ಕಿರುಗತೆ : ಗೌಡ್ನಳ್ಳಿ ಸನ್ಮಾ ದೇವ್ರು.

ಕಿರುಗತೆ : ಗೌಡ್ನಳ್ಳಿ ಸನ್ಮಾ ದೇವ್ರು.

ಪ್ರಕೃತಿಯ ರೂಪನ್ನು ಕಾಣುತ್ತ ಅದರಲ್ಲಿ ನಮ್ಮನ್ನು ತೊಡಗಿಸಿ ಆನಂದ ಪಡೋದು ನಮ್ಮೂರಿಗರಿಗೆ ಹೊಸತೇನಲ್ಲ. ಅಂದು ಕೂಡ ಹಾಗೆಯೇ ಮನೆಯ ಮಹಡಿಗೆ ತೆರೆದಂತೆ ಕಾಣುವ ಮುಳ್ಳಯ್ಯನಗಿರಿ ನೋಡುತ್ತಾ.. “ಇಂತಹ ಜಾಗ್ ದಲ್ಲಿ ನಮ್ ಗೊಂದ್ ಐದ್ ಎಕ್ರೆ ಜಮೀನಿದ್ದಿದ್ರೆ ಎಷ್ಟ್ ಚೆನ್ನಾಗಿರೋದು” ಅಂತ ಅವಿ ವಿಶ್ವನಿಗೆ ಹೇಳ್ದ.
 "ಕನ್ಸ್ ಕಾಣೋದಕ್ಕೆ ದುಡ್ಡ್ ಕೊಡೋ ಹಾಗೇನಿಲ್ಲ.  ಹಂಗಂತ ಇಂಥ ಕನ್ಸ್ ಕಾಣೋದ?" ವಿಶ್ವ ಮರು ಉತ್ತರಿಸಿದ.
" ನಮ್ಮ್ ಸ್ವಾಮಿ ವಿವೇಕಾನಂದ್ರು ಹೇಳೋ ಹಂಗೆ, ನಮ್ಮ್ ಕೈನಲ್ಲಿ ಸಾಧ್ಯವಾಗದ್ದು ಯಾವ್ದೂ ಇಲ್ಲ.. ನೋಡ್ತಾ ಇರು ಇವತ್ತಲ್ಲ ನಾಳೆ  ಐದ್ ಎಕ್ರೆ ಜಮೀನ್ ಕೊಂಡ್ ಕೊಂಡೇ ಕೊಂಡ್ ಕೊಳ್ತೀನಿ"  ಸ್ವಾಮಿ ವಿವೇಕಾನಂದ್ರು ಪರಮ ಶಿಷ್ಯನೇನೋ ಅನ್ನೋ ರೀತಿಯಲ್ಲಿ ಮಾತು ಹೊರ ಬಂತು. ಎಷ್ಟೇ ಆಗ್ಲಿ ಅವಿ ನಿಜ್ವಾದ್ ಹೆಸ್ರೂ ವಿವೇಕಾನಂದ ಅಂತಲ್ವೆ.. ಏನೋ ವಿವೇಕದ್ ಕೊರತೆ ಇದ್ದಿದ್ರಿಂದ 'ವಿವೇಕ'  ಅವಿವೇಕ ಆಗಿ ಕೊನೆಗೆ ಹೆಸ್ರು 'ಅವಿ' ಆಯ್ತು.
     "ಏನಪ್ಪಾ ಬಹಳ ದೊಡ್ದ್ ಸ್ಕೆಚ್ಚೇ ಹಾಕಿದ್ದೀಯ, ಯೇನಾದ್ರು ಆನ್ ಸೈಟ್ ಗೀನ್ ಸೈಟ್ ಗೆ ಹೋಗ್ತಾ ಇದ್ದೀಯೋ ಹೆಂಗೆ ?"
" ವೀಸಾ ಇನಿಶಿಯೆಟ್ ಮಾಡಿ ಒಂಬತ್ತು ತಿಂಗಳಾದ್ರೂ, ಇನ್ನೂ ವೀಸಾ ಬಂದಿಲ್ಲ.. ಏನ್ಮಾಡೋದು ಶನಿ ಒಂಭತ್ನೇ ಮನೇಲಿದ್ದಾನಂತೆ "  ಅಂತ ಅವಿ  ತನ್ನ್ ಗೋಳ್ ಹೇಳ್ಕೊಂಡ.
ಶನಿ ಕಾಟ ಅನ್ನೋ ಮಾತ್  ಕೇಳಿಸಿದ್ ಕೂಡ್ಲೆ ಅಲ್ಲೇ ಗಾರೆ ಕೆಲ್ಸ ಮಾಡ್ತಿದ್ದ್  ಮುನಿರಾಜು "ಸಾರ್.. ಗೌಡ್ನಲ್ಲಿ ನಾಗೆ ಒಂದ್ ಯಪ್ಪನ್ ಮೇಲೆ ಸನ್ಮಾ ದೇವ್ರು ಬತ್ತಾದೆ. ಇದ್ದಿದ್ ಇದ್ದಂಗೆ ಏಳುತ್ತೆ.. ಮೊನ್ನೆ ಸಲ ಹಿಂಗೆ ನಮ್ಮೂರ್ನಲ್ ಒಬ್ಬ ನೇಣ್ ಹಾಕಂಡಿದ್ದ ; ಯಾವ ಡಾಕ್ಟ್ರು ಕೇಳಿದ್ರು ಅವ್ನ್ ಬದ್ಕಲ್ಲ ಅಂತ ಹೇಳ್ತಾ ಇದ್ರು.. ಕೊನೇಗ್ ಅವ್ನುನ್  ಉಳಿಸಿದ್ದೇ ನಮ್ಮ್ ಸನ್ಮಾ ದೇವ್ರು" ಅಂತ ಶನಿ ದೇವ್ರನ್ನ ಹೊಗಳಿ ಹಂಗೆ ಆಕಾಶ ದ್ ಮೇಲ್ ಹಾರಾಡ್ತಿದ್ದ್ ಕಾಗೆ  ನೋಡ್ಕೊನ್ಡ್ ಕೈ ಮುಗಿದ.
ಅವಿಗೆ ಶನಿ ಮಹಾ ದೇವ್ರ ಮಹಿಮೆ  ತುಂಬಾ ಮೆಚ್ಚುಗೆ ಆಯ್ತು. ನಾವ್ಯಾಕೆ ಒಂದ್ ಟ್ರೈ  ಮಾಡ್ ಬಾರ್ದು ಅಂದ್ಕೊಂಡ್ " ಎಲ್ ಬರುತ್ತೆ ಗೌಡ್ನಳ್ಳಿ ?" ಅಂತ ಗಾರೆ ಮುನಿರಾಜುನ್ ಕೇಳ್ದ.
" ಅದೇ ದೊಡ್ಡಳ್ಳಿ ಇಲ್ವಾ, ಅದಕಿನ್ನ ಇನ್ನೂ ಸಲ್ಪ ಮುಂದೆ.. ಯಾರ್ನಾದ್ರು ಕೇಳಿ.. ಸುತ್ ಮುತ್ ಹಳ್ಳಿನಾಗೆ ನಮ್ಮ್ ಸನ್ಮಾ ದೇವ್ರು ಫುಲ್ ಫೇಮಸ್ಸು"  ಅಂತ ಗಾರೆ ಮುನಿರಾಜು ಹೇಳ್ದ.
ಸರಿ.  ಮಾರನೇ ದಿನ ಅವರಿಬ್ಬರ ಪಯಣ ಗೌಡ್ನಳ್ಳಿಗೆ ಹೊರಟಿತು!!. ಇನ್ನೂ ಉದುರುತಿದ್ದ ಮಳೆ, ಹಸಿರು ಹೊದ್ದಿ ಮಲಗಿದ ಭೂಮಿ ಯ ನಡುವೆ ಅವರ ಬೈಕ್ ಸಾಗ್ತಾ ಇತ್ತು.  ಕಪ್ಪಗಿದ್ದ ಹಾವಿನೋಪಾದಿಯ  ಗುಂಡಿ ಬಿದ್ದ ರಸ್ತೆ ಗಳು ಆದರದಿಂದಲೇ ಅವರನ್ನು ಸ್ವಾಗತಿಸಿದವು.. ಬೇಲಿಯ ಸಾಲಿನಲ್ಲಿ ನೇತಾಡುತಿದ್ದ ಯಾರದೋ ತೋಟದ ನಿಂಬೆ ಹಣ್ಣುಗಳನ್ನ ಅವರ ಜೇಬಿಗೆ ಇಳಿಸಿ ಕೊಂಡರು.. ಮೈಮೇಲೆ ಬರುವ ದೇವರಿಗೂ, ನಿಂಬೆ ಹಣ್ಣಿಗೂ ಅದೇನು ಸಂಬಂಧವೋ ಅವರಿಗೆ ತಿಳಿಯದು!,  ಆದರೂ, ಗೌಡ್ನಳ್ಳಿ ಸನ್ಮಾ ದೇವ್ರಿಗೆ ನಿಂಬೆ ಹಣ್ಣು ಬಹಳ ಪ್ರಿಯಾ ಅನ್ನೋದು ಅವರಿಗೆ ಗೊತ್ತಿತ್ತು. ಅವರ ಬೈಕ್ ದೊಡ್ಡಳ್ಳಿ ರೀಚ್ ಆಗ್ತಾ ಇದ್ದ್ ಹಾಗೆ ಅಲ್ಲೊಂದು ಸೈನ್ ಬೋರ್ಡ್ ಕಾಣಿಸ್ತು.."ಶ್ರೀ ಶನಿಮಹಾದೇವರ ಗುಡಿಗೆ ದಾರಿ" ಅಂತ ಬರೆದಿತ್ತು.  ಅಲ್ಲೇ ಕೋಳಿ ಫಾರಂ ಹತ್ರ ನಿಂತ್ ಕೊಂಡಿದ್ ಒಬ್ಬ ಆಸಾಮಿನ್ ಕರೆದು " ಇದೇ ಏನಪ್ಪಾ ಗೌಡ್ನಳ್ಳಿ ಶನಿಮಾ ದೇವ್ರ್ ಗುಡಿಗೆ ಹೋಗೋ ರಸ್ತೆ" ಅಂತ ಅವಿ ಕೇಳ್ದ.
     "ಅದೇ ಬೇರೆ ಸನ್ಮಾ ದೇವ್ರು.. ಇದೇ ಬೇರೆ ಸನ್ಮಾ ದೇವ್ರು.. ಅವ್ನು ಇವ್ನು ಭಾವ ಮೈದ್ನ.. ಅವ್ನಿಗ್ ಅಲ್ಲ್ ದೇವ್ರು ಬರತ್ತೆ.. ಇವ್ನಿಗ್ ಇಲ್ಲ್ ದೇವ್ರ್ ಬರುತ್ತೆ ಅಷ್ಟೆಯಾ..ನಿಮ್ಗೆ ಗೌಡ್ನಳ್ಳಿದೇ ಸನ್ಮಾ ದೇವ್ರ್ ಬೇಕಂದ್ರೆ ಇನ್ನೂ ಸ್ವಲ್ಪ ಮುಂದೋಗಿ ಎಡಕ್ ತಿರುಗ್ಕಳಿ" ಅಂತ ಆ ಆಸಾಮಿ ಹೇಳ್ದ.
ಅವಿ ಎಜ್ಯೂಕೆಟೆಡ್, ಮೇಲಾಗಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರೋದ್ರಿಂದ ಅವನಿಗೆ ಬ್ರಾಂಡ್ ಮುಖ್ಯ.. ಹಾಗಾಗಿಯೇ ಗೌಡ್ನಳ್ಳಿ ಶನಿಮಹ ದೇವ್ರನ್ನೇ ನೋಡ್ ಬೇಕು ಅಂತ ಅವ್ನಿಗ್ ಅನ್ನಿಸ್ತು. ಮತ್ತೆ ಅವರ ಪ್ರಯಾಣ ಗೌಡ್ನಳ್ಳಿ ಕಡೆ ಸಾಗಿತು.. ದೊಡ್ಡಳ್ಳಿಯಿಂದ ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿ ಎಡಕ್ಕೆ ತಿರುಗಿ ಕೊಂಡರು. ಅಲ್ಲಿ ಮತ್ತೊಂದು ಸೈನ್ ಬೋರ್ಡ್ ಕಾಣಿಸ್ತು.. "ಶ್ರೀ ಶ್ರೀ ಶನಿಮಹಾದೇವರ(ಒರಿಜಿನಲ್) ಗುಡಿಗೆ ದಾರಿ"  ಎಂದು ಬರೆದಿತ್ತು. ಬೋರ್ಡ್ ಓದಿದ ಅವರಿಗೆ ನಗು ತಡೆಯಲಾಗಲಿಲ್ಲ. ಅಲ್ಲೇ ಗಾಡಿ ನಿಲ್ಲಿಸಿ ತುಂಬಾ ಹೊತ್ತು ನಕ್ಕು ಮತ್ತೆ ನಾವು ನಕ್ಕಿದ್ದು ಎಲ್ಲಿ ಆ ದೇವ್ರಿಗೆ ಗೊತ್ತಾಗತ್ತೋ ಅಂತ ಹೆದರಿ, ಮನದಲ್ಲೇ ಸಾರೀ ಕೇಳುತ್ತಾ ತಮ್ಮ ಪಯಣ ಮುಂದುವರಿಸಿದರು.
ನಮ್ಮೂರಿನ ಹಳ್ಳಿಗಳು ಬೇರೆ ಊರಿನ ಹಳ್ಳಿಗಳಂತಲ್ಲ. ಸರ್ಕಾರಿ ನೀರಿನ ಸೌಕರ್ಯ,ವಿದ್ಯುತ್, ಇತರೆ ಸೌಲಭ್ಯಗಳ ಕೊರತೆ ಇದ್ದಾಗ್ಯೂ ತಮ್ಮನ್ನಾವರಿಸಿರುವ ಹಚ್ಚಾ ಹಸುರಿನ ತರು ಲತೆ ಬೆಟ್ಟ ಗುಡ್ಡಗಳಿಂದ ಎಲ್ಲರನ್ನೂ ಮೋಹಕಗೊಳಿಸುವಂತಹುಗಳು. ಗೌಡ್ನಳ್ಳಿ ಕೂಡ ಅದಕ್ಕೆ ಹೊರತಲ್ಲ...  ತುಂಬಾ ಅಚ್ಚುಕಟ್ಟಾದ ಹಳ್ಳಿ.. ಬಿಸಗಲ್ಲು ಅನ್ನೋ ಬೆಟ್ಟದ ತಪ್ಪಲಿನಲ್ಲಿರೋ ಹಳ್ಳಿ.. ಹಚ್ಚ ಹಸಿರಿನ ಕಾಡೊಂದು ಈ ಹಳ್ಳಿಗೆ ಹೊಂದಿ ಕೊಂಡಂತೆ ಕಾಣುತ್ತದೆ.
"ಅವಿಗೆ ಶನಿ ದೇವ್ರು ವೀಸಾ ಕೊಡಿಸ್ಲಿ; ಕೊಡಿಸದೆ ಇರ್ಲಿ... ಇಂಥ ಊರನ್ನ ನೋಡೋ ಅದೃಷ್ಟ ಸಿಕ್ತಲ್ಲ ಅಷ್ಟೇ ಸಾಕು " ಅಂತ ವಿಶ್ವ ಮನಸಿನಲ್ಲೇ ಅಂದ್ಕೊಂಡ.  ಹಲವಾರು ಸೈನ್ ಬೋರ್ಡ್ ಗಳಿದ್ದ ಕಾರಣ ದೇವಸ್ತಾನ ಹುಡುಕೋದಕ್ಕೆ ಹೆಚ್ಚಿನ ಸಮಯ ಹಿಡಿಯಲಿಲ್ಲ.  ಹೂವು ಹಣ್ಣುಗಳನ್ನು, ನಿಂಬೆ ಹಣ್ಣು, ಉದುಬತ್ತಿ, ಕರ್ಪೂರ ಕಾಯಿ ಇವುಗಳನ್ನ ಮಾರೋದಕ್ಕೆ ದೇವಸ್ತಾನದವರದ್ದೆ ಆದ ಒಂದು ಅಂಗಡಿ ಇತ್ತು. ಅಲ್ಲಿ ಅವಿ ಒಂದಿಷ್ಟು ಪೂಜಾ ಸಾಮಾನುಗಳನ್ನ ಕೊಂಡು ಕೊಂಡ.
ಅವರಿಬ್ಬರೂ ಗುಡಿಯೊಳಗೆ ಪ್ರವೇಶಿಸಿದರು. ಮೈಮೇಲೆ ಇನ್ನೂ ದೇವ್ರ್ ಬಂದಿರ್ಲಿಲ್ಲ. ದೇವರ ಅರ್ಚಕರ ಹೆಸ್ರು ಸೋಮಣ್ಣ ಅಂತ.  ಗುಡಿಯೊಳಗೆ ಏಳೆಂಟು ಜನ ಹೆಂಗಸರು ಮತ್ತೆ ಮೂರ್ ಜನ ಗಂಡಸ್ರು ಕೂತ್ಕೊಂಡಿದ್ರು. ಗಂಡಸು ಹೆಂಗಸರಲ್ಲಿ ಕಷ್ಟ ಹೆಂಗಸರಿಗೇ ಜಾಸ್ತಿ ಅನ್ನೋದನ್ನ ತಿಳಿಯೋದಕ್ಕೆ ಅವಿ ವಿಶ್ವರಿಗೆ ಜಾಸ್ತಿ ಸಮಯ ಹಿಡಿಯಲಿಲ್ಲ.
ಗುಡಿಯಲ್ಲಿ ಒಂದು ಸುಂದರವಾದ ವಿಗ್ರಹವನ್ನು ನಾವು ಪಟ್ಟಣದಲ್ಲಿ ಕಾಣಲಾಗದ ಹಲವು ಬಗೆಯ ಕಾಡು ಪುಷ್ಪಗಳಿಂದ ಅಲಂಕಾರ ಮಾಡಿದ್ದರು.  ಮೈಮೇಲೆ ದೇವ್ರು ಯಾವ ರೀತಿ ಬರತ್ತೆ ಅನ್ನೋದು ಅವರಿಬ್ಬರಿಗೂ ಗೊತ್ತಿರಲಿಲ್ಲ.. ಬಂದ ದೇವ್ರು ಯಾವ ರೀತಿ ಕಾಣತ್ತದೆ ಅನ್ನೋದು ಮೊದಲೇ ಗೊತ್ತಿರ್ಲಿಲ್ಲ.
 ಶನಿ ದೇವರ ಅರ್ಚಕರು ಪೂಜೆ ಮಾಡುತ್ತಾ ಮಾಡುತ್ತಾ ಇದ್ದಕ್ಕಿದ್ದ ಹಾಗೆ ಏನನ್ನೋ ಕಿರುಚಿ ಎರಡು ಕಾಲನ್ನ ವಕ್ರವಾಗಿಸಿ ಒಂದೇ ಸಮನೆ ಉಸಿರು ಬಿಡುತಿದ್ದರು.  ಗುಡಿಯಲ್ಲಿ ಕುಳಿತಿದ್ದವರೆಲ್ಲ ಎದ್ದು ನಿಂತು ಕೈಮುಗಿಯಲು ಮೊದಲು ಮಾಡಿದರು..  ಆವಿ, ವಿಶ್ವ ಕೂಡ ಎದ್ದು ನಿಂತು ಕೈ ಜೋಡಿಸಿದರು. ಅಷ್ಟರಲ್ಲೇ ಅವರಿಬ್ಬರಿಗೂ ಗೊತ್ತಾಗಿತ್ತು ದೇವರು ಮೈಮೇಲೆ ಬಂದಿದೆಯೆಂದು!. ಆ ದೇವರು ಬಂದಿದ್ದ ಮನುಷ್ಯನ ಮುಖ ಭಾವ, ಅವನು ನಿಂತಿದ್ದ ಭಂಗಿ, ಅವನು ಉಸಿರು ಬಿಡುತ್ತಿದ್ದ ರೀತಿ ನೋಡಿ "ಓ ಇದು ನಿಜವಾಗಿಯೂ ಒರಿಜಿನಲ್ ಶನಿಮಹಾ ದೇವ್ರು" ಅಂತ ಅವಿಗೆ ಅನ್ನಿಸಿತು.  ಆ ದೇವರಿಗೂ ಈ ಅವಿ ಒರಿಜಿನಲ್ ಭಕ್ತ ಅನ್ನಿಸಿರಲೇ ಬೇಕು.. ಅದು ಗಂಭೀರ ಸ್ವರದಲ್ಲಿ ಅವಿಯ ಮುಖ ನೋಡಿ " ಎಲೈ ಬಾಲಕ..  ನನ್ನನ್ನ ನೋಡಾಕೆ ಇಸ್ ದಿನ ಬೇಕಾಯ್ತಾ..?" ಅಂತ ಕೇಳಿಯೇ ಬಿಡ್ತು.
ಅವಿಗೆ ಗಾಬ್ರಿ ಆದ್ರೂ ಇಷ್ಟ್ ಜನ್ರಲ್ಲಿ ತನಗೆ ದೇವ್ರು ಪ್ರಿಫರನ್ಸ್ ಕೊಡ್ತಲ್ಲ ಅಂತ ಖುಷಿ ಆಯ್ತು. ಅವಿಗೆ ಏನ್ ಹೇಳ್ ಬೇಕೋ ತೋಚ್ದೆ.. "ಅದೇ.. ನಾ..ನ್ ವೀಸಾ .. ಸಿಗ್ತಿಲ್ಲ ಅದಕೆ ಬಂದೆ" ಅಂತ ತಾನೇ ಗಾಬರಿ ಆಗಿ ಏನೇನೋ ಹೇಳ್ದ..
ಈಗ ಗಾಬರಿ ಆಗೋ ಸರದಿ ದೇವರದ್ದು.
" ವಿಸ ಕುಡಿಯೋ ಅಂತಾದ್ದು  ಏನಾಯ್ತು ಪುತ್ರ, ಇರ್ಲಿ,  ನಂಗ್ ಅರ್ಥ ಆಗ್ದಿದ್ದು ಯಾವ್ದೈತೆ? " ಅಂತ ಹೇಳ್ತು..
ಈಗ ಗಾಬರಿ ಆಗಿದ್ದು ವಿಶ್ವ..!! "ಅಲ್ಲಾ, ದೇವ್ರೇ ಹಿಂಗ್ ಕನ್ಫ್ಯೂಸ್ ಮಾಡ್ಕಂಡ್ರೆ ನಮ್ಮಂತೋರ್ ಗತಿ ಏನು" ಅಂತ ಮನಸ್ಸಿನಲ್ಲೇ ಅಂದು ಕೊಂಡ.
ಮತ್ತೆ ದೇವ್ರು ಹೇಳ್ತು "ಇರ್ಲಿ, ಬೇಜಾರ್ ಮಾಡ್ಕಣ್ ಬ್ಯಾಡ ನಾನೆಲ್ಲ ಸರಿ ಮಾಡ್ತೀವ್ನಿ.. ಎಲ್ಡ್ ನಿಂಬೆಣ್ಣು ಒಂದ್ ವೂ ತಕ್ಕಣ್ ಬಾ"
ಅವಿಗೆ ಯೇನ್ ಮಾಡ್ಬೇಕೋ ಗೊತ್ತಾಗ್ಲಿಲ್ಲ.. ಒಂದ್ ಚೆಂಡು ಹೂ ಮತ್ತೆರಡು ನಿಂಬೆ ಹಣ್ಣನ್ನ ದೇವ್ರಿಗೆ ಕೊಟ್ಟು ನಿಂತುಕೊಂಡ.
ಮತ್ತೆ ದೇವ್ರೇ ಮುಂದುವರಿಸಿತು " ನಿಂಗ್ಯಾರು ವಿಸ ಕುಡಿಯಂಗ್ ಮಾಡಿದ್ರೋ.. ಅವ್ರೆ ಅದುನ್ ಕುಡಿ ಬೇಕು ಅಂಗ್ ಮಾಡ್ತೀನಿ" ಅಂತ ಹೇಳುತ್ತಾ.. ಎರಡು ನಿಂಬೆ ಹಣ್ಣನ್ನ ಕೈಲಿ ಹಿಡ್ಕೊಂಡು ಅದೇನೋ ಮಂತ್ರ ಹೇಳೋದಕ್ಕೆ ಶುರು ಮಾಡ್ತು..
ಅವಿಗೆ, ಹಿಂದೊಮ್ಮೆ ತನ್ನ ಗರ್ಲ್ ಫ್ರೆಂಡ್ ತಮಿಳ್ ಸೆಲ್ವಿ ದೆಸೆಯಿಂದ ಆಲ್ ಔಟ್ ಕುಡಿದಿದ್ದು ನೆನಪಾಯಿತು. ಅಷ್ಟರಲ್ಲಿ ದೇವರು, ೨ ಮಂತ್ರಿಸಿದ ನಿಂಬೆ ಹಣ್ಣು ಮತ್ತು ಸ್ವಲ್ಪ ಕುಂಕುಮವನ್ನು ಕೊಟ್ಟು "ಇದನ್ನ ನಿನ್ ತಲೆದಿಂಬಿಗ್ ಇಟ್ಕಾ" ಅಂತ ಹೇಳಿ " ಮತ್ತೆ ಮುಂದಿನ್ ಅಮಾಸೆಗ್ ಬಾ" ಅಂತ ಹೇಳಿತು.
ಇಬ್ಬರು ದೇವರಿಂದ ಬೀಳ್ಕೊಟ್ಟು ಹೊರಗೆ ಬಂದು ಒಬ್ಬರ ಮುಖ ಮತ್ತೊಬ್ಬರು ನೋಡಿ ನಕ್ಕು ಗಾಡಿ ಹತ್ತಿ ಊರಿನ ಕಡೆ ಪಯಣ ಬೆಳಸಿದ್ರು. 
ಈ ಘಟನೆಯಾಗಿ ಸರಿಯಾಗಿ ಒಂದು ವಾರದೊಳಗೆ ಅವಿಯ ವೀಸಾ ಪ್ರೋಸೆಸ್ ಆಗಿ ಕೈಗೆ ಬಂತು..  ಕಾರಣ ಏನೇ ಇರಲಿ, ಈಗ ಅವಿಗೆ ಗೌಡ್ನಳ್ಳಿ ಸನ್ಮಾ ದೇವ್ರು ಅಂದ್ರೆ ಫವರಿಟ್ ದೇವ್ರು..
 

Rating
No votes yet

Comments

Submitted by Chakravarthi Wed, 10/22/2014 - 22:14

ಅನಿಲ್ ರವರೆ ,
ಹಾಸ್ಯ ಕಥೆ ತುಂಬಾ ಚೆನ್ನಾಗಿದೆ , " ಇಷ್ಟ್ ಜನ್ರಲ್ಲಿ ತನಗೆ ದೇವ್ರು ಪ್ರಿಫರನ್ಸ್ ಕೊಡ್ತಲ್ಲ " :) :) , ಅಂಗಡಿ ಯವರು ಯಾವಾಗ್ಲೂ ಹೊಸ ಗಿರಾಕಿಗೆ ಪ್ರೆಫ್ರೆನ್ಸು ಕೊಡ್ತಾರೆ. ಆಮೇಲೆ ಅವರು ಮಾಮೂಲಿ ಗಿರಾಕಿ ಆಗ್ತಾರೆ.
ಧನ್ಯವಾದಗಳು