ಕಿರುಗತೆ : ಸೋಗಲಾಡಿ ಪಾಪ ಪ್ರಜ್ಞೆ

ಕಿರುಗತೆ : ಸೋಗಲಾಡಿ ಪಾಪ ಪ್ರಜ್ಞೆ

ಕಿರುಗತೆ  : ಸೋಗಲಾಡಿ ಪಾಪ ಪ್ರಜ್ಞೆ
 
     ರಾತ್ರಿಯಿಡೀ ತೊಟಕ್ ತೊಟಕ್ ಅನ್ನುವ ಸದ್ದು. ಮಧ್ಯಮಧ್ಯದಲ್ಲಿ ಗುಡುಗೂ, ಸಿಡಿಲು.   ಪ್ರಶಾಂತವಾದ ನಿದ್ರೆಗೆ ಇವು ಭಂಗ ತರುವಂಥವುಗಳಾದರೂ, ಅಂದಿನ ನಿದ್ರೆ ಅಮೋಘವಾಗಿತ್ತು. ಬೆಳಗ್ಗೆ ಸುಮಾರು ಆರೂ ಕಾಲಿಗೆ ಎದ್ದಾಗ ತಲೆಯ ಮೇಲಿನ ಭಾರವೆಲ್ಲಾ ಇಳಿದಂತಾಗಿತ್ತು.  ಅಭ್ಯಾಸದಿಂದ ಎರಡೂ ಕಯ್ಯನ್ನು ಉಜ್ಜಿಕೊಂಡು ನೋಡಿ, ಹಾಸಿಗೆಯಿಂದ ಮೇಲೆದ್ದು ತನ್ನ ಮೊಬೈಲಿಗೆ ಯಾವುದಾದರೂ ಮೆಸ್ಸೇಜ್ ಬಂದಿರಬಹುದೇ ನೋಡಿದ. ಇಲ್ಲಾ ಯಾವುದೂ ಬಂದಿರಲಿಲ್ಲ..  ಆತ ಪ್ರಾಣಿ ಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕ. ಹೆಸರು ಪ್ರಕಾಶ. ವಯಸ್ಸು ಮೂವತ್ತೆಂಟಾದರೂ ಮದುವೆ ಆಗಿರಲಿಲ್ಲ. ಆದರೂ ಆತನದ್ದು ಆರೋಗ್ಯಕರವಾದ ಮನಸ್ಸೇನೂ ಆಗಿರಲಿಲ್ಲ. ಆತನ ಮನೋವಿಕಾರ ಅತಿರೇಕಕ್ಕೇ ಹೋಗುತ್ತಿದ್ದದ್ದೂ ಉಂಟು... ಕೆಲವಾರು ವರ್ಷಗಳ ಹಿಂದೆ ಸಹ ಅಧ್ಯಾಪಕಿಯ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಕ್ಕೆ ಕಾಲೇಜಿನಿಂದ ಹೊರಹಾಕಲಾಗಿತ್ತು.. ಇದು ಆತ ಪಾಠ ಮಾಡುತ್ತಿರುವ  ಎರಡನೆಯ ಕಾಲೇಜ್.  ನೈತಿಕತೆಯ ಕೊರತೆಯೇ ಆತನ ಈ ಅವಸ್ಥೆಗೆ ಕಾರಣವಾಗಿತ್ತು. ಆತನ ಸ್ವಭಾವದ ಮೇಲೆ ಆತನಿಗೆ ನಿಯಂತ್ರಣವೆಂಬುದೇ ಇರಲಿಲ್ಲ. ಆದರೂ ತನ್ನ ವೃತ್ತಿಯಲ್ಲಿ, ಕಡಿಮೆ ವಯಸ್ಸಿನಲ್ಲಿಯೇ ಬಹುದೊಡ್ಡ ಹೆಸರು ಮಾಡಿದ ಪ್ರೊಫೆಸ್ಸರ್ ಆತ. ಅಷ್ಟೇ ಅಲ್ಲಾ, ಒಮ್ಮೊಮ್ಮೆ ಬೇರೆಬೇರೆ ರಾಜ್ಯಗಳಿಗೆ ಉಪನ್ಯಾಸಕೊಡುವುದಕ್ಕೆ ಹೋಗುವಷ್ಟು ಪ್ರಖ್ಯಾತಿಗಳಿಸಿದ್ದ ಅಧ್ಯಾಪಕ.
 
ಮೊಬೈಲ್ ಅನ್ನು ಅಲ್ಲಿಯೇ ಹಾಸಿಗೆ ಮೇಲೆ ಬಿಸಾಡಿ ಆಕಳಿಕೆ ತೆಗೆದ.  ಇದ್ದಕಿದ್ದ ಹಾಗೆ ವೈಬ್ರೇಟರಿ ಮೋಡ್ ನಲ್ಲಿದ್ದ ಮೊಬೈಲ್  ಸದ್ದು ಮಾಡುವುದಕ್ಕೆ ಶುರು ಮಾಡಿತು. ಎತ್ತಿಕೊಂಡು ನೋಡಿದ. ಅದು ಸಹ ಅಧ್ಯಾಪಕರಾದ ನಾರಾಯಣ ಗೌಡರ ಕಾಲ್.  ಕರೆಯನ್ನು ಸ್ವೀಕರಿಸಿ "ಶುಭೋದಯ ..ಗೌಡ್ರಿಗೆ..." ಎಂದ..

"ಏನ್ ಶುಭೋದಯವೋ!... ನಮ್ ಕಾಲೇಜ್ ಫಸ್ಟ್ ಇಯರ್ ಹುಡ್ಗಿ ಸಂಗೀತ ಸೂಸೈಡ್ ಮಾಡ್ಕೊಂಡಿದ್ದಾಳಂತಯ್ಯ... "

ಪ್ರಕಾಶನಿಗೆ ತಲೆಸುತ್ತಿದಂತಾಯಿತು. ""ಹೌದಾ... " ಎಂದು ಮೃದುವಾಗಿ ಕೇಳಿದ.

"ಮ್ಮ್.. ಆ ಹುಡ್ಗಿ ನಮ್ಮೂರ್ದೇ... ಅವ್ರಪ್ಪ್ಪ ಅಮ್ಮ ಎಲ್ಲಾ ನಂಗ್ ಚೆನ್ನಾಗ್ ಪರ್ಚಯ... ಏನೋ ಓದೋದಕ್ಕೆ ಅಂತ ಕಷ್ಟಪಟ್ಟು ಕಳ್ಸಿದ್ರೆ ಇಲ್ಲಿ ಸಿಟಿ ಶೋಕಿ ಕಲ್ತ್ಕಂಡ್ ಏನೇನೋ ಮಾಡ್ಕೊಳ್ತಾವೆ... ಅದೇನ್ ದೊಡ್ಡ್ ರೋಗ ಬಂದಿತ್ತೋ ಗೊತ್ತಿಲ್ಲ... ಈ ವಯ್ಸಿಗೆ ಲವ್ವು ಗಿವ್ವು ಅಂತ್ಕೊಂಡ್ ಅನಾವ್ತ ಮಾಡ್ಕೊಳ್ತಾವೆ.... ಸ್ಟುಪಿಡ್ಸು..." ಎಂದು ನಾರಾಯಣಗೌಡರು ಮಾತು ಮುಂದುವರಿಸಿದರು..  ಯಾಕೋ ಪ್ರಕಾಶನಿಗೆ ಕಣ್ಣುಮಂಜಾದಂತೆ ಆಯಿತು... "ಹೋ ಇಟ್ಸ್ ವೆರಿ ಸ್ಯಾಡ್ .. ನಾನ್ ಆಮೆಲೆ ಕಾಲ್ ಮಾಡ್ತೀನಿ" ಅಂತ  ಕಾಲ್ ಕಟ್ ಮಾಡಿದ. ನಾರಾಯಣಗೌಡರು ಉಳಿದ  ಅಧ್ಯಾಪಕರಾದ ಶೈಲಾ, ಸಿದ್ಧಪ್ಪ, ಶ್ರೀನಿವಾಸ ಎಲ್ಲರಿಗೂ ಫೋನಿನಲ್ಲೇ ಸುದ್ಧಿಭಿತ್ತರ ಮಾಡಿದರು.

ಪ್ರಕಾಶನಿಗೆ ಯಾಕೋ ಪ್ರಜ್ಞೆ ತಪ್ಪಿದಂತಾಯಿತು. ಆಮೇಲೆ ಸ್ವಲ್ಪ ಎಚ್ಚೆತ್ತ... ಆದರೂ ತಲೆ ತಿರುಗಿದ ಅನುಭವವೇ ಆಗುತ್ತಿತ್ತು..  ಯಾಕೋ ಗಂಟಲು ಕಟ್ಟಿದಂತಾಯಿತು.. ನೀರು ಕುಡಿದು ಮತ್ತೆ ಹಾಸಿಗೆಯ ಮೇಲೆ ಬಂದುಕುಳಿತ. ನಂತರ ತನ್ನೆರಡೂ ಕೈಗಳಿಂದ ತನ್ನ ತಲೆಯಕೂದಲನ್ನು ಕೆದರಿಕೊಂಡು ಬಿಕ್ಕಳಿಸಿ ಅಳುವುದಕ್ಕೆ ಶುರು ಮಾಡಿದ. "ಛೇ! ಎಂತಹ ಅನಾಹುತ ಮಾಡಿಬಿಟ್ಟೆ... ನನ್ನಂತ ಪಾಪಿಗೆ ನಿಜವಾಗಲೂ ಬದುಕುವ ಹಕ್ಕಿಲ್ಲ... ಒಬ್ಬ ಶಿಕ್ಷಕನಿಗೆ ಎಲ್ಲಾ ವಿದ್ಯಾರ್ಥಿಗಳೂ ಮಕ್ಕಳಿದ್ದಂತೆ.. ಆದರೆ ನನ್ನಂತಹ ಕಾಮುಕರು ನೋಡುವ ರೀತಿಯೇ ಬೇರೆ... ಅಯ್ಯೋ ಎಂತೆಂಥವರೋ ಅಲ್ಲಿ ಇಲ್ಲಿ ಅನಾಹುತಗಳಿಗೆ ಬಲಿಯಾಗಿ ಸಾಯ್ತಾರೆ... ನಾನ್ಯಾಕ್ ಇನ್ನೂ ಬದ್ಕಿದ್ದೀನಿ... " ಅಂತ ಅಳುತ್ತಲೇ ಕನ್ನಡಿಯ ಮುಂದೆ ಹೋಗಿ ನಿಂತುಕೊಂಡ.. ನಿಂತುಕೊಂಡು ಬುದ್ಧಿ ವಿಕಲ್ಪನಾದವನಂತೆ ತನ್ನ ಕೆನ್ನೆಗೆ ತಾನೆ ಜೋರಾಗಿ ಒಡೆದುಕೊಳ್ಳುವುದಕ್ಕೆ ಶುರು ಮಾಡಿದ...  

ಸಂಗೀತಾ ಹಳ್ಳಿಯ ಹುಡುಗಿ... ಪಿಯೂಸಿಯಲ್ಲಿ  ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದರೂ ಹಣದ ಅನೂಕೂಲವಿಲ್ಲದ ಕಾರಣ ಬಿಯೆಸ್ಸಿ ತೆಗೆದು ಕೊಂಡಿದ್ದಳು. ಸಿಟಿಯ ಆಕರ್ಷಣೆಗೆ ಒಳಪಡದಷ್ಟು ಮುಗ್ಧೆ. ಪ್ರಕಾಶ ಆಕೆಯ ಬಳಿ ಅನುಚಿತವಾಗಿ ಮಾತನಾಡುತ್ತಾ ಆಕೆಗೆ ಮುಜುಗರ ತರಿಸುತ್ತಿದ್ದದ್ದೇನೋ ನಿಜ.. ಆದರೆ ಆಕೆಯ ಬಳಿ ಅತಿರೇಕವಾಗಿ ನಡೆದುಕೊಳ್ಳುವ ಅವಕಾಶ ಆತನಿಗಿನ್ನೂ ಸಿಕ್ಕಿರಲಿಲ್ಲ. ಹೊಲಸಿನ ಮೇಲೆ ಕೂತುಕೊಳ್ಳಲು ಹವಣಿಸುವ ನೋಣದಂತೆ ಆತನ ಮನಸ್ಸು ಸದಾ ಜಾಗೃತವಾಗಿರುತ್ತಿತ್ತು. ನಿನ್ನೇ ಅದ್ಯಾಕೋ ವಿಕೃತವಾಗಿ ತನ್ನ ಮೊಬೈಲ್ನಿಂದ ಆಕೆಗೆ ಮೆಸ್ಸೇಜ್ ಕೂಡ ಮಾಡಿದ್ದ. ಆತ ತನ್ನ ಕೃತ್ಯಗಳನ್ನು ಸಾಧಾರಣೀಕರಿಸುವ  ಎಲ್ಲಾ ಅಂಶಗಳನ್ನು  ಆಗಲೇ ಸಿದ್ಧಮಾಡಿಟ್ಟುಕೊಂಡಿರುತ್ತಿದ್ದ. ಎಲ್ಲಾ ಕೃತ್ಯಗಳನ್ನೂ ಶೈಕ್ಷಣಿಕವಾಗಿ ಬದಲಾಯಿಸುವ ಉಪಾಯ ಆತನಿಗಾಗಲೇ ಸಿದ್ಧಿಸಿತ್ತು.  ಆದರೆ ಸಂಗೀತಾಳ ಆತ್ಮಹತ್ಯೆ ಏನೋ ಹೊಸ ರೀತಿಯ ನೋವನ್ನು ಮನಸ್ಸಿಗೆ ತರುತ್ತಿತ್ತು. ಹುಚ್ಚನಂತೆ ಗಂಟೆಗಟ್ಟಲೆ ತನ್ನ ಕೆನ್ನೆಗೆ ಬಾರಿಸಿಕೊಂಡ, ತಲೆಯನ್ನು ಜಜ್ಜಿಕೊಂಡ. ಆದರೂ ಮನಸ್ಸು ಸೀಮಿತಕ್ಕೆ ಬರುವ ಹಾಗೆ ಕಾಣಲಿಲ್ಲ...  ಕೊನೆಗೆ ತನಗೆ ತಾನೇ ಹೇಳಿಕೊಂಡ.. "ಇನ್ನೇನು, ಪೋಲಿಸಿನವರಿಗೆ ಆಕೆಯ ಡೆತ್ ನೋಟೋ ಇಲ್ಲಾ ನಾನು ಕಳಿಸಿದ ನಿನ್ನೆಯ ಮೆಸ್ಸೆಜೋ ಸಿಗುತ್ತೆ. ಇಲ್ಲೀವರ್ಗೂ ಅತೀ ಗೌರವದಿಂದ  ಕಾಣ್ತಾ ಇದ್ದ ನನ್ನ ಸಹ ಅಧ್ಯಾಪಕ್ರು, ಸ್ಟೂಡೆಂಟ್ಸೂ ನನ್ನನ್ನ ಅತೀ ಕೆಟ್ಟದ್ದಾಗಿ ಕಾಣ್ತಾರೆ.. ಛೀ ಅಂತ ಮುಖಕ್ಕೆ ಕ್ಯಾಕರಿಸಿ ಉಗಿದ್ರೂ ಉಗೀ ಬಹುದು... ಊರಿನಲ್ಲಿರುವ ನನ್ನ ತಾಯಿ, ತಂಗಿ ಎಲ್ಲಾ ಟೀವಿಯಲ್ಲಿ ಈ ದೃಶ್ಯವನ್ನ ನೋಡ್ತಾರೆ... ಅಕ್ಕಪಕ್ಕದ ಜನ ಇಂತ ಒಬ್ಬ ಕಾಮುಖ ತಮ್ಮ ಮನೇ ಪಕ್ಕದಲ್ಲಿದ್ದ ಅಂತ ಆಶ್ಚರ್ಯ ಪಡ್ತಾರೆ... "  ಹೀಗೇ ಏನೇನೋ ಯೋಚನೆಗಳು ತಲೆಗೆ ಬಂದವು... ಆಮೇಲೆ ತನಗೆ ತಾನೆ ಹೇಳಿಕೊಂಡ  "ಹೌದು ನನ್ನಿಂದ ತಪ್ಪಾಗಿದೆ.... ಕ್ಷಮಿಸಲಾಗದ ತಪ್ಪು...ಸರಿಮಾಡಲಾರದ ತಪ್ಪು... ಇದಕ್ಕೆ ಸಾವಲ್ಲದೆ ಮತ್ತೊಂದು ಶಿಕ್ಷೆಯಿಲ್ಲ... ಅಯ್ಯೋ ಸಾವಿಗಿಂತಲೂ ಇದು ಘೋರವಾದ್ದು, ನಾನ್ಯಾಕಿನ್ನೂ ಬದ್ಕಿದ್ದೀನಿ" ಎಂದುಕೊಂಡ..
 
ನಂತರ  “ಸರಿ,  ಈಗ ಆಗಿದ್ದು ಆಯಿತು... ಇದಕ್ಕೆ  ತಕ್ಕ ಶಾಸ್ತಿಯನ್ನು ನಾನೇ ಮಾಡಿಕೊಳ್ಳುತ್ತೇನೆ” ಅಂತ ತನ್ನ ಉದ್ದನೆಯ ಪಂಚೆಯಿಂದ ನೇಣಿನ ಕುಣಿಕೆ ಸಿದ್ಧಪಡಿಸಿದ.  ಆಮೇಲೆ ಆತನಿಗೆ ಅನ್ನಿಸಿತು "ಛೇ!.. ಇಲ್ಲೀವರ್ಗೂ ಸಂಪಾದ್ಸಿದ್ ಹೆಸ್ರೂಗಿಸ್ರೂ ಎಲ್ಲಾ ಮಣ್ ಪಾಲಾಯ್ತಲ್ಲ... ನಾನೊಂದ್ ವೇಳೆ ಇಲ್ಲಿ ಸೂಸೈಡ್ ಮಾಡ್ಕೊಂಡ್ರೆ ನನ್ನ ಮೇಲಿನ್ ತಪ್ಪು ಅಳ್ಸೋಗಲ್ಲ... ಅದಕ್ಕೆ ಬದಲಾಗಿ ನಾನೇ ಇಲ್ಲಿಂದ ತಪ್ಪಿಸಿಕೊಂಡು ಹೋಗಿ, ಯಾವ್ದಾದ್ರು ಕಾಡಿನ ಪ್ರದೇಶದಲ್ಲಿ ಸತ್ತರೆ, ನನ್ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪೋಲಿಸ್ರು ಹುಡ್ಕೋದಿಲ್ಲ..  ಅಟ್ಲೀಸ್ಟ್ ಮೀಡಿಯಾದ ಮುಂದೆ ಹೋಗೋ ಮಾನಕ್ಕಿಂತ ಎಷ್ಟೋ  ಪಾಲು ಬೆಟರ್...  ಬದುಕಿದ್ದಾಗ ಆಗಬಹುದಾದ ಅವಮಾನದಿಂದ  ತಪ್ಪಿಸ್ಕೊಳ್ ಬಹುದು" .
ಆದರೆ ಆತನಿಗೆ ಯಾವುದೋ ಒಂದು ವೇದನೆ ಮನಸ್ಸಿನೊಳಗೇ ಕೊರೆಯುತ್ತಿತ್ತು... ಮತ್ತೆ ಮತ್ತೆ ತಲೆ ಚಚ್ಚಿಕೊಂಡ.  ಮತ್ತೆ ಹೇಳಿಕೊಂಡ.. "ಇಲ್ಲಾ.. ನನ್ನಿಂದ ಇತರರಿಗೆ ಪಾಠವಾಗ್ಬೇಕು... ನಾನು ಸತ್ತ್ರೆ ಸತ್ಯವನ್ನ ಹೆದರಿಸ್ದೇ ಸತ್ತೆ ಅಂತ ಆಗತ್ತೆ.. ಅದ್ರು ಬದ್ಲು ಸಮಾಜಕ್ಕೊಂದ್ ಒಳ್ಳೇ ಪಾಠ ಕಲ್ಸ್ ಬೇಕು... ಇದ್ರಿಂದ ನನ್ನಂತಾ ಶಿಕ್ಷಕ್ರು ಬುದ್ಧಿ ಕಲೀಬೇಕು...  ದನಿ ನಡುಗಿದ್ರೂ ಸರಿಯೇ.. ಸತ್ಯವನ್ನೇ ಹೇಳ್ಬೇಕು...  ನನ್ನ ವಿದ್ಯಾರ್ಥಿಗಳು ಉಗುಳು ತುಂಬ್ಕೊಂಡು ಮುಖಕ್ಕೆ ಉಗುದ್ರೂ ಚಿಂತೆಯಿಲ್ಲ.. ಜಗತ್ತಿಗೆ ಸತ್ಯ ಅನ್ನೋದು ಗೊತ್ತಾಗ್ಬೇಕು...  ಅಕ್ಕಪಕ್ಕದ ಮನೆಯವ್ರು ಕಲ್ಲಲ್ಲಿ ಹೊಡುದ್ರು ಪರವಾಗಿಲ್ಲ. ಸತ್ಯಕ್ಕೆ ಜಯ ಸಿಗ್ಬೇಕು... ಸಂಗೀತನ ಆತ್ಮಕ್ಕೆ ಶಾಂತಿ ಸಿಗ್ಬೇಕು... ". ನಂತರ ಆತನ ಮನಸ್ಸು ಧೃಡವಾದಂತೆ ತೋರಿತು... ಆತ ಹೇಳಿದ.." ಪೋಲೀಸಿನವ್ರು ನನ್ನ್ ಹತ್ರ ಬರೋ ಅಗತ್ಯ ಇಲ್ಲಾ... ನಾನೇ ಎಲ್ಲರ ಮುಂದೆ ಹೋಗಿ ನನ್ನ ನಿಜವಾದ ರೂಪಾನ ಬಯಲ್ ಮಾಡ್ಕೊಳ್ತೀನಿ... ಪ್ರತಿಯೊಬ್ರು ಕ್ಯಾಕರ್ಸಿ ಉಗ್ದಾಗ ಅಷ್ಟೇ ನನ್ಗೇ ಪ್ರಾಯಶ್ಚಿತ್ತ ಆಗೋದು" ಅಂತ ಭಾವಿಸಿದ.. ಗಂಟೆ ಅದಾಗಲೇ ಏಳೂವರೆ ಆಗಿತ್ತು... ಸಂಗೀತಾಳ ಆತ್ಮಹತ್ಯೆಯ ಸುದ್ಧಿಕೇಳುತ್ತಲೇ ಎಲ್ಲಾ ಸಹಪಾಠಿಗಳೂ , ಶಿಕ್ಷಕರೂ ಅಲ್ಲಿ ನೆರೆದಿದ್ದರು. ಪೋಲೀಸಿನವರು ಆಗತಾನೆ ಬಂದು ತಪಾಸಣೆ ನಡೆಸುತ್ತಿದ್ದರು...  ಪ್ರಕಾಶ ಧೈರ್ಯವಾಗಿ  ಅಲ್ಲಿ ನೆರದಿದ್ದವರ ಗುಂಪಿಗೆ ನುಗ್ಗಿದ. ಆತನ ಕಣ್ಣುಗಳಲ್ಲಿ ಧಾರಾಕಾರವಾಗಿ  ನೀರು ಸುರಿಯುತ್ತಿತ್ತು.  ಪ್ರಕಾಶನನ್ನ ನೋಡಿದ ಪೋಲಿಸಿನವರು "ಸಮಾಧಾನ ಮಾಡ್ಕೊಳ್ಳಿ ಸಾರ್... ನಿಮ್ಮಂತ ಶಿಕ್ಷಕರೇ ಹೀಗೆ ಅತ್ತರೆ ಹೇಗೆ ಅಂದರು..". ಅದಕ್ಕೆ ಅಲ್ಲಿ ನಿಂತಿದ್ದ ಶೈಲಾ ಮೇಡಂ "ಪಾಪ, ಆ ಸಣ್ಣ್ ಹುಡ್ಗೀನ ತುಂಬಾ ಹಚ್ಕೊಂಡಿದ್ರು ಸರ್.. ಅದಕ್ಕೆ ಅಷ್ಟ್ ಅಳ್ತಾ ಇದ್ದಾರೆ.." ಎಂದು ಹೇಳಿದರು... "ಇವತ್ತು ಸತ್ಯ ಗೊತ್ತಾಗ್ಲೇ ಬೇಕು.. ಇದು ನನ್ನಂತಹ ಶಿಕ್ಷಕರಿಗೆ ಪಾಠ ಆಗ್ಬೇಕು " ಅಂತ ಮತ್ತೆ ಪ್ರಕಾಶ ಮನಸ್ಸಿನಲ್ಲಿಯೇ  ಅಂದುಕೊಂಡ.
ಸಬ್ ಇನ್ಸ್ಪೆಕ್ಟರ್ ಮಹಾದೇವ, ಪ್ರಕಾಶನನ್ನು ಒಂದು ಕಡೆ ಕರೆದುಕೊಂಡು ಹೋಗಿ ಸಮಾಧಾನ ಪಡಿಸತೊಡಗಿದ. "ಇನ್ನೂ ಅಳ್ತಾ ಇದ್ದೀರಲ್ಲಾ... ಸಮಾಧಾನ ಮಾಡ್ಕೊಳ್ಳಿ.. ಆ ಬಡ್ಡೀಮಗ ಎಲ್ಲೋದ್ರು ಬಿಡಲ್ಲ... ವಿಷ್ಯಾ ಗೊತ್ತಾಗಿ ಬೆಳ್ ಬೆಳಗ್ಗೇನೆ ಎಸ್ಕೇಪ್ ಆಗಿದ್ದಾನೆ... ಎಲ್ ಹೋಗ್ತಾನೆ ನಮ್ಮಿಂದ ತಪ್ಪುಸ್ಕೊಂಡು... ". ಪೋಲೀಸಿನವರು ತನ್ನ ಬಗ್ಗೆಯೇ ಮಾತನಾಡುತ್ತಿದ್ದಾರೆ ಅಂದು ಭಾವಿಸಿ ಪ್ರಕಾಶ ಹೇಳಿದ.. "ಎಲ್ಲಿ ಹೋಗ್ತಾನೆ ಪೋಲಿಸ್ರೆ.. ನಿಮ್ಮ ಕಯ್ಯಿಂದ ತಪ್ಪಿಸ್ಕೊಂಡು ಎಲ್ಲ್ ಹೋಗಕ್ಕ್ ಸಾಧ್ಯ..".

     "ನಿಮ್ಗೇನಾದ್ರು  ಆ ವಾರ್ಡನ್ ಬಗ್ಗೆ ಗೊತ್ತಾದ್ರೆ ದಯ್ವಿಟ್ಟು ತಿಳ್ಸಿ...",

 " ವಾರ್ಡನ್ನ...""

      "ಹೌದು ಸಾರ್.. ಮೊದಲನೇ ಇನ್ವೆಸ್ಟೀಗೇಶನ್ ನಲ್ಲಿ ಕೆಲವೊಂದು ವಿಚಾರ ಗೊತ್ತಾಗಿದೆ... ಆಕೆಯ ಫೋನು ಮತ್ತೆ  ಕೆಲವು ವಸ್ತುಗಳನ್ನು ಪರೀಕ್ಷಿಸಿದ್ವಿ.. ಹಾಗೇ ಸೂಸೈಡ್ ನೋಟ್ ನಲ್ಲಿ ಸ್ಪಷ್ಟವಾಗಿ ವಾರ್ಡನ್ ನ ಕಿರುಕುಳದ ಬಗ್ಗೆ ಹೇಳಿದ್ದಾಳೆ.. ಆತನೇ ಆಕೆಯ ಸಾವಿಗೆ ಕಾರಣ ಅನ್ನೋದನ್ನ ಹೇಳಿದ್ದಾಳೇ.. ಆಕೆಯಷ್ಟೇ ಅಲ್ಲಾ.. ಇನ್ನೂ ಕೆಲವು ಹುಡುಗೀರೂ ಈ ಬಗ್ಗೆ ಹೇಳಿದ್ದಾರೆ...."

"ಆಕೆಯ ಮೊಬೈಲ್ ಚೆಕ್ ಮಾಡಿದ್ರ.. ಸರ್.."

"ನಿನ್ನೆ ಯಾವ ಕಾಲೂ ಅಥ್ವಾ ಮೆಸೇಜೂ ಬಂದ ಹಾಗೆ ಕಾಣ್ತಾ ಇಲ್ಲ... ಮೋಸ್ಟ್ಲಿ  ಆಕೆ ರೆಗ್ಯುಲರ್ ಆಗಿ ಎಲ್ಲಾ ಡಿಲೀಟ್ ಮಾಡ್ತಾ ಇದ್ಲು ಅನ್ಸುತ್ತೆ.....".

ಪ್ರಕಾಶ ಕಣ್ಣು ಒರೆಸಿಕೊಂಡು ಹೇಳಿದ.... "ಬಿಡ್ಬೇಡಿ ಸರ್.. ಅವನನ್ನ ನೇಣಿಗೇರ್ಸಿ... ಇವತ್ತು ನನ್ ಮಗಳು ಸಾವಿಗ್ ಕಾರ್ಣ ಆಗಿದ್ದಾನೆ ಆ ಬಡ್ಡೀಮಗ...".

"ಸಮಾಧಾನ ಮಾಡ್ಕೊಳ್ಳಿ ಸರ್... ಎಲ್ಲದಕ್ಕೂ ಕಾನೂನು ಇದೆ... ಅವನನ್ನ ಕೂಡ್ಲೇ ಬಂಧಿಸೋಕ್ಕೆ ಎಲ್ಲಾ ಪ್ರಯತ್ನ ಮಾಡ್ತೀವಿ..."

ಪ್ರಕಾಶನಿಗೆ ಅರಿವಿಲ್ಲದಂತೆಯೇ ಆತನ ಕೈ  ತನ್ನ ಮೊಬೈಲ್ನ ಸೆಂಟ್ ಐಟಮ್ ಗೆ ಹೋಯಿತು.. ಕಳಿಸಿದ್ದ ಮೆಸ್ಸೆಜೂ ಡಿಲೀಟ್ ಆಯಿತು. ಅಲ್ಲಿದ್ದ ಶಿಕ್ಷಕರೆಲ್ಲಾ ಮತ್ತೆ ಪ್ರಕಾಶನನ್ನ ಸಮಾಧಾನ ಪಡಿಸಿದ್ರು.. ಅದಾಗಿ ಎರಡು ಗಂಟೆಗೆ ಅದೇ ಪೋಲಿಸಿನವ್ರು  ಮತ್ತೆ ಇನ್ನೊಂದು ವಿಷಯವಾಗಿ ತಲೆಕೆಡಿಸಿಕೊಂಡರು... ಬಾಟನಿ ಅಧ್ಯಾಪಕ ಶ್ರೀನಿವಾಸ ಆತ್ಮಹತ್ಯೆ ಮಾಡಿಕೊಂಡಿದ್ದ...
 
 

Rating
No votes yet

Comments

Submitted by kavinagaraj Wed, 04/29/2015 - 08:17

ಕಥಾ ವಿಷಯ ಮತ್ತು ನಿರೂಪಣೆ ಚೆನ್ನಾಗಿದೆ. ಒಂದೆರಡು ವ್ಯಾಕರಣ ದೋಷಗಳು ಕಂಡರೂ ಅವು ನಗಣ್ಯವಾಗಿವೆ.ಪ್ರಪಂಚದಲ್ಲಿ ಹೆಚ್ಚಿನಂಶ ಸೋಗಲಾಡಿಗಳು ಕಾಣಸಿಗುತ್ತಾರೆ, ವಿಷಯ, ಪ್ರಮಾಣ ಮತ್ತು ರೀತಿಗಳಲ್ಲಿ ವ್ಯತ್ಯಾಸವಿರಬಹುದಷ್ಟೆ.