ಇಲ್ಲ....ಬರೆಯದಿದ್ದರೂ ವಾರದಲ್ಲಿ ಒಂದು ಬಾರಿಯಾದರೂ ಸಂಪದದತ್ತ ಕಣ್ಣು ಹಾಯಿಸುತ್ತಿರುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ರಶ್ಮಿಯವರೇ ಸ್ವಂತಿಕೆಯ ಅನುಭವ ಅನುಭವಿಸಿದವನೇ ಬಲ್ಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ragosha @shreeshum ಪ್ರತಿಕ್ರಿಯೆ ನೀಡಿದ್ದಕ್ಕಾಗಿ ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮೀ..., ಹೆಚ್ಚು ವಿಚಾರಗಳು ಹೊಳೆಯೋದು ಬಾತ್ರೂಮ್ಮಲ್ಲೇ.. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾನಿ, ನೂರಕ್ಕೆ ನೂರು ಸರಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನ ಮುಟ್ಟಿದ ಬರಹ. <ಲೇಖನವೊಂದನ್ನು ಹಿಗ್ಗಿಸುವುದು ಮತ್ತು ಕುಗ್ಗಿಸುವ ಕಾರ್ಯ ಇದೆಯಲ್ವಾ ಅದು ಲೇಖನ ಬರೆಯುವುದಕ್ಕಿಂತಲೂ ಕಠಿಣವಾದುದು! >ನಿಜ <ನಂತರ ಬರೆಯೋಣ ಅಂದ್ರೆ ಇನ್ನೊಂದು ಯೋಚನೆ ತಲೆಯೊಳಗೆ ಹೊಕ್ಕಿ ಅಲ್ಲಿ ಸಜ್ಜಿಗೆ ಬಜಿಲ್ ಆಗಿರುತ್ತೆ. > :) ಕೊನೆಯ ಮಾತುಗಳು ಇಷ್ಟವಾದವು. ಮತ್ತವು ನಿಜಕ್ಕೂ ಹೌದು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ....ಸಂತೋಷ್...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.