ಜೀವನ ಬಂಡೆ ಕಲ್ಲಾ?

0

ಜೀವನ ಬಂಡೆ ಕಲ್ಲಾ?
ಇಂತಹದ್ದೊಂದು ಪ್ರಶ್ನೆ ಇಷ್ಟೊಂದು ಚಿಕ್ಕ ವಯಸ್ಸಿಗೆ ( ಹೌದ !!) ಉದ್ಭವಿಸಿದ್ದು ನನ್ನ ಮೊಬೈಲ್ ಗೆ ಸಂದೇಶವೊಂದು ಬಂದಾಗ...
ತಟ್ಟನೆ ಚುಟುಕಾಗಿ ಉತ್ತರಿಸಬೇಕಾದ ಪ್ರಶ್ನಾ ಸರಣಿ ಹೊತ್ತ ಸಂದೇಶ ನನ್ನ ಮೊಬೈಲ್ ಫೋನ್ಗೆ ಬಂತು. ನಿಯಮ ಇಷ್ಟೇ , ಪ್ರಶ್ನೆ ( ಸರಿಯಾಗಿ ಹೇಳಬೇಕೆಂದರೆ ಪದ ) ಓದಿದಾಗ ಮೊದಲಬಾರಿಗೆ ಅದೇನು ಹೊಳೆಯುತ್ತದೋ ಹೇಳಿ ಬಿಡಬೇಕಿತ್ತು.

ಮೊದಲನೆಯದು "ಪ್ರೀತಿ "- ಮನಸ್ಸಿನಲ್ಲಿ ಪಟ ಪಟ ಸದ್ದು ಮಾಡ್ತಾ ಜೋಡಿ ಹಕ್ಕಿಗಳು ಕಣ್ಮುಂದೆ ಬಂದ್ಬಿಡೋದೇ...? ಹೌದು ಇನ್ನೇನು , ಅಪ್ಪ ಅಮ್ಮಂದಿರ , ಸಂಸಾರ ,ಬಂಧುಬಳಗದ ವಿರೋಧ ಇಲ್ದಿದ್ರೆ ಪ್ರೀತಿ ಜೋಡಿ ಹಕ್ಕಿನೇ ತಾನೇ? ಸ್ವಚ್ಚಂದ ಆಗಸದಲ್ಲಿ ಪಟ ಪಟ ರೆಕ್ಕಿ ಬಿಚ್ಚಿ ಹಾರಿ ಇಬ್ಬರೇ ಕಾಲ ಕಳೀಬಹುದಲ್ವಾ?

ಎರಡನೆಯದು "ಜೀವನ" -ಅದ್ಯಾಕೋ ದೊಡ್ಡ ಬಂಡೆ ಕಲ್ಲುಗಳು ಕಣ್ಮುಂದೆ ಬರಬೇಕೆ? ಯಾಕೆ ಬಂತು? ನಾನೇನು ಬಂಡೆಕಲ್ಲುಗಳ ಕೆಲಸ ಮಾಡೋನಲ್ಲ.. ಚಿಕ್ಕ ಕಲ್ಲೆತ್ತಿ ಹೊಡೆದಿದ್ದೂ ಕಮ್ಮಿನೇ , ಮತ್ಯಾಕೆ? ಬಸ್ಸಿನೊಳಗೆ ಕುಳಿತ ನನಗೆ ಆ ರಾತ್ರಿಯ ಕತ್ತಲಲ್ಲಿ ಸುತ್ತ ಮುತ್ತ ಬಂಡೆಗಳೇನು ಕಾಣಿಸೋ ಹಾಗಿರಲಿಲ್ಲ..ಹಾಗಂತ ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿ ,ಜೀವಿಸಲು ಶ್ರಮಪಟ್ಟು ಜೀವನವೆಂದರೆ ಕಠಿಣ ಅನ್ನೋವಷ್ಟು ವಯಸ್ಸಾಗಲಿ ,ಸಾಧನೆಯಾಗಲಿ ಮಾಡಿಲ್ಲ. ಜುಜುಬಿ ಇಪ್ಪತ್ನಾಲ್ಕಕ್ಕೆ ಜೀವನ ಅಂದಾಗ ಬಂಡೆ ಕಲ್ಲು ಕಣ್ಣೆದುರಿಗೆ ಬಂದ್ರೆ ಸ್ವಲ್ಪ ಯೋಚನೆ ಮಾಡದಿದ್ದರೆ ಹೇಗೆ ?
ಹೌದು ... ಜೀವನ ಬಂಡೆ ಕಲ್ಲೇ ಸರಿ.. ಬಂಡೆ ಕಲ್ಲು ಕಠಿಣವೇನೋ ಹೌದು, ಆದರೆ ಅದೇ ಶಿಲೆಯಿಂದಲೇ ತಾನೇ ಶಿಲ್ಪ ಅರಳೋದು..? ಶಿಲೆಯನ್ನು ಶಿಲ್ಪವಾಗಿಸಲು ಪರಿಶ್ರಮವೇನೋ ಬೇಕು ಜೊತೆಗೆ ತಾಳ್ಮೆನೂ ಬೇಕು.ಪ್ರತಿ ದಿನವೂ ಉಳಿಪೆಟ್ಟು ತಿಂದು ತಿಂದು ಚಂದದ ಶಿಲ್ಪ ಅರಳುವಂತೆ ಜೀವನವೂ ದಿನ ದಿನದ ಅನುಭವ ,ಪರಿಶ್ರಮದ ಫಲವಾಗಿ ಸುಂದರವಾಗುತ್ತಾ ಸಾಗುತ್ತದೆ.

ಶಿಲೆಯಿಂದ ಶಿಲ್ಪವು ಅದೆಷ್ಟು ಸದೃಡವಾಗಿ ಅರಳುವುದೋ ಹಾಗೇ ಜೀವನವೂ ದಿನನಿತ್ಯದ ಅನುಭವಗಳಿಂದ ಅಷ್ಟೇ ದೃಡ ವಾಗಬೇಕಲ್ಲ ? ಜೀವನದಲ್ಲಿ ತಪ್ಪು ಹೆಜ್ಜೆಗಳಿಡದಂತೆ ಎಚ್ಚರವಿರಬೇಕು. ಒಂದೇ ಒಂದು ಎಚ್ಚರ ತಪ್ಪಿದ ಉಳಿಪೆಟ್ಟು ಶಿಲ್ಪವನ್ನು ಕೆಡಿಸಿ ಆ ಕ್ಷಣದ ವರೆಗಿನ ಶ್ರಮವನ್ನೆಲ್ಲಾ ವ್ಯರ್ಥ ಮಾಡುವಂತೆ ಜೀವನ ಆಗಬಾರದಲ್ವಾ? ಶಿಲೆ ಶಿಲ್ಪವಾಗಲಿ , ಶಿಲ್ಪ ಶಿಲೆಯಾಗದಿರಲಿ ..

ಏನಂತೀರಾ?

-Subbu
www.selaku.blogspot.com

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.