ಹಳೇ ನಿದ್ರೆ ಪುರಾಣ...

5

ಇತ್ತೀಚೆಗೆ ಬ್ಲಾಗ್ ಬರೆಯೋದು ಕಡಿಮೆ ಆಗಿದೆ. ಕೆಲಸದ ಒತ್ತಡ, ಸಮಯದ ಅಭಾವ ಮತ್ತೊಮ್ಮೆ ಮೂಡ್ ಇಲ್ಲ ಹೀಗೆ ಹಲವಾರು ಕಾರಣಗಳಿಂದ ಬ್ಲಾಗ್ ಬರವಣಿಗೆ ನಿಂತುಹೋಗಿದೆ. ಏನಾದರೂ ಬರೆಯೋಣ ಎಂದು ಕೂತರೆ ವಿಷಯಗಳೇ ಸಿಗಲ್ಲ. ಈ ವಿಷಯಗಳೇ ಹಾಗೇ...ಏನಾದರೂ ಕೆಲಸ ಮಾಡುವಾಗ ಬ್ಲಾಗ್ ಬರೆಯೋಣ ಅಂತಾ ಅನಿಸುತ್ತೆ. ಟಾಯ್ಲೆಟ್್ನಲ್ಲೇ ಹೆಚ್ಚಿನ ವಿಷಯಗಳು ನೆನಪಿಗೆ ಬರುತ್ತೆ, ಆಮೇಲೆ ಬಂದು ಬರೆಯೋಣ ಎಂದು ಕೂತರೇ ಪದಗಳೇ ಸಿಗದು. ಕೆಲವೊಮ್ಮೆ ಬರೆಯಲು ವಿಷಯಗಳು ಸುಮಾರು ಇರುತ್ತದೆ, ಇವುಗಳಲ್ಲಿ ಯಾವುದನ್ನು ಬರೆಯಲಿ? ಎಂಬುದೇ ದೊಡ್ಡ ಪ್ರಶ್ನೆಯಾಗಿ ಕಾಡುವುದೂ ಉಂಟು. ಅಂತೂ ಬ್ಲಾಗ್್ಗೆ ಏನು ಬರೆಯಲಿ? ಎಂಬ ಚಿಂತೆಯಿಂದ ಮುಕ್ತಳಾಗಲು ಅಪ್ಪನಿಗೆ ಫೋನಾಯಿಸಿ, ಏನಾದರೂ ವಿಷಯ ಹೇಳಿ ಅಂದೆ. ನಿನಗಿಷ್ಟವಿರುವ ವಿಷಯದ ಬಗ್ಗೆ ಬರಿ..ಅಂದ್ರು. ಆಮೇಲೆ ನನಗಿಷ್ಟವಿರುವ ವಿಷಯಗಳನ್ನು ಪಟ್ಟಿ ಮಾಡತೊಡಗಿದೆ. ಅರೇ..ವಿಷಯ ಸಿಕ್ಕಿತು.. ನಿದ್ದೆ!


 


ನಿದ್ದೆ ಯಾರಿಗೆ ಇಷ್ಟ ಇಲ್ಲ ಹೇಳಿ? ನಮ್ಮ ದೇವೇಗೌಡ್ರನ್ನು ನೋಡಿ...ಇನ್ನು ವಿಧಾನಸಭೆ, ಲೋಕ ಸಭಾ ಕಲಾಪದ ನಡುವೆ ಗಡದ್ದಾಗಿ ನಿದ್ದೆ ಹೋಗುವ ಮಂದಿಯನ್ನಂತೂ ನಾವು ನೋಡಿಯೇ ಇರುತ್ತೇವೆ. ನಿದ್ದೆ ಅದೊಂದು ಸುಖ, ಭಾಗ್ಯ...ಅದು ಎಲ್ಲರಿಗೂ ಒಲಿಯುವುದಿಲ್ಲ. ನನಗಂತೂ ನಿದ್ದೆ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಕಣ್ರೀ..ನಾನು ಪಾಪುವಾಗಿದ್ದಾಗ ನಿದ್ದೆ ಮಾಡ್ತಾನೇ ಇರ್ತಿಲ್ವಂತೆ. ಹಾಗಂತ ರಾತ್ರಿ ವೇಳೆ ರಂಪಾಟ ಮಾಡಿ ಅಮ್ಮನ ನಿದ್ದೆಯನ್ನೂ ಕೆಡಿಸುತ್ತಿರಲಿಲ್ಲ. ಸುಮ್ಮನೆ ಕಣ್ಣು ಬಿಟ್ಟು ನೋಡ್ತಾ ಇರ್ತಿದ್ದೆ ಅಂತಾ ಅಮ್ಮ ಹೇಳ್ತಿದ್ರು. ಪಾಪುವಾಗಿರುವಾಗ ನಾನು ತುಂಬಾ ಪಾಪ, ಕೋಪನೇ ಬರ್ತಿರ್ಲಿಲ್ಲ ಅಮ್ಮ ಹೇಳ್ತಾರೆ.(ಈವಾಗ ನಾನು ಹಾಗಿಲ್ಲ :))


 


ಶಾಲೆಗೆ ಹೋಗುವ ಸಮಯಲ್ಲೂ ಹಾಗೆ, ಬೆಳಗ್ಗೆ ಬೇಗನೆ ಏಳ್ತಾ ಇದ್ದೆ. ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವ ಅಭ್ಯಾಸ ನನಗಿತ್ತು. ಆದ್ರೆ ಕ್ಲಾಸಿನಲ್ಲಿ ಬೋರ್ ಹೊಡೆಯೋಕೆ ಶುರುವಾದರೆ ಸಾಕು ನಾನು ನಿದ್ರಾದೇವಿಯ ಧ್ಯಾನದಲ್ಲಿ ಮುಳುಗುತ್ತಿತ್ತೆ. ಸಾಮಾಜಿಕ ಅಧ್ಯಯನ ಪಾಠ ಮಾಡುತ್ತಿದ್ದರೆ ನನಗೆ ಜೋರು ನಿದ್ದೆ, ಆದ್ರೆ ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆಯುತ್ತಿದ್ದೆ ಎಂಬ ಕಾರಣಕ್ಕೆ ನಿದ್ದೆ ಮಾಡಿದ್ರೂ ಟೀಚರ್ ಏನೂ ಹೇಳ್ತಿರಲಿಲ್ಲ. ಮನೆಯಲ್ಲಿಯೂ ಹಾಗೇನೇ..ಟಿವಿ ನೋಡ್ತಿದ್ರೆ ನಿದ್ದೆ ಹತ್ತಿರ ಸುಳಿಯಲ್ಲ, ಹೋಗಿ ಪಾಠ ಪುಸ್ತಕ ತೆರೆದರೆ ಸಾಕು ನಿದ್ದೆ ಹಾಜರ್. ನಾನು ಪರೀಕ್ಷೆ ಬಂದಾಗ ಮಾತ್ರ ಓದುವ ವಿದ್ಯಾರ್ಥಿಯಾಗಿದ್ದರಿಂದ ಅದಕ್ಕಿಂತ ಮುಂಚೆ ಎಷ್ಟೇ ಓದಿದರೂ ತಲೆಗೆ ಹತ್ತುತ್ತಿರಲಿಲ್ಲ. ಟೀವಿಯಲ್ಲಿರುವ ಎಲ್ಲಾ ಜಾಹೀರಾತುಗಳು ಬಾಯಿಪಾಠ ಬರುತ್ತಿತ್ತು. ಅದೇ ವೇಳೆ ಪದ್ಯವನ್ನು ಬಾಯಿಪಾಠ ಮಾಡಲು ಕಷ್ಟಪಡುತ್ತಿದ್ದೆ. ದಿನ ದಿನದ ಪಾಠವನ್ನು ಓದಿಕೋ, ಟೈಂ ಟೇಬಲ್ ಮಾಡಿ ಓದು ಅಂತಾ ಅಕ್ಕ ಉಪದೇಶ ಕೊಡುತ್ತಿದ್ದರೂ ಟೈಂ ಟೇಬಲ್ ಮಾತ್ರ ಸಿದ್ಧವಾಗುತ್ತಿತ್ತೇ ಹೊರತು ಬೇರೇನೂ ಬೆಳವಣಿಗೆ ಕಾಣುತ್ತಿರಲಿಲ್ಲ. ಪರೀಕ್ಷೆಯ ಮುನ್ನಾ ದಿನ ಕಣ್ಣಿಗೆ ನೀರು ಹಾಕಿ, ಟಬ್್ನಲ್ಲಿ ನೀರಿಟ್ಟು ಅದರಲ್ಲಿ ಕಾಲು ಮುಳುಗಿಸಿ ನಿದ್ದೆ ಬಾರದಂತೆ ಕಸರತ್ತು ಮಾಡಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ತಮಾಷೆಯೆಂದರೆ ವಿದ್ಯಾರ್ಥಿಗಳು ಪರೀಕ್ಷೆಗೆ ಹೇಗೆ ತಯಾರಾಗಬೇಕು ಎಂಬ ಲೇಖನವನ್ನು ನಾನು ಆವಾಗ ನಮ್ಮೂರಿನ ಪತ್ರಿಕೆಗೆ ಬರೆಯುತ್ತಿದ್ದೆ. ಅಕ್ಕ, ಪರೀಕ್ಷೆಯ ಮುನ್ನಾ ದಿನ ಗಡದ್ದಾಗಿ ನಿದ್ದೆ ಹೋಗುತ್ತಿರುವುದನ್ನು ಕಂಡರೆ ನನಗೆ ಹೊಟ್ಟೆಉರಿಯುತ್ತಿತ್ತು. ಹೇಗೋ ಹೈಸ್ಕೂಲ್ ಮುಗಿಸಿ ಪ್ಲಸ್ ಟು ಕ್ಲಾಸಿನಲ್ಲಾದರೂ ನಿದ್ದೆ ಮಾಡಬಾರದೆಂದು ನಿರ್ಧರಿಸಿದೆ. ಆದರೆ, ಅಲ್ಲಿಯೂ ನಿದ್ರಾ ದೇವಿ ನನ್ನನ್ನು ಬಿಡಲಿಲ್ಲ. ಫಿಸಿಕ್ಸ್ ಪಿರಿಯಡ್್ನಲ್ಲಿ ನನಗೆ ಜೋರು ನಿದ್ದೆ ಬರುತ್ತಿತ್ತು. ಹಿಟ್ಲರ್ ಎಂದು ಕರೆಯಲ್ಪಡುವ ನಮ್ಮ ಫಿಸಿಕ್ಸ್ ಸರ್್ಗೆ ನಾನು ನಿದ್ದೆ ಮಾಡುವುದನ್ನು ನೋಡಿದ್ರೆ ಎಲ್ಲಿಲ್ಲದ ಸಿಟ್ಟು ಬರುತ್ತಿತ್ತು. ಸಿಟ್ಟು ಬಂದಾಗ ಅವರು ಚಾಕ್ ಪೀಸ್ ಬಿಸಾಡುತ್ತಿದ್ದರು. ಅದು ಹೆಚ್ಚಾಗಿ ನನ್ನ ಹಿಂದಿನ ಬೆಂಚಲ್ಲಿ ಕುಳಿತಿರುವ ಹುಡುಗಿಯ ತಲೆಗೇ ಬೀಳುತ್ತಿತ್ತು. ನಾನು ಶತಾಯಗತಾಯ ಪ್ರಯತ್ನಿಸಿದರೂ ನಿದ್ದೆ ನನ್ನನ್ನು ಬಿಟ್ಟು ಹೋಗ್ತಿರಲಿಲ್ಲ. ಅದಕ್ಕಾಗಿ ನನ್ನ ಪಕ್ಕ ಕುಳಿತುಕೊಳ್ಳುವ ಗೆಳತಿಯಲ್ಲಿ ಹೇಳಿದ್ದೆ, ನನಗೆ ನಿದ್ದೆ ಬಂದಾಗ ಜೋರಾಗಿ ಪಿಂಚ್ ಮಾಡು ಎಂದು. ಅವಳು ಪಿಂಚ್ ಮಾಡಿದಾಗ ಮಾತ್ರ ನಿದ್ದೆ ಮಾಯ, ಮತ್ತೆ ಅದು ಪ್ರತ್ಯಕ್ಷವಾಗಿ ನನ್ನನ್ನು ಕನಸಿನ ಲೋಕದಲ್ಲಿ ತೇಲಿಸುತ್ತಿತ್ತು. ಕಣ್ಮುಚ್ಚಿದರೆ ಸಾಕು ಕನಸು ಕಾಣುವ ವ್ಯಕ್ತಿ ನಾನಾಗಿದ್ದರಿಂದ ಪಾಠದ ವೇಳೆಯಲ್ಲೂ ನನ್ನ ಕನಸುಗಳಿಗೆ ತೊಂದರೆಯಾಗಿರಲಿಲ್ಲ. ಕ್ಲಾಸಿನಲ್ಲಿ ಗಡದ್ದಾಗಿ ನಿದ್ದೆ ಮಾಡಿರುವ ಕಾರಣ ಮನೆಯಲ್ಲಿ ನಿದ್ದೆ ಬರುತ್ತಿರಲಿಲ್ಲ.


 


ಮತ್ತೆ ನಿದ್ದೆ ಕಾಟ ಕೊಟ್ಟದ್ದು ಕಾಲೇಜಿನಲ್ಲಿ. ನನಗೆ ಇಷ್ಟವಿಲ್ಲದ ವಿಷಯಗಳ ಬಗ್ಗೆ ಪಾಠ ಮಾಡುತ್ತಿದ್ದರೆ ಸಾಕು, ನಾನು ಆರಾಮವಾಗಿ ನಿದ್ದೆ ಮಾಡುತ್ತಿದ್ದೆ. ಶಾಲಾ ದಿನಗಳಲ್ಲಿ ಪಾಠ ಮಾಡುವಾಗ ನಿದ್ದೆ ಮಾಡಿ ಸುಮಾರು 12 ವರ್ಷಗಳ ಅನುಭವವಿದ್ದ ನನಗೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಣ್ಣು ಮುಚ್ಚದೆಯೇ ನಿದ್ದೆ ಮಾಡುವುದು ಹೇಗೆ ಎಂಬ ವಿದ್ಯೆ ಕರಗತವಾಗಿತ್ತು. ಕ್ಲಾಸಿನಲ್ಲಿ ಟೀಚರ್ ಪಾಠ ಮಾಡುತ್ತಿದ್ದರೆ ನಾನಿಲ್ಲಿ ಕನಸು ಕಾಣುತ್ತಿದ್ದೆ. ಅದೂ ಅಂತಾ ಇಂತಾ ಕನಸು ಅಲ್ಲಾರೀ...ಮಹಾನ್ ವ್ಯಕ್ತಿಗಳನ್ನು ಇಂಟರ್್ವ್ಯೂ ಮಾಡುವುದು, ಮಿಸೈಲ್ ತಯಾರಿಕೆ, ಬಾಹ್ಯಾಕಾಶ ಯಾನ ಹೀಗೆ ದೊಡ್ಡ ದೊಡ್ಡ ಕನಸುಗಳೇ ನನಗೆ ಬೀಳುತ್ತಿತ್ತು. ಯಾವುದಾದರೂ ಕಥೆ, ಸಿನಿಮಾ, ಕ್ರಿಕೆಟ್ ನೋಡಿದರೆ ಅದರಲ್ಲಿರುವ ವ್ಯಕ್ತಿಗಳನ್ನು ಭೇಟಿ ಮಾಡಿ ಕನಸಿನಲ್ಲೇ ಮಾತಾಡಿ ಬರುತ್ತಿದ್ದೆ. ಕನಸಿನಿಂದ ಎಚ್ಚರವಾದಾಗ ಅದೇ ಹಳೇ ಬೋರ್ಡು, ಅದೇ ಟೀಚರ್... ಪಾಠದೊಂದಿಗೆ ನೋಟ್ಸ್ ಕೊಟ್ಟರೆ ಬರೆಯುತ್ತಾ ಬರೆಯುತ್ತಾ ಅಕ್ಷರಗಳು ಎಲ್ಲೋ ಹೋಗಿ ಬಿಡುತ್ತಿದ್ದವು. ಕೆಲವೊಮ್ಮೆ ನೋಟ್ಸ್್ನ ಪೇಜ್ ದಾಟಿ ಡೆಸ್ಕ್ ಮೇಲೂ ಬರೆದದ್ದು ಇದೆ. ಮರುದಿನ ಆ ಪುಟ ನೋಡಿದರೆ ಇದನ್ನು ಬರೆದದ್ದು ನಾನೇನಾ? ಅಂತಾ ಗಾಬರಿಯಾಗುತ್ತಿತ್ತು. ಇಂಜಿನಿಯರಿಂಗ್ ಅಲ್ವಾ ಹೇಗಾದರೂ ಪಾಸ್ ಆಗ್ಬೇಕು ಅಂತಾ ಓದಲು ಕುಳಿತರೆ ಮತ್ತೆ ಅದೇ ನಿದ್ದೆ. ಅಪ್ಪ ನನ್ನನ್ನು ಬೆಳಗ್ಗೆ 5 ಗಂಟೆಗೆ ಎಬ್ಬಿಸಬೇಕು ಅಂತಾ ಹೇಳಿ ಮಲಗಿದರೆ ಬೆಳಗ್ಗೆ 5 ಗಂಟೆಯಿಂದ 6 ಗಂಟೆಯವರೆಗೆ ಅಪ್ಪ ರಾಗ ಎಳೆಯಬೇಕು. ಅಲರಾಂ ಇಟ್ಟು ಮಲಗಿ ಕೊಂಡರೂ ಅದೇ ಕಥೆ. ಅದು ಕಿರುಚ ತೊಡಗಿದೊಡನೆ ಅದರ ತಲೆಗೆ ಬಡಿದು ಮತ್ತೆ ಗಡದ್ದಾಗಿ ನಿದ್ದೆ ಹೋಗುತ್ತಿದ್ದೆ. ನಿಜ ಹೇಳಲಾ...ಅಲರಾಂ ಆಫ್ ಆದ್ಮೇಲೆ ಚೆನ್ನಾಗಿ ನಿದ್ದೆ ಬರುತ್ತಿತ್ತು. ಆಮೇಲೆ ಎದ್ದು ಪುಸ್ತಕ ಹಿಡಿದು ಕೂತರೆ ನಾಲ್ಕು ಪೇಜ್ ಓದುವಷ್ಟರೊಳಗೆ ನಿದ್ದೆ ಬಂದು ಬಿಡ್ತಿತ್ತು. ನಾನು ಒಂದು ಗಂಟೆಯ ಮೊದಲು ನೋಡಿದಾಗಲೂ ಇದೇ ಪೇಜ್ ಇತ್ತು ಅಂತಾ ಅಪ್ಪ ಹೇಳಿದಾಗಲೇ ಎಚ್ಚರವಾಗುತ್ತಿತ್ತು. ಟೇಬಲ್ ಮೇಲೆ ಬಿಡಿಸಿಟ್ಟ ಪುಸ್ತಕವೇ ತಲೆದಿಂಬು ಆದದ್ದೂ ಇದೆ. ಇಂಜಿನಿಯರಿಂಗ್ ಕಲಿಯುವಾಗ ಅನ್್ಲೀಶ್್ಡ್ ಜಾವಾ ಎಂಬ ಪಠ್ಯ ಪುಸ್ತಕ ನನ್ನ ಫೇವರಿಟ್. ಅದು ತುಂಬಾ ದಪ್ಪವಿದ್ದ ಕಾರಣ ಅದರ ಮೇಲೆ ತಲೆಯಿಟ್ಟರೆ ಬೇಗ ನಿದ್ದೆ ಬರುತ್ತಿತ್ತು. ನಿದ್ದೆಯನ್ನೋಡಿಸಲು ತಲೆಗೆ ಸ್ನಾನ ಮಾಡಿದ್ದಾಯ್ತು, ಕಾಫಿ ಕುಡಿದದ್ದೂ ಆಯ್ತು..ಏನೆಲ್ಲಾ ಕಸರತ್ತು ಮಾಡಿದರೂ ನಿದ್ದೆ ನನ್ನನ್ನು ಬಿಟ್ಟು ಹೋಗಲು ಒಪ್ಪಲೇ ಇಲ್ಲ. ಕೆಲವೊಮ್ಮೆ ಎಕ್ಸಾಂ ಹಾಲ್್ನಲ್ಲಿಯೂ ನಿದ್ದೆ ಬರುತ್ತಿತ್ತು. ಅಂತೂ ಇಂತೂ ನೀನಿಲ್ಲದೆ ನಾನಿಲ್ಲ ಎಂದು ಹೇಳುವ ನಿದ್ದೆಯನ್ನು ಸ್ವಲ್ಪ ದೂರ ಮಾಡಿ ಇಂಜಿನಿಯರಿಂಗ್ ಮುಗಿಸಿದ್ದಾಯ್ತು.


 


ಇನ್ನು ಕೆಲಸ. ಯಾವಾಗ ನಾನು ಕೆಲಸಕ್ಕೆ ಸೇರಿದನೋ ನಿದ್ರಾದೇವಿ ನನ್ನಿಂದ ದೂರವಾಗತೊಡಗಿದಳು. ಚೆನ್ನೈಯಿಂದ ಊರಿಗೆ ಬರಬೇಕಾದರೆ ರಾತ್ರಿ ಹೊತ್ತಿನಲ್ಲಿ ಯಾತ್ರೆ. ಟ್ರೈನ್್ನಲ್ಲಿ ನಿದ್ದೆ ಮಾಡದೆಯೇ ಸುರಕ್ಷಿತವಾಗಿ ಮನೆಗೆ ತಲುಪಿತ್ತಿದ್ದೆ. ಟ್ರೈನ್್ನಲ್ಲಿ ನಿದ್ದೆ ಮಾಡ್ಬಾದ್ರು...ಎಂಬ ಅಮ್ಮನ ಆಜ್ಞೆ, ಆದ್ದರಿಂದ ಸ್ಲೀಪರ್್ನಲ್ಲಿ ಮಲಗಿದ್ರೂ ಕಣ್ಣು ತೆರೆದೇ ಮಗಲುತ್ತಿದ್ದೆ. ನಂತರ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತು. ರಾತ್ರಿ ಪಾಳಿ ಬೇರೆ. ಆದ್ರೂ ಬೆಳಗ್ಗಿನ ಹೊತ್ತು ನಿದ್ದೆ ಸ್ಕಿಪ್ ಮಾಡಿ ಡೆಡ್್ಲೈನ್್ಗೆ ಲೇಖನ ಸಬ್್ಮಿಟ್ ಮಾಡುವ ಗಡಿಬಿಡಿ. ಕೆಲವೊಮ್ಮೆ ಡೆಡ್್ಲೈನ್ ಮೀಟ್ ಮಾಡಲಿರುವ ಒತ್ತಡದಿಂದ ನಿದ್ದೆ ಹತ್ತಿರ ಸುಳಿಯುವುದೇ ಇಲ್ಲ. ಹೇಗಾದರೂ ನಿದ್ದೆ ಮಾಡಬೇಕಲ್ವಾ..ಅದಕ್ಕೆ ಯಾವುದಾದರೊಂದು ಪುಸ್ತಕವನ್ನು ಕೈಗೆತ್ತಿಕೊಳ್ಳುತ್ತೇನೆ. ಅದೂ ಥ್ರಿಲ್ಲಿಂಗ್ ಆಗಿದ್ದರೆ, ನಿದ್ದೆಯೂ ದೂರ ದೂರ...


 


ಅಬ್ಬಾ..ಈವಾಗ ನಿದ್ದೆ ಬೇಕು, ನಿದ್ದೆ ಬರ್ತಿಲ್ಲಾ..ಈ ಮೊದಲು ನಿದ್ದೆಯೇ ದೂರ ಹೋಗು ಎಂದಾಗ ಅದು ನನ್ನಗಂಟಿಕೊಂಡಿತ್ತು. ಎಂಥಾ ವಿಪರ್ಯಾಸ ಅಲ್ವಾ. ಆ ಶಾಲಾ ದಿನಗಳಲ್ಲಿ ನಾನು ಮಾಡಿದ ನಿದ್ದೆಯ ಗಮ್ಮತ್ತನ್ನು ನೆನೆಸಿಕೊಂಡಾಗ ಏನೋ ಒಂಥರಾ ಸುಖ. "ತರಗತಿಯಲ್ಲಿ ನಿದ್ದೆ ಹೋಗುವವರು ನಿಜವಾಗಿಯೂ ಭಾಗ್ಯವಂತರು, ಅವರಿಗೆ ಅವರ ಕನಸುಗಳು ನಷ್ಟವಾಗುವುದಿಲ್ಲವಲ್ಲಾ" ಎಂದು ಕವಿ ಸಚ್ಚಿದಾನಂದನ್ ನನ್ನಂತವರನ್ನು ಉದ್ದೇಶಿಸಿಯೇ ಹೇಳಿದ್ದು ಅಂತಾ ಅನಿಸುತ್ತಿದೆ.ಆ ನಿದ್ದೆಯ ಗಮ್ಮತ್ತೇ ಅಂತದ್ದು.

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿದ್ರೆ ಪುರಾಣ .ತುಂಬಾ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.. ಅಕ್ಕರೆಯಿಂದ ರಶ್ಮಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.. ಅಕ್ಕರೆಯಿಂದ ರಶ್ಮಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೊಗಸಾದ ಬರಹ,ಓದುವಾಗ ನಿದ್ರೆ ಬರಲಿಲ್ಲ! ಕೊನೆಯ ಮಾತುಗಳು ಚೆನ್ನಾಗಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.. ಅಕ್ಕರೆಯಿಂದ ರಶ್ಮಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ನಿದ್ರೆ ಪುರಾಣ ನನಗೂ ನಿದ್ರೆ ಅಂದ್ರೆ ಪ್ರಾಣ.. ಸಂಪದ ತೆಗೆದಾಗಲೇ ನಿದ್ರೆ ಪುರಾಣ ಓದಿಸಿದಿರಿ..ಆಆಆಆ.. ಗುಡ್ ನೈಟ್ -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಷ್ಟೊಂದು ನಿದ್ದೆ ಮಾಡ್ತಿದ್ದ ನೀವು ಯಾವಾಗ ಓದುತಿದ್ರಿ ? Btw ಚೆನ್ನಾಗಿತ್ತು ನಿದ್ರೆ ಪುರಾಣ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪರೀಕ್ಷೆಯ ಮುನ್ನಾ ದಿನ ಮಾತ್ರ ಓದುತ್ತಿದ್ದೆ. ;) ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಅಕ್ಕರೆಯಿಂದ, ರಶ್ಮಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿಯವರೇ ನಿದ್ರೆ ಪುರಾಣ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.