ಲಾಸ್ಟ್ ಬೆಂಚ್ ಲೀಲೆ...

4.2

ಎಲ್ಲಾ ಅಪ್ಪ ಅಮ್ಮಂದಿರಂತೆ ನನ್ನ ಅಪ್ಪ ಅಮ್ಮನಿಗೂ ನಾನು ಫಸ್ಟ್ ಬೆಂಚ್ ಸ್ಟೂಡೆಂಟ್ ಆಗಿರಬೇಕೆಂಬ ಆಸೆ. ಆದಾಗ್ಯೂ, ಕಲಿಕೆಯಲ್ಲಿ ಚುರುಕು (ಆವಾಗ) ಮತ್ತು ನನ್ನ ಎತ್ತರ ಕಡಿಮೆ ಇದ್ದುದರಿಂದ :)ಪ್ಲಸ್ ಟು ವರೆಗೆ ನಾನು ಫಸ್ಟ್ ಬೆಂಚ್್ನಲ್ಲೇ ಕುಳಿತದ್ದು. ಏನಿದ್ದರೂ ಕ್ಲಾಸಿನಲ್ಲಿ ಫಸ್ಟ್ ಬೆಂಚ್ ಸ್ಟೂಡೆಂಟ್ ಅಂತಾ ಹೇಳಿಕೊಳ್ಳುವುದರಲ್ಲಿ ಏನೋ ಒಂದು ರೀತಿ ಹೆಮ್ಮೆ. ಫಸ್ಟ್ ಬೆಂಚ್ ಅಂದರೆ ವಿಐಪಿಗಳ ಸೀಟು, ಅಲ್ಲಿ ಕುಳಿತುಕೊಳ್ಳುವವರೆಲ್ಲಾ ಬುದ್ಧಿವಂತರು, ಲಾಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುವವರೆಲ್ಲರೂ ದಡ್ಡರು ಎಂಬುದು ಅಂಬೋಣ. ಅದಕ್ಕಾಗಿಯೇ ವಿದ್ಯಾರ್ಥಿ ದೆಸೆಯಲ್ಲಿ ಫಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುವುದೆಂದರೆ ಏನೋ ಸಾಧನೆ ಮಾಡಿದಂತೆ. ಜೊತೆಗೆ ಹೆತ್ತವರಿಗೂ ತಮ್ಮ ಮಕ್ಕಳು ಫಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುತ್ತಿದ್ದಾರೆ ಎಂದು ಹೇಳಲು ಹೆಮ್ಮೆಯ ವಿಷಯವೇ. ಫಸ್ಟ್ ಬೆಂಚಿನಲ್ಲಿ ಕುಳಿತುಕೊಳ್ಳುವವರೆಲ್ಲಾ ಜಾಣರು, ಅವರು ನಗುವುದು ಕಡಿಮೆ ಎಂದೆಲ್ಲಾ ಲಾಸ್ಟ್ ಬೆಂಚ್್ನವರು ಕಿರಿಕ್ ಮಾಡುತ್ತಾರೆ. ಅದು ನಿಜವೂ ಹೌದು.


ನಾನೇನು ಕಲಿಕೆಯಲ್ಲಿ ಹಿಂದೆ ಬಿದ್ದಿಲ್ಲ, ಆದ್ರೆ ಪ್ಲಸ್ ಟು ವರೆಗೆ ಫಸ್ಟ್ ಬೆಂಚ್್ನಲ್ಲಿ ಕುಳಿತು ಪಾಠ ಕೇಳುವುದು ಬೋರು ಬೋರು ಎನಿಸಿತ್ತು. ಕಾಲೇಜಿಗೆ ಕಾಲಿಟ್ಟ ಮೇಲೆ ಏನೋ ಸಮಾಧಾನ. ಇನ್ಮುಂದೆ ಯಾರು ನೀನು ಈ ಬೆಂಚ್್ನಲ್ಲೇ ಕುಳಿತುಕೊಳ್ಳಬೇಕೆಂದು ಹೇಳಲ್ಲ. ನಮ್ಮದು ಇಂಜಿನಿಯರಿಂಗ್ ಕಾಲೇಜು, 40 ಮಂದಿಯಿರುವ ಒಂದು ಕ್ಲಾಸು ರೂಮಿನಲ್ಲಿ ಹಿಂದಿನ ಬೆಂಚ್್ನಲ್ಲಿ ಕುಳಿತುಕೊಳ್ಳುವುದೆಂದರೆ ಅದರ ಮಜವೇ ಬೇರೆ. ಆವಾಗಲೇ ಗೊತ್ತಾದದ್ದು ಲಾಸ್ಟ್ ಬೆಂಚ್ ಫ್ರೀಡಂ ಅಂದ್ರೆ ಏನೂಂತ. ಈ ವರೆಗೆ ಅಚ್ಚರಿಯ ಕೂಪವಾಗಿದ್ದ ಲಾಸ್ಟ್ ಬೆಂಚ್್ನಲ್ಲಿ ನಾನು ನನ್ನ ಗೆಳತಿಯರಾದ ಶಿಮ್, ಶಾಮ್ (ಶಿಮ್ನಾ ಮತ್ತು ಶಮೀಮಾ ಹೆಸರನ್ನು ಶಾರ್ಟ್ ಮಾಡಿ) ಜೊತೆಯಾಗಿ ಕುಳಿತು ಮಾಡಿದ ತರ್ಲೆಗಳಿಗೆ ಲೆಕ್ಕವೇ ಇರಲ್ಲ. ನಮ್ಮ ಕ್ಲಾಸಿನಲ್ಲಿ ಹುಡುಗರು ಮತ್ತು ಹುಡುಗಿಯರಿಗೆ ಒಟ್ಟಿಗೆ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳಬಹುದಾಗಿತ್ತು ಮಾತ್ರವಲ್ಲದೆ ಒಂದೊಂದು ದಿನ, ಅಲ್ಲದಿದ್ದರೆ ಒಂದೊಂದು ಪಿರಿಯಡ್್ನಲ್ಲಿ ತಮ್ಮ ಜಾಗ ಬದಲಿಸಿ ಎಲ್ಲಿ ಬೇಕಾದರೂ ಕುಳಿತುಕೊಳ್ಳುವ ಸ್ವಾತಂತ್ರ್ಯವಿರುತ್ತಿತ್ತು. ಆದರೆ ನಾವು ಮೂವರು ಎಂದೂ ಆ ಲಾಸ್ಟ್ ಬೆಂಚ್ ಬಿಟ್ಟು ಬೇರೆ ಎಲ್ಲಿಗೂ ಹೋಗಲ್ಲ. ಲಾಸ್ಟ್ ಬೆಂಚ್ ಅಂದರೆ ಶಿಮ್, ಶಾಮ್, ರ್ಯಾಶ್ (ನನ್ನ ಹೆಸರು)ರ ಅಪ್ಪನ ಸೊತ್ತು ಅದಕ್ಕೆ ಅವರು ಅದನ್ನು ಬಿಟ್ಟು ಕದಲಲ್ಲ ಎಂದು ಇತರ ವಿದ್ಯಾರ್ಥಿಗಳು ನಮ್ಮನ್ನು ತಮಾಷೆ ಮಾಡುತ್ತಿದ್ದರು.

ಲಾಸ್ಟ್ ಬೆಂಚ್್ಗೆ ಒಂದು ಅಸಾಧಾರಣ ಶಕ್ತಿಯಿದೆ ಎಂದು ಅರಿವಾದದ್ದು ಅಲ್ಲಿ ಕುಳಿತಾಗಲೇ. ಫಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುವಂತೆ ಮುಖ ಗಂಟಿಕ್ಕಿ ಕುಳಿತುಕೊಳ್ಳಬೇಕಾಗಿಲ್ಲ. ಏನಾದರೂ ಸೈಡ್ ಬ್ಯುಸಿನೆಸ್ (ಏನೂಂತಾ ಮಾತ್ರ ಕೇಳ್ಬೇಡಿ) ಮಾಡಬೇಕಾದರೆ ಭಯ ಪಡಬೇಕಾಗಿಲ್ಲ. ಪಾಠ ಬೋರು ಎಂದೆನಿಸಿದರೆ ನೋಟ್ ಬುಕ್್ನ ಕೊನೆಯ ಪೇಜಲ್ಲಿ ಏನಾದರೂ ಗೀಚ ಬಹುದು. ನೋಟ್ ಬುಕ್ ಸಿಕ್ಕದಿದ್ದರೆ ಡೆಸ್ಕೇ ನಮ್ಮ ಡ್ರಾಯಿಂಗ್ ಬೋರ್ಡು. ನಿದ್ದೆ ಬಂದರೂ ಆರಾಮವಾಗಿ ನಿದ್ದೆ ಮಾಡಬಹುದು. ಆದರೂ ಕೆಲವು ಟೀಚರ್್ಗಳು ಲಾಸ್ಟ್ ಬೆಂಚಿನ ಮೇಲೆ ಕಣ್ಣು ನೆಟ್ಟಿರುತ್ತಾರೆ. ನಮ್ಮೊಬ್ಬರು ಇಕಾನಾಮಿಕ್ಸ್ ಟೀಚರ್ ಇದ್ರು, ಅವರಂತೂ ನಮ್ಮ ಲಾಸ್ಟ್ ಬೆಂಚ್್ನಲ್ಲಿರುವ (ನಾವು)ತ್ರಿಮೂರ್ತಿಗಳನ್ನೇ ನೋಡಿಕೊಂಡು ಪಾಠ ಮಾಡುತ್ತಿದ್ದರು. ಅವರ ಕಣ್ಣು ತಪ್ಪಿಸಿ ನಮ್ಮಲ್ಲಿ ಯಾರಾದರೂ ಒಬ್ಬರು ಏನಾದರೂ ತರ್ಲೆ ಮಾಡಿದ್ರೆ ಸಾಕು, 'ಲಾಸ್ಟ್ ಬೆಂಚ್ ಗರ್ಲ್ಸ್ ಸ್ಟಾಂಡಪ್್' ಅಂತಾ ಹೇಳ್ತಿದ್ರು. ಆವಾಗ ನಾವು ತ್ರಿಮೂರ್ತಿಗಳು ಎದ್ದು ನಿಲ್ಲುತ್ತಿದ್ದೆವು. ಮತ್ತೆ ನಾವು ಎದ್ದು ನಿಂತುಕೊಂಡಿರುವುದನ್ನು ನೋಡಿ ಅವರಿಗೂ ಕಿರಿಕಿರಿ ಆದಾಗ 'ಯು ಕ್ಯಾನ್ ಸಿಟ್್' ಅಂತಾ ಹೇಳುತ್ತಿದ್ದರು. ಇನ್ನು ಕೆಲವು ಟೀಚರ್್ಗಳು ಮೆಲ್ಲ ಮಾತಾಡುವವರು. ಅದಕ್ಕಾಗಿ ಕಿವಿಯರಳಿಸಿ ಪಾಠ ಕೇಳ್ಬೇಕು ಎಂಬ ಒಂದು ವಿಷ್ಯ ಬಿಟ್ರೆ ಬೇರೇನೂ ತೊಂದರೆಯಿರಲ್ಲ. ಮಾತ್ರವಲ್ಲದೆ ಟೀಚರ್ ಬೋರ್ಡಿನತ್ತ ತಿರುಗಿದರೆ ಕಿಸಕ್ಕನೆ ನಗುವ, ಕಿಟಿಕಿಯ ಮೂಲಕ ಹೊರಗೆ ಏನೆಲ್ಲಾ ನಡೆಯುತ್ತಿದೆ ಎಂಬೆಲ್ಲಾ ವಿಷಯಗಳನ್ನು ನೋಡುವ ಭಾಗ್ಯ ದಕ್ಕಿರುವುದೇ ನಮಗೆ. ಇನ್ನೂ ಕೆಲವು ಟೀಚರ್್ಗಳು ತರ್ಲೆ ಮಾಡಿದರೆ ಹುಡುಗರ ಜೊತೆ ಅವರ ಬೆಂಚ್್ನಲ್ಲಿ ಕುಳಿತುಕೊಳ್ಳುವಂತೆ ಹೇಳುತ್ತಿದ್ದರು. ಅಲ್ಲಿ ಕುಳಿತರೇನು? ಇಲ್ಲಿ ಕುಳಿತರೇನು? ಹುಟ್ಟು ಗುಣ ಬೆಟ್ಟ ಹತ್ತಿದರೂ ಬಿಡದು ಎಂಬಂತೆ ಅಲ್ಲಿ ಡೀಸೆಂಟಾಗಿ ಕುಳಿತಿರುವ ಹುಡುಗರನ್ನೂ ತರ್ಲೆ ಮಾಡಿ ಅವರಿಗೂ ತರ್ಲೆ ಎಂಬ ಬಿರುದು ಬರುವಂತೆ ಮಾಡುತ್ತಿದ್ದೆವು. ಆಮೇಲೆ ಇನ್ನು ಈ ತ್ರಿಮೂರ್ತಿಗಳಿಂದಾಗಿ ಇಡೀ ಕ್ಲಾಸೇ ತರ್ಲೆ ಆಗುವುದು ಬೇಡ ಎಂದು ತದನಂತರ ಯಾವ ಟೀಚರ್ ಕೂಡಾ ಈ ಪ್ರಯೋಗಕ್ಕೆ ಮುಂದಾಗಿಲ್ಲ.


ಕ್ಲಾಸಿನ ಹಿಂದಿನ ಬೆಂಚಿನಲ್ಲಿ ಕುಳಿತಿದ್ದರೂ ನಾವು ಕಲಿಕೆಯಲ್ಲಿ ದಡ್ಡರೆನಿಸಿಕೊಂಡಿಲ್ಲ. ಈ ಕಾಲೇಜು ಲೈಫ್ ಮತ್ತೆಂದೂ ಸಿಗಲ್ಲ ಅದನ್ನು ಆದಷ್ಟು ಎಂಜಾಯ್ ಮಾಡಬೇಕು ಜೊತೆಗೆ ಕಲಿಕೆಯೂ ಮುಖ್ಯ ಆದ ಕಾರಣ ಎರಡನ್ನೂ ಸರಿತೂಗಿಸಿಕೊಂಡು ಹೋಗಬೇಕು ಎಂಬುದು ನಮ್ಮ ಯೋಜನೆಯಾಗಿತ್ತು. ನಾನಂತೂ ನನಗೆ ಬೋರು ಎಂದೆನಿಸಿದ ವಿಷಯಗಳನ್ನು ಪಾಠ ಮಾಡುತ್ತಿದ್ದರೆ ಕವಿತೆ ಕವನ ಏನಾದರೂ ಗೀಚುತ್ತಲೇ ಇರುತ್ತಿದ್ದೆ. ಇಲ್ಲವಾದರೆ ಕಣ್ಣು ತೆರೆದೇ ಯಾವುದೋ ಸ್ವಪ್ನ ಲೋಕದಲ್ಲಿ ವಿಹರಿಸುತ್ತಿದ್ದೆ. ಹಾಗೆ ಬರೆದ ಕವನಗಳೆಷ್ಟೋ ನಂತರ ಉತ್ತಮ ಪಡಿಸಿ ಕಾಲೇಜು ಭಿತ್ತಿಪತ್ರಿಕೆಯಲ್ಲಿ ಸ್ಥಾನ ಕಂಡುಕೊಂಡಿತ್ತು. ಆನಿಮೇಷನ್ ಕ್ಲಾಸಿನಲ್ಲಿ ಕನಸು ಕಾಣುತ್ತಾ ಬರೆದ ಆ ಕಥೆ ವರ್ಷ ಕಳೆದು ಪ್ರಕಟವಾದಾಗ ಜನರ ಮೆಚ್ಚುಗೆಯನ್ನು ಗಳಿಸಿತ್ತು. ಅದಿರಲಿ ಬಿಡಿ, ಇನ್ನು ಕ್ಲಾಸಿಗೆ ಟೀಚರ್ ಬರದೇ ಇರುವ ಸಂದರ್ಭ ಬಂದರೆ ಹೆಚ್ಚಿನ ವಿದ್ಯಾರ್ಥಿಗಳು ಆ ಸಬ್ಜೆಕ್ಟ್್ನ ಬಗ್ಗೆ ಚರ್ಚೆ ನಡೆಸುವುದೋ, ಓದುವುದೋ ಮಾಡುತ್ತಿದ್ದರು. ಆದರೆ ನಾವುಗಳು ಅಂತಾಕ್ಷರಿ ಆಡುತ್ತಾ ಇಲ್ಲವಾದರೆ ಸಿನಿಮಾ ಕಥೆಯೊಂದನ್ನು ಹೆಣೆಯುತ್ತಿದ್ದೆವು. ಅದು ಅಂತಿಂಥಾ ಡಬ್ಬಾ ಸಿನಿಮಾ ಕಥೆಯಲ್ಲ, ನಮ್ಮ ಚಿತ್ರದಲ್ಲಿ ಶಾರುಖ್, ಹೃತಿಕ್, ಮಮ್ಮುಟ್ಟಿ, ಮೋಹನ್್ಲಾಲ್ ಮೊದಲಾದವರೇ ಹೀರೋಗಳು, ನಾವೇ ಹೀರೋಯಿನ್್ಗಳು. ನಾವೇ ಪ್ರೊಡ್ಯೂಸರ್್ಗಳು, ಡೈರೆಕ್ಟರ್್ಗಳು ಎಲ್ಲಾ. ಇಂತಹಾ ಕ್ರಿಯೇಟಿವಿಟಿ ಐಡಿಯಾಗಳು ಹೊಳೆಯಬೇಕಾದರೆ ಲಾಸ್ಟ್ ಬೆಂಚೇ ಸೂಕ್ತವಾದ ಸ್ಥಳ. ನಾವು ತರ್ಲೆಗಳೆಂದು ನಮ್ಮನ್ನು ಯಾರೂ ದೂರುತ್ತಿರಲಿಲ್ಲ. ನಾವು ಮೂವರೂ  ಕ್ಲಾಸು ಬಂಕ್ ಮಾಡಿದ ದಿನ ಕ್ಲಾಸು ಭಣ ಭಣ ಅಂತಾ ಅನಿಸುತ್ತೆ, ಎಲ್ಲವೂ ಬೋರು ಬೋರು ಎಂದು ಕ್ಲಾಸಿನ ಬುದ್ಧಿಜೀವಿಗಳು ಹೇಳಿದ್ದು ನಮಗೆ ಸಿಕ್ಕಿದ ಕಾಂಪ್ಲಿಮೆಂಟು.


 ಅಂದ ಹಾಗೆ ನಾವು ಲಾಸ್ಟ್್ಬೆಂಚ್ ಮೆಂಬರ್ಸ್ ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ಈವಾಗ ಎಂಜಾಯ್ ಮಾಡಿ ಇಂಟರ್್ನಲ್ ಪರೀಕ್ಷೆ ಬಂದಾಗ ತಿಳಿಯುತ್ತೆ ಈ ಎಂಜಾಯ್್ಮೆಂಟಿನ ರಿಸಲ್ಟ್ ಎಂದು ಕೆಲವು ಟೀಚರ್್ಗಳು ಬೈಯ್ಯುತ್ತಿದ್ದರು. ಪರೀಕ್ಷೆ ಬಂದಾಗ ನಾವು ಹೇಗೋ ಕಷ್ಟ ಪಟ್ಟು ಕಲಿತು ನಮ್ಮ ಸ್ಥಾನ (ಮಾನ)ಉಳಿಸುತ್ತಿದ್ದೆವು. ಇದು ಮಾತ್ರವಲ್ಲದೆ ರಾಶಿ ರಾಶಿ ಅಸೈನ್್ಮೆಂಟ್್ಗಳು ಬೇರೆ. ಟೀಚರ್್ಗಳು ಏನೇ ಕೆಲಸ ಹೇಳಿದರೂ ಸರಿಯಾದ ಸಮಯಕ್ಕೆ ಅದನ್ನು ಮಾಡಿ ಮುಗಿಸುತ್ತಿದ್ದರಿಂದ ಸದ್ಯ ನಮ್ಮ ತರ್ಲೆಗಳ ಬಗ್ಗೆ ಮನೆಗೆ ದೂರು ಹೋಗುತ್ತಿರಲಿಲ್ಲ.. ನಾವು ಬಚಾವ್!. ಮೊದ ಮೊದಲು ನಾವು ಕ್ಲಾಸಿನಲ್ಲಿ ತರ್ಲೆ ಮಾಡಿದಾಗ ಸಿಕ್ಕಿ ಬಿದ್ದರೆ ಟೀಚರ್ ಮೊದಲು ಕೇಳುವ ಪ್ರಶ್ನೆ "ನೀನು ಮೆರಿಟ್ ಸೀಟಾ ಅಥವಾ ಪೇಮೆಂಟ್ ಸೀಟಾ? "ಮೆರಿಟ್ ಸೀಟ್ ಅಂದಾಗ 'ಓಕೆ ಸರಿ ಚೆನ್ನಾಗಿ ಕಲಿ' ಎಂದು ಹೇಳುತ್ತಾರೆ, ಪೇಮೆಂಟ್ ಅಂದ ಕೂಡಲೇ ನಿನಗೇನು ತಲೆ ಕೆಟ್ಟಿದಾ? ನಿನ್ನ ಅಪ್ಪ ಅಮ್ಮ ಅಷ್ಟೊಂದು ಹಣ ಖರ್ಚು ಮಾಡುವುದು ಸುಮ್ಮನೇನಾ? ಅಂತಾ ಬಾಯ್ತುಂಬ ಉಪದೇಶ ನೀಡುತ್ತಾರೆ. ಅಂತಿಮ ವರ್ಷ ತಲುಪಿದಾಗ ನಾವು ಏನು ಮಾಡಿದರೂ ಟೀಚರ್್ಗಳು ಯಾರೂ ಬೇಡ ಎನ್ನುತ್ತಿರಲಿಲ್ಲ. ಆದರೆ ಪ್ರೊಜೆಕ್ಟು, ಸೆಮಿನಾರು ಹೇಗೆ ಬ್ಯುಸಿಯಾಗಿರುವಾಗ ಹೆಚ್ಚಿನ ತುಂಟತನಗಳಿಗೆ ಸಮಯವೂ ಸಾಕಾಗುತ್ತಿರಲಿಲ್ಲ. ಅಂತೂ ಒಟ್ಟಿನಲ್ಲಿ ಆ ನಾಲ್ಕು ವರ್ಷಗಳು ಹೇಗೆ ಮುಗಿದವು ಅಂತಾ ಗೊತ್ತೇ ಆಗಲಿಲ್ಲ. ಕೊನೆಗೆ ಫೇರ್್ವೆಲ್ ಪಾರ್ಟಿ ಮುಗಿದು ಹಿಂತಿರುಗುವಾಗ ನಮ್ಮ ವಿಭಾಗದ ಮುಖ್ಯಸ್ಥರು ನಮ್ಮನ್ನು ಕರೆದು ಮಾತನಾಡಿಸಿ ನಿಮ್ಮ ಕ್ಲಾಸಿನ ಬಗ್ಗೆ ಚಿಂತಿಸುವಾಗ ಮೊದಲು ನನ್ನ ಮನಸ್ಸಲ್ಲಿ ಸುಳಿಯುವ ಚಿತ್ರ ನಿಮ್ಮದೇ 'Last bench Crakers...You Naughty Girls 'ಎಂದು ಹೇಳಿದಾಗ ಅದೆಷ್ಟು ಸಂತೋಷವಾಗಿತ್ತು ಗೊತ್ತಾ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (10 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

'ಹಿಂದಿನ ಸಾಲಿನ ಹುಡುಗರು ನಾವು' ಹಾಡು ನೆನಪಗ್ತಾ ಇದೆ. ನನಗಿಂತ ಸಾಲಿಮಠ್ ಇನ್ನೂ ಚೆನ್ನಾಗಿ ಹೇಳಬಲ್ಲ , ನಮ್ಮ ಲಾಸ್ಟ ಬೆಂಚ ತರ್ಲೆಗಳನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಲೇಜಿನಲ್ಲಿ "ಕೊನೆ ಬೆಂಚಿನವರು" ಎಂದು ಹೇಳಿಕೊಂಡು ಹೆಮ್ಮೆ ಪಡುವವರೇ ಹೆಚ್ಚುತ್ತಿದ್ದಾರೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಲೇಜಿನಲ್ಲಿ "ಕೊನೆ ಬೆಂಚಿನವರು" ಎಂದು ಹೇಳಿಕೊಂಡು ಹೆಮ್ಮೆ ಪಡುವವರೇ ಹೆಚ್ಚುತ್ತಿದ್ದಾರೆ. >>>> :) ಅದೊಂಥರ ಚಟ...... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಬ್ಲಿಕ್ ಆಗಿ ಮರ್ಯಾದೆ ತೆಗೀತಿದಿಯಾ ಸಿಸ್ಯಾ? ಇರ್ಲಿ ಅದರ ಚಿಂತೆ ಯಾಕೆ? ನಾನು ಶಿವಮಲ್ಲಪ್ಪ ಸರ್‍ ದು ಮಿಮಿಕ್ರಿ ಮಾಡ್ತಿದ್ದುದು, ಬಸಮ್ಮ ಮೇಡಮ್ ಕ್ಲಾಸ್ ನಲ್ಲಿ ಕಥಾಸ್ಪರ್ಧೆ, ಆದಿತ್ಯ ಶರ್ಮಾನ ಮಲ್ಟಿಪಲ್ ಮೀನಿಂಗ್ ಹಾಡುಗಳು, ಕೆಬಿಯ ಡಯಲಾಗ ಡೆಲಿವರಿ, ಉಲ್ಲಿ ಫೀಲ್ಡ್ಸ್ ಕ್ಲಾಸ್ ನಲ್ಲಿ ಉತ್ತರ ಕೊನೆ ಬೆಂಚಿನವರೆಗೆ ಪಾಸ್ ಮಾಡುತ್ತಿದ್ದುದು, ಅಟೆಂಡೆನ್ಸ್ ಹೇಳುವಾಗ ಉಲ್ಲಿ ಬೆಲ್ಟ್ ಹಿಡಿದು ಎಳೆಯುತ್ತಿದ್ದುದು, ಪಮ್ಮಿಯ ಎಡಪಂಥೀಯ ಚಿಂತನೆಗಳು, ಆಸ್ಮಾ ಮೇಡಮ್ ಕ್ಲಾಸಿನಲ್ಲಿ ಅವರದೇ ಮಿಮಿಕ್ರಿ, ನೀನು ಯಾವಾಗಲೂ ಕಥೆಸ್ಪರ್ಧೆಯಲ್ಲಿ ಮೊದಲ ಪ್ರೈಝ್! ಸೈನ್ ತೀಠಾ, ಕಾಸ ತೀಟಾ ..... ಎಸಿಟಿ ಡಿಸಿಟಿ ಎಫ್‌ಎಫ್ಟಿ...ಮಂತ್ರ ಎಷ್ಟು ಸೂಪರ ಹಿಟ್ ಆಗಿತ್ತು, ನೀನೇ ಹೇಳಿದ್ದು! ನೆನಸಿಕೊಂಡ್ರೆ ಆಹಾ! ಎಂಥಾ ಸಿಹಿದಿನಗಳು! ನೆನಪಿದೆಯಾ ಯಾವ ದಿಲ್ಲಿ ಬಾದಷಹನಿಗೆ ನಾನೇನು ಕಮ್ಮಿ ದಿನವೂ ಬದಲಾಗುತ್ತಾಳಂತೆ ಮಹಾರಾಣಿ ಅಲ್ಲಿ ಇಲ್ಲಿಯೂ ಅಷ್ಟೇ ಆದರೆ ಕ್ಯಾಲೆಂಡರಿನಲ್ಲಿ! ನೆನಪಿಸಿದ್ದಕ್ಕೆ ಥ್ಯಾಂಕ್ಸ್ ಮಗಾ! Proud to be an LLB (Lord of Last Bench)!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರ್ಷ, ನೀವೂ ಲಾಸ್ಟ್ ಬೆಂಚ್ ಪ್ರಭುಗಳಾಗಿದ್ದಿರಿ ಎಂದು ಗೊತ್ತಿರಲಿಲ್ಲ.!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ನೀವು ಹೇಳಿದಂತೆ ಹಿಂದಿನ ಬೆಂಚ್ ಮಜವೇ ಬೇರೆ...ಯಾರು ಬೇಗ ಬರ್ತಾರೋ ಅವ್ರಿಗೆ ಲಾಸ್ಟ್ ಬೆಂಚನಲ್ಲಿ ಕೂತ್ಕೊಳೋ ಭಾಗ್ಯ ಸಿಗ್ತಿತ್ತು.. ಹೇಗಾದ್ರು ಕಷ್ಟ ಪಟ್ಟು ಹೋಗ್ತಿದ್ದೆ...ಬೆಳಿಗ್ಗೆ ಬೇಗ ಏಳಲು ಆಗದ ದಿನ ಎದುರು ಬೆಂಚ್ನಲ್ಲಿ ಕೂತ್ಕೊಳೋ ಕರ್ಮ... ಎದುರು ಬೆಂಚ್ನಲ್ಲಿ ಕೂತು ಲಾಸ್ಟ್ ಬೆಂಚ್ ಲೀಲೆ ತೋರಿಸಿ, ಹೊರಗೆ ಹಾಕಿಸಲ್ಪಟಿದ್ದೆ ... ಇದನ್ನ ಓದಿ ಎಲ್ಲ ನೆನಪಾಯ್ತು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಜೇಂದ್ರ, ಹುಡ್ಗರು ಲಾಸ್ಟ್ ಬೆಂಚಿನಲ್ಲಿದ್ದರೆ ತರ್ಲೆ ಮಾಡುವುದು ಜಾಸ್ತಿ. ನೀವೂ ಎಂಜಾಯ್ ಮಾಡಿದ್ದೀರಿ ಅಂತಾ ತಿಳಿದು ಸಂತೋಷವಾಯ್ತು. ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್ ಕಣ್ರೀ ರಶ್ಮಿ, ನಮ್ಮ ಕಾಲೇಜು ದಿನಗಳ ಲಾಸ್ಟ್ ಬೆಂಚ್ ಆಟಗಳ್ನೆಲ್ಲಾ ಟಕ್ಕಂಥ ನೆನಪಿಸಿಬಿಟ್ರಿ, ನಾವು ಐದೂ ಜನ, ಯಾವಾಗಲೂ, ಪಿಯುಸಿಯಿಂದ ಡಿಗ್ರಿ ಮುಗಿಯುವ ತನಕ ಆ ಲಾಸ್ಟ್ ಬೆಂಚಿಗೇ ಅಂಟ್ಕೊಂಬಿಟ್ಟಿದ್ವಿ. ನಮಗೆ "ಲಾಸ್ಟ್ ಬೆಂಚ್ ಲೋಫರ್ಸ್" ಅಂತ ದೊಡ್ಡ ಬಿರುದು ಬೇರೆ ಕೊಟ್ಬಿಟ್ಟಿದ್ರು, ಅದೇನು ಕೀಟಲೆ, ಅದೆಷ್ಟು ಪೇಪರ್ ಮಿಸೈಲ್ಸು, ಅದೆಷ್ಟು ಬೈಗುಳಗಳು, ಅದೆಷ್ಟು ಲೈನುಗಳು, ಓಹೋ, ಮುಗಿಯೋದೇ ಇಲ್ಲ ಅನ್ಸುತ್ತೆ. ಆದ್ರೂ ಇಡೀ ದೇಶಾನೆಲ್ಲ ನಮ್ಮ ಸೈಕಲ್ಗಳಲ್ಲಿ ಸುತ್ತಿ ಬಂದು, ಎನ್.ಸಿ.ಸಿಯಲ್ಲಿ ರಾಜ್ಯ ಮಟ್ಟದಲ್ಲಿ ಬೆಸ್ಟ್ ಅನ್ನಿಸ್ಕೊಂಡು, ಡಿಗ್ರಿಯಲ್ಲಿ ನಾಲ್ಕು ಸೆಕೆಂಡ್ ಕ್ಲಾಸು, ಒಂದು ಫಸ್ಟ್ ಕ್ಲಾಸು ತೊಗೊಂಡಾಗ, ಇಡೀ ಕಾಲೇಜೇ ನಮ್ಮನ್ನ ಹೊಗಳ್ತಿದ್ದಾಗ, ಜನ್ಮ ಸಾರ್ಥಕ ಅನ್ನಿಸಿತ್ತು. ಅದು ನಿಜಕ್ಕೂ "ಗೋಲ್ಡನ್ ಲೈಫ್". ಮತ್ತೆ ಬರಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಲೇಜಿನಲ್ಲಿ ಇಂಟರೆಸ್ಟಿಂಗ್ ಸಬ್ಜೆಕ್ಟ್ಸ್ ಇದ್ದರೆ ಮಾತ್ರ ಮೊದಲ ಬೆಂಚಿನ ಮೊದಲ ಸೀಟು. ಇಲ್ಲವಾದಲ್ಲ ಕೊನೆ ಬೆಂಚಿನ ಕೊನೆಯ ಸೀಟ್ . ಅಲ್ಲಿ ನಾವು ಮಾಡುತ್ತಿದ್ದ ತರಲೆಗಳು ಕಾಣಬಾರದೆಂದು ಡಿಪ್ಲಮೋ ಮೊದಲ ವರ್ಷದಲ್ಲಿದ್ದ ಇಂಗ್ಲೀಷ್ ಕಮ್ಮ್ಯೂನಿಕೇಶನ್ ಎಲ್ಲಾ ಪಿರಿಯಡ್‍ನಲ್ಲಂತೂ ಕೊನೆಯ ಸೀಟ್ ಬಿಟ್ಟಿದ್ದೇ ಇಲ್ಲಾ. ಎಷ್ಟೋ ಬಾರಿ ಕಿಟಕಿಯ ಪಕ್ಕ ಕೂತು ಹೊರಗಿನವರ ಜೊತೆ ಮಾತಾಡುತ್ತಲೋ ಇಲ್ಲವೇ ಚುಕ್ಕಿ ಸೇರಿಸುವ ಆಟವಾಡುತ್ತಲೋ ಆ ಪಿರಿಯಡನ್ನು ಪಾಸ್ ಮಾಡುತ್ತಿದ್ದೆವು. ಪಾಪ ಅ ಲೆಕ್ಚರರ್ ವಯಸಾದವರು . ತುಂಬಾ ಗೋಳು ಹೊಯ್ದುಕೊಳ್ಳುತ್ತಿದ್ದೆವು. ಈಗ ತಪ್ಪು ಮಾಡುತ್ತಿದ್ದೆನೇನೋ ಅನ್ನಿಸುತ್ತಿದೆ ಒಂದು ಚೆಂದದ ನೆನಪನ್ನು ತಂದ ಬರಹಕ್ಕೂ ರಶ್ಮಿ ನಿಮಗೂ ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಒ೦ದಷ್ಟು ಹಳೆಯ ನೆನಪುಗಳು ಸುಳಿದು ಹೋದವು. ನಾನು ಮ೦ಗನ ಹಾಗೆ ಫಸ್ಟ್ ಬೆ೦ಚಿನಿ೦ದ ಕೊನೆ ಬೆ೦ಚಿನ ತನಕ ಹಾರುತ್ತಿದ್ದೆ.ಎಲ್ಲೆ೦ದರೆಲ್ಲಿ ಕೂರೂದು ನನ್ನ ಸ್ವಭಾವ.ಡಿಫ್ರೆನ್ಸಿಯೇಶನ್ನು ಇನ್ಟಿಗ್ರೇಶನ್ನು ಇದ್ದಾಗ ಫಸ್ಟ್ ಬೆ೦ಚ್ ಯಾಕೇ೦ದ್ರೆ ಕೊನೆ ಖಾಲು ಗ೦ಟೆ ನಮ್ಮನ್ನ ಡಯಾಸ್ ಮೇಲೆ ಕರೆಯೋರು ಲೆಕ್ಕ ಮಾಡ್ಲಿಕ್ಕೆ .ಒದೆರಡು ಪ್ರಾಬ್ಲ೦ ಹಾಕಿ ಸಾಲ್ವ್ ಮಾಡಿ ಜೋರಾಗಿ ಹೇಳ್ಕೋತಾ ಮಾಡ್ಬೇಕು ಅ೦ತ ಬೇರೇ ಹೇಳೋರು.ನಾನು ಲೆಕ್ಕ ಬಿಡಿಸೋದ್ರಲ್ಲಿ ಫಸ್ಟ್ ಆದ್ರೆ ಧ್ವನಿ ಮೊದಲಿನ ಮೂರನೇ ಬೆ೦ಚ್ ದಾಟಿ ಮು೦ದೆ ಹೋಗ್ತಿರ್ಲಿಲ್ಲ.ಆದ್ರೂ ಪದೇ ಪದೇ ಸರ್ ನನ್ನನ್ನೇ ಕರೆಯೋರು ನನಗೆ ಕಾ೦ಪಿಟಿಟರ್ ಅ೦ದ್ರೆ ಒಬ್ಬಳು ಹುಡುಗಿ (ಹೆಸರು ಬೇಡ) ಸಾರಿ ಒಬ್ರಲ್ಲ ಇಬ್ರು ಅಮೇಲೆ ಜಗ (ನನ್ನ ಖಾಸಾ ಗೆಳೆಯ) ಮೇಷ್ಟ್ರು "ಹೂ ವಿಲ್ ಸಾಲ್ವ್ ಥಿಸ್" ಅ೦ತ೦ದ ತಕ್ಷಣ ನಾಲ್ಕೂ ಕೈಗಳು ಒಮ್ಮೆಲೆ ಏಳ್ತಿದ್ದವು.ಜಗ ಒ೦ಥರಾ ಮೂಡಿ ಸಾಲ್ವ್ ಮಾಡಕ್ಕೆ ಬ೦ದ್ರೂನೂ ಕೈ ಎತ್ತಾ ಇರ್ಲಿಲ್ಲ. ಕೊನೆಗೆ ನಾವೇ ಮೂರು ಜನ. ವಿಚಿತ್ರ ಅ೦ದ್ರೆ ನಾನು ಜಗ ಹುಡುಗೀರ ಜೊತೆ ಮಾತಾಡ್ತಿರ್ಲಿಲ್ಲ.(ಸೆಕೆ೦ಡ್ ಇಯರ್ ತ೦ಕ) ಆ ಹುಡುಗೀರು ಹಿ೦ದಿನ ಬೆ೦ಚಿನವ್ರು.ಮಾತು ಮಾತು ಮಾತು ಸಖತ್ ಮಾತುಗಾರ್ತಿಯರು.ಅಷ್ಟೇ ಮ್ರುದು ಸ್ವಭಾವದವ್ರು.ಬಿಡಿ, ಅ ಮಾತು ಬೇಡ ಈಗ.ನಮಗೆ ಲಾಸ್ಟ್ ಬೆ೦ಚ್ ಅ೦ದ ತಕ್ಷಣ ಆ ಹುಡುಗಿಯರೇ ಕಣ್ಮು೦ದೆ ಮನಸ್ಮು೦ದೆ ಹಾದು ಹೋಗ್ತಾರೆ. ಕ೦ಪ್ಯೂಟರ್ ಕ್ಲಾಸಿನಲ್ಲಿ ನಾನು ಹಿ೦ದಿನ ಬೆ೦ಚ್ .ಸೆಮಿನಾರ್ಗಳಾದಾಗ ಹಿ೦ದಿನ ಬೆ೦ಚಿನಿ೦ದ ಡಯಾಸ್ ತ೦ಕ ಬರೋದು ಅ೦ದ್ರೆ ಅದೊ೦ಥರಾ ಠೀವಿ ಗತ್ತು ಹೆಮ್ಮೆ. ಬೆ೦ಚಿನ ಮೇಲೆಲ್ಲಾ ಪ್ರೇಮ ಗೀತೆಗಳು ಚಿನ್ಹೆಗಳು ನಿವೇದನೆಗಳು.ಏನೆಲ್ಲಾ ಇರ್ತಿದ್ವು? ಹರೀಶ ಆತ್ರೇಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಇಂಜಿನಿಯರಿಂಗ್ ಓದುತ್ತಿರುವಾಗ ೪ ವಿಷಯಗಳ ತರಗತಿಗಳಲ್ಲಿ ಫಸ್ಟ್ ಬೆಂಚ್ ಸದಾ ಕಿಕ್ಕಿರಿದು ತುಂಬಿರುತ್ತಿತ್ತು. ಹುಡುಗರಿಗೆ ಇದ್ದದು ೨ ಅಡ್ಡ ಸಾಲು,ಹುಡುಗಿಯರಿಗೆ ಮಿಕ್ಕ೧ ಸಾಲು, ಇದು ಅನೂಚನವಾಗಿ ನಡೆದು ಬಂದಿದ್ದರೂ ಆ ವಿಶೇಷ ತರಗತಿಗಳಲ್ಲಿ ಯಾವಾಗಲೂ ಹುಡುಗರೇ ಮುಂದು, ಹಿಂದೆ ಕೂರಲು ಒಪ್ಪದ ಹುಡುಗಿರನ್ನು ಒಪ್ಪಿಸಲು ತಲೆಯಲ್ಲಿ ಇದ್ದಬದ್ದ ಬುದ್ದಿಯನೆಲ್ಲಾ ಖರ್ಚು ಮಾಡಬೇಕಾಗಿ ಬರುತ್ತಿತ್ತು, ನಮ್ಮ ಕನ್ವಿನ್ಸಿಂಗ್ ಸ್ಕಿಲ್ಲ್ಗಳು ಓರೆಗೆ ಹಚ್ಚಲ್ಪಡುತ್ತಿದ್ದವು, ತೀರ ಹಟಮಾರಿ ಹುಡುಗಿಯರನ್ನು ನಾಲ್ಕೈದು ಜನ ಹುಡುಗರು ಸೇರಿ ಬೆಂಚ್ ಸಮೇತ ಎತ್ತಿ ಹಿಂದೆ ಇಟ್ಟು ಬರುತ್ತಿದ್ದೆವು. ಇಷ್ಟೆಲ್ಲಾ ಕಷ್ಟಪಡಲು ಕಾರಣ ನಮ್ಮ ಅಧ್ಯಾಪಕಿ ಶೀಬ, ರಮ್ಯ ,ರಕ್ಷಿತಾ ಇಬ್ಬರನ್ನೂ ಕಲೆಸಿ ಮೇಲೆ ಅಂದ್ರಿತಾರೇಯನ್ನ ಚುಮುಕಿಸಿದಂತ್ತಿದ್ದ ಚೆಲುವೆ ಆಕೆ. ಆ ಒಂದು ಗಂಟೆ ಇಡೀ ಹುಡುಗ ಸಂಕುಲ ಧ್ಯಾನಮಗ್ನ, ತರಗತಿ ಮುಗಿಸಿ ಆಕೆ ಹೊರಟರೆ ನಮ್ಮ ಕಣ್ಣುಗಳು ಗೇಟಿನ ತನಕ ದಾಟಿಸಿ ಬಿಟ್ಟು ಬರಲಾರದ ದುಃಖದಲ್ಲಿ ವಾಪಾಸ್ ಬರುತ್ತಿದ್ದವು. ವಿರಹದ ಬೇಗೆ ತಡೆಯಲಾರದೇ ಹಿಂದಿನ ಬೆಂಚ್ಗಳಿಗೆ ಹೋಗಿ ಕೂತು ಸಮಾದಾನ ಮಾಡಿ ಕೊಳ್ಳೋಣಾ ಅಂದ್ರೆ ನಮ್ಮೂರಿನ ಎಲ್ಲಾ ಗ್ರಾಮದೇವತೆಗಳೂ, 'ಪುರದಮ್ಮ' ,'ಉಡುಸಲಮ್ಮ', 'ದೇವಿರಮ್ಮ' ಇತ್ಯಾದಿ ಪಕ್ಕದೂರಿನ ಶಕ್ತಿ ದೇವಿಯರೂ,ಕಾಫಿ ತೋಟದ ಬೇಲಿಯಂಚಿನ ಚವ್ಡಿಗಳೂ ಹುಡುಗಿಯರ ಮೈಮೇಲೆ ಬಂದು ಜಾಗ ಬಿಡಲು ಓಪ್ಪುತ್ತಲೇ ಇರಲಿಲ್ಲ. ನಮ್ಮ ನಮ್ಮ ಶಕ್ತಿಯಾನುಸಾರ 'ಡೈರಿ ಮಿಲ್ಕ್',' ಫೈವ್ ಸ್ಟಾರ್',' ಕ್ರಂಚ್' ನೈವೇದ್ಯ ತೀರಿಸಿ, ಲ್ಯಾಬ್ ರೆಕಾರ್ಡ್ ಬರೆದು ಕೊಡುತ್ತೇವೆ ಅಂತ ಹರಕೆ ಹೊತ್ತಮೇಲೆ ನಮ್ಮ ಹಳೆಯ ಜಾಗಗಳು ವಾಪಸ್ ಸಿಗುತ್ತಿತ್ತು. ಎರೆಡು ವರ್ಷ ಹೀಗೆ ನಡೆದ ಮೇಲೆ ಒಂದು ಕೆಟ್ಟ ಗಳಿಗೆಯಲ್ಲಿ ಶೀಬ ಮದುವೆ ಗೊತ್ತಾಗಿ, ವಾರದಲ್ಲಿ ಮದುವೆಯೂ ಆದ ಮೇಲೆ ಮುಂದಿನ ಬೆಂಚುಗಳು ಯಥಾ ಪ್ರಕಾರ ಖಾಲಿ ಖಾಲಿ, ಮುಕ್ಕಾಲು ಪಾಲು ಹುಡುಗರು ಗಡ್ಡದಾರಿಗಳು.ಹತ್ತು ವರ್ಷವಾದರೂ ಇನ್ನು ಒಂದಿಬ್ಬರು ಆಕೆಯ ನೆನಪಿನಲ್ಲಿ ಚಿರವಿರಹಿಗಳು. ಥ್ಯಾಂಕ್ಸ್ ರೀ ರಶ್ಮಿ , ಲಾಸ್ಟ್ <-> ಫಸ್ಟ್ ಬೆಂಚ್ ಲೋಕವನ್ನು ಮತ್ತೊಮ್ಮೆ ನೆನಪಿಸಿದಕ್ಕೆ ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುದ್ರೋಹಿಗಳು! ಮೇಡ೦ಗೇ ಲೈನಾ !!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೇಮ ಕುರುಡಲ್ಲ್ವಾ ಸರ್ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು, ಅದು ಬಹು ದೊಡ್ಡ ದಡ್ಡ ಕುರುಡು!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೀತಿ ಕಲಿಸಿದವರೂ ಗುರುಗಳೇ ಅಲ್ಲವಾ ಸರ್ ? .. ಗುರುಗಳಿಗೆ ಲೈನ್ ಹೊಡೆಯೋದು .. ಲೈನ್ ಹೊಡೆದ ಮೇಲೆ ಗುರುಗಳಾಗೋದು ..ಒಂತರಾ 'ಉಪೇಂದ್ರ' ನ "ಏನಿಲ್ಲ ಏನಿಲ್ಲ ಏನೇನಿಲ್ಲ ? " ಹಾಡ್ ತರ ಇದಿಯಲ್ಲಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[qoute]ಪ್ರೀತಿ ಕಲಿಸಿದವರೂ ಗುರುಗಳೇ ಅಲ್ಲವಾ ಸರ್ ? .. ಗುರುಗಳಿಗೆ ಲೈನ್ ಹೊಡೆಯೋದು .. ಲೈನ್ ಹೊಡೆದ ಮೇಲೆ ಗುರುಗಳಾಗೋದು [/quote] ಬಡ್ಕೋಬೇಕು, ಸ್ವಲ್ಪ ಇತ್ಲಾಕಡೆ ಕೊಡ್ತೀರ ಸೊಲ್ಪ ಕೋಲ್ನ :P
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಡೆ ಬೆಂಚಿನ ಮಹಿಮೆಯೆ ಬೇರೆ ಬಿಡೀ:) ನಮ್ಮ ಡಿಗ್ರೀ ಕಾಲೇಜಿನಲ್ಲಿ ೨ ಬಾಗಿಲು ಇರುತ್ತ ಇದ್ದವು. ಹಾಜರಾತಿ ಆದ ಮೇಲೆ ಅಧ್ಯಾಪಕರು ಬೋರ್ಡ್ ಕಡೆ ತಿರುಗದ ಮೇಲೆ ಕಡೆಬೆಂಚುಗಳು ೧೦ ನಿಮಿಷದಲ್ಲಿ ಖಾಲಿ ಆಗುತ್ತಾ ಇತ್ತು :) ಒಮ್ಮೆ ಮರು ಹಾಜರಾತಿ ಹಾಕಿ ಓಡು ಹೋಡ ಹುಡುಗರೆಲ್ಲರ ಹೆಸರು ಕಾಲೇಜ್ ನೋಟಿಸ್ ಬೋರ್ಡ್ ಮೇಲೆ ಬಂದಿತ್ತು....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲಾಸ್ಟ್ ಬೆನ್ಚಿಗಿಂತ ಮಧ್ಯದ ಬೆನ್ಚುಗಳೇ ಸೇಫು ;) ನಾವಂತೂ ಮಧ್ಯದ ಬೆಂಚಿಗರು, ಮೊದಲೇ ಮೆಕಾನಿಕಲ್ ಬ್ರಾಂಚ್ ಇನ್ನ ತರಲೆಗೆ ಕೇಳ್ಬೇಕಾ, ಕಾರಿಡಾರ್ ಅಲ್ಲಿ ಓಡಾಡೋ ಹುಡ್ಗೀರ್ಗೆ ಕಿಚಾಯಿಸ್ತ ಇದ್ವಿ ಅಂತ ನಾವ್ ಕೂರ್ತ ಇದ್ದ ಜಾಗದಲ್ಲಿದ್ದ್ದ ಕಿಟಕಿಯನ್ನ ತೆಗಿದೆ ಇರೋ ಹಾಗೆ ಮೊಳೆ ಹೊಡೆದು ಬಿಟ್ರು,ಮಾರನೆ ದಿನ ಬೆಳಿಗ್ಗೆ ನಾವ್ ಬಂದು ಕಿಟಕಿ ಮುರಿದು ಕೆಳಗಿಟ್ಟಿದ್ವಿ ;) ಹಳೆ ನೆನಪುಗಳು ನೆನಪಿಸಿದ್ದಕ್ಕೆ ಥ್ಯಾಂಕ್ಸ್ ರಶ್ಮಿ :) ರಾಕೇಶ್ ಶೆಟ್ಟಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಆಸೆ ಪಟ್ಟು ಲಾಸ್ಟ್ ಬೆಂಚ್ ಗೆ ಹೋದರೂ, ಕರೆದು ಫಸ್ಟ್ ಬೆಂಚಲ್ಲಿ ಕೂರಿಸುತ್ತಿದ್ದ ಗುರುಗಳು ನೆನಪಾದರು. ನಾನು ಅಲ್ಲಿದ್ದರೆ ಇನ್ನೇನು ಹೆಚ್ಚು ಕಡಿಮೆ ಮಾಡುತ್ತೇನೋ ಎನ್ನುವ ಭಯ ಅವರಿಗೆ. ಮುಕುಂದನ್ ಸರ್ ಕ್ಲಾಸಲ್ಲಿ ಬಾಂಬ್ ಹಚ್ಚಿದ್ದು ನಾವಾದರೂ, ಕಾಲೇಜಿಂದ ಹೊರಹಾಕಿಸಿಕೊಂಡದ್ದು ಕೃಷ್ಣ. ಆಮೇಲೆ ಸ್ಟ್ರೈಕ್ ಮಾಡಿ ಅವನನ್ನು ಕಾಲೇಜಿಗೆ ಬರುವಂತೆ ಮಾಡಿದೆವೆನ್ನಿ. ನನಗೊಂದು ಪ್ರಿವಿಲೇಜ್ ಇತ್ತು. ನನ್ನನ್ನು ಗುರುಗಳು ಮೊದಲ ಬೆಂಚಿಗೆ ಬಾ ಎಂದು ಕರೆದಾಗ ಹೋಗಲು ನನಗಿಷ್ಟವಿಲ್ಲದಿದ್ದರೆ ಎದ್ದೂ ಹೋಗಬಹುದಾಗಿತ್ತು, ಒಂದಿಬ್ಬರ ಕ್ಲಾಸಿನಲ್ಲಿ.. ನೆನಪಿನ ದೋಣಿ ಹತ್ತಿಸಿದ್ದಕ್ಕೆ ಥ್ಯಾಂಕ್ಸ್ ರೀ ರಶ್ಮಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಟಿಪಟೂರಿನ ಕಲ್ಪತರು ಸೈನ್ಸ್ ಕಾಲೇಗಿನಲ್ಲಿ ಪಿಯು(ಪಿಸಿಎಮೀ) ಓದ್ಬೇಕಾದ್ರೆ ನಾನು, ಮೆಲ್ವಿನ್ನು, ಜಗ್ಗ, ಅಸೀಫ(ಲಾಸ್ಟ್ ಬೆನ್ಚ್ ದಡ್ಡ ಶಿಕಾಮಣಿಗಳು + ಅರಸಿಕೆರೆ ಇ೦ದ ಅಪ್ & ಡೌನ್ ಮಾಡ್ತಾ ಇದ್ದ್ವೀ) ಸೆರ್ಕೊ೦ಡ್ವೀ ಅ೦ದ್ರೆ ಆಯಾ ಕ್ಲಾಸಿನಿ೦ದ ಹೊರಕ್ಕೆ ಯಾವಾಗ್ಲೂ ಗ್ಯಾರ೦ಟೀ, ನಮ್ಮುಗಳ ಕಿತಾಪತಿಗಳು ಒ೦ದ ಎರಡಾ ನೂರೆ೦ಟು, ಒಬ್ಬಾತ ಕ್ಲಾಸ್ ಬ೦ಕ್ ಮಾಡ್ದಾ ಇಲ್ಲ ಬರ್ಲ್ಲಾ೦ದ್ರೆ, ನಮ್ಮಲ್ಯಾರಾದ್ರೂ ಒಬ್ಬ ಪ್ರಾಕ್ಸಿ ಹೇಳೊ ರೂಡಿಯಾಗೋಗಿತ್ತು(ಕರಗತ ಆಗಿತ್ತೂ ಅನ್ನಿ). ಫಿಸಿಕ್ಸನ ಶಿವರಾಜ್ ರವರ ಕ್ಲಾಸಿನಲ್ಲಿ ನಾನ್ ಮೆಲ್ವಿನ್ಗೆ ಪ್ರಾಕ್ಸಿ ಹೊಡೆದು ಮತ್ತು ಅವರ ಕೈಲಿ ಹಿಗ್ಗ ಮಗ್ಗಾ ಬೈಯಿಸಿಕೊ೦ಡದ್ದು, ಮತ್ತು ಪ್ರತೀ ಬುಧವಾರ ಬೆಳ್ಳ್ಬೆಳಿಗ್ಗೆ ಕೆಮಿಸ್ಟ್ರೀ ಡೆಪಾರ್ಟ್ಮೆ೦ಟ್ನ ಶಿರೂರ್ ರವರ ಪ್ರಕ್ಟಿಕಲ್ ಮತ್ತು ತೀಯರಿ ಕ್ಲಾಸಿನಲ್ಲಿ ಮಾಡಿರೊ ಚೇಶ್ಟೆಗಳು ಹೇಳತೀರದು, ಎಷ್ಟು ಸಲ ನಮ್ಮನ್ನ ಹೊರಕ್ಕ್ ಹಾಕಿದ್ದಾರೊ ಆ ದೇವರ್ಗೇ ಗೊತ್ತು. ಇಷ್ಟೆಲ್ಲ ನೆನಪಿನ೦ಗಳಕ್ಕೆ ತರಿಸಿದಕ್ಕೆ ಪೈಗಳೆ ನಿಮಗೆ ಅನನ್ಯ ಧನ್ಯವಾದಗಳು :P ಡುಹ್_ಸ್ವಾಮಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿತ್ತು ರಶ್ಮಿ !!! ಕಾಲೇಜ್ ನ ಫ್ಲಾಶ್ ಬ್ಯಾಕ್ ಗೆ ಹೋದೆ ನಮ್ಮ ಗುಂಪು ಬೆಂಚಿನ ಸ್ಥಾನ ಜಾಗಗಳ ಚಿಂತೆ ಇಲ್ಲದೆ ಯಾರಿಗೂ ತಿಳಿಯದಂತೆ ಕುಂತಲ್ಲೇ ಕೀಟಲೆ ಮಾಡುವ ಖತರ್ನಾಕ್ ಟ್ಯಾಲೆಂಟು ನಮಗೆ ಕರಗತವಾಗಿತ್ತು !! ಕಾಲೇಜಿನ ನೆನಪು ಹಸಿರಾಯಿತು ಧನ್ಯವಾದಗಳು ವಿಕಟಕವಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@salimath >>ನೆನಸಿಕೊಂಡ್ರೆ ಆಹಾ! ಎಂಥಾ ಸಿಹಿದಿನಗಳು! ಅಲ್ವಾ ಮತ್ತೆ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಷ್ಟೊಂದು ಜನ ಲಾಸ್ಟ್ ಬೆಂಚ್ ಸದಸ್ಯರಾ? ನಾನು ಯಾರನ್ನು ಫಸ್ಟ್ ಬೆಂಚ್ ಸ್ಟೂಡೆಂಟ್ಸ್ ಆಗಿರಬಹುದೆಂದು ತಿಳಿದುಕೊಂಡಿದ್ದೆನೋ ಅವರಲ್ಲಾ ನನ್ನ ಕ್ಯಾಟಗರಿಯಲ್ಲಿ ಸೇರಿದ್ದಾರೆ ಅಂದ್ರೆ ಅಚ್ಚರಿಯಾಗ್ತಾಯಿದೆ. ಅಂತೂ ಒಟ್ಟಿನಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಂಡ ಎಲ್ಲರಿಗೂ ಧನ್ಯವಾದಗಳು. -ರಶ್ಮಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.