ನೆನಪಿನ ಮಳೆಯಲ್ಲಿ...ಮರೆಯಲಾಗದ ದಿನದ ನೆನಪು

5

ನಾನು ನಿರೀಕ್ಷಿಸಿದ್ದ ದಿನ ಇಷ್ಟು ಬೇಗ ಬಂದು ಬಿಡುತ್ತೆ ಎಂದು ನೆನೆಸಿರಲಿಲ್ಲ. ಕಳೆದ ವರ್ಷದ ಕ್ರಿಸ್್ಮಸ್್ಗೆ ಮುನ್ನ ಊರಿಗೆ ಹೋಗಿದ್ದಾಗ ನಮ್ಮೂರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 9, 10ನೇ ತಾರೀಖಿಗೆ ನಡೆಸಲು ನಿಗದಿಯಾಗಿದೆ ಎಂದು ತಿಳಿಯಿತು. ಆವಾಗಲೇ ಈ ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಕವನ ಸಂಕಲನ ಬಿಡುಗಡೆ ಮಾಡಿದರೆ ಹೇಗೆ? ಎಂಬ ಯೋಚನೆ ಹೊಳೆದದ್ದು. ಅಪ್ಪ ಅಮ್ಮನಲ್ಲಿ ವಿಷಯ ಮಂಡಿಸಿಯಾಯಿತು. ಆದರೆ ಸಾಹಿತ್ಯ ಸಮ್ಮೇಳನಕ್ಕಿರುವುದು ಇನ್ನು ಕೇವಲ 20 ದಿನ. ಇದರಲ್ಲಿ ಕವನ ಸಂಕಲನ ಬಿಡುಗಡೆಯಾಬೇಕು. ಎಲ್ಲಾ ಹೇಗೆ? ಎಂಬ ಚಿಂತೆ ಹೆತ್ತವರಿಗೆ. ಏನೋ ಎಲ್ಲಾ ಸರಿ ಹೋಗುತ್ತೆ ಎಂದು ಕೂಡಲೇ ಚೆನ್ನೈಯಲ್ಲಿರುವ ನನ್ನ ಸಹೋದ್ಯೋಗಿಯಾಗಿದ್ದ ಮಿತ್ರರೊಬ್ಬರಿಗೆ ಫೋನ್ ಮಾಡಿ ವಿಷಯ ಹೇಳಿದೆ. ಅವರು ಕೂಡಲೇ ಸರಿ ನಾನು ಪ್ರಕಾಶಕರಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದೇ ತಡ ಪುಸ್ತಕದ ಬಗ್ಗೆ ಯೋಚನೆ ನಡೆಸಿದೆ. ಪ್ರಕಾಶಕರು ಕವಿತೆ ನೋಡಿದ ಕೂಡಲೇ ಯಸ್ ಅಂದರು. ಆದರೆ ಸಮಯದ ಅಭಾವ ಬೇರೆ. ನಿನಗೆಲ್ಲಾ ಕೊನೆಯ ಗಳಿಗೆಯಲ್ಲೇ ಆಗ್ಬೇಕು. ನಾನು ಪರೀಕ್ಷೆಗೆ ಓದುತ್ತಿದ್ದುದು ಕೂಡ ಪರೀಕ್ಷೆಯ ಮುಂದಿನ ರಾತ್ರಿ. ಅದಕ್ಕೇ ಅಮ್ಮ ಆ ಎಲ್ಲಾ ಪುರಾಣವನ್ನು ಬಿಚ್ಚುತ್ತಿದ್ದರು. ಆದ್ರೆ ಅಪ್ಪ ಕೂಲ್. "ಏನೂ ಆಗಲ್ಲ... ಏಲ್ಲಾ ನೀನು ಅಂದು ಕೊಂಡಂತೆ ಆಗುತ್ತದೆ ಬಿಡು"ಅಂತಾ ಸಮಾಧಾನ ಮಾಡುತ್ತಿದ್ದರು.

ಪ್ರಕಾಶಕರು ಒಪ್ಪಿಕೊಂಡದ್ದಾಯ್ತು. ನೀನಿನ್ನು ಪುಸ್ತಕ ಬಿಡುಗಡೆಯ ಬಗ್ಗೆ ಚಿಂತಿಸಿದರೆ ಸಾಕು ಎಂದು ನನ್ನ ಮಿತ್ರರು ಫೋನಾಯಿಸಿ ಹೇಳಿದ್ದರು. ಸರಿ, ಕನ್ನಡ ಸಾಹಿತ್ಯ ಸಮ್ಮೇಳನದ ಸಂಯೋಜಕರಾದ ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷರು ಎಸ್ ವಿ ಭಟ್ಟರು ನನ್ನ ಗುರುಗಳು. ರಾತ್ರೋರಾತ್ರಿ ಅವರಿಗೆ ಫೋನಾಯಿಸಿ ಸರ್, ನನ್ನ ಕವನ ಸಂಕಲನವನ್ನು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ ಮಾಡ್ಬೇಕು ಎಂಬ ಆಸೆಯಿದೆ ಎಂದು ಹೇಳಿದೆ. ಸರಿ, ನೀನು ಮೊದಲೇ ಹೇಳ್ತಿದ್ದರೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಸೇರಿಸುತ್ತಿದ್ದೆ. ಪುಸ್ತಕ ರೆಡಿಯಾ? ಎಂದು ಕೇಳಿದಾಗ ಇಲ್ಲ ಸಾರ್, ಇನ್ನೂ ಪ್ರಿಂಟ್ ಆಗ್ಬೇಕು ಅಷ್ಟೇ. ನಿಮ್ಮ ಅನುಮತಿ ಸಿಕ್ಕಿದ ಮೇಲೆಯೇ ಪುಸ್ತಕ ಪ್ರಿಂಟ್ ಮಾಡಿಸೋಣ ಅಂತಾ ಇದ್ದೇನೆ ಎಂದು ಹೇಳಿದೆ. ಸರಿ...ನೀನು ಪುಸ್ತಕ ಪ್ರಿಂಟ್ ಮಾಡು, ಬಿಡುಗಡೆಯ ಜವಾಬ್ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದಾಗ ಸಂತೋಷಕ್ಕೆ ಪಾರವೇ ಇಲ್ಲವಾಗಿತ್ತು.ಕವನಗಳೆಲ್ಲಾ ರೆಡಿಯಾಗಿದೆ. ಆದರೆ ಮುನ್ನುಡಿ? ಈ ಕೊನೆಯ ಕ್ಷಣದಲ್ಲಿ ಯಾರು ಮುನ್ನುಡಿ ಬರೆದು ಕೊಡುತ್ತಾರೆ? ಮತ್ತೆ ನನ್ನ ಗುರುಗಳಾದ ಎಸ್.ವಿ ಭಟ್ಟರನ್ನು ಸಂಪರ್ಕಿಸಿದೆ. ಆಯ್ತು, ನಿನ್ನ ಕವನ ಸಂಕಲನಕ್ಕೆ ನಾನೇ ಮುನ್ನುಡಿ ಬರೆದು ಕೊಡುತ್ತೇನೆ ಕವನದ ಪ್ರತಿಯನ್ನು ಕಳುಹಿಸು ಎಂದು ಹೇಳಿದರು. ಇನ್ನೇನು ಸಾಹಿತ್ಯ ಸಮ್ಮೇಳನಕ್ಕೆ ಒಂದು ವಾರ ಬಾಕಿಯಿತ್ತು. ನನ್ನ ಕವನದ ಪ್ರತಿಯನ್ನು ನನ್ನ ಅಪ್ಪ ನಮ್ಮ ಗುರುಗಳ ಮನೆಗೆ ಹೋಗಿ ಕೊಟ್ಟು ಬಂದು, ಮರುದಿನ ಮುನ್ನುಡಿಯನ್ನು ಫ್ಯಾಕ್ಸ್ ಮೂಲಕ ಕಳುಹಿಸಲಾಯಿತು. ಸದ್ಯ ಮುನ್ನುಡಿ, ಕವನ ಎಲ್ಲಾ ರೆಡಿ. ಇನ್ನು ಕವರ್ ಪೇಜ್. ಪ್ರಕಾಶಕರು ಒಂದು ಕವರ್ ಪೇಜ್ ಕಳುಹಿಸಿದಾಗ, ನನ್ನ ಅಣ್ಣನಿಗೆ ( ಚೆನ್ನೈಯಲ್ಲಿನ ನನ್ನ ಸಹೋದ್ಯೋಗಿಯಾಗಿದ್ದವ. ಉತ್ತಮ ಬ್ಲಾಗರ್ ಕೂಡಾ) ಅದು ಇಷ್ಟವಾಗಲಿಲ್ಲ. ಆವಾಗ ಅವರು ಕೆಲಸ ಮಾಡುತ್ತಿರುವ ಚೆನ್ನೈಯ ಗಲಾಟಾ ಡಾಟ್ ಕಾಮ್ ನನ್ನ ನೆರವಿಗೆ ಬಂತು. ಅಲ್ಲಿನ ಪೇಜ್ ಡಿಸೈನರ್ ನನಗೆ ಕವರ್ ಪೇಜ್್ಗಾಗಿ ಇಮೇಜ್ ಕಳುಹಿಸಿಕೊಟ್ಟರು. ಆ ಇಮೇಜ್ ಎಲ್ಲರಿಗೂ ಇಷ್ಟವಾಯಿತು.

ಹೀಗೆ ಪುಸ್ತಕ ಮುದ್ರಣದ ಹಂತಕ್ಕೆ ತಲುಪಿತು. ಮುದ್ರಣದ ಬಗ್ಗೆ ಪ್ರಕಾಶಕರು ಜವಾಬ್ದಾರಿ ವಹಿಸಿದ್ದಾರೆ. ಬಿಡುಗಡೆಯ ಬಗ್ಗೆ ನನ್ನ ಗುರುಗಳು. ನನಗಿರುವ ಕೆಲಸ ಅಂದರೆ ನನ್ನ ಗೆಳೆಯರನ್ನು ಆಮಂತ್ರಿಸುವುದು. ಆಮಂತ್ರಣ ಪತ್ರಿಕೆ ರೆಡಿಯಾಗಬೇಕಲ್ಲ? ನಾನಿರುವುದು ಬೆಂಗಳೂರಿನಲ್ಲಿ, ನನಗೆ ಮಾರ್ಗದರ್ಶನ ನೀಡುವ ನನ್ನ ಮಿತ್ರರಿಬ್ಬರೂ ಇರುವುದು ಚೆನ್ನೈಯಲ್ಲಿ, ಪ್ರಕಾಶಕರಿರುವುದು ಕುಂದಾಪುರದಲ್ಲಿ, ಬಿಡುಗಡೆ ಸಮಾರಂಭ ಕಾಸರಗೋಡಿನಲ್ಲಿ. ಹೇಗೆ ದಕ್ಷಿಣ ಭಾರತದ ಮೂರು ರಾಜ್ಯಗಳ ಸ್ನೇಹಿತರು ನನ್ನೊಂದಿಗೆ ಇದ್ದರು. ಯಾರೊಬ್ಬರು ಪರಸ್ಪರ ಮುಖ ನೋಡಿ ಮಾತಾಡಿಲ್ಲ. ಎಲ್ಲವೂ ಫೋನ್ ಮೂಲಕವೇ. ಆಮಂತ್ರಣ ಪತ್ರಿಕೆ ಕೂಡಾ ಜಟ್್ಪಟ್ ಆಗ್ಬೇಕು. ಶಿವಮೊಗ್ಗದಲ್ಲಿ ಪ್ರಿಂಟಿಂಗ್ ಪ್ರೆಸ್್ನ ಮಾಲಕ ಹಾಗೂ ನನ್ನ ಸಹೋದ್ಯೋಗಿಯಾಗಿದ್ದ ಇನ್ನೋರ್ವ ಗೆಳೆಯನಿಗೆ ಫೋನಾಯಿಸಿ ಹೇಳಿದೆ. "ನೀನ್ಯಾಕೆ ಚಿಂತೆ ಮಾಡ್ತೀಯಾ, ನಾನೇ ನಿನಗೆ ಆಮಂತ್ರಣ ಪತ್ರಿಕೆ ರೆಡಿ ಮಾಡಿಕೊಡ್ತೀನಿ. ಇವತ್ತೇ ಆಮಂತ್ರಣ ಪತ್ರಿಕೆಗಿರುವ ವಿಷಯ ಬರೆದು ಇಮೇಲ್ ಕಳುಹಿಸು. ನಾಳೆ ಪ್ರಿಂಟ್ ಮಾಡಿ ಕೊರಿಯರ್ ಕಳುಹಿಸುತ್ತೇನೆ "ಅಂದ. ಒಂದೇ ದಿನದಲ್ಲಿ ಆಮಂತ್ರಣ ಪತ್ರಿಕೆ ಪ್ರಿಂಟ್ ಆಯ್ತು. ಮರುದಿನ ಮಧ್ಯಾಹ್ನದ ವೇಳೆಗೆ ನನ್ನ ಕ್ಯಾಬಿನ್್ಗೆ ಆಮಂತ್ರಣ ಪತ್ರಿಕೆಯ ಕಟ್ಟು ಕೊರಿಯರ್ ಮೂಲಕ ತಲುಪಿತ್ತು.

ಆಫೀಸಿನಲ್ಲಿ ಮತ್ತು ನನ್ನ ಹತ್ತಿರವಿರುವ ಗೆಳೆಯರಿಗೆಲ್ಲಾ ಆಮಂತ್ರಣ ಪತ್ರಿಕೆ ಖುದ್ದಾಗಿ ಹೋಗಿ ನೀಡಿದೆ. ಇನ್ನುಳಿದವರಿಗೆಲ್ಲಾ ಇಮೇಲ್ ಮೂಲಕ, ಫೋನ್ ನಂಬರ್ ತಿಳಿದಿರುವ ಸ್ನೇಹಿತರಿಗೆಲ್ಲಾ ಫೋನ್ ಮೂಲಕ ಆಮಂತ್ರಿಸಿದೆ. ಬೆಂಗಳೂರಿನ ಫ್ರೆಂಡ್ಸ್ ಎಲ್ಲರೂ ಅಷ್ಟು ದೂರ ಅಲ್ವಾ ಬರಲಿಕ್ಕೆ ಆಗಲ್ಲ ಎಂದು ಹೇಳಿ ಶುಭಾಷಯಗಳನ್ನು ತಿಳಿಸಿದ್ದಾಯ್ತು. ಇನ್ನು ಊರಲ್ಲಿರುವ ಸ್ನೇಹಿತರಿಗೆ, ಗುರುಗಳಿಗೆ ವಿಷಯ ತಿಳಿಸಬೇಕಲ್ಲಾ. ಆ ಎಲ್ಲಾ ಜವಾಬ್ದಾರಿ ಅಪ್ಪ ಮತ್ತು ನನ್ನ ಸಹೋದರರ ಮೇಲಿತ್ತು. ಭಾನುವಾರ ನನ್ನ ಕಾರ್ಯಕ್ರಮ. ಶುಕ್ರವಾರ ಬೆಂಗಳೂರಿನಿಂದ ಹೊರಡಬೇಕಿತ್ತು. ಆ ಕೊನೆ ಗಳಿಗೆಯಲ್ಲಿ ಮನಸ್ಸಲ್ಲಿ ಏನೋ ಒಂದು ರೀತಿ ಭಯ. ಮಧ್ಯಾಹ್ನ ಪ್ರಕಾಶಕರು ಫೋನ್ ಮಾಡಿ, ಪುಸ್ತಕವನ್ನು ನಾನು ನಿನ್ನ ಪಿಜಿಗೆ ತಲುಪಿಸುತ್ತೇನೆ ಎಂದು ಹೇಳಿದಾಗ ನಾನಿದ್ದದ್ದು ಆಫೀಸಿನಲ್ಲಿ. ಆಯ್ತು ಅಂತಾ ಹೇಳಿ ನನ್ನ ಗೆಳತಿಗೆ ಫೋನ್ ಮಾಡಿ ಪುಸ್ತಕವನ್ನು ಸುರಕ್ಷಿತವಾಗಿ ತೆಗೆದಿಡು ಎಂದು ಹೇಳಿ ಕಚೇರಿಯ ಕೆಲಸವನ್ನೆಲ್ಲಾ ಬೇಗ ಬೇಗ ಮುಗಿಸಿ ಪಿಜಿಗೆ ದೌಡಾಯಿಸಿದೆ. ಪುಸ್ತಕದ ಕಟ್ಟನ್ನು ಹಿಡಿದು ಕೊಂಡು ಶುಕ್ರವಾರ ಸಂಜೆ 8 ಗಂಟೆಯ ಬಸ್ಸೇರಿ ಮರುದಿನ ಬೆಳಗ್ಗೆ 7 ಗಂಟೆಗೆ ಕಾಸರಗೋಡು ತಲುಪಿದೆ.


ಮನೆಗೆ ತಲುಪಿದರೂ ಆರಾಮ ಮಾಡುವಷ್ಟು ಪುರುಸೋತ್ತು ಇರಲಿಲ್ಲ. ಇನ್ನು ಊರಲ್ಲಿರುವ ಕೆಲವೊಂದು ಮಂದಿಗೆ ಫೋನ್ ಮಾಡಿ ಆಮಂತ್ರಿಸಿದೆ. ಶನಿವಾರ ಸಾಹಿತ್ಯ ಸಮ್ಮೇಳನದ ಅಂಗವಾಗಿ ಯುವಜನೋತ್ಸವ ನಡೆಯುತ್ತಿತ್ತು. ಇನ್ನೇನು ಶುಭ ಕಾರ್ಯ. ಮಧೂರು ದೇವಸ್ಥಾನಕ್ಕೆ ಹೋಗಿ ಬೊಡ್ಡಜ್ಜನಿಗೆ ಪೂಜೆ ಮಾಡಿಸಿಕೊಂಡು ಬನ್ನಿ ಎಂದು ಅಮ್ಮ ಹೇಳಿದಾಗ ನಾನು ಮತ್ತು ಅಪ್ಪ ರೆಡಿ. ಪೂಜೆ ಮುಗಿಸಿ ಮಧ್ಯಾಹ್ನದ ಹೊತ್ತಿಗೆ ಸಮಾರಂಭ ನಡೆಯಲಿರುವ ನೀರ್ಚಾಲು ಶಾಲೆಗೆ ನಾವಿಬ್ಬರೂ ಹೋದೆವು. ಅಲ್ಲಿನ ಕಾರ್ಯಕ್ರಮದ ಉಸ್ತುವಾರಿ ವಹಿಸಿರುವ ಹಿರಿಯ ಕಿರಿಯ ವ್ಯಕ್ತಿಗಳನ್ನೆಲ್ಲಾ ಭೇಟಿಯಾಗಿ ಪರಿಚಯ ಮಾಡಿಕೊಂಡು ಬಂದೆವು. ನಿದ್ದೆಯಿಲ್ಲದೆ, ಸುಸ್ತಾಗಿ ಇನ್ನೇನು ಬಿದ್ದು ಬಿಡುತ್ತೇನೆ ಎಂಬಂತೆ ನನಗನಿಸುತ್ತಿತ್ತು. ಆದರೆ ನಾಳೆ ನಡೆಯಲಿರುವುದು ಮಹತ್ತರವಾದ ಸಮಾರಂಭ.  ದಶಕದಿಂದ ನಾನು ಕಾಣತೊಡಗಿದ ಕನಸು ನನಸಾಗುವ ಘಳಿಗೆ.


 ಮನೆಗೆ ಮರಳಿದಾಗ ಹೊತ್ತು ಸಂಜೆಯಾಗಿತ್ತು. ಮನೆಯಲ್ಲಿ ಸಂಭ್ರಮದ ವಾತಾವರಣ. ಅದರಲ್ಲಿಯೂ ನನ್ನ ತಮ್ಮ ಮನು ನೀನೇನು ಮಾಡ್ಬೇಡ ರೆಸ್ಟ್ ತೆಗೋ ಎಂದು ಹೇಳುತ್ತಾ ನಾಳೆಯ ಫಂಕ್ಷನ್್ಗೆ ನಾನು ಯಾವ ಡ್ರೆಸ್ ಹಾಕ್ಬೇಕು ಎಂಬುದನ್ನು ಕೂಡಾ ಅವನೇ ನಿರ್ಧರಿಸಿ, ನೋಡು ಇದೇ ಡ್ರೆಸ್ ಹಾಕ್ಬೇಕು, ಅದಕ್ಕೆ ಇಸ್ತ್ರಿ ಹಾಕಿಟ್ಟಿದ್ದೇನೆ ಎಂದು ಆದೇಶ ನೀಡಿದ್ದ. ಮತ್ತೆ, ಇದು ಮಹನೀಯರ ಹೆಸರಿನ ಪಟ್ಟಿ. ಇವರೆಲ್ಲಾ ಕಾಸರಗೋಡಿನ ಹಿರಿಯ ಸಾಹಿತಿಗಳು. ಇವರಿಗೆಲ್ಲಾ ಪುಸ್ತಕ ಕೊಡಬೇಕು ಎಂದೆಲ್ಲಾ ಹೇಳಿ ನನ್ನ ಕೆಲಸವನ್ನು ಸುಗಮವಾಗುವಂತೆ ಮಾಡಿದ್ದ.


ರಾತ್ರಿ ಮಲಗುವಾಗ ಅಮ್ಮಾ ನನಗೆ ಏನೋ ಭಯ ಆಗ್ತಾ ಇದೆ ಎಂದಾಗ, ಮಧೂರು ಗಣಪತಿ ಎಲ್ಲಾ ನೋಡಿಕೊಳ್ತಾರೆ. ನಾವು ನಂಬಿದ ದೈವ ದೇವರು ನಮ್ಮ ಕೈ ಬಿಡಲಾರರು ಎಂದು ಅಮ್ಮ ಸಮಾಧಾನಿಸುತ್ತಾ ನಿದ್ದೆ ಹೋದರು. ಅಂತೂ ಆ ಸುದಿನ ಬಂದೇ ಬಿಟ್ಟಿತು. ಜನವರಿ 10. ಬೆಳ್ಳಂಬೆಳಗ್ಗೆ ಎದ್ದು ಸ್ನಾನ ಮಾಡಿ ಪೂಜೆ ಮುಗಿಸಿ ನಾನು ಮತ್ತು ಅಪ್ಪ ಸಮಾರಂಭದ ಸ್ಥಳಕ್ಕೆ ಮುಂಚಿತವಾಗಿಯೇ ತಲುಪಿದೆವು. ಪುಸ್ತಕ ಬಿಡುಗಡೆ ಸಮಾರಂಭ 11 ಗಂಟೆಗೆ ಅಲ್ವಾ ಆದ್ದರಿಂದ ಮನೆಯಲ್ಲಿ ನಾಯಿ, ದನ ಬೆಕ್ಕು ಎಲ್ಲದರ ಚಾಕರಿ ಮಾಡಿ ನಾವು ಸ್ವಲ್ಪ ಹೊತ್ತಾದ ಮೇಲೆ ಬರುತ್ತೇವೆ ಎಂದು ಅಮ್ಮ ಹೇಳಿದ್ದರು.

ಸಮಾರಂಭದ ಸ್ಥಳದಲ್ಲಿ ಪರಿಚಿತ ಮುಖಗಳು ನೋಡಿ ಮಾತನಾಡಿಸಿದರು. ಮನೆಯಿಂದ ಕೆಲಸ ನಿಮಿತ್ತ ದೂರವಾಗಿ ಮೂರು ವರ್ಷಗಳೇ ಕಳೆದು ಹೋಗಿದ್ದವು. ಕೆಲವರೆಲ್ಲಾ ಅಂದಾಜಿಗೆ ಗುರುತು ಹಿಡಿದು, ಮಾತನಾಡಿಸಿದರು. ಹಳೆಯ ಗೆಳೆಯರು, ಮದುವೆಯಾಗಿ ಮಕ್ಕಳೊಂದಿಗೆ ಬಂದ ಗೆಳತಿಯರು, ನನ್ನ ಗುರುಗಳು ಎಲ್ಲರನ್ನು ಅಲ್ಲಿ ಕಂಡಾಗ ಅನುಭವಿಸಿದ ಸಂತೋಷ ಅಷ್ಟಿಷ್ಟಲ್ಲ. ಅಪ್ಪನ ಸ್ನೇಹಿತರು, ಸಹಪಾಠಿಗಳು, ಗುರುಗಳು ಕೂಡಾ ಅಲ್ಲಿಗೆ ಬಂದಿದ್ದರು. ಸಾಹಿತ್ಯ ಸಮಾರಂಭ ಅಂದ ಕೂಡಲೇ ಅಲ್ಲಿ ಭಾಗವಹಿಸುವವರೆಲ್ಲಾ ಹಿರಿಯರೇ ಆಗಿರುವುದು ನಮ್ಮೂರಿನ ವಿಶೇಷ.

ಚಿಕ್ಕಂದಿನಿಂದಿರುವ ಅಭ್ಯಾಸ, ಅಪ್ಪನ ಕೈಹಿಡಿದೇ ನಡೆಯುವುದು. ಅಲ್ಲಿಯೂ ಅಪ್ಪನ ಕಿರುಬೆರಳನ್ನು ಹಿಡಿದುಕೊಂಡೇ ನಿಂತಿದ್ದೆ. ಇನ್ನು ಪುಸ್ತಕ ಬಿಡುಗಡೆ ಕಾರ್ಯಕ್ರಮ ಎಂದು ಹೇಳಿದಾಗ ಮೈ ನಡುಗಿತು. ಮನೂ, ನೀನು ಜೊತೆಗೆ ಬಾ ಎಂದು ಅವನನ್ನು ಕರೆದು ಕೊಂಡು ವೇದಿಕೆ ಪಕ್ಕ ಹೋದೆ. ನನಗೆ ಪುಸ್ತಕ ಬಿಡುಗಡೆ ಮಾಡುತ್ತಿರುವುದನ್ನು ನೋಡ್ಬೇಕು. ವೇದಿಕೆ ಹಿಂದೆ ನಾ ನಿಲ್ಲಲ್ಲ ಎಂದು ಹೇಳಿ ಮನೂ ಹೊರಟು ಹೋದ. ವೇದಿಕೆಯ ಹಿಂದೆ ಹೋದಾಗ ಅಲ್ಲಿ ನಮ್ಮ ಗುರುಗಳಾದ ಯು. ಮಹೇಶ್ವರಿ ಮೇಡಂ ಇದ್ದರು. "ಮೇಡಂ, ನಂಗೆ ಭಯ ಆಗ್ತಾ ಇದೆ. ವೇದಿಕೆಗೆ ಹತ್ತದೆ ವರ್ಷಗಳಾಯ್ತಲ್ಲಾ. ಯಾರಿಗೂ ನನ್ನ ಪರಿಚಯ ಇಲ್ಲ. ನನ್ನ ಹೆಸರು ಮಾತ್ರ ಕಾಸರಗೋಡಿನವರಿಗೆ ಗೊತ್ತು, ಆದ್ರೆ ನಾನು ಯಾರು ಅಂತಾ ಹೆಚ್ಚಿನವರಿಗೆ ತಿಳಿದಿಲ್ಲ" ಎಂದು ಹೇಳಿದಾಗ, "ಭಯ ಯಾಕೆ? ನೀನು ನೋಡ್ತಾ ಇರು ಎಲ್ಲರೂ ನಿನ್ನನ್ನು ಮಾತಾಡಿಸ್ತಾರೆ. ಎಲ್ಲರೂ ನಮ್ಮವರೇ ಅಲ್ವಾ" ಎಂದು ಧೈರ್ಯ ತುಂಬಿದರು.

ವೇದಿಕೆಯ ಮೇಲಿರುವ ಮಹನೀಯರು ಅಂದರೆ ಬನ್ನಂಜೆ ಗೋವಿಂದಾಚಾರ್ಯರು, ಅಂಬಾತನಯ ಮುದ್ರಾಡಿ, ಪೆರ್ಲ ಕೃಷ್ಣ ಭಟ್, ವೆಂಕಟರಾಜ ಪುಣಿಚಿತ್ತಾಯ, ಪಿ.ಎಸ್ ಪುಣಿಚಿತ್ತಾಯ ಮೊದಲಾದವರು. ಅಂಬಾಯತನ ಮುದ್ರಾಡಿಯವರು ನನ್ನ "ನೆನಪಿನ ಮಳೆಯಲ್ಲಿ" ಕವನ ಸಂಕಲನವನ್ನು ಬಿಡುಗಡೆ ಮಾಡಿದಾಗ ನನ್ನ ಕನಸು ನನಸಾಗಿತ್ತು. ಅಲ್ಲಿಯವರೆಗಿದ್ದ ಭಯ, ವೇದಿಕೆ ಏರಿದಾಗ ಮಾಯವಾಗಿತ್ತು. "ಪುಟ್ಟೀ...ನೀನು ಕವಿತೆ ಬರೆದಿದ್ದೀಯಾ? ಅಂತಾ ವೇದಿಕೆ ಮೇಲಿದ್ದ ಹಿರಿಯರೊಬ್ಬರು ಹೇಳಿದಾಗ ನಾನು ತಬ್ಬಿಬ್ಬು. ಬನ್ನಂಜೆ ಗೋವಿಂದಾಚಾರ್ಯರು ಆತ್ಮೀಯವಾಗಿ ಕರೆದು ಮಾತನಾಡಿದಾಗ ಸಂತಸದಲ್ಲಿ ಮಾತೇ ಹೊರಬರುತ್ತಿರಲಿಲ್ಲ. ವೇದಿಕೆಯಲ್ಲಿದ್ದ ಎಲ್ಲರೂ ಕರೆದು ಮಾತನಾಡಿಸಿ ಏನು ಮಾಡ್ತಾ ಇದ್ದೀಯಾ? ನಿನ್ನ ಈ ಕೆಲಸದ ನಡುವೆಯೂ ಕವನ ಬರಿತಾ ಇದ್ದೀಯಲ್ಲಾ ಸಂತಸ ಎಂದು ಹೇಳಿದಾಗ ಜನ್ಮ ಸಾರ್ಥಕವಾಯಿತು ಎನ್ನುವಷ್ಟು ಸಂತೋಷವನ್ನು ಅನುಭವಿಸಿದ್ದೆ.

ನೀವು ಯಾವ ಕ್ಲಾಸು? ಎಂದು ಅಲ್ಲಿನ ಕೆಲವೊಂದು ವಿದ್ಯಾರ್ಥಿನಿಯರು ಕೇಳಿದಾಗ ಮುಜುಗರವಾದರೂ ನಾನು ಕೆಲಸದಲ್ಲಿದ್ದೇನೆ ಎಂದು ಹೇಳಿದೆ. ಕೆಲವೊಬ್ಬರು ಬಂದು ತಾವೇ ಪರಿಚಯ ಮಾಡಿಸಿಕೊಂಡು ಪುಸ್ತಕ ಖರೀದಿಸಿದರು. ಕೆಲವರು ಪುಸ್ತಕ ಕೊಂಡುಕೊಂಡು ಓದಿ ಅಭಿಪ್ರಾಯ ತಿಳಿಸಿದರು, ಮೆಚ್ಚುಗೆ ವ್ಯಕ್ತ ಪಡಿಸಿದರು. ಇನ್ನು ಕೆಲವು ಹಿರಿಯರು, ಗುರುಗಳು ಮುಂದಿನ ಹೆಜ್ಜೆಯ ಬಗ್ಗೆ ಮಾರ್ಗದರ್ಶನ ನೀಡಿದರು. ನಾನು ಚಿಕ್ಕವಳಿರುವಾಗ ಕವಿತೆಗೆ ಪ್ರೋತ್ಸಾಹ ನೀಡಿದ ನನ್ನ ಗುರುಗಳಾದ ಪಿ.ವಿ ಶಿವರಾಮ್, ಹೈಸ್ಕೂಲ್್ನಲ್ಲಿ ನನಗೆ ಕವನ ಬರೆಯಲು ಹುರಿದುಂಬಿಸಿದ ಎಸ್ ವಿ ಭಟ್ ಅವರ ಕಣ್ಣಲ್ಲಿ ಸಂಭ್ರಮ. ಚಿಕ್ಕದಿರುವಾಗ ಕವನ ಗೀಚುತ್ತಿದ್ದ ಹವ್ಯಾಸವನ್ನು ಮುಂದುವರಿಸಿದ್ದಿಯಲ್ವಾ ತುಂಬಾ ಸಂತೋಷವಾಯಿತು ಎಂದು ಗುರುವರ್ಯರು ಹರಸಿದರು. ಪುಸ್ತಕ ತೆರೆದಾಗ ಅದರಲ್ಲಿ ನನ್ನ ಗುರುಗಳನ್ನು ನೆನಪಿಸಿದನ್ನು ಕಂಡು ಶಿವರಾಮ್ ಅವರ ಪತ್ನಿಯ ಕಣ್ಣಲ್ಲಿ ಆನಂದ ಭಾಷ್ಪ. ನನ್ನ ಅಪ್ಪನ ಗುರುಗಳೊಬ್ಬರು ಅವರಿಗೆ ಸುಮಾರು 95 ವರ್ಷ ಪ್ರಾಯ. ಓದಿ ಅಭಿಪ್ರಾಯ ತಿಳಿಸುತ್ತೇನೆ ಎಂದು ಆಶೀರ್ವದಿಸಿದರು. ನಂತರ ಅವರು ಪುಸ್ತಕ ಓದಿ, ಚೆನ್ನಾಗಿದೆ ಅಂತಾ ಫೋನ್ ಮಾಡಿ ತಿಳಿಸಿದ್ದು ಮಾತ್ರವಲ್ಲದೆ ಕಚೇರಿಯ ವಿಳಾಸದಲ್ಲಿ ಪತ್ರ ಬರೆದು ಅಭಿಪ್ರಾಯ ತಿಳಿಸಿದರು.


ನನ್ನ ಸ್ನೇಹಿತರ ಸ್ನೇಹ, ಅಪ್ಪ ಅಮ್ಮನ ಪ್ರೋತ್ಸಾಹ, ಗುರು ಹಿರಿಯರ ಆಶೀರ್ವಾದ, ಕನಸುಗಳನ್ನು ನನಸಾಗಿಸಲಿರುವ ನನ್ನ ವಿಶ್ವಾಸ, ಒಂದಿಷ್ಟು ಅದೃಷ್ಟ ಎಲ್ಲವೂ ಸೇರಿದಾಗ ನೆನಪಿನ ಮಳೆಯಲ್ಲಿ ಕವನ ಸಂಕಲನದ ಬಿಡುಗಡೆಯ ಕನಸು ಸಾಕ್ಷಾತ್ಕಾರಗೊಂಡಿತ್ತು. ಅಂತೂ ರಜೆ ಇಲ್ಲದಿರುವ ಕಾರಣ ನನಗೆ ಭಾನುವಾರವೇ ಅಲ್ಲಿಂದ ಹೊರಡಬೇಕಿತ್ತು. ಆದುದರಿಂದ ಸಮಾರಂಭದ ಸ್ಥಳದಿಂದ ಸಂಜೆ ಐದು ಗಂಟೆಗೆ ಮನೆಗೆ ಮರಳಿದೆವು. ಮತ್ತೆ ಪುನಃ ಬೆಂಗಳೂರಿಗೆ. ಎಲ್ಲವೂ ಶುಭಂ. ಮಂಗಳಂ. ಸಾಧಾರಣವಾಗಿ ನಾನು ಮನೆಯಿಂದ ಬೆಂಗಳೂರಿಗೆ ಬರಬೇಕಾದರೆ ಅಮ್ಮ ತುಂಬಾ ಸ್ವೀಟ್ಸ್ ಮಾಡಿ ಡಬ್ಬದಲ್ಲಿ ತುಂಬಿಸಿ ಕಳುಹಿಸಿಕೊಡುತ್ತಾರೆ. ಆದರೆ ಈ ಬಾರಿ ಯಾವುದಕ್ಕೂ ಸಮಯವಿರಲಿಲ್ಲ. ಅಂದ ಹಾಗೆ ರಾತ್ರಿ 8 ಗಂಟೆಯ ಬಸ್ಸೇರಿ ಬೆಂಗಳೂರಿಗೆ ಯಾತ್ರೆ ಹೊರಡುವಾಗ ನನ್ನ ಜೊತೆ ಅಮ್ಮ ಮಾಡಿದ ಸ್ವೀಟ್ಸ್ ಇಲ್ಲದಿದ್ದರೂ ಮರೆಯಲಾಗದ ಸಮಾರಂಭದ ನೆನಪು, ಕಳೆದು ಹೋದ ಕಹಿ ನೆನಪುಗಳನ್ನು ಸಿಹಿಯಾಗಿಸಿದ ಉತ್ಸಾಹ, ಸಮಾಧಾನ, ಹಿರಿಯರ ಹಾರೈಕೆ ಎಲ್ಲವೂ ಜೊತೆಗಿತ್ತು. ಆಲ್ ಈಸ್ ವೆಲ್....!!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಶ್ಮಿ ಪೈ ಅವರೇ, ಇನ್ನೊಮ್ಮೆ ಅಭಿನಂದನೆಗಳು. <<<ಹತ್ತು ದಶಕಗಳಿಂದ ನಾನು ಕಾಣತೊಡಗಿದ ಕನಸು ನನಸಾಗುವ ಘಳಿಗೆ.>>> ನಿಜವಾಗಿಯೂ? :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಸ್ತ್ರಿಗಳೇ, ಧನ್ಯವಾದಗಳು. ಚಿಕ್ಕಂದಿನಿಂದಲೇ ಕವನ ಸಂಕಲನ ಬಿಡುಗಡೆ ಮಾಡುವ ಕನಸು ಕಂಡಿದ್ದೆ. ಹಾಗೇ ಒಂದು ಪುಸ್ತಕದಲ್ಲಿ ಎಲ್ಲಾ ಕವನಗಳನ್ನು ಬರೆದಿಡುತ್ತಿದ್ದೆ. ಈಗ ಎಲ್ಲಾ ಬ್ಲಾಗ್್ಗಳಲ್ಲಿ ಗೀಚಿದ ನಂತರ ಲಿಂಕ್ ಸೇವ್ ಮಾಡಿಟ್ಟು ಕೊಳ್ಳುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಂಗೀ*, ಹತ್ತು ದಶಕಗಳಿಂದ = ಸುಮಾರು ನೂರು ವರ್ಷಗಳಿಂದ How did you miss it? :-) (*ಅಚಾನಕ್ ಹಾಗೆ ಕರೆಯುವ ಮನಸ್ಸಾಯ್ತು; ದಯವಿಟ್ಟು ತಪ್ಪು ತಿಳಿಯಬೇಡಿ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿ, ಸುಮಾರು ಹತ್ತು ವರ್ಷ ಅಂತಾ ಆಗ್ಬೇಕಿತ್ತು. ದಶಕ, ಹತ್ತು ಜೊತೆ ಜೊತೆಯಾಗಿ ಬಂತು. ತಪ್ಪನ್ನು ಎತ್ತಿ ತೋರಿಸಿದ್ದಕ್ಕೆ ಧನ್ಯವಾದಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ತಪ್ಪನ್ನು ಎತ್ತಿ ತೋರಿಸಿದ್ದಕ್ಕೆ>>> :-( ನೀವು ನನ್ನ ಉದ್ದೇಶವನ್ನು ತಪ್ಪಾಗಿ ಅರ್ಥೈಸಿಲ್ಲ ಎಂದು ಆಶಿಸುತ್ತೇನೆ. ಒಂದು ಒಳ್ಳೆಯ ಬರಹದಲ್ಲಿ ನುಸುಳಿದ್ದ ಒಂದು ಅತಿ ಚಿಕ್ಕ ತಪ್ಪನ್ನು ನಿಮ್ಮ ಗಮನಕ್ಕೆ ತಂದೆ ಅಷ್ಟೇ. ಅದಕ್ಕೆ ನಾನು ಬಳಸಿದ ಮಾರ್ಗ ನಿಮಗೆ ಬೇಸರ ತಂದಿದ್ದರೆ ದಯವಿಟ್ಟು ಕ್ಷಮಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತವಾಗಿಯೂ ಇಲ್ಲ ಶಾಸ್ತ್ರಿಗಳೇ, ತಪ್ಪು ಯಾರು ಮಾಡಿದರೇನು? ಅದು ತಪ್ಪು ಎಂದು ನೇರವಾಗಿ ಹೇಳುವ ಗುಣವನ್ನು ನಾನು ಮೆಚ್ಚುತ್ತೇನೆ. ನೀವು ಹೇಳಿದ ಕಾರಣ ಆ ತಪ್ಪು ನನ್ನ ಗಮನಕ್ಕೆ ಬಂತು. ಧನ್ಯವಾದಗಳು. ನನಗೇನೂ ಬೇಸರವಾಗಿಲ್ಲ ಬದಲಾಗಿ ನನ್ನ ಲೇಖನವನ್ನು ಗಮನವಿಟ್ಟು ಓದಿದ್ದಾರಲ್ಲಾ ಎಂಬ ಸಂತೋಷವಿದೆ. ಸುಮ್ನೇ ಕ್ಷಮೆಯಾಚನೆ ಯಾಕೆ? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ನನಗೇನೂ ಬೇಸರವಾಗಿಲ್ಲ ಬದಲಾಗಿ ನನ್ನ ಲೇಖನವನ್ನು ಗಮನವಿಟ್ಟು ಓದಿದ್ದಾರಲ್ಲಾ ಎಂಬ ಸಂತೋಷವಿದೆ.>>> ಈಗ ಸಮಾಧಾನವಾಯ್ತು. :-) ಮುಂದೆಯೂ ನಿಮ್ಮ ಬರವಣಿಗೆ ಚೆನ್ನಾಗಿ ಸಾಗಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ರಶ್ಮಿ ನನಗೊ೦ದು ಪುಸ್ತಕ ಕಳಿಸುತ್ತೀರ ,,?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಸ್ಮಾಯಿಲ್ ಅವರೇ, ಖಂಡಿತಾ ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಕನಸು ನನಸಾದ ಸಮಯದಲ್ಲಿ ನನ್ನದೊ೦ದು ಚಿಕ್ಕ ಅಭಿನ೦ದನೆ ನಿಮಗೆ. ಇಂಥ ಇನ್ನಷ್ಟು "ನನಸು" ಗಳು ನಿಮ್ಮ ಬಾಳಲ್ಲಿ ಬರುತ್ತಿರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) ರಶ್ಮಿಯವರೆ.. ಇಂಥಹ ಸುದಿನ ಎಲ್ಲರ ಬಾಳಲ್ಲೂ ಬರುವುದಿಲ್ಲ... ನೆಕ್ಟ್ ಯಾವ ಬುಕ್? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಿವ್ಯಾ, ಧನ್ಯವಾದಗಳು....ಸದ್ಯ ಯಾವ ಬುಕ್್ನ ಬಗ್ಗೆಯೂ ಯೋಚನೆ ಇಲ್ಲ. ಇನ್ನೂ ಹೆಚ್ಚು ಓದಿ ಸ್ವಲ್ಪ ಜ್ಞಾನಗಳಿಸುವ ಪ್ರಯತ್ನದಲ್ಲಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೊತ್ತಿದ್ದಿದ್ರೆ ನಾನು ಬರ್ತಿದ್ದೆ, ಮಂಗಳೂರಿನಿಂದ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಜೇಂದ್ರ, ಥ್ಯಾಂಕ್ಸ್. ಅಂದಹಾಗೆ ಸಂಪದದಲ್ಲಿ ಆಹ್ವಾನ ಪತ್ರಿಕೆಯನ್ನು ನೀವು ನೋಡಿಲ್ಲ ಅಂತಾ ಅನಿಸುತ್ತೆ. ನನ್ನ ಎಲ್ಲಾ ಬ್ಲಾಗುಗಳಲ್ಲಿಯೂ ಆಮಂತ್ರಣ ಪತ್ರಿಕೆಯನ್ನು ಪೋಸ್ಟ್ ಮಾಡಿದ್ದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.