ಬಡತನದ ಸುಖ ಅಂದ್ರೆ....

4.30769

ನಾವು ಶಾಲೆಗೆ ಹೋಗ್ಬೇಕಾದ್ರೆ ಇಷ್ಟೊಂದು ಸೌಕರ್ಯ ಇರಲಿಲ್ಲ, ಇದ್ದದ್ದು ಎರಡೇ ಜೋಡಿ ಡ್ರೆಸ್. ಶಾಲಾ ಯುನಿಫಾರಂ ಇದು ಬಿಟ್ಟರೆ ಮದುವೆಗೆ ಹೋಗಲಿಕ್ಕೆ ಅಂತಾ ಇನ್ನೊಂದು ಜೊತೆ ಬಟ್ಟೆ. ನನ್ನ ಸಂಬಂಧಿಕರೊಬ್ಬರ ಮದುವೆಗೆ ಹೋಗ್ಬೇಕಾದರೆ ಯಾವ ಡ್ರೆಸ್ ಹಾಕಿಕೊಳ್ಳಲಿ? ಎಂದು ಕನ್್ಫ್ಯೂಸ್ ಆಗಿ ಕುಳಿತುಕೊಂಡಿರುವಾಗ ಅಪ್ಪ ಹೇಳಿದ ಮಾತುಗಳಿವು. ನಿಜ, ಈವಾಗ ನಾವು ಈ ಎಲ್ಲಾ ಸುಖಗಳನ್ನು ಅನುಭವಿಸಬೇಕಾದರೆ ನಮ್ಮ ಅಪ್ಪ ಅಮ್ಮ ಎಷ್ಟು ಕಷ್ಟ ಪಟ್ಟಿರಬೇಕು ಅಲ್ವಾ? ನನ್ನ ಅಪ್ಪ ನಗರದಲ್ಲಿ ಓದಿ ಬೆಳೆದವರು. ಆದರೆ ಮನೆಯಲ್ಲಿ ಬಡತನ. ಅಪ್ಪ ಹೇಳುವಂತೆ ಆ ಬಡತನದಲ್ಲೂ ಒಂದು ಸುಖವಿತ್ತು. ನಮ್ಮಜ್ಜಿಗೆ 6 ಜನ ಮಕ್ಕಳು. ತುಂಬು ಸಂಸಾರ. ಕೂಲಿ ಕೆಲಸ ಮಾಡಿಯೇ ಸಂಸಾರ ಸಾಗಬೇಕಾಗಿತ್ತು. ಬೆಳಗ್ಗೆ ತಿಂಡಿ ಅಂದರೆ ಅವಲಕ್ಕಿ, ಕೆಲವೊಮ್ಮೆ ಉಪ್ಪಿಟ್ಟು ಹೀಗೆ ಬಜಿಲ್- ಸಜ್ಜಿಗೆ ಕಾಂಬಿನೇಷನ್. ಇದು ವಾರದಲ್ಲಿ ಎರಡು ದಿನ ಅಷ್ಟೇ. ಬಾಕಿ ಉಳಿದ ದಿನಗಳಲ್ಲಿ ಗಂಜಿ. ಏನಾದರೂ ಹಬ್ಬ ಬಂದರೆ ಮಾತ್ರ ಕಡುಬು, ಕೊಟ್ಟಿಗೆ ಮಾಡುತ್ತಿದ್ದರಂತೆ. ಊಟಕ್ಕೆ ಸಾಂಬಾರ್ ಇಲ್ಲದಿದ್ದರೆ ಮೀನು ಸಾರು. ಕೆಲವೊಮ್ಮೆ ಏನೂ ಇಲ್ಲದಿದ್ದರೆ ಗಂಜಿ ಜೊತೆ ಉಪ್ಪು- ಮೆಣಸು, ಗಾಂಧಾರಿ ಮೆಣಸು ಹಿಚುಕಿ ಗಂಜಿ ಊಟ ಮಾಡುವುದಂದರೆ ಎಷ್ಟು ರುಚಿ!


ಮನೆಯಲ್ಲಿ ಹಣದ ತಾಪತ್ರಯ ಬೇರೆ. ಅದಕ್ಕಾಗಿಯೇ ನನ್ನ ದೊಡ್ಡಪ್ಪನವರು ಓದನ್ನು ಅರ್ಧಕ್ಕೆ ನಿಲ್ಲಿಸಿ ಇನ್ನು ನೀನು ಕಲಿ ಎಂದು ಅಪ್ಪನಿಗೆ ಸಹಾಯ ಮಾಡಿದರಂತೆ. ಹತ್ತಿರದಲ್ಲೇ ಸರಕಾರಿ ಶಾಲೆಯಿರುವುದರಿಂದ ಕಲಿಕೆಗೇನು ತೊಂದರೆಯಾಗಲಿಲ್ಲ. ಶಾಲಾ ಯುನಿಫಾರಂ ಕೂಡಾ ಅಷ್ಟೇ. ವರ್ಷಕ್ಕೊಂದು ಯುನಿಫಾರಂ ಹೊಲಿಸುತ್ತಿದ್ದರಂತೆ. ಅದನ್ನು ಅಷ್ಟು ಜಾಗರೂಕತೆಯಿಂದ ಇಟ್ಟುಕೊಳ್ಳಬೇಕು. ಅಂಗಿ ಚಡ್ಡಿ ಹೊಲಿಸಲು ಟೈಲರ್ ಬಳಿಗೆ ಹೋದಾಗ ಅಜ್ಜಿ " ಚಡ್ಡಿ ಸ್ವಲ್ಪ ಉದ್ದ ಇರಲಿ, ಅಂಗಿ ಕೂಡಾ ಸ್ವಲ್ಪ ದೊಡ್ಡದಾಗಿ ಹೊಲಿಸಿ" ಎನ್ನುತ್ತಿದ್ದರಂತೆ. ಯಾಕೆಂದರೆ ಮುಂದಿನ ವರ್ಷವೂ ಅದನ್ನೇ ಹಾಕ್ಬೇಕಲ್ಲಾ. ಇದರೊಂದಿಗೆ ಇನ್ನೊಂದು ಜೊತೆ ಬಣ್ಣದ ಚಡ್ಡಿ ಅಂಗಿ. ಅದನ್ನು ಏನಾದರೂ ಸಮಾರಂಭ ಇದ್ದರೆ ಮಾತ್ರ ಹಾಕಬೇಕಾಗುತ್ತಿತ್ತು. ಹೀಗೆ ದೊಗಳೆ ಅಂಗಿಯನ್ನು ಹಾಕಿಕೊಂಡು ಅಪ್ಪ ಶಾಲೆಗೆ ಹೋಗುತ್ತಿದ್ದರಂತೆ. ಆವಾಗ ಇಂದಿನಂತೆ ಯಾರೂ ನಮ್ಮನ್ನು ಗೇಲಿ ಮಾಡಲ್ಲ... ಎಲ್ಲರೂ ಬಡತನದಿಂದ ಬಂದವರೇ.ಈ ಕಾರಣದಿಂದಲೇ ಎಲ್ಲರೂ ಪರಸ್ಪರ ಅನ್ಯೋನ್ಯತೆಯಿಂದ ಇರುತ್ತಿದ್ದರು. ಮಾತ್ರವಲ್ಲದೆ ಆ ಇನ್ನೊಂದು ಜತೆ ಬಣ್ಣದ ಬಟ್ಟೆಗಳನ್ನು ದೊಡ್ಡದಾದ ಪೆಟ್ಟಿಗೆಯೊಂದರಲ್ಲಿ ಭಾರೀ ಜಾಗರೂಕತೆಯಿಂದ ಇದನ್ನು ಇರಿಸಲಾಗುತ್ತಿತ್ತು. ಆಗಾಗ ಈ ಪೆಟ್ಟಿಗೆಯನ್ನು ತೆರೆಯುವಂತೆ ಕೂಡಾ ಇರಲಿಲ್ಲ. ಶಾಲೆಯಿಂದ ಬಂದ ಕೂಡಲೇ ಯುನಿಫಾರಂ ತೆಗೆದು ಒಗೆದು ಒಣಗಲು ಹಾಕಬೇಕು.. ಬೆಳಗ್ಗೆಯಾಗುವಷ್ಟರ ಹೊತ್ತಿಗೆ ಅದು ಒಣಗಿರುತ್ತದೆ. ಅದನ್ನೇ ಮತ್ತೆ ಹಾಕಿಕೊಂಡು ಹೋಗಬೇಕು. ಜೊತೆಗೆ ಖಾಕಿ ಚೀಲ, ದೊಡ್ಡ ಅಲ್ಯುಮಿನಿಯಂ ಬುತ್ತಿ. ಆ ಬುತ್ತಿಯಲ್ಲಿ ಇರುತ್ತಿದ್ದದ್ದು, ಗಂಜಿ, ಉಪ್ಪಿನ ಕಾಯಿ ಇಲ್ಲದಿದ್ದರೆ ತೆಂಗಿನ ಕಾಯಿಯ ಚಟ್ನಿ.


ಮದುವೆಗೆ ಹೋಗುವುದಾದರೆ ಇನ್ನೊಂದು ಉಡುಪನ್ನು ತೊಟ್ಟು ಕೊಳ್ಳಬೇಕು. ಇನ್ನೇನು ಕಲೆ ಮಾಡಿಕೊಳ್ಬಾದ್ರು, ಪಾಯಸ ತಿನ್ನುವಾಗ ತುಂಬಾ ಜಾಗ್ರತೆಯಿಂದ ತಿನ್ನು, ಅಂಗಿಯಲ್ಲಿ ಬೀಳಿಸಿಕೊಂಡ್ರೆ ಇನ್ನು ಮುಂದೆ ನಿನ್ನನ್ನು ಯಾವ ಮದ್ವೆಗೂ ನಿನ್ನನ್ನು ಕರ್ಕೊಂಡು ಹೋಗಲ್ಲ ಎಂದು ಅಮ್ಮ ಮೊದಲೇ ತಾಕೀತು ನೀಡಿದ್ದರಿಂದ ಮದುವೆಗೆ ಹೋದರೂ ಎಲ್ಲಿ ಅಂಗಿಗೆ ಕಲೆಯಾಗಿ ಬಿಡುತ್ತದೋ ಎಂಬ ಟೆನ್ಶನ್ ಇರುತ್ತಿತ್ತಂತೆ. ಇನ್ನೂ ಕೆಲವು ಮಕ್ಕಳಂತೂ ಅದೇ ಶಾಲಾ ಯುನಿಫಾರಂನಲ್ಲಿ ಮದ್ವೆಗೆ ಬಂದಿರುತ್ತಾರೆ. ಆವಾಗ ಸದ್ಯ ತಾನು ಬೇರೆ ಬಣ್ಣದ ಉಡುಪನ್ನು ತೊಟ್ಟಿದ್ದೇನಲ್ಲಾ ಎಂಬ ಸಮಾಧಾನ ಮನಸ್ಸಿನಲ್ಲಿ....


ಮಳೆಗಾಲವಾದರೆ ಎಲ್ಲೋ ತೆಂಗಿನಕಾಯಿ ಬಿದ್ದು ಮುರಿದ ಹೆಂಚಿನೆಡೆಯಿಂದ ಮಳೆ ನೀರು ಒಳಗೆ ಬರುತ್ತಿತ್ತು. ಆವಾಗ ನೀರು ಬೀಳುವಲ್ಲಿಗೆ ಚೊಂಬು, ತಪಲೆ ಇಡಬೇಕಾಗುತ್ತಿತ್ತು. ಮಳೆ ಬಂದರೆ ಯುನಿಫಾರಂನ್ನು ಹೊರಗೆ ಒಣಗಿಸಲಂತೂ ಸಾಧ್ಯವಿಲ್ಲ. ಆವಾಗ ಅಡುಗೆ ಮನೆಯಲ್ಲೇ ಬಟ್ಟೆ ಒಣಗಿಸಬೇಕು. ಅಂದರೆ ಮೂರು ಕಲ್ಲಿನ ಒಲೆ, ಕಟ್ಟಿಗೆಯಿಂದ ಒಲೆ ಉರಿಸಲಾಗುತ್ತಿತ್ತು. ಈ ಒಲೆಯ ಶಾಖಕ್ಕೇ ಬಟ್ಟೆಗಳನ್ನು ಒಣಗಿಸಬೇಕು. ಹೀಗೆ ಬಟ್ಟೆಗಳು ಅರ್ಧಂಬರ್ಧ ಒಣಗಿರುವುದರಿಂದ ನೀರ ಕಲೆಗಳೂ ಬೀಳುವುದರೊಂದಿಗೆ ಹೊಗೆಯ ನಾತವೂ ಬರುತ್ತಿತ್ತು. ಆದರೆ ಇದ್ಯಾವುದೂ ಲೆಕ್ಕಕ್ಕಿರಲಿಲ್ಲ.


ಆ ಬಾಲ್ಯದ ಬಡತನದಲ್ಲೂ ಒಂದು ಸುಖ ಇದೆ. ಹೊಟ್ಟೆ ಹಸಿದು ಉಣ್ಣುವ ಆ ಊಟ, ಸುಸ್ತಾಗಿ ಬಂದು ಚಾಪೆಯಲ್ಲಿ ಬಂದು ಮಲಗಿದಾಗ ಬರುವ ನಿದ್ದೆ ಇದ್ಯಾವುದೂ ಇನ್ನು ಮರಳಿ ಬರಲ್ಲ. ಎಲ್ಲರೂ ಮನೆಯಲ್ಲಿರುವ ಒಂದು ದಿನ ಎಲ್ಲರೂ ಸೇರಿ ಒಟ್ಟಿಗೆ ಊಟ ಮಾಡುವುದು ಎಲ್ಲಾ ದುಃಖಗಳನ್ನು ಮರೆಸುವಂತಿತ್ತು. ಆದರೆ ಈಗ, ಮನೆಯ ಸದಸ್ಯರಿಗೆ ಪರಸ್ಪರ ಮಾತನಾಡಿಕೊಳ್ಳುವಷ್ಟು ಕೂಡಾ ಪುರುಸೋತ್ತಿಲ್ಲ. ಕಾಲ ಬದಲಾಗಿದೆ, ಸೌಕರ್ಯಗಳು ಜಾಸ್ತಿಯಾಗಿವೆ ಆದರೆ ಕೊರತೆಯಿರುವುದು ಸುಖಕ್ಕೆ. ಎಷ್ಟೇ ಸಿಕ್ಕಿದರೂ ನಾವು ತೃಪ್ತರಲ್ಲ. ಆದರೆ ಬಡತನ ನಮಗೆ ತೃಪ್ತಿಯನ್ನು ತಂದು ಕೊಟ್ಟಿತ್ತು. ಆ ಬಡತನ ಇನ್ನೊಬ್ಬರ ನೋವನ್ನು ಅರಿತುಕೊಳ್ಳುವ ಮನಸ್ಸನ್ನು ಮತ್ತು ಪ್ರೀತಿಸುವ ಹೃದಯವನ್ನು ಕೊಟ್ಟಿತ್ತು. ಹೀಗೆ ಅಪ್ಪ ಹಳೆಯ ಕಾಲದ ನೆನಪುಗಳನ್ನು ಮೆಲುಕು ಹಾಕುತ್ತಿರುವಂತೆ ಅದನ್ನು ನಾನು ನನ್ನ ಮನಸ್ಸಲ್ಲೇ 'ಸೇವ್್' ಮಾಡಿಕೊಳ್ಳುತ್ತಿದ್ದೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (13 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ ಲೇಖನ ನನ್ನ ಪ್ರಾಥಮಿಕ ಹೈಸ್ಕೂಲ್ ದಿನಗಳನ್ನು ನೆನೆಯುವಂತೆ ಮಾಡಿತು.. ಹೈಸ್ಕೊಲ್ನ ಮೂರುವರ್ಷ ಒಂದೇ ಜೊತೆ ಯೂನಿಫಾರ್ಮ್ ನಲ್ಲ್ಲಿ ಕಳೆದದ್ದು....ಆ ಅಭ್ಯಾಸ ಈಗ್ಲೂ ಬದಲಾಗಿಲ್ಲ... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿಯವರೆ, ನಿಮ್ಮ ಲೇಖನ ಮನಕಲಕುವಂತಿದೆ. ಅದರಲ್ಲೂ ಈ ಸಾಲುಗಳು "ಎಲ್ಲರೂ ಮನೆಯಲ್ಲಿರುವ ಒಂದು ದಿನ ಎಲ್ಲರೂ ಸೇರಿ ಒಟ್ಟಿಗೆ ಊಟ ಮಾಡುವುದು ಎಲ್ಲಾ ದುಃಖಗಳನ್ನು ಮರೆಸುವಂತಿತ್ತು. ಆದರೆ ಈಗ, ಮನೆಯ ಸದಸ್ಯರಿಗೆ ಪರಸ್ಪರ ಮಾತನಾಡಿಕೊಳ್ಳುವಷ್ಟು ಕೂಡಾ ಪುರುಸೋತ್ತಿಲ್ಲ. ಕಾಲ ಬದಲಾಗಿದೆ, ಸೌಕರ್ಯಗಳು ಜಾಸ್ತಿಯಾಗಿವೆ ಆದರೆ ಕೊರತೆಯಿರುವುದು ಸುಖಕ್ಕೆ. ಎಷ್ಟೇ ಸಿಕ್ಕಿದರೂ ನಾವು ತೃಪ್ತರಲ್ಲ. ಆದರೆ ಬಡತನ ನಮಗೆ ತೃಪ್ತಿಯನ್ನು ತಂದು ಕೊಟ್ಟಿತ್ತು. ಆ ಬಡತನ ಇನ್ನೊಬ್ಬರ ನೋವನ್ನು ಅರಿತುಕೊಳ್ಳುವ ಮನಸ್ಸನ್ನು ಮತ್ತು ಪ್ರೀತಿಸುವ ಹೃದಯವನ್ನು ಕೊಟ್ಟಿತ್ತು." ಮನವ್ನ್ನು ಹಿಂಡುತ್ತವೆ. ಆದರೆ ಈ ಆಧುನಿಕ ಬದುಕಿನಲ್ಲಿ ಇವೆಲ್ಲಾ ನೆನಪಾಗಿರೋದು ಮಾತ್ರ ವಿಪರ್ಯಾಸ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ರಶ್ಮಿ.. ಈಗ ಹಾಕಲು ಬೇಕಾಗಿರುವಷ್ಟು ಬಟ್ಟೆ.. ಹೊಟ್ಟೆ ತುಂಬುವಷ್ಟು ಊಟವಿದ್ದರೂ.. ತುತ್ತೇ ಇಳಿಯದ ಅನುಭವ!! ಬಟ್ಟೆ ಹಾಕಿದರೂ, ಹಾಕಿದ ಸಂತೋಷವ ಕಾಣದ ಮನಸ್ಸು...!! ಬಡತನವೇ ಹಿತವೆನಿಸುತಿದೆ... ಬದುಕು ಯಾಂತ್ರಿಕವಾಗಿ ಸಮಾಜದ ಕಟ್ಟಳೆಗೆ ಬಿದ್ದಾಗ ಹೀಗನ್ನಿಸುವುದು ಸಹಜವೇ ಬಿಡಿ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿ, ಮತ್ತೊಂದು ಒಳ್ಳೇ ಬರಹ. ನಾನಂತೂ ಇದೇ ತರಹ ಕಷ್ಟ ಪಟ್ಟಿದ್ದೀನಿ. ಒಂದೇ ಜೊತೆ ಸಮವಸ್ತ್ರ ಧರಿಸಿಕೊಂಡು ಇಡೀ ವಾರ ಹೋಗ್ತಾಇದ್ದೆ. ನಾನು ಪ್ರೌಢಶಾಲೆಯಲ್ಲಿದ್ದಾಗ (ಹತ್ತನೇ ತರಗತಿಯಲ್ಲಿ) ಬಿಳಿ ಯೂನಿಫಾರ್ಮನ್ನು ಜಾರಿಗೆ ತಂದಿದ್ರು. ಮನೆಯಲ್ಲಿ ಕಷ್ಟ, ಬಡತನಕ್ಕೆ ನನಗೆ ಕಡೇವರೆಗೂ ಕೊಡ್ಸ್ಲೇ ಇಲ್ಲ. ನಾನು ಶಾಲೆಲಿ ಬಯ್ತಾರಲ್ಲ ಅಂತ ಇವತ್ತು ಕೊಡ್ಸ್ತಾರೆ, ಮುಂದಿನ ವಾರ ಕೊಡ್ಸ್ತಾರೆ ಅಂತ ನೆವ ಹೇಳ್ತಾನೆ ಬಿಳಿ ಯೂನಿಫಾರ್ಮಿಲ್ದೆ ಹತ್ತನೇ ತರಗತಿ ಮುಗಿಸ್ದೆ. ತಿನ್ನೋಕು ಕೂಡ ಕಷ್ಟ ಇರ್ತಿತ್ತು. ಇರೋದ್ರಲ್ಲೆ ನಾವ್ನಾಲ್ಕು ಜನ (ಅಪ್ಪ, ಅಮ್ಮ, ಅಕ್ಕ, ನಾನು) ಹಂಚ್ಕೊಂಡು ಒಟ್ಟಿಗೆ ಕೂಟು ತಿಂತಿದ್ವಿ. ಆದರ ಸುಖನೇ ಬೇರೆ ಇರ್ತಿತ್ತು. ಆದ್ರೆ ಈಗ ಬೇಕಾದ್ ಬಟ್ಟೆ ಇದ್ರು, ಏನ್ ಬೇಕಾದ್ ತೊಗೊಳೊ ಶಕ್ತಿ ಇದ್ರು ಅನುಭವಿಸಕ್ಕೆ ಪುರ್ಸೊತ್ತು ಅನ್ನೋದೇ ಇಲ್ಲ. ತಿನ್ನೋಕೇ ಅಂತ ಮಾಡಿದ್ರು ತಿನ್ನೋಕೆ ಪುರ್ಸೊತ್ತಿಲ್ದೆ ಇರೋ ಪರಿಸ್ಥಿತಿ. ಈಗ ಒಟ್ಟಿಗೆ ಊಟ ಮಾಡೊ ಪದ್ದತಿ ಅನ್ನೋದು ಇಲ್ವೇಇಲ್ಲ. ಅದು ತುಂಬಾ ಬೇಜಾರಿನ ವಿಷಯ. ನನ್ನ ಮಗ ಪ್ರತಿದಿನ ಒಬ್ಬನೇ ಊಟ ಮಾಡುವಾಗ ನಾನು ಮನಸ್ಸಲ್ಲೇ ನನ್ನನ್ನ ಬೈದುಕೊಳ್ಳುತ್ತಿರುತ್ತೇನೆ. ಒಟ್ಟಿಗೆ ಊಟ ಮಾಡುವ ಸುಖ ನನ್ನ ಮಗನಿಗೆ ಇಲ್ಲದೇ ಹೋಯ್ತಲ್ಲ ಅಂತ. ಕಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳುವುದೇನೋ ಸರಿ. ಆದರೆ ಹೇಳುವ ಉದ್ದೇಶ ಅರ್ಥವಾಗ್ತಿಲ್ಲ. ಸಿರಿತನಕ್ಕಿಂತ ಬಡತನವೇ ಮೇಲು ಎಂಬುದು ನಿಮ್ಮ ಅಭಿಪ್ರಾಯವೋ? ಹಾಗಿದ್ದಲ್ಲಿ ನೀವು ಸುಳ್ಳು ಹೇಳುತ್ತಿದ್ದೀರಿ ಅಥವ ನಿಮಗೆ ಬೇಕಾದಂತೆ ಬದುಕಲು ನಿಮಗೆ ಸ್ವಾತಂತ್ರ ಇಲ್ಲ. ನಾನು ನಿಮ್ಮ ಮಾತನ್ನು ಭಾಗಶ: ಒಪ್ಪುತ್ತೇನೆ. ನನ್ನ ಪ್ರಕಾರ ಬಡತನದಲ್ಲಿ ಸುಖವಿರಲು ಸಾಧ್ಯವಿಲ್ಲ. ಆದರೆ ಸಿರಿತನದಲ್ಲಿ? ಸಿರಿತನ ಎಂಬುದು ಏನು ಎಂದು ಸರಿಯಾಗಿ ಅರ್ಥಮಾಡಿಕೊಂಡು ಆ ಸಿರಿತನವನ್ನು ಗಳಿಸಿಕೊಂಡರೆ ಅದಕ್ಕಿಂತ ಸುಖ ಇನ್ನೊಂದಿಲ್ಲ. ಒಂದು ನಿಮಿಷ ಪುರುಸೊತ್ತು ಇಲ್ಲದಂತೆ ಗಾಣದೆತ್ತಿನಂತೆ ದುಡಿಯುವುದು ಸಿರಿತನದ ಲಕ್ಷಣವಾಗಲಾರದು. ಫ್ಯಾಷನ್ನಿನ ಶೋಕಿಗೆ ಬಿದ್ದು ತಿಂಗಳಿಗೊಂದು (ಕೆಲವೊಂದು ಜನ ವಾರಕ್ಕೊಂದು, ದಿನಕ್ಕೊಂದು) ಜತೆ ಬಟ್ಟೆ ಖರೀದಿಸುವುದು, ಅಷ್ಟೇ ಬೇಗ ಅದನ್ನು ಹಾಳು ಮಾಡುವುದು ಸಿರಿವಂತಿಕೆ ಖಂಡಿತಾ ಅಲ್ಲ. ಹಾಗಾದರೆ ಸಿರಿತನವೆಂದರೆ ಏನು? ತಿನ್ನಲು ಒಳ್ಳೆಯ ಆಹಾರ (ಈಗ ಸಿಗಲು ಸಾಧ್ಯವಿಲ್ಲ), ಉಡಲು ಸಾಕಷ್ಟು (ಬೇಕಾಷ್ಟು ಅಲ್ಲ) ಬಟ್ಟೆ, ಮನೆ, ಒಳ್ಳೆಯ ಸಂಸಾರ (ಈಗಂತೂ ಸಂಸಾರ ದಲ್ಲಿ ಸಾರವೇ ಇಲ್ಲ) ಮತ್ತು ಮನದಲ್ಲಿ ಶಾಂತಿ (ಎಲ್ಲಿದೆ?). ಈಗ ಎಲ್ಲ ಬಿಟ್ಟು ಹಳ್ಳಿಗೆ ಹೋದರೆ ಇವೆಲ್ಲ ಸಿಗುತ್ತವೆಯೇ? ಪ್ರಯತ್ನಪಟ್ಟರೆ ಸಿಗಬಹುದು. ಅಥವಾ ಸಿಗದೇ ಇರಲೂ ಬಹುದು. ಅದು ನಮ್ಮ ಮೇಲಿದೆ. ಅದಕ್ಕಾಗಿ ದೊಡ್ಡದೊಂದು ತ್ಯಾಗ (ಗೊತ್ತಾಯಿತಲ್ಲ ಯಾವ ತ್ಯಾಗ ಅಂತ!) ಮಾಡಬೇಕಾಗಿ ಬರಬಹುದು. ಈ ನಿಟ್ಟಿನಲ್ಲಿ ಯೋಚಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@mpneerkaje, ಸರ್, ಸಿರಿತನಕ್ಕಿಂತ ಬಡತನ ಮೇಲು ಎಂದು ನನ್ನ ಅಭಿಪ್ರಾಯವಲ್ಲ. ನಾನು ಇಲ್ಲಿ ಹೇಳಿದ್ದು ನನ್ನ ಅಪ್ಪನ ಅನುಭವದ ಮಾತುಗಳು ಅಷ್ಟೇ. ಈ ಬಡತನದ ಕಥೆ ಸುಮಾರು 60 ವರ್ಷಗಳ ಹಿಂದಿನದ್ದು, ನನ್ನ ಅಪ್ಪನ ಬಾಲ್ಯದ್ದು. ಈವಾಗ ನಾವು ಕೈತುಂಬಾ ಸಂಬಳ ಗಳಿಸುತ್ತಿದ್ದರೂ ಪ್ರೀತಿ, ವಿಶ್ವಾಸಗಳು ಕಡಿಮೆಯಾಗುತ್ತಾ ಬರುತ್ತಿರುವ ಈ ಕಾಲದಲ್ಲಿ ನಮ್ಮ ಪೂರ್ವಜರು ಈ ರೀತಿ ಬಾಳಿ ಬದುಕಿದ್ದರು ಎಂಬ ವಿಷಯವನ್ನು ಮೆಲುಕು ಹಾಕಿದ್ದೇನೆ ಹೊರತು ಯಾರೂ ಸಿರಿವಂತರಾಗಿರಬಾರದು, ಬಡತನದಲ್ಲೇ ಇರಬೇಕು ಎಂಬ ಅಭಿಪ್ರಾಯದಲ್ಲಿ ಬರೆದಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪೈ ಯವರೇ, ನಿಮ್ಮ ತಂದೆ ಮಾತ್ರವಲ್ಲ, ಬಹುತೇಕ ಹಿರಿಯರು ಹಾಗೆಯೇ ಹೇಳುತ್ತಾರೆ ಹಾಗು ಅವರು ಹೇಳುವುದು ಸರಿಯಾಗೇ ಇದೆ. ನಾನು ಹೇಳಿದ್ದು ಅವರ ಅಭಿಪ್ರಾಯಗಳ ಜೊತೆಗೆ ನಿಮ್ಮ ಅಭಿಪ್ರಾಯವನ್ನೂ ಬರೆಯಿರಿ ಎಂದಷ್ಟೇ. ನನ್ನ ಅಭಿಪ್ರಾಯವನ್ನು ನಾನೀಗಾಗಲೇ ತಿಳಿಸಿಯಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಡತನದಲ್ಲಿ ತಿಂದ ರಾಗಿ ರೊಟ್ಟಿ, ಕಾಯಿ ಚಟ್ನಿ, ಒಗ್ಗರಣೆ ಹಾಕಿದ ತಂಗಳನ್ನದ ರುಚಿ ಇಂದಿನ ಸುಖ್ ಸಾಗರ್, ಬಾಂಬೆ ಉಡುಪಿ, ಅರಬ್ ಉಡುಪಿಗಳ ಭರ್ಜರಿ ಭೋಜನದಲ್ಲಿ ಸಿಗುತ್ತಿಲ್ಲ ಕಣ್ರೀ! ಆ ಆತ್ಮೀಯತೆ, ಸಂತೃಪ್ತಿ, ಹಣದ ಹೊಳೆಯ ಮಧ್ಯೆ ಮರೆಯಾಗಿಬಿಟ್ಟಿದೆ. ದುಡ್ಡು ಕೊಂಡಿದ್ದು ಅನೇಕ, ಆದರೆ ಅದೇ ದುಡ್ಡು ಕೊಂದಿದ್ದು ಬಹುತೇಕ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

""" """ ಮತ್ತೊಂದು ಒಳ್ಳೇ ಬರಹ """" """"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿಯವರೇ, ಆಹ್ಹಾ... ತುಂಬಾ ಚೆನ್ನಾಗಿದೆ ಲೇಖನ. ಬಡತನದಲ್ಲೇ ಜಾಸ್ತಿ ಸುಖ/ನೆಮ್ಮದಿ ಇರುವುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಖವಿರುವುದು ಬಡತನದಲ್ಲೂ ಅಲ್ಲ ಸಿರಿತನದಲ್ಲೂ ಅಲ್ಲ, ಅದಿರುವುದು ನಮ್ಮೊಳಗೆ ! ಬಡಸಂಸಾರದ ಜಗಳ ಹೊಡೆದಾಟಗಳೂ ಹೊಸತಲ್ಲ, ಸಿರಿವಂತರ ಅಶಾಂತಿಯೂ ಕಾಣದ್ದಲ್ಲ. ಹಾಗೆಯೇ ಅವುಗಳ ವಿಪರೀತಗಳೂ... ಪರಸ್ಪರ ನಂಬಿಕೆ, ಪ್ರೀತಿ, ಭದ್ರತೆಯ ಭಾವನೆಗಳಿದ್ದರೆ ಎಲ್ಲೆಡೆಯೂ ಸುಖವಿದೆ, ನೆಮ್ಮದಿಯಿದೆ. :) ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು...ಎಂಬ ಭಾವ ಮುಖ್ಯ ನೆಮ್ಮದಿಗೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆ ವ್ಯಕ್ತ ಪಡಿಸಿಯೂ, ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು -ರಶ್ಮಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿಯವರೇ, ನನ್ನ ಬಾಲ್ಯದ ನೆನಪು ಮಾಡಿಬಿಟ್ಟಿರಿ. ಶಾಲೆಯಲ್ಲಿ ಓದುವಾಗ ಅದೆಂತಾ ಹರಿದುಹೊಲಿದ ಬಟ್ಟೆ ಹಾಕಿಕೊಂಡೆನೋ ನೆನಪಿಲ್ಲ. ಆದರೆ ಓದು ಮುಗಿಸಿ ಭಾರತೀಯ ದೂರವಾಣಿ ಕಾರ್ಖಾನೆಯಲ್ಲಿ ತರಬೇತಿಗೆ ಸೇರಿದಾಗ ನನ್ನ ಹತ್ತಿರ ಇದ್ದುದು ಒಂದು ನೀಲಿಪ್ಯಾಂಟ್. ಅದೂ ನಮ್ಮ ಚಿಕ್ಕಮ್ಮನ ಮಗ ವಾಸು ಕೊಟ್ಟಿದ್ದು.ಕುಂಡಿ ಮೇಲೆ ಪ್ಯಾಚ್. ಹಾಗೆಯೇ ಹಾಕಿಕೊಂಡು ಒಂದಿಷ್ಟು ದಿನ ಕಳೆದಿದ್ದಾಯ್ತು. ಆಹೊತ್ತಿಗೆ ಒಬ್ಬ ತಾಯಿಯ ಪರಿಚಯವಾಗಿ ನನ್ನ ಮುಂದಿನ ಜೀವನಕ್ಕೆ ಆಧಾರವಾದರು. ಇರಲಿ. ಆದರೆ ಅಂದಿನ ಬಡತನ ಈಗ ಊಹಿಸಲೂ ಸಾಧ್ಯವಿಲ್ಲ. ಈಗ ನಮ್ಮ ಮಕ್ಕಳು ಹೊಲಿಸಿಕೊಳ್ಳುವ ಪ್ಯಾಂಟ್ ಗಳನ್ನು ನೋಡಿದಾಗ ಬಹಳ ಕಸಿವಿಸಿಯಾಗುತ್ತೆ. ಇದು ಅವರ ಕಾಲ. ಅದು ನಮ್ಮ ಕಾಲ.ನಮ್ಮ ಅನುಭವವು ಇಂದಿನವರಿಗೆ ಪಾಠ ವಾಗಲಿ, ಎಂದು ನಿರೀಕ್ಷೆ ಮಾಡುವುದೂ ತಪ್ಪೆನಿಸಿ ಬಿಟ್ಟಿದೆ. ಆದರೆ ಹಸಿದ ಹೊಟ್ಟೆಗೆ ಅಂದು ಹಳಸಿದನ್ನವೂ ಮೃಷ್ಟಾನ್ನ ವಾಗಿ ಕಾಣುತ್ತಿತ್ತು. ಇಂದು .....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

e lekhana arthapoornavagide. yake andre badathana kelavarige shapa anthare.adre kelavarige adu vara yakandre prathi ondu sambandavu hathira iruthe.ellaru shrimantharadre navu yarige enu kadime emba bhavane moodutthe.alli preethi vishvasakke belene illa.adakke badathanadalli eno onthara nemmadi ide.............egina kaladalli duddu ella iruthe adre nemmadi ilde jana oddadthare alva...........:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

e lekhana arthapoornavagide. yake andre badathana kelavarige shapa anthare.adre kelavarige adu vara yakandre prathi ondu sambandavu hathira iruthe.ellaru shrimantharadre navu yarige enu kadime emba bhavane moodutthe.alli preethi vishvasakke belene illa.adakke badathanadalli eno onthara nemmadi ide.............egina kaladalli duddu ella iruthe adre nemmadi ilde jana oddadthare alva...........:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.