ಒಗ್ಗಟ್ಟು

ಒಗ್ಗಟ್ಟು

               ಒಗ್ಗಟ್ಟು

   ನನ್ನ ಮನದೊಳು ಮೂಡಿದ ಆಶ್ಚರ್ಯವಿದು
   ನಮ್ಮವರೇ ಕೊಡುವ ಲಘು ಆಘಾತವಿದು
 
   ಬೆಂಗಳೂರೆಂಬ ಕನ್ನಡಿಗರ ರಾಜಧಾನಿಯಲಿ
   ಕಾಣುತಿದೆ ಕನ್ನಡಿಗರ ಭಾಷಾ ನಿರಭಿಮಾನ

   ನನ್ನ ಕನ್ನಡಾಭಿಮಾನವೇ ಅಸಹಜ ಹಾಗೂ
   ಅಪರೂಪದ್ದೇ ಎಂದೆನಿಸುವಷ್ಟು ಅನುಮಾನ

   ಒಗ್ಗಟ್ಟು ಮೂಡಿಸಲು ಕೊಡರು ಪ್ರೋತ್ಸಾಹ
   ಆಸಕ್ತರಿಗೂ ಹರಡುವರು ತಮ್ಮ ನಿರುತ್ಸಾಹ

   ಸರಳ ಕನ್ನಡದ ಸುಖ ಬೇಡವೇ ನಿಮಗೆ
   ಸಹಜತೆಯಲ್ಲೇ ಸಂತಸವಲ್ಲವೇ ನಮಗೆ

   ಕನ್ನಡವ ಬಳಸಲು ಪಡಬೇಡಿ ಕೀಳರಿಮೆ
   ನಮ್ಮಲ್ಲೇ ಪರರ ಮೆಚ್ಚಿಸಿ ಪಡದಿರಿ ಗರಿಮೆ

   ಕನ್ನಡದ ಮೇಲೆ ಸದಾ ಇರಲಿ ಅಭಿಮಾನ
   ಕನ್ನಡದಲ್ಲೇ ಅಡಗಿದೆ ನಮ್ಮ ಸ್ವಾಭಿಮಾನ

   ಮುಂದೆ ಬಾರದಿರಲು ನಮ್ಮಲ್ಲಿ ಮುಗ್ಗಟ್ಟು
   ಕನ್ನಡಿಗರ ಹೃದಯದಲಿ ಮೂಡಲಿ ಒಗ್ಗಟ್ಟು

   - ತೇಜಸ್ವಿ. ಎ. ಸಿ

 

Rating
No votes yet

Comments

Submitted by venkatb83 Thu, 07/25/2013 - 15:50

ಅಂತಹವರೂ -ಇರುವರು ಆದರೆ ಅದಕ್ಕೆ ತಲೆ ಕೆಡಿಸಿಕೊಳ್ಳದೆ ನಮಮ್ ಕೈಲಾದುದು ನಾವ್ ಮಾಡೋಣ . ಕನ್ನಡ ಉಳಿಸಿ ಬೆಳೆಸೋಣ

ನಿಮ್ಮ ಕಾಳಜಿ ಇಷ್ಟ ಆಯ್ತು

'ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ '
ಶುಭವಾಗಲಿ
\।

Submitted by Tejaswi_ac Thu, 07/25/2013 - 19:43

In reply to by venkatb83

ವೆಂಕಟ್ ರವರೆ, ಕನ್ನಡ ಮಾತೃ ಭಾಷೆಯಾಗಿರುವವರು ಒಗ್ಗಟ್ಟಾಗಿ ಸಮಾನ ಗುರಿ ಹೊಂದಿ ಅದನ್ನು ಮುಟ್ಟಲು ಶ್ರಮಿಸಬೇಕು.
ಅದಕ್ಕೆ ನಮ್ಮಂತಹ ಸಾಹಿತ್ಯಾಭಿರುಚಿ ಉಳ್ಳವರು ಪ್ರೇರೇಪಿಸಬೇಕು. ಇದಷ್ಟೇ ನನ್ನ ಆಶಯ.

Submitted by gopinatha Thu, 07/25/2013 - 17:48

ನಿಜ ವೆಂಕಟೇಶರು ಹೇಳಿದಂತೆ ಪ್ರತಿಯೊಬ್ಬರೂ ತಮ್ಮಿಂದಲೇ ಇದು ಅಂತ ಶುರು ಹಚ್ಚಿಕೊಂಡರೆ ಖಂಡಿತಾ ಸಾಧ್ಯ ಕನ್ನಡ ನಾಡು , ಆ ದಿನವನ್ನು ಹಾರೈಸಿ ಕಾಯೋಣ

Submitted by Tejaswi_ac Thu, 07/25/2013 - 19:54

In reply to by gopinatha

ಗೋಪಿನಾಥ್ ರವರೆ, ಮುಖ್ಯವಾಗಿ ನಮ್ಮವರಲ್ಲೇ ಕನ್ನಡ ಬರವಣಿಗೆಯ ಬಳಕೆ ಅಪರೂಪ. ಜನರು ಇಂಗ್ಲೀಷ್ ಬರವಣಿಗೆ ಕಡಿಮೆ ಮಾಡಿ ಕನ್ನಡ ಬಳಕೆ ಹೆಚ್ಚಿಸಬೇಕು.ಎಷ್ಟು ಜನ ಏ ಟಿ ಎಂ ನಲ್ಲಿ ಕನ್ನಡ ಬಳಸುತ್ತಾರೋ ನಾ ಕಾಣೆ.

ಸಂಪದಿಗರಲ್ಲಿ ಯಾರಾದರೂ ಏ ಟಿ ಎಂ ನಲ್ಲಿ ಕನ್ನಡ ಆಯ್ಕೆ ಮಾಡಿಕೊಂಡು ವ್ಯವಹರಿಸುತ್ತೀರಾ?

Submitted by ಗಣೇಶ Thu, 07/25/2013 - 23:59

In reply to by Tejaswi_ac

ಎಟಿಎಂ ನಲ್ಲಿ ನನ್ನ ವ್ಯವಹಾರ ಕನ್ನಡದಲ್ಲೇ. ಕವನ ಚೆನ್ನಾಗಿದೆ ತೇಜಸ್ವಿಯವರೆ.

Submitted by ಗಣೇಶ Mon, 07/29/2013 - 23:39

In reply to by Shreekar

ATM ಗೆ ಕನ್ನಡ ಪದವಿಲ್ಲವೇ?
೨-೩ ಇದೆ. ಕೆಲವರ ಪ್ರಕಾರ "ಅಪ್ಪ", ಇನ್ನೂ ಕೆಲವರ ಪ್ರಕಾರ "ಮಾವ".
"ಸ್ವಯಂಚಾಲಿತ ನಗದು ಯಂತ್ರ" ಕಳ್ಳರು ಬೇರೆ ವಾಹನದಲ್ಲಿ ಹೊತ್ತೊಯ್ಯದಿದ್ದರೆ..:)

Submitted by nageshamysore Fri, 07/26/2013 - 02:51

ಕರ್ನಾಟಕದಲ್ಲಿ ಬಿಡಿ - ಹೊರಗೂ ಅಪರೂಪಕ್ಕೆ ಕನ್ನಡದವರು ಸಿಕ್ಕರೆಂದು ಮಾತನಾಡಹೊರಟರೆ ಅರ್ಧಕ್ಕರ್ಧ ಜನ ಆಗಲೆ ಇಂಗ್ಲೀಷಿನ ದೋಣಿ ಹತ್ತಿಬಿಟ್ಟಿರುತ್ತಾರೆ! ಮುಖ್ಯವಾಗಿ ಈ ಪ್ರಜ್ಞೆಯನ್ನ ಮಕ್ಕಳಲ್ಲಿ ಬೆಳೆಸಿ ಪ್ರೋತ್ಸಾಹಿಸಬೇಕು. ಅವರಾದರೆ ಯಾವುದೆ ಮುಜುಗರವಿಲ್ಲದೆ, ಮುಲಾಜಿಲ್ಲದೆ ಎಲ್ಲಕಡೆ  ಆಡುತ್ತರೆ (ನಮಗೆ ವಿದೇಶದಲ್ಲಿ ಅವರಿಗೆ ಕನ್ನಡ ಕಲಿಸುವುದು , ಇನ್ನೊಂದು ಬಗೆಯ ಪಂಥ!).  ಸೊಗಸಾದ ನುಡಿಗವನ.

Submitted by Tejaswi_ac Fri, 07/26/2013 - 15:09

In reply to by nageshamysore

ನಾಗೇಶ್ ರವರೇ, ನಾ ತೋರಿಸುವ ಭಾಷಾ ಅಭಿಮಾನ ನನ್ನ ಸುತ್ತಲಿನವರಲ್ಲಿ ನೋಡಿರುವುದು ತೀರಾ ಅಪರೂಪ.
ನಾ ಕಂಡಂತೆ ಬೆಂಗಳೂರೇತರ ಮಕ್ಕಳಲ್ಲಿ ಕನ್ನಡದ ಸಂಸ್ಕಾರ ಹೆಚ್ಚು.