ಲೈಫು ಇಷ್ಟೇ ಅಲ್ಲ!

4.833335

ಬೆಂಗಳೂರಿನ ಚುಮು ಚುಮು ಚಳಿ. ಆಫೀಸಿನಲ್ಲಿನ ನಿತ್ಯ ಕೆಲಸ. ಅದೆರೆಡೆಯಲ್ಲಿ  ಹಳೇ ಬಾಯ್್ಫ್ರೆಂಡ್್ನ ನೆನಪುಗಳು, ಹೊಸ ಲೇಖನಗಳು, ಒಂದಿಷ್ಟು ಸಂದರ್ಶನಗಳು, ಕರೆನ್ಸಿ ಖಾಲಿಯಾಗುವ ತನಕ ಮಾತನಾಡುವ ಫ್ರೆಂಡ್ಸ್್ಗಳು, ಪಿಜಿಯಲ್ಲಿನ ಹೊಸ ಜಗಳಗಳು, ಅಪ್ಪ ಅಮ್ಮನ ಉಪದೇಶಗಳು ಹೀಗೆ 'ಗಳು' ಜತೆ ಬೆಂಗಳೂರಿನಲ್ಲಿ ಲೈಫು ಇಷ್ಟೇನೆ ಅಂತಾ ಸಾಗುತ್ತಿತ್ತು ದಿನಗಳು. ಅಬ್ಬಾ ...ಊರು ಬಿಟ್ಟು ಈ ಮಾಯಾನಗರಿಗೆ ಬಂದು 2 ವರ್ಷಗಳು ಕಳೆಯಿತಲ್ವಾ ಎಂದು ಅಚ್ಚರಿಯಾಗುತ್ತಿದೆ. ಮೊದಲು ಇಲ್ಲಿಗೆ ಬಂದಾಗ ಆಫೀಸಿನಿಂದ ಪಿಜಿಗೆ ಹೋಗಬೇಕಾದರೆ ಅದೆಷ್ಟು ಕನ್್ಫ್ಯೂಸ್ ಮಾಡಿಕೊಳ್ಳುತ್ತಿದ್ದೆ ಗೊತ್ತಾ. ಅದಿರಲಿ, ಬೇರೆ ಯಾವುದಾದರೂ ಜಾಗಕ್ಕೆ ಹೋಗಿ ಅಡ್ರೆಸ್ ಕೇಳಿದ್ರೆ ಸಿಗುತ್ತಿದ್ದ ಉತ್ತರ 'ಡೋಂಟ್ ನೋ'. ಏನಪ್ಪಾ ಈ ಬೆಂಗಳೂರಿನವರು ಎಲ್ಲದಕ್ಕೂ 'ಡೋಂಟ್ ನೋ' ಅಂತಾ ಹೇಳ್ತಾರಲ್ವ ಅಂತಾ ಸಿಟ್ಟು ಬರುತ್ತಿತ್ತು. ಚೆನ್ನೈಯಲ್ಲಿ ನನಗೆ ಭಾಷೆ ತಿಳಿಯದಿದ್ದರೂ ಆರಾಮವಾಗಿ ಅಲ್ಲಿ ಇಲ್ಲಿ ಅಡ್ಡಾಡಿದ್ದೆ. ಆದರೆ ಇಲ್ಲಿ ಭಾಷೆ ಗೊತ್ತಿದ್ದರೂ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಬೇಕಾದರೆ ಕಷ್ಟ ಕಷ್ಟ!


 


ಅಂತೂ ಮೊನ್ನೆ ಮೊನ್ನೆ ಇಂದಿರಾ ನಗರದಲ್ಲಿರುವ ಸ್ಪಾಸ್ಟಿಕ್ಸ್ ಸೊಸೈಟಿ ಆಫ್ ಕರ್ನಾಟಕ ಎಂಬ ಸಂಸ್ಥೆಗೆ ಭೇಟಿ ನೀಡಬೇಕಾದ ಅವಕಾಶ ಒದಗಿ ಬಂತು. ಯಾವುದೇ ಸಂದರ್ಶನ ನಡೆಸುವ ಮುನ್ನ ಅವರ (ಆ ಸಂಸ್ಥೆ)ಯ ಬಗ್ಗೆ ಗೂಗಲಿಸಿ ನೋಡುವುದು ನಂತರ ಅಪ್ಪ ಅಮ್ಮನಿಗೆ ಅದರ ಬಗ್ಗೆ ಹೇಳಿ ನಂತರ ಸಂದರ್ಶನ ನಡೆಸಲು ಹೊರಡುವುದು ನನ್ನ ಅಭ್ಯಾಸ. ಸರಿ, ಈ ದಿನ ನಾನು ನಿಮ್ಮ ಸಂಸ್ಥೆಗೆ ಬರುತ್ತಿದ್ದೇನೆ ಅಂತಾ ಫೋನ್ ಮಾಡಿ ತಿಳಿಸಿ ನಿಗದಿತ ದಿನ ಸಂಸ್ಥೆಗೆ ಭೇಟಿ ನೀಡಿದೆ. ಮೊದಲೇ ಬೆಂಗಳೂರು ಚೆನ್ನಾಗಿ ಪರಿಚಯ ಇಲ್ಲ, ಹೀಗಿರುವಾಗ ಇಂದಿರಾನಗರದಲ್ಲಿರುವ ಸ್ಪಾಸ್ಟಿಕ್ಸ್ ಸೊಸೈಟಿ ಆಫ್ ಕರ್ನಾಟಕ ಎಂಬ ಸಂಸ್ಥೆಯನ್ನು ಪತ್ತೆ ಹಚ್ಚಬೇಕಾದರೆ ಹರಸಾಹಸ ಪಟ್ಟಿದ್ದೆ. ಅಂತೂ 2 ಗಂಟೆಗೆ ಬರುತ್ತೇನೆ ಅಂತಾ ಹೇಳಿದವಳು 2.10ಕ್ಕೆ ಅಲ್ಲಿ ತಲುಪಿದೆ. ಸಂಸ್ಥೆಯ ಅಧಿಕಾರಿಗಳ ಜೊತೆ ಮಾತನಾಡಿ, ಶಾಲೆಯ ಮಕ್ಕಳನ್ನು ಭೇಟಿ ಮಾಡುವ ಇಚ್ಛೆಯನ್ನು ವ್ಯಕ್ತ ಪಡಿಸಿದೆ. ಅಲ್ಲಿನ ಉಪ ಪ್ರಾಂಶುಪಾಲೆ ಪದ್ಮಾ ಜನಾರ್ಧನನ್ ನಮಗೆ ಸಂಸ್ಥೆಯ ಬಗ್ಗೆ ವಿವರಿಸಿದರು.


 


ನಿಜವಾಗಿಯೂ, ಅಲ್ಲಿನ ಮಕ್ಕಳ ಲೈಫು ನೋಡಿದರೆ ಅಚ್ಚರಿ ಅನಿಸಿಬಿಡುತ್ತೆ . ವೀಲ್್ಚೇರ್್ನಲ್ಲಿ ಕುಳಿತ ಮಗುವೊಂದು ತನ್ನ ಪಾಡಿಗೆ ನಗುತ್ತಿತ್ತು. ಆ ಮುಗ್ದ ಮುಖ ಈವಾಗಲೂ ಕಣ್ಣಿಗೆ ಕಟ್ಟಿದಂತಿದೆ. ಪ್ರಸ್ತುತ ಸಂಸ್ಥೆಯಲ್ಲಿ ಕಲಿಕೆಯ ಜೊತೆ ಮಕ್ಕಳಿಗೆ ತಿಂಡಿ ತಯಾರಿಸುವುದು, ಕಂಪ್ಯೂಟರ್, ಪೇಟಿಂಗ್, ಡ್ಯಾನ್ಸ್, ಸಂಗೀತ ಎಲ್ಲವನ್ನೂ ಹೇಳಿ ಕೊಡಲಾಗುತ್ತದೆ. ಎಲ್ಲವನ್ನು ವೀಕ್ಷಿಸಿದ ಮೇಲೆ ಅದ್ಬುತ ಲೋಕವೊಂದಕ್ಕೆ ಬಂದಿದ್ದೇನೆ ಎಂಬ ಅನುಭವ ನಮ್ಮದಾಗಿತ್ತು. ಬುದ್ದಿಮಾಂದ್ಯರಾದ ಮಕ್ಕಳನ್ನು ನಿಯಂತ್ರಿಸುವುದು, ಪಾಠ ಹೇಳಿ ಕೊಡುವುದು ಎಲ್ಲಾ ಚಾಲೆಂಜಿಂಗ್ ಕೆಲಸವೇ. ಅಮ್ಮಂದಿರು ತಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವುದು ಮಾತ್ರವಲ್ಲದೆ ಮಕ್ಕಳೊಂದಿಗೆ ಬೆರೆತು ಅವರ ಹವ್ಯಾಸಗಳಿಗೆ ಸಾಥ್ ನೀಡುತ್ತಾರೆ. ಕ್ಲಾಸ್ ರೂಮಿಗೆ ಭೇಟಿ ನೀಡಿದಾಗ ಮಕ್ಕಳೆಲ್ಲ ನಮ್ಮತ್ತ ತಿರುಗಿ ನೋಡಿ ಸ್ಮೈಲ್ ಕೊಟ್ರು. ಮತ್ತೆ ಅವರದ್ದೇ ಚಟುವಟಿಕೆಗಳಲ್ಲಿ ತಲ್ಲೀನರಾದರು. ಅಲ್ಲಿನ ಟೀಚರ್್ಗಳು ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಾಗ ನಿಜವಾಗಿಯೂ ಗುರುವೇ ದೇವರ ರೂಪದಲ್ಲಿ ಹುಟ್ಟಿ ಬಂದಿದ್ದಾರೆ ಎಂದೆನಿಸಿತು. ಅಷ್ಟೊಂದು ತಾಳ್ಮೆ, ಮಕ್ಕಳನ್ನು ನೋಡಿಕೊಳ್ಳುವ ಅವರ ಪರಿ, ಮಕ್ಕಳ ಏಳಿಗೆಗಾಗಿ ದುಡಿಯುವ ಅವರ ಸಮರ್ಪಣಾಭಾವ ಎಲ್ಲವೂ ಗ್ರೇಟ್ ಅಂತಾ ಅನಿಸಿಬಿಡುತ್ತದೆ.


 


ಇನ್ನು ಹ್ಯಾಟ್ಸ್ ಆಫ್ ಹೇಳಬೇಕಾದುದು ಹೆತ್ತವರಿಗೆ. ತಮ್ಮ ಮಗುವಿನ ಭವಿಷ್ಯಕ್ಕಾಗಿ ಅವರು ಪಡುವ ಕಷ್ಟ ಅಷ್ಟಿಷ್ಟಲ್ಲ. ಮಗುವನ್ನು ಶಾಲೆಗೆ ಸೇರಿಸಿ ಅವರ ಬೇಕು ಬೇಡಗಳನ್ನೆಲ್ಲಾ ಪೂರೈಸಿ, ದುಃಖವನ್ನು ಬದಿಗೊತ್ತಿ ಮಗುವಿನೊಂದಿಗೆ ಮಗುವಾಗುವ ಅಮ್ಮ, ಅಲ್ಲೊಂದು ಮಗು ಯಾವುದೋ ಲೋಕದಲ್ಲಿ ವಿಹರಿಸುತ್ತಾ ನಕ್ಕು ಕೈ ಚಪ್ಪಾಳೆ ತಟ್ಟಿ ಸಂತೋಷ ವ್ಯಕ್ತಪಡಿಸಿದಾಗ ಆ ಅಮ್ಮನ ಮುಖದಲ್ಲಿ ಸಂತೃಪ್ತಿಯ ನಗೆ ಕಾಣುತ್ತಿತ್ತು. ಬುದ್ದಿಮಾಂದ್ಯರಾದರೂ ತಮಲ್ಲಿರುವ ಎಲ್ಲಾ ಶಕ್ತಿಗಳನ್ನು ಬಳಸಿಕೊಂಡು ಆ ಮಕ್ಕಳು ಮಾಡುವ ಕೆಲಸಗಳನ್ನು ನೋಡಿದಾಗ ನನಗೆ 'ನಾನೇ ವೇಸ್ಟ್ ಬಾಡಿ ಅಂತಾ ಅನಿಸಿಬಿಡ್ತು' ಎಂಬ ಸತ್ಯ ಇಲ್ಲಿ ಹೇಳಲೇ ಬೇಕು. ಈ ಮಕ್ಕಳ ಜೀವನ ಹೇಗಿರುತ್ತದೆ ಎಂಬುದನ್ನು ಅರಿತುಕೊಳ್ಳುವುದು ಹೊಸ ಅನುಭವವಾಗಿದ್ದರೆ ಅಲ್ಲಿರುವ ಮಕ್ಕಳು ಬುದ್ದಿಮಾಂದ್ಯರಲ್ಲ ಬುದ್ದಿವಂತರು ಎಂದು ಮನಸ್ಸು ಹೇಳುತ್ತಿತ್ತು.


 


ಇನ್ನೊಂದು ಅನುಭವ ಏನಪ್ಪಾ ಅಂದ್ರೆ ತಿಂಗಳ ಹಿಂದೆ ಜಾರಿ ಬಿದ್ದು ಕಾಲಿಗೆ ಗಾಯ ಮಾಡಿಸಿಕೊಂಡಾಗ ಇನ್ನು ನನಗೆ ಏನು ಮಾಡೋಕೆ ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಖಿನ್ನತೆಗೊಳಗಾಗಿದ್ದೆ. ಇಂತಿರುವಾಗ ಗುಲ್ಬರ್ಗಾದ ರಶ್ಮಿ ಔರಸಂಗ ಎಂಬ ನೃತ್ಯಗಾರ್ತಿಯನ್ನು ಸಂದರ್ಶನ ನಡೆಸಬೇಕಾದ ಅವಕಾಶ ಒದಗಿ ಬಂತು. ಸೊಂಟದ ಕೆಳಗೆ ಸ್ವಾಧೀನವಿಲ್ಲದಿದ್ದರೂ ಈಕೆ ನೃತ್ಯಗಾರ್ತಿ. (ಈಕೆಯ ಬಗ್ಗೆ 'ಸಖಿ' ಪಾಕ್ಷಿಕದಲ್ಲಿ ಬರೆದಿದ್ದೆ). ಆಕೆಯ ಮಾತುಗಳನ್ನು ಕೇಳಿದಾಗ ನನಗೆ ಒಂಥರಾ ಸ್ಪೂರ್ತಿ ಬಂದಂತಾಗಿತ್ತು. ಕಾಲಿಗೆ ಗಾಯವಾದುದಕ್ಕೆ ನಾನು ಇಷ್ಟೊಂದು ತಲೆಬಿಸಿ ಮಾಡಿಕೊಂಡಿದ್ದೇನಲ್ಲಾ..ಆ ಹುಡುಗಿ ಕಾಲಿಲ್ಲದೆ ಸಾಧನೆ ಮಾಡ್ತಾ ಇದ್ದಾಳೆ ಎನ್ನುವ ಅಂಶ ನನ್ನಲ್ಲಿ ಹೊಸ ಆತ್ಮ ವಿಶ್ವಾಸವನ್ನು ಹುಟ್ಟು ಹಾಕಲು ಕಾರಣವಾಯಿತು. ಹೀಗೆ ಬೆಂಗಳೂರಿಗೆ ಬಂದು  ಹೊಸ ಜನರ ಪರಿಚಯವಾಗುವುದರ ಜೊತೆಗೆ ಅವರ ಜೀವನ ಕಥೆಯನ್ನು ಆಲಿಸುವಾಗ, ಅದನ್ನು ಬರೆದು ಪ್ರಕಟಿಸುವಾಗ ಲೈಫು ಇಷ್ಟೇ ಅಲ್ಲ ಅಂತಾ ಅನಿಸುತ್ತಿರುತ್ತದೆ. ಅದೇ ನನಗೆ ಪ್ರೇರಣೆ ಕೂಡಾ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (12 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಶ್ಮಿಯವರೆ, ಬಹಳ ಹಿ೦ದೆ ನಾನು ಬೆ೦ಗಳೂರಿನ ಮಹಾತ್ಮಾಗಾ೦ಧಿ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸ್ಪಾಸ್ಟಿಕ್ ಸೊಸೈಟಿಯನ್ನು ನೋಡುವ ಅವಕಾಶ ಸಿಕ್ಕಿತ್ತು. ಅಲ್ಲಿನ ಮಕ್ಕಳ ಬಗ್ಗೆ ಸಿಬ್ಬ೦ದಿ ತೋರುವ ಮಮಕಾರ, ಕಲಿಸುತ್ತಿರುವ ರೀತಿ ನಿಜಕ್ಕೂ ಇತರರಿಗೆ ಸ್ಫೂರ್ತಿದಾಯಕ. ಸಮಾಜದ ನಿರ್ಲಕ್ಷಿತ ಮಕ್ಕಳ ಏಳಿಗೆಗಾಗಿ ದುಡಿಯುತ್ತಿರುವ ಕೆಲವೇ ವೃತ್ತಿಪರ ಸ೦ಸ್ಥೆಗಳಲ್ಲಿ ಇದೂ ಒ೦ದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ರಶ್ಮಿ, ತುಂಬಾ ಒಳ್ಳೆಯ ಬರೆಹ. ಅಭಿನಂದನೆಗಳು. ‘ಲೈಫ್ ಇಷ್ಟೇನಾ?’ ಅನ್ನೋ ಪ್ರಶ್ನೆ ಎಲ್ಲರಿಗೂ ಆಗಾಗ್ಗೆ ಬಂದೇ ಬರುತ್ತೆ. ಅದಕ್ಕೆ ಉತ್ರಾನ ಮಾತ್ರ ‘ಇಷ್ಟೇನೇ!’ ಅಂತ ಯಾರೂ, ಯಾವತ್ತೂ ತಿಳ್ಕೋಬಾರ್ದು. ‘ಲೈಫು ಇಷ್ಟೇನೇ’, ಅಂತ ಇನ್ನೇನು ತೀರ್ಮಾನ ಆಗೋಗುತ್ತೇಂತನ್ನೋ ಸ್ಟೇಜಿಗೆ ಬಂದಾಗ, ಆದಷ್ಟು ಬೇಗ್ನೇ ನಮ್ಮ ಜಾಗದಿಂದ ಎದ್ದು ಹೊರ ಬರಬೇಕು. ನಮ್ಮ ಚಿಪ್ಪಿನಿಂದ, ಪ್ಯೂಪಾದಿಂದ ಹೊರಬರಬೇಕು. ಹೊರಗೆ ಇತರರ ಜೀವನವನ್ನ ಗಮನಿಸಬೇಕು. ಮನುಷ್ಯರದ್ದಷ್ಟೇ ಅಲ್ಲ; ಎಲ್ಲಾ ಜೀವಜಂತುಗಳದ್ದೂ! ಉದಾಹರಣೆಗೆ, ಒಂದು ಬಾಳೇಗಿಡದ ಲೈಫನ್ನು ನೋಡಿ. ಆ ಗಿಡವನ್ನೆಷ್ಟೇ ಬಾರಿ ಕಡಿದುಹಾಕಿದ್ರೂ ಆ ಕಡಿದ ಕಾಂಡದಲ್ಲೇ ಮತ್ತೆ ಚಿಗುರತ್ತೆ! ಬದುಕಿನ ಮೇಲಿನ ಭರವಸೇನ ಅದ್ರಿಂದ ಕಲೀಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲೇಖನಕ್ಕೆ ಪ್ರತಿಕ್ರಿಯೆ ನೀಡಿದ ನಿಮಗೆ ಧನ್ಯವಾದಗಳು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.