ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕ ನನ್ನ ಅನುಭವ...

4.5

(ಈ ಅನುಭವ ಡಿಸೆಂಬರ್-೧ ರಂದು ದಟ್ಸ್-ಕನ್ನಡದಲ್ಲಿ ಪ್ರಕಟಿತವಾಗಿತ್ತು...ಅದರ ಕೊಂಡಿ ಇಲ್ಲಿದೆ http://thatskannada.oneindia.in/response/2009/1201-bangalore-traffic-woe...)

ದಿನಾಂಕ 28 ನವೆಂಬರ್ 2009, ಸಂಜೆ ವಿಂಡ್ಸರ್ ಮ್ಯಾನರ್ ಮಾರ್ಗವಾಗಿ ಬರ್ತಾಯಿದ್ದ ನಮಗೆ, ಇನ್ನೇನು ವಿಂಡ್ಸರ್ ಮ್ಯಾನರ್ ಸೇತುವೆ ಕೆಳಗಡೆ ಹೋಗ್ಬೇಕು ಅನ್ನೋವಷ್ಟರಲ್ಲಿ, ಟ್ರಾಫಿಕ್ ಪೋಲೀಸ್ ಆಗ ತಾನೆ ಸನ್ನೆ ಮಾಡಿ ನಮ್ಮ ಕಡೆಯ ವಾಹನಗಳನ್ನು ಬಿಟ್ಟಿದ್ದರೂ ತಕ್ಷಣಕ್ಕೆ ನಿಲ್ಲಿಸಿದರು. ಯಾಕೆ ಅಂತ ಗೊತ್ತಾಗಲಿಲ್ಲ. ಯಾವ ಕಡೆ ಬಿಟ್ಟಿದ್ದಾರೆ ಅಂತ ಎಲ್ಲಾಕಡೆ ಕಣ್ಣಾಯಿಸಿದರೆ. ಯಾವ ಕಡೆಯಿಂದಾನೂ ವಾಹನಗಳು ಬರ್ತಾಯಿರಲಿಲ್ಲ. ಅಯ್ಯೋ! ಯಾರೋ ಮಹಾ(ಅನ್ನುವ)ಪುರುಷ ಬರ್ತಾಯಿರಬೇಕು ಅನ್ಕೊಂಡೆ. ಕ್ಷೀಣವಾಗಿ ಸೈರನ್ ಶಬ್ದ ದೂರದಿಂದ ಕೇಳ್ತಾಯಿತ್ತು. ಎಲ್ಲರ ಹಲವು ನಿಮಿಷಗಳ ಚಡಪಡಿಕೆಗೆ ಆ ಸಂದರ್ಭ ಸಾಕ್ಷಿಯಾಗಿತ್ತು.

ವಾಹನಗಳು ಧ್ವನಿ ಮಾಡ್ತಾಯಿದ್ದದ್ದು ಟ್ರಾಫಿಕ್ ಪೊಲೀಸ್‌ಗೆ ತಾಯಿಯ ಗಮನಕ್ಕೆ ಬಾರದ ಮಗುವಿನ ಅಳಲಾಗಿತ್ತು. ಕೆಲ ನಿಮಿಷಗಳ ನಂತರ ಟ್ರಾಫಿಕ್‌ ಪೊಲೀಸ್ ಜೀಪ್ ಬಂತು, ಹಿಂದೇನೆ ರಾಜಕಾರಣಿಗಳ ಹಲವಾರು ಕಾರುಗಳು ಒಂದೊಂದರ ಹಿಂದೆ ಒಂದರಂತೆ ನಮ್ಮ ರಕ್ತ ಹೀರಿ, ನಮ್ಮ ಸಿಹಿಯನ್ನೆಲ್ಲಾ ಹೊತ್ತು ಹೋಗುವ ಇರುವೆಗಳ ಹಾಗೆ ಬಂದ್ವು. ಇವರಿಗೆಲ್ಲಾ ನಾವು ಅಂದರೆ ನಾಗರಿಕ ಬಂಧುಗಳೇಕೆ ದಾರಿಬಿಟ್ಟು ಕೊಡಬೇಕು? ನಮಗೆ ನಮ್ಮದೇಯಾದ ಅವಸರಗಳಿಲ್ವೆ? ಅಷ್ಟಕ್ಕೂ ಅವರೇನು ಮಾಡ್ತಾರೆ? ಜನಸಾಮಾನ್ಯರ ಮಧ್ಯೆ ಜನಸಾಮಾನ್ಯನಂತೆ ಬಂದಾಗಲೆ ತಾನೆ ಎಲ್ಲರ ಕಷ್ಟ ಗೊತ್ತಾಗೋದು?ಬಹುಶ: ಆಗ ಮೆಟ್ರೋ ರೈಲಿನ ಕೆಲಸ ಸ್ವಲ್ಪ ಬೇಗ ಆಗಬಹುದೇನೋ! ಎಲ್ಲರನ್ನೂ ನಿಲ್ಲಿಸಿ ಹಾಗೆಯೆ ರೊಯ್ಯನೆ ಹೋದರೆ ಯಾರನ್ನು ತಾನೆ ಗಮನಿಸಲು ಸಾಧ್ಯ? ಇವರೆಲ್ಲಾ ಒಂದಿಪ್ಪತ್ತು ಪರ್ಸೆಂಟ್ ನಿಯತ್ತಿನಿಂದ ಮನಸ್ಸಿಟ್ಟು ಕೆಲಸ ಮಾಡಿದ್ದರೆ ನಮ್ಮ ದೇಶ ಇನ್ನಷ್ಟು ಮುಂದುವರಿದಿರುತ್ತಿತ್ತು. ಇಂಥವರುಗಳ ಒತ್ತಡದಿಂದ ನಾವು ರಸ್ತೆ ಬಿಡುವಂತಾಗುವ ಬದಲು ನಾವಾಗಿಯೆ ನಿಂತು ಗೌರವ ಸೂಚಿಸುವಂತಾಗಬೇಕಲ್ವೆ? ಅದೇನೋ ಅಂತಾರಲ್ಲ "ಮರ್ಯಾದೆ ಕೇಳಿ ಪಡ್ಕೋಬಾರದು, ತಾನಾಗೆ ಬರಬೇಕು". ಗುಣಮಟ್ಟದ ನಿಷ್ಕರ್ಷೆ(appraisal)ಯ ವ್ಯವಸ್ಥೆ ಇಲ್ಲೂ ಬರಬೇಕು. ಆಗ ಜನರಿಂದ ಸೈ ಎನ್ನಿಸಿಕೊಂಡವರೂ ಮಾತ್ರ ಈ ವ್ಯವಸ್ಥೆಯನ್ನ ಪಡೆಯಬಹುದು.

ವಿಂಡ್ಸರ್ ಮ್ಯಾನರ್ ಸೇತುವೆಯ ಕೆಳಗಡೆ ಮುತುವರ್ಜಿಯಿಂದ ಕಾರು ಓಡಿಸಿಕೊಂಡು ಬರ್ತಾಯಿದ್ರೆ, ಆ ಕಡೆ ರಸ್ತೆಯಲ್ಲಿ ವಾಹನಗಳು ಕಣ್ಣಿಗೆ ನಿಲುಕದಷ್ಟು ದೂರ ನಿಂತಿವೆ. ಹಾಗೆ ಆ ಕಡೆ ದೃಷ್ಟಿ ಹಾಯಿಸಿದಾಗ ಕಂಡಿದ್ದು ಹೃದಯವಿದ್ರಾವಕ ದೃಶ್ಯ! ಸಾವು ಬದುಕಿನ ನಡುವಿನ ನಡುವೆ ಹೋರಾಟ ಮಾಡುತ್ತಾ, ಅಂಬುಲೆನ್ಸ್‌ನಲ್ಲಿ ನೋವಿನಲ್ಲಿ ಮಲಗಿದ್ದ ಜೀವ, ಚಾಲಕ ವಾಹನದ ಗಂಟೆ ಬಾರಿಸುತ್ತಲೆ ಇದ್ದ, ಮಿಕ್ಕವರು ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿ ಗಾಡಿ ಯಾವಾಗ ಮುಂದೆ ಹೋಗಬಹುದು ಎಂದು ಆತಂಕದಿಂದ ಬಗ್ಗಿ ನೋಡ್ತಾಯಿದ್ದದ್ದು ಹೃದಯಹಿಂಡುವಂತಿತ್ತು. ಆ ಜೀವಕ್ಕೆ ಏನೂ ಹಾನಿಯಾಗಿರದೆ ಇರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸಿದೆ. ಒಂದು ವೇಳೆ ಏನಾದರು ಆಗಿದ್ದರೆ ಯಾರು ಅದಕ್ಕೆ ಹೊಣೆ? ಸಂಚಾರ ಸ್ಥಗಿತ ಮಾಡಿ ಆ ವ್ಯಕ್ತಿಯನ್ನು ಅವರುಗಳು ಕೊಲೆ ಮಾಡಿದಂತಾಗಲಿಲ್ಲವೆ?

ಇದು ಎಷ್ಟರ ಮಟ್ಟಿಗೆ ಸರಿ?

ರಾಜಕಾರಣಿಗಳ ವಾಹನಗಳು ಬಂದರೆ ಅವರು ಹೋಗುವ ರಸ್ತೆಗಳಲ್ಲಿ ಸಂಚಾರ ಸ್ಥಗಿತ ಮಾಡಬೇಕು ಎಂದು ಯಾವುದಾದರೂ ಕಾನೂನು ಇದೆಯಾ? ಒಂದು ವೇಳೆ ಇದ್ದರೆ ದಯವಿಟ್ಟು ಬದಲಾವಣೆ ಮಾಡಿ, ಅಂಬುಲೆನ್ಸ್ ಬಂದಾಗ ಮಾತ್ರ ಸ್ಥಗಿತ ಮಾಡಬಹುದು ಎಂದು. ಇವರಿಂದಾಗಿ ಎಷ್ಟು ಜನ ಆಫೀಸಿಗೆ, ಶಾಲಾ ಕಾಲೇಜಿಗೆ ತಡವಾಗಿ ಹೋಗಿದ್ದಾರೋ, ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ, ಕೆಲಸ ಸಂದರ್ಶನ ಕಳೆದುಕೊಂಡಿದ್ದಾರೋ, ಎಷ್ಟು ಜನ ತಮ್ಮ ವ್ಯವಹಾರ ಕಳೆದುಕೊಂಡಿದ್ದಾರೋ? ಎಷ್ಟು ಜನ ಬಸ್ಸು-ರೈಲು ತಪ್ಪಿಸಿಕೊಂಡಿದ್ದಾರೋ, ಎಷ್ಟು ತಾಯಂದಿರು ಹೆರಿಗೆ ನೋವಿನಿಂದ ನರಳಿದ್ದಾರೋ? ಎಷ್ಟು ಜೀವಗಳು ತಮ್ಮ ಜೀವ ಕೈಯಲ್ಲಿ ಹಿಡಕೊಂಡು ಕೂತಿದ್ದವೋ? ಅಷ್ಟು ಜನರ ಹಿಡಿಶಾಪ ಇವರಿಗೆ ತಟ್ಟಲು ಇನ್ನೂ ಎಷ್ಟು ಸಮಯಬೇಕಾಗುತ್ತೋ? ಇದಕ್ಕೆ ಜನಸಾಮಾನ್ಯ ಏನೂ ಮಾಡಲಾರ.

ಲೇಖನಿಗೆ ಮಣಿಯದವರು ಯಾರೂ ಇಲ್ಲ. ಇದನ್ನರಿತ ಪತ್ರಿಕಾ ವರ್ಗದವರು ಏನಾದರೂ ಸಹಾಯ ಮಾಡಿಯಾರೆ? ಪತ್ರಿಕಾ ವರದಿಗಳಿಂದ, ಟಿ.ವಿ ಪರದೆಗಳಲ್ಲಿ ಬರುವ ವಾರ್ತಾ ವಾಹಿನಿಗಳ ವರದಿಗಳಿಂದ ಹಲವಾರು ಬದಲಾವಣೆಗಳು ಕಾಣ್ತಾಯಿರೋ ಈ ಸಮಯದಲ್ಲಿ ಈ ಸಮಸ್ಯೆಗೊಂದು ಪರಿಹಾರ ದೊರೆತೀತೆ? ಇವತ್ತು ಆ ವ್ಯಕ್ತಿಗೆ ಬಂದ ಕಷ್ಟ ನಾಳೆ ಇನ್ನೊಬ್ಬರಿಗೆ ಬಾರದಿರಲಿ. ನಾನೀಗ ಸದ್ಯ ಆರಾಮಿದ್ದೀನಿ ಬೇರೆಯವರ ಸಮಸ್ಯೆಗೆ ನಾನೇಕೆ ಕಿವಿಗೊಡಲಿ ಎಂದು ನಿಮ್ಮಲ್ಲಿರೋ ಮಾನವೀಯತೆಯನ್ನ ಸಾಯಿಸಬೇಡಿ. ಈ (ಅ)ವ್ಯವಸ್ಥೆಹೀಗೆಯೆ ಇದ್ದರೆ ಇಂದಿನ ಇನ್ನೊಬ್ಬರ ಸಮಸ್ಯೆ ನಾಳೆ ನಿಮ್ಮ ಸಮಸ್ಯೆಯಾಗಬಹುದು.

ನೊಂದ ಕನ್ನಡಿಗ,

ಅಮರ್

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.