' ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 2) '

' ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 2) '

ಚಿತ್ರ

 

 

 

ಸುಂದರ ಸಂಜೆಯಲಿ ನದಿ ತಟಾಕ

ಅನ್ಯ ಮನಸ್ಕ ಶಂತನು ದಿಟ್ಟಿಸುತ್ತ ಕುಳಿತಿದ್ದಾನೆ

ನದಿಯ ಮೂಲದೆಡೆಗೆ ಬೀಸುತಿಹ ತಂಗಾಳಿ

ಹೊತ್ತು ತರುತಿದೆ ಮಾದಕ ಕಟುಗಂಧ

ಅವಳೊಬ್ಬ ಬೆಸ್ತೆ ಮತ್ಸ್ಯಗಂಧಿ ಸತ್ಯವತಿ!

ಬರುತ್ತಿದ್ದಾಳೆ ದೋಣೀಯಲಿ ಆತ ಮತ್ತೆ ಪರವಶ

ಅವಳಲಿ ಪ್ರೇಮ ಭಿಕ್ಷೆ ಆಕೆ ಗಂಗೆಯಲ್ಲ!

ಈ ನೆಲದ ವ್ಯವಹಾರ ತಿಳಿದ ಹೆಣ್ಣು       

ದಿಟ್ಟಿಸಿದಳೊಮ್ಮೆ ಆತನನು ಮನ ಒಪ್ಪಲಿಲ್ಲ

ವೃದ್ಧಾಪ್ಯದೆಡೆಗೆ ಸಾಗಿದ ಅರಸ

ಯೋಚಿಸಿದಳು ತನಗೆ ಸರಿ ಸಾಟಿಯಲ್ಲ

ತಿರಸ್ಕರಿಸಲೂ ಆಗದ ಒಪ್ಪಲೂ ಆಗದ

ಸಂಧಿಗ್ಧ ಸ್ಥಿತಿ ಆಕೆಯದು ಆದರೂ

ಮನದಲೊಂದಾಸೆ ಒಪ್ಪಿ ಬಿಡಲೆ ! ಒಪ್ಪಿದರೆ

ಅನಾಯಾಸವಾಗಿ ಒದಗಿ ಬರುವ ರಾಣಿ ಪಟ್ಟ

ಜೊತೆಗೆ ಬರುವ ಅಧಿಕಾರ ಸುಖ ಸಂಪತ್ತು

 

ಚಾಲಾಕಿ ಹೆಣ್ಣು ತಿಳಿದಿದ್ದಾಳೆ ಆಗಲೆ ಆತನಿಗೊಬ್ಬ

ಬೆಳೆದ ಮಗನಿದ್ದಾನೆಇರಿಸುತ್ತಾಳೆ ಆತನೆದುರು

ಷರತ್ತುಗಳ ಪಟ್ಟಿ ತಾನು ಹಸ್ತಿನಾಪುರದ

ಒಡತಿಯಾಗಬೇಕು ಆಗಲಿ ಏನಂತೆ! ತಕ್ಷಣದ

ಒಪ್ಪಿಗೆ ಶಂತನುವಿನದು

ನಿನಗೊಬ್ಬ ಮಗನಿರುವನಲ್ಲವೆ ಆತನೊಪ್ಪುವನೆ?

ಹೌದು ! ಅದಕೇನೀಗ ಗಡುಸಿನ ಪ್ರಶ್ನೆ

ಏನಿಲ್ಲ ನಮಗೆ ಜನಿಸುವ ಮಕ್ಕಳು ಅವನ

ಅಡಿಯಾಳುಗಳಾಗಿ ಬದುಕ ಬೇಕು ಅಲ್ಲವೆ?

ಅವಳ ತೋರಿಕೆಯ ನಿರಾಕರಣೆ

ಗಾಳಕ್ಕೆ ಬಿದ್ದ ಮೀನು ಎಳೆದರೆ ಬಾರದೆ

ಕೊರಗಿನಲಿ ನರಳಿದನಾತ ತಂದೆಯ ಕೊರಗು

ತಿಳಿದ ದೇವವ್ರತ ತಕ್ಷಣವೆ ಪ್ರತಿಜ್ಞಗೈದ

ನಾನು ಆಜನ್ಮ ಬ್ರಹ್ಮಚಾರಿಯಾಗುಳಿವೆ

ರಾಜಪಟ್ಟ ನನಗೆ ತ್ಯಾಜ್ಯ ನನಗೇನೂ ಬೇಕಿಲ್ಲ!!

 

ಸಂತಸದಿ ಸಾನುರಾಗದಿ ಒಪ್ಪಿದಳು ಸತ್ಯವತಿ

ಶಂತನುವಿನ ಮರು ಸಂಸಾರ

ಅವರ ಸಂಸಾರಕೆ ಇಬ್ಬರು ಗಂಡು ಮಕ್ಕಳು

ಒಬ್ಬನೋ ಎಲ್ಲ ಚಟಗಳ ದಾಸ

ಮತ್ತೊಬ್ಬ ತಂದೆಯದೆ ಪಡಿಯಚ್ಚು ರಾಗ

ಭೋಗಗಳಲಿ ಜಾರಿ ಹೋದ ಯೌವನ

ಆರೋಗ್ಯ ಸಂಪತ್ತು ನಿರ್ವೀರ್ಯ ರಾಜ ಕುವರರು

ಯೋಚನೆಯಲೆ ಶಂತನು ಅಳಿದು ಹೋದ

ರಾಜ್ಯವಾಳ ಬಂದವಳ ಕೊರಗು

ಇಳಿಮುಖವಾದ ಹರೆಯ ಬಂದೊದಗಿದ ವೈಧವ್ಯ

ಮಕ್ಕಳ ಹೀನ ಸ್ಥಿತಿಯ ಚಿಂತೆ

ಕಮರದ ರಾಜ್ಯವಾಳುವ ಆಶೆಯ ಮೊರೆತ

 

ತಾಯಿ ಸತ್ಯವತಿಯ ಮನದಾಳವರಿತ ಭೀಷ್ಮ

ಹೊರಟ ತಮ್ಮನಿಗೆ ವಧು ತರಲು

ವಾಸ್ತವದ ಕಟುತ್ವ ಮಾತ್ರ ಘನಘೋರ ಎದುರಿಸಿದನಾತ

ಯಾವ ರಾಜರೂ ಹೆಣ್ಣು ಕೊಡಲೊಪ್ಪರು

ಹಸ್ತಿನಾವತಿಯ ದೊರೆ ತನ್ನ ತಮ್ಮನಿಗೆ

ಹೆಣ್ಣು ದೊರಕದ ಸ್ಥಿತಿ ಒಂದು ಕ್ಷಣ ಹತಾಶನಾದ

ಹೆಡೆಯೆತ್ತಿದ ವಂಶದ ಹಿರಿಮೆ ಒಬ್ಬಳಲ್ಲ ಇಬ್ಬರು

ಸುಂದರಿಯರನು ಗೆದ್ದು ತಂದ

ತಮ್ಮ ವಿಚಿತ್ರ ವೀರ್ಯನಿಗೆ ಮದುವೆ ಮಾಡಿದ

ಆದರೂ ಸರಿಯಾಗದ ತಮ್ಮನ ಬದುಕು

ಇಹಲೋಕ ಯಾತ್ರೆಯನೊಂದು ದಿನ ಮುಗಿಸಿದ

ವಿಧವೆ ನಾದಿನಿಯರು ಅಂಬಿಕೆ ಆಂಬಾಲಿಕೆಯರು

ಬೇಡವೆಂದರೂ ಹೆಗಲಿಗೆ ಬಿದ್ದ ರಾಜ್ಯದ ಜವಾಬ್ದಾರಿ

 

ಒಂದೆಡೆ ತಂದೆ ಶಂತನು ತಮ್ಮ ವಿಚಿತ್ರ ವೀರ್ಯರ

ಭೋಗದ ನಿಕೃಷ್ಟ ಬದುಕು ಮತ್ತೊಂದೆಡೆ

ಸೂತ್ರವೆ ಇಲ್ಲದ ರಾಜ್ಯಭಾರ ಮನೆತನ ಸಾಗಿಸುವ

ಭೀಷ್ಮ ಆಪ್ತವಾಗುವ ವ್ಯಕ್ತಿತ್ವ ಆತನದು

ಮಕ್ಕಳಿಲ್ಲದೆ ಸತ್ತ ತಮ್ಮ ಬಯಸಿದ್ದರೆ ರಾಜ್ಯದ ಅಧಿಕಾರ

ಪಡೆಯಬಹುದಿತ್ತು ಆದರೆ ತಂದೆಗೆ ಕೊಟ್ಟ ಭಾಷೆ

ಜೊತೆಗೆ ಬದುಕಿನ ನಿರರ್ಥಕತೆಯ ದರ್ಶನವಾಗಿತ್ತೆ?

ಕಟು ನಿರ್ಧಾರಕ್ಕೆ ಮತ್ತೊಂದು ಹೆಸರು ಗಾಂಗೇಯ!

 

ಬದುಕಲಿ ಏನೆಲ್ಲ ದುರಂತಗಳ ಕಂಡರೂ

ತಣಿಯದ ಸತ್ಯವತಿಯ ಅಧಿಕಾರ ದಾಹ !

ಆಜ್ಞಾಪಿಸುತ್ತಾಳೆ ಭೀಷ್ಮನಿಗೆ ವಿಧವೆ ಸೊಸೆಯಂದಿರ

ಮದುವೆಯಾಗಿ ಮಕ್ಕಳ ಕರುಣಿಸೆಂದು

ದೇವವ್ರತನ ಸ್ಪಷ್ಟ ನಿರಾಕರಣೆ ಕವಿಯಿತು ಆಕೆಯನು

ನಿರಾಶೆಯ ಕಾರ್ಮೋಡ ! ತಕ್ಷಣ ಮಿಂಚೊಂದು

ಸುಳಿಯಿತು ಮನದ ಪರದೆಯ ಮುಂದೆ

ಗತ ಕಾಲಕೆ ಜಾರಿದ ಬೆಸ್ತೆಗೆ ಮೊದಲ ಮಗ

‘ವೇದವ್ಯಾಸ’ನ ನೆನಪು

           (ಮುಂದುವರಿದುದು)

ಚಿತ್ರ ಕೃಪೆ :ಅಂತರ್ ಜಾಲ

                

Rating
No votes yet

Comments

Submitted by kavinagaraj Mon, 04/27/2015 - 21:06

ಭೀಷ್ಮನ ಕುರಿತ 2 ಭಾಗಗಳನ್ನೂ ಓದಿದೆ. ಸರಳ ರೀತಿಯಲ್ಲಿ ಗಂಗಾಧಾರೆಯಂತೆ ಭೀಷ್ಮನ ಗುಣಾವತರಣ ಮಾಡುತ್ತಿರುವಿರಿ. ಮುಂದುವರೆಸಿರಿ, ಪಾಟೀಲರೇ.

Submitted by nageshamysore Mon, 04/27/2015 - 21:18

In reply to by kavinagaraj

ಪಾಟೀಲರೆ ನಮಸ್ಕಾರ; ಹೌದು ಗಂಗೆಯಂತೆ ಸಲಿಲವಾಗಿ, ಸುಲಲಿತವಾಗಿ ಹರಿಯುತ್ತಿದೆ ಗಾಂಗೇಯ ಧಾರೆ. ಹೀಗೆ ಮುಂದುವರೆದು ಸೇರಲಿ ಸಾಗರವನ್ನು !

Submitted by H A Patil Wed, 04/29/2015 - 20:09

In reply to by nageshamysore

ನಾಗೇಶ ಮೈಸೂರುರವರಿಗೆ ವಂದನೆಗಳು ತಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ದನ್ಯವಾದಗಳು ಮೂರನೆ ಕಂತಿನಲ್ಲಿ ಇದು ಪೂರ್ಣಗೊಳ್ಳಲಿದೆ.

Submitted by H A Patil Wed, 04/29/2015 - 20:07

In reply to by kavinagaraj

ಕವಿ ನಾಗರಾಜರವರಿಗೆ ವಂದನೆಗಳು
ಭೀಷ್ಮನ ಮೇರು ವ್ಯಕ್ತಿತ್ವವನ್ನು ಒಂದೆಡೆ ದಾಖಲಿಸ ಬೆಕೆಂದಿತ್ತು ಅದರ ಫಲಶೃತಿ ಈ ನೀಳ್ಗವನ ದನ್ಯವಾದಗಳು.