ಪ್ರೇಯಸಿ ಎಂಬ ಗೆಳತಿಗೆ.. ಒಂದು ಪ್ರೇಮ ಪತ್ರ.

ಪ್ರೇಯಸಿ ಎಂಬ ಗೆಳತಿಗೆ.. ಒಂದು ಪ್ರೇಮ ಪತ್ರ.

ಪ್ರೇಯಸಿ ಎಂಬ ಗೆಳತಿಗೆ..

ಹೇ ಹುಡುಗಿ.. ಹಿಂದಿನ ನೆನಪುಗಳು ಎಂಥಾ ವಿಚಿತ್ರ ಅಲ್ವಾ? ಕೆಲವೊಮ್ಮೆ ಕೋಪವನ್ನು
ತರಿಸಿದರೆ, ಕೆಲವೊಮ್ಮೆ ನಾಚಿ ನೀರಾಗುವಂತೆ ಮಾಡುತ್ತವೆ ಈ ನೆನಪುಗಳು.. ಅದರಲ್ಲೂ
ಮುಖ್ಯವಾಗಿ ನನ್ನ ನಿನ್ನ ಪ್ರೀತಿಯ ಮುದ್ದು ನೆನಪುಗಳು.. ನಿನಗೆ ನೆನಪಿದ್ಯಾ ಪ್ರೀತಿಯ
ಪ್ರಾಂಭದಲ್ಲಿ ನಾವು ಮೊದಲು ಒಂದು ಅರ್ಧ ಗಂಟೆಯೂ ಕೂಡಾ ಮಾತಾಡದೇ ಇದ್ದರೆ ಏನೋ ಕಳಕೊಂಡ
ಹಾಗೆ ಆಡ್ತಿದ್ವಿ.. ಎಂಥಾ attachment ಇತ್ತು.. ಬೆಳಿಗ್ಗೆ ಎದ್ದರೆ, ಗುಡ್
ಮಾರ್ನಿಂಗ್ ನಿಂದ ಹಿಡಿದು, ಕಾಫಿ ಆಯ್ತಾ? ಸ್ನಾನ ಆಯ್ತಾ? ಟಿಫಿನ್ ಆಯ್ತಾ? ಕೆಲಸಕ್ಕೆ
ಹೊರಟೆಯಾ? ಪ್ರತಿಯೊಂದು ವರದಿಯೂ ಕೂಡಾ ಅರೆ ಕ್ಷಣದಲ್ಲಿ ನನ್ನ-ನಿನ್ನಲ್ಲಿಗೆ
ರವಾನೆಯಾಗಿಬಿಡ್ತಿತ್ತು.. ಅಂಗಡಿಗೆ ಹೋದಾಗ ದಾರಿಯಲ್ಲಿ ಕಂಡ ಕಾಲಿಲ್ಲದ ಅಂಗವಿಕಲನಿಂದ
ಹಿಡಿದು, ತರಕಾರಿಯನ್ನು ಕೇಜಿಗಟ್ಟಲೆ ತುಂಬಿಸಿಕೊಳ್ಳುತ್ತಿದ್ದ ಧಡೂತಿ
ಹೆಂಗಸಿನವರೆಗೆ, ಎಲ್ಲಾ ವಿಷಯಗಳನ್ನು ಶೇರ್ ಮಾಡ್ಕೋತಿದ್ವಿ. ನನ್ನ ಜೀವನದ
ಪ್ರತಿಯೊಂದು ಕ್ಷಣಗಳನ್ನು ನಿನಗಾಗಿ ಮೀಸಲಿಟ್ಟುಬಿಟ್ಟಿದ್ದೆ. ನೀನೂ ಕೂಡಾ ಹಾಗೇನೇ,
ನಾನು ಫೋನು ಮಾಡದಿದ್ದರೂ ನೀನಂತೂ ಖಂಡಿತ ಮಾಡ್ತಿದ್ದೆ..

ನೆನಪಾಗುತ್ತಿದೆಯಾ ಹುಡುಗಿ? ಒಮ್ಮೆ ನಮ್ಮ ಮನೆಯಲ್ಲಿ ಎಲ್ಲರೂ ಇದ್ದಾಗ ರಾತ್ರಿ ನಾನು
ನಿಂಜೊತೆ ಮಾತಾಡೋಕ್ಕಾಗಲ್ಲ ಅಂತಾ ಹೇಳಿದ್ರೂ ಕೂಡಾ ನೀನು ನನ್ನ ಜೊತೆ ಮಾತನಾಡಲೇಬೇಕು
ಅಂತಾ ಹಠಕ್ಕೆ ಬಿದ್ದದ್ದು, ನಾನು ರೂಮಿನ ಬಾಗಿಲಿನ ಸಂದುಗಳಿಗೆ ಬಟ್ಟೆಯನ್ನು ತುರುಕಿ,
ಫ್ಯಾನ್ ಸದ್ದಿನ ಕೆಳಗೆ ನಾಲ್ಕೈದು ಬೆಡ್ ಶೀಟ್ ಗಳನ್ನು ಹೊದ್ದುಕೊಂಡು ರಾತ್ರಿಯೆಲ್ಲಾ
ಮಾತಾಡಿದ್ದೆ. ಅವತ್ತು ರಾತ್ರಿ ನಾವು ಪ್ರತಿಯೊಂದು ವಿಷಯವನ್ನೂ ಹಂಚಿಕೊಂಡೆವು. ನಿನ್ನ
ಮನೆ ಲ್ಯಾಂಡ್ ಲೈನಿಗೆ ಮಿಸ್ಡ್ ಕಾಲ್ ಮಾಡುತ್ತಿದ್ದ ಆ ನಿನ್ನ ಅಜ್ಞಾತ ಪ್ರೇಮಿಯ
ಬಗ್ಗೆ, ನಿನಗೆ ಪ್ರಪೋಸ್ ಮಾಡಿ ಪೆಚ್ಚು ಮೋರೆ ಹಾಕಿಕೊಂಡು ಹೋದ ಫ್ಯಾಮಿಲಿ ಫ್ರೆಂಡ್
ಬಗ್ಗೆ.. ನೀನು ನಿಮ್ಮೂರಿನ ಗಲ್ಲಿಗಳಲ್ಲಿ ಜೋರಾಗಿ ಓಡಿಸ್ಕೊಂಡು ಹೋಗ್ತಿದ್ದ ಸ್ಕೂಟಿಯ
ಬಗ್ಗೆ... ಎಲ್ಲದರ ಬಗ್ಗೆ ಮಾತನಾಡುತ್ತಾ, ಕೊನೆಗೆ ಮುತ್ತಿನ ಟಾಪಿಕ್ ನ ನಾನು
ತೆಗೆದಾಗ ನೀನು ಹುಸಿ ಕೋಪ ಮಾಡಿಕೊಂಡು ಫೋನ್ ಕಟ್ ಮಾಡಿದ್ದು.. ಮತ್ತೆ ನಾನು ಫೋನ್
ಮಾಡಿ, ನಾನು ನಿಂಗೆ ನೂರೈವತ್ತು ಸಾರಿ sorry ಕೇಳಿದ್ದು, ಎಲ್ಲವೂ ನೆನಪಾಗುತ್ತಿದೆ.

ಪ್ರೀತಿಯ ಬಾಹುಗಳಿಗೆ ನಮ್ಮಿಬ್ಬರನ್ನು ಅರ್ಪಿಸಿಕೊಂಡು ಕೊನೆಗೆ ನಾವಿಬ್ಬರೂ
ಒಬ್ಬರೊನ್ನೊಬ್ಬರೂ ಬಿಟ್ಟಿರಲಾರದ ಹಂತಕ್ಕೆ ಬಂದಾಗ, ಮಾರನೇ ದಿನವೇ ನಿನ್ನ ಮದುವೆ
ಮಾಡಿಕೊಂಡು ಕರೆದುಕೊಂಡು ಹೋಗಬೇಕೆಂದು ನಿನ್ನಲ್ಲಿಗೆ ಬಂದಿದ್ದೆನಲ್ಲ.. ಅವತ್ತೇ
ಅಲ್ವಾ, ಮೊದಲ ಬಾರಿ ಮುತ್ತಿನ ವಿನಿಮಯವಾಗಿದ್ದು.. ನನಗಂತೂ ತಲೆಯೇ ತಿರುಗಿ
ಬಂದಿತ್ತು. ಅಬ್ಬಾ.. ಮುತ್ತಿನಲ್ಲೂ ಮತ್ತಿರುತ್ತೆ ಅಂತಾ ಬರೀ ಬಾಯಿಮಾತಿಗೆ
ಅಂದುಕೊಂಡಿದ್ದವನಿಗೆ ಅವತ್ತು ಸಾಕ್ಷಾತ್ಕಾರವಾಗಿತ್ತು. ನಾನು ನಿನ್ನ ಕಡೆ ನೋಡಿದಾಗ,
ನಿನ್ನ ಕೆನ್ನೆ ಕೆಂಪಾಗಿ ನೀನು ನಾಚಿಕೊಂಡೆಯಲ್ಲಾ.. ಇವತ್ತೂ ಅದು ನಂಗೆ ನೆನಪಿದೆ. ಆ
ಕ್ಷಣ ನಂಗೆ ತುಂಬಾನೇ ಇಷ್ಟ.. ಅವತ್ತು ರಾತ್ರಿ ಮುತ್ತಿನದೇ ಟಾಪಿಕ್.. ಎಲ್ಲ
ತರಹೇವಾರಿ ಮುತ್ತುಗಳ ಬಗ್ಗೆ ದೊಡ್ಡ ಚರ್ಚೆಯನ್ನೇ ಮಾಡಿದ್ವಿ. ಇಷ್ಟೇ ಸೀರಿಯಸ್ಸಾಗಿ,
ಇಷ್ಟೇ ಆಸಕ್ತಿಯಿಂದ ಇಬ್ಬರೂ ಕಾಲೇಜಿನ ಬುಕ್ಕು ಹಿಡ್ಕೊಂಡಿದ್ದಿದ್ರೆ, ಇಬ್ಬರೂ ನಂ.1
Rank ನ ಹಂಚ್ಕೊತಿದ್ವಿ ಅನ್ಸುತ್ತೆ.. ಅವತ್ತಿನ ರಾತ್ರಿ ನಾವು ಕಂಡು ಹಿಡಿದ ಕಾಫಿ
ಕಿಸ್ಸನ್ನು ನೀನು ಮರೆತಿಲ್ಲ ತಾನೇ?

ಅವತ್ತು ಬೆಳಿಗ್ಗೆ ನಿನ್ನ ಮನೆಗೆ ಬಂದಾಗ, ನೀನು ಕಾಫಿ ಮಾಡಿಕೊಟ್ಟೆ. ಎರಡು ಲೋಟ ಬೇಡ
ಅಂತಾ ಒಂದೇ ಲೋಟದಲ್ಲಿ ಕುಡಿತಿರ್ಬೇಕಾದ್ರೆ, ಕಾಫಿ ಕಿಸ್ಸು ನೆನಪಾಗಿ ನಿನ್ನಮುಂದೆ
ಹೇಳಿದಾಗ, ನೀನು ನಾಚಿಕೊಂಡು, ಅದೆಲ್ಲಾ ಏನೂ ಬೇಡ ಅಂದಿದ್ದೆ.. ನಾನು ನಿಂಗೆ ಚಿನ್ನ
ರನ್ನ ಬಂಗಾರ ಅಂತೆಲ್ಲಾ ಓಲೈಸಿ ಒಪ್ಪಿಸಿದ್ದೆ.. ಈ ಹುಡುಗಿಯರಿಗೆ ಬಂಗಾರ ಕೊಡಿಸದೇ
ಇದ್ರೂ ಪರವಾಗಿಲ್ಲ, ಚಿನ್ನ ರನ್ನ ಅಂತಾ ಮುದ್ದು ಮಾಡಿದ್ರೆ ಸಾಕು, ಒಲಿದು
ಬಿಡ್ತಾರೆ.. (conditions apply: ನಾನು ಹೇಳಿದ್ದು ಹುಡುಗಿಯರ ಬಗ್ಗೆ, ಹೆಂಡತಿಯರ
ಬಗ್ಗೆ ಅಲ್ಲ) ನಿನ್ನ ನಾಚಿಕೆಯ ಮೊಗವನ್ನು ನೋಡುತ್ತಾ ನಾ ನಿನ್ನ ತೊಡೆ ಮೇಲೆ ತಲೆ
ಇಟ್ಟಾಗ, ನೀನು ತಲೆಕೂದಲಲ್ಲಿ ಬೆರಳಾಡಿಸುತ್ತಾ ಅವತ್ತು ನಸು ನಕ್ಕೆಯಲ್ಲಾ.. ಅದ್ಯಾಕೆ
ಹಾಗೆ ನಕ್ಕೆ ಹುಡುಗಿ? ನೀ ಎರಡು ಸಿಪ್ ನಿನ್ನ ಇಷ್ಟದ ಬ್ರೂ ಕಾಫಿಯನ್ನು ಹೀರಿ,
ನಿನ್ನ ತೊಡೆಮೇಲೆ ತಲೆ ಇಟ್ಟು ನಿನ್ನ ತುಟಿಗಳಿಗಾಗಿ ಹಂಬಲಿಸುತ್ತಿದ್ದ ನನ್ನ
ತುಟಿಗಳಿಗೆ ತುಟಿ ಇಟ್ಟು ಕಾಫಿಯ ಗುಟುಕನ್ನು ಕೊಟ್ಯಲ್ಲಾ... ಅಬ್ಬಾ.. ಅವತ್ತೇ ನಾನು
ಸತ್ತು ಹೋದ್ರೂ ಚಿಂತೆಯಿರಲಿಲ್ಲ.. ಪ್ರಪಂಚದ ಎಲ್ಲ ಸುಖವೂ ನನ್ನೊಬ್ಬನಿಗೆ ಸಿಕ್ಕ
ಹಾಗೆ ಅನ್ನಿಸಿತ್ತು.. ಅದ್ಯಾವಾಗ ಕಾಫಿ ಮುಗಿದು ಹೋಯ್ತೋ ಗೊತ್ತಾಗ್ಲೇ ಇಲ್ಲ
ಅಲ್ವಾ???????????

ಇವತ್ತು ಅದೆಲ್ಲ ನೆನಪಾಗುತ್ತಿದೆ. ಇಷ್ಟು ದಿನವಿಲ್ಲದ್ದು ಇವತ್ಯಾಕೋ ಎಂದು ಕೇಳಬೇಡ.
ಇದನ್ನು ನಾನು ನಿನಗೆ ನೆನಪು ಮೂಡಿಸಿ ಸಾಧಿಸಬೇಕಾದ್ದು ಏನೂ ಇಲ್ಲ. ಸುಮ್ಮನೆ
ನೆನಪಾಯಿತು ಅಷ್ಟೇ. ಪ್ರಪಂಚದ ಪ್ರೇಮಿಗಳೆಲ್ಲಾ ತಮ್ಮ ತಮ್ಮ ಪ್ರೇಯಸಿಯ ಜೊತೆಗೆ ಎಷ್ಟು
ಚಂದವಿದ್ದಾರೆ. ಅದರಲ್ಲಿ ನಾನೊಬ್ಬನೇ ಬಡಪಾಯಿ ಪ್ರೇಯಸಿ ಇದ್ದರೂ ಇಲ್ಲದಂತಾಗಿರುವವನು.
ನೀನು ನನ್ನ ಬಿಟ್ಟು ನೀನು ದೂರ ಹೋಗಿ ನಾಲ್ಕೈದು ವರ್ಷವಾಯಿತು. ಇದುವರೆಗೂ ಒಂದು ಭೇಟಿ
ಇಲ್ಲ. ಮಾತಿಲ್ಲ-ಕಥೆಯಿಲ್ಲ. ಹುಡುಗಿಯರಿಗೆ ಸೊಕ್ಕು ಇರಬಹುದು, ಅಹಂ ಇರಬಾರದು
ಅಂತಾರೆ.. ಆದರೆ ನೀನು ಮಾಡ್ತಿರೋದೇನು? ಅರಿಯದೇ ವಿವೇಕವಿಲ್ಲದೇ ತಲೆಇಲ್ಲದೇ ಮಾಡಿದ
ತಪ್ಪಿಗೆ ಈಗಾಗಲೇ ನನಗೆ ಎರಡು ವರ್ಷ ನನ್ನನ್ನು ಅಲಕ್ಷಿಸಿ ವಿರಹ ವೇದನೆಯನ್ನು
ಕೊಟ್ಟುಬಿಟ್ಟೆ. ನಿನ್ನನ್ನು ಸಂಪೂರ್ಣವಾಗಿ ಕಳೆದುಕೊಂಡೆ ಎಂದುಕೊಂಡುಬಿಟ್ಟಿದ್ದೆ.
ನಿನ್ನ ಮಾತುಗಳು ಕೂಡಾ ನನಗೆ ಹಾಗೆ ಅನ್ನಿಸಿತ್ತು. ನಿನ್ನ ನಡವಳಿಕೆಗಳಲ್ಲಿ
ವ್ಯತ್ಯಾಸವಾಗಿದ್ದು ಕೂಡಾ ನನ್ನ ನಿನ್ನ ಒಂದಾಗುವಿಕೆಯ ಆಸೆಯನ್ನು
ಕಮರಿಸಿಬಿಟ್ಟಿತ್ತು. ನಾಲ್ಕು ವರ್ಷಗಳ ನಂತರ ಎಂದೋ ಒಂದು ದಿನ ನಾನು ನಿನ್ನಲ್ಲಿ
ಕ್ಷಮೆ ಕೇಳಿದ್ದೆ. ಇಷ್ಟು ದಿನ ಬೇಕಾಗಿತ್ತ ನಿನ್ನ ತಪ್ಪು ಅರ್ಥವಾಗಲು ಎಂದು ನೀನು
ಕೇಳಿದೆ. ಆದರೆ, ನಿನಗೆ ಗೊತ್ತಲ್ಲ, ನಾನು ಪೆದ್ದು ಅಂತಾ.. ನಿನ್ನಷ್ಟು ಜಾಣ್ಮೆ ನನಗೆ
ಇನ್ನೂ ಬಂದಿಲ್ಲ. ಒಂಥರಾ ಟ್ಯೂಬ್ ಲೈಟ್ ನಾನು.. ಮತ್ತೆ ನಿಮ್ಮ ನನ್ನ ಸಂಭಾಷಣೆಗಳು
ಮುಂದುವರೆದು ಮತ್ತೆ ನಿನ್ನನ್ನು ಪಡೆದುಕೊಳ್ಳುತ್ತೇನೆಂಬ ಆಸೆ ಮೂಡಿತು. ನಾಲ್ಕು
ವರ್ಷಗಳ ನಂತರ ಒಂದು ಬಾರಿ ಭೇಟಿಯಾಗಿದ್ದು ಕೂಡಾ ನನ್ನ ಆಸೆಯ ಮರುಜೀವಕ್ಕೆ
ಕಾರಣವಾಯಿತು. ಆದರೆ, ಮತ್ತೆ ಈಗ ಆಗಿದ್ದೇನು? ನನ್ನ ತಪ್ಪಲ್ಲದ ತಪ್ಪಿಗೆ ನೀನು ಎಂಥಾ
ಶಿಕ್ಷೆ ಕೊಟ್ಟಿದ್ದೀಯ.. ಛೆ.. ಯಾವ ಪ್ರೇಮಿಯೂ ಕೂಡಾ ಊಹಿಸಲಾರ. ಊಹಿಸಿಕೊಂಡರೂ
ಅದನ್ನು ಶಿಕ್ಷೆ ಎಂದು ಪರಿಗಣಿಸಲಾರ. ಹೇಳಲಾಗದಂಥಹ ಸಂಕಟವನ್ನು ಕೊಟ್ಟುಬಿಟ್ಟಿದ್ದೀಯ.
ಇದರಿಂದ ಈ ಬಾರಿ ನಿನ್ನ ಮೇಲೆ ಖಂಡಿತಾ ಕೋಪವಿದೆ. ನನ್ನ ತಪ್ಪಿಲ್ಲದ ತಪ್ಪಿಗೆ ನಾನು
ನಿನ್ನ ಕ್ಷಮೆ ಕೇಳಲಾರೆ. ನಾನು ದಡ್ಡನಿರಬಹುದು, ಆದರೆ ನನಗೂ ಒಂಚೂರು
ಆತ್ಮಾಭಿಮಾನವಿಲ್ಲವೇ? ನೀನಾಗಿ ನೀನು ನನ್ನ ಕ್ಷಮೆ ಕೇಳುವವರೆಗೆ ಕಾಯುತ್ತೇನೆ. ಈ
ಹುಚ್ಚಾಟದಲ್ಲಿ ನಿನ್ನ ಕಳೆದುಕೊಳ್ಳೋಕೂ ಕೂಡಾ ಸಿದ್ಧವಾಗಿದ್ದೇನೆ. ನೀನು ನನ್ನಲ್ಲಿ
ಮರಳಿ ಬಾರದಿದ್ದರೆ ಪರವಾಗಿಲ್ಲ. ಎಲ್ಲೇ ಇರು, ಹೇಗೇ ಇರು. ಸಂತೋಷವಾಗಿರು. ಮನೆಯಲ್ಲಿ
ತೋರಿಸಿದ ಹುಡುಗನನ್ನೇ ಮದುವೆಯಾಗಿಬಿಡು.

ನಿನಗಾಗಿ ಬರೆದ ಈ ಕವನವನ್ನು ಕೊನೆಯದಾಗಿ ಅರ್ಪಿಸಿಕೊಂಡುಬಿಡು..

ಕ್ಷಮಿಸದಿರು ಗೆಳತಿ ನೀ ಮಾಡಿದ ತಪ್ಪನು..
ನನ್ನ ಕಳೆದುಕೊಂಡ ಆ ನಿನ್ನ ತಪ್ಪನು..

ಮುಂಜಾವಿಗಾಗಿ ಕಾತರದಿ ಕಾದು
ಮೊದಲ ಗುಡ್ ಮಾರ್ನಿಂಗ್ ಹೇಳಿದ,
ಈ ಪೆದ್ದು ಹೃದಯವ ನೋಯಿಸಿದ ತಪ್ಪನು
ಕ್ಷಮಿಸದಿರು ಗೆಳತಿ ನೀ ಮಾಡಿದ ತಪ್ಪನು
ನನ್ನ ಕಳೆದುಕೊಂಡ ಆ ನಿನ್ನ ತಪ್ಪನು..

ನೀ ಏನೂ ತಿನ್ನದೇ ನಾ ಒಲ್ಲೆನೆಂದು
ಹಠವ ಮಾಡಿದ ಈ ನನ್ನ ಮನಸನು ನೋಯಿಸಿದ ತಪ್ಪನು
ಕ್ಷಮಿಸದಿರು ಗೆಳತಿ ನೀ ಮಾಡಿದ ತಪ್ಪನು
ನನ್ನ ಕಳೆದುಕೊಂಡ ಆ ನಿನ್ನ ತಪ್ಪನು..

ಸಾವಿರ ಕನಸುಗಳ ಕಟ್ಟಿ
ಜೊತೆ ಸೇರಿ ನೀರೆರೆದ ಈ ಮುದ್ದು ಪ್ರೀತಿಯ
ಕಾಡಿಸಿದ ತಪ್ಪನು
ಕ್ಷಮಿಸದಿರು ಗೆಳತಿ ನೀ ಮಾಡಿದ ತಪ್ಪನು
ನನ್ನ ಕಳೆದುಕೊಂಡ ಆ ನಿನ್ನ ತಪ್ಪನು.

ಕೊನೆಯದಾಗಿ ಒಂದು ಸಾಲು.. ನಿನ್ನ ಬಿಟ್ಟು ನಾನು ಬೇರೆ ಯಾರನ್ನೂ ಮದುವೆಯಾಗಲು
ಇಷ್ಟವಿಲ್ಲ. ಕೊನೆಯವರೆಗೂ ಹೀಗೆಯೇ ಇದ್ದುಬಿಡುವೆ..

ಇಂತಿ ನಿನ್ನ ಪ್ರೀತಿಯ
-ಯಳವತ್ತಿ. (ಕಾವ್ಯನಾಮ)
ಮೂಲ ಲೇಖನ:-  www.shivagadag.blogspot.com

Rating
No votes yet