ಮತ್ತೆ ಬಂತು ಯುಗಾದಿ

ಮತ್ತೆ ಬಂತು ಯುಗಾದಿ

ಎತ್ತನೋಡಿರತ್ತ ಚಿಗುರನು ಹೊತ್ತು ಮರಗಳು ನಲಿದಿರೆ
ಮತ್ತೆ ಬಂದಿಹುದೀ ಯುಗಾದಿಯು ಹೊಸತು ವರ್ಷಕ್ಕಾದಿಯು

ಉಲಿವ ಕೋಗಿಲೆ ಚಿಗುರು ಮಾವೆಲೆ ನೀಲಿಬಣ್ಣದ ಆಗಸ
ಹುರುಪು ಹೆಚ್ಚಿಸುವಂಥ ಚೆಲುವಿದು ತಂತು ಮನದಲಿ ಸಂತಸ

ಮೂಡಣದ ಆಗಸದಿ ನೇಸರನ ಓಕುಳಿ
ಮನೆಮನೆಯ ಮುಂದೂ ರಂಗವಲ್ಲಿ
ಮಾಂದಳಿರ ತೋರಣವು ತೂಗಿ ಬಾಗಿಲಲಿ
ಹೊಸಕನಸ  ಚಿಮ್ಮಿಸುವುದೀ ಮನದಲಿ

ಬೆಳಗಾಗ ಏಳುತಲೆ ಮಾಡೋಣ ಅಭ್ಯಂಗ
ಹೊಸ ವಸ್ತ್ರಗಳ ಧರಿಸಿ ನಾವು ನಲಿಯೋಣ
ಮುಂಬರುವ ವರ್ಷಕ್ಕೆ  ಹರುಷವನೆ ಕೋರುತ್ತ
ಬೇವುಬೆಲ್ಲವನು ತಿಂದು ಸಜ್ಜಾಗಿರೋಣ

ಹೊಸವರ್ಷದಾದಿಯಲಿ ಬೇವು ಬೆಲ್ಲಗಳೇಕೆ
ಬೆಲ್ಲವೇ ಸಾಕೆಮಗೆ ಎಂಬ ಬಗೆ ಬೇಡೈ
ಬಾಳಿನಲಿ ಬಂದೀತು ಸುಖದುಃಖಗಳು ಎರಡು
ಕಷ್ಟ ಸಹಿಸುವ ಶಕ್ತಿ ದೇವ ನೀಡೈ

ವರುಷಕಿದುವೇ ಮೊದಲ ಹಬ್ಬ ಯುಗಾದಿ
ತರುತಿರಲಿ ಎಣೆಯಿರದ ಹರುಷ ನಮಗೆಲ್ಲ
ಬರುವ ತೊಡಕುಗಳನೆಲ್ಲ ಬೇವಂತೆ ನೀಗುತ್ತ
ಹರಸುವಾ ಬಾಳ ತುಂಬಿರಲಿ ಬೆಲ್ಲ

ಹಬ್ಬದೂಟಕ್ಕೆಂದು ಮಾಗಾಯಿ ಚಿತ್ರಾನ್ನ
ಒಬ್ಬಟ್ಟು ಹೂರಣದ ಜೊತೆಗೆ ಸವಿಯೋಣ
ಒಬ್ಬರಿಗೊಬ್ಬರು ಒಳಿತನ್ನೆ ಹರಸುತ್ತ
ಹಬ್ಬದಾ ಸಡಗರವ ಮಿಗಿಲಾಗಿಸೋಣ

ಸಂಜೆಯಲಿ ಕೇಳುವುದು ವರ್ಷದ ಪಂಚಾಂಗ
ಜಯ ನಾಮ ವತ್ಸರಕೆ ಶುಭವನ್ನೆ ಬಯಸಿ
ಹಿಂದಿದ್ದ ನೋವುಗಳನೆಲ್ಲ ಮರೆಯುತ್ತ
ಜಯವನ್ನೆ ಕೋರುತಲಿ ಎಲ್ಲ  ಕಾರ್ಯದಲಿ

-ಹಂಸಾನಂದಿ

ಕೊ: ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಅಲ್ಲವೇ? ಹೋದ ವರ್ಷ ಯುಗಾದಿಯ ಸಂದರ್ಭದಲ್ಲಿ ಕ್ಯಾಲಿಫೋರ್ನಿಯಾ ಗೆ ಭೇಟಿ ಕೊಟ್ಟಿದ್ದ ವಿದ್ವಾನ್ ತಿರುಮಲೆ ಶ್ರೀನಿವಾಸ್ ಅವರು ಇಲ್ಲಿನ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಲ್ಲಿ ಒಂದು ಕನ್ನಡ-ರಸಾಯನ ಎನ್ನುವ ಗಾನ-ವಾದ್ಯ ವೃಂದವನ್ನು ಪ್ರಸ್ತುತಿ ಪಡಿಸಿದ್ದರು. ಅದಕ್ಕೆ ನನಗೆ ಕೆಲವು ಸಾಲುಗಳನ್ನು ಬರೆದುಕೊಡಲು ಕೇಳಿದ್ದರು. ಆ ಸಂದರ್ಭದಲ್ಲಿ ಬರೆದ ಪದ್ಯಗಳಿವು, ಈ ಜಯ ಸಂವತ್ಸರ ಮೊದಲಾಗುವಾಗ ಒಂದೆರಡು ಚಿಕ್ಕ ಪುಟ್ಟ ಬದಲಾವಣೆಗಳೊಂದಿಗೆ ಹಾಕಿದ್ದೇನೆ.

ಕೊ.ಕೊ: ಹೋದ ವರ್ಷದ ಕಾರ್ಯಕ್ರಮದ ವಿಡಿಯೋ ನೋಡಲು ಇಲ್ಲಿ ಚಿಟಕಿಸಿ.

<iframe width="420" height="315" src="//www.youtube.com/embed/f9h1hEHtcUI" frameborder="0" allowfullscreen></iframe>

 

Rating
No votes yet

Comments

Submitted by venkatesh Tue, 04/01/2014 - 09:55

ಚೈತ್ರಮಾಸದ ಅರಿವು ಕೋಗಿಲೆಗೆ ತಿಳಿದಿಹುದು
ತಳಿರು ಮಾವಿನ ಸವಿಯ ಮುದದಿ ಸವಿದು,
ಕೂ, ಕೂ ಎಂದು ಉಳಿಯುವುದು, ಮರೆಯಲ್ಲಿ,
ಹಸಿರು ಸೊಂಪಿನ ಮರದಲೆಲ್ಲಿಹುದು ?
ನಾಚುಗೆಯ ಅವತಾರಕೆ ಪ್ರತೀಕವಾಗಿಹುದು !