ಅಭಿಮಾನಿಯ ಹರಕೆ ಫಲಿಸಿದಾಗ!

5

ಚಿನ್ ತೆಂಡೂಲ್ಕರ್ ಅಬ್ಬರದ ಆಟ ಮತ್ತು ದಾಖಲೆಗಳ ಬಗ್ಗೆ ಪತ್ರಿಕೆಗಳಲ್ಲಿ, ಬ್ಲಾಗ್್ಗಳಲ್ಲಿ ಸಾಕಷ್ಟುಜನ ಈಗಾಗಲೇ ಬರೆದಿದ್ದಾರೆ. ಆದರೆ ಸಚಿನ್ ಬಗ್ಗೆ ಪ್ರತಿಯೊಬ್ಬರಿಗೂ ಹೇಳಲು ಒಂದೊಂದು ವಿಷಯ ಇದ್ದೇ ಇರುತ್ತದೆ. ಇಂದು ಮುಂಜಾನೆ ರಾತ್ರಿ ಪಾಳಿ ಮುಗಿಸಿ ಆಫೀಸಿನಿಂದ ಹೊರಡಬೇಕು ಅನ್ನುವಷ್ಟು ಹೊತ್ತಿಗೆ ಅಂದ್ರೆ 3.30ಕ್ಕೆ ಇಂಡಿಯನ್ ಎಕ್ಸ್್ಪ್ರೆಸ್ ಪತ್ರಿಕೆಯ 15ನೇ ಪುಟದಲ್ಲಿ 20 years ago...ಅಂತಾ ಒಂದು ಸುದ್ದಿ ಓದಿದೆ. ಅದೂ 20 ವರ್ಷಗಳ ಹಿಂದೆ ಸಚಿನ್ ಬರೆದ ಒಂದು ಪತ್ರದ ಸುದ್ದಿ. ಆಗಲೇ ನನಗೆ ಸಚಿನ್ ಬರೆದ ಪತ್ರದ ಬಗ್ಗೆ ಬರೆಯೋಣ ಅಂತಾ ಅನಿಸಿದ್ದು. ಸಚಿನ್ ತೆಂಡೂಲ್ಕರ್್ನ್ನು ಈವರೆಗೆ ಟಿವಿಯಲ್ಲಿಯೇ ನೋಡಿದ್ದು. ಕಾಲೇಜು ಮುಗಿಸಿ ಕೆಲಸಕ್ಕೆ ಸೇರುವ ವರೆಗೂ ಸಚಿನ್ ಆಟಗಳನ್ನು ತಪ್ಪದೆ ನೋಡುತ್ತಿದ್ದೆ. ಕೆಲಸಕ್ಕೆ ಸೇರಿದ ಮೇಲೆ ಮ್ಯಾಚ್ ನೋಡೋಕೆ ಸಮಯ ಸಿಕ್ತಾ ಇಲ್ಲ. ಬರೀ ಸುದ್ದಿ ಮಾಡುವುದೇ ಆಯ್ತು.


ಶಾಲಾ ದಿನಗಳಲ್ಲಿ ವಿಶೇಷವಾಗಿ ಪ್ಲಸ್ ಟು ಕಲಿಯುತ್ತಿರುವಾಗ ಮ್ಯಾಚ್ ನೋಡುವುದಕ್ಕಾಗಿ ಕ್ಲಾಸ್ ಬಂಕ್ ಮಾಡಿದ್ದೂ ಇದೆ. ಮನೆಯಲ್ಲಿ ಅಮ್ಮ ಬೈತಾ ಇದ್ರೂ ಕ್ಲಾಸ್ ಬಂಕ್ ಮಾಡಿದ್ರೆ ಏನು? ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಿದರೆ ಸಾಲದೇ? ಎಂದು ಉತ್ತರಿಸುತ್ತಿದ್ದೆ. ನನ್ನ ಎಲ್ಲಾ ನೋಟ್ ಬುಕ್್ಗಳ ಕವರ್ ಸಚಿನ್ ಫೋಟೋದ್ದು. ನನ್ನ ರೂಮ್್ನಲ್ಲಿ ವಿವಿಧ ಭಂಗಿಗಳಲ್ಲಿರುವ ಸಚಿನ್ ಫೋಟೋ. ಸುದ್ದಿ ಪತ್ರಿಕೆಗಳಲ್ಲಿ ಸಚಿನ್ ಫೋಟೋ ಸಿಕ್ಕಿದರೆ ಸಾಕು ಅದನ್ನು ಕತ್ತರಿಸಿ ಸಂಗ್ರಹಿಸುವುದು ನನ್ನ ಹವ್ಯಾಸಗಳಲ್ಲೊಂದು. ನಮ್ಮ ಮನೆಗೆ ತರುತ್ತಿದ್ದ ಪೇಪರ್್ಗಳನ್ನು ಓದಿಯಾದನಂತರ ಅಂಗಡಿಗೆ ಮಾರುತ್ತಿದ್ದೆವು. ಆದರೆ ಆ ರದ್ದಿ ಪೇಪರ್್ಗಳಲ್ಲಿ ಕ್ರೀಡಾ ಪುಟ ಮಾತ್ರ ಇರುತ್ತಿರಲಿಲ್ಲ. ಕೆಲವೊಂದು ಪುಟಗಳಲ್ಲಿ ಜಾಹೀರಾತಿನ ಮೂಲಕ ಸಚಿನ್ ಕಾಣಿಸಿಕೊಂಡರೂ ಸಾಕು ಅದನ್ನೂ ಕತ್ತರಿಸಿ ಸಂಗ್ರಹಿಸುತ್ತಿದೆ. ಇನ್ನು ಪೋಸ್ಟರ್, ಕಾರ್ಡ್ ಸೈಜ್ ಫೋಟೋಗಳ ಸಂಗ್ರಹಗಳು ಬೇರೇಯೇ ಇರುತ್ತಿದ್ದವು. 


ಪ್ಲಸ್ ಟು ಕಲಿಯುತ್ತಿರುವಾಗ ಕ್ರಿಕೆಟ್ ಮ್ಯಾಚ್ ಇದ್ದರೂ ಕೆಲವೊಮ್ಮೆ ಕ್ಲಾಸ್ ಬಂಕ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆವಾಗ ಪಕ್ಕದ ಅಂಗಡಿಯಲ್ಲಿ ಟಿವಿ ಮುಂದೆ ಜನರು ಕ್ರಿಕೆಟ್ ನೋಡುತ್ತಾ ಇದ್ದರೆ ಮಧ್ಯಾಹ್ನದ ವಿರಾಮ ವೇಳೆಯಲ್ಲಿ ಹುಡುಗರ ಜೊತೆ ನಾನು ಹೋಗಿ ಒಂದಿಷ್ಟು ಕ್ರಿಕೆಟ್ ನೋಡಿ ಬರುತ್ತಿದ್ದೆ. ಆವಾಗಲೇ ಮನಸ್ಸಿಗೆ ಸಮಾಧಾನ. ಕ್ರಿಕೆಟ್ ಇದ್ದ ದಿನ ಎಲ್ಲಾದರೂ ಕರೆಂಟ್ ಕೈಕೊಟ್ಟಿತು ಅಂದ್ರೆ ಕೆಎಸ್್ಇಬಿಗೆ ಶಾಪ ಹಾಕುತ್ತಿದ್ದೆ. ಪರೀಕ್ಷಾ ವೇಳೆಯಲ್ಲಿಯೂ ಕ್ರಿಕೆಟ್ ಮಿಸ್ ಮಾಡುತ್ತಿರಲಿಲ್ಲ. ಸಚಿನ್ ಔಟಾಗುವವರೆಗೆ ಮಾತ್ರ ನೋಡುತ್ತೇನೆ ಆಮೇಲೆ ಓದುತ್ತೇನೆ ಅಂತಾ ಹೇಳಿ ಟಿವಿ ಮುಂದೆ ಕೂರುತ್ತಿದ್ದೆ. ಆವಾಗ ಅಪ್ಪ, 'ಸಚಿನ್ ಬೇಗ ಔಟಾಗಲಿ'  ಎಂದು ಹೇಳುತ್ತಿದ್ದರೆ ನನಗೆ ಎಲ್ಲಿಲ್ಲದ ಸಿಟ್ಟು ಬರುತ್ತಿತ್ತು. ಸಚಿನ್ ಸೆಂಚುರಿ ಹೊಡೆಯಲು ಇನ್ನೇನು ಎರಡು ಮೂರು ರನ್ ಬಾಕಿ ಇದೆ ಎಂದಾದರೆ ನನಗೆ ಟೆನ್ಶನ್. ಉಗುರು ಕಚ್ಚುತ್ತಾ, ಸಚಿನ್ ಸೆಂಚುರಿ ಹೊಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಇಂತಹಾ ಸಂದರ್ಭದಲ್ಲಿ ಯಾರಾದರೂ ನನ್ನನ್ನು ಕರೆದರೂ ತಿರುಗಿ ನೋಡುವ ಗೋಜಿಗೆ ಹೋಗುತ್ತಿರಲಿಲ್ಲ. ಕೆಲವೊಮ್ಮೆ ನಾನು ಕ್ಲಾಸಿಗೆ ಗೈರು ಹಾಜರಾದರೆ ನಮ್ಮ ಕ್ಲಾಸ್ ಟೀಚರ್ ಇವತ್ತು ಮ್ಯಾಚ್ ಏನಾದರೂ ಇದೆಯಾ ಅಂತಾ ನನ್ನ ಗೆಳೆಯರಲ್ಲಿ ವಿಚಾರಿಸುತ್ತಿದ್ದರು. 


ಸಚಿನ್ ...ಅವ ನನ್ನ ಲವರ್, ಕ್ರಶ್ ಅಂತಾನೇ ಹೇಳ್ಬಹುದು. ಅಷ್ಟೊಂದು ಅಭಿಮಾನ ನನಗೆ ಇತ್ತು. ಅವನನ್ನು ನೋಡ್ಬೇಕು ಮಾತಾಡಿಸಬೇಕು ಎಂಬ ಕನಸು ಕೂಡ. ಇದೊಂತರಾ ಹುಚ್ಚು ಎಂದು ನನ್ನಮ್ಮ ಅಭಿಪ್ರಾಯ ಪಟ್ಟರೂ, ನನ್ನ ಅಪ್ಪನದ್ದು ಫುಲ್ ಸಪೋರ್ಟ್. ನೀನು ಚೆನ್ನಾಗಿ ಹಿಂದಿ ಮಾತನಾಡಲು ಕಲಿ ಆದರೆ ಮಾತ್ರ ಸಚಿನ್ ಜೊತೆ ಮಾತಾಡಬಹುದು ಎಂದು ಅಪ್ಪ ಸಲಹೆ ಕೊಟ್ಟದ್ದೇ ತಡ. ಹಿಂದಿ ಕಲಿಕೆಗೆ ಹೆಚ್ಚು ಒತ್ತು ನೀಡಿದೆ. ಹಾಗೆ ಹಿಂದಿಯಲ್ಲಿ ಹೆಚ್ಚು ಆಸಕ್ತಿ ವಹಿಸಿದುದರಿಂದ 8ನೇ ತರಗತಿಯಿಂದ ಪ್ಲಸ್ ಟುವರಗೆ ಹಿಂದೀ ಪರೀಕ್ಷೆಯಲ್ಲಿ ಫುಲ್ ಮಾರ್ಕ್ಸ್ ಲಭಿಸುತ್ತಿತ್ತು. ಹೀಗಿರುವಾಗ ಮಾತೃಭೂಮಿ ಸ್ಪೋರ್ಟ್ಸ್ ಎಂಬ ಮಲಯಾಳಂ ಮಾಸ ಪತ್ರಿಕೆಯಲ್ಲಿ ಸಚಿನ್ ವಿಳಾಸ ಸಿಕ್ಕಿತು. ಅದು ನನ್ನ ಕೈಗೆ ಸಿಕ್ಕಿದಾಗ ಎಷ್ಟು ಸಂತೋಷವಾಗಿತ್ತು ಗೊತ್ತಾ?. ಹಾಗೆ ಸಚಿನ್ ಹುಟ್ಟುಹಬ್ಬಕ್ಕೆ ಗ್ರೀಟಿಂಗ್ಸ್ ಕಾರ್ಡು ಕಳಿಸಬೇಕೆಂಬ ಯೋಜನೆಯನ್ನು ಅಪ್ಪನ ಮುಂದಿಟ್ಟೆ. ಆಯ್ತು, ಅಪ್ಪ ಒಂದು ಒಳ್ಳೆಯ ಬರ್ತ್್ಡೇ ಕಾರ್ಡು ತಂದುಕೊಟ್ಟರು. ಹಾಗೆ ಆ ಬರ್ತ್ ಡೇ ಕಾರ್ಡ್್ನಲ್ಲಿ ನನ್ನ ಶುಭಾಶಯ ಬರೆದು ಅದರೊಳಗೆ ಇನ್ನೊಂದು ಪತ್ರವನ್ನಿರಿಸಿದೆ. ಅದರಲ್ಲಿ ನಾನು "ಸಚಿನ್ ನಿನ್ನನ್ನು ನಾನು ಯಾವ ರೀತಿ ಪ್ರೀತಿಸುತ್ತಿದ್ದೇನೆ. ನೀನು ನನಗೆ ಯಾಕೆ ಇಷ್ಟ ಅಂತೆಲ್ಲಾ ಬರೆದಿದ್ದೆ. ಹಿಂದಿಯಲ್ಲಿ ನಾಲ್ಕು ಸಾಲಿನ ಚಿಕ್ಕ ಕವನ ಕೂಡಾ ಅದರಲಿತ್ತು. (ಈವಾಗ ಅದು ಸರಿಯಾಗಿ ನೆನಪಿಲ್ಲ. ಆ ಪತ್ರದ ಪ್ರತಿ ಕೂಡಾ ಇಲ್ಲ ). ಆ ಪತ್ರ ಬರೆಯಲು ನಾನಾವಾಗ ರೋಟೋಮ್ಯಾಕ್ ಕಂಪೆನಿಯ ಫೈಟರ್ ಪೆನ್ ಬಳಸಿದ್ದೆ. ಯಾಕೆಂದರೆ ಫೈಟರ್ 'ಹಮೇಶಾ ಜೀತ್ ತಾ ಹೈ' ಎಂದು ಅದರ ಜಾಹೀರಾತಿನ ಪಂಚ್್ಲೈನ್ ಆಗಿತ್ತು. ಮಾತ್ರವಲ್ಲದೆ ಜಾವೇದ್ ಅಖ್ತರ್ ಬರೆಯುವ ಪೆನ್ನು ಅದು ಅಂತಾ ನನಗೆ ಆ ಪೆನ್ ಮೇಲೆ ಬಹಳಷ್ಟು ಪ್ರೀತಿ ಬೇರೆ.:) ಅಂತೂ ಇಂತೂ ಪತ್ರ ಪೋಸ್ಟ್ ಮಾಡಿದ್ದು ಅಪ್ಪ. ಆವಾಗ ನಿನ್ನ ಲೆಟರ್ ಸಚಿನ್ ಮನೆಯ ಕಸದ ಬುಟ್ಟಿಯಲ್ಲಿರಬಹುದು ಎಂದು ಅಕ್ಕ ಕಾಮೆಂಟ್ ಮಾಡಿದ್ದಳು. ಅದಕ್ಕೆ ಅಪ್ಪ, ನಿನಗೆ ನಿಜವಾದ ಪ್ರೀತಿ ಇದೆ ಎಂದಾದರೆ ಸಚಿನ್ ನಿನ್ನ ಪತ್ರ ನೋಡಿಯೇ ನೋಡ್ತಾನೆ ಎಂದು ಹೇಳಿ ನನ್ನನ್ನು ಸಮಾಧಾನ ಪಡಿಸಿದ್ದರು. ಆದರೆ ಸಚಿನ್್ಗೆ ಕೋಟಿಗಟ್ಟಲೆ ಅಭಿಮಾನಿಗಳಿರುವಾಗ ನನ್ನ ಈ ಪತ್ರ ಅವನ ಕಣ್ಣಿಗೆ ಬೀಳುತ್ತದೆಯೇನೋ? ಅವ ನನ್ನ ಪತ್ರವನ್ನು ಒಮ್ಮೆ ನೋಡಿದರೆ ಸಾಕಿತ್ತು ಎಂದು ದೇವರಿಗೆ ಹರಕೆ ಹೊತ್ತಿದ್ದೆ. 


ನನ್ನ ಪ್ರಾರ್ಥನೆ ಫಲಿಸಿದ ದಿನವದು. ಅಣ್ಣ ಬಂದು ನಿನಗೆ ಸಚಿನ್ ಲೆಟರ್ ಬರೆದಿದ್ದಾನೆ ಎಂದು ಲೆಟರ್ ಕೈಗಿತ್ತಾಗ ಕಣ್ಣಲ್ಲಿ ಆನಂದಭಾಷ್ಪ. ಅಲ್ಲಿರುವ ಅಕ್ಷರಗಳೇ ಕಾಣುತ್ತಿಲ್ಲ. ಇದೇನು ಕನಸು ಕಾಣುತ್ತಿದ್ದೇನೋ ಅಂತಾ ಅನಿಸಿತ್ತು. ಹೌದು... ನನ್ನ ಪತ್ರಕ್ಕೆ ಸಚಿನ್ ಉತ್ತರಿಸಿದ್ದ, ಅಷ್ಟು ಸಾಕು... ನನ್ನ ಪ್ರೀತಿ  ನಿಜ ಅಂತಾ ತೋರಿಸೋಕ್ಕೆ. ನೋಡಿದಿಯಾ, ಸಚಿನ್ ನನ್ನ ಪತ್ರ ಓದಿ ಉತ್ತರಿಸಿದ್ದಾನೆ ಎಂದು ಅಕ್ಕನಿಗೆ ಹೇಳಿದಾಗ ಯಾರೋ ನಿನ್ನನ್ನು ಫೂಲ್ ಮಾಡಿದ್ದಾರೆ ಅಂತಾ ಅವಳ ನೆಕ್ಸ್ಟ್ ಕಾಮೆಂಟ್. ಇಲ್ಲ ನಿಜವಾಗಿಯೂ ಅದು ಸಚಿನ್ ಕಳುಹಿಸಿದ ಪತ್ರವೇ. ಜೊತೆಗೆ ಸಚಿನ್ ಆಟೋಗ್ರಾಫ್ ಮಾಡಿದ ಚಿಕ್ಕ ಫೋಟೋ. ಇದೆಲ್ಲಾ ನೋಡಿದ ಮೇಲೆ ಏನು ಮಾಡಬೇಕೆಂದು ತಿಳಿಯದ ಸ್ಥಿತಿ. ಆವಾಗಲೇ ನನ್ನ ತಮ್ಮ ಪೇಪರ್್ನವರಿಗೆ ತಿಳಿಸೋಣ ಅಂತಾ ಹೇಳಿ ನಮ್ಮೂರಿನ ಸಂಜೆ ದೈನಿಕವೊಂದಕ್ಕೆ ಫೋನ್ ಮಾಡಿಯಾಗಿತ್ತು. ಅಲ್ಲಿನ ಸಂಪಾದಕರು ನಮ್ಮ ಆಪ್ತರೇ. ಅವರಿಗದು ಹಾಟ್ ನ್ಯೂಸ್. ಹಳ್ಳಿಯ ಹುಡುಗಿಗೆ ಸಚಿನ್ ಲೆಟರ್ ಬರೆದಿದ್ದಾನೆ ಎಂದು ಸಂಜೆಯ ಪತ್ರಿಕೆಯಲ್ಲಿ ನನ್ನ ಫೋಟೋ ಜೊತೆಗೆ ಸಚಿನ್ ಲೆಟರ್ ಪ್ರಕಟವಾಗಿತ್ತು. ಮರುದಿನ ಮಲಯಾಳಂ ಪತ್ರಿಕೆಗಳಾದ ಮಾತೃಭೂಮಿ, ಮಲಯಾಳ ಮನೋರಮಾ, ದೇಶಾಭಿಮಾನಿ ಪತ್ರಿಕೆಗಳಲ್ಲಿಯೂ ಸುದ್ದಿ ಬಂತು. ಎಲ್ಲರೂ ಲೆಟರ್್ನಲ್ಲಿ ಏನು ಬರೆದಿದ್ದೆ ಹೇಗೆ ಬರೆದಿದ್ದೆ ಅಂತಾ ವಿಚಾರಿಸುವವರೇ. ಅಂದ ಹಾಗೆ ಅದೂ ಒಂದು ಲವ್್ಲೆಟರ್, ನನ್ನ ಫಸ್ಟ್ ಲವ್ ಲೆಟರ್ ಅಂತಾ ಹೇಳಬಹುದು. ಈವರೆಗೆ ಅದೆಷ್ಟೊ ಬಹುಮಾನಗಳು ನನಗೆ ಲಭಿಸಿವೆ ಆದರೆ ಸಚಿನ್ ಬರೆದ ಆ ಪತ್ರ ಮಾತ್ರ ಅವುಗಳಿಗಿಂತ ಮಿಗಿಲಾದದ್ದು. ಅದಕ್ಕೆ ಅದನ್ನು ಲ್ಯಾಮಿನೇಟ್ ಮಾಡಿ ಜಾಗರೂಕತೆಯಿಂದ ಇಟ್ಟು ಕೊಂಡಿದ್ದೇನೆ. ಎಂಟು ವರ್ಷಗಳ ಹಿಂದೆ ಸಚಿನ್ ನನಗೆ ಬರೆದ ಪತ್ರವನ್ನು ನೋಡುತ್ತಾ ಇದ್ದರೆ ಏನೋ ಒಂದು ಪುಳಕ. ಒಟ್ಟಿನಲ್ಲಿ ಅವನ ಬಗ್ಗೆ ಹೆಚ್ಚಿಗೆ ಏನೂ ಹೇಳಬೇಕಾಗಿಲ್ಲ. 


He is simply Great! 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಬ್ಬ ತುಂಬಾ ಲಕ್ಕಿ .... !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಭಿನಂದನೆಗಳು.. ನಮ್ರತೆ ಇರುವವರೇ ಆ ಪರಿ ಎತ್ತರಕ್ಕೇರಬಲ್ಲರು.. ಅಲ್ಲವೇ ರಶ್ಮಿ? ಕೇವಲ ಪ್ರತಿಭೆ ಇದ್ದರಷ್ಟೇ ಸಾಲದು.. ದೂರದ ಅಭಿಮಾನಿಯೊಬ್ಬರ ಪತ್ರಕ್ಕೆ ಈ ರೀತಿ ಸ್ಪಂದಿಸಿದ, ಪತ್ರ ಬರೆಯಲು ತಡವಾದುದಕ್ಕೆ ಕ್ಷಮೆ ಯಾಚಿಸಿದ ಈ ಮಹಾನ್ ಆಟಗಾರನ ನಮ್ರತೆ... ಸಿಂಪ್ಲೀ ಅಮೇಝಿಂಗ್! ಇಪ್ಪತ್ತು ವರ್ಷಗಳ ಕಾಲ ಸತತ ಅತ್ಯುಚ್ಛ ಮಟ್ಟದಲ್ಲಿ ಆಡಿದ ನಂತರವೂ, ಇಂದಿಗೂ ಸಚಿನ್ ನೆಟ್ ಪ್ರಾಕ್ಟೀಸ್ ಗೆ ಎಲ್ಲಕ್ಕಿಂತ ಮೊದಲು ಹಾಜರಾಗುವ ಹಾಗೂ ಎಲ್ಲರ ನಂತರವೇ ನಿರ್ಗಮಿಸುವ ಸುದ್ದಿಯನ್ನು ಕೇಳಿದಾಗ, ಆತನ ಅದ್ಭುತ ಯಶಸ್ಸಿನ ಗುಟ್ಟು ಅರ್ಥವಾಯ್ತು. ಸಚಿನ್ ಇಸ್ ಇಂಡೀಡ್ ಗ್ರೇಟ್..ನೋ, ದ ಗ್ರೇಟೆಸ್ಟ್!! ಸುಂದರ ಲೇಖನಕ್ಕಾಗಿ ಧನ್ಯವಾದಗಳು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೊಟ್ಟಿಕಿಚ್ಚು ತಡೀಲಿಕ್ಕೆ ಆಗವಲ್ದು ಏನಾರ್ ಔಷಧಿ ಅದ ಏನು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಒಂದು ಪತ್ರ ಬರಿರಲ...ಸಚಿನ್ ಇಂದ ನಿಮಿಗೊಂದು ಪತ್ರ ಬರಂಗೆ... ಅವಾಗ್ಲೆ ಹೊಟ್ಟೆ ಕಿಚ್ಚು ಹೋಗದು..ಹಿ ಹಿ ಹಿ ಹಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿ, ಹೊಟ್ಟೆ ಕಿಚ್ಚಿಗೆ ಕಣ್ಣೀರ್ ಸುರಿಸು, ಕೇಳಿದ್ದೀರಾ? ತುಂಬಾ ದಿನಗಳಿಂದ ಪತ್ತೆಯೇ ಇರಲಿಲ್ಲವಲ್ಲ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿಯವರೆ.. ವಾವ್.. ಅಬಿನಂದನೆಗಳು..!! ನಿಮಗೆ ಸಿಗಬೇಕಾಗಿತ್ತು ಸಿಕ್ಕಿದೆ... yeah... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿ ( " ರೆಶ್ಮಿ" ) ಬಹಳ ಸ೦ತೋಷವಾಯ್ತು ನಿಮ್ಮ ಆ ಪತ್ರಕ್ಕಿ೦ತ ಈ ಪತ್ರ. ಕಾರಣ ನಿಮ್ಮ ಅ೦ದಿನ ಸ೦ತೋಷ ನೀವು ಮತ್ತೆ ಮತ್ತೆ ಮೆಲುಕು ಹಾಕುವ ರೀತಿ !!!!!!!!!!!! ಅದೊ೦ದು ಅನುಭವ ಅಲ್ವ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆ ನೀಡಿದ ಎಲ್ಲಾ ಸಂಪದಿಗರಿಗೂ ಧನ್ಯವಾದಗಳು. -ರಶ್ಮಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.