ಎಂದೂ ಮರೆಯದ ಆ ದಿನ

0

ಹೈಕೋರ್ಟ್ ಸಂಚಾರಿ ಪೀಠ ಜುಲೈ ೭ ರಿಂದ ಧಾರವಾಡ ಹಾಗೂ ಗುಲಬರ್ಗಾ ದಲ್ಲಿ ಆರಂಭಗೊಳ್ಳಲು
ಹೈ ಕೋರ್ಟ್ ಆದೇಶಿಸಿದೆ. ಇದೇ ಸಂದರ್ಭದಲ್ಲಿ ಸುಮಾರು ೭ ವರ್ಷಗಳ ಹಿಂದೆ ನಡೆದ ಘಟನೆ ನೆನಪಿಗೆ ಬರುತ್ತಿದೆ.

ಅದಿನ್ನೂ ನಾನು ಕೆಲಸಕ್ಕೆ ಸೇರಿದ ಹೊಸತು. ಧಾರವಾಡ ನನಗಿನ್ನೂ ಒಗ್ಗಿರಲಿಲ್ಲ. ಪ್ರತಿ ಶುಕ್ರವಾರ ಸಂಜೆ ಶಿವಮೊಗ್ಗದ ಬಸ್ ಹತ್ತುತ್ತಿದ್ದ ನಾನು ಭಾನುವಾರ ರಾತ್ರಿ ಅಲ್ಲಿಂದ ಹೊರಡುತ್ತಿದ್ದೆ. ಅದು ಜುಲೈ ತಿಂಗಳ ಒಂದು ಭಾನುವಾರದ ರಾತ್ರಿ, ೧೧-೩೦ ಬಸ್ಸಿಗೆ ಒಬ್ಬಳೇ ಧಾರವಾಡಕ್ಕೆ ಹೊರಟಿದ್ದೆ. ಶಿವಮೊಗ್ಗದಲ್ಲೇ, ಧಾರವಾಡದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸ ಬೇಕೆಂಬ ಸಲುವಾಗಿ ಬಂದ್ ನಡೆಯುವುದರ ವಾಸನೆ ಬಡಿಯಿತು. ಬಂದ್ ಶುರುವಾಗುವುದು ಸಾಮಾನ್ಯವಾಗಿ ಬೆಳಿಗ್ಗೆ ೯ ರ ನಂತರ ಎಂಬ ಭಂಡ ದೈರ್ಯದ ಮೇಲೆ ಬಸ್ ಹತ್ತಿದೆ. ಅಪ್ಪ ಹೇಳಿದರು ಬೇಡ ಅಂತ, ಆದರೆ ನಾನು ಕೇಳ ಬೇಕಲ್ಲ.

ಚಳುವಳಿಕಾರರು ಬಸ್ಸನ್ನು ಹಾವೇರಿಯಿಂದ ಮುಂದೆ ಬಿಡಲಿಲ್ಲ. ಬಸ್ಸನ್ನು ಬೇರೆ ಮಾರ್ಗದ ಮೂಲಕ ಕಲಘಟಗಿಗೆ ಒಯ್ಯಲಾಯಿತು. ಬಹಳಷ್ಟು ಪ್ರಯಾಣಿಕರು ಅಲ್ಲೇ ಇಳಿದು ಬೇರೆ ವ್ಯವಸ್ಥೆ ಮಾಡಿಕೊಂಡರು.

ನನಗೆ ಏನೂ ಮಾಡಲೂ ತೋಚಲಿಲ್ಲ. ಆಗ ರಾತ್ರಿ ೩ ವರೆ ಗಂಟೆಯಾಗುತ್ತಾ ಬಂದಿತ್ತು. ಮುಂದೇನಾಗುತ್ತದೋ ಎಂಬ ಆತಂಕ, ಧಾರವಾಡಕ್ಕೆ ಹೋಗುವ ಎಲ್ಲ ಸಣ್ಣ ದಾರಿಗಳನ್ನು ಮುಚ್ಚಿದ್ದಾರೆಂದು ತಿಳಿದು ಬಂದಿತು. ಬಸ್ಸು ಕಲಘಟಗಿಯಿಂದ ಮುಂದೆ ಸುತ್ತಿ ಸುತ್ತಿ ಹಳಿಯಾಳಕ್ಕೆ ಬಂದಿತು. ಆಗ ಬೆಳಗ್ಗೆ ೭-೩೦. ಅಲ್ಲಿಂದಲೂ ಕೂಡಾ ಧಾರವಾಡದ ದಾರಿಯನ್ನು ಬಂದ್ ಮಾಡಲಾಗಿತ್ತು. ಇಷ್ಟು ತೀವ್ರತರವಾದ ಪ್ರತಿಭಟನೆಯನ್ನು ನಾನೆಂದೂ ಕಂಡಿರಲಿಲ್ಲ. ನಾನು ಪ್ರತಿವಾರವೂ ಶಿವಮೊಗ್ಗ-ಧಾರವಾಡ ಓಡಾಡುತ್ತಿದ್ದ್ದುದರಿಂದ ಚಾಲಕ ಹಾಗೂ ನಿರ್ವಾಹಕರಿಗೆ ನನ್ನ ಪರಿಚಯವಿದ್ದುದೇ ನನಗಿದ್ದ ದೈರ್ಯ.ಅವರಿಬ್ಬರೂ ನನಗೆ ಅಲ್ಲಿಯೇ ಇದ್ದ ಹೋಟೆಲಿಗೆ ಕರೆದುಕೊಂಡು ಹೋಗಿ ತಿಂಡಿ ಕೊಡಿಸಿದರು. (ಯಾವ ಜನ್ಮದ ಅನುಬಂಧವೋ, ) ಆಗ ಯಾವ ಬಸ್ಸುಗಳೂ ಯಾವ ಊರಿಗೂ ಹೊರಡಲಿಲ್ಲ. ಒಂಭತ್ತರ ಸುಮಾರಿಗೆ ಬೆಂಗಳೂರಿಗೆ ಬಸ್ಸೊಂದು ಹೊರಡುವ ಸೂಚನೆ ಬಂತು. ಚಾಲಕ/ನಿರ್ವಾಹಕರಿಬ್ಬರೂ ಅಲ್ಲಿಯವರೆಗೆ ನನ್ನ ಜೊತೆಗೆ ಇದ್ದು, ಬೆಂಗಳೂರಿನ ಬಸ್ ಹತ್ತಿಸಿದರು. ಟಿಕೇಟ್ ಅನ್ನು ಕೂಡ ೩೦-೫೦ ಕಿ.ಮೀ ಗಳ ನಂತರ ಮತ್ತೆ ಮತ್ತೆ ಕೊಡಲಾಗುತ್ತಿತ್ತು. ಬಸ್ ಎಲ್ಲಿಯವರೆಗೂ ಹೋಗುತ್ತದೆ ಎಂದು ಅವರಿಗೇ ಗೊತ್ತಿರಲಿಲ್ಲ. ಬಸ್ ಮತ್ತೆ ಹಲವು ಊರುಗಳನ್ನು ಸುತ್ತಿಕೊಂಡು (ಆ ಸಂದರ್ಭದಲ್ಲಿ ಕೂಡ ನಾನು ಸಿದ್ಧಾಪುರ, ಯಲ್ಲಾಪುರ ಕಡೆಯ ಮಲೆನಾಡನ ಸೌಂದರ್ಯ ಸವಿದೆ) ಹರಿಹರಕ್ಕೆ ಬಂದಿತು. ಸಧ್ಯ ಬದುಕಿದೆ. ಆಗ ಸಮಯ ಸುಮಾರು ಮದ್ಯಾಹ್ನ ೧-೩೦. ಹರಿಹರದಲ್ಲಿ ನನ್ನ ಸೋದರಮಾವನ ಮನೆಯಿದ್ದು, ಅಲ್ಲಿಗೆ ತಲುಪಿದೆ. ಅಲ್ಲಿದ ಮನೆಗೆ ಫೋನ್ ಮಾಡಿ ನಡೆದ ವಿಷಯವನ್ನೆಲ್ಲ ತಿಳಿಸಿದೆ.ನಂತರ ಮರು ದಿನ ಮತ್ತೆ ಧಾರವಾಡದತ್ತ ಪ್ರಯಾಣ ಬೆಳೆಸಿದೆ.

ಬಹುಶಃ ಇದಕ್ಕೇ ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವುದು ಎನ್ನುತಾರೇನೋ. ಆಗಿನ್ನೂ ಮೊಬೈಲ್ ಬಳಕೆ ಇಷ್ಟು ವ್ಯಾಪಕವಾಗಿರಲಿಲ್ಲ. ನಾನು ಒಂದು ಸುರಕ್ಷಿತ ಸ್ಥಾನ ತಲುಪುವಲ್ಲಿ ಆ ಚಾಲಕ/ನಿರ್ವಾಹಕರು ಮಾಡಿದ ಸಹಾಯ ನಾನೆಂದೂ ಮರೆಯುವುದಿಲ್ಲ. ನಾನು ಅವರಿಗೆ ಚಿರರುಣಿ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ ತಂದೆತಾಯಂದಿರು ಆತಂಕಪಟ್ಟಿರಬಹುದೆಂಬುದನ್ನು ಬಿಟ್ಟರೆ, ಸಾಧಾರಣವಾಗಿ ನೀವು ಹೋಗದ ಜಾಗಗಳಿಗೆ ಹೋಗಿ, ನೋಡದ ನೋಟಗಳನ್ನು ಕಂಡಿರಿ. ಇದೂ ಒಂಥರಾ ಮಜಾ ಅಲ್ವಾ? ನಿಮಗೆ ಆ ಕ್ಷಣಕ್ಕೆ ಆತಂಕವಾಗಿತ್ತಾ?

"ಏರಿದವನು ಚಿಕ್ಕವನಿರಬೇಕು"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

veena.
ಆತಂಕದ ಜೊತೆಗೆ ಒಂಥರಾ ಭಂಡ ದೈರ್ಯವಿತ್ತು ಆಗ. ಆದರೆ ಈಗ ಮದುವೆಯಾದ ಮೇಲೆ ಅದು ಕಡಿಮೆಯಾಗಿದೆ. ನಾವು(ಮಹಿಳೆಯರು) ನಮ್ಮ ಗಂಡಂದಿರ ಮೇಲೆ ಮಾನಸಿಕವಾಗಿ ಹೆಚ್ಚು ಅವಲಂಬಿರಾಗುತ್ತೇವೆ ಎನಿಸುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.