ತಂತ್ರಾಂಶಿಗಳು ಎದುರಿಸುತ್ತಿರುವ ತೊಂದರೆಗಳು

4

ಕೆಲಸ ಮಾಡದೇ ದುಡಿಮೆ ಇಲ್ಲ. ದುಡಿಮೆ ಇಲ್ಲದೇ ಬಾಳಿಲ್ಲ. ದೈಹಿಕವಾಗಿ ಕೆಲಸ ಮಾಡಿ ದುಡಿಯುವವರೂ ಇದ್ದಾರೆ ಮತ್ತು ಮಾನಸಿಕವಾಗಿ ಕೆಲಸ ಮಾಡಿ ದುಡಿಯುವವರು ಇದ್ದಾರೆ. ದೈಹಿಕವಾಗಿ ಕೆಲಸ ಮಾಡುವವರನ್ನು ಸಾಮಾನ್ಯ ಭಾಷೆಯಲ್ಲಿ ಕೂಲಿಗಳೆಂದು ಕರೆಯುವುದು ವಾಡಿಕೆ. ಅವರ ಕೆಲಸ ನಿರ್ವಹಣೆಯಲ್ಲಿ ಬುದ್ಧಿಯ ಉಪಯುಕ್ತತೆ ಅಷ್ಟಾಗಿ ಬೇಕಿಲ್ಲ. ಆದರೆ ಮಾನಸಿಕವಾಗಿ ದುಡಿಯುವವರಿಗೆ ಬುದ್ಧಿಯ ಉಪಯೋಗವೇ ಪ್ರಧಾನವಾದದ್ದು.

ತಂತ್ರಾಂಶ ಅಭಿಯಂತರ ಕೆಲಸವು ಪೂರ್ತಿಯಾಗಿ ಬುದ್ಧಿ ಶಕ್ತಿ ಉಪಯೋಗದಿಂದಲೇ ಆಗುವುದು. ಪ್ರೋಗ್ರಾಮಿಂಗ್, ಕೋಡಿಂಗ್, ಟೆಸ್ಟಿಂಗ್ ಎಂದು ನೂರಾರು ವಿಭಾಗಗಳನ್ನು ಹೊಂದಿರುವ ಗಣಕಯಂತ್ರದ ಸಹಾಯದಿಂದ ಕೆಲಸ ಮಾಡುವ ಉದ್ದಿಮೆ ಈಗ ಹೆಚ್ಚಿನ ಬೇಡಿಕೆಯಲ್ಲಿದೆ. ಈಗೊಂದು ೨೦ ವರ್ಷಗಳ ಹಿಂದೆ ಹೆಚ್ಚಿನ ಕೆಲಸಗಳನ್ನು ಗಣಕಯಂತ್ರದ ಸಹಾಯವಿಲ್ಲದೆಯೇ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ನಿಧಾನವಾಗಿ ಗಣಕಯಂತ್ರದ ಉಪಯೋಗ ಬಳಕೆಗೆ ಬಂದಿತು. ಹಣವಂತ ರಾಷ್ಟ್ರಗಳಾದ ಅಮೆರಿಕ, ಇಂಗ್ಲೇಂಡ್, ಜರ್ಮನಿ, ಜಪಾನ್ ಇತ್ಯಾದಿಗಳಲ್ಲಿ ಕ್ಷಿಪ್ರ ಗತಿಯಲ್ಲಿ ಗಣಕಯಂತ್ರದ ಬಳಕೆಯಾಯಿತು. ಈ ಕ್ಷೇತ್ರದಲ್ಲಿ ಹೆಚ್ಚಿನ ಶ್ರಮ ವಹಿಸಿದವರು ಭಾರತೀಯರೇ. ಭಾರತೀಯ ತಂತ್ರಾಂಶ ಪರಿಣತರು ಇತರ ದೇಶಗಳಿಗೆ ಹೋಗಿ ಕೆಲಸ ಮಾಡುತ್ತಿದ್ದರು, ಮಾಡುತ್ತಿದ್ದಾರೆ. ಆದರೂ, ನಮ್ಮ ದೇಶದಲ್ಲಿ ಇಷ್ಟು ಕ್ಷಿಪ್ರ ಗತಿಯಲ್ಲಿ ಬೆಳವಣಿಗೆ ಆಗಲಿಲ್ಲ. ಇದಕ್ಕೆ ಮುಖ್ಯ ಕಾರಣವೇನೆಂದರೆ, ಅಲ್ಲಿ ಮಾನವ ಸಂಪನ್ಮೂಲ ಕಡಿಮೆ ದರದಲ್ಲಿ ಸಿಕ್ಕುತ್ತಿದ್ದು (ನಮ್ಮ ದೇಶದವರೇ) ಮತ್ತು ಮೂಲ ಬಂಡವಾಳವನ್ನು ಹೆಚ್ಚಿನ ಮೊತ್ತದಲ್ಲಿ ತೊಡಗಿಸಿದ್ದರು. ಈಗೀಗ ನಮ್ಮ ದೇಶದಲ್ಲಿಯೂ ಎಲ್ಲ ಕ್ಷೇತ್ರಗಳಲ್ಲಿಯೂ ಗಣಕಯಂತ್ರದ ಉಪಯೋಗ ಅಧಿಕವಾಗಿದೆ. ಹಾಗಾಗಿ ಗಣಕಯಂತ್ರದ ಸಹಾಯದಿಂದ ಸುಲಭವಾಗಿ ಕೆಲಸ ಮಾಡಲು ಬೇಕಿರುವ ತಂತ್ರಾಂಶವನ್ನು ಅಭಿಯಂತರರು ಒದಗಿಸುವರು. ಈ ಕ್ಷೇತ್ರದಲ್ಲಿ ಖಾಸಗೀ ಬಂಡವಾಳುದಾರರ ಪಾಲು ಹೆಚ್ಚಾಗಿ, ಲಾಭ ಮಾಡುವುದೇ ಗುರಿಯಾಗಿದೆ. ಕೆಲಸ ಮಾಡುವ ಆಭಿಯಂತರರಿಗೆ ಉಳಿದ ಕ್ಷೇತ್ರಗಳಿಗಿಂತಲೂ ಹೆಚ್ಚಿನ ಸಂಬಳವನ್ನು ಕೊಡುವರು. ಅವರು ಮಾಡುವ ಖರ್ಚಿಗಿಂತಲೂ ಹೆಚ್ಚಿನ ವರಮಾನ ಗಳಿಸುವುದೇ ಬಂಡವಾಳದಾರರ ಉದ್ದೇಶ. ಹಾಗಾಗಿ ಅಭಿಯಂತರರು ಹೆಚ್ಚಿನ ಪರಿಶ್ರಮ ವಹಿಸಿ ಕೆಲಸ ಮಾಡಬೇಕಾಗಿದೆ. ಇಂತಹ ಸಂದರ್ಭಗಳಲ್ಲಿ ಅವರಿಗೆ ಒದಗಬಹುದಾದ ಕೆಲವು ತೊಂದರೆಗಳ ಬಗ್ಗೆ ನನಗೆ ತಿಳಿದ ಮಟ್ಟಿಗೆ ಎರಡು ಸಾಲುಗಳನ್ನು ಬರೆದು ತಿಳಿಸಿರುವೆ.

ಇಂದಿನ ಪರಿಸ್ಥಿತಿಯಲ್ಲಿ ಎಲ್ಲರಿಗೂ ತಿಳಿದಿರುವಂತೆ ತಂತ್ರಾಂಶ ಅಭಿಯಂತರುಗಳ ಕಾರ್ಯ ವೈಖರಿಯಲ್ಲಿ ಬಹಳ ಒತ್ತಡವಿದೆ. ಇದಕ್ಕೆ ಕಾರಣವೇನು?
ಮೊದಲಿಗೆ ಈ ಕ್ಷೇತ್ರದಲ್ಲಿ ಈಗ ಇರುವ ಬೇಡಿಕೆ ಮೊದಲಿಗಿಂತ ಹೆಚ್ಚಾಗಿದೆ. ಎಲ್ಲ ಕ್ಷೇತ್ರಗಳನ್ನೂ ಗಣಕೀಕರಣಗೊಳಿಸುತ್ತಿರುವರು. ಕೆಲಸ ಮಾಡುತ್ತಿರುವವರು ಕೆಲಸಕ್ಕೆ ಇರುವ ಬೇಡಿಕೆಗಿಂತ ಕಡಿಮೆಯಾಗಿ ಇದ್ದು, ಕೆಲಸಿಗರ ಮೇಲೆ ಒತ್ತಡ ಜಾಸ್ತಿಯಾಗುತ್ತಿದೆ. ಅದಲ್ಲದೇ ಹೆಚ್ಚಿನ ಸಮಯವೆಲ್ಲಾ ಮಿದುಳಿಗೇ ಹೆಚ್ಚಿನ ಕೆಲಸ. ಹಾಗಾಗಿ ಮಾನಸಿಕ ಶ್ರಮ ಹೆಚ್ಚಾಗಿರುವುದು. ದಿನಕ್ಕೆ ೧೦ ರಿಂದ ೧೨ ಘಂಟೆಗಳ ಕಾಲ ಒಂದೇ ಸಮನೆ ಕೆಲಸ ಮಾಡಬೇಕಾಗಬಹುದು.
ಇನ್ನು ಸತತವಾಗಿ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ಬೆನ್ನಿಗೆ, ಪೃಷ್ಠಕ್ಕೆ ತೊಂದರೆ, ಮತ್ತು ಸದಾ ಕಾಲ ಮಾನಿಟರ್ ನೋಡುವುದರಿಂದ ಕಣ್ಣಿಗೆ ತೊಂದರೆ ಬರುವ ಸಾಧ್ಯತೆಗಳಿವೆ. ಭೌತಿಕ ಶರೀರಕ್ಕೆ ಕೆಲಸ ಕಡಿಮೆಯಾಗಿ ತಲೆಗೆ ಕೆಲಸ ಜಾಸ್ತಿಯಾಗುವುದು. ಇದರಿಂದ ಬೊಜ್ಜು ಬರುವುದು, ಜೀರ್ಣಶಕ್ತಿ ಕಡಿಮೆ ಆಗುವುದು. ಮುಂದೆ ಇದರಿಂದ ಹೊಟ್ಟೆಗೆ ಸಂಬಂಧಪಟ್ಟ ಕಾಯಿಲೆಗಳು, ಮಿದುಳಿಗೆ ಸಂಬಂಧಪಟ್ಟ ಕಾಯಿಲೆಗಳು ಮತ್ತು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಅಷ್ಟೇ ಅಲ್ಲ, ಮನಸ್ಸಿಗೆ ನೆಮ್ಮದಿಗೊಳಿಸಿ ಉತ್ತೇಜಿಸುವ ಸುಲಭೋಪಾಯವಾದ ಸಿಗರೇಟ್, ಕಾಫೀ, ಚಹಾಗಳ ಸೇವನೆ ಹೆಚ್ಚಾಗಿ ಅಂತಹ ದುಶ್ಚಟಗಳಿಗೆ ಬಲಿಯಾಗಿ ವ್ಯಸನಿಗಳಾಗಬಹುದು. ಒಂದರಿಂದ ಹಿಂದೆ ಒಂದರಂತೆ ಸಿಗರೇಟ್ ಸೇವನೆಯಿಂದ ಹೃದಯ ರೋಗಗಳೂ, ಚಹ - ಕಾಫಿಗಳ ಸೇವನೆಯಿಂದ ವಾಯು ಪಿತ್ತಕ್ಕೆ ಸಂಬಂಧಿಸಿದ ರೋಗಗಳೂ ಬರುವುವು. ಇಷ್ಟೆಲ್ಲಾ ಹೆಚ್ಚಿನ ಸಮಯ ಕೆಲಸ ಮಾಡುವುದರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ. ಅಂತಹ ಸಮಯಗಳಲ್ಲಿ ಮದ್ಯಪಾನದ ಸೇವನೆಯ ಮೊರೆ ಹೋಗುವುದೂ ಉಂಟು. ಕುಡಿತ ಹೆಚ್ಚಾಗಿ ಅದರಿಂದ ನರ ದೌರ್ಬಲ್ಯ, ಕರುಳು ಬೇನೆ, ಹೃದ್ರೋಗ ಇತ್ಯಾದಿಗಳಿಗೂ ತುತ್ತಾಗಬೇಕಾದೀತು.

ಇವುಗಳಿಂದ ಸ್ವಲ್ಪ ಶಮನ ದೊರೆಯಲು, ಯೋಗಾಸನ ಸ್ಥಿತಿಯಲ್ಲಿ ಕುಳಿತು ಕೆಲಸ ಮಾಡುವುದನ್ನು ಅಳವಡಿಸಿಕೊಳ್ಳಬಹುದು. ಕುಳಿತಲ್ಲಿಯೇ ಮಾಡುವ ಆಸನಗಳಿಂದ, ಕುತ್ತಿಗೆ, ಕಣ್ಣಿಗೆ ಸಂಬಂಧಪಟ್ಟ ಆಸನಗಳಿಂದ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು. ಅಲ್ಲಿ ಇಲ್ಲಿ ಓಡಾಡುವಾಗಲೂ ಇಂತಹ ಆಸನಗಳನ್ನು ಮಾಡಿ, ಅವುಗಳನ್ನು ಜೀವನ ಶೈಲಿಯಲ್ಲಿ ಅಳವಡಿಸಿಕೊಂಡು ಪ್ರತಿಫಲ ಪಡೇಯಬಹುದು.

ಇನ್ನು ಮಿದುಳಿಗೆ ಶಮನಕಾರಿಯಾಗಲು ಅಧ್ಯಾತ್ಮ ಚಿಂತನೆ, ಕೆಲಸ ಮಾಡುವಾಗಲೇ ಒಳ್ಳೊಳ್ಳೆಯ ಹಾಡು ಸಂಗೀತವನ್ನು ಆಲಿಸುವುದು ಒಳ್ಳೆಯದು. ಒಂದೇ ಸಮನೇ ಒಂದೇ ದಿಕ್ಕಿನಲ್ಲಿ ಚಿಂತಿಸುವ ಮನಸ್ಸಿಗೆ ವಿರಾಮ ಕೊಡಲು ಸಾಹಿತ್ಯ ಕೃಷಿಯೂ ಫಲಕಾರಿ. ಕವನ, ಕಥೆ, ಲೇಖನಗಳನ್ನು ಬರೆಯುವುದರಿಂದ ಮನಸ್ಸಿಗೆ ಸ್ವಲ್ಪ ಹಿತವೆನಿಸುವುದು.

ಅಧ್ಯಾತ್ಮ ಎಂದರೇನು? ಅದರ ಚಿಂತನೆ ಎಂದರೇನು? ಅದರ ಅವಶ್ಯಕತೆ ಇದೆಯೇ (ಸರ್ವಕಾಲಕ್ಕೂ)? ಪ್ರಸ್ತುತ ಜೀವನದಲ್ಲಿ ಪರಿಸ್ಥಿತಿ ಹೇಗಿದೆ? ಅದರಲ್ಲಿ ಅಧ್ಯಾತ್ಮದ ಪಾತ್ರದಿಂದ ಏನಾದರೂ ಸಹಾಯವಾಗಬಹುದೇ?
ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಒತ್ತಡ ಯಾವ ಉದ್ಯೋಗದಲ್ಲಿದೆ?
ತಂತ್ರಾಂಶ ಅಭಿಯಂತರುಗಳ ಕಾರ್ಯವೈಖರಿ? ಮಾನಸಿಕ ಒತ್ತಡ, ಅಸಂತುಲತೆ.
ಇದರಿಂದ ಕುಟುಂಬದ ಮೇಲೆ ಆಗಬಹುದಾದ ದುಷ್ಪರಿಣಾಮ, ಸಮಾಜಕ್ಕೆ ಹೇಗೆ ಒಳಿತಾಗದು?
ಅಧ್ಯಾತ್ಮ ಬಾಳಿನಲ್ಲಿ ಅಳವಡಿಸಿಕೊಂಡರೆ ಹೇಗೆ ಬದುಕಿನ ವೈಖರಿ ಉತ್ತಮ ರೀತಿಯದ್ದಾಗಬಹುದು? ಅಧ್ಯಾತ್ಮದ ಜೊತೆ ಜೊತೆಗೆ ಯೋಗಾಸನ ಇನ್ನಿತರೇ ಕ್ಷೀಣಿಸುತ್ತಿರುವ ಶಾಸ್ತ್ರಗಳ ಅಭ್ಯಾಸದ ಅವಶ್ಯಕತೆ.

ಹೆಚ್ಚಿನ ಯೋಚನೆಯಿಂದಾಗಿ ಮಿದುಳಿಗೆ ವಿಶ್ರಾಮ ಬೇಕಿದ್ದಲ್ಲಿ ಅಧ್ಯಾತ್ಮ ಚಿಂತನೆಯನ್ನು (ಮೇಲೆ ಹೇಳಿದ ನಿಟ್ಟಿನಲ್ಲಿ) ಮಾಡಬಹುದು. ಏಕಾಗ್ರಚಿತ್ತತೆಯನ್ನೂ ಸಾಧಿಸಬಹುದು ಮತ್ತು ಅದರಿಂದ ಕೆಲಸದಲ್ಲಿ ಬೇಗ ಪ್ರತಿಫಲ ಅಥವಾ ಉತ್ತರಗಳನ್ನು ಕಂಡುಕೊಂಡು ಹೆಚ್ಚಿನ ಉತ್ಪತ್ತಿಗೆ ಕಾರಣವಾಗಬಹುದು. ಹಾಗೆಯೇ ಹೆಚ್ಚಿನ ಸಮಯವನ್ನು ಉಳಿಸಬಹುದು. ಬೇರೆ ದುಶ್ಚಟಗಳಿಂದಲೂ ಹೀಗೆಯೇ ದೂರವಿರಬಹುದು.
ಇನ್ನೂ ಕುಟುಂಬದಿಂದ ದೂರವಿರುವ ಏಕಾಂಗಿಗಳಲ್ಲಿ ಕೆಲಸವಿಲ್ಲದ ವೇಳೆಯಲ್ಲಿ ಏಕಾಂಗಿತನ ಕಾಡುವುದು. ಇದಕ್ಕಾಗಿ ಸತ್ಸಂಗಗಳನ್ನು ನಡೆಸಬಹುದು, ಅಧ್ಯಾತ್ಮದ ಕಡೆ ಒಲವು ತೊಡಗಿಸಿಕೊಳ್ಳಬಹುದು, ಅಥವಾ ಸಮಾನ ಚಿಂತಕರಿರುವಂತಹ ವೇದಿಕೆಗಳಲ್ಲಿ ಸಮಯವನ್ನು ತೊಡಗಿಸಿಕೊಳ್ಳಬಹುದು. ಒಳ್ಳೆಯ ಸಂಗೀತ ಕೇಳುವುದರಿಂದಲೂ ಮನ ಉಲ್ಲಾಸಗೊಳ್ಳುವುದು. ಹಾಗೇ ದೈಹಿಕವಾಗಿ ಸು:ಸ್ಥಿತಿಯಲ್ಲಿರಲು ಬ್ಯಾಸ್ಕೆಟ್‍ಬಾಲ್, ಬೇಸ್‍ಬಾಲ್, ಕ್ರಿಕೆಟ್ ಮುಂತಾದ ಆಟಗಳನ್ನೂ, ಮನಸ್ಸನ್ನು ಚುರುಕುಗೊಳಿಸುವಂತಹ ಚೆಸ್ ಆಟಗಳನ್ನೂ ಆಡುವುದು ಒಳಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.