ಬದುಕು ಭಾವ ಮತ್ತು ನಾನು - ೬ ( ನಾ ಕಂಡ ಮೊದಲ ಸಾವು , ದುರ್ದೈವ್ಯ ನನ್ ಅಣ್ಣನದ್ದೇ )

0

                        ಅತ್ತಿಂದಿತ್ತ ಓಡಾಡುತಿದ್ದ ನೆಂಟರಿಸ್ಟರು , ಮಾತಿಗೊಮ್ಮೆ ಪಾಪು ಎನ್ನುತಿದ್ದ ಅಪ್ಪ , ಅಡಿಗೆಮನೆಕಡೆ ಹೋದಾಗಲೆಲ್ಲ ಏನು ಬೇಕು ಅಪ್ಪು ಎನ್ನುತಿದ್ದ ಅಮ್ಮ ,ಹೀಗೆ ಅಲ್ಲಿ ಬರಿ ಸಡಗರವೆ . ಹೋದ ತಿಂಗಳು ನಡೆದ ನಮ್ಮ ಮನೆಯ ಗೃಹ ಪ್ರವೇಶದ ಒಂದು ನೋಟ ಇದು ( ನವೀಕರಣಗೊಳಿಸಿದ್ದೆವು). ವಾರದ ಹಿಂದಷ್ಟೇ ದಾಂಪತ್ಯಕ್ಕೆ ಕಾಲಿಟ್ಟಿದ್ದ ಅಕ್ಕ , ಭಾವನ ಆಗಮನ ಎಲ್ಲರ ಮೊಗದಲ್ಲಿನ ಸಂತೋಷವನ್ನು ತುಸು ಹೆಚ್ಚುಗೊಳಿಸಿತ್ತು.ಆದರೆ ಈ ಸಂತಸದ ನಡುವೆ ಆ ಹೆತ್ತಕರಳುಗಳ ಯಾರಿಗೂ ಹೇಳಿಕೊಳ್ಳದ ತೊಳಲಾಟವನ್ನ ಯಾರು ಗಮನಿಸಿರಲಿಲ್ಲ ,ಆದರೆ ನಾನು ಗಮನಿಸಿದ್ದೆ .(ಎಷ್ಟಾದರೂ ನನ್ ಅಪ್ಪ ಅಮ್ಮ ಅಲ್ಲವೇ ).ಅದುವೇ ೪ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ನನ್ ಅಣ್ಣನ ನೆನಪು .

                     ಎಲ್ಲವೂ ಸರಿಯಾಗೇ ನಡೆಯುತ್ತಿತ್ತು , ನಾನಾಗಲೆ ನನ್ನ ಮೊದಲ ವರ್ಷದ ತಾಂತ್ರಿಕ ಶಿಕ್ಷಣದ ಪರೀಕ್ಷೆ ಮುಗಿಸಿದ್ದೆ (ಡಿಪ್ಲೋಮಾ ),ಶೃಂಗೇರಿಯಲ್ಲಿ ಸಾಮವೇದ ಪಾಠ ಕಲಿಯುತಿದ್ದ ಅಣ್ಣನ ೩ ನೇ ವರ್ಷದ ಅಂತಿಮ ಹಂತದಲ್ಲಿತ್ತು .ಇನ್ನೊಂದು ವಾರದಲ್ಲಿ ಅಣ್ಣನ ಪರೀಕ್ಷೆಯು ಇತ್ತು . ಅವನಿಗೆ ಪರೀಕ್ಷೆ ಮುಗಿದರೆ ನನಗೆ ಖುಷಿ . ಒಂದು ಅವ ಮನೆಗೆ ಬರುತ್ತಾನೆ ಎಂದು , ಇನ್ನೊಂದು ತುಂಬಾ ಲಗ್ಗೇಜ್ ಇರುತ್ತದ್ದರಿಂದ ಅವನನ್ನು ಕರೆದುಕೊಂಡು ಬರಲು ನಾನು ಅಲ್ಲಿಗೆ ಹೋಗಬೇಕಾಗುತ್ತಿತ್ತು . ನಾನೋ ಒಂದು ೪ ದಿನ ಮೊದಲೇ ಹೋಗಿ ಅಲ್ಲಿ ಜಾಂಡ ಉರುತಿದ್ದೆ.ಆರಾಮಾಗಿ ಇಡಿ ಮಠವೆ ನನ್ನದೇನೂ ಅನ್ನೋ ಭಾವದಲ್ಲಿ ಓಡಾಟ ನಂದು (ಪಾಠಶಾಲೆ ವಿದ್ಯಾರ್ಥಿ ಗಳಿಗೆ ಎಲ್ಲಿಯೂ no entry ಇರಲಿಲ್ಲ ).

                              ಚಿಕ್ಕದಿನಿಂದಲೂ ನಾನು, ಅಣ್ಣ ಹೊಡೆದಾಡಿ ಕೊಂಡೆ ಬೆಳೆದೋರು . ಅದ್ರು ನನಗೆ ಅಣ್ಣನ ಹಿಂದೆ ಇರ್ಬೇಕು , ಅವ ಎಲ್ಲಿ ಇದಾನೋ ನನ್ ಅಲ್ಲೇ , ಕೆಲವೊಂದು ಸಲ ಅದೇ ನನ್ನ ಮತ್ತು ಅವನ ಹೊಡೆದಾಟಕ್ಕೆ ಕಾರಣವಾಗುತ್ತಿತ್ತು .ಕೆಲವೊಂದು ನನ್ನ ಹಠಮಾರಿತನದಿಂದ ಅವನಿಗೆ ಅಪ್ಪನಿಂದ ಹೊಡೆತ ಬೀಳುತ್ತಿತ್ತು . ಚಿಕ್ಕವನದ್ದರಿಂದ ನಾನೇ ತಪ್ಪು ಮಾಡಿದ್ರು ಕೆಲವೊಮ್ಮೆ ಅವನಿಗೆ ಹೊಡ್ತ ಬಿಲ್ತಿತ್ತು . S S L C ಅದ ನಂತರ ಓದಿನಲ್ಲಿ ಅಷ್ಟೇನೂ ಜೋರರಾಗಿರದಿದ್ದ ಅಣ್ಣನನ್ನು ಮಂತ್ರ ಕಲಿಸೋಕ್ಕೆ ಕಲಿಸೋದು ಅಂತ ಅಪ್ಪ ನಿಶ್ಚಯಿಸಿದ್ದರು (ಮುಂದೆ ಓದಿಸುವ ಮನಸಿದ್ದರು ಆರ್ಥಿಕ ಸಂಕಷ್ಟವಿದ್ದ ಕಾರಣ ಅದನ್ನು ಕೈ ಬಿಟ್ಟಿದ್ದರು ). ಹೇಗಾದ್ರು ಆಗಲಿ ನನ್ ತರ ಮಕ್ಕಳು ಕಷ್ಟ ಬಿಲ್ಬಾರ್ದು ಅನ್ನೋದು ಅಪ್ಪನ ಅಭಿಲಾಷೆ ಆಗಿತ್ತು . ಆ ದೃಷ್ಟಿಅಲ್ಲಿ ಹೇಳುವದಾದರೆ ಅವರ ನಿರ್ಧಾರ ಸರಿಯಾಗೇ ಇತ್ತು .ನಾನಿನ್ನು ೮ ಮುಗಿಸಿ ೯ ಕ್ಕೆ ಕಾಲಿಟ್ಟಿದ್ದೆ .

                                                                           ನಮ್ಮ ಗೋತ್ರದ ಪ್ರಕಾರ ನಮ್ಮದು ಋಗ್ವೇದವಾದರೂ ಅಲ್ಲಿನ ಅಧ್ಯಕ್ಷರ ಅಭಿಲಾಷೆ ಅಂತೆ ಅಣ್ಣನನ್ನು ಸಾಮವೇದಕ್ಕೆ ಸೇರಿಸಿ ಬಂದ್ರು ಅಪ್ಪ . ನಾನು ೨ ವಾರಕ್ಕೊಮ್ಮೆ ಅಪ್ಪ , ಅಮ್ಮ ಮಾಡಿದ ತಿಂಡಿಗಳನೆಲ್ಲ ಹೇರಿಕೊಂಡು ಹೋಗಿ ಅಣ್ಣನಿಗೆ ಕೊಟ್ಟು ಬರುತಿದ್ದೆ . ಹೋದಾಗಲೆಲ್ಲ ಅಣ್ಣ ಕೊಡುತಿದ್ದ ಹತ್ತೋ ಇಪ್ಪತ್ತು ರೂಪಾಯಿಯೇ ನನಗೆ ೧೦೦೦ ಕ್ಕೆ ಸಮನಾಗಿತ್ತು ನನಗೆ .೨ ನೆ ವರ್ಷಕ್ಕೆ ಕಾಲಿಡುತ್ತಲೇ ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಭಾಗವಹಿಸುತಿದ್ದ ಅಣ್ಣನ ಕೈ ಅಲ್ಲಿ ಅಲ್ಪ ಸ್ವಲ್ಪ ಕಾಸು ಓಡಾಡುತಿತ್ತು.ನಾನು ಕೂಡ S S L C ಅಲ್ಲಿ ಅಷ್ಟೇನೂ ಹೇಳಿಕೊಳ್ಳುವುದಲ್ಲದಿದ್ದರು ಶೇಕಡಾ ೭೫ ರಸ್ಟು ಅಂಕ ಪಡೆದು ಪಾಸಾದೆ .ಮೊದಲೇ ಅಂದುಕೊಂಡಂತೆ ನಾನು ಡಿಪ್ಲೋಮಾ ಸೇರುವುದು ಅಂದು ನಿರ್ಧರಿಸಿದ್ದರು ಅಪ್ಪ .ಸರ್ಕಾರಿ ಸೀಟು ಭದ್ರಾವತಿ ಅಲ್ಲಿ ಸಿಕ್ಕಿತಾದ್ರು ಮನೆಯಲ್ಲಿ ಯಾರು ಇಲ್ಲ ಅಗುಂತೆ ಅಂತ ತೀರ್ಥಹಳ್ಳಿಯ ಖಾಸಗಿ ಕಾಲೇಜಿಗೆ ಸೇರಿಸಿದರು ಅಪ್ಪ .ಅಂದುಕೊಂಡಂತೆ ಪ್ರಥಮ ಸೆಮಿಸ್ಟರ್ ಅಲ್ಲಿ ಪ್ರಥಮ ದರ್ಜೆ ಅಲ್ಲೇ ಪಾಸಾದೆ ( S S L C ವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ್ದ ನನಗೆ ಅದೊಂದು ಸಾಧನೆಯೇ ಆಗಿತ್ತು ).

                                   ೨ ನೇ ಸೆಮಿಸ್ಟರ್ ಪರೀಕ್ಷೆ ಮುಗಿಸಿ ಮನೆಯಲ್ಲಿ ಕುಳಿತಿದ್ದ ನನಗೆ , ಪಕ್ಕದ ಮನೆಯವರ ಕೂಗು ಕೇಳಿತು .ಅಣ್ಣನ ಫೋನ್ ಬಂದಿದೆ ಅಂತ ಅಂದ್ರು ಅವರು ,ಅಲ್ಲಿಯೇ ಕುಳಿತಿದ್ದ ಅಪ್ಪ ಎದ್ದು ಮಾತಾಡಲು ಹೋದರು (ನಮ್ಮ ಮನೆಯಲ್ಲಿ ಆಗಿನ್ನೂ ಫೋನ್ ಇರ್ಲಿಲ್ಲ ).ಮನೆಗೆ ಬಂದ ಅಪ್ಪ ೩ ನೇ ವರ್ಷದ ಪರೀಕ್ಷೆಯಲ್ಲಿ ಅಣ್ಣ ಫೇಲ್ ಅದನೆಂದು , ಅಲ್ಲಿಂದ ಮೈಸೂರುಗೆ ಹೋಗಿ ವಾರ ಬಿಟ್ಟು ಮನೆಗೆ ಬರುವುದಾಗಿ ಹೇಳಿದನೆಂದು ಅಂದ್ರು .ಯಾವಾಗಲು ಮೂಗಿನಮೇಲೆ ಸಿಟ್ಟು ಇರುತಿದ್ದ ಅಪ್ಪ ಅಂದೇಕೋ ಶಾಂತಚಿತ್ತರಾಗಿದ್ದರು. ವಾರ ಬಿಟ್ಟು ಅಣ್ಣ ಮನೆಗೆ ಬಂದ , ಅಪ್ಪನೆನು ಅನ್ನಲಿಲ್ಲ .

                                                        ಒಂದು ರಾತ್ರಿ ಆಗಿದ್ದೆಲ್ಲ ಆಯಿತು ಮತ್ತೆ ಹೊಸದಾಗಿ ಋಗ್ವೇದವನ್ನು ಹರಿಹರಪುರ ಮಠದಲ್ಲಿ ಕಲಿ ಎಂದು , ನಾಳೆ ಬೆಳಿಗ್ಗೆ ಹೋಗಿ ವಿಚಾರಿಸಿಕೊಂಡು ಬರುತ್ತೇನೆ ಅಂದ್ರು ಅಣ್ಣನು ಹು ಎಂದ.ಮಾರನೆದಿನ ಅಂದೇ ಜೂನ್ ೩ , ೨೦೦೫ ಅಪ್ಪ ಬೇಗನೆ ಹರಿಹರಪುರಕ್ಕೆ ಹೋದ್ರು . ಅವರು ಅತ್ತ ಹೋದ ಮೇಲೆ ಸರಿಯಾಗಿ ಹೇಳದಿದ್ರು ತಾನು ಅಲ್ಲಿನ ರಾಜಕೀಯದಿಂದ ಬೇಸತ್ತು ಹೋಗಿದ್ದೇನೆ ಅಂತ ಸೂಕ್ಷ್ಮ ಮಾತುಗಳಲ್ಲಿ ಅಣ್ಣ ಅಂದಿದ್ದ . ೧೨.೧೫ ಕ್ಕೆ ಸರಿಯಾಗಿ ಅಪ್ಪ ಬಂದ್ರು , ಹಾಗೆ ಅಲ್ಲಿಂದ Application form ಕೂಡ ತಂದಿದ್ರು . ಮುಂದಿನ ಸೋಮವಾರ ಒಂದು ಸಣ್ಣ ಪರೀಕ್ಷೆ ಇರುವುದೆಂದು , ಫಾರಂ ಬರ್ತಿ ಮಾಡಲು ಅಣ್ಣನ ಕೈಗಿತ್ತರು. ಎಲ್ಲವನ್ನು ಬರ್ತಿಮಾಡಿ ಅಪ್ಪನ ಕೈಗೆ ವಾಪಸಿಟ್ಟ ಅಣ್ಣ .ನನ್ನದಿನ್ನು ಸ್ನಾನವಾಗಿರಲಿಲ್ಲ , ನಾನು ಎದ್ದು ಅತ್ತ ಹೊರಟೆ . ಏನಾಯಿತೋ ಗೊತ್ತಿಲ್ಲ ಜಗುಲಿಯಲ್ಲಿ ಕೂತಿದ್ದ ಅಪ್ಪ ಜೋರಾಗಿ ಅಣ್ಣನಿಗೆ ಬೈಯುವುದು ಕೇಳುತಿತ್ತು.ಅಣ್ಣ ಅಂಗಳದಲ್ಲಿದ್ದ .ಸ್ವಲ್ಪ ಹೊತ್ತಿನ ನಂತರ ನಾನು ಸ್ನಾನ ಮುಗಿಸಿ ಹೊರಬಂದೆ. ಅಣ್ಣನ ಕಣ್ಣನ್ಚಿನಲ್ಲಿ ನೀರು ಮೂಡಿತ್ತು .ಸ್ವಲ್ಪ ಮೌನವೇ ಇತ್ತು ಅಲ್ಲಿ , ಯಾರು ಮಾತಾಡುತ್ತಿರಲಿಲ್ಲ . ಘಂಟೆ ೧.೧೦ ಕ್ಕೆ ಅಮ್ಮ ಊಟ ಹಾಕಿದ್ರು ,ಎಲ್ಲರು ಒಟ್ಟಿಗೆ ಕೂತು ಊಟ ಮುಗಿಸಿದೆವು .

             ಊಟವಾದ ನಂತರ ಮಲಗುವುದು ಅಪ್ಪನ ಅಭ್ಯಾಸ .ನಾನೋ ಅಣ್ಣನ ಬಿಟ್ಟು ಇರುವವನೇ ಅಲ್ಲ .ಅಷ್ಟರಲ್ಲಿ ಎದುರುಗಡೆ ಇಂದ ಅಯ್ಯ ಎಂಬ ಕೂಗು ಕೇಳಿತು . ಮಲಗಿದ್ದ ಅಪ್ಪ ಎದ್ದು ಹೊರನೆಡೆದರು, ನಾನು ಕೂಡ ಯಾರು ಎಂಬ ಕುತೂಹಲದಿಂದ ಹಿಂದಗಡೆ ಅಣ್ಣನ ಒಟ್ಟಿಗೆ ಏನೋ ಮಾತಾಡುತ್ತ ಕುಳಿತವನು ಎದ್ದು ಹೋದೆ .ಅದೇ ನಾನು ಮಾಡಿದ ಬಹುಶಃ ನನ್ನ ಜೀವನದ ದೊಡ್ಡ ತಪ್ಪು .ಅಲ್ಲಿ ನೋಡಿದರೆ ಹುಲ್ಲು ಹಾಕುವವನು , ಅತ್ತ ಕಡೆ ಎಲ್ಲೋ ಹೊರಟಿದ್ದವನು ಹಾಗೆಯೇ ಅಪ್ಪನನ್ನು ಮಾತಾಡಿಸಿಕೊಂಡು ಹೋಗೋಣವೆಂದು ಕೂಗಿದ್ದ. ಹೀಗೆ ಅದು ಇದು ಮಾತಾಡಿ ಆತ ಹೊರಟ, ಅಪ್ಪ ಮತ್ತೆ ಮಲಗಿಕೊಂಡರು . ನಾನು ಅಣ್ಣನನ್ನು ಹುಡುಕಿಕೊಂಡು ಹಿಂದಗಡೆ ಬಂದೆ .

                                       ಅಲ್ಲಿರಲಿಲ್ಲ ಆತ.ಅಮ್ಮನನ್ನು ಕೇಳಿದೆ ಅಲ್ಲೇ ಟಾಯ್ಲೆಟ್ ಗೆ ಹೋಗಿರಬೇಕೆಂದು ಅಂದರು ಅಮ್ಮ (ನಮ್ಮನೆ ಟಾಯ್ಲೆಟ್ ರೂಂ ನ ಬಾಗಿಲು ಹಾಕಿದ ತಕ್ಷಣ ಬಡ್ ಎಂದು ಸದ್ದು ಮಾಡುತ್ತೆ ).ಆ ಸದ್ದು ಕೇಳಿಸಿಕೊಂಡು ಅಮ್ಮ ಹಾಗೆನ್ದಿದ್ದರು . ಅದು ಅಲ್ಲದೆ ಒಳಗಡೆ ನಲ್ಲಿ ಬಿಟ್ಟಿದ್ದು ,ನೀರು ಬೀಳುವ ಶಬ್ದ ಬೇರೆ ಕೇಳುತಿತ್ತು . ಆದರೆ ವಾಸ್ತವವೇ ಬೇರೆ ಆಗಿತ್ತು , ನಲ್ಲಿಯ ನೀರು ಬಿಟ್ಟು ಹೊರಗಡೆ ಇಂದ ಬಾಗಿಲು ಹಾಕಿ ಅದಕ್ಕೊಂದು ಮರದ ಪೀಸ್ ಅಡ್ಡ ಇಟ್ಟಿದ್ದ ಅಣ್ಣ . ಅವ ಒಳಗೆ ಇರಲಿಲ್ಲ .ನಾನು ಸ್ವಲ್ಪ ಹೊತ್ತು ನೋಡಿ ಆಮೇಲೆ ಅತ್ತ ಕಡೆ ಹೋಗಿ ನೋಡಿದಾಗ ಅವ ಅಲ್ಲಿರಲಿಲ್ಲ .ಎಲ್ಲಿಹೋದ ಎಂದು ಪಕ್ಕದ ಮನೆಗೆನಾದರು ಟಿವಿ ನೋಡಲು ಹೋದನೇನೋ ಎಂದು ಅಲ್ಲಿ ಹೋಗಿ ನೋಡಿದೆ ಅಲ್ಲೂ ಇಲ್ಲ .ಈಗ ನಿಜವಾಗಿ ನನಗೆ ಸ್ವಲ್ಪ ಗಾಬರಿಆಗಿತ್ತು .

                         ಅಮ್ಮನ ಬಳಿ ಬಂದು ಹೇಳಿದೆ , ಮಾಮೂಲಿನಂತೆ ಅಮ್ಮ ಒಂದೆರಡು ಬಾರಿ "ಉದಯ ,ಉದಯ "(ಇದು ಅವನ ಹೆಸರು ) ಎಂದು ಕರೆದರು . ಹೂ ಹೂ ಪ್ರತಿಕ್ರಿಯೆಯೇ ಇಲ್ಲ . ನನ್ನ ಮನೆ ಸುತ್ತ ತೋಟ ಇರುವುದರಿಂದ ಸಹಜವಾಗಿ ಪ್ಯಾರಲೇ ಹಣ್ಣು ಜಾಸ್ತಿ .ಅಣ್ಣನಿಗೆ ಅದೆಂದರೆ ತುಂಬಾ ಇಷ್ಟ .ಅದನೆಲ್ಲೋ ತಿನ್ನಲು ಹೋಗಿರಬೇಕು ಅಂದರು ಅಮ್ಮ . ಹಾಗಾದ್ರೆ ನಾನು ನೋಡಿಕೊಂಡು ಬರುತ್ತೇನೆ ಇರು ಎಂದು ಹೊರಟೆ , ಅದೇನು ಅನ್ನಿಸಿತೋ ನಾನು ಬರುತ್ತೇನೆ ಅಂದ್ರು ಅಮ್ಮ .ಇಬ್ಬರು ಮಾತಾಡುತ್ತ ಜಾಸ್ತಿ ಪ್ಯಾರಲೇ ಗಿಡವಿರುವತ್ತ ಹೊರೆಟೆವು .ಅಲ್ಲೇ ಒಂದು ಕಾಲುವೆ ಕೂಡ ಇದ್ದು ದೊಡ್ಡದಾದ ಗೋಳಿಮರ, ಒಂದು ಚಿಕ್ಕ ಕೆರೆ ಕೂಡ ಇದೆ .ನೋಡಲು ಸ್ವಲ್ಪ ಭಯಾನಕವಾಗೆ ಕಾಣುತ್ತೆ ಜಾಗ ಅದು .

                                  ನನ್ನ ಮನಸ್ಸು ಏನು ಯೋಚಿಸುತಿತ್ತೋ ಅದೇ ಆಗಿತ್ತು , ತಿಳಿದಾದ ಸೊಪ್ಪಿನ ಹಗ್ಗದಲ್ಲಿ ಅಣ್ಣನ ಕತ್ತು ನೇತಾಡುತ್ತಿತ್ತು.ಆ ಕ್ಷಣ ನಾನು ಕಿರುಚಿದ ಜೋರಿಗೆ ೧ ಕಿ ಮಿ ಸುತ್ತಲಿನಲ್ಲಿದ್ದ ಎಲ್ಲರು ಬಂದಿರಬಹುದು . ನಾನೆ ನಿಯಂತ್ರಣದಲ್ಲಿಲ್ಲ ಇನ್ನು ಅಮ್ಮನನ್ನು ಹೇಗೆ ಸುಧಾರಿಸಲಿ . ತಕ್ಷಣ ಓಡಿ ಹೋಗಿ ಅಣ್ಣನನ್ನು ಎತ್ತಿ ಹಿಡಿದುಕೊಂಡೆ.ಅಮ್ಮ ಕೂಡ ಓಡಿ ಬಂದರು , ಅಮ್ಮನಹತ್ತ್ರಿರ ಹಿಡಿದುಕೊಳ್ಳಲು ಹೇಳಿ ಕತ್ತಿನಿಂದ ಹಗ್ಗ ಬಿಚ್ಚಲು ಪ್ರಯತ್ನಿಸಿದೆ , ಹೂ ಹೂ ಆಗಲಿಲ್ಲ .ಅಷ್ಟರಲ್ಲಾಗಲೇ ನಾನು ಕೂಗಿದ ಜೋರಿಗೆ ಅಕ್ಕ ಪಕ್ಕದ ತೋಟದಲ್ಲಿ ಕೆಲಸ ಮಾಡುತಿದ್ದವರು, ಅಪ್ಪ ಎಲ್ಲರು ಬಂದಾಗಿತ್ತು .ಹಗ್ಗ ಬಿಚ್ಚಿ ಮನೆಗೆ ಎತ್ತಿಕೊಂಡು ಹೋದೆವು.

                     ಅದೇನೋ ಹೇಳಲು ಹಾತೊರೆಯುವನ್ತಿತ್ತು ಕಣ್ಣು .ಬಹುಶ ನಾನು ದುಡುಕಿದೆನೆಂದೋ ? ಅಥವಾ ಅಪ್ಪನನ್ನು ಆವಾಗ ಬೈದಿರಲ್ಲ ಈಗ ಹೇಗೆ ಎಂದೋ ? ಅಥವಾ ಅಪ್ಪ ಅಮ್ಮ ನನ್ನು ಚೆನ್ನಾಗಿ ನೋಡಿಕೋ ಎಂದೋ ? ಇಂದಿಗೂ ಅರಿಯಲಾಗಿಲ್ಲ ನನಗೆ .ಮತ್ತೊಂದೆರಡು ಕ್ಷಣ ಅಷ್ಟೇ ಇರುವುದೆಲ್ಲವ ಬಿಟ್ಟು , ಮುಕ್ತಿಯಡೆಗೆ ಹೊರಟಾಗಿತ್ತು ಆತ್ಮ . ಮೊದಲ ಬಾರಿಗೆ ಅಣ್ಣ ಎಂದು ಕರೆದಿದ್ದೆ , ಕೇಳಿಸಿಕೊಳ್ಳಲು ಅವನೇ ಇರಲಿಲ್ಲ ( ಅದುವರೆಗೂ ಹೆಸರು ಹಿಡಿದೆ ಕರೆಯುತಿದ್ದೆ ).

                  ಕೇವಲ ಒಂದು ೫ ಇಂಚು ಮಾತ್ರ ಮೇಲಿದ್ದ ನೆಲದಿಂದ ಅಷ್ಟೇ , ಅದಲ್ಲದೆ ೨ ನಿಮಿಷವೂ ಆಗಿರಲಿಲ್ಲ ಅಷ್ಟರೊಳಗೆ ನಾವಲ್ಲಿಗೆ ಹೋಗಿದ್ದೆವು .ವಿಧಿ ಮುಂದೆ ನಾವ್ಯಾರು ಅಲ್ಲವೇ ? ಬಯಸಿದ್ದನ್ನು ಪಡೆದುಕೊಳ್ಳುವ ಶಕ್ತಿ ಇರುವುದು ಅದ್ಕ್ಕೊಂದೆ .ಅದನ್ನ ಅದು ಪಡೆದುಕೊಂಡಿತ್ತು .ಹೊರಗೆ ಕಲ್ಲಂತೆ ಕಾಣುವ ಅಪ್ಪನ ನಿಜ ಮನಸಿನ ಅರಿವು ನನಗಾಗಿತ್ತು ಅಂದು , ಅದನ್ನೇ ಅರಿಯದೆ ಹೋದ ಆತ .

                          ನಿನ್ನೆ ಅಮ್ಮಂದಿರ ದಿನ , ಅದರ ಬಗ್ಗೆ ಗೊತ್ತೋ ಇಲ್ಲವೊ ನನ್ ಅಮ್ಮನಿಗೆ ,ಗೊತ್ತಿಲ್ಲದಿದ್ದುದ್ದೆ ಒಳಿತು ಬಿಡಿ.ಬರುವ ಜೂನ್ ೩ ಕ್ಕೆ ಆತ ನಮ್ಮಿಂದ ದೂರ ಸರಿದು ೫ ವರ್ಷವಾಗುತ್ತೆ, ಇನ್ನು ಮರೆಯಲಾಗುತ್ತಿಲ್ಲ . ಉಳಿದಿದೆ ಒಂದು ಪ್ರಶ್ನೆ ಕೇಳಲು ಅವನನ್ನು ಯಾಕೆ ಹೀಗೆ ಮಾಡಿದೆ ನೀನು ಎಂದು ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಛೆ! ಹೀಗಾಗಬಾರದಿತ್ತು.
ಓದುತ್ತಾ ಹೋದಂತೆ ಮನ ಮರುಗಿತು.
ಕೆಲವೊಂದು ಪ್ರಶ್ನೆಗಳಿಗೆ ಉತ್ತರವೇ ಸಿಗುವುದಿಲ್ಲ, ವಿನಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಕೆಲವೊಂದು ಪ್ರಶ್ನೆಗಳಿಗೆ ಉತ್ತರವೇ ಸಿಗುವುದಿಲ್ಲ>>
ಅದೇ ಕೆಲವು , ಜೀವದ ಜೀವನದ ಕೊರಗಿಗೆ ಕಾರಣವಾಗಿಬಿಡುತ್ತಲ್ಲ ಸರ್ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೆರಿ ಸ್ಯಾಡ್..
ತುಂಬಾ ಬೇಸರವಾಯ್ತು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮ ವಿನಯ,
ಸಣ್ಣ ವಯಸ್ಸಿನಲ್ಲಿಯೇ ಆಪ್ತ ಜೀವಿಯೊಬ್ಬನನ್ನು ಕಳೆದುಕೊಂಡು ಬಹಳ ದುಃಖಪಟ್ಟಿದ್ದೀಯ. ನಿನ್ನ ತಂದೆ ತಾಯಿಯರಿಗೂ ಇದು ಮರೆಯಲಾಗುವ ದುಃಖವಲ್ಲ. ಹೀಗಾಗಬಾರದಿತ್ತು. ಹತಾಶೆ ಮನುಷ್ಯನನ್ನು ಆತ್ಮವಿಶ್ವಾಸ ಕಳೆದುಕೊಳ್ಳುವಂತೆ ಮಾಡಿ, ಜೀವವವನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ತಂದುಬಿಡುತ್ತದೆ.

ನಿನ್ನ ತಂದೆ ತಾಯಿಗೆ ನೀನೆ ಸಮಾಧಾನ ಹೇಳಬೇಕು. ನಿನ್ನ ಅಣ್ಣನ ಸ್ಥಿತಿಯಲ್ಲೀ ಇರುವ ನಾಲ್ಕು ಹುಡುಗರಿಗೆ ನೀನು ಸಣ್ಣ ಮಟ್ಟದಲ್ಲಾದರೂ ಸರಿಯೇ, ನೆರವಾದರೆ, ಅದು ಮನಸ್ಸಿಗೆ ಸ್ವಲ್ಪ ಸಮಾಧಾನ ಕೊಡುತ್ತದೆ.

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ್,

ಹೆತ್ತವರಿಗೆ ಅತ್ಯಂತ ದೊಡ್ಡ ನೋವಿನ ಸಂಗತಿ ಹಾಗೂ ಶಾಪವೆಂದರೆ ತಮ್ಮ ಮಕ್ಕಳ ಸಾವನ್ನು ತಾವೇ ನೋಡುವುದು. ಯಾವ ಮಗನಿಂದ ತಮ್ಮ ಚಿತೆಗೆ ಅಗ್ನಿಸ್ಪರ್ಶವನ್ನು ನಿರೀಕ್ಷೆ ಮಾದಿರುತ್ತಾರೋ, ಅಂತಹವನಿಗೆ ತಾವೇ ಅಗ್ನಿಸ್ಪರ್ಶ ಮಾಡುವುದು ಮಾತಿನಲ್ಲಿ ಹೇಳಲಾಗದಂತಹ ನೋವು ಹಾಗೂ ಹಿಂಸೆ.

ಆತ್ಮಹತ್ಯೆ, ಸಾಮಾನ್ಯವಾಗಿ ಆ ಕ್ಷಣದ ನಿರ್ಧಾರವಾಗಿರುತ್ತದೆ. ಹಾಗಾಗಿ ಸಕಾಲದಲ್ಲಿ ಆಪ್ತಸಲಹೆಯನ್ನು ನೀಡಿದರೆ, ಆತ್ಮಹತ್ಯೆಯನ್ನು ತಪ್ಪಿಸಬಹುದು. ಆದರೆ, ನಮ್ಮ ನೋವುಗಳನ್ನು ಹೇಳಿಕೊಳ್ಳಲು ಒಬ್ಬರು ಆತ್ಮೀಯರು ಇರಬೇಕಾಗುತ್ತದೆ. ದುರಂತವೆಂದರೆ ನಮ್ಮ ಬದುಕಲ್ಲಿ ನಿಜವಾದ ಆತ್ಮೀಯರು ಸಿಗದಿರುವುದು.

-ನಾಸೋ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹಾಗೂ ಅಮ್ಮನ ದುಃಖ, ಸಂಕಟ, ವೇದನೆ ಅರ್ಥವಾಗುತ್ತೆ ವಿನಯ್.

ಪರೀಕ್ಷೆ - ಫಲಿತಾಂಶಗಳೇ ಜೀವನವಲ್ಲ. ಅದರಾಚೆಯೂ ಬದುಕಿದೆ ಎಂದು ನಮ್ಮ ಮುಗ್ಧ ಮನಸ್ಸಿನ ಅಣ್ಣ - ತಮ್ಮಂದಿರಿಗೆ ಒತ್ತಿ ಹೇಳಬೇಕಿದೆ.
ಈಚೆಗೆ ಪಿಯುಸಿ ಫಲಿತಾಂಶ ಬಂದಿದೆ. ಅನುತ್ತೀರ್ಣರಾದ - ಆಗುವ ಭೀತಿಯಲ್ಲಿರುವ ಸುಮಾರು 8-10 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಓದಿದ ಬೇಸರದಲ್ಲಿರುವಾಗಲೇ ನಿಮ್ಮಣ್ಣನ ಬಗ್ಗೆ ಓದಿ ತುಂಬಾ ಬೇಸರವಾಯಿತು.

ಇಂಥ ಅತ್ಯಾಪ್ತರ ಅಕಾಲ ಅಗಲಿಕೆ ನಮ್ಮ ಕೊನೆಯುಸಿರಿರುವ ವರೆಗೂ ಮರೆಯಲು ಸಾಧ್ಯವೇ ಇಲ್ಲ. ಆದರೂ ಅದನ್ನು ಮರೆತು ಅಥವಾ ಮರೆತಂತೆ ನಟಿಸಿ ಜೀವನ ಸಾಗಿಸಲೆಬೇಕಾದ ಅನಿವಾರ್ಯತೆ.

ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ
ಕುದುರೆ ನೀ, ಅವನು ಪೇಳ್ದಂತೆ ಪಯಣಿಗರು,
ಮದುವೆಗೋ, ಮಸಣಕೋ ಹೋಗೆಂದ,
ನಡೆಗೋದು ಪದಕುಸಿಯೇ, ನೆಲವಿಹುದು ಮಂಕುತಿಮ್ಮ…
-ಡಿವಿಜಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಸಂಕಟವಾಯ್ತು. ಅದೇನೋ ಸಂಶಯ ಉಳಿಯಿತು. ವೇದಪಾಠ ನಡೆಯುವಲ್ಲಿ ಮನ ನೋಯುವ ಏನೋ ಘಟನೆ ನಡೆದಿದೆಯೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<< ಅದೇನೋ ಸಂಶಯ ಉಳಿಯಿತು. ವೇದಪಾಠ ನಡೆಯುವಲ್ಲಿ ಮನ ನೋಯುವ ಏನೋ ಘಟನೆ ನಡೆದಿದೆಯೇ?>>
ಹಲವು ಕಾರಣಗಳನ್ನು ಉಹಿಸಿಕೊಳ್ಳಬಹುದು.
ನನಗೆ ಆತ ಹೇಳಿರುವ ಮಟ್ಟಿಗೆ ಅಲ್ಲಿನ ಅಧ್ಯಕ್ಷರಿಗೆ ಸಾಮವೆದಿಗಳನ್ನು ಕಂಡರೆ ಅಷ್ಟಕಷ್ಟೇ ( ಇದೆ ಬೇಸರದ ಸಂಗತಿ , ಅವರೇ ಒತ್ತಾಯಿಸಿ ಅವನನ್ನು ಸಾಮವೆದಕ್ಕೆ ಸೇರಿಸಿದ್ದರು .
ಇನ್ನೊಂದು ಆತನ ಗುರುಗಳು ತುಂಬಾ ಒಳ್ಳೆಯವರು , ಮೇಲಿನ ವಿಷಯಕ್ಕೆ ಅಲ್ಲೇನೋ ಆತ ಪ್ರತಿಭಟಿಸಿದ್ದನೆಂದು ಅವನೇ ಹೇಳಿದ್ದ ನನ್ನ ಬಳಿ .ಅದೇ ಕಾರಣಕ್ಕೆ ಅವನನ್ನು ಕೇಳಿಯೇ ಫೈಲ್ ಮಾಡಿದ್ದರು .ಇದು ನನಗೆ ಗೊತ್ತಿತ್ತು ( ಅವನೇ ಹೇಳಿದ್ದ ).
ಇನ್ನೊಂದು ನಮ್ಮಪ್ಪ ಸ್ವಲ್ಪ ಜಾಸ್ತಿಯೇ ಬೈದಿದ್ದರು , ಅವರೇನು ನನಗೆ ಹೇಳುವುದು ಅನ್ನೋ ಭಾವ ಬಂದಿದ್ದರು ಬಂದಿರಬಹುದು .
ವಿಶ್ಲೇಷಣೆಗೆ ಇನ್ನು ವಿಷಯಗಳಿವೆ ಆದರೆ ಕೊನೆಯಲ್ಲಿ ಸಿಗುವುದು ಹೀಗೂ ಇರಬಹುದೇ ಅನ್ನೋ ಪ್ರಶ್ನೆ ಬಿಟ್ಟರೆ
ಅವನಲ್ಲ ಅಲ್ವಾ ? ಅದಕ್ಕೆ ಅವನೆಲ್ಲ ಬಿಟ್ಟು ಬಿಟ್ಟಿದ್ದೇನೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓದಿ ತುಂಬಾ ಬೇಸರವಾಯಿತು ವಿನಯರೆ. ನಾಸೋ ಅವರು ಹೇಳಿದಂತೆ ಹೆತ್ತವರು ಮಕ್ಕಳ ಸಾವನ್ನು ನೋಡುವುದರಷ್ಟು ಸಂಕಟ ಬೇರಾವುದೂ ಇಲ್ಲ. ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓದಿ ತುಂಬಾ ಬೇಸರವಾಯ್ತು ವಿನಯ್.... ಒಮ್ಮೊಮ್ಮೆ ನಾವು ದುಡುಕಿ ತೆಗೆದುಕೊಂಡ ನಿರ್ಧಾರಗಳು, ಹೆತ್ತವರನ್ನು (ಅಥವಾ ಬದುಕಿರುವವರನ್ನು) ಎಂಥಹ ದು:ಖಕ್ಕೆ ದೂಡುತ್ತದೆಯಲ್ವಾ ? ಇದಕ್ಕೆಲ್ಲಾ ಉತ್ತರಿಸಲು ಅವರೆಲ್ಲಿ ? ಇದೇ ಬದುಕು, ಇದೇ ಜೀವನ....ನೀನು ನಮ್ಮೆಲ್ಲರಿಗೆ ತೋರಿಸುವ ಪ್ರೀತಿ, ಕಾಳಜಿ, ನಿನ್ನ ಮನಸ್ಸಿಗೆ ಸಮಾಧಾನ ಕೊಡಲಿ ಮತ್ತು ನಿಮ್ಮ ನೋವಿನಲ್ಲೂ, ಸಂತಸದಲ್ಲೂ ನಾನೂ ನಿನ್ನ ಜೊತೆ ಇದ್ದೇನೆ ತಮ್ಮಾ....

ತಡವಾಗಿ ಓದಿದ್ದಕ್ಕೆ ಕ್ಷಮೆ ಇರಲಿ..

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.