tvsrinivas41 ರವರ ಬ್ಲಾಗ್

ಭಾಗ - ೮

ಊರಿಗೆ ಹೋದ ತಕ್ಷಣ ತಿಳಿದ ವಿಷಯವೇನೆಂದರೆ - ೨-೩ ದಿನಗಳ ಹಿಂದೆ ನನ್ನ ತಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ೨೦ ವರ್ಷಗಳ ಹಿಂದೆ ಅಂದರೆ ೧೯೬೪ರಲ್ಲಿ ನನಗಿನ್ನೂ ೪ ವರ್ಷವಾಗಿದ್ದಾಗ ಹೀಗೊಮ್ಮೆ ಆಗಿತ್ತಂತೆ. ಆಗ ಎಡಭಾಗಕ್ಕೆ ಪಾರ್ಶ್ವವಾಯುವಾಗಿ ಅಂಕೋಲಕ್ಕೆ ಹೋಗಿ ನಾಟಿ ವೈದ್ಯರಿಂದ ಔಷೋಧೋಪಚಾರ ಮಾಡಿಸಿ ಸರಿ ಹೋಗಿದ್ದರಂತೆ. ಈಗ ಮತ್ತೆ ಹೀಗಾಗಿದ್ದಾಗ (ಈ ಸಲ ಶರೀರದ ಬಲಭಾಗಕ್ಕೆ ಅಟ್ಯಾಕ್ ಆಗಿತ್ತು), ತಮ್ಮನ್ನು ಅಂಕೋಲಕ್ಕೆ ಕರೆದೊಯ್ಯು ಎಂದು ನನಗೆ ಹೇಳಿದ್ದರು. ಆಸ್ಪತ್ರೆಗೆ ಕರೆದೊಯ್ಯುವುದಾಗಿ ನಾನು ಹೇಳಲು, ನನ್ನ ತಾಯಿಯೂ ತಂದೆಯವರು ಹೇಳಿದಂತೆಯೇ ಕೇಳಲು ಹೇಳಿದ್ದರು. ಮಾರನೆಯ ದಿನ ಬೆಳಗ್ಗೆ ಶಿವಮೊಗ್ಗ ಮುಖಾಂತರ ಅಂಕೋಲಕ್ಕೆ ಪ್ರಯಾಣ ಬೆಳೆಸಿದೆವು. ರಾತ್ರಿ ೮.೩೦ರ ಹೊತ್ತಿಗೆ ಅಂಕೋಲಾ ತಲುಪಿ ಬಸ್ ನಿಲ್ದಾಣದ ಹತ್ತಿರವಿರುವ ಒಂದು ಹೊಟೆಲ್‍ಗೆ ಊಟಕ್ಕೆಂದೆ ಹೋದರೆ, ಇನ್ನೇನು ಹೊಟೆಲ್ ಮುಚ್ಚುವ ವೇಳೆ ಆಗಿದೆಯೆಂದೂ ತಿನ್ನಲು ಅವಲಕ್ಕಿ ಮಾತ್ರವಿದೆಯೆಂದೂ ಅದರ ಮಾಲಿಕ ಹೇಳಿದ್ದರು. ಅದನ್ನೇ ತಿಂದು ಉಳಿಯಲು ಹತ್ತಿರದಲ್ಲೇ ಇದ್ದ ಒಂದು ಲಾಡ್ಜ್‍ನಲ್ಲಿ ಕೋಣೆಯನ್ನು ಹಿಡಿದಿದ್ದೆವು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಭಾಗ - ೭

೧೯೮೫ರಲ್ಲಿ ಕ್ಯಾಷ್ ಡಿಪಾರ್ಟ್‍ಮೆಂಟಿನಿಂದ ಜನರಲ್ ಸೈಡ್‍ಗೆ ಪೋಸ್ಟ್ ಮಾಡಿದ್ದರು. ಅಲ್ಲಿ ಪಬ್ಲಿಕ್ ಡೆಟ್ ಆಫೀಸ್ ಎನ್ನುವಲ್ಲಿ ಒಂದೂವರೆ ವರ್ಷಗಳ ಕಾಲ ಕೆಲಸ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಲವನ್ನು ತೆಗೆದುಕೊಳ್ಳಲು ಮತ್ತು ಅದರ ಲೆಕ್ಕಾಚಾರದ ಬಗ್ಗೆ ಕೆಲಸ ಮಾಡುವ ವಿಭಾಗ ಇದು. ನನಗೇನೂ ಅಂತಹ ಘನಂದಾರಿ ಕೆಲಸ ಕೊಟ್ಟಿರಲಿಲ್ಲ. ನಾನು ಮಾಡುತ್ತಿದ್ದುದು ಕ್ಲರಿಕಲ್ ಕೆಲಸ. ಮೊದಲಿಗೆ ವಿಭಾಗದ ಬಗ್ಗೆ ತಿಳಿದುಕೊಳ್ಳಲು ತರಬೇತಿ ಕೊಡುವರು. ಇದಕ್ಕಾಗಿ ಚೆನ್ನೈಗೆ ಕಳುಹಿಸಿದ್ದರು. ಅದೇ ಮೊದಲ ಬಾರಿಗೆ ಚೆನ್ನೈಗೆ ಹೋಗಿದ್ದು. ಸ್ವಲ್ಪ ಕಾಲದ ಮೊದಲು ಹೋಗಿದ್ದ ಮುಂಬೈನಲ್ಲಿ ನನಗೆ ಬರುತ್ತಿದ್ದ ಅಲ್ಪ ಸ್ವಲ್ಪ ಹಿಂದಿಯಲ್ಲಿ ಹೇಗೋ ನನ್ನ ಬೇಳೆ ಬೇಯಿಸಿಕೊಂಡಿದ್ದೆ. ಆದರೆ ಈ ಚೆನ್ನೈನಲ್ಲಿ ಹಿಂದಿ ನಡೆಯುವುದಿಲ್ಲ ಎಂದು ತಿಳಿದಿತ್ತು. ಇಲ್ಲಿ ಹಿಂದಿ ಮಾತನಾಡಿದರೆ ಏಟು ಬೀಳುವುದು ಗ್ಯಾರಂಟಿ. ಕನ್ನಡದವರಿಗೆ ತಮಿಳು ಕಲಿಯುವುದು ಸುಲಭ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಭಾಗ ೬

ಭಾಗ - ೬

೧೯೮೪ರ ಡಿಸೆಂಬರ್ ವೇಳೆಗೆ ನನಗೆ ಎಲ್.ಎಫ್.ಸಿ. (ಲೀವ್ ಫೇರ್ ಕನ್ಸೆಷನ್) ತೆಗೆದುಕೊಳ್ಳುವ ಅವಕಾಶ ಸಿಕ್ಕಿತ್ತು. ಅಂದರೆ ಎಲ್.ಎಫ್.ಸಿ ಯಲ್ಲಿ ಬ್ಯಾಂಕಿನ ಹಣದಲ್ಲಿ ರಜೆಯ ಮೇಲೆ ಬೇರೆ ಊರಿಗೆ ರೈಲಿನಲ್ಲಿ ಹವಾನಿಯಂತ್ರಿತ ಅಥವಾ ಮೊದಲ ದರ್ಜೆಯಲ್ಲಿ ಬೇರೆ ಊರಿಗೆ ಹೋಗಿ ಬರಬಹುದು. ಮೊದಲ ಅವಕಾಶ ಸಿಕ್ಕಿದಾಗ ದೂರದೂರಿಗೆ ಹೋಗುವುದೆಂದರೆ, ನನಗೆ ಮೊದಲು ತೋಚಿದ್ದು ಮುಂಬೈಗೆ ಹೋಗೋಣ ಅಂತ. ಏಕೆಂದರೆ ಅಲ್ಲಿ ಆಗ ನನ್ನಣ್ಣ ಕೆಲಸ ಮಾಡುತ್ತಿದ್ದ. ಅಲ್ಲಿಯವರೆವಿಗೆ ನಾನು ಕರ್ನಾಟಕ ಬಿಟ್ಟು ಆಚೆ ಹೋಗಿದ್ದವನಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಭಾಗ - ೫

೧೯೮೪ ರ ಅಕ್ಟೋಬರ್ ೩೧ನೇ ತಾರ್‍ಈಖು, ಸಿ.ಎ.ಐ.ಐ.ಬಿ ಪರೀಕ್ಷೆಯಿದ್ದಿತು. ಮನೆಯ ಎದುರೇ ಇದ್ದ ನಾಷ್ಯನಲ್ ಕಾಲೇಜಿಗೆ ಹೋಗಿ ಪರೀಕ್ಷೆಯನ್ನು ಬರೆಯಬೇಕಿತ್ತು. ನಾಲ್ಕೈದು ದಿನಗಳ ಹಿಂದೆಯಷ್ಟೇ ಹಲ್ಲಿಗೆ ಸಿಲ್ವರ್ ತುಂಬಿಸಿದ್ದ ಸಮಯ. ಆಗ ನನಗೆ ಸ್ವಲ್ಪ ಜ್ವರವಿದ್ದಿತ್ತು. ಅಂದು ಪರೀಕ್ಷೆ ಇದ್ದುದರಿಂದ ಹೋಗಲೇ ಬೇಕಿತ್ತು. ಏನನ್ನೂ ತಿನ್ನಲು ಮನಸ್ಸಿರಲಿಲ್ಲ. ಅಷ್ಟು ಹೊತ್ತಿಗೆ ಸ್ನೇಹಿತ ರಾಘವೇಂದ್ರ (ಕಾಲೇಜಿನಿಂದ ಸ್ನೇಹಿತನಾಗಿದ್ದು ಒಟ್ಟಿಗೇ ಬ್ಯಾಂಕು ಸೇರಿದವನು), ಅವರ ತಾಯಿ ಕಳುಹಿಸಿದರೆಂದು ರವೆ ಗಂಜಿಯನ್ನು ತಂದಿದ್ದ. ಬೇರೆಯ ದಿನಗಳಲ್ಲಿ ಗಂಜಿಯನ್ನು ನೋಡಲೂ ಅಸಹ್ಯ ಪಡುತ್ತಿದ್ದವನು ಅಂದು ಚಪ್ಪರಿಸಿಕೊಂಡು ತಿಂದಿದ್ದೆ. ಅವನೊಡನೆ ನಾನು ಪರೀಕ್ಷೆಗೆ ಹೊರಟೆ. ಸರಿಯಾಗಿ ಓದಿರಲಿಲ್ಲ. ಏನು ಬರೆಯುವುದು ಎಂದು ಯೋಚಿಸುತ್ತಿರುವಷ್ಟರಲ್ಲೇ ಅಂದಿನ ಪರೀಕ್ಷೆ ಮುಂದೆ ಹೋಗಿದೆಯೆಂದೂ ತಿಳಿದಿತ್ತು. ಅಬ್ಬಾ! ಕೊನೆಗೂ ಓದಲು ಸಮಯ ಸಿಕ್ಕಿತು ಎಂದು ಸಂತಸ ಪಟ್ಟಿದ್ದೆ. ಏಕೆ ಪರೀಕ್ಷೆ ಮುಂದೆ ಹೋಗಿದೆ ಎಂದು ತಿಳಿಯಲೂ ವ್ಯವಧಾನವಿರಲಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇಂದಿನ ಡೈರಿಯಿಂದ

ಎಂದಿನಂತೆ ಇಂದು ೬.೧೪ರ ಬೊರಿವಿಲಿ ಟ್ರೈನ್‍ನಲ್ಲಿ ಬಂದೆ. ಇವತ್ತೇನೋ ಎಂದಿಗಿಂತ ವಿಪರೀತ ಜನಸಂದಣಿ ಇದ್ದಿತ್ತು. ನನಗೇನೋ ಕುಳಿತುಕೊಳ್ಳಲು ಜಾಗ ಸಿಕ್ಕಿದ್ದಿತು. ಸ್ವಲ್ಪ ಸುಸ್ತಾಗಿದ್ದ ಕಾರಣ, ಈ ಜಗತ್ತಿನ ಪರಿವೆಯೇ ಬೇಡವೆಂಬಂತೆ ಕಣ್ಣು ಮುಚ್ಚಿ ಕುಳಿತಿದ್ದೆ. ಬಾಂದ್ರಾ ಬರುವ ವೇಳೆಗೆ ಕಾಲಿಡಲು ಒಂದಿಂಚೂ ಸ್ಥಳವಿರಲಿಲ್ಲ. ಒಬ್ಬರಿಗೊಬ್ಬರು ಅಂಟಿಕೊಂಡು ನಿಂತಿದ್ದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - tvsrinivas41 ರವರ ಬ್ಲಾಗ್