ಜಾನೇ ಕಹಾಂ ಗಯೇ ವೋ ದಿನ್

ಜಾನೇ ಕಹಾಂ ಗಯೇ ವೋ ದಿನ್

                                                                 ‘ಜಾನೇ ಕಹಾಂ ಗಯೇ ವೊ ದಿನ್’

                                                                                                           -ಲಕ್ಷ್ಮೀಕಾಂತ   ಇಟ್ನಾಳ

 

    ದರ್ದ ಕೆ ಠುಕ್ರೋಂ ಕೊ, ಕಾಂಚ್ ಕೆ ಧಾಗೇ ಮೇ, ಜಖ್ಮೋಂ ಕೆ ಸಾಥ ಫಿರೋನೆವಾಲೇ ರಾಜಕಪೂರ, ಒಬ್ಬ ಅಪ್ರತಿಮ ಕಲಾವಿದ.  ಗಾಯಗಳನ್ನು, ನೋವಿನ ತುಣುಕುಗಳನ್ನು ಗಾಜಿನ ದಾರದ ಕುಸುರಿಯಿಂದ ಜೋಡಿಸುವ ಅಪ್ರತಿಮ ಕಲಾವಿದ ರಾಜಕಪೂರ.

 

  ಅವನ ಎಲ್ಲಾ ಚಿತ್ರಗಳು ಹೃದಯಕ್ಕೆ ತಟ್ಟುವ ಪ್ರೇಮ ಕಾವ್ಯಗಳೇ. ಮೇರಾ ನಾಮ್ ಜೋಕರ್ ನಲ್ಲಿ ಬರುವ ಸನ್ನಿವೇಶವನ್ನು ನಾವೆಲ್ಲ ನೋಡಿದ್ದೇವೆ. ರಾಜಕಪೂರನ ತಾಯಿ ತೀರಿಕೊಂಡಿದ್ದ ಸಂದರ್ಭದಲ್ಲಿಯೂ ಕೂಡ ಸರ್ಕಸ್ನಲ್ಲಿ ತನ್ನ ಜೋಕರ್ ಪಾತ್ರದಿಂದ,  ವೈಯಕ್ತಿಕ ನೋವುಗಳನ್ನು ನುಂಗಿ,  ಪ್ರೇಕ್ಷಕರನ್ನು ನಗಿಸಿ, ಮನರಂಜಿಸುವ ಸನ್ನಿವೇಶ ಬಹು ಹೃದಯಸ್ಪರ್ಶಿ. ಜೀವನದ ನಾಟಕ ನಿಲ್ಲಬಾರದೆಂಬ ದೃಷ್ಟಿಕೋಣವನ್ನು ಸೀದಾ ಹೃದಯಕ್ಕೆ ತಟ್ಟುವಂತೆ, ನಾಟುವಂತೆ ಹೇಳುವುದು ರಾಜಕಪೂರನಿಗೆ ರಕ್ತಗತವಾಗಿಯೇ ಬಂದಿತ್ತು. ಅವರ ಒಂದೊಂದು ಚಿತ್ರವೂ ಅಮರಕಾವ್ಯ. ಅಂದಿನ ರಷ್ಯಾದಲ್ಲಿ ಭಾರತೀಯರನ್ನು ಕಂಡೊಡನೇ, ‘ ಮೈ ಆವಾರಾ ಹೂಂ’ ಎಂದು ಹಾಡಿ ರಾಜಕಪೂರ ನಾಡಿನವರೆಂದು ಪ್ರವಾಸಿಗರ ಕೈ ಕುಲುಕುತ್ತಿದ್ದರೆಂದರೆ ರಾಜಕಪೂರ ಖ್ಯಾತಿ ಎಂತಹುದೆನ್ನುವುದು ಅರ್ಥವಾಗುತ್ತದೆ. ಅಂದಿನ ಕಾಲದಲ್ಲಿ ಹೊರಜಗತ್ತಿಗೆ ಗೊತ್ತಿದ್ದ ಮತ್ತೊಂದು ಹೆಸರು ಮಹಾತ್ಮಾ  ಗಾಂಧಿ ಮಾತ್ರ! 

   ತಾನು ಗಳಿಸಿದ ಎಲ್ಲ ಬಂಡವಾಳವನ್ನು ಹಾಕಿ, ಬಹು ನಿರೀಕ್ಷೆ ಇಟ್ಟುಕೊಂಡು ನಿರ್ಮಿಸಿದ ಚಿತ್ರ ‘ಮೇರಾ ನಾಮ್ ಜೋಕರ್’. ಆದರೆ ಗಲ್ಲಾ ಪೆಟ್ಟಿಗೆಯಲ್ಲಿ ಸೋಲುಂಡಿದ್ದು ರಾಜಕಪೂರ ದುರದೃಷ್ಟವೆಂದೇ ಹೇಳಬೇಕು. ಮನುಷ್ಯನ ಪ್ರೇಮ ಸಂಬಂಧಗಳನ್ನು ನವಿರು ನವಿರಾಗಿ ಚಿತ್ರಿಸಿದ ಅಪ್ರತಿಮ ಕಲೆಗಾರನ ಸೃಷ್ಠಿಯನ್ನು ಪ್ರೇಕ್ಷಕ ಗಣ ತಿರಸ್ಕರಿಸದಿದ್ದರೂ  ಪುರಸ್ಕರಿಸಲಿಲ್ಲ. ಅದೊಂದು ಕ್ಲಾಸ್ ಮೂವಿ, ಮಾಸ್ ಮೂವಿಯಂತಾಗಲಿಲ್ಲ. ಬಹುತೇಕ ಅತ್ಯುತ್ತಮ ಸೃಷ್ಟಿಗಳಿಗೂ ಜಗತ್ತು ತೋರುವ ಪ್ರತಿಕ್ರಿಯೆ ಬಹುಶ: ಇದೇ ರೀತಿ ಇರುವುದನ್ನು ನಾವು ಹಲವಾರು ಆಯಾಮಗಳÀಲ್ಲಿ ಕಂಡುಕೊಳ್ಳಬಹುದು. ರಾಜಕಪೂರನ ಆ ಸೋಲನ್ನು ಒಬ್ಬ ಶಾಯರನ ಮಾತುಗಳಲ್ಲಿ ಹೀಗೆ ಹೇಳಬಹುದೇನೋ, 

 

ವೋ ಜಲ ಕರ ರೋಶÀನೀ ಫೈಲತೇ ರಹೇ

ಇಸ್ ಲಿಯೇ ಲೋಗ್ ಉನ್ಹೇಂ ಜಲಾತೇ ರಹೇ

ಉನ್ ಕೇ ಜಲನೇ ಕೋ ಕಿಸೀ ನೇ ದೇಖಾ ಹೀ ನಹೀ

ಸಿರ್ಫ ರೋಶನೀ ಸೆ ದುನಿಯಾ ಮುಸ್ಕುರಾತೇ ರಹೇ

 

   ಎಷ್ಟೋ ಕಷ್ಟಗಳು ಬಂದರೂ ನಾವು ಕೈಗೊಂಡ ಕೆಲಸಗಳನ್ನು ಮರೆಯದೇ ಮುನ್ನುಗ್ಗಿ ಮಾಡಬೇಕೆಂಬ ಶೂರ ಸಿಪಾಯಿಯ ಜೀವನ ನಿಯಮಗಳನ್ನು ಬಹು ಸೂಕ್ಷ್ಮವಾಗಿ ತಿಳಿಸುವ, ಅವನ ತಾಯಿ ತೀರಿಕೊಂಡಾಗ, ಶೋ ನಡೆಸಿ ಕೊಡುವ ದೃಶ್ಯ ಮನಕಲಕುವಂತಹದ್ದು. 

  ಇಂತಹುದೇ ಒಂದು ಸಂದರ್ಭ ಬಾಲ ಗಂಧರ್ವರ ನಿಜಜೀವನದಲ್ಲಿ ನಡೆದಿದ್ದು, ತಮ್ಮ ನಾಟಕ ಪ್ರಾರಂಭಕ್ಕೆ ಮುನ್ನ ತಮ್ಮ ಮಗು ತೀರಿಕೊಂಡಿದ್ದು ತಿಳಿದರೂ,  ನಾಟಕ ಮುಗಿಸಿ ಅಂತ್ಯಸಂಸ್ಕಾರಕ್ಕೆ ತೆರಳಿದ ಪ್ರಸಂಗ ನಮ್ಮ ಕಣ್ಣು ಮುಂದೆ ಸುಳಿಯದೇ ಹೋಗಲಿಕ್ಕಿಲ್ಲ.

ಇಂತಹ ಅನೇಕ ಕರ್ತವ್ಯಮತಿಗಳ ತ್ಯಾಗವೇ ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. 

ನಮ್ಮ ಈಶ್ವರ ಸಣಕಲ್ರವರ ಕವನದ ಸಾಲುಗಳನ್ನು ಈ ಸಂದರ್ಭದಲ್ಲಿ ಹೇಳುವುದು ಔಚಿತ್ಯಪೂರ್ಣವೆಂದೆನಿಸುತ್ತದೆ. 

 

‘ಜಗವೆಲ್ಲ ನಗುತಿರಲಿ, ಜಗದಳವು ನನಗಿರಲಿ

ನಾನಳಲು ಜಗವೆನ್ನನೆತ್ತಿಕೊಳ್ಳದೇ

ನಾನಕ್ಕು ಜಗವಳಲು ನೋಡಬಹುದೇ’

 

ಈ ಅಪ್ರತಿಮರೇ ಹೀಗೆ.

 ನಮ್ಮದೇ ಜಗತ್ತಿನಲ್ಲಿ ಇದ್ದರೂ, ಜಗಕೆÀ ಅಂಟಿಕೊಂಡೇ, ಬೇರೆಯಾಗಿ ಜೀವನ ಅನುಭಾವ  ಕಂಡುಕೊಳ್ಳುವವರು, ಅಸಾಮಾನ್ಯರು. ಅಸದೃಶರು. ಅದ್ವಿತೀಯರು.

ತಮ್ಮ ದು:ಖವನ್ನು ಜಗಕೆ ತೋರದೇ ಜಗಕೆ ನಲಿವನ್ನೇ ಕೊಟ್ಟವರು. 

ನಮ್ಮ ನೆಚ್ಚಿನ ಬೇಂದ್ರೆಯವರ ಬಗ್ಗೆ ಹೆಚ್ಚೇನು ಹೇಳಬೇಕು, ಜೀವನದ ಬೇಗುದಿಯಲ್ಲೇ ಬೆಂದ ಬೇಂದ್ರೆಯವರು,ಮಗ ತೀರಿಕೊಂಡಾಗ ಮಗನ ಹೆಣವನ್ನು ತನ್ನ ತೊಡೆಯ ಮೇಲೆ ಹಾಕಿಕೊಂಡು ಅವರ ಮಡದಿ ಇವರತ್ತ ನೋಡಿದಾಗ ಹುಟ್ಟಿದ ಹಾಡು

 ‘ನೀ ಹೀಂಗ ನೋಡಬ್ಯಾಡಾ ನನ್ನ, ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ’ 

ಎಂಬುದು ಪ್ರತಿಯೊಬ್ಬ ಕನ್ನಡಿಗನಿಗೂ ಗೊತ್ತು.  ಅಂತಹ ಸಂದರ್ಭಗಳಲ್ಲೂ ಕವಿಮನಸ್ಸು ಜಾಗ್ರತೆ ಇರಬೇಕಾದರೆ  ಅವರೊಬ್ಬ ಅನುಭಾವಿಯೇ ತಾನೇ. ಅವರೊಬ್ಬ ಅತಿಮಾನವರೇ ಇರಬೇಕೇನೋ.. 

ಹಾಗೆಯೇ ‘ಬಾರೋ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ’

ಕೂಡ  ಉದಯಿಸಿದ ಗಳಿಗೆ ಅದೆಂಥ ಯಾತನಾಮಯ! ಶಿಕ್ಷಕನಾಗಿÀ ಉದರಪೋಷಣೆಗೆ ಇದ್ದ ಉದ್ಯೋಗವೇ ಇಲ್ಲವಾದಾಗ ಹಾಡಿದ ಇಂತಹ ಹಾಡುಗಳ ಮೂಲಕ ಅವರು ನೀಡಿದ ಸಂದೇಶ ಮಾತುಗಳಲ್ಲಿ ಹೇಳುವುದು ಕಷ್ಟ. 

 

“ದೌಲತ್ –ಎ – ದರ್ದ ಕೋ ದುನಿಯಾ ಸೇ ಛುಪಾ ಕರ್ ರಖೋ

ಆಂಖ ಮೇ ಆಂಸೂ ನಾ ಹೋ, ಔರ್ ದಿಲ್ ಮೇಂ ಸಮಂದರ್ ರಖೋ”

 

ಸಂಪತ್ತು , ನೋವುಗಳನ್ನು ಈ ಜಗತ್ತಿನಿಂದ ಮುಚ್ಚಿಡು, 

ಹೃದಯದಲ್ಲಿ ನೋವಿನ ಸಾಗರವೇ ಇರಲಿ,  ಒಂದು ಹನಿ ಕೂಡ ಕಣ್ಣೀರು ಬೇಡ’ 

ಅನ್ನುವ ಸ್ಥಿತಪ್ರಜತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹುಶ: ಇಂದಿನ ಬಹುದೊಡ್ಡ ಸವಾಲಾದರೂ, ಅತೀ ಹೆಚ್ಚಿನ ಅವಶ್ಯಕತೆಗಳಲ್ಲೊಂದೆನಿಸುತ್ತದೆ.  

ಚಿತ್ರದಲ್ಲಿ ನಾಯಕನ ಜೀವನದಲ್ಲಿ ಮೂರು ವಿಫಲ ಪ್ರೇಮ ಪ್ರಕರಣಗಳು ಜರುಗುತ್ತವೆ

ಯಾರನ್ನು  ಹೃದಯದಿಂದ ಪ್ರೀತಿಸುತ್ತೇವೆಯೋ  ಅವರಿಂದಲೇ ಹೆಚ್ಚು ನೋವುಗಳನ್ನು ಜೀವನದಲ್ಲಿ ಅನುಭವಿಸುತ್ತೇವೇನೋ!,  ಎಷ್ಟೋ ಸಂದರ್ಭಗಳಲ್ಲಿ  ನೋವುಗಳನ್ನು ಹೂವುಗಳಿಂದ ಪಡೆದಿರುತ್ತೇವೆ ಆದರೆ ಮುಳ್ಳುಗಳಿಗೆ  ದೋಷ ನೀಡುತ್ತೇವೆ, ಮುಳ್ಳುಗಳಿಗೂ ಕೂಡ ಹೂವುಗಳು ನೋವನ್ನೇ ನೀಡಿರುವುದನ್ನು ಜಗತ್ತು ಗುರುತಿಸುವುದೇ ಇಲ್ಲ!

 

 

ಜಬ್ ಭೀ ಕಿಸೀ ಕೋ    ದಿಲ್ ಕೆ ಕರೀಬ್ ಪಾಯಾ ಹೈ

ಕಸಮ್ ಖುದಾ ಕೀ     ದೋಖಾ ವಹೀ ದಿಯಾ ಹೈ

ಕ್ಯೂಂ ದೋಷ ದೇತೇ ಹೋ ಹಮ್ ಕಾಂಟೋಂ ಕೋ

ಜಖಂ ತೋ ಹಮ್ ನೆ    ಫೂಲೋಂಸೆ ಹೀ ಪಾಯಾ ಹೈ

 

ನಿಜಜೀವನದಲ್ಲಿ ಇಂತಹ ಅನುಭವಗಳನ್ನು ನಾವು ಪಡೆಯದೇ ಹೋದರೆ ಅವನು ಒಂದೋ ದೈವೀ ಪುರುಷನೇ ಇರಬೇಕು, ಇಲ್ಲವೇ ಅವನು ಮನುಷ್ಯನೇ ಇರಲಿಕ್ಕಿಲ್ಲ. 

 

ಆ ಚಿತ್ರದ ಕೊನಯಲ್ಲಿ ರಾಜಕಪೂರ ಹೇಳುವ ಮಾತು ಮರೆಯಲಿಕ್ಕುಂಟೇ? 

“ಕಲ್ ಖೇಲ್ ಮೇ ಹಮ್ ಹೋ ನ ಹೋ 

ಗರ್ದಿಶ್ ಮೆ ತಾರೇ ರಹೇಂಗೇ ಸದಾ

ಭೂಲೇಂಗೆ ವೋ ಭೂಲೇಂಗೆ ತುಮ್ 

ಪರ್ ಹಮ್ ತುಮ್ಹಾರೇ ರಹೇಂಗೆ ಸದಾ”

ನೀವು ನನ್ನನ್ನು ಮರೆತರೂ ನಾನು ನಿಮ್ಮನ್ನು ಮರೆಯುವುದಿಲ್ಲ ಎಂದು ರಾಜಕಪೂರ ಹೇಳುತ್ತ ಪರದೆ ಬೀಳುತ್ತೆ

‘ಪಾಸಿಟಿವ್ಲಿ ನಾಟ್ ದಿ ಎಂಡ್’ ಎಂಬ ಸಾಲುಗಳು ಪರದೆಯ ಮೇಲೆ  ಮೂಡುತ್ತ ಸಿನಿಮಾ ಮುಗಿಯುತ್ತೆ. ನಾವಾರೂ ರಾಜಕಪೂರನನ್ನು ಮರೆಯಲಿಕ್ಕೆ ಸಾಧ್ಯವಿಲ್ಲ. ಅಂಥ ಕಲಾವಿದ ಯಾವತ್ತೂ ಪ್ರೇಕ್ಷಕರ ನೆನಪಿನಲ್ಲಿ ಅಚ್ಚಳಿಯದೇ ಉಳಿಯುತ್ತಾನೆ. ಅವನೊಬ್ಬ ಅಮರ ಕಲಾವಿದ. 

ಎಲ್ಲರಲ್ಲೂ ಒಬ್ಬ ರಾಜಕಪೂರ ಇರುತ್ತಾನೆ. ಆಗಾಗ ನಮ್ಮನ್ನೇ ಕೇಳುತ್ತಿರುತ್ತಾನೆ,  

‘ಜಾನೇ ಕಹಾಂ ಗಯೇ ವೊ ದಿನ್’!

 

Rating
No votes yet

Comments