ಜೀವನವ್ಯಾಪಾರ - ನಾವು ಏಕೆ ಓದುತ್ತಿರಬೇಕು?

0

ವ್ಯಾಪಾರಿ ಇವತ್ತು ಆದ ವ್ಯಾಪಾರ - ಟರ್ನ್ ಓವರ್ ಎಷ್ಟೆಂದು ನೋಡುತ್ತಾನೆಯೇ ಹೊರತು ಲಾಭ-ಹಾನಿ ಲೆಕ್ಕಾಚಾರ ಮಾಡುವದಿಲ್ಲ ; ಇವತ್ತು ಬಂದ ಹಣವನ್ನು ಎನಿಸಿ ಅದೆಲ್ಲ ಲಾಭವೇ ಎಂಬಂತೆ ಸಂತೋಷಪಡುತ್ತಾನಂತೆ . ಹೀಗೆ ಬಾಳನ್ನು ನೋಡುವ ದೃಷ್ಟಿ ಎರಡಿವೆ . ಒಂದು - ವಿಕ್ರಯದ ಮೊತ್ತ ನೋಡಿ ಸಂತಸಪಡುವ ದೃಷ್ಟಿ . ಆತ ಲಾಭವನ್ನು ಗಣಿಸುವದಿಲ್ಲ . ಅಂಗಡಿಯಲ್ಲಿ ಹಗಲೆಲ್ಲ ಗಿರಾಕಿ ತುಂಬಿರಬೇಕು , ವ್ಯಾಪಾರವಾಗಬೇಕು . ಲೋಕದ ತತ್ವಜ್ನಾನಿಗಳು ಅಕೌಂಟಂಟರಂತೆ . ಎಲ್ಲವನ್ನು ಸಂಶಯದಿಂದ ನೋಡಿ , ವ್ಯವಹಾರಕ್ಕೆಲ್ಲ ಆಧಾರ ಕೇಳಿ ವ್ಯಾಪಾರದಲ್ಲಿ ಲಾಭವಿಲ್ಲೆಂದು ನಿರ್ವಿಕಾರವಾಗಿ ಹೇಳುವರು . ನಿಮ್ಮ ಆನಂದಕ್ಕೆ ಪ್ರಮಾಣ ಬೇಡುವರು . ಸವಕಳಿ ತೆಗೆಯುವರು , ದೋಷಗಳನ್ನು ಎತ್ತಿ ತೋರಿಸುವರು.

... ಜೀವನದಲ್ಲಿ ಟರ್ನ್ ಓವರ್ ಕಡೆ ದೃಷ್ಟಿ ಇರುವದಾದರೆ ಅದನ್ನು ಹೆಚ್ಚಿಸಿಕೊಂಡು ಸಂತಸಪಡಲು ಅನೇಕ ದಾರಿಗಳಿವೆ. ಬಾಳುವದೆಂದರೆ ಒಂದು ವಿಧವಾದ ಚಿನ್ನ ತೆಗೆವ ಕೆಲಸ . ಟನ್ನುಗಟ್ಟಲೆ ಅದಿರನ್ನು ತೆಗೆದು ಸ್ವಚ್ಚಗೊಳಿಸಿದರೆ ತೊಲೆಗಳ ಲೆಕ್ಕದಲ್ಲಿ ಬಂಗಾರ ಹೊರಟೀತು . ಆದರೆ ಬಂಗಾರವನ್ನು ಟಂಕಸಾಲೆಗಳಂತೆ ಗಟ್ಟಿಗಳ ರೂಪದಲ್ಲಿ ದೇವರು ಇಟ್ಟಿಲ್ಲ . ಚಿನ್ನ ಪಡೆಯಲು ಒಂದೇ ದಾರಿ - ರಾಶಿಗಟ್ಟಲೆ ಕಲ್ಲು ಮಣ್ಣು ಅಗದು , ಒಡೆದು . ಕುಸಿಸುವದು , ತೊಲೆಯುವದು , ಸೋಸುವದು , ಸಂಸ್ಕರಿಸುವದು . ಲಾಂಗೂಲಾಚಾರ್ಯರನ್ನು ಕೇಳಿದರೆ  ಚಿನ್ನ   ಬರಿ ನೆಪ ಮಾತ್ರ ; ಅಗೆಯುವ ಸಾಹಸವೇ ಮುಖ್ಯ . ಬಾಳಿನಲ್ಲೂ ಹಾಗೆಯೇ ಆನಂದ, ಸುಖ ನೆಪ ಮಾತ್ರ ; ಅದರ ಬೇಟೆಯೇ ನಿಜವಾದ ಜೀವನ . --- ಇದು ಲಾಂಗೂಲಾಚಾರ್ಯ ರ ಹರಟೆಗಳ ಸಂಗ್ರಹ- ಇವರೇ ಲಾಂಗೂಲಾಚಾರ್ಯರು - ಪುಸ್ತಕದಲ್ಲಿ ನನಗೆ ಸಿಕ್ಕಿದ್ದು . -- ಇನ್ನೂರು ಪುಟ ಓದಿದಾಗ ಸಿಕ್ಕ ಒಂದೆರಡು ಪುಟಗಳು . ಈ ಎರಡು ಪುಟದ ವಿಚಾರ ನಮಗೆ ದಕ್ಕುವದು ಇನ್ನೂರು ಪುಟ ಓದಿದಾಗ , ಎಲ್ಲೋ ಒಂದೆಡೆ . ಈಗ ನನಗನಿಸಿತು . ನಮ್ಮ ಓದೂ ಹಾಗೆಯೇ ! ಅಲ್ಲವೇ ? ಎಲ್ಲೋ ಒಂದೆಡೆ ಒಳ್ಳೆಯ ಓದು ಪಡೆಯಲು ಎಷ್ಟೋ ಪುಟ ಓದಬೇಕು ಅಲ್ಲವೇ ? ಅದಕ್ಕಾಗಿ ಓದುತ್ತಿರಬೇಕು !

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಪ್ರಿಯ ಲೇಖಕರೆ,

ನಿಮ್ಮ ಬರಹ ಚೆನ್ನಾಗಿದೆ.
ಅರ್ನೆಸ್ಟ್ ಹೆಮಿಂಗ್ವೇ ಬರೆದ ಒಂದು ಸಣ್ಣ ಕಾದಂಬರಿ The old man and the sea ಜ್ಞಾಪಕಕ್ಕೆ ಬಂತು. ಈ ಪುಸ್ತಕಕ್ಕೆ ನೋಬೆಲ್ ಪ್ರಶಸ್ತಿ ಲಭಿಸಿದೆ. ಇದರಲ್ಲಿ ಕಥಾನಾಯಕ ಒಬ್ಬ ವೃದ್ದ ಮೀನುಗಾರ. ದಡದಿಂದ ಬಹು ದೂರದಲ್ಲಿ ತನ್ನ ಬಲೆಗೆ ಬಿದ್ದ ದೊಡ್ಡ ಶಾರ್ಕ್ ಮೀನೊಂದನ್ನು ಒಂಟಿಯಾಗಿ ಸಾಹಸಪಟ್ಟು ದಡಕ್ಕೆ ತರುವಷ್ಟರಲ್ಲಿ ಸಣ್ಣ ಮೀನುಗಳೆಲ್ಲ ಅದನ್ನು ತಿಂದುಬಿಟ್ಟಿರುತ್ತವೆ. ಆದರೆ ಮೀನಿನ ಎಲುಬು ಮಾತ್ರ ಅವನ ಸಾಹಸಕ್ಕೆ ಸಾಕ್ಷಿಯಾಗಿ ಉಳಿದಿರುತ್ತದೆ. ಅವನ ಸಾಧನೆಯನ್ನು ಅಂದು ರಾತ್ರಿ ಹರ್ಷೋಲ್ಲಾಸದಿಂದ ಹಾಡು ಕುಣಿತಗಳೊಂದಿಗೆ ಕೊಂಡಾಡುತ್ತಾರೆ. ಮರುದಿನ ಎಂದಿನಂತೆ ಆ ಮುದುಕ ತನ್ನ ಸಣ್ಣ ದೋಣಿಯಲ್ಲಿ ಮೀನು ಹಿಡಿಯಲು ಹೊರಡುತ್ತಾನೆ. ಅವನಿಗೆ ಹಿಂದಿನ ದಿನದ ಸಾಹಸದಲ್ಲಿ ಯಾವ ಗಳಿಕೆಯೂ ಇಲ್ಲದಿದ್ದರೂ ಒಂದು ವಿಚಿತ್ರವಾದ ತೃಪ್ತಿ ಮತ್ತು ಆನಂದ ಅವನಲ್ಲಿ ತುಂಬಿರುತ್ತದೆ.

ನಾವು ಪುಸ್ತಕ ಹುಡುಕುವುದು ಮತ್ತು ಓದುವುದರಲ್ಲಿಯೂ ಇದೇ ರೀತಿಯ ಅನುಭವ ದೊರೆಯುತ್ತದೆ. ಯಾವುದೇ ಹುಡುಕಾಟದ ಕೊನೆ ಆನಂದ. ಆ ಕೊನೆಯಿಲ್ಲದ ಆನಂದದ ಅರಸುವಿಕೆಯಲ್ಲೂ ಒಂದು ವಿಚಿತ್ರವಾದ ಸಿಹಿಯಿದೆ. ಅದನ್ನು ಕಡೆಗಣಿಸದೆ ಆ ಗುರಿ ತಲುಪಿದರೆ ಎಷ್ಟು ಚೆನ್ನ ಅಲ್ಲವೆ ?

ಎನ್. ಅಂಜನ್ ಕುಮಾರ್
thewiseant@yahoo.co.in

yahoo messenger ನಲ್ಲೂ ಲಭ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.