ಮಂಗಳೂರ ಮಾದರಿ...

4.75

           ಮಂಗಳೂರಿಗೆ ಬಂದಾಗ ಇಲ್ಲಿನ ಪುಸ್ತಕ ರೀತಿಯ ಕನ್ನಡ ಪ್ರಯೋಗವನ್ನು ನೀವು ಕೇಳಿಯೇ ಇರುತ್ತೀರಿ. ಇಲ್ಲವೇ ಸಿನಿಮಾದಲ್ಲಿ ಎಂಥದು ಮಾರಾಯ ನಿನ್ನ ಪಿರಿಪಿರಿ.. ನಾನು ಮಂಗಳೂರು ಮಂಜುನಾಥ ಅಲ್ವೋ? ಅನ್ನುವ ಕೆಟ್ಟ ಅನುಕರಣೆಯನ್ನಂತೂ ಕೇಳಿಯೇ ಇರುತ್ತೀರಿ. (ಮಂಗಳೂರಿನಲ್ಲಿ ಈ ರೀತಿ ಮಾತಾಡುವುದನ್ನು ನಾನು ಇಷ್ಟು ವರ್ಷದಲ್ಲಿ ಒಮ್ಮೆಯೂ ಕೇಳಿಲ್ಲ. ಇದೇ ರೀತಿ ಮಂಗಳೂರಿಗರೂ ಕೂಡ ಬೆಂಗಳೂರು ಇಲ್ಲವೇ ಧಾರವಾಡ ಕನ್ನಡವನ್ನು ಮಾತನಾಡಲು ಪ್ರಯತ್ನಿಸುತ್ತಾರೆ) ಇದರ ಜೊತೆಗೆ ವಿಶಿಷ್ಟ ರೀತಿಯಲ್ಲಿ ಪದಬಳಕೆ ಮಾಡುವುದನ್ನು ಗಮನಿಸಿರಬಹುದು.

ಕಾರಣ: ಇದಕ್ಕೆ ಇಲ್ಲಿನ ಕ್ರೈಸ್ತ ಮಿಶಿನರಿಗಳು ಇಂಗ್ಲೀಷ್ ನಿಂದ ಕನ್ನಡಕ್ಕೆ ಅನುವಾದ ಮಾಡುವಾಗ ಭಾಷೆಯ ಜೊತೆಗೆ ಆ ಭಾಷೆಯ ರಚನೆಯನ್ನು ಅನುಸರಿಸಿದರು.ಕಾಲಾನಂತರ ಆ ಪದಗಳು ಸಹಜವೇನೋ ಎಂಬಂತೆ ಬಳಕೆಯಾಗತೊಡಗಿದವು. ತುಳು, ಮಲೆಯಾಳಂ, ಬ್ಯಾರಿ ಭಾಷೆಯ ಪ್ರಭಾವ ಕಾರಣವಿರಬಹುದು.ತುಳು ಇಲ್ಲಿಯ ಬಹುತೇಕರ ಮಾತೃಭಾಷೆ. ಇಲ್ಲಿನ ಕನ್ನಡ ಪ್ರಯೋಗದಲ್ಲಿ ತುಳು ಪದಗಳ ಧಾರಾಳ ಬಳಕೆ ಕಾಣಬಹುದು.

ವಿಶೇಷ: ನಾವು ಮಂಗಳೂರು ಕನ್ನಡ ಎಂದು ಸಾಮಾನ್ಯವಾಗಿ ಹೇಳುತ್ತೇವೆಯಾದರೂ ಅದರೊಳಗೆಯೇ ಹಲವು ಉಪಭಾಷೆಗಳಿವೆ. ಕುಂದಾಪುರ ಸೀಮೆಯ  ಕುಂದಗನ್ನಡ ತುಳುನಾಡಿನ ವಿಶಿಷ್ಟ ಕನ್ನಡ ಪ್ರಯೋಗ. ವಿಶೇಷವೆಂದರೆ ಕುಂದಾಪುರದ ವ್ಯಕ್ತಿ ಕುಂದಗನ್ನಡ ಬಿಟ್ಟು ಮಂಗಳೂರು ಕನ್ನಡ ಉಪಯೋಗಿಸಿದರೆ ಎಂಥ ಕರ್ನಾಟಕಿ ಆಡೋದು ಅಂತ ಛೇಡಿಸುತ್ತಾರೆ.

ಇಲ್ಲಿ ಕನ್ನಡ ಮಾತಾಡುವ ಇನ್ನೊಂದು ಪ್ರಮುಖ ಸಮುದಾಯ ಹವ್ಯಕರದ್ದು. ಹವಿಕನ್ನಡದಲ್ಲಿ ಹೆಚ್ಚಾಗಿ ಹಳಗನ್ನಡ ಪದಪ್ರಯೋಗವನ್ನು ಉಳಿಸಿಕೊಂಡಿದೆ. (ಆದರೆ ಈ ವಾದವನ್ನು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಕೃತಿ ಖ್ಯಾತಿಯ ಶಂಕರಭಟ್ಟರು ಒಪ್ಪುವುದಿಲ್ಲ). ಕರಾವಳಿಯೇತರ ಹವಿಕನ್ನಡಕ್ಕೂ ಕರಾವಳಿಯ ಹವಿಗನ್ನಡಕ್ಕೂ ತುಸು ವ್ಯತ್ಯಾಸವಿದೆ. ಹವಿಗನ್ನಡದ ಪದಪ್ರಯೋಗ ಮತ್ತು ತುಳುವಿನಲ್ಲಿರುವ ಪದಪ್ರಯೋಗ ರೀತಿಗಳು ಹೋಲುತ್ತವೆ. ಹಳಗನ್ನಡಕ್ಕೂ ತುಳು ಭಾಷೆಗೂ ಹತ್ತಿರದ ಭಾಂದವ್ಯವಿದೆ. ಇಲ್ಲಿ ಕನ್ನಡವು ಜಾತಿಯಿಂದ ಜಾತಿಗೆ, ವೃತ್ತಿಯಿಂದ ವೃತ್ತಿಗೆ, ಪ್ರದೇಶದಿಂದ ಪ್ರದೇಶಕ್ಕೆ ಈ ಉಪಭಾಷೆಯು ಬದಲಾಗುತ್ತಿರುತ್ತದೆ.

ಕೆಲವು ಪದಪ್ರಯೋಗಗಳು:

೧. ಅವನು ಇವತ್ತು ನಮ್ಮ ಮನೆಯಲ್ಲಿ ನಿಲ್ಲುತ್ತಾನೆ. (ಇರುತ್ತಾನೆ ಎಂಬರ್ಥದಲ್ಲಿ)

೨. ಬೇಗ ಮಂಗಳೂರಿಗೆ ಎತ್ತಬೇಕು.(ತಲುಪಬೇಕು)

೩. ಮಗು ತುಂಬಾ ಕೂಗುತ್ತಿದೆ (ಅಳುತ್ತಿದೆ)

೪. ನಿಮ್ಮದು ಟೀ ಆಯ್ತಾ? (ಸಾಮಾನ್ಯವಾಗಿ ಬೆಳಗಿನ ತಿಂಡಿ)

೫. ಟೈಮ್ ೧೦ ಗಂಟೆ ಆಯ್ತು. ಇವತ್ತು ಕ್ಲಾಸ್ ಇತ್ತಾ? (ಇದೆಯಾ?)

೬. ನೀನೂ ಬರೋ ಕಣೋ.. (ಕಣೋ ಪದ ಸೇರಿಸಿದರೆ ಅದು ಬೆಂಗಳೂರು ಕನ್ನಡವಾಗುತ್ತದೆ ಎಂಬ ತಿಳುವಳಿಕೆ ಇರುವಂತೆ ತೋರುತ್ತದೆ. ಹಾಗಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಸೇರಿಸಿಬಿಡುತ್ತಾರೆ.)

ಗಮನಿಕೆ:  ಭಾಷಾಬಳಕೆಯಲ್ಲಿನ ಬದಲಾವಣೆ ವೇಗವಾಗಿ ಪರಿವರ್ತನೆಯಾಗುವುದು ಕಾಲೇಜು ವಿದ್ಯಾರ್ಥಿಗಳ ನಡುವೆ. ಇಲ್ಲಿಯೂ ಕನ್ನಡ ಬಳಕೆಯಲ್ಲಿ ಪಡ್ಡೆ ಭಾಷೆಯೂ ಪ್ರವೇಶ ಪಡೆಯುತ್ತಿದೆ. ಮಾಧ್ಯಮಗಳು ಬಹುಶ: ಇದಕ್ಕೆ ಸಾಕಷ್ಟು ಕಾರಣವಿರಬಹುದು. ಉದಾಹರಣೆಗೆ ಮಚ್ಚ, ಮಗ, ಲೈನು ಹೊಡೆಯುವುದು (ಈ ಪದಕ್ಕಂತೂ ಒಂದೇ ಪ್ರದೇಶದಲ್ಲಿ ಹಲವು ಪದಪ್ರಯೋಗಳಿರಬಹುದು), ಕಳಿಚಿಕೋ ಇತ್ಯಾದಿ. ಇನ್ನೊಂದು ವಿಶೇಷವೆಂದರೆ ಕಾಲೇಜು ಹುಡುಗಿಯರ (ಅದರಲ್ಲೂ ನಗರಪ್ರದೇಶದ) ಭಾಷಾಬಳಕೆಯಲ್ಲಿ ಆಗುತ್ತಿರುವ ವ್ಯತ್ಯಾಸಗಳು.ಈ ಮೊದಲು ಸಾಕಷ್ಟು ತುಳು ಬಳಕೆ ಮಾಡುತ್ತಿದ್ದ ವಿದ್ಯಾರ್ಥಿ ವರ್ಗ ಇಂಗ್ಲೀಷ್ ಬಳಕೆಗೆ ಒಳಗಾಗಿದೆ. ಇಲ್ಲವೇ ವಿಶೇಷ ಶೈಲಿಯಲ್ಲಿ ಕನ್ನಡ ಬಳಕೆ ಮಾಡತೊಡಗಿದ್ದಾರೆ. ಇದನ್ನು ಇಲ್ಲಿ ಮಾತಲ್ಲಿ ಶೇಲೆ ಮಾಡುವುದು ಎನ್ನುತ್ತಾರೆ. ಸ್ವಲ್ಪ ಸರಳವಾಗಿ ಹೇಳಬೇಕೆಂದರೆ ಇಂಗ್ಲೀಷ್ ತರಹ ಕನ್ನಡವನ್ನು ಬಳಸುವುದು. 

  ಇಷ್ಟೊಂದು ಚೇಂಜ್ ಆಯ್ತಲ್ಲ ಅಂತ ತಲೆ ಬಿಸಿ ಮಾಡಿಕೊಳ್ಳಬೇಡಿ. ಬದಲಾವಣೆ ಭಾಷೆಯ ಮೊದಲ ತತ್ವ. ಇಂಥ ಬದಲಾವಣೆಗಳ ಹಿಂದಿರುವ ಕಾರಣಗಳನ್ನು ಹುಡುಕಿ ಅಧ್ಯಯನ ಮಾಡುವುದು ಭಾಷಾವಿಜ್ಞಾನದ ಕೆಲಸ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಾತ್ವಿಕ್, ಕರಾವಳಿಯ ಭಾಷೆಗಳ ಬಗ್ಗೆ ಬರೆದದ್ದನ್ನು ಓದಿದ ಈ ಮನಸ್ಸು ಮುದಗೊಂಡಿತು ಓದಿ ಮುಗಿಸಿದಾಗ ಇನ್ನಷ್ಟು ಬರೆಯಬಹುದಿತ್ತು ನೀವು ಅಂತಲೂ ನನಗನ್ನಿಸಿತು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote] ಮಂಗಳೂರಿಗೆ ಬಂದಾಗ ಇಲ್ಲಿನ ಪುಸ್ತಕ ರೀತಿಯ ಕನ್ನಡ ಪ್ರಯೋಗವನ್ನು ನೀವು ಕೇಳಿಯೇ ಇರುತ್ತೀರಿ.[/quote] ಯಾವ ಪ್ರದೇಶದ ಭಾಷೆ ಹೆಚ್ಚು ಗ್ರಾಂಥಿಕವಾಗಿರುತ್ತದೋ ಅಲ್ಲಿನ ಜನರ ಸಂಸ್ಕೃತಿ ಅಷ್ಟು ಮಟ್ಟಿಗೆ ಮುಂದುವರಿದಿರುವದನ್ನು ತೋರಿಸುತ್ತದೆ ಎಂದು ಬಲ್ಲವರು ಹೇಳಿದ್ದು ಕೇಳಿದ್ದೇನೆ. ಸಣ್ಣ ಉದಾಹರಣೆ: ಮಂಗಳೂರಿನ ನಗರಸಾರಿಗೆ ಬಸ್ಸುಗಳ ನಿರ್ವಾಹಕರು ಹುಡುಕಿಕೊಂಡು ಬಂದು ಚಿಲ್ಲರೆ ಕೊಡುವದು -- ರಾಜ್ಯದ ಬೇರೆಡೆ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಡುವ ಭಾಷೆ ಹೆಚ್ಚು ಗ್ರಾಂಥಿಕ ಹೌದೊ ಅಲ್ಲವೋ ಅನ್ನುವುದಕ್ಕಿಂತ, ಯಾವುದೇ ಪ್ರದೇಶದಲ್ಲಿದ್ದರೂ, ಸುಸಂಸ್ಕೃತವಾದ ಭಾಷೆಯಲ್ಲಿ ಮಾತನಾಡುವ ಜನರು ಸ್ವಾಭಾವಿಕವಾಗಿ ಅಷ್ಟೇ ಸುಸಂಸ್ಕೃತರು ಅಂತ ಅನ್ನಬಹುದೇನೋ, ಅಲ್ಲವೇ? ಈ ಮೇಲಿನ ಮಾತುಗಳಿಗೂ ಸಂಸ್ಕೃತ ಭಾಷೆಗೂ ಯಾವ ಬಾದರಾಯಣ ಸಂಬಂಧವೂ ಇಲ್ಲ... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದು ಯಾವುದೇ ಹೋರಾಟ,ಕೂಗು ಗಳಿಲ್ಲದೆ ಕನ್ನಡವನ್ನು ಉಳಿಸಿಕೊಂಡು ಬರುತ್ತಿರುವವರು ಅವಿಭಜಿತ ದಕ್ಷಿಣ ಕನ್ನಡದವರಷ್ಟೆ. ಕನ್ನಡ ಭಾಷೆ ,ಕಲೆ ಸಂಸ್ಕ್ರುತಿ ,ಸಾಹಿತ್ಯ ವನ್ನು ಉಳಿಸಿ ಬೆಳೆಸುತ್ತಿ ರುವ ಕೀರ್ತಿ ದಕ್ಷಿಣ ಕನ್ನಡಿಗರಿಗೇ ಸೇರಬೇಕು. ನನ್ನ ಸಮೀಕ್ಷೆಯ ಪ್ರಕಾರ ಸಂಪದದಲ್ಲಿರುವ ಹೆಚ್ಚಿನ ಸದಸ್ಯರು ಅವಿಭಜಿತ ದಕ್ಷಿಣ ಕನ್ನಡವರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತೀಶ್, ಇದು ಇಲ್ಲಿ ಅನವಶ್ಯಕ ಅನಿಸ್ತಿದೆ... ಸಂಪದದ "ಸ್ವಿಚ್ ಆಫ್" (ಅದು ಇರುವುದು ದಕ್ಷಿಣಕನ್ನಡಿಗೇತರರ ಕೈಯಲ್ಲಿ :) ) ಆದರೆ ಈ ಅವಿಭಜಿತ ದ.ಕ.ದವರು ತಲೆ ಮೇಲೆ ಕೈಹಿಡಿದು ಕೂತಿರಬೇಕಷ್ಟೇ.... :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಯಕರೇ, :) ಸಮೀಕ್ಷೆಯ ವಿವರಗಳು ಹಾಗೂ ಅಂಕಿ ಅಂಶಗಳನ್ನು ಕೊಡುತ್ತೀರಾ? ನಿಮ್ಮ ಮಾತು ಎದೆ ತಟ್ಟಿಕೊಳ್ಳೋದಕ್ಕೆ ಸರಿ. ಆದರೆ ಬೇರೆ ಭಾಗಗಳಿಂದ ಬಂದವರನ್ನು, ಕನ್ನಡಕ್ಕೆ ಅವರ ಕೊಡುಗೆಯನ್ನ ಲಘುವಾಗಿ ನೋಡುವಂತಿದೆ ಅನ್ನೋದನ್ನ ಗಮನಿಸಿದ್ದೀರಾ? ಕನ್ನಡ ಭಾಷೆ, ಕಲೆ ಸಂಸ್ಕೃತಿಗಳೂ ಎಲ್ಲಾ ಭಾಗಳಲ್ಲಿಯೂ ಒಂದೇ ರೀತಿಯಾಗಿಲ್ಲ ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಹೇಳಹೊರಟಿರುವುದು ದಕ್ಷಿಣ ಕನ್ನಡಿಗರಿಗೆ ಸಂಸ್ರ್ಕುತಿ ಬಗ್ಗೆ ಅಭಿಮಾನ ಹೆಚ್ಚು ಎಂದು. ನನ್ನ ತಪ್ಪು ಗೊತ್ತಾಗಿದೆ. ನಿಮ್ಮ ಭಾವನೆಗಳನ್ನು ಕೆರಳಿಸಿದ್ದಕ್ಕೆ ಕ್ಷಮೆ ಇರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಸತೀಶ್ ನಾಯಕರೆ, ನಮ್ಮ ಅಭಿಮಾನ ಇತರರನ್ನು ನೋಯಿಸದಿರಲಿ, ತಪ್ಪಾಗಿದ್ದಕ್ಕೆ ಕ್ಷಮೆ ಕೇಳಿದೆ ನಿಮ್ಮ ಗುಣ ಬಹಳ ಇಷ್ಟವಾಯಿತು ಇಂತಿ ನಿಮ್ಮ ಪ್ರೀತಿಯ ಸಂದೀಪ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಕುಂದಾಪುರ ಸೀಮೆಯ ಕುಂದಗನ್ನಡ ತುಳುನಾಡಿನ ವಿಶಿಷ್ಟ ಕನ್ನಡ ಪ್ರಯೋಗ.>> ತುಳು ನಾಡಿನ ವ್ಯಾಪ್ತಿಯೇನು ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾತ್ವಿಕ್, ಲೇಖನ ಸೊಗಸಾಗಿದೆ... ನಾನು "ಕನ್ನಡ ಜಿಲ್ಲೆ"ಗೆ ಬಂದ ಹೊಸತರಲ್ಲಿ ಒಬ್ಬರು "ನೀವು ಎಲ್ಲಿ ನಿಂತಿದ್ದೀರಿ" ಎಂದು ಕೇಳಿದಾಗ ಅರ್ಥವಾಗದೆ "ಸಧ್ಯಕ್ಕೆ ನಿಮ್ಮೆದುರಿಗೆ !" ಅಂದಿದ್ದೆ. ಇಲ್ಲಿನವರಿಗೆ ಪದ್ಯವೆಂದರೆ ಸಿನಿಮಾ ಹಾಡಿನಿಂದ ಮೊದಲ್ಗೊಂಡು ಹಾಡಬಹುದಾದ ಎಲ್ಲವೂ. ಮಂಗಳೂರಿನಲ್ಲಿ ಜನ "ಮಜ" ಮಾಡುವುದಿಲ್ಲ, ಬದಲಾಗಿ "ಗಮ್ಮತ್ತು" ಮಾಡುತ್ತಾರೆ. ಎಂಥ ಅವಸ್ಥೆ ಮಾರಾಯ್ರೆ;-) ಇನ್ನು ಕುಂದಗನ್ನಡವಂತೂ ಒಳ್ಳೆಯ ಸಂಗೀತದಂತೆ ಕೇಳಲು ಬಹಳ ಹಿತವಾಗಿರುತ್ತೆ. ಆದರೆ ಕುಂದಾಪುರ ತುಳುನಾಡಿನ ವ್ಯಾಪ್ತಿಯಲ್ಲಿ ಬರುತ್ತೋ ಇಲ್ಲವೋ ಗೊತ್ತಿಲ್ಲ. ನನ್ನ ಸ್ನೇಹಿತರ ಪ್ರಕಾರ ಉಡುಪಿಯ ಕಲ್ಯಾಣಪುರ ಹೊಳೆ ತುಳುನಾಡಿನ ಗಡಿ... ನಿಜ, ತುಳುನಾಡಿನ ಜನ ವಿರಳ ಉಚ್ಚಾರಣೆಯ ವಿಶಿಷ್ಟ ಕನ್ನಡ ಮಾತಾಡಿದರೂ ಸಿನೆಮಾದಲ್ಲಿ ತೋರಿಸುವ ಬಗೆಯಲ್ಲಂತೂ ಅಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾತ್ವಿಕ್, ಚಂದ ಬರೆದಿದ್ದೀರಿ. ನಾನು 'ಕುಂದಗನ್ನಡ' ಮಾತಾಡಲು ಪ್ರಯತ್ನ ಪಡುತ್ತಿರುತ್ತೇನೆ , ಅದೊಂತರ disc brake ಜಾಸ್ತಿ ಬಳಕೆ ಆಗುತ್ತೆ ಅನ್ನಿಸುತ್ತೆ, ಬಹಳ ಕಡೆ ಬ್ರೇಕ್ ಹಾಕಿ ಮಾತಾಡಬೇಕು ;) ರಾಕೇಶ್ ಶೆಟ್ಟಿ :) 'ಎಲ್ಲರೊಳಗೊಂದಾಗು - ಮಂಕು ತಿಮ್ಮ||'
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾತ್ವಿಕ್ ಭಾಷಾ ವಿದ್ಯೆಯಲ್ಲಿ ಡಾಕ್ಟರಿಕೆಗೆ ಕಳಸವಿಟ್ಟಂತಿದೆ,ಆಸು ಹೆಗ್ಡೆಯವರು ಹೇಳಿದಂತೆ ಇನ್ನೂ ಹೆಚ್ಚಿನ ವಿಷಯ ಬರೆಯಬಹುದಿತ್ತೇನೋ... ಒಳ್ಳೆ ಪ್ರಯತ್ನ, ಹಾಗೂ ಅಭಿನಂದೆನೆಗಳು. ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.