' ದುರಂತ ನಾಯಕಿ ಮೀನಾಕುಮಾರಿ '

' ದುರಂತ ನಾಯಕಿ ಮೀನಾಕುಮಾರಿ '

ಚಿತ್ರ

                         

     ಮೊನ್ನೆ ರಾತ್ರಿ ಸರಿ ಸುಮಾರು 10 ಗಂಟೆಯ ಸಮಯ ಮಳೆ ಗಾಳಿಗಳ ಅಬ್ಬರದ ನಡುವೆ ಕತ್ತಲಾವರಿಸುತ್ತಿತ್ತು. ಬೆಳಗಿನಿಂದ ಇಲ್ಲವಾಗಿದ್ದ ಕರಂಟ್ ತನ್ನ ಅಸ್ತಿತ್ವ ತೋರಿಸಿ ಮರೆಯಾಗಿತ್ತು. ಓದಲು ಚಿಮಣಿಯ ಬೆಳಕು ಸಾಲದು ಎಂದು ಗೋಕಾಕರ ‘ಭಾರತ ಸಿಂಧು ರಶ್ಮಿಯ’ ಎರಡನೆಯ ಭಾಗವನ್ನು ಮಡಿಚಿಟ್ಟು  ಪಕ್ಕದಲ್ಲಿದ್ದ ಟ್ರಾನ್ಸಿಸ್ಟರ್‍ನ್ನು ಆನ್ ಮಾಡಿದೆ. ‘ಚಲೋ ದಿಲ್ದಾರ ಚಲೋ ಚಾಂದ್ ಕೆ ಪಾರ ಚಲೋ’ ಎನ್ನುವ ಹಿಂದಿ ಚಿತ್ರಗೀತೆಯೊಂದು ಸ್ಟೆಶನ್ ಒಂದರಿಂದ ಪ್ರಸಾರಗೊಳ್ಳುತ್ತಿತ್ತು. ಸುಶ್ರಾವ್ಯವಾದ ಸಂಗೀತ ಸಂಯೋಜನೆ ಲತಾಳ ಸಿರಿ ಕಂಠದಲ್ಲಿ ಕಿವಿಗಳಿಗೆ ಅಪ್ಯಾಯಮಾನವೆನಿಸಿತ್ತು. ಯಾವುದೀ ಹಾಡು ಎಂದು ಯೋಚಿಸುತ್ತಿರುವಷ್ಟರಲ್ಲಿಯೆ ಆ ಗೀತೆ ಮುಕ್ತಾಯಗೊಂಡು ಅದು ‘ಫಾಕೀಜಾ’ ಚಿತ್ರದ ಹಾಡು ಎಂದು ನಿರೂಪಕ ನನ್ನ ಸಂಶಯ ನಿವಾರಿಸಿದ. ಆ ಚಿತ್ರದ ಅದ್ದೂರಿತನ ಗುಲಾಮ್ ಹೈದರ್‍ರ ಸುಮಧುರ ರಾಗ ಸಂಯೋಜನೆ ಮೀನಾಕುಮಾರಿಯ ದ್ವಿಪಾತ್ರದ ಪಕ್ವ ಅಭಿನಯ, ಅಷ್ಟೆ ಸಮರ್ಥವಾಗಿ ಅಭಿನಯಿಸಿದ ರಾಜಕುಮಾರ, ಅಶೋಕಕುಮಾರ ಮುಂತಾದವರ ನಟನೆ ಅದ್ಭುತವಾದ ದೃಶ್ಯ ಸಂಯೋಜನೆ ಕಮಾಲ್ ಅಮ್ರೋಹಿಯ ಸತ್ವಪೂರ್ಣವಾದ ಚಿತ್ರಕಥೆ ಮತ್ತು ನಿರ್ದೇಶನ ಅದು ವಿಶಾಲ ಪರದೆಯನ್ನು ಆವರಿಸಿಕೊಳ್ಳುವ ಪರಿ ಚಿತ್ರವನ್ನು ಅಮರವಾಗಿಸಿದ್ದವು. ಮೀನಾಕುಮಾರಿ ಮನಃಪಟಲದ ಮುಂದೆ ಸುಳಿದು ಹೋದಳು. ನಮ್ಮ ನೆನಪುಗಳು ಎಷ್ಟು ಕ್ಷೀಣ..! ಒಂದು ಕಾಲದಲ್ಲಿ ಇಡೀ ಹಿಂದಿ ಚಿತ್ರರಂಗವನ್ನು ತನ್ನ ಅಭಿನಯ ಸಾಮಥ್ರ್ಯದಿಂದಲೆ ಆಳಿದ್ದ ಮೀನಾ ಕುಮಾರಿ ಇಂದು ನೆನಪಿನಂಗಳದಲ್ಲಿ ಮಸುಕು ಮಸುಕಾಗಿ ಕಾಣಿಸುತ್ತಿದ್ದಾಳೆ. ಆಕೆ ಗತಿಸಿ ಹೋಗಿ 43 ವರ್ಷಗಳಷ್ಟು ಧೀರ್ಘ ಕಾಲವೇ ಸಂದಿದೆ. ಬದುಕಿದ್ದಿದ್ದರೆ ಬರುವ ಅಗಸ್ಟ್ 1 ರಂದು 83 ನೇ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳುತ್ತಿದ್ದಳು. ಆಕೆಯ ಸಿನೆ ಬದುಕಿನ ಪಯಣ ಹೂವಿನ ಹಾಸಿಗೆಯಾಗಿರಲಿಲ್ಲ ಅದೊಂದು ಕಲ್ಲು ಮುಳ್ಳುಗಳಿಂದ ತುಂಬಿದ ಕಠಿಣ ಮಾರ್ಗವಾಗಿತ್ತು. ಒಂದೆಡೆ ಅವಳದು ಯಶಸ್ವಿ ಕಲಾ ಜಗತ್ತಿನ ಬದುಕು ಆಗಿದ್ದರೆ ಇನ್ನೊಂದೆಡೆಗೆ ಆಕೆಯ ಖಾಸಗಿ ಬದುಕು ಮೂರಾಬಟ್ಟೆಯಾಗಿತ್ತು. ಆಕೆ ಸಾಗಿ ಹೋದ ಬದುಕನ್ನು ನೆನೆಸಿ ಕೊಂಡರೆ ಕಣ್ಣಂಚಿನಲ್ಲಿ ಹನಿಗಳು ಕಾಣಿಸಿ ಕೊಳ್ಳುತ್ತವೆ ಹೃದಯ ಭಾರವಾಗುತ್ತದೆ.

     ಮೀನಾಕುಮಾರಿಯದು ಭಾರತೀಯ ಚಲನಚಿತ್ರರಂಗ ಅದರಲ್ಲಿಯೂ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ನಿಲ್ಲುವ ಹೆಸರು. ಆಕೆಯ ಜೀವನದ ಪುಟಗಳು ಅವಳ ಅಭಿನಯದ ಪಾತ್ರಗಳ ಬದುಕಿಗಿಂತ ಭಿನ್ನವಾಗೇನೂ ಇರಲಿಲ್ಲ. ಆಕೆ ಗತಿಸಿ ದಶಕಗಳೇ ಸಂದಿದ್ದರೂ ಆಕೆಯ ಜಮಾನಾದ ಸಿನೆ ಪ್ರಿಯರ ನೆನಪಿನಂಗಳದಿಂದ ದೂರವಾಗಿಲ್ಲ. ಅದು ಆಕೆಯ ಅಭಿನಯದ ಮಹತಿ ಮತ್ತು ಗೈರತ್ತುಗಳನ್ನು ತೋರುವಂತಹುದು. ಮೀನಾಕುಮಾರಿ ಇವಳ ಮೂಲ ಹೆಸರು ಅಲ್ಲ. ಅವಳ ನಿಜ ಜೀವನದ ಹೆಸರು ಮಹಜಬೀನ್ ಬಾನೋ ಎಂಬುದಾಗಿತ್ತು. ಈಕೆ 1932 ರ ಅಗಸ್ಟ್ 1 ರಂದು ಮುಂಬೈನಲ್ಲಿ ಜನಿಸಿದಳು. ಈಕೆಯ ತಂದೆ ಅಲಿಬಕ್ಷ ಮತ್ತು ತಾಯಿ ಇಕ್ಬಾಲ್ ಬೇಗಂ. ಇವರ ದಾಂಪತ್ಯದ ಮೂರನೆಯ ಹೆಣ್ಣು ಮಗುವೀಕೆ. ಈಕೆಯ ಇಬ್ಬರ ಅಕ್ಕಂದಿರ ಹೆಸರುಗಳು ಕ್ರಮವಾಗಿ ಖುರ್ಷಿದ್ ಮತ್ತು ಮಧು. ಈ ಮೂರನೆಯ ಮಗು ಮಹಜಬೀನ್ ಜನಿಸಿದಾಗ ಆಕೆಯ ತಾಯಿಯ ಹೆರಿಗೆ ಮಾಡಿಸಿದ ವೈದ್ಯ ಡಾ. ಗದ್ರೆಯವರಿಗೆ ಫೀಸ್ ಹಣ ಕೊಡದಷ್ಟು ಕಷ್ಟದ ಪರಿಸ್ಥಿತಿ ಅಲಿ ಬಕ್ಷನದಾಗಿತ್ತು. ಹೀಗಾಗಿ ಆತ ಆ ಮಗುವನ್ನು ಮುಸ್ಲಿಂ ಅನಾಥಾಲಯವೊಂದರಲ್ಲಿ ಬಿಟ್ಟು ಹೋದವನು ಕೆಲ ಸಮಯದ ನಂತರ ಮರಳಿ ಬಂದು ಮಗುವನ್ನು ತೆಗೆದುಕೋಂಡು ಹೋಗುತ್ತಾನೆ. ಶಿಯಾ ಮುಸ್ಲಿಂ ಆಗಿದ್ದ ಆತ ಪಾರ್ಸಿ ಥಿಯೇಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಹಾರ್ಮೋನಿಯಮ್ ನುಡಿಸುವುದರ ಜೊತೆಗೆ ಸಂಗೀತವನ್ನು ಸಹ ಕಲಿಸುತ್ತಿದ್ದ. ಅದೇ ರೀತಿ ಕವನಗಳನ್ನು ರಚಿಸುವ ಹವ್ಯಾಸ ಸಹ ಆತನಿಗಿತ್ತು. ಅಲ್ಲದೆ ‘ಈದ್ ಕಾ ಚಾಂದ್’ ಮುಂತಾದ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುವುದುರ ಜೊತೆಗೆ ‘ಶಾಹಿ ಲುಟೇರೆ’ ಮುಂತಾದ ಕೆಲ ಚಿತ್ರಗಳಿಗೆ ರಾಗ ಸಂಯೋಜನೆಯನ್ನು ಸಹ ಮಾಡಿದ್ದ. ಮೀನಾ ಕುಮಾರಿಯ ತಾಯಿ ಆಕೆಯ ತಂದೆಗೆ ಎರಡನೆ ಹೆಂಡತಿಯಾಗಿದ್ದಳು. ಅಲಿ ಬಕ್ಷನನ್ನು ಭೇಟಿಯಾಗುವ ಮತ್ತು ಮದುವೆಯಾಗುವ ಮುನ್ನ ಅಕೆ ರಂಗ ನಟಿ ಮತ್ತು ನೃತ್ಯಗಾತಿಯಾಗಿದ್ದಳು. ಈಕೆಯ ಮೊದಲ ಹೆಸರು ಕಾಮಿನಿ ಎಂದಾಗಿದ್ದು ಆಕೆ ಬಂಗಾಲದ ಟ್ಯಾಗೋರ್ ಕುಟುಂಬಕ್ಕೆ ಸಂಬಂಧಪಟ್ಟವಳೆಂಬ ಪ್ರತೀತಿಯಿತ್ತು.

     ಮಹಜಬೀನ್‍ಳ ಜನನದ ನಂತರ ಆಕೆಯ ತಂದೆ ಅಲಿಬಕ್ಷ ಮುಂಬೈನ ರೂಪತಾರಾ ಸ್ಟುಡಿಯೋದಲ್ಲಿ ತಯಾರಾಗುತ್ತಿದ್ದ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸ ತೊಡಗಿದ. ಕುಟುಂಬದ ದಯನೀಯ ಸ್ಥಿತಿಯ ಕಾರಣದಿಂದಾಗಿ ಮಹಜಬೀನ್‍ಳಿಗೆ ಬಾಲ ನಟಿಯಾಗಿ ಚಿತ್ರಗಳಲ್ಲಿ ನಟಿಸುವಂತೆ ಒತ್ತಡ ತರುತ್ತಾನೆ. ಆದರೆ ಆಕೆ ಎಲ್ಲ ಮಕ್ಕಳಂತೆ ತಾನೂ ಶಾಲೆಗೆ ಹೋಗಬೇಕು ಅವರಂತೆ ಕಲಿಯಬೇಕು ಎನ್ನುವ ಆಶಯವನ್ನು ಹೊಂದಿರುತ್ತಾಳೆ. ನಾನು ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ ಎಂದು ನೇರವಾಗಿ ಹೇಳುತ್ತಾಳೆ. ಆಕೆ ಶಾಲೆಯ ಮೆಟ್ಟಲು ತುಳಿಯದಿದ್ದರೂ  ಮುಂದೆ ಉರ್ದು ಕಲಿತು ಶಾಯರಿಗಳನ್ನು ರಚಿಸುವಷ್ಟರ ಮಟ್ಟಿಗೆ ಆ ಭಾಷೆಯ ಮೇಲೆ ಪ್ರಭುತ್ವ ಪಡೆಯುತ್ತಾಳೆ. ಆದರೆ ಆಕೆಯ ಆಶಯ ಫಲಿಸದೆ ತನ್ನ ಏಳನೆಯ ವಯಸ್ಸಿಗೇನೆ ಅಭಿನಯದ ಬದುಕಿಫರ್ಜಂಗೆ ಮುನ್ನುಡಿ ಬರೆಯುತ್ತಾಳೆ. ಚಿತ್ರರಂಗಕ್ಕೆ ಬರುತ್ತಿದ್ದಂತೆ ಆಕೆಯ ಹೆಸರು ಬೇಬಿ ಮೀನಾ ಎಂದಾಗುತ್ತದೆ. 1939 ರಲ್ಲಿ ‘ಫರ್ಝಂದ್ ಏ ವತನ್’ ಚಿತ್ರದಿಂದ ತನ್ನ ಹಿಂದಿ ಚಿತ್ರರಂಗದ ಬದುಕನ್ನು ಪ್ರಾರಂಭಿಸುತ್ತಾಳೆ. ಇದು ನಿರ್ದೇಶಕ ವಿಜಯ ಭಟ್ ಪ್ರಕಾಶ ಸ್ಟುಡಿಯೋದವರಿಗಾಗಿ ತಯಾರಿಸಿದ ಚಿತ್ರವಾಗಿರುತ್ತದೆ. ಆಕೆ ತನ್ನ ಕುಟುಂಬದ ನಿರ್ವಹಣೆಯ ಮೂಲ ವ್ಯಕ್ತಿಯಾದ ಕಾರಣ ಆಕೆ ಅಭಿನಯಿಸುವುದು ಅನಿವಾರ್ಯವಾಗಿರುತ್ತದೆ. ಮುಂದೆ ಆಕೆ ಪೌರಾಣಿಕ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಲು ಪ್ರಾರಂಭಿಸುತ್ತಾಳೆ. 1949 ರಲ್ಲಿ ‘ವೀರ ಘಟೋದ್ಗಜ’ ಚಿತ್ರದ ನಾಯಕಿಯಾಗುವುದರ ಮೂಲಕ ಚಿತ್ರರಂಗದಲ್ಲಿ ತನ್ನ ಬದುಕನ್ನು ಮುಂದುವರಿಸುತ್ತಾಳೆ. 1950 ರಲ್ಲಿ ‘ಗಣೇಶ ಮಹಿಮಾ’ ಮತ್ತು 1952 ರಲ್ಲಿ ಫ್ಯಾಂಟಸಿ ಮೂವ್ಹಿ ‘ಅಲ್ಲಾವುದ್ದೀನ್ ಔರ್ ಜಾದೂಯಿ ಚಿರಾಗ್’ಗಳಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಆಕೆಯ ನಟನಾ ಬದುಕಿನ ಪ್ರಮುಖ ಘಟ್ಟ ಪ್ರಾರಂಭವಾಗುತ್ತದೆ. ಆದರೆ ನಾಯಕಿಯಾಗಿ ಅಭಿನಯಿಸಿದ ಆಕೆಗೆ ಹೆಸರು ತಂದು ಕೊಟ್ಟ ಚಿತ್ರ 1952 ರಲ್ಲಿ ತಯಾರಾದ ‘ಬೈಜುಬಾವ್ರಾ’. ಇದರಲ್ಲಿ ಆ ಕಾಲದ ಖ್ಯಾತ ನಟ ಭರತ ಭೂಷಣ್ ನಾಯಕನ ಪ್ರಧಾನ ಭೂಮಿಕೆ ಯಲ್ಲಿದ್ದ. ಅವರಿಬ್ಬರ ಸತ್ವಪೂರ್ಣ ಅಭಿನಯದ ಜೊತೆಗೆ ನೌಶಾದರ ಮನಸೂರೆಗೊಳುವ ಸಂಗೀತ ನೋಡುಗರ ಮೇಲೆ ಮೋಡಿ ಮಾಡಿದವು. ಈ ಚಿತ್ರದ ಅಭಿನಯಕ್ಕಾಗಿ ಆಕೆಗೆ ಆ ವರ್ಷದ ಅತ್ಯತ್ತಮ ನಾಯಕಿ ನಟಿಯೆಂದು ಫಿಲಂ ಫೇರ್ ಪ್ರಶಸ್ತಿಯನ್ನು ಪಡೆದಳು.

     ಅವಳು ಬದುಕಿದ್ದು ಕೇವಲ 39 ವರ್ಷಗಳಾಗಿದ್ದರೂ ಆಕೆಯ ಸಿನೆಮಾ ಬದುಕು ಬಹು ಮಹತ್ತರವಾದುದು. ತನ್ನ ಬಾಲ್ಯದಲ್ಲಿಯೆ ಅಭಿನಯ ಬದುಕು ಪ್ರಾರಂಭಿಸಿದ ಆಕೆ ಸತತ 33 ವರ್ಷಗಳ ಕಾಲದ ಆಕೆಯ ನಟನಾ ಬದುಕು ಬಹಳ ಸಂಘರ್ಷಪೂರ್ಣವಾದುದು. ನಟನಾ ವೃತ್ತಿಯಲ್ಲಿದ್ದರೂ ನಟನೆಯ ಜೊತೆಗೆ ಸೂಕ್ಷ್ಮ ಸಂವೇದನೆಯ ಆಕೆ ಕವಿಯಿತ್ರಿ ಸಹ ಆಗಿದ್ದಳು. ಭಾರತೀಯ ಸಿನೆಮಾದ ಅದ್ಭುತ ನಟಿಯರ ಪೈಕಿ ಅಗ್ರಸ್ಥಾನದಲ್ಲಿ ನಿಲ್ಲುವಂತಹವಳು ಆಕೆ. ಬಾಲ್ಯದಲ್ಲಿ ತಂದೆಯ ಒತ್ತಾಯಕ್ಕೆ ಮಣಿದು ಕುಟುಂಬದ ನಿರ್ವಹಣೆಯ ಕಾರಣದಿಂದಾಗಿ ಪ್ರಾರಂಭವಾದ ಆಕೆಯ ನಟನಾ ಬದುಕಿನಲ್ಲಿ ಆಕೆ ಅಭಿನಯಿಸಿದ್ದು 90 ಚಿತ್ರಗಳಿಗೂ ಮಿಗಿಲಾಗಿ ಎನ್ನುವುದು ಬಹು ಮುಖ್ಯ. ಅವುಗಳಲ್ಲಿ ಅನೇಕವು ಇಂದಿಗೂ  ಕ್ಲಾಸಿಕ್ ಎನಿಸಿಕೊಳ್ಳುತ್ತವೆ. ಒಳಗೊಳಗೆ ನೋವನ್ನು ನುಂಗಿಕೊಂಡು ಹೊರಗೆ ನಗೆ ಬೀರುವ ದುರಂತ ಪಾತ್ರಗಳಲ್ಲಿ ಅವಳದು ಅದ್ವಿತೀಯ ಅಭಿನಯ. ಮೀನಾ ಕುಮಾರಿಯ ಕಷ್ಟ ಸಹಿಷ್ಣು ಪಾತ್ರಗಳ ಅಭಿನಯದ ಪರಿಣೀತಾ, ದಯೇರಾ(1953), ಏಕ್ ಹಿ ರಾಸ್ತಾ(1956), ಶಾರದಾ(1957), ದಿಲ್ ಅಪನಾ ಔರ್ ಪ್ರೀತ್ ಪರಾಯಿ(1960) ಆ ಚಿತ್ರಗಳಲ್ಲಿನ ಆಕೆಯ ಅಭಿನಯ ಬದುಕಿನ ಸಾರ್ವಕಾಲಿಕ ಎನ್ನುವಂತಹದು. ಆಕೆ ಶ್ರೇಷ್ಟ ದುರಂತ ನಾಯಕಿ ಎಂದು ಹೆಸರು ಪಡೆದಿದ್ದರೂ ತಾನು ರೊಮ್ಯಾಂಟಿಕ್ ಪಾತ್ರಗಳಲ್ಲಿ ಸಹ ಶ್ರೇಷ್ಟ ಅಭಿನಯ ನೀಡಬಲ್ಲೆನೆಂಬುದನ್ನು ತೋರಿಸಿ ಕೊಟ್ಟ ಚಿತ್ರಗಳು ಆಜಾದ(1955), ಮಿಸ್ ಮೇರಿ(1957), ಶರಾರತ್ ಮತ್ತು ಕೊಹಿನೂರ(1959)  ಚಿತ್ರಗಳಲ್ಲಿ ಅಭಿನಯಿಸಿ ಎಲ್ಲ ವರ್ಗದ ಪ್ರೇಕ್ಷಕರ ಮನ ಸೆಳೆದಳು.

     ಆಕೆ ತನ್ನ ಚಿತ್ರ ಜೀವನದಲ್ಲಿಯೆ ಅತ್ಯುನ್ನತವೆನ್ನಬಹುದಾದ ಅಭಿನಯ ನೀಡಿದ್ದು ಗುರುದತ್ ನಿರ್ಮಾಣ ಸಂಸ್ಥೆಯ ಮತ್ತು ನಟನೆಯ ಚಿತ್ರ 1962 ರಲ್ಲಿ ತಯಾರಿಸಲ್ಪಟ್ಟ ‘ಸಾಹಿಬೀಬಿ ಔರ್ ಗುಲಾಮ್’. ಅದರಲ್ಲಿ ಆಕೆ ನಿರ್ವಹಿಸಿದ ಛೋಟಿಬಹು ಪಾತ್ರ ವಿಮರ್ಶಾ ವಲಯದ ಮೆಚ್ಚುಗೆ ಪಡೆದುದು ಅಲ್ಲದೆ ಗಲ್ಲಾ ಪೆಟ್ಟಿಗೆಯಲ್ಲಿಯೂ ಯಶಸ್ವಿ ಚಿತ್ರವೆನಿಸಿತು. ಇದು ಆಕೆಯ ನೈಜ ಬದುಕಿಗೆ ಹತ್ತಿರವಾದ ಚಿತ್ರವಾಗಿದ್ದಿತು ಎನ್ನುವ ಕಾರಣವಿರಬಹುದು ಎನ್ನುವುದು ಆಕೆಯ ಅಭಿಮಾನಿಗಳ ಅಭಿಪ್ರಾಯವಾಗಿತ್ತು.  ಈ ಸಂಧರ್ಭದಲ್ಲಿ ಆಕೆಯ ವೈಯಕ್ತಿಕ ಬದುಕು ಘಾಸಿ ಗೊಂಡಿದ್ದುದೂ ನಿಜ. ಚಿತ್ರದ ಆ ಪಾತ್ರದಂತೆ ಈಕೆಯೂ ಕುಡಿತದ ದಾಸಳಾದಳು. ಆ ವರ್ಷ ಆಕೆಯ ಅಭಿನಯದ ಮೈ ಚುಪ್ ರಹೂಂಗಿ, ಆರತಿ ಮತ್ತು ಸಾಹಿಬೀಬಿ ಔರ್ ಗುಲಾಮ್ ಚಿತ್ರಗಳು ಫಿಲಂ ಫೇರ್ ಅತ್ಯುತ್ತಮ ನಾಯಕಿ ನಟಿ ಪ್ರಶಸ್ತಿಗೆ ಹೆಸರಿಸಲ್ಪಟ್ಟವು. ಆ ಪೈಕಿ ಸಾಹಿಬೀಬಿ ಔರ್ ಗುಲಾಮ್ ಚಿತ್ರ ಪ್ರಶಸ್ತಿಯನ್ನು ಪಡೆಯಿತು, ಮುಂದೆ ಸಹ ಸುಮಾರು ನಾಲ್ಕು ವರ್ಷಗಳ ಕಾಲ ಆಕೆ ಅನೇಕ ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದಳು. ಆಪೈಕಿ ದಿಲ್ ಏಕ್ ಮಂದಿರ್(1963), ಕಾಜಲ್ (1965), ಫೂಲ್ ಔರ್ ಪತ್ಥರ್(1966). ಈ ಎಲ್ಲ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಆಕೆಯ ಹೆಸರು ಫಿಲಂ ಫೇರ್ ಪ್ರಶಸ್ತಿಗೆ ಹೆಸರಿಸಲ್ಪಟ್ಟಿತು. ಕ್ರಮೇಣ ಫೂಲ್ ಔರ್ ಪತ್ಥರ್ ಚಿತ್ರದ ಯಶಸ್ಸಿನ ನಂತರ ಆಕೆ ಧರ್ಮೇಂದ್ರನ ಜೊತೆ ‘ಚಂದನ್ ಕಾ ಪಲನಾ’ ಮತ್ತು ‘ಮಝಲೀ ದೀದಿ’ ಚಿತ್ರಗಳಲ್ಲಿ ನಟಿಸುತ್ತಾಳೆ. ಆದರೆ ಆಕೆಯ ಹಿಂದಿನ ನಟನಾ ಸ್ಪರ್ಶ ಮಾಯವಾಗಿರುತ್ತದೆ.  ಆಕೆಯ ದಾಂಪತ್ಯದಲ್ಲಿನ ಬಿರುಕಿನಿಂದಾಗಿ ವಿಪರೀತವೆನ್ನಿಸುವಷ್ಟು ಮಧ್ಯ ವ್ಯಸನಿಯಾಗಿ ಬಿಡುತ್ತಾಳೆ. ಆ ಕಾರಣವಾಗಿ ಆಕೆಯ ಯಕೃತ್ತಿಗೆ ವಿಪರೀತ ಹಾನಿಯನ್ನುಂಟು ಮಾಡಿಬಿಟ್ಟಿರುತ್ತದೆ. ಈ ವ್ಯಸನದ ಕಾರಣದಿಂದಾಗಿ ಆಕೆಯ ಅಕ್ಕ ಮಧು ಮೀನಾಳಿಂದ ಮುನಿಸಿ ಕೊಂಡಿರುತ್ತಾಳೆ. ಅನಾರೋಗ್ಯದ ಗಹನತೆಯನ್ನು ತಿಳಿದ ಆಕೆ ಪುನಃ ತನ್ನ ತಂಗಿಯ ನೆರವಿಗೆ ಬರುತ್ತಾಳೆ. ಆಕೆಯನ್ನು ಚಿಕಿತ್ಸೆಗಾಗಿ ಲಂಡನ್ ಮತ್ತು ಸ್ವಿಜರ್‍ಲ್ಯಾಂದಡ್‍ಗೆ ಕರೆದೊಯ್ಯಲಾಗುತ್ತದೆ. ಆಕೆಯ ಚರಿಷ್ಮಾ ಮುಗಿಯುತ್ತ ಬಂದಿದ್ದು ಸಾವಿನ ಮನೆಗೆ ತೀರ ಹತ್ತಿರವಾಗುತ್ತ ಸಾಗುತ್ತಾಳೆ. ಮುಂದೆ ‘ಜವಾಬ್’ ಮತ್ತು ‘ದುಶ್ಮನ್’ ಚಿತ್ರಗಳಲ್ಲಿ ಚಾರಿತ್ರಿಕ ಪಾತ್ರಗಳಲ್ಲಿ ಅಭಿನಯಿಸುತ್ತಾಳೆ. ಆಕೆಯ ಅಭಿನಯದ ಬದುಕಿನ ಇಳಿದಿನಗಳಲ್ಲಿ ಸಹೃದಯಿ ಕವಿ ಗುಲ್ಜಾರರ ಪರಿಚಯ ಆತ್ಮೀಯತೆಗೆ ತಿರುಗಿ ಮಾನಸಿಕವಾಗಿ ಅವರಿಗೆ ಹತ್ತಿರವಾಗುತ್ತಾಳೆ

     ಆಕೆಯ ವೈಯಕ್ತಿಕ ಬದುಕಿನ ದೊಡ್ಡ ದುರಂತವೆಂದರೆ  ಆಕೆ ತನಗಿಂತ ಹದಿನೈದು ವರ್ಷ ದೊಡ್ಡವನಾದ ಹಿಂದಿಯ ಚಲನಚಿತ್ರ ನಿರ್ಮಾಪಕ ನಿರ್ದೇಶಕ ಮತ್ತು ಲೇಖಕ ಕಮಾಲ್ ಅಮ್ರೋಹಿಯನ್ನು ಮದುವೆಯಾದುದು. 1952 ರಲ್ಲಿ ಚಿತ್ರದ ಸೆಟ್ಟೊಂದರಲ್ಲಿ ಆತನನ್ನು ಕಂಡ ಆಕೆ ಮೆಚ್ಚಿಕೊಳ್ಳುತ್ತಾಳೆ. ಮೊದಲೆ ವಿವಾಹಿತನಾಗಿದ್ದ ಆತನನ್ನು ಮೆಚ್ಚಿದ್ದು ತನ್ನ ಬದುಕಿಗೆ ಮುಂದೆ ಮುಳುವಾಗಬಹುದು ಎನ್ನುವ ಪರಿಕಲ್ಪನೆ ಆಕೆಗೆ ಆ ಕ್ಷಣಕ್ಕೆ ಹೊಳೆಯದಿದ್ದುದು ಆಕೆಯ ಬದುಕಿನ ದೊಡ್ಡ ವಿಪರ್ಯಾಸ ಎನ್ನವುದು ವಿಷಯ ಆಕೆಯನ್ನು ಜೀವನದುದ್ದಕ್ಕೂ ಕಾಡಿತು. ಮುಂದೆ 1953 ರಲ್ಲಿ ಆತ ‘ದಯೇರಾ’ ಎನ್ನುವ ಚಿತ್ರವೊಂದನ್ನು ತಯಾರಿಸುತ್ತಾನೆ ಅದರ ನಾಯಕಿ ಮೀನಾಕುಮಾರಿಯೆ ಆಗಿದ್ದಳು ಎನ್ನುವದನ್ನು ಹೇಳುವುದೆ ಬೇಡ. ಕಮಾಲ್ ಅಮ್ರೋಹಿ ಮತ್ತು ಮೀನಾ ಕುಮಾರಿ ಮಧ್ಯೆ ವಿರಸ ಬರಲು ಪ್ರಮುಖ ಕಾರಣ ಮೀನಾಳ ಮಕ್ಕಳ ಬಗೆಗಿನ ಪ್ರೀತಿ. ಆಕೆ ತಮ್ಮದೆ ಮಕ್ಕಳನ್ನು ಹೊಂದುವ ಆಶಯನ್ನು ಹೊಂದಿರುತ್ತಾಳೆ. ಆದರೆ ಆಕೆ ಸಯ್ಯದ್ ಪಂಗಡಕ್ಕೆ ಸೇರಿದವಳು ಎನ್ನುವ ಕಾರಣಕ್ಕೆ ಆಕೆಯ ಕೋರಿಕೆಯನ್ನು ಅಮ್ರೋಹಿ ತಿರಸ್ಕರಿಸುತ್ತಾನೆ. ಆದರೆ ಅಮ್ರೋಹಿಯ ಮೊದಲ ಹೆಂಡತಿಯ ಮಗ ತಾಜ್‍ದಾರ್ ತನ್ನ ಚಿಕ್ಕಮ್ಮ ಮೀನಾಳನ್ನು ಬಹಳ ಹಚ್ಚಿಕೊಂಡಿರುತ್ತಾನೆ. ಇಬ್ಬರೂ ಪ್ರಭಾವಶಾಲಿ ವ್ಯಕ್ತಿತ್ವದವರೆ ಅವರ ನಡುವಿನ ಭಿನ್ನಾಭಿಪ್ರಾಯಗಳು ಬೆಳೆಯುತ್ತ ಹೋಗಿ ಅವರ ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ವಿರುದ್ಧ ದಿಕ್ಕಿನಲ್ಲಿ ಬಹುದೂರ ಸಾಗಿ ಹೋಗಿರುತ್ತಾರೆ. 1960 ರಲ್ಲಿ ಮಾನಸಿಕವಾಗಿ ದೂರವಾಗುತ್ತ ಸಾಗಿದ ಅವರು ಕೊನೆಗೆ 1964 ರಲ್ಲಿ ವಿಚ್ಛೇದನ ಪಡೆಯುತ್ತಾರೆ. ಇದು ಆಕೆಯ ಮೇಲೆ ಬಹು ಗಂಭೀರವಾದ ಪರಿಣಾಮವನ್ನು ಮಾಡುತ್ತ ಹೋಗುತ್ತದೆ. ಜೀವನದಲ್ಲಿ ಬರಿ ಸಂತಸವನ್ನೆ ತುಂಬಿಕೊಂಡಿದ್ದ ಆಕೆ ಬಹಳ ಖಿನ್ನಳಾಗುತ್ತ ಸಾಗುತ್ತಾಳೆ. ಈ ಏಕಾಂಗಿತಸನದಿಂದ ತಪ್ಪಿಸಿಕೊಳ್ಳಲು ಆಕೆ ಕುಡಿತದ ಮೊರೆ ಹೋಗುತ್ತಾಳೆ. ಮತ್ತೆ ಅವರುಗಳು ಮರು ಮದುವೆಯಾದರು ಎಂಬ ಸುದ್ದಿ ಇತ್ತು. ಆಗಿನಿಂದ ಆಕೆ ಮಧ್ಯ ವ್ಯಸನಿಯಾಗಿ ಪರಿವರ್ತನೆ ಹೊಂದುತ್ತಾಳೆ.

     1956ರಲ್ಲಿ ಅಮ್ರೋಹಿಯಲ್ಲಿ ಚಿತ್ರಕಥೆಯೊಂದು ಮೊಳೆತಿರುತ್ತದೆ. 1958ರಲ್ಲಿ ತನ್ನ  ತಾರಾ ಪತ್ನಿ ಮೀನಾಕುಮಾರಿ ರಾಜಕುಮಾರ ಮತ್ತು ಅಶೋಕಕುಮಾರ ಮುಂತಾದವರ ತಾರಾಗಣದಲ್ಲಿ ಚಿತ್ರತಯಾರಿಕೆಗೆ ಪ್ರಾರಂಭವಾಗುತ್ತದೆ. ಖ್ಯಾತ ಸಂಗೀತ ನಿರ್ದೇಶಕ ಗುಲಾಮ ಹೈದರ್ ಆ ಚಿತ್ರದ ಹಾಡುಗಳಿಗೆ ರಾಗ ಸಂಯೋಜನೆ ಮಾಡಿರುತ್ತಾರೆ. ಆ ಚಿತ್ರದ ಅರ್ಧದಷ್ಟು ಚಿತ್ರೀಕರಣ ಸುಮಾರು 8 ರೀಲುಗಳಷ್ಟು ಮುಗಿದಿರುತ್ತದೆ. ಆಗ ಅವರಿಬ್ಬರ ಸಾಂಸಾರಿಕ ಬದುಕಿನಲ್ಲಿ ಬಿರುಕು ಕಾಣಿಸಿಕೊಂಡು ಪರಸ್ಪರ ದೂರವಾಗುತ್ತಾರೆ. ಹೀಗಾಗಿ ಆ ಚಿತ್ರದ ಚಿತ್ರೀಕರಣ ನಿಂತು ಹೋಗುತ್ತದೆ. ಚಿತ್ರೀಕರಣಗೊಂಡ  ಚಿತ್ರದ ರಷಸ್ಯಗಳನ್ನು ನೋಡಿದ ನರ್ಗಿಸ್ ಮತ್ತು ಸುನಿಲದತ್ ಅವರಿಬ್ಬರ ನಡುವೆ ಸಂಧಾನವನ್ನೇರ್ಪಡಿಸುವಲ್ಲಿ ಯಶಸ್ವಿಗಳಾಗಿ ಆ ಚಿತ್ರ 1966 ರಲ್ಲಿ ಚಿತ್ರೀಕರಣ ಮರು ಪ್ರಾರಂಭವಾಗುತ್ತದೆ. ಅಷ್ಟರಲ್ಲಾಗಲೆ ಆ ಚಿತ್ರದ ಸಂಗೀತ ನಿರ್ದೇಶಕ ಗುಲಾಮ ಹೈದರ ತೀರಿ ಕೊಂಡಿರುತ್ತಾರೆ. ಅವರ ಜಾಗಕ್ಕೆ ಸಂಗೀತ ನಿರ್ದೇಶಕ ನೌಶಾದ ಬರುತ್ತಾರೆ. ಗುಲಾಮ ಹೈದರ್ ರಾಗ ಸಂಯೋಜಿಸಿರುವ ಹಾಡುಗಳನ್ನು ಹಾಗೆಯೆ ಉಳಿಸಿಕೊಂಡು ಆ ಚಿತ್ರಕ್ಕೆ ಹಿನ್ನೆಲೆ ಸಂಗೀತ ಸಂಯೋಜನೆಯನ್ನು ಮಾತ್ರ ಅವರು ಮಾಡುತ್ತಾರೆ. ಆರ್ಥಿಕ ತೊಂದರೆಗಳಿಂದಾಗಿ ಅದರ ಚಿತ್ರೀಕರಣ ತೆವಳುತ್ತ ಕುಂಟುತ್ತ ಸಾಗಿ ಕೊನೆಗೆ 1972 ರಲ್ಲಿ ಆ ಚಿತ್ರ ತೆರೆಗೆ ಬರುತ್ತದೆ. ಬಹಳ ದಿನಗಳ ಅಂತರದ ನಂತರ ಪ್ರದರ್ಶನಕ್ಕೆ ಬಂದ ಚಿತ್ರ ಥಿಯೆಟರ್‍ಗಳಲ್ಲಿ ಸಾಧಾರಣವಾಗಿ ಓಡುತ್ತಿರುತ್ತದೆ. ಇದೇ ಅವಧಿಯಲ್ಲಿ ಗುಲ್ಜಾರರ ನಿರ್ದೇಶನದ 1971 ರ ಕೊನೆಯ ಭಾಗದಲ್ಲಿ ಕೇವಲ 40 ದಿನಗಳಲ್ಲಿ ಚಿತ್ರೀಕರಣಗೊಂಡ ‘ಮೇರೆ ಅಪನೆ’ ಚಿತ್ರದಲ್ಲಿ ಅಭಿನಯಿಸುತ್ತಾಳೆ. ಈ ಚಿತ್ರ ಸಹ 1972 ರಲ್ಲಿ ಇದೇ ಸಮಯದಲ್ಲಿ ಬಿಡುಗಡೆ ಯಾಗುತ್ತದೆ.  ಮುಂದೆ ಎರಡು ತಿಂಗಳುಗಳಲ್ಲಿಯೆ ಈಕೆ ವಿಧಿ ವಶಳಾದದ್ದು ಒಂದು ದುರಂತ.  ಆಕೆಯ ಸಾವು ಫಾಕೀಜಾ ಚಿತ್ರಕ್ಕೆ ಅಭೂತ ಪೂರ್ವ ಯಶಸ್ಸನ್ನು ತಂದು ಕೋಡುತ್ತದೆ. ಆಕೆಯ ಮಧ್ಯ ವ್ಯಸನ ಆಕೆಯನ್ನು ಬದುಕಿನ ಕೊನೆಯ ಘಟ್ಟದಲ್ಲಿ ತಂದು ನಿಲ್ಲಿಸಿರುತ್ತದೆ. ಲಿವರ್ ಸಿರೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದ ಆಕೆಯನ್ನು ಚಿಕಿತ್ಸೆಗಾಗಿ ಮುಂಬೈನ ನರ್ಸಿಂಗ್ ಹೋಮ್ ಒಂದಕ್ಕೆ ಸೇರಿಸಲಾಗುತ್ತದೆ. ಆಕೆ ತನ್ನ ಕೊನೆಯ ದಿನಗಳಲ್ಲಿ ಎಷ್ಟು ದಯನೀಯ ಸ್ಥಿತಿಯಲ್ಲಿ ಇದ್ದಳೆಂದರೆ ಆಸ್ಪತ್ರೆಯ ಬಿಲ್ ಭರಿಸಲು ಸಹ ಆಕೆಯಲ್ಲಿ ಹಣವಿರಲಿಲ್ಲ. ಕೊನೆಗೆ ಆಕೆಯನ್ನು ಮುಂಬೈನ ಮಝಗಾಂವ್‍ನ ನರಿಯಲ್‍ವಾಡಿಬಾಗ್‍ನ ರಹಮತ್‍ದಾರ್ ಸ್ಮಶಾನದಲ್ಲಿ ದಫನ್ ಮಾಡಲಾಗುತ್ತದೆ.

     ಆಕೆ ಪರಿಣೀತಾ(1953), ಬೈಜು ಬಾವ್ರಾ(1954), ಸಾಹಿಬೀಬಿ ಔರ್ ಗುಲಾಮ್(1963) ಮತ್ತು 1965 ರಲ್ಲಿ ಕಾಜಲ್ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಅತ್ಯುತ್ಮಮ ನಾಯಕಿ ನಟಿಗಾಗಿ ಕೊಡ ಮಾಡುವ ಫಿಲಂ ಫೇರ್ ಪ್ರಶಸ್ತಿ ಪಡೆಯುತ್ತಾಳೆ. ಅಲ್ಲದೆ ಪತ್ಥರ್ 1956 ರಲ್ಲಿ ಆಜಾದ್, 1957 ರಲ್ಲಿ ಸಹಾರಾ, 1959 ರಲ್ಲಿ ಚಿರಾಗ ಕಹಾಂ ರೋಶನಿಕಹಾಂ, 1963 ರಲ್ಲಿ ಆರತಿ ಮತ್ತು ಮೈ ಚುಪ್ ರಹೂಂಗಿ, 1964 ರಲ್ಲಿ ದಿಲ್ ಏಕ್ ಮಂದಿರ್, 1967ನ ರಲ್ಲಿ ಫೂಲ್ ಔರ್ ಪತ್ತರ್ಮತ್ತು 1973 ರಲ್ಲಿ ಫಾಕೀಜಾ (ಮರಣೋತ್ತರ) ಚಿತ್ರಗಳಲ್ಲಿನ ನಾಯಕಿ ಪಾತ್ರದ ಅಭಿನಯಕ್ಕಾಗಿ ಫಿಲಂ ಫೇರ್ ಪ್ರಶಸ್ತಿಗೆ ನಾಮಕರಣಗೊಂಡದ್ದು ಆಕೆಯ ಅಭಿನಯದ ಪ್ರಬುದ್ಧತೆಗೆ ಹಿಡಿದ ಕನ್ನಡಿ ಎನ್ನಬಹುದು. ಆಕೆಯ ಬದುಕನ್ನು ಕುರಿತು 1972 ರಲ್ಲಿ ವಿನೋದ ಮೆಹ್ತಾ ‘ಮೀನಾಕುಮಾರಿ ಏ ಕ್ಲಾಸಿಕಲ್ ಬಯೋಗ್ರಫಿ’ ಎನ್ನುವ ಪುಸ್ತಕ ಬರೆದಿದ್ದಾರೆ. ಆಕೆಯ ಜೀವನವನ್ನಾಧರಿಸಿದ ಚಿತ್ರವೊಂದನ್ನು ಕಮಾಲ್ ಅಮ್ರೋಹಿಯ ಮಗ ತಾಜದಾರ್ ಅಮ್ರೋಹಿ ತಯಾರಿಸಲಿದ್ದು ಆ ಚಿತ್ರದಲ್ಲಿ ಮೀನಾ ಕುಮಾರಿಯ ಪಾತ್ರವನ್ನು ಮನಿಷಾ ಕೊಯಿರಾಲಾ ವಹಿಸಲಿದ್ದಾಳೆ ಮತ್ತು ಆ ಚಿತ್ರವನ್ನು ಶಶಿಲ್ ಕೆ ನಾಯರ್ ನಿರ್ದೇಶಿಸಲಿದ್ದಾನೆ  ಆ ಚಿತ್ರ 2014 ರ ಅಗಸ್ಟ್‍ನಲ್ಲಿ ಸೆಟ್ಟೇರಿದ ಬಗ್ಗೆ ಓದಿದಂತೆ ನೆನಪು. ಆ ಚಿತ್ರ ಬರಲಿ ಬಿಡಲಿ ಮೀನಾ ಕುಮಾರಿ ಎಂದಿಗೂ ಯಾವ ಕಾಲಕ್ಕೂ ಮರೆತು ಬಿಡುವಂತಹ ನಟಿಯಾಗಿರಲಿಲ್ಲ ಅದು ಆಕೆಯ ಅಭಿನಯ ಪಕ್ವತೆಯ ಸಂಕೇತ. ಮೀನಾ ನೀನು ಅಭಿಮಾನಿಗಳ ಮನದಲ್ಲಿ ಅಜರಾಮರ.

 

   ಚಿತ್ರಕೃಪೆ; ಅಂತರ್ಜಾಲ

Rating
No votes yet

Comments

Submitted by nageshamysore Fri, 07/31/2015 - 22:13

ಪಾಟೀಲರೆ ನಮಸ್ಕಾರ. ಮೀನಾಕುಮಾರಿಯ ಆ ಪೀಳಿಗೆಯ ನಂತರದವರಾದ ನನ್ನಂತಹವರಿಗೆ ಮೀನಾಕುಮಾರಿಯ ಹೆಸರು ಮತ್ತು ಗಾಳಿಸುದ್ಧಿಗಳ ಅಷ್ಟಿಷ್ಟು ಕಂತೆ ಬಿಟ್ಟರೆ ಮತ್ತೇನು ಗೊತ್ತಿರಲಿಲ್ಲ. ಆದರೆ ನಿಮ್ಮ ವಿಸ್ತೃತ, ಸಮಗ್ರ ಬರಹ ಅವಳ ಇಡಿ ಬದುಕನ್ನು ಅದ್ಭುತವಾಗಿ ಕಟ್ಟಿಕೊಟ್ಟು ಆ ಕೊರತೆಯನ್ನು ನೀಗಿಸಿದೆ. ಹುಟ್ಟುಹಬ್ಬದ ಹೊತ್ತಿನ ಸಕಾಲಿಕ ಬರಹಕ್ಕಾಗಿ ಅಭಿನಂದನೆಗಳು ಮತ್ತು ಧನ್ಯವಾದಗಳು.

Submitted by H A Patil Sat, 08/01/2015 - 20:22

In reply to by nageshamysore

ನಾಗೇಶ ಮೈಸೂರುರವರಿಗೆ ವಂದನೆಗಳು
ಮೀನಾ ಕುಮಾರಿಯ ವೈಯಕ್ತಿಕ ಬದುಕು ಏನೆ ಆಗಿದ್ದಿರಲಿ ಆದರೆ ಅವಳೊಬ್ಬ ಅದ್ಭುತ ನಟಿಯಾಗಿದ್ದಳು ಭಾರತೀಯ ಚಲನಚಿತ್ರರಂಗದಲ್ಲಿ ಯಾವ ಕಾಲಕ್ಕೂ ಪರಿಗಣಿಸಲ್ಪಡಬಹುದಾದ ನಟಿ ಅವಳು, ಅವಳ ಬಗೆಗೆ ದಾಖಲಿಲಸಬೇಕೆಂದು ಬಹಳ ದಿನಗಳಿಂದ ಅಂದು ಕೊಂಡಿದ್ದೆ ಅಗಸ್ಟ್‌ 1 ಅಕೆಯ ಜನ್ಮದಿನ ಹೀಗಾಗಿ ಈ ಲೇಖನ, ಸಕಾಲಿಕ ಮತ್ತು ಸಾಂಧರ್ಭಿಕವಲ್ಲದ ಲೇಖನವನ್ನು ಸಹ ಓದಿ ಪ್ರತಿಕ್ರಿಯಿಸಿದ್ದೀರಿ ದನ್ಯವಾದಗಳು.

Submitted by Nagaraj Bhadra Sun, 08/02/2015 - 00:01

ಪಾಟೀಲ ಸರ್ ಅವರಿಗೆ ನಮಸ್ಕಾರಗಳು. ಮೀನಾ ಕುಮಾರಿ ಅವರ ಬಗ್ಗೆ ನಾನು ಮಾಧ್ಯಮಗಳಲ್ಲಿ ಸ್ವಲ್ಪ ಕೇಳಿದೆ.ಆದರೆ ನಿಮ್ಮ ಲೇಖನದಿಂದ ಅವರ ಬದುಕಿನ ಬಗ್ಗೆ ಸಂಪೂರ್ಣ ತಿಳಿದುಕೊಂಡಾಯಿತ್ತು.ಉತ್ತಮ ಲೇಖನ ವಂದನೆಗಳು ಸರ್.

Submitted by lpitnal Sun, 08/02/2015 - 12:42

ಹನುಮಂತ ಅನಂತ ಪಾಟೀಲ ಸರ್, ವಂದನೆಗಳು. ಮೀನಾಕುಮಾರಿಯ ಬದುಕಿನ ಸಮಗ್ರ ಬರಹ, ತುಂಬ ಅರ್ಥಗರ್ಭಿತವಾಗಿ, ಅವಳ ಬದುಕಿನ ಒಳಹೊರ ಮಜಲು, ಕಾಲಘಟ್ಟಗಳೊಂದಿಗೆ ಯಥಾರೀತಿ ಚಿತ್ರಣ ನಮಗೆಲ್ಲ ಕಟ್ಟಿಕೊಡುತ್ತ ಸಾಗುತ್ತದೆ . ಅವಳು ಕಣ್ಣುಗಳಲ್ಲಿ ವ್ಯಕ್ತಪಡಿಸುತ್ತಿದ್ದ ರೀತಿ, ಕಣ್ಣಿಂದಲೇ ಸಂಭಾಷಿಸುತ್ತಿದ್ದ, ಮೀನಾಳ ಆ ಭಾವಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ ಅಲ್ಲವೇ. ಅಸಾಧಾರಣ ಪ್ರತಿಭೆ. ಜೀವನವೆಂಬ ಅಗ್ನಿಯಲ್ಲಿ ಹಾದುಬಂದ ನಮ್ಮೊಳಗಿನ ನಿಜಕಲಾವಿದೆ ಮೀನಾಕುಮಾರಿಯನ್ನು ಹೇಗೆ ಅಕ್ಷರಗಳಲ್ಲಿ ಹಿಡಿದಿಡುವುದು. ಕಷ್ಟಸಾಧ್ಯ. ಸಮಗ್ರವಾಗಿ ಪರಿಚಯಿಸಿದ್ದೀರಿ, ಸಾಹಿತ್ಯಿಕವಾಗಿ ಶೇರ್ ಶಾಯರಿಗಳನ್ನು ಬರೆದು, ಗುಲ್ಜಾರರೊಂದಿಗೆ ತುಂಬ ಚರ್ಚಿಸುತ್ತಿದ್ದ ಮೀನಾ, ಮುಂದೊಮ್ಮೆ ಗುಲ್ಜಾರರಿಗೆ ತನ್ನ ಡೈರಿಯನ್ನೇ ಸಮರ್ಪಿಸಿ,ನೀಡಿದ್ದು ಅವರಿಬ್ಬರ ನಡುವಿನ ಗಾಢ ಸ್ನೇಹಕ್ಕೆ ಇದು ಸಾಕ್ಷಿಯಷ್ಟೆ. . ಮೀನಾಕುಮಾರಿ ಪ್ರತಿವರ್ಷ ಮಾಡುತ್ತಿದ್ದ ರಂಜಾನ್ ಉಪವಾಸವು ಅವಳ ಅನಾರೋಗ್ಯದ ನಿಮಿತ್ಯ ಕೈಗೊಳ್ಳಲಾರದ ಸಂದರ್ಭದಲ್ಲಿ ಗುಲ್ಜಾರರು ಆ ಉಪವಾಸವನ್ನು ಅವಳಿಗಾಗಿ ಮುಂದುವರೆಸುತ್ತಾರೆ. ಅದು ಇಂದಿಗೂ ಅನೂಚಾನವಾಗಿ ಮುಂದುವರೆದಿದೆ. ಇಂದಿಗೂ ಆಚರಿಸುತ್ತಾರೆ. ಒಬ್ಬ ಆತ್ಮೀಯ ಗೆಳೆಯ ತನ್ನ ಆತ್ಮೀಯರೊಬ್ಬರಿಗೆ ಇದಕ್ಕಿಂತ ಗಾಢ ಸ್ನೇಹದುಡುಗೊರೆ ಅದು ಹೇಗೆ ನೀಡಲು ಸಾಧ್ಯ. ಆದರೆ, ಅನೇಕರು ತಿಳಿಯುವ ಹಾಗೆ ಅದು ಅಂತಿಂಥ ಸ್ನೇಹವಲ್ಲ. ಅದು ಟ್ರು ಪ್ರೆಂಡ್ ಶಿಪ್ ಟು ದಿ ಕೋರ್.'ಗುಲ್ಜಾರರೇ ಹೇಳುವಂತೆ, '' ಹಾಥ್ ಸೆ ಛೂಕೆ ಇಸೆ ರಿಸ್ತೋಂ ಕಾ ಇಲ್ಜಾಮ್ ನ ದೋ' ಎಂಬಂತಹ ಎಟರ್ನಲ್ ಬಂಧ, ಸಂಬಂಧ ಅದು. ಸುಂದರ ಬರಹಕ್ಕೆ ಅಭಿನಂದನೆಗಳು ಸರ್.

Submitted by H A Patil Sun, 08/02/2015 - 18:52

In reply to by lpitnal

ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ನಿಮ್ಮ ಪ್ರತಿಕ್ರಿಯೆಯೆ ಮೀನಾ ಕುಮಾರಿಯ ಸಮಗ್ತ ವ್ಯಕ್ತಿತ್ವವನ್ನು ಕಟ್ಟಿ ಕೊಡುವಷ್ಟು ಸಮರ್ಥವಾಗಿದೆ.ಮೀನಾ ಕುಮಾರಿ ಮತ್ತು ಕವಿ ಗುಲ್ಜಾರರ ಪವಿತ್ರ ಸ್ನೆಹ ಸಂಬಂದದ ಕುರಿತು ಬಹಳ ಮನೋಜ್ವವಾಗಿ ದಾಖಲಿಸಿದ್ದೀರಿ. ಗಂಡು ಹೆಣ್ಣುಗಳ ಸ್ನೆಹ ಸಂಬಂಧ ಕುರಿತು ತಮಗೆ ತೋಚಿದಂತೆ ಮಾತನಾಡಿಕೊಳ್ಳುವವರಿಗೆ ಸಂಬಂದಗಳನ್ನು ಹೇಗೆ ಗ್ರಹಿಸಬೆಕು ಎಂಬುದಕ್ಕೆ ನಿಮ್ಮ ಈ ಅಬಿಪ್ರಾಯ ಓದಬೇಕು. ಗುಲ್ಜಾರರ ಬಗೆಗೆ ನನ್ನ ಗೌರವ ಇನ್ನೂ ಹೆಚ್ಚಾಯಿತು, ದನ್ಯವಾದಗಳು.

Submitted by Nagaraj Bhadra Sun, 08/02/2015 - 23:13

H.A Patil ಸರ್ ಅವರಿಗೆ ನಮಸ್ಕಾರಗಳು. ನೀವು ನನ್ನ ಲೇಖನ Operation Smile ಯಲ್ಲಿ ಪ್ರತಿಕ್ರಿಯೆ ನೀಡಿರಿವುದರಲ್ಲಿ ನಾಗೇಶ ಮೈಸೂರು ಅಂತ ನಮೋದಿಸಿರಿ ಸರ್.

Submitted by H A Patil Wed, 08/05/2015 - 16:21

In reply to by Nagaraj Bhadra

ನಾಗರಾಜ ಭದ್ರಾರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ ಹೌದು ತಮ್ಮ ಹೆಸರನ್ನು ನಮೂದಿಸುವಲ್ಲಿ ತಪ್ಪಾಗಿದೆ ಇನ್ನು ಮುಂದೆ ಎಚ್ಚರವಹಿಸುವೆ ಧನ್ಯವಾದಗಳು.

Submitted by kavinagaraj Tue, 08/04/2015 - 21:13

ಮೀನಾಕುಮಾರಿಯ ಪರಿಚಯ ಸೊಗಸಾಗಿ ಮೂಡಿಸಿರುವಿರಿ. ಆಕೆಯ ಕೆಲವು ಚಿತ್ರಗಳನ್ನು ಚಿಕ್ಕಂದಿನಲ್ಲಿ ನೋಡಿರುವೆ. ಒಳ್ಳೆಯ ಕಲಾವಿದೆ.

Submitted by H A Patil Wed, 08/05/2015 - 16:18

In reply to by kavinagaraj

ಕವಿ ನಾಗರಾಜರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ ತಾವು ಬಾಲ್ಯದಲ್ಲಿ ಅಕೆಯ ಕೆಲವು ಚಲನಚಿತ್ರಗಳನ್ನು ನೋಡಿರುವುದು ಮತ್ತು ಅಕೆ ಒಳ್ಳೆಯ ಕಲಾವಿದೆ ಎಂದಿರುವುದು ಸಂತಸದ ಸಂಗತಿ ದನ್ಯವಾದಗಳು.