ನಾನು ಸೈಕಲ್ ಕಲಿತದ್ದು (ಪ್ರಬಂಧ)

4.75

"ಏಯ್, ನಿಂಗೆ ಸೈಕಲ್ ಹೊಡೆಯುಕೆ ಬತ್ತಿಲ್ಯಾ"


 "ಎಂತಕೆ, ನೀ ಸೈಕಲ್ ಕಲಿಲ್ಲೆ?"


 "ಇಷ್ಟ್ ವರ್ಷ ಆದ್ರೂ ನಿಂಗೆ ಸೈಕಲ್ ಬಿಡೋಕೆ ಬರೊಲ್ವಾ?"


ನನ್ನ ವಿದ್ಯಾರ್ಥಿ ಜೀವನದುದ್ದಕ್ಕೂ ಇದೊಂದು ಪ್ರಶ್ನೆಯನ್ನು ಅದೆಷ್ಟು ಸಾರಿ ಕೇಳಿಸಿಕೊಂಡೆನೋ, ಲೆಕ್ಕವೇ ಸಿಗದು. ಸಹಪಾಠಿಗಳೆಲ್ಲ ಸೈಕಲ್ ಮೇಲೆ ಹೋಗುವಾಗ, ನನಗೆ ಸೈಕಲ್ ಬಿಡಲು ಬರುವುದೇ ಇಲ್ಲ ಎಂದು ಹೇಳಿಕೊಳ್ಳಬೇಕಾದ ಅನಿವಾರ್ಯತೆ. "ತಕೊ, ಈ ಸೈಕಲ್ ತಕೊಂಡು ಹೋಗಿ, ಆ ಅಂಗಡಿಯಿಂದ ಇದೇನನ್ನೋ ತಕಂಡ್ ಬಾ" ಎಂದು ಅಧ್ಯಾಪಕರೋ,ಬೇರಾರೋ ಹೇಳಿದರೆ, ಇಲ್ಲಪ್ಪ, ಸೈಕಲ್ ಹೊಡೆಯಲು ಬರುವುದಿಲ್ಲ ಎಂದು ಹೇಳಿ, ಅವರನ್ನು ಅಚ್ಚರಿಪಡಿಸಿದ್ದೂ ಉಂಟು. ಕಾಲೇಜಿಗೆ ಹೋಗುವಾಗಲೂ, ಸೈಕಲ್ ಸವಾರಿ ಬಾರದವನು ಇಡೀ ಕ್ಲಾಸಿಗೆ ನಾನೊಬ್ಬನೇ ಇರಬಹುದೇನೊ! ನನ್ನ ಸಹಪಾಠಿಗಳಲ್ಲಿ ಒಂದಿಬ್ಬರು ಮೋಟರ್ ಬೈಕ್ ಓಡಿಸುವಲ್ಲಿಗೆ ಮುಂದುವರಿದಿದ್ದರೂ, ನಾನ್ಯಾವಾಗ ಸೈಕಲ್ ಕಲಿಯುವುದೆಂಬ ಅಳುಕು ಮನದ ಮೂಲೆಯಲ್ಲಿ!.ಅಳುಕು? ಅದ್ಯಾಕೋ, ಗೊತ್ತಿಲ್ಲ, ಸೈಕಲ್ ಸವಾರಿ ಕಲಿಯಲು ಭಯವೋ, ಅವಕಾಶ ಇಲ್ಲದೆಯೋ, ಒಟ್ಟಿನಲ್ಲಿ ಕಾಲೇಜು ಶಿಕ್ಷಣ ಮುಗಿದರೂ, ಸೈಕಲ್ ಸವಾರಿ ಮಾಡುವ ಭಾಗ್ಯ ನನಗಿರಲಿಲ್ಲ. ನಮ್ಮ ಮನೆಯು ಕಾಡಿನ ಕಿಬ್ಬದಿಯ ಬೈಲಿನಲ್ಲಿ ಇದ್ದದ್ದೂ ಅದಕ್ಕೊಂದು ಕಾರಣವಿರಬಹುದು. ನಾವು ಶಾಲೆಗೆ ಹೋಗುತ್ತಿದ್ದುದು ನಡೆದುಕೊಂಡು - ಅದು ಅನಿವಾರ್ಯತೆ - ಏಕೆಂದರೆ, ನಮ್ಮ ಮನೆಯ ಸುತ್ತಮುತ್ತ ಒಂದೆರಡು ಕಿ.ಮೀ.ತನಕ ಯಾವುದೇ ವಾಹನ ಬರಲು ಸಾಧ್ಯವಿರಲಿಲ್ಲ. ಆರೆಂಟು ವರ್ಷಕ್ಕೊಮ್ಮೆ, ಸುತ್ತಲಿನ ಹಾಡಿಯಲ್ಲಿದ್ದ ಮರಕಡಿಯಲು, ಕಡಿದು ಸಾಗಿಸಲು ಗದ್ದೆ-ತೋಡುಗಳನ್ನು ಬಗೆದು ಲಾರಿ ಓಡುವ ರಸ್ತೆ ಮಾಡುತ್ತಿದ್ದರಾದರೂ, ಮರಗಿಡಗಳನ್ನು ಕತ್ತರಿಸಿ ತುಂಬಿಸಿಕೊಂಡು ಹೋದನಂತರ ಆ ರಸ್ತೆಗಳು ಅದೃಶ್ಯವಾಗುತ್ತಿದ್ದವು ಅಥವಾ ಅದನ್ನು ಮುಚ್ಚುತ್ತಿದ್ದರು. ನಮ್ಮ ಮನೆಗೆ ಮೂರು ಕಿ.ಮೀ.ದೂರದಲ್ಲಿದ್ದ ಹಾಲಾಡಿ ಪೇಟೆಯ ಟಾರು ರಸ್ತೆ, ದೂರದ ಊರುಗಳಿಗೆ ಸಂಪರ್ಕ ನೀಡುತ್ತಿತ್ತು, ನಿಜ. ಆದರೆ, ನಮ್ಮ ಮನೆಯತ್ತ ಸಾಗುವ ಕಚ್ಚಾ ರಸ್ತೆಯು ಒಂದು ಕಿ.ಮೀ. ನಂತರ ಸ್ಥಗಿತಗೊಂಡಿತ್ತು - ಏಕೆಂದರೆ, ಆ ರಸ್ತೆಗೆ ಅಡ್ಡಲಾಗಿ ಒಂದು ತೋಡು ಮತ್ತು ಅಡಿಗರ ಗದ್ದೆಬೈಲು ಇದ್ದವು. ಆ ಕಚ್ಚಾ ರಸ್ತೆಯೂ ಅದೆಂದೋ ಕಾಡು ಕಡಿದು ಸಾಗಿಸಲು ಮಾಡಿದ ದಾರಿಯ ಸುಧಾರಿತ ರೂಪವೇ ಸರಿ.  ಒಂದು ಕಿ.ಮೀ. ಅದರಲ್ಲಿ ನಡೆದು, ನಂತರ ಮನೆಯತ್ತ ಬೈಲುದಾರಿಯಲ್ಲಿ ನಡೆಯಬೇಕಾದ ಅನಿವಾರ್ಯತೆ ನಮಗೆ. ಆದ್ದರಿಂದ, ಮನೆ ಸುತ್ತ ಮುತ್ತ ಎಲ್ಲೂ ಸೈಕಲ್ ಕಲಿಯುವುದನ್ನು ನಾವು ಕನಸಿನಲ್ಲೂ ಊಹಿಸಲು ಆಗುತ್ತಿರಲಿಲ್ಲ, ಬಿಡಿ.


 


ನಮ್ಮ ಮನೆಯಂತಹವೇ ಸುದೂರ ಜಾಗಗಳಲ್ಲಿದ್ದ ನನ್ನ ಇತರ ಸಹಪಾಠಿಗಳಲ್ಲಿ ಕೆಲವರು ಅದಾಗಲೇ ಹೇಗೋ ಮಾಡಿ ಸೈಕಲ್ ಕಲಿತಿದ್ದರು - ದಿನಾ ಶಾಲೆಯಲ್ಲಿ ಮಧ್ಯಾಹ್ನದ ಊಟದ ಸಮಯದಲ್ಲಿ ಗೆಳೆಯರ ಸೈಕಲ್ ಪಡೆದು ಅಥವಾ ಬಾಡಿಗೆ ಸೈಕಲ್ ಪಡೆದೋ ಸಾಕಷ್ಟು ಪರಿಶ್ರಮ ಪಟ್ಟು ಸೈಕಲ್ "ಹೊಡೆಯಲು" ಕಲಿತಿದ್ದರು. ಆರಂಭದಲ್ಲಿ, "ಒಳಪೆಡಲು", ನಂತರ "ಸೀಟಿನ ಮೇಲೆ ಕೂತು" ಸವಾರಿ ಮಾಡುವ ಅವರ ಶೈಲಿ ಕಂಡು, ನನಗೋ ಅಸೂಯೆ. ಅವರೆಲ್ಲಾ ಅಲ್ಲಲ್ಲಿ ಬಿದ್ದು, ತರಚುಗಾಯ ಮಾಡಿಕೊಂಡಿದ್ದು ತೀರಾ ಸಾಮಾನ್ಯ. ಅದ್ಯಾವ ಉಸಾಬರಿಯೂ ಬೇಡ ಎಂದು ತೆಪ್ಪಗೆ ಇದ್ದ ನನಗೆ, ಡಿಗ್ರಿ ಮುಗಿಯುವ ಸಮಯ ಬಂದರೂ ಸ್ವತಂತ್ರವಾಗಿ ಸೈಕಲ್ ಬಿಡಲು ಕಲಿಯಲು ಆಗಲೇ ಇಲ್ಲ. ಕೆಲವೊಮ್ಮೆ ಗೆಳೆಯರ ಹಿಂದೆ, ಕ್ಯಾರಿಯರ್ ಮೇಲೆ ಕೂತು, ಅಂಡು ನೋಯಿಸಿಕೊಂಡದ್ದು ಉಂಟಾದರೂ, ಅದೂ ಕಡಿಮೆಯೇ.


 


ಕಾಲೇಜಿಗೆ ಮೂರು ವರ್ಷ ಮಣ್ಣು ಹೊತ್ತು, ನಂತರ ಮನೆಯಲ್ಲಿ ಒಂದು ವರ್ಷ ನಿರುದ್ಯೋಗ ಪರ್ವ ನಡೆಸುತ್ತಿದ್ದಾಗ, ಕೊನೆಗೂ ಸೈಕಲ್ ಕಲಿಯುವ ಅವಕಾಶ, ನನಗೆ! ತಾರಿಕಟ್ಟೆ ಅತ್ತೆ ಮನೆಯಲ್ಲಿ ಆಗ ಒಂದು ಹಳೆ ಸೈಕಲ್ ಇತ್ತು - ತಾರಿಕಟ್ಟೆ ಆಗಿನ ಕಾಲದಲ್ಲಿ, ನಮ್ಮ ಮನೆಗೆ ಹೋಲಿಸಿದರೆ, ಒಂದು ಪುಟ್ಟ "ಪೇಟೆ" - ಅದನ್ನು ಕರೆಯುತ್ತಿದ್ದುದೂ "ತಾರಿಕಟ್ಟೆ ಪೇಟೆ" ಅಂತಲೇ. ಅವರ ಮನೆ ಮುಂದೆ, ನಯವಾದ ಮಣ್ಣು ರಸ್ತೆ ; ಒಮ್ಮೆ ಅಲ್ಲಿಗೆ ಹೋದಾಗ "ಸೈಕಲ್ ಕಲಿ" ಎಂದು ಅತ್ತೆ ಮಕ್ಕಳಾದ ಉದಯ, ಸುರೇಶ ದುಂಬಾಲು ಬಿದ್ದರು. ನನಗೋ, ಕೆಳಗೆ ಬಿದ್ದರೆ, ತರಚುಗಾಯ ಆಗುತ್ತಲ್ಲಾ ಎಂಬ ಅಳುಕು. ಅಂತೂ ಧೈರ್ಯಮಾಡಿ, ಸೈಕಲ್ ಮೇಲೆ ಕುಳಿತೆ - ಸೈಕಲ್ ಬೀಳದಂತೆ ಹಿಡಿದು ಕೊಳ್ಳಲು ಉದಯ, ಸುರೆಶ ಇವರ ಸಹಾಯ. ಅಂತೂ ಸೈಕಲ್ ಕಲಿತದ್ದಾಯ್ತು. ನಂತರ, ಆಗಾಗ ಅಲ್ಲಿ ಇಲ್ಲಿ ಹೋಗಿ, ಒಬ್ಬನೇ ಸಲೀಸಾಗಿ ಸೈಕಲ್ ಸವಾರಿ ಮಾಡುವಷ್ಟು ಅಭ್ಯಾಸ ಮಾಡಿಕೊಂಡೆ.
 


     ವೇಗವಾಗಿ ಸೈಕಲ್ ಬಿಟ್ಟುಕೊಂಡು, ಗಾಳಿಯನ್ನೂ ಸೀಳುತ್ತಾ, ಮುನ್ನುಗ್ಗುವ ಮಜವೇ ಒಂದು ಮಜ! ಸೈಕಲ್ ಕಲಿತದ್ದೇ, ಬಾಡಿಗೆ ಸೈಕಲ್ ಪಡೆದು ಅಲ್ಲಿ-ಇಲ್ಲಿ ಓಡಾಡಲು ಶುರು ಹಚ್ಚಿಕೊಂಡೆ. ನಮ್ಮ ಮನೆಗೆ ಅತಿ ಹತ್ತಿರದ ಬಾಡಿಗೆ ಸೈಕಲ್ ಶಾಪ್ ಎಂದರೆ, ಮೂರು ಕಿ.ಮೀ ದೂರದ ಹಾಲಾಡಿ ಪೇಟೆಯಲ್ಲಿತ್ತು.  ಅಲ್ಲಿ ಒಬ್ಬ ಸೈಕಲ್ ಬಾಡಿಗೆಗೆ ಕೊಡುತ್ತಿದ್ದ - ಕಡ್ಡಾಯವಾಗಿ, ಪರಿಚಯವಿರುವವರಿಗೆ ಮಾತ್ರ !ಮೊದಲ ಬಾರಿ ಬಾಡಿಗೆಗೆ ಸೈಕಲ್ ಪಡೆಯುವುದು  ನನಗೆ ಕಷ್ಟವಾಗಿತ್ತು!"ನೀವು ಯಾರೊ ನಂಗೊತ್ತಿಲ್ಲೆ! " ಎಂದು ಮುಖದ ಮೇಲೆ ಹೊಡೆದ ಹಾಗೆ ಹೇಳಿಬಿಟ್ಟ ಆ ಅಂಗಡಿಯವ. ನನಗೋ ಅಚ್ಚರಿ! ಪ್ರತಿದಿನ ಅವನ ಅಂಗಡಿಯ ಮುಂದೆಯೇ,ಅದೇ ಪೇಟೆಯಲ್ಲಿ ಏಳೆಂಟು ವರ್ಷ ಶಾಲೆ - ಕಾಲೇಜಿಗೆ ಹೋಗಿದ್ದನ್ನು ಅವನು ಗಮನಿಸಿದ್ದರೂ, ಬೇಕೆಂದೇ ಹಾಗೆ ಹೇಳಿದನಾ? "ಯಾರಾದರೂ, ಗುರ್ತ ಇರುವವರ ಹತ್ತಿರ ಹೇಳಿಸಿ, ಸೈಕಲ್ ಕೊಡ್ತೆ" ಎಂದ, ಒರಟಾಗಿ. ಪಕ್ಕದಲ್ಲೇ ದುರ್ಗಾಪರಮೇಶ್ವರೀ ಭವನ ಎಂಬ ಹೋಟೆಲ್ಲಿಟ್ಟಿದ್ದ ನನ್ನ ಕಾಲೇಜು ಸಹಪಾಠಿ ಬಾಯರಿ ಬಂದು ಹೇಳಿದ ಮೇಲೆ, ನನಗೆ ಸೈಕಲ್ ಬಾಡಿಗೆಗೆ ಸಿಕ್ಕಿತು. ಐದು ಮೈಲು ದೂರವಿದ್ದ ಕುಪ್ಪಾರು ಉಡುಪನ ಮನೆಗೆ ಹೋಗಿ, ಮಾತನಾಡಿಕೊಂಡು,ಬರುವಾಗ ಅವನ ಮನೆ ಹತ್ತಿರದ ಹಾಡಿದಾರಿಯಲ್ಲಿ, ಮರದ ಬೇರಿಗೆ ಸೈಕಲ್ ಚಕ್ರ ಡಿಕ್ಕಿ ಹೊಡೆದು, ಬಿದ್ದುಬಿಟ್ಟೆ! ನನಗೇನೂ ಆಗಲಿಲ್ಲ, ಆದರೆ ಸೈಕಲ್ ಪೆಡಲು ಅರ್ಧ ಮುರಿದುಹೋಗಿತ್ತು. ಸೈಕಲ್ ವಾಪಸು  ಕೊಡುವಾಗ, ಬಾಡಿಗೆ ಹಣಕೊಟ್ಟು, ಉಸಿರೆತ್ತದೇ, ಮೆತ್ತಗೆ ಮನೆಯತ್ತ ನಡೆದೆ. ಒಂದೇ ನಿಮಿಷದಲ್ಲಿ ಆ ಗಂಟುಮುಖದವನು ಅದೇ ಸೈಕಲ್ಲಿನಲ್ಲಿ ಹಿಂಬಾಲಿಸಿಕೊಂಡು ಬಂದ - "ಎಂತ ಇದು, ಪೆಡಲ್ ಕಟ್ ಆಯಿತ್ತಲೇ?"


     "  .....  ಹೂಂ......"


     " ಹಾಂಗೇ ಸೈಕಲ್ ಇಟ್ ಹೋದ್ರೆ, ನಂಗೊತ್ತಾತಿಲ್ಲೆ, ಅಂದ್ಕಂಡ್ರ್ಯಾ?"


     ".......ಉಹುಂ....."


     " ಈಗ ಎಂತ ಮಾಡುದು, ನೀವೆ ಹೇಳಿ" ಎಂದ, ದುರುಗುಟ್ಟುತ್ತಾ, ಅರ್ಧ ಮುರಿದ ಪೆಡಲನ್ನು ಕಾಲಲ್ಲಿ ತಿರುಗಿಸುತ್ತಾ.


     ಇನ್ನು ಮಾತನಾಡದಿದ್ರೆ ಆಗೊಲ್ಲ ಅಂತ ಅರಿವಾಗಿ, "ರಿಪೇರಿ ಮಾಡ್ಸಿ, ರಿಪೇರಿ ಖರ್ಚು ನಾನ್ ಕೊಡ್ತೆ" ಎಂದೆ, ಮೆಲ್ಲಗೆ.


ಅವನಿಗೆ ಏನನ್ನಿಸಿತೋ,
 


     "ಸರಿ, ನಾನೇ ರಿಪೇರಿ ಮಾಡ್ತೆ, ಖರ್ಚು ಎಂತದೂ ಬೇಡ" ಎಂದು , ರಪ್ಪನೆ ಹಿಂತಿರುಗಿದ. ಮಾತು ಒರಟಾದರೂ, ಅವನಲ್ಲೂ ತುಸು ಮಾನವೀಯತೆ ಇದೆ ಎನಿಸಿತು!  


      ಮಗದೊಮ್ಮೆ, ಮರವಂತೆಯಲ್ಲಿ ಬಾಡಿಗೆ ಸೈಕಲ್ ಪಡೆದು, ಒಂದು ಟ್ರಿಪ್ ಹೋಗಿದ್ದೆವು. ಮರವಂತೆ ಸುಶೀಲತ್ತಿಗೆ ಮನೆಗೆ ನಾನು ಮತ್ತು ಲಕ್ಷಣ ಹೋಗಿದ್ದ ಸಂದರ್ಭ.(ಲಕ್ಷ್ಮಣ ಅಂದರೆ,ನನಗೆ ಸೈಕಲ್ ಹೇಳಿಕೊಟ್ಟಿದ್ರಲ್ಲಾ, ಉದಯ ಮತ್ತು ಸುರೇಶ, ಅವರ ಅಣ್ಣ). ಸಮುದ್ರ ತೀರಕ್ಕೆ ಸೂರ್ಯಾಸ್ತ ನೋಡಲು ಹೊರಟವರಿಗೆ, ಬಾಡಿಗೆ ಸೈಕಲ್ ಅಂಗಡಿ ಕಣ್ಣಿಗೆ ಬಿತ್ತು. ಮಿರ ಮಿರ ಹೊಳೆಯುವ ಹತ್ತಾರು ಹೊಚ್ಚ ಹೊಸ ಸೈಕಲ್ ಗಳನ್ನು  ಬಾಡಿಗೆಗೆ ಇಟ್ಟಿದ್ದರು. ಸಂಜೆ ಬಿಸಿಲಿನಲ್ಲಿ ಹೊಳೆಯುತ್ತಿರುವ ಆ ಚಕ್ರಗಳ ಕಡ್ಡಿಗಳ ಆಕರ್ಷಣೆಯನ್ನು ತಡೆಯಲಾಗದೇ, "ಸೈಕಲ್ ಬಾಡಿಗೆಗೆ ಬೇಕು" ಎಂದೆವು.


     "ನಿಮ್ಮ ಪರಿಚಯ? ಯಾರ ಮನೆಗೆ ಬಂದವರು?" ಎಂದು ಕೇಳಿದರು, ಅಂಗಡಿಯವರು. ಪರಿಚಯ ಹೇಳಿದ ಕೂಡಲೆ, ಎರಡು ಹೊಚ್ಚ ಹೊಸ ಸೈಕಲ್ ಗಳನ್ನು ಬಾಡಿಗೆಗೆ ಕೊಟ್ಟರು. ಸುಶೀಲತ್ತಿಗೆಗೆ ವಿಚಾರ ತಿಳಿಸಿ, ೨೦ ಕಿ.ಮೀ.ದೂರದ ಕುಂದಾಪುರಕ್ಕೆ ಸೈಕಲ್ ಮೇಲೆ ಹೊರಟೆವು. ಅದು ಹೆದ್ದಾರಿ - ಟಾರು ಹಾಕಿದ ನಯವಾದ ರಸ್ತೆ; ಕಡಲ ತೀರದಿಂದ ಬೀಸುವ ತಂಗಾಳಿ - ಸಂಜೆಯ ಆ ಸುಂದರ ವಾತಾವರಣದಲ್ಲಿ ನಮ್ಮ ಸೈಕಲ್ ವೇಗವಾಗಿ ಓಡಿತು. ಕುಂದಾಪುರದಲ್ಲಿ, ತಿಂಡಿ ತಿಂದು, ಸಿನೆಮಾ ಥೇಟರ್ ಹತ್ತಿರ ನೋಡಿದರೆ, ಮೊದಲನೆ ಆಟ ಆಗಲೇ ಶುರುವಾಗಿತ್ತು. ರಾತ್ರಿ ಎರಡನೇ ಆಟ ಸಿನಿಮಾ ನೋಡಿಕೊಂಡು, ವಾಪಸು ಸೈಕಲ್ ಸವಾರಿಮಾಡಿದೆವು. ಅಂದು ನೋಡಿದ ಸಿನಿಮಾ ಯಾವುದೋ ನೆನಪಿಲ್ಲ, ಆದರೆ, ಆ ಕಗ್ಗತ್ತಲಿನಲ್ಲಿ ಸೈಕಲ್ ಬಿಡುವಾಗಿನ ದಿಗಿಲು ಮಿಶ್ರಿತ ಅನುಭವ ಇನ್ನೂ ನೆನಪಿದೆ. ಆ ಹೆದ್ದಾರಿ, ಈಗಿನಂತೆ "ಬ್ಯುಸಿ" ಆಗಿರಲಿಲ್ಲ, ಆಗೊಮ್ಮೆ ಈಗೊಮ್ಮೆ ಸಾಗಿ ಬರುವ ಲಾರಿಗಳು, ಮಿಕ್ಕಂತೆ ತೀರ ಕಗ್ಗತ್ತಲು. ನಮ್ಮ ಬಳಿ ಯಾವುದೇ ಬೆಳಕಿರಲಿಲ್ಲ, ಸೈಕಲ್ ಗೂ ಬೆಳಕಿನ ವ್ಯವಸ್ಥೆ ಇರಲಿಲ್ಲ. ಕಣ್ಣು ಕೋರೈಸುವ ಲಾರಿ ಹೆಡ್ ಲೈಟ್ ಎದುರಾಗಿ, ಲಾರಿ ಹೋದ ನಂತರ ಒಂದೆರಡು ನಿಮಿಷ ನಮಗೆ ಎದುರಿಗಿರುವ ರಸ್ತೆಯೇ ಕಾಣಿಸುತ್ತಿರಲಿಲ್ಲ. ಕಣ್ಣು ಪುನ: ಕತ್ತಲೆಗೆ ಹೊಂದಿಕೊಂಡು, ರಸ್ತೆ ಕಾಣುವಂತಾದಾಗ, ಮತ್ತೊಂದು ಲಾರಿ ಕಣ್ಣುಕುಕ್ಕುವ ಬೆಳಕನ್ನು ಬೀರುತ್ತಾ ಬರುತ್ತಿತ್ತು. ರಸ್ತೆ ನೇರವಾಗಿ, ಚೆನ್ನಾಗಿದ್ದುದರಿಂದ, ನಮ್ಮ ಈ "ರಾತ್ರಿ ಸಾಹಸ" ಸುಗಮವಾಗಿ ಮುಗಿದು, ಸುಶೀಲತ್ತಿಗೆಯ ಮನೆ ಸೇರಿಕೊಂಡೆವು.


 


     ನಮ್ಮ ಹಳ್ಳಿ ಮನೆಯ ಸನಿಹಕ್ಕೆ ಕೊನೆಗೂ ರಸ್ತೆ ಬಂತು - ಮನೆ ಎದುರಿನ ದೇವಸ್ಥಾನದಗುಡ್ಡೆ ದಾಟಿದರೆ, ಸಿಗುವ ರಸ್ತೆ ಅತ್ತ ಮಂದರ್ತಿಕಡೆ ಹೋಗುತ್ತಿತ್ತು. ಆದರೆ, ಮನೆಯ ಬಾಗಿಲಿನ ತನಕ ರಸ್ತೆ ಕೊನೆಗೂ ಆಗಲಿಲ್ಲ. ಮನೆ ಎದುರು ಗದ್ದೆ, ತೋಡು ಇದ್ದುದರಿಂದ, ಆ ಅರ್ಧ ಕಿ.ಮಿ. ಕ್ರಮಿಸಲು ಕಾಲುದಾರಿಯೇ ಗತಿ. ಅವರವರ ಮನೆಯ ಹತ್ತಿರದ ತನಕ ರಸ್ತೆ ಆದಾಗ, ಸುತ್ತಮುತ್ತ ಒಂದಿಬ್ಬರು ಸೈಕಲ್ ತೆಗೆದುಕೊಂಡರು. ನಮ್ಮ ಮನೆಯಲ್ಲೂ ಒಂದು ಸೈಕಲ್ ಖರೀದಿ ಆಯ್ತು. ಆದರೆ, ಮನೆಯಿಂದ ಹಾಲಾಡಿಯ ತನಕದ ರಸ್ತೆ ಮಾತ್ರ ಪೂರ್ಣ ಗುಡ್ಡಗಾಡು ರಸ್ತೆ ಎನ್ನಬಹುದು : ಟಾರು ಹಾಕಿದ್ದರೂ, ಮೂರು ಏರು ಮತ್ತು ಮೂರು ಇಳಿಜಾರು ಆ ರಸ್ತೆಯ ವೈಶಿಷ್ಟ್ಯ. ಅಡಿಗರ ಮನೆಯ ಹತ್ತಿರದ ಏರಂತೂ, ತೀವ್ರವಾಗಿದ್ದು, ಅದರಲ್ಲೇ ಮಧ್ಯದಲ್ಲಿ ಒಂದು ತಿರುವೂ ಇದ್ದು, ಆ ರಸ್ತೆಭಾಗವು ಇಳಿಯುವಾಗಲೂ ಸ್ವಲ್ಪ ದಿಗಿಲು ಹುಟ್ಟಿಸುತ್ತಿತ್ತು. ಆ ರಸ್ತೆಯ ಎರಿಳಿತಗಳ ತೀವ್ರತೆಯನ್ನು ತಾಳಲಾರದೇ, ಆ ಸೈಕಲ್ ಮನೆಯ ಹತ್ತಿರ ನಿಂತಿರುವುದೇ ಅತಿಹೆಚ್ಚು! ಮನೆ ಮುಂದಿನ ಗದ್ದೆಗಳ ನಟ್ಟಿಯಾಗಿರುವ ಮಳೆಗಾಲದಲ್ಲಂತೂ, ಮನೆಯ ಗೋಡೆಗೆ ಒರಗಿ ನಿಂತಿದ್ದ ಅದಕ್ಕೆ ಪೂರ್ಣ ವಿಶ್ರಾಂತಿ - ಕೊನೆಗೆ, ಮಳೆನೀರು ಬಿದ್ದು, ಬಿದ್ದು, ತುಕ್ಕು ಹಿಡಿದು, ಪೂರ್ಣವಿರಾಮವನ್ನು ಹೇಳಿತು ಆ ಸೈಕಲ್!


 


     ನಂತರ ವರ್ಷಗಳಲ್ಲಿ, ಮೋಟರ್ ಬೈಕ್ ಜನಪ್ರಿಯವಾದ ನಂತರ, ಸೈಕಲ್  ಮೂಲೆಗುಂಪು ಆದೀತೇನೊ ಎಂಬ ಅನುಮಾನ ಮೊದಲಿಗೆ ಹುಟ್ಟಿತ್ತು ಎಲ್ಲರಲ್ಲೂ. ಆದರೆ, ಹೊಸ ಹೊಸ ಮಾದರಿಯ ಬಣ್ಣ ಬಣ್ಣದ ಸೈಕಲ್ಲುಗಳನ್ನು ತಯಾರಿಸಿ, ಆಕರ್ಷಕ ಜಾಹೀರಾತಿನೊಂದಿಗೆ ಮಾರುಕಟ್ಟೆಗೆ ಬಿಟ್ಟ ಕಂಪನಿಗಳ  ವ್ಯಾಪಾರ ತಂತ್ರ ಫಲಿಸಿ, ಪೇಟೆಯ ಮಕ್ಕಳೆಲ್ಲಾ ಸೈಕಲ್ ಸವಾರಿಯನ್ನು ಇಷ್ಟಪಟ್ಟರು. ಹೊಸ ಮಾದರಿಯ ಸೈಕಲ್ ಕೊಡಿಸಿ ಎಂದು ಮನೆಯವರಿಗೆ ದುಂಬಾಲು ಬಿದ್ದ ಶಾಲಾ ಮಕ್ಕಳು, ಸೈಕಲ್ ಹೊಡೆದು ಹೊಡೆದು ಆರೋಗ್ಯವಂತರಾದರು ಎಂದರೆ ತಪ್ಪಾಗದು. ಈಗ ಪೇಟೆಯಲ್ಲಿರುವ ನಮ್ಮ ಮನೆಯಲ್ಲೂ ಒಂದು ಸೈಕಲ್ ಇದೆ - ಅದು ನನ್ನ ಮಗಳದ್ದು : ಆ ಸೈಕಲ್ ಹೆಸರು "ಲೇಡಿ ಬರ್ಡ್!". ಈಗಲೂ, ನಾನು ಆಗಾಗ, ಸೈಕಲ್ ಬಿಡುವ ಉಮೇದು ಬಂದಾಗ, ಅದೇ "ಲೇಡಿ ಬರ್ಡ್" ನಲ್ಲಿ ನಾಲ್ಕಾರು ಸುತ್ತು ಸವಾರಿ ಮಾಡುವುದುಂಟು!


(ಈ ಭಾನುವಾರ ವಿಜಯ ಕರ್ನಾಟಕದಲ್ಲಿ ಶ್ರೀವತ್ಸ ಜೋಶಿಯವರು ಸೈಕಲ್ ಬಗ್ಗೆ ಮತ್ತು  ಅಮೆರಿಕಾದಲ್ಲಿ ಅದನ್ನು ಜನಪ್ರಿಯಗೊಳಿಸುತ್ತಿರುವ ಪ್ರಯತ್ನದ ಕುರಿತು ಬರೆದ ಲೇಖನವನ್ನೋದಿ,  ನನ್ನ ಸೈಕಲ್ ಅನುಭವಗಳನ್ನು ಹೇಳಿಕೊಳ್ಳುವ ಆಸೆಯಾಗಿ, ಮೇಲಿನಂತೆ ಬರೆದೆ - ಹೇಗಿದ್ಯೋ, ಏನೊ!)    ಇಂಟರ್ನೆಟ್ ಚಿತ್ರಕೃಪೆ : judturner.com


 


 

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಶಶಿಧರ್ ನಿಮ್ಮ ಬರವಣಿಗೆಯ ಶೈಲಿ, ಅದರಲ್ಲಿ ನಡ ನಡುವೆ ಬರುವ ಕುಂದಕನ್ನಡ ಇಷ್ಟವಾಯಿತು. ಜೊತೆಗೆ ಹೈಸ್ಕೂಲ್ ತಲುಪಿದ ಬಳಿಕ ಸೈಕಲ್ ಕಲಿತ ದಿನಗಳು ನೆನಪಾದವು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ. ಈಗ ಪುಟಾಣಿಗಳೂ ಸಹಾ ಹೊಸಮಾದರಿಯ ಸುಂದರ ಸೈಕಲ್ ಸವಾರಿ ಮಾಡುವುದನ್ನು ಗಮನಿಸಿದ್ದೀರಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಲೇಖನ ಓದಿ ಊರಲ್ಲಿ ಅನಾಥವಾಗಿ ಗೋಡೆಗೆ ವರಗಿರುವ ನನ್ನ ಲೇಡಿ ಬರ್ಡ್ ನ ನೆನಪಾಗಿ ಬೇಜಾರಾಯ್ತು :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಅದಕ್ಕೊಂದು ಸಲಹೆ: ನಮ್ಮ ಮನೆಯಲ್ಲಿ ಈಗ ಇರುವುದು ಎರಡನೆಯ ಲೇಡಿಬರ್ಡ್; ಮೊದಲನೆ ಲೇಡಿಬರ್ಡ್ ಸೈಕಲ್ ಸೆಕೆಂಡ್ ಹ್ಯಾಂಡ್ ಮಾರಾಟವಾಗಿದೆ, ಗುಜರಿಯವನಿಗೆ! ಆದರೂ, ನಿಮ್ಮ ಊರಲ್ಲಿ,ಗೋಡೆಗೆ ಒರಗಿ, ತುಕ್ಕು ಹಿಡಿಯುತ್ತಿರುವ ಆ ಸೈಕಲನ್ನು ಮಾರುವ ಸಲಹೆಯನ್ನು ನೀವು ಸ್ವೀಕರಿಸಲರಿರೇನೊ, ಏಕೆಂದರೆ, ಆ ಸೈಕಲ್ ಜೊತೆ ನಾಸ್ಟಾಲ್ಜಿಕ್ ನೆನಪುಗಳು ನೂರಾರಿವೆ, ಅಲ್ವೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಲೇಖನ ಓದಿ ನನಗೆ ನನ್ನ ಊರಿನಲ್ಲಿ (ಕುಂದಾಪುರದಲ್ಲಿ...) ಸೈಕಲ್ ಕಲೆತ ಅನುಭವ ನೆನಪಾಗಿ, ಒಮ್ಮೆ ಸೈಕಲ್ನಿಂದ ಜಾರಿ ಬಿದ್ದು ರಸ್ತೆಯ ಪಕ್ಕದ ಪೊದೆಯ ಮುಳ್ಳು ಪರಿಚಿದ ಗಾಯದ ಊರಿ ನೆನಪಿಗೆ ಬಂತು... :) -- ವಿನಯ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೈಕಲ್ ಕಲಿಯುವಾಗ ಬಿದ್ದು, ಗಾಯಮಾಡಿಕೊಳ್ಳೋದು ತುಂಬಾ ಕಾಮನ್! ಧನ್ಯವಾದ, ಪ್ರತಿಕ್ರಿಯೆಗಾಗಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗಲೂ ಸೈಕಲ್ ಬಿಡಬೇಕೆಂದು ಅನಿಸುವುದುಂಟು. ನನ್ನ ಸೈಕಲ್ ಹಾಳಾಗಿ ಸ್ಟೋರ್ ರೂಮಿನಲ್ಲಿ ಬಿದ್ದಿದೆ. ಅದರ ಜೊತೆಗಿನ ಹಳೆಯ ನೆನಪುಗಳು ನೆನೆದಷ್ಟೂ ಆನಂದ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಳೆ ಸೈಕಲ್ ಹೊರಕ್ಕೆ ತೆಗೆಯಿರಿ, ಪ್ಲೀಸ್. ಒಂದೆರಡು ರೌಂಡ್ ಹೊಡೆದರೆ, ದಿನಾ, ಅದೊಂದು ಒಳ್ಳೆ ವ್ಯಾಯಾಮ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಮ್ಮೆ ದೊಡ್ಡಪ್ಪನ ಮನೆಗೆ ಹೋಗಿದ್ದಾಗ, ಅವರ ಮನೆಯಲ್ಲಿದ್ದ ಸೈಕಲ್ ತುಳಿವ ಸೌಭಾಗ್ಯ ಒದಗಿ ಬಂತು. ಸರಿ ಅಂತ ತೆಗೆದುಕೊಂಡು ಹೊರಟೆ ... ಕತ್ತರಿ ಹೊಡ್ಕೊಂಡ್ ಹೊರಟೆ ... ಸ್ವಲ್ಪ ದೂರ ಹೋದ ಮೇಲೆ ಪಕ್ಕದ ಮತ್ತೊಂದು ಬೀದಿಗೆ ತಿರುಗಿದೆ ... ಸ್ವಲ್ಪ ದೂರ ತುಳಿಯುತ್ತಿದ್ದಂತೇ ಹಿಂದಿನಿಂದ ನಾಯಿಗಳ ಹಿಂಡು ... ಲೊಳ್ ಲೊಳ್ ಲೊಳ್ ಎಂದರೆ 'ನಮ್ ಏರಿಯಾಕ್ಕೆ ಯಾವನೋ ಬಂದವ್ನೆ ಕಚ್ಲಾ ಅವನನ್ನ' ಅಂತಲೂ ಅರ್ಥ ಇದೆಯಂತೆ ... ಎಷ್ಟು ಬಲಬಿಟ್ಟು ತುಳಿದು ಆ ನಾಯಿಗಳಿಂದ ತಪ್ಪಿಸಿಕೊಂಡೆನೋ ಅನುಭವಿಸಿದ ನನಗೇ ಗೊತ್ತು !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲೊಳ್ ಲೊಳ್ ಲೊಳ್ ಎಂದು ಕೂಗಿದ ಪಕ್ಕದ ಬೀದಿಯವರು, ತಮ್ಮ ಸ್ನೇಹಿತನನ್ನು ಆತ್ಮೀಯವಾಗಿ ಸ್ವಾಗತಿಸಿದ ಪರಿ ಅದಾಗಿರಬಹುದು!!! ಲೊಳ್ ಲೊಳ್ ಎಂದರೆ, "ಸ್ವಾಗತವು ನಿಮಗೆ” ಎಂಬ ಅರ್ಥವೂ ಇದೆಯಂತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಸೈಕಲ್ ಕಲಿಸಿದ್ದ ಒಂದು ಘಟನೆ ನೆನಪಾಯಿತು. ನನ್ನ ಗೆಳೆಯನೊಬ್ಬನಿಗೆ ೩೦ ವಯಸ್ಸಾದರೂ ಸೈಕಲ್ ಬಿಡಲು ಬರುತ್ತಿರಲಿಲ್ಲ. ಅವನಿಗೆ ಸೈಕಲ್ ಕಲಿಸಲೇ ಬೇಕೆಂಬ ಹಠದಿಂದ ಒಂದು ಮಧ್ಯಾಹ್ನ ರೆಸಿಡೆನ್ಸಿಯಲ್ ಏರಿಯಾದ ಒಂದು ಸಣ್ಣ ಗ್ರೌಂಡ್‌ಗೆ ಕರಕೊಂಡು ಹೋದೆ. ಇಬ್ಬರೂ ಕಲಿಸುವುದು/ಕಲಿಯುವುದರಲ್ಲಿ ಎಷ್ಟು ಮಗ್ನವಾಗಿದ್ದೆವೆಂದರೆ ಗ್ರೌಂಡ್ ಸುತ್ತಲೂ ಜನ ಸೇರಿದ್ದು ಗೊತ್ತೇ ಆಗಲಿಲ್ಲ! ಚಪ್ಪಾಳೆನೂ ತಟ್ಟುತ್ತಿದ್ದರು! ಈ ಜನ್ಮದಲ್ಲಿ ಈತನಿಗೆ ಸೈಕಲ್ ಬಿಡಲು ಬರದು ಅನ್ನುತ್ತಿದ್ದರು. ಆತನೂ ನಂತರ ಸೈಕಲ್ ಕಲಿಯಲೇ ಇಲ್ಲ. ಸೀದಾ ಕಾರ್ ಡ್ರೈವಿಂಗ್ ಕಲಿತ! -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೆ ವರ್ಷ ಇನ್ನೂ ಹೆಚ್ಛೇ ಆಗಿದೆ. ಇನ್ನೂ ಸೈಕಲ್ ಬಿಡಕ್ಕೆ ಬರಲ್ಲ. :( ಇತೀ, ಉಉನಾಶೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಶಿಧರ್ ರವರೆ, ನೀವು ಸೈಕಲ್ ಕಲಿತದ್ದಕ್ಕಿಂತ ಈ ಲೇಖನದೊಂದಿಗೆ ಪ್ರಕಟಿಸಿದ ಸೈಕಲ್ ಚಿತ್ರ ಅಚ್ಚರಿ ಮೂಡಿಸುತ್ತದೆ. ನಿಮ್ಮಂತೆಯೇ ನಾವು ಮೂವರು ಗೆಳೆಯರು ಕೆಲಸಕ್ಕೆ ಸೇರಿದ ಹೊಸತರಲ್ಲಿ ಮುವತ್ತು ವರ್ಷದ ಹಿಂದೆ ಚನ್ನಗಿರಿಯಲ್ಲಿ ಸೈಕಲ್ ಕಲಿತದ್ದು, ಆ ತಾಲೂಕಿನ ಹಲವು ಊರುಗಳನ್ನು ಸೈಕಲ್ ಸವಾರಿಯಲ್ಲೆ ಪರಿಚಯಿಸಿಕೊಂಡದ್ದು ನನಗೀಗ ನೆನಪಾಗುತ್ತಿದೆ. ಒಳ್ಳೆಯ ಲೇಖನ ಕೊಟ್ಟಿದ್ದೀರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಬ್ಬಾರರೇ, ಶಾಲಾದಿನಗಳಲ್ಲಿ ಮ೦ಗಳೂರಿನಲ್ಲಿ,ಯೆಯ್ಯಾಡಿಯ ಸೈಕಲ್ ಅ೦ಗಡಿಯಿ೦ದ ಬಾಡಿಗೆ ಪಡೆದು ವಾರಾ೦ತ್ಯವೆಲ್ಲಾ ಸೈಕಲ್ ನಲ್ಲಿ ಸುತ್ತಾಡಿದ ದಿನಗಳ ಮಧುರ ನೆನಪುಗಳು ಮತ್ತೆ ಮೂಡಿದವು.ಉತ್ತಮ ಶೈಲಿಯ ಬರವಣಿಗೆಗೆ ಅಭಿನ೦ದನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಘು ಮುಳಿಯ, ಮಂಗಳೂರಿನ ಸುತ್ತ ಸೈಕಲ್ ಸವಾರಿ ಮಾಡಲಿಕ್ಕೆ ಒಳ್ಳೆಯ ಸ್ಥಳಗಳು ಇವೆ ಅಲ್ವಾ? ೧೯ನೆ ಶತಮಾನದಲ್ಲಿ, ಮಂಗಳೂರಿನಿಂದ ಕುದುರೆಮುಖಕ್ಕೆ ಬ್ರಿಟಿಶ್ ಪಾದ್ರಿಗಳು ಸೈಕಲ್ ಮೇಲೆ ಹೋಗುತ್ತಿದ್ದರಂತೆ! ಮಂಗಳೂರಿನ ಸೆಕೆ ತಡೆಯಲು, ಬೇಸಗೆ ಕಾಲದಲ್ಲಿ ಕುದುರೆಮುಖದಲ್ಲಿ ವಾಸಿಸಲು, ಅವರು ಆ ಪರ್ವತದ ತುದಿಯಲ್ಲಿ ಒಂದೆರಡು ಕಟ್ಟಡ ಕಟ್ಟಿಸಿ, ಅಲ್ಲಿಗೆ ಹೋಗಲು ದಾರಿಯನ್ನು ಸಹಾ ಬೆಟ್ಟದ ಬದಿಯಲ್ಲಿ ಕಡಿಸಿ ತಯಾರಿಸಿದ್ದರಂತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಡೂರಿನ ಮದಗದ ಕೆರೆ, ಎಮ್ಮೆದೊಡ್ಡಿ, ಚಿಕ್ಕಮಗಳೂರಿಂದ ಜಾವಗಲ್ ದೇವಾಲಯ ನೋಡಿದ್ದು ಈ ರೀತಿ ನಾನೂ ಕೆಲವು ಸೈಕಲ್ ಪ್ರವಾಸ ಹೋಗಿದ್ದುಂಟು. ಚನ್ನಗಿರಿ ಸುತ್ತ ಮುತ್ತ ಒಳ್ಳೆಯ ಸ್ಥಳಗಳು ಇರಬಹುದು, ಸೈಕಲ್ ಸವಾರಿ ಮಾಡಿ ನೋಡಲಿಕ್ಕೆ. ಪ್ರತಿಕ್ರಿಯೆಗಾಗಿ ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.