ಬಾಲ್ಯದ ಫ್ಲಾಶ್ ಬ್ಯಾಕ್...

5

ಇನ್ನೇನು ಶಾಲೆ ಆರಂಭವಾಗುತ್ತದೆ. ಏನೆಲ್ಲಾ ತಯಾರಿ ಆಗ್ಬೇಕು ನೋಡಿ. ಹತ್ತು ಪುಟದಷ್ಟು ಕಾಪಿ ಬರೆದು ಕೊಂಡು ಬನ್ನಿ, ಮನೆ ಹಿತ್ತಿಲಲ್ಲಿ ಸಿಗುವ ಔಷಧೀಯ ಸಸ್ಯಗಳ ಎಲೆ ಸಂಗ್ರಹ ಮಾಡಿ ಆಲ್ಬಂ ಮಾಡಿ...ನೀವು ರಜೆಯಲ್ಲಿ ಏನೆಲ್ಲಾ ಮಾಡಿದ್ದೀರಿ? ಎಂಬುದನ್ನು ಕ್ಲಾಸಿನಲ್ಲಿ ಹೇಳ್ಬೇಕು..ಹೀಗೆ ಬೇಸಿಗೆ ರಜೆ ಆರಂಭವಾಗುವ ಮುನ್ನ ಟೀಚರ್ ಹೇಳಿದ ಎಲ್ಲಾ ಆದೇಶಗಳು ಥಟ್ಟನೆ ನೆನಪು ಬರುವುದು ಶಾಲೆ ಆರಂಭವಾಗಿವುದಕ್ಕಿಂತ ಎರಡು ದಿನಗಳ ಮುಂಚೆಯೇ. ಅದರೆಡೆಯಲ್ಲಿ ಅಜ್ಜಿ ಮನೆಗೆ ಹೋಗಿಲ್ಲ, ಮಾವನ ಮನೆಗೆ ಹೋಗಿಲ್ಲ ಎಂದು ಗೋಳಿಡುತ್ತಿದ್ದ ನಾವುಗಳನ್ನು ರಜೆ ಮುಗಿಯುತ್ತಾ ಬರುತ್ತಿದ್ದಂತೆ ಅಪ್ಪ ಕರೆದುಕೊಂಡು ಹೋಗಿ ಅದೇ ದಿನ ಸಂಜೆ ಕರೆದು ತರುತ್ತಾರೆ. ಯಾಕಂದ್ರೆ ಆ ದಿನ ರಾತ್ರಿ ಕುಳಿತು 10 ಪುಟ ಕಾಪಿ ಬರೆಯಬೇಕಲ್ವಾ? ಇನ್ನು ಆಲ್ಬಂ ವಿಷಯ. ಅಲ್ಲಿಯವರೆಗೆ ಹಿತ್ತಿಲಲ್ಲಿ ಕಾಣಸಿಗುತ್ತಿದ್ದ ಔಷಧೀಯ ಗಿಡ ನಾವು ಹುಡುಕುವ ಹೊತ್ತಿಗೆ ನಾಪತ್ತೆಯಾಗಿರುತ್ತದೆ. ಕೊನೆಗೆ ಕೈಗೆ ಸಿಗುವುದು ಕೇವಲ ನಾಚಿಗೆ ಮುಳ್ಳು ಮಾತ್ರ. ಅದರ ಎಲೆಯನ್ನು ಲಾಂಗ್ ಬುಕ್್ಗೆ ಅಂಟಿಸಿ ಕೆಳಗೆ ಸ್ಕೆಚ್ ಪೆನ್ನಿನಲ್ಲಿ ನಾಚಿಕೆ ಗಿಡ ಎಂದು ಬರೆದದ್ದೂ ಆಯ್ತು. ಕೆಲವೊಮ್ಮೆ ಅಂಟು ಆರದೆ ಇದ್ದು, ಪುಸ್ತಕವನ್ನು ಮುಚ್ಚಿಟ್ಟಿದ್ದರೆ ಆ ಪುಟದ ಇನ್ನೊಂದು ಮುಗ್ಗುಲಲ್ಲಿ ನಾಚಿಕೆ ಮುಳ್ಳಿನ ಒಂದಷ್ಟು ಎಲೆಗಳು ಅಂಟಿಕೊಂಡು ಬಿಡುತ್ತಿದ್ದವು. ಈ ಆಲ್ಬಂ ತಯಾರಿಸಬೇಕು ಎಂದಾದರೆ ನಾವು ಸಂಗ್ರಹಿಸಿದ ಎಲೆಗಳನ್ನು ಮೊದಲು ಪುಸ್ತಕದ ನಡುವೆ ಇಟ್ಟು ಬಾಡುವಂತೆ ಮಾಡಬೇಕು. ಹಾಗಾದರೆ ಮಾತ್ರ ಅವು ಚೆನ್ನಾಗಿ ಕಾಣುತ್ತಿತ್ತು. ಕೊನೆ ಘಳಿಗೆಯಲ್ಲಿ ಎಲೆ ಸಂಗ್ರಹಿಸುವುದೇ ಕಷ್ಟ ಇನ್ನು ಬಾಡಿಸಲು ಸಮಯ ಎಲ್ಲಿದೆ ಹೇಳಿ? ಅಂತೂ ಅದನ್ನು ಹೊಗೆ ಮೇಲೆ ಹಿಡಿದೋ,ಇಸ್ತ್ರಿ ಪೆಟ್ಟಿಗೆಯ ಅಡಿಯಲ್ಲಿಟ್ಟೋ ಬಾಡಿಸಿದ್ದೂ ಆಯ್ತು. ಅಪ್ಪ, ಅಣ್ಣ, ಅಕ್ಕ, ಅಮ್ಮ ಹೀಗೆ ಎಲ್ಲರ ಸಹಾಯದಿಂದ ಶಾಲೆಗೆ ಹೊರಡುವ ಹೊತ್ತಿಗೆ ಆಲ್ಬಂ ರೆಡಿಯಾಗುತ್ತಿತ್ತು.

 

ಇನ್ನು ಶಾಲಾ ಯುನಿಫಾರ್ಮ್. ಪ್ರಾಥಮಿಕ ಶಾಲೆಯಲ್ಲಿ ನಮಗೆ ಇದ್ದದ್ದು ನೀಲಿ ಬಿಳಿ. ಅದನ್ನು ಯುನಿಫಾರ್ಮ್ ಅಂತಲೋ ಸಮವಸ್ತ್ರ ಅಂತಲೋ ಹೇಳುತ್ತಿರಲಿಲ್ಲ. ನೀಲಿ ಬಿಳಿ ಅಷ್ಟೇ. ಆ ಗ್ರಾಮದಲ್ಲಿ ಇರುವುದೇ ಒಂದು ದರ್ಜಿ, ಮೇ ತಿಂಗಳ ಅಂತ್ಯಕ್ಕೆ ಅವನೂ ಬ್ಯುಸಿ, ಮದುವೆಗೆ ಅಂಗಿ ಹೊಲಿಸಲಿಕ್ಕೆ ಹೋದರೆ ಮಕ್ಕಳ ಯುನಿಫಾರ್ಮ್ ಇದೆ ಈವಾಗ ಹೊಲಿದು ಕೊಡಲು ಆಗುತ್ತಿಲ್ಲ ಅಂತಾ ಹೇಳುತ್ತಿದ್ದ. ಆಮೇಲೆ ಯುನಿಫಾರ್ಮ್ ಬಟ್ಟೆಯನ್ನು ಪೇಟೆಗೆ ಹೊತ್ತುಕೊಂಡು ಹೋಗಬೇಕಾಗುತ್ತಿತ್ತು. ನಾವು ಚಿಕ್ಕವರಿರುವಾಗ ಅಪ್ಪನ ಗೆಳೆಯರೊಬ್ಬರು (ದರ್ಜಿ) ಯುನಿಫಾರ್ಮ್ ಹೊಲಿದು ಕೊಡುತ್ತಿದ್ದರು. ಕಾಸರಗೋಡಿನಲ್ಲೇ ಉತ್ತಮ ದರ್ಜಿ ಎಂದು ಹೆಸರು ಪಡೆದ ಅವರು ನಮಗೆ ಹೊಲಿಯುತ್ತಿದ್ದದು ಬಾಂಬೆ ಡಾಯಿಂಗ್್ನ ಯುನಿಫಾರ್ಮ್. ಆವಾಗ ಬಾಂಬೆ ಡಾಯಿಂಗ್್ನ ಯುನಿಫಾರ್ಮ್ ಹಾಕುವ ಮಕ್ಕಳು ನಮ್ಮ ಶಾಲೆಯಲ್ಲೇ ಇರಲಿಲ್ಲ. ಕ್ಲಾಸು ಮುಗಿದು ಬೇಸಿಗೆ ರಜೆ ಆರಂಭವಾಗುವಷ್ಟರಲ್ಲಿ ಎಲ್ಲರ ಯುನಿಫಾರ್ಮ್ ಬಣ್ಣ ಕಳೆದು ಕೊಳ್ಳುತ್ತಿದ್ದರೆ, ನಮ್ಮದು ಹೊಸ ಬಟ್ಟೆಯಂತೆ ಇರುತ್ತಿತ್ತು. ಅದಕ್ಕೆಲ್ಲಾ ಕಾರಣ ನಮ್ಮ ಅಮ್ಮ ಮತ್ತು ಉಜಾಲಾ :)

 

ವರ್ಷಕ್ಕೆರಡು ಯುನಿಫಾರ್ಮ್ ಅದನ್ನು ಹೊಲಿಯಲು ಕರೆದುಕೊಂಡು ಹೋಗುವ ವೇಳೆ ಅಪ್ಪ ಹೇಳುತ್ತಿದ್ದರು, ನಾವು ಶಾಲೆಗೆ ಹೋಗುವ ಸಮಯದಲ್ಲಿ ಇದ್ದದ್ದು ಕೇವಲ ಒಂದೇ ಒಂದು ನೀಲಿ ಬಿಳಿ. ಅದು ಚಡ್ಡಿ ಅಂಗಿ. ಹೊಲಿಯಬೇಕಾದರೆ ಅವರ ಅಮ್ಮ (ನನ್ನಜ್ಜಿ) ಹೇಳ್ತಿದ್ರಂತೆ. ಚಡ್ಡಿ, ಅಂಗಿ ಸ್ವಲ್ಪ ದೊಡ್ಡದಾಗಿಯೇ ಇರಲಿ, ಮುಂದಿನ ವರ್ಷಕ್ಕೂ ಹಾಕುವಂತಿರಬೇಕು ಅಂತಾ. ಕೆಲವೊಮ್ಮೆ ಅಣ್ಣನ ಅಂಗಿಯೇ ಸಾಕು ಎಂದು ಹೇಳುತ್ತಿದ್ದರು. ಹೊಸ ದೊಗಳೆ ಚಡ್ಡಿ , ಅಂಗಿ ಹಾಕಿಕೊಂಡು ಬಟ್ಟೆಯ ಚೀಲ ಹೊತ್ತು ಶಾಲೆಗೆ ಹೋಗುತ್ತಿದ್ದ ದಿನಗಳನ್ನು ಅಪ್ಪ ನೆನಪಿಸಿಕೊಳ್ಳುತ್ತಾರೆ. ಮದುವೆಗೆ ಹೋಗುತ್ತಿದ್ದರೂ ಅದೇ ನೀಲಿ ಬಿಳಿ...ಸಂಜೆ ಬಂದು ಅದನ್ನು ಒಗೆದು ಒಣಗಿಸಿದ್ರೆ ಆಯ್ತು..ಮತ್ತೆ ಬೆಳಗ್ಗೆ ಅದನ್ನೇ ಹಾಕಿಕೊಂಡು ಹೋಗಬೇಕು. ಮಳೆಗಾಲದಲ್ಲಂತೂ ರಗಳೆ. ಒದ್ದೆ ಬಟ್ಟೆ ಒಣಗುವುದಾದರೂ ಹೇಗೆ ಅದಕ್ಕೆ ಅಡುಗೆ ಕೋಣೆಯಲ್ಲಿ ಅಥವಾ ಮಾಡಿನ ಕೆಳಗೆ ಉದ್ದಕ್ಕೆ ಹಗ್ಗ ಕಟ್ಟಲಾಗುತ್ತಿತ್ತು. ಹೊಗೆಯ ತಾಪಕ್ಕೆ ನಮ್ಮೆಲ್ಲಾ ಅಂಗಿ ಒಣಗುತ್ತಿತ್ತು. ಅದು ಧರಿಸಿದರೆ ಹೊಗೆಯ ನಾತ ಬೇರೆ. ಪರ್ಫ್ಯೂಮ್ ಅಂತಾ ಇದ್ದದ್ದು ದುಬೈ ಬ್ಯಾರಿಗಳ ಮನೆಯಲ್ಲಿ ಮಾತ್ರ ಅಂತೆ. ಹಾಗಂತ ಕ್ಲಾಸಿನಲ್ಲಿ ಯಾರೂ ದೂರುತ್ತಿರಲಿಲ್ಲ. ಎಲ್ಲರೂ ಸಮಾನ ಸ್ಥಿತಿಯವರಾಗಿದ್ದರಿಂದ ಅಲ್ಲಿ ಮೇಲು ಕೀಳು ಎಂಬ ಪ್ರಶ್ನೆಯೇ ಬರುತ್ತಿರಲಿಲ್ಲ. ಅದೂ ಅಪ್ಪ ಪ್ಯಾಂಟ್ಸ್ ಅಂತಾ ಹಾಕಿದ್ದು 9 ನೇ ಕ್ಲಾಸಿನಲ್ಲಿ ಅಂತೆ. ಹತ್ತನೇ ಕ್ಲಾಸಿನಲ್ಲಿ ಮುಂಡು (ಧೋತಿ) ಉಟ್ಟದ್ದನ್ನು ಹೇಳುವಾಗ ಅಪ್ಪನ ಮುಖದಲ್ಲಿ ಪುಳಕ. ವಾಚ್ ಕಟ್ಟಿದ್ದು ಕೆಲಸಕ್ಕೆ ಕಾಲಿಟ್ಟಾಗ. ಆದ್ರೆ ನನ್ನ ಅಣ್ಣ 5 ನೇ ಕ್ಲಾಸಿನಲ್ಲಿ ಪ್ಯಾಂಟ್ಸ್ ಧರಿಸಿದ್ದ, ಮತ್ತು ತಮ್ಮ 2 ನೇ ಕ್ಲಾಸಿನಲ್ಲೇ ಪ್ಯಾಂಟ್ಸ್ , ವಾಚ್ ಬೇಕೆಂದು ಹೋರಾಟ ಮಾಡಿದ್ದ.

 

ಅಮ್ಮನ ಕಥೆಯೂ ಇಂತದ್ದೇ. ಒಂದು ಯುನಿಫಾರ್ಮ್ ಇನ್ನೊಂದು ಕಲರ್ ಡ್ರೆಸ್್ನಲ್ಲಿ ಆಕೆ ಶಾಲೆ ಕಲಿತದ್ದು. ಬಣ್ಣ ಬಣ್ಣದ ದೊಡ್ಡ ಹೂವಿನ ಲಂಗ ಮತ್ತು ಹುಕ್ಸ್ ಇರುವ ಜಾಕೆಟ್ ..ಇದು ಶುಭ ಸಮಾರಂಭಕ್ಕಿರುವ ಡ್ರೆಸ್. ಮದುವೆ ಆದ್ರೂ, ಸೀಮಂತ, ಗೃಹ ಪ್ರವೇಶ ಏನೇ ಆದ್ರೂ ಈ ಕಲರ್ ಡ್ರೆಸ್ ಯುನಿಫಾರ್ಮ್್ನಂತೆ ಬಳಕೆಯಾಗುತ್ತಿತ್ತು. ಹೈಸ್ಕೂಲ್್ನಲ್ಲಿ ದಾವಣಿ, ಅದರ ನಂತರ ಸಾರಿ ಹೇಗೆ ಅವರ ತೊಡುಗೆಗಳು ಹಂತ ಹಂತವಾಗಿ ಬದಲಾವಣೆ ಕಂಡಿವೆ. ಪುಸ್ತಕವೂ ಹಾಗೇ...ಪಠ್ಯ ಪುಸ್ತಕ ಅಕ್ಕನದ್ದೋ, ಅಣ್ಣನದ್ದೋ ಆಗಿರುತ್ತಿತ್ತು, ನೋಟ್ಸ್ ಬುಕ್ ಕೂಡಾ ಹಾಗೇ ಲೋ ಕ್ವಾಲಿಟಿಯದ್ದು. ಅದಕ್ಕೆಲ್ಲಾ ಬೈಂಡ್ ಹಾಕಲು ಬೈಂಡ್ ಪೇಪರ್ ಬಳಸುತ್ತಿರಲಿಲ್ಲ, ಅಂಗಡಿಯಿಂದ ಸಾಮಾನು ಕಟ್ಟಿ ತಂದ ದಪ್ಪದ ಕಂದು ಪೇಪರ್, ಕ್ಯಾಲೆಂಡರ್ ಎಲ್ಲಾ ಪುಸ್ತಕಗಳ ಹೊದಿಕೆಯಾಗುತ್ತಿತ್ತು. ಖಾಕಿ ಚೀಲ ಅದು ಎಷ್ಟು ವರ್ಷವಾದರೂ ತುಂಡಾಗುತ್ತಲೇ ಇರಲಿಲ್ಲ. ಮರದ ಸ್ಲೇಟನ್ನು ಒಡೆಯದಂತೆ ನೋಡಿಕೊಳ್ಳಬೇಕು, ಪೆನ್ಸಿಲ್ ಸವೆದು ಕೊನೆಗೆ ಹಿಡಿಯಲು ಸಾಧ್ಯವಿಲ್ಲ ಎಂದಾದಾಗ 'ಓಟೆ' (ಹಳೇ ಸ್ಕೆಚ್ ಪೆನ್ನು)ಯೊಳಗೆ ಇಟ್ಟು ಬರೆಯುತ್ತಿದ್ದೆವು. ಒಂದೇ ಒಂದು ಶಾಯಿ ಪೆನ್ನು...ಹೀಗೆ ಎಲ್ಲವೂ ಲಿಮಿಟೆಡ್ ಆಗಿತ್ತು. ಆದರೆ ಅದರ ಖುಷಿ ಅನ್್ಲಿಮಿಟೆಡ್!

 

ನನ್ನ ಅಮ್ಮ ಅಪ್ಪ ಬಡತನದಲ್ಲಿ ಬದುಕು ಅರಳಿಸಿದವರು. ಅಪ್ಪ ಆಸ್ತಿ ಇಲ್ಲದೇ ಹತ್ತನೇ ಕ್ಲಾಸಿನ ನಂತರ ಆಸ್ತಿ ಸಂಪಾದನೆಗಾಗಿ ಹೊರಟರೆ, ಅಮ್ಮನ ಮನೆಯವರು ಆಸ್ತಿ ಇದ್ದರೂ ಮಿತವ್ಯಯದಲ್ಲೇ ಸಂತಸ ಕಂಡವರು. ಆದ್ರೆ ನಾವು ಅಪ್ಪ ಅಮ್ಮನಷ್ಟು ಕಷ್ಟ ಬಂದಿಲ್ಲ. ನಾವೀಗ ಅನುಭವಿಸುತ್ತಿರುವ ಈ ಸುಖದ ಹಿಂದೆ ಹೆತ್ತವರ ಬೆವರು ಇದೆ, ಅವರ ಕಣ್ಣೀರು ಮತ್ತು ಕನಸುಗಳು ನಮ್ಮ ಜೀವನವನ್ನು ಗಟ್ಟಿಯಾಗಿರುವಂತೆ ಮಾಡಿದೆ. ಈವಾಗ ನಮ್ಮನೇಲಿ ಶಾಲೆಗೆ ಹೋಗುವವರು ಯಾರೂ ಇಲ್ಲ. ಆದ್ರೆ ನೆರೆಹೊರೆಯ ಮಕ್ಕಳು ಶಾಲೆಗೆ ಹೋಗುತ್ತಿರುವುದನ್ನು ನೋಡಿದರೆ ನಮ್ಮ ಬಾಲ್ಯದ ನೆನಪು ಕಾಡುತ್ತದೆ. ಮಳೆಯಲ್ಲಿ ತೊಯ್ದು ಕೊಡೆ ಗಾಳಿಗೆ ಹಾರಿದ್ದು, ರೈನ್್ಕೋಟ್ ಬಟನ್ ಬಿಚ್ಚಲಾಗದೆ ಅಣ್ಣನಿಗಾಗಿ ಕಾದು ಗುಮ್ಮನಂತೆ ನಿಂತದ್ದು...ಗುಡುಗು ಮಿಂಚು ಬರುವಾಗ ಅಪ್ಪನ ಎದೆಗೊರಗೆ ನಿದ್ದೆ ಮಾಡಿದ್ದು, ಅಮ್ಮ ಮಾಡಿದ ಹಪ್ಪಳ...ಬಾಲ್ಯದ ಫ್ಲಾಶ್ ಬ್ಯಾಕ್ ಹೇಳಿದ್ದಷ್ಟೂ ಮುಗಿಯಲ್ಲ ಅಲ್ವಾ?...

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (8 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಶ್ಮಿ ಅವರೇ ಶಾಲೆಯ ದಿನಗಳನ್ನು ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿ ನೀಲಿ-ಬಿಳಿಯ ಸಂಭ್ರಮ ಇಂದು ದಿನಕ್ಕೆರಡು ಬ್ರಾಂಡೆಡ್ ಬಟ್ಟೆ ತೊಟ್ಟರು ಬರದು. ಉನಿಫಾರ್ಮ್ ಹಾಕಿ ಮಳೆಯಲ್ಲಿ ನೆನೆಯುತ್ತ ಬಂದು ಮನೆಯಲ್ಲಿ ಒಲೆಯಹಿಂದೆ ಒದ್ದೆಯಾದ ನೋಟ್ಸ್ ಪುಸ್ತಕಗಳನ್ನು ಒಣಗಿಸಿದ ದಿನಗಳು ಅಚ್ಚಳಿಯದ ನೆನಪು. ನೆನೆದ ತಲೆ ಕೂದಲನ್ನು ಒರಸಿ ಆಲಂಗಿಸಿದ ಅಮ್ಮನ ಆ ಬಿಸಿ ಅಪ್ಪುಗೆಯನ್ನು ಮತ್ತೆ ನೆನಪಿಸಿದಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಡತನದಲ್ಲಿರುವವರಿಗೆ ಬಡತನವೆ೦ಬ ಒ೦ದೇ ನೋವು.. ಶ್ರೀಮ೦ತರಿಗೆ ಮಿಕ್ಕೆಲ್ಲ ನೋವು.. ಬಡತನ, ಬಾಲ್ಯ ಗಳಿಸಿಕೊಟ್ಟ ನೆನೆಪುಗಳು ಶ್ರೀಮ೦ತವಾಗಿರುತ್ತವೆ.. ಒಳ್ಳೆಯ ಲೇಖನ.. ಅಭಿನ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ನಿಮ್ಮ ಶಾಲೆಯ ದಿನದ ಅನುಭವಗಳು, ನನಗೆ ನೆನಪಿರುವಂತೆ ಪ್ರಾಥಮಿಕ ಓದುವಾಗ ಮೂಡಿಗೆರೆ ಹತ್ತಿರದ ಒಂದು ಹಳ್ಳಿಯಲ್ಲಿದ್ದೆವು, ಆಗೆಲ್ಲೆ ಹುಡುಗರ ಬಟ್ಟೆ ಅಂದರೆ ಖಾಕಿ ನಿಕ್ಕರ್ ಮತ್ತು ಮೇಲೊಂದು ಶರ್ಟ ಆಗಿ ಹೋಯಿತು ಸಾಮ್ರಾಜ್ಯ, ಅಲ್ಲಿ ಮಳೆಗಾಲದಲ್ಲಿ ಒಂದು ಮಜ ನಮ್ಮಮ್ಮ ಆ ಬಟ್ಟೆಗಳನ್ನು ಒಗೆದು ಹಾಕುತ್ತಿದ್ದರು, ಆದರೆ ಅದು ಏನು ಮಾಡಿದರು ಒಣಗುತ್ತಲೆ ಇರಲಿಲ್ಲ, ಮೂರು ಮೂರು ದಿನ ಕಳೆದರು ಸೂರ್ಯದರ್ಶನವಿಲ್ಲ, ಹಾಗಾಗಿ ನಿಕ್ಕರ್ ಗಳು ಒಣಗುವ ಬದಲು ಮೇಲೆ ಬಿಳಿ ಬಣ್ಣದ ಬೂಜು (ಬೂಷ್ಟ್) ಹಿಡಿಯುತ್ತಿತ್ತು, ಅದಕ್ಕೆ ನಮ್ಮ ಮನೆಯಲ್ಲಿ ಇದ್ದಲಿನ ಒಲೆಗೆ ಕೆಂಡ ಹಾಕಿ ಅದರ ಮೇಲೆ ದೊಡ್ಡ ಬಿದಿರಿನ ಬುಟ್ಟಿ ಮುಚ್ಚಿ, ಮೇಲೆ ನಮ್ಮ ನಿಕ್ಕರ್ ಗಳನ್ನು ಹಾಕುತ್ತಿದ್ದರು, ಒಣಗುತ್ತಿತ್ತು ಆದರೆ ಧರಿಸಿದರೆ ಎಂತದೊ ಹೊಗೆಯ ವಾಸನೆ ! :-) -ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮೆಲ್ಲರ ಮೆಚ್ಚುಗೆಗೆ ಧನ್ಯವಾದಗಳು ರಶ್ಮಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮತ್ತೊಮ್ಮೆ ಬಾಲ್ಯ ನೆನಪಿಗೆ ಬಂತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.