ರೆಕ್ಕೆ

ರೆಕ್ಕೆ

ರೆಕ್ಕೆ
ಟೇಬಲ್ಲಿನ ಮೇಲಿದ್ದ ಪತ್ರವನ್ನು ಅವನು ದಿಟ್ಟಿಸತೊಡಗಿದ್ದ, ಜ್ಞಾನವಿಭು, ಸಣ್ನಗಿನ ದೇಹದ ಅವನಿಗೆ ಯಾವುದೇ ಬಟ್ಟೆ ಹಾಕಿದರೂ ಅದು ಮೊಳೆಗೆ ನೇತುಹಾಕಿದ ಶರ್ಟಿನಂತೆಯೇ ಕಾಣುತ್ತಿತ್ತು. ಕೂದಲಲ್ಲಿ ಹೊಟ್ಟು ಹೆಚ್ಚಾಗಿ ಹುಬ್ಬಿನ ಮೇಲೆಲ್ಲಾ ಇಳಿದಿರುತ್ತಾ , ಪೌಡರ್ ಚಿಮುಕಿಸಿದಂತೆ ಕಾಣುತ್ತಿತ್ತು. ಆಗಾಗ ಕುತ್ತಿಗೆಯ ಹಿಂದೆ ತುರಿಸಿಕೊಳ್ಳುತ್ತಾ ತನ್ನ ಕತ್ತನ್ನು ಹಿಂದಕ್ಕೂ ಮುಂದಕ್ಕೂ ಆಡಿಸಿ ಲಟಕ್ಕೆನಿಸಿದ.ಪತ್ರ ಟೇಬಲ್ಲಿನ ಮೇಲಿದ್ದಿದ್ದರಿಂದ ಅವನಿಗೆ ಕುತೂಹಲ, "ನಾನು ಇಟ್ಟೆನೇ? ಇಲ್ಲ ಇನ್ಯಾರದರೂ ಇಟ್ಟರೇ? ಸಾಮಾನ್ಯವಾಗಿ ನಾನು ಹೀಗೆಲ್ಲಾ ಇಡುವವನಲ್ಲ,ಏನಿರಬಹುದು ಆ ಪತ್ರದೊಳಗೆ, ಅವಳದ್ದಾ ಇಲ್ಲಾ ಆ ಅವಳದ್ದಾ?" ನೀಲಿ ಲಕೋಟೆಯ ಒಳಗಿನ ಪತ್ರದ ಬಗ್ಗೆ ಅವನಿಗೆ ಸಾಕಷ್ಟು ಕುತೂಹಲ ಹುಟ್ಟಿದವು, "ಅದು ಆ ಅವಳದ್ದಾಗಿದ್ದರೆ... ಹ್ಮ್. ಮತ್ತದೇ ಕತೆ,ಮುಗಿಯಲಾರದ್ದು," "ಮಲಗಿದ್ದೇನೆ ಜ್ಞಾನವಿಭು, ಮಲಗಿದ್ದಲ್ಲೇ ಮಲಗಿದ್ದೇನೆ ಕಣೋ,ಆಸ್ಪತ್ರೆಯವರು ಬಂದಿದ್ದರು, ಬದುಕುವುದು ಇನ್ನೂ ಕೆಲವೇ ದಿನ ಎಂದಿದ್ದಾರೆ, ಬಂದು ನೋಡಿ ಹೋಗು, ನನಗೂ ಅನ್ನಿಸಿದೆ"
ಹ್ಮ್ ಇವಳದ್ದೊಂದು. ಈ ಇವಳ ಬಗ್ಗೆ ಹೇಳಿಬಿಡುತ್ತೇನೆ. ಇವಳು... ಹತ್ತಿರದವಳು, ಹುಟ್ಟುವಾಗ ಹೆತ್ತ ಅಮ್ಮ ಸತ್ತು, ಜನರ ಕಣ್ಣಲ್ಲಿ ಅನಿಷ್ಟದ ತಿವಿತ ತಿಂದವಳು ಇವಳ ಅದೃಷ್ಟಕ್ಕೆ ತಲೆಯಲ್ಲಿ ಒಂದು ಕೊಂಬು ಹೊತ್ತೇ ಹುಟ್ಟಿದಳು,ಇವಳ ವಿನಾಶ ಪರ್ವ ಆರಂಭವಾದದ್ದು ನಾನು ಹುಟ್ಟಿದಾಗಲೇ. ನಾನಿವಳ ಹೊರಗೆ ಹುಟ್ಟಿದೆ ಇವಳು ನನ್ನೊಳಗೆ ಹುಟ್ಟಿದಳು. ನಾನು ಹುಟ್ಟುವಾಗ ನಕ್ಕಳಂತೆ, ನಾನು ಬೆಳೆದೆ ಅವಳು ಅಳಲು ಮೊದಲು ಮಾಡಿದಳು, ಎಲ್ಲರೂ ಹೇಳುವಂತೆ ಅವಳು ದಿನವಿಡೀ ಅಳುತ್ತಿದ್ದಳಂತೆ ಅವಳ ಅಳುಗಳಿಗೆ ಕಾರಣಗಳು ಬೇಕಿರಲಿಲ್ಲ, ಅವಳ ಗಂಡ ಕುಡಿದು ಬಂದು ಹೊಡೆಯುತ್ತಿದ್ದ ಅದಕ್ಕೆ ಅಳು, ಹೊಡೆಯಲೇ ಇಲ್ಲ ಅದಕ್ಕ ಅಳು, ಅವಳ ಗೆಳಯ ನಾನು ನಗಲಿಲ್ಲ ಅದಕ್ಕೆ ಅಳು, ನಕ್ಕುಬಿಟ್ಟೆ ಅದಕ್ಕೂ ಅಳು, ಹೀಗೆ ಅಳುಗಳಲ್ಲಿ ಅವಳಿದ್ದಳು ಅಳುತ್ತಾ, ಅಳುತ್ತಾ ಮತ್ತೂ ಅಳುತ್ತಾ ಅವಳು ಬದುಕಾಡಿದಳು, ಆಗಾಗ ಅವಳು ಬರೆಯುತ್ತಿದ್ದಳು, ಯಾರಿಗೂ ಅರ್ಥವಾಗದ ಸಾಲುಗಳನ್ನು ತನ್ನಷ್ಟಕ್ಕೆ ತಾನೇ ಗೀಚಿ ಮತ್ತು ಅವು ಹೀಗಿರುತ್ತಿದ್ದವು

ಎತ್ತರಕ್ಕೆ ನಿಂತು ನೋಡುತ್ತೇನೆ
ಬಂಡೆಗಳ ಅಂಚುಗಳು ಕಾಣುತ್ತವೆ
ಕೊರಕಲಿನ ಕಡೆ ಕಣ್ಣು ಹಾಯಿಸುತ್ತೇನೆ
ನನ್ನದೇ ಶವ ಮಿಸುಕಾಡುತ್ತದೆ
ನಾನು ಇದ್ದೇನೆ ಮತ್ತು ಇಲ್ಲ
ಇವುಗಳ ನಡುವೆ ಇದ್ದೇನೆ
ಮತ್ತು ಇಲ್ಲ
ಹೀಗೆ ಅವಳ ಕವನಗಳಲ್ಲದ ಸಾಲುಗಳು ಕಣ್ಣಿಗೆ ರಾಚುತ್ತಿದ್ದವು, ವಿಷಾದಗೀತೆಯೊಂದನ್ನು ಕೋಗಿಲೆಯೊಂದು ಹಾಡಿದಂತೆ ಅವಳು ಹಾಡುತ್ತಿದ್ದಳು, ಮತ್ತು ಅವಳು ಸಂತೋಷವಾಗಿದ್ದಳು. ಅವಳಿಗೆ ನೋವಿರಲಿಲ್ಲ ಮನುಷ್ಯರಿಗೆ ಬಂದಂತೆ ಅವಳಿಗೂ ಅವಳ ದೇಹಕ್ಕೂ ನೋವು ಬರುತ್ತಿತ್ತು, ಅದು ಕಾಡುವಷ್ಟರಲ್ಲಿ ಇನ್ನೊಂದು ಬಂದು ಹಳೇ ನೋವನ್ನು ಮರೆಸಿಬಿಡುತ್ತಿತ್ತು, ಮತ್ತು ಇದು ನಡೆಯುತ್ತಲೇ ಇತ್ತು. ಶ್ರೀನಗರ ಹದಿನಾಲ್ಕನೆಯ ಕ್ರಾಸಿನಲ್ಲಿ ಅವಳ ಪುಟ್ಟ ಮನೆಯಿತ್ತು, ಒಂದು ಚಿಕ್ಕ ಹಾಲ್ ಮತ್ತ ಒಂದು ರೂಮು, ಅದರೊಳಗೆ ಅಡುಗೆಗೆ ಸ್ಲಾಬ್ ಹಾಕಿದ್ದರು, ಮತ್ತು ರೂಮನ್ನು ವಿಭಾಗಿಸಿ ಬಚ್ಚಲನ್ನಾಗಿಸಿದ್ದರು, ಅದೇ ಬಚ್ಚಲಲ್ಲಿ ಪಾಯಿಖಾನೆಯನ್ನೂ ಇರಿಸದ್ದರು. ಸುಮಾರು ಮೂರು ಕಿಟಕಿಗಳಿದ್ದ ಆ ಮನೆಗೆ ಬೆಳಕು ಬರದಂತೆ ಬಟ್ಟೆಯ ಚೂರುಗಳನ್ನು ಕಿಟಕಿಯ ಬಾಗಿಲುಗಳಿಗೆ ಸೇರಿಸಿಬಿಟ್ಟಿದ್ದಳು. ರೂಮಿನ ಎಡಭಾಗದ ಅಡುಗೆ ಸ್ಲಾಬಿನ ಕೆಳಗೆ ಟ್ರಂಕೊಂದು ತನ್ನ ರಹಸ್ಯವನ್ನು ಅಡಗಿಸಿಟ್ಟುಕೊಂಡಿತ್ತು. ನನಗೆ ಇವಳ ಪೂರ್ತಿ ಪರಿಚಯವಾದದ್ದು ನಾನು ಹನ್ನೆರಡು ವರ್ಷದವನಿದ್ದಾಗ. ಆವಳಿಗ ಆಗ ಮೂವತ್ತೇಳು ವಯಸ್ಸು ಬಹುಶಃ ಪ್ರಾಜ್ಞಾಘನನಿಗೆ ನೆನಪಿರಬಹುದು. ಕತ್ತಲ ಗವಿಯಂಥ ಮನೆಯೊಳಗೆ ನಾವು ನೀರು ಕೇಳಲು ಹೋಗಿದ್ದು, ಬಾಗಿಲ ಸಂದಿಯಿಂದ ಅವಳು ಇಣುಕಿ ನೋಡಿದ್ದು. ಮನೆಯೊಳಗೆ ಸದಾ ಉರಿಯುತ್ತಿದ್ದ ಬಲ್ಬು ಮತ್ತು ಅಲ್ಲೇ ಹೂಜಿಯಲ್ಲಿ ನೀರು.ತುಂಬಾ ಇಕ್ಕಟ್ಟಾದ ಮನೆಯೊಳಗೆ ಮತ್ತು ಕಿರಿಕಿರಿಯುಂಟುಮಾಡುವ ವಾತಾವರಣದೊಳಗೆ ಇರಲಾರದೆ ಪ್ರಾಜ್ಞಾ, ಹಿಂಸೆ ಅನುಭವಿಸತೊಡಗಿದ್ದ, ಆದರೆ ಅವಳು ನನಗೆ ಕುತೂಹಲದ ಗುಚ್ಚದಂತೆ ಕಾಣತೊಡಗಿದಳು. ಮುಂದೆಂದೂ ಅವನು ಆ ಮನೆಯೊಳಗೆ ಕಾಲಿಡಲಿಲ್ಲ, ಆದರೆ ನನ್ನ ಕಾಲುಗಳು ಅಲ್ಲಿಗೆ ಎಳೆಯುತ್ತಿತ್ತು ಆ ಮಂದ ಬೆಳಕಿನಲ್ಲಿ ಆಕೆ ಕವಿತೆಗಳನ್ನು ಹೇಳುತ್ತಿದ್ದಳು ನಾನು ನೋಡುತ್ತಿದ್ದೆ ನನ್ನ ನಿತ್ಯ ಕರ್ಮಗಳು ಅಲ್ಲಿಯೇ ಆಗುತ್ತಿದ್ದವು, ನಾನು ಆ ಮನೆಯವನಾಗಿದ್ದೆ ಮತ್ತು ಆಕೆ ನನ್ನ ತಾಯಿಯಾಗಿದ್ದಳು, ಸದಾ ಭಯದಿಂದ ಇರುತ್ತಿದ್ದ ಆಕೆಗೆ ಗಂಡನಿದ್ದಾನೋ ಇಲ್ಲವೋ ತಿಳಿದಿರಲಿಲ್ಲ, ಮನೆಯ ಹತ್ತಿರ ಯಾವ ಗಂಡು ದನಿ ಕೇಳಿದರೂ ರೇಗುತ್ತಿದ್ದಳು "ಪೋಕಿರಿ ಸೂಳೆಮಕ್ಕಳಾ, ಇಲ್ಲಿ ಮಾತಾಡಬೇಡಿರೋ ನಾನು ನನ್ನೊಳಗೆ ಮಲಗಿದ್ದೇನೆ" ಎನ್ನುತ್ತಿದ್ದಳು, ಆ ದನಿ ಕಿಟಕಿಗೆ ಹಾಕಿದ ಬಟ್ಟೆಯನ್ನು ತೂರಿ ಸ್ವಲ್ಪವೇ ಹೊರಹೋಗುತ್ತಿತ್ತು ಅವರ ಕಿವಿ ಸೋಕುವುದರೊಳಗಾಗಿ ಕರಗಿಹೋಗುತ್ತಿತ್ತು, ಆದರೆ ಇವಳ ಬಗ್ಗೆ ಗೊತ್ತಿದ್ದ ಜನ ಬೇಕಂತಲೇ ಗಟ್ಟಿದನಿಯಲ್ಲಿ ಮಾತಾಡುತ್ತಿದ್ದರು, ಇವಳು ಬಂಧಿಯಾದ ಇಲಿ ಮರಿಯಂತೆ ಕೂಗುತ್ತಿದ್ದಳು ಕ್ರಮೇಣ ನನ್ನ ದನಿ ಹೆಣ್ಣು ದನಿಯಾಗಿಬಿಟ್ಟಿತು.
********************
ಪತ್ರ ಅವಳದ್ದಾಗಿದ್ದರೆ , ಜ್ಞಾನವಿಭು ಕಂಪಿಸತೊಡಗಿದ, ಹೋಗಬೇಕೋ ಬೇಡವೋ,ಈ ಅವತಾರದಲ್ಲಿ ಅವಳೆದುರು ನಿಲ್ಲುವುದು ಹೇಗೆ? ಬದುಕಿನಲ್ಲಿ ನೆಲೆಸಿಲ್ಲ, ಬದುಕು ನನ್ನಲ್ಲೂ ನೆಲೆಸಿಲ್ಲ ನಾನು ಭಿಕ್ಷೆಬೇಡುತ್ತಾ ಬದುಕುತ್ತಿದ್ದೇನೆ ಎಂದು ತಿಳಿದರೆ ಅವಳು ಅಳುತ್ತಾಳೇನೋ, ಇಲ್ಲ, ನಾನು ಕವಿತೆಗಳನ್ನು ಬರೆಯುವುದನ್ನು ನಿಲ್ಲಿಸಿರುವೆ ಎಂದರೆ ಅಳುತ್ತಾಳೆ,ಅವಳ ಬದಲಾಗಿ ಇನ್ಯಾರಾದರೂ ಪತ್ರ ಬರೆದಿರಬಹುದು, ಅವಳ ಸಾವಿನ ಸುದ್ದಿ ಹೇಳಲು.ಹಾಗಿದ್ದರೆ ಪತ್ರ ಸುಟ್ಟುಬಿಡುವುದೇ ಸರಿ, ಅವಳನ್ನೇ ಸುಡುತ್ತಾರೆ ಎಂದಮೇಲೆ ಸಾವಿನ ಪತ್ರಕ್ಕೇನು ಬೆಲೆ, ಪತ್ರದ ಹತ್ತಿರ ಹೋಗುತ್ತಿದ್ದ ಹಾಗೆ ಜ್ಞಾನವಿಭು ಮತ್ತೂ ನಡುಗತೊಡಗಿದ, ಇದು ಈ ಇವಳದ್ದಾಗಿದ್ದರೆ....
ಕಾಲೇಜಿನ ನೋಟೀಸ್ ಬೋರ್ಡಿನಲ್ಲಿ ನನ್ನ ಮೊದಲ ಕವನಕ್ಕೆ ಹತ್ತಿರವಾದವಳು, ಅದು ಹೀಗಿತ್ತು
ಕತ್ತಲಿದೆ ಮತ್ತು ಬೆಳಕೂ ಇದೆ
ಕತ್ತಲಿನ ಅಸ್ತಿತ್ವ ಬೆಳಕಿದ್ದರೆ ಮಾತ್ರ
ಬೆಳಕಿನ ಇರುವು ಕತ್ತಲಿದ್ದರೆ ಮಾತ್ರ
ಓಡುವ ಕಾಲದೊಳಗೆ ನಾನು ನೀನು
ಇರಬಹುದು ಆ ಅವಳು ಮತ್ತು ಅವನು
ಗವಿಯೊಳಗಿನ ಗಾಢಕ್ಕೆ
ಮಿಂಚುಹುಳದ ಮೇಲೆ ಪ್ರೀತಿ
ತಾನು ಸತ್ತರೂ ಅಪ್ಪಿಕೊಳ್ಳುತ್ತದೆ
ಬೆಳಕಿನ ಹುಳುವನ್ನು ಮತ್ತು ಬೆಳಕನ್ನು
ತ್ಯಾಗಿ ಕತ್ತಲೆಗೆ ಪ್ರಾಯಶ್ಚಿತ್ತ
ಏನು ನೋಡಿದಳೋ ಈ ಕವನದಲ್ಲಿ ಬಂದಳು ಮಾತನಾಡಿಸಿದಳು ಅವಳೊಳಗೆ ಒಂದು ನಿರ್ಧಾರವಿತ್ತು ಮತ್ತು ಆತುರವಿತ್ತು . ಆಡುವುದನ್ನು ಬೇಗ ಆಡಿ ಮುಗಿಸದಿದ್ದರೆ ಸತ್ತು ಹೋಗುತ್ತೇನೋ ಎನ್ನುವಂತೆ ಮಾತಾಡುತ್ತಿದ್ದಳು ಅವಳ ಮನೆಯಲ್ಲಿ ಎಲ್ಲರೂ ಮೌನಿಗಳೇ, ಇವಳಿಗೆ ಮಾತಿಗೆ ಜನ ಬೇಕಿತ್ತು "ಸ್ವರ ಹೊರಡದೆ ಇದ್ದರೆ ಸತ್ತು ಹೋಗ್ತೀನಿ ಅನ್ಸುತ್ತೆ ಕಣೋ",ಎನ್ನುತ್ತಿದ್ದಳು. ಅವಳ ಮಾತುಗಳಿಗೆ ನಾನು ಮೂಕನಾಗಿದ್ದೆ, ’ಹ್ಮ್’ ’ಹೌದು’ ’ಇಲ್ಲ’ ’ಅದು...’ ಇಷ್ಟೇ ನನ್ನ ಮಾತುಗಳಾಗಿದ್ದವು, ನನ್ನ ಮಾತನ್ನೂ ಅವಳೇ ಪೂರ್ತಿ ಮಾಡುತ್ತಿದ್ದಳು ಮತ್ತು ನಾನೇ ಅವಳಾಗಿದ್ದಳು. ನನ್ನದೇ ಯೋಚನೆ ನನ್ನದೇ ನಡೆ ಅವಳಾಗಿತ್ತು,’ಅವಳು ಪ್ರೀತಿಸುತ್ತಿದ್ದಳಾ?’ ಪ್ರಾಜ್ಞಾ ನಕ್ಕುಬಿಡುತ್ತಿದ್ದ. ’ನಿಮ್ಮಿಬ್ಬರ ಜೋಡಿ ಕಹಳೆಬಂಡೆಯ ಥರ ಎಂದಿದ್ದ’ ನಾನು ತುಂಬಾ ಅಂತರ್ಮುಖಿಯಾಗಿದ್ದೆ, ನನ್ನೊಳಗೆ ಅದೆಂಥದೋ ವೇದನೆಯಿತ್ತು, ಸಂತೋಷವಾಗಿದ್ದೆ, ಬಹುಶ ಅತಿಯಾದ ಸಂತೋಷವೂ ವೇದನೆಯೇನೋ, ಅವಳಿಗೆ ಅದನ್ನೇ ಹೇಳಿದ್ದೆ, ’ನೀನಿರುವುದೇ ಸಂತೋಷ,’ ಎಂದಿದ್ದೆ. ಅವಳು ತೇಲಿಸಿಬಿಟ್ಟಿದ್ದಳು, ನಾನು ಒಳ ಸರಿಯುವ ಮುನ್ನ ಅವಳು ನನ್ನನ್ನು ಹೊರಗೆಳೆಯಲು ಆರಂಭಸದಳು,ಅವಳಿಗೊಂದು ಹೆಸರಿಡಬೇಕಿತ್ತು, ಅವಳಿಗಿದ್ದ ಹೆಸರು ಪ್ರಜ್ಞಾ ನಾನು ಅವಳನ್ನು ಜೀವಿಕಾ ಎನ್ನುತ್ತಿದ್ದೆ, ನನ್ನೊಳಗಿನ ಹೆಣ್ಮನಕ್ಕೆ ಅವಳು ಗೆಳತಿಯಾಗಿದ್ದಳು ಜೀವವಾಗದ್ದಳು ಅವಳು ಭಾವುಕಳಾಗಿದ್ದಳು ನನ್ನ ಅವಳ ನಡುವಿನ ಮಾತುಗಳು ಹೀಗೆ ಕತ್ತರಿಸದಂತೆ ಇರುತ್ತಿದ್ದವು
"ಬದುಕು ತುಂಬಾ ಸುಲಭ ಅಲ್ವೇನೋ ಜ್ಞಾನವಿಭು"
"ಹ್ಮ್"
"ಎಲ್ಲದಕ್ಕೂ ಪರಿಹಾರವಿದೆ, ಎಲ್ಲ ಕಡೆ ಸಮಸ್ಯೆನೂ ಇದೆ,"
"ಹೌದು"
"ಕುರುಡುತನಕ್ಕೆ ಕತ್ತಲೆ ಬೆಳಕಿನ ಹಾಗೆ ಕಾಣುತ್ತೆ ಅನ್ಸುತ್ತೆ"
"ಇರಬಹುದು"
"ಆದರೆ ಕತ್ತಲೇ ಕುರುಡಾಗಿಬಿಟ್ರೆ?"
"ಏನಾಯ್ತೆ?"
"ತೊಟ್ಟಿಲು ಕಟ್ಟೋಣ ಅನ್ನಿಸ್ತಿದೆ ಜ್ಞಾನವಿಭು"
"ಓದಿದ್ದು ಸಾಲ್ದು ಓದು ಇನ್ನೂ..."
"ಪುಟ್ಟದೊಂದು ಕೈಗಳ ಕೈಲಿ ಹೊಡೆಸಿಕೊಳ್ತಿದ್ರೆ ಕತ್ತಲು ಹೋಗಬಹುದು ಅಂತಿಯಾ?"
"ಹ್ಮ್"
"ಮದ್ವೆ ಆಗೋಣವಾ?"
"ಬೇಡ"
"ಗಾಳಿಗೋಪುರವಲ್ಲ ಕಣೋ, ಇವೆ ಹೀಗೆ ಕನಸುಗಳ ರೆಕ್ಕೆಗಳು"
"ಸಧ್ಯಕ್ಕೆ ಗೂಡಿನಲ್ಲಿರು, ರೆಕ್ಕೆ ಬಲಿತ ಮೇಲೆ ಹಾರು"
"ಹಾರದೆ ರೆಕ್ಕೆ ಬಲಿಯೋದು ಹೇಗೆ?"
"ಹ್ಮ್"
"ನಿನ್ನ ರೆಕ್ಕೆಗಳನ್ನು ನನಗೆ ಕೊಡೋ....!"
"ಹ್ಮ್"
ದೂರದಲ್ಲೆಲ್ಲೋ ಜನರು ನೋಡುತ್ತಿದ್ದರು ಮರೆಯಾಗುತ್ತಿದ್ದರೆ ಕರಗುತ್ತಿದ್ದರು, ಇವಳು ಹೊಡೆಯತೊಡಗಿದಳು, "ನಿನ್ನ ರೆಕ್ಕೆಗಳನ್ನು ಕೊಡೋ "
"ಹ್ಮ್"
ನನ್ನ ಪುಟ್ಟ ರೂಮಿನ ಒಳಗೆ ಹೆಜ್ಜೆಯಿಟ್ಟು ಬಂದೆವು, ಅವಳು ಬಿಕ್ಕುತ್ತಿದ್ದಳು, ನಾನು ನಗತ್ತಿದ್ದೆ ಒಳಗೇ "ನನಗಿಲ್ಲದ ರೆಕ್ಕೆಗಳನ್ನು ಹೇಗೆ ಕೊಡಲಿ ಜೀವು?","ಇಲ್ಲ ಜ್ಞಾನವಿಭು ನೀನು ಹಾರಬಲ್ಲೆ ನಿನ್ನ ರೆಕ್ಕೆಗಳಿಗೆ ನೀನೇ ಅಂಟು ಹಾಕಿ ಅಂಟಿಸಕೊಂಡಿರವ, ಬಿಡಿಸೋ, ಬಿಡಿಸಿ ಕೊಡೋ, ನಾನು ರೆಕ್ಕೆಗಳನ್ನು ತೆರೆದೆ, ಅವಳು ನನ್ನ ರೆಕ್ಕೆಗಳ ಒಳಗೆ ಸೇರಿ ಮರಿಯಾದಳು ಬಿಸಿಯಾದಳು ನಾನು ರೆಕ್ಕೆಗಳನ್ನು ಅಗಲಿಸತೊಡಗಿದೆ ಅವಳು ತುಂಬಿಸಿಕೊಳ್ಳತೊಡಗಿದಳು
ನನ್ನ ನಗು ಅಳುವಾಗತೊಡಗಿತ್ತು ಅವಳ ಅಳು ನಗುವಾಗುತ್ತಿತ್ತು, ಕ್ರಮೇಣ ಅವಳು ನನ್ನ ರೆಕ್ಕಗಳನ್ನ ಕತ್ತರಿಸತೊಡಗಿದಳು, ನಾನು ಸುಮ್ಮನಿದ್ದೆ, ನನ್ನ ಎರಡೂ ರೆಕ್ಕಗಳು ಕತ್ತರಿಸಲ್ಪಟ್ಟವು ನಾನಿನ್ನು ಹಾರಲಾರೆ, ಅವಳಿಗೆ ಅದೇ ಬೇಕಿತ್ತು ಮಾರನೆಯ ದಿನ ಅವಳು ಕಾಲೇಜಿಗೆ ಬರಲಿಲ್ಲ, ಪ್ರಾಜ್ಞಾನೂ ಬರಲಿಲ್ಲ ಅವಳಿಂದ ಆಗಾಗ ಪತ್ರಗಳು ಬರುತ್ತಿತ್ತು, ಒಮ್ಮೊಮ್ಮೆ ಬಾಂಬೆಯಿಂದ ಇನ್ನೊಮ್ಮೆ ಡೆಲ್ಲಿಯಿಂದ
***********************
ಮೊನ್ನೆ ಬರೆದ ಪತ್ರದಲ್ಲಿ ಬರುತ್ತೇನೆ ಎಂದಿದ್ದಳು, ಬರಬಹುದಾ? ಆ ಪತ್ರವಿರಬಹದಾ? ಪತ್ರವನ್ನು ಮುಟ್ಟದೆ ಎರಡು ದಿನವಾಗಿದೆ, ಮಳೆ ಬಂದು ಕಾಗದ ನೆಂದಿದೆ ಅಕ್ಷರಗಳು ಇಳಿಜಾರಿನಲ್ಲಿನ ನೀರಿನಂತಾಗಿದೆ, ಯಾರ ಪತ್ರ ಎಂಬುದು ನಿರ್ಧರಿಸದೆ ಜ್ಞಾನವಿಭು ಹಿಂಸೆಯನ್ನು ಅನುಭವಿಸತೊಡಗಿದ್ದ, ನಿನ್ನ ರೆಕ್ಕೆಗಳನ್ನು ನಿನಗೆ ಮರಳಿ ಕೊಟ್ಟುಬಿಡುತ್ತೇನೆ ಎಂದಿದ್ದಳು, ಇಲ್ಲ ಸಾಧ್ಯವೇ ಇಲ್ಲ ರೆಕ್ಕೆಗಳನ್ನು ಕೃತಕವಾಗಿ ಅಂಟಿಸಿಕೊಂಡರೆ ಹಾರಲದೀತೇ? ಇಲ್ಲ ಸಾಧ್ಯವೇ ಇಲ್ಲ
ಬೇಡದ ರೆಕ್ಕೆಗಳು
ಜಲಪಾತದೊಳಗೆ ನೇರ ನಿಂತು
ಅರ್ಧಗಣ್ಣು ತೆರೆದು ನೋಡಿದರೂ
ಕಾಣಿಸಲೇ ಇಲ್ಲ ಅರ್ಜುನ
ಹದ ಮೀರಿದ ಹೆದೆಯ ಟುಯ್ಗುಡುವಿಕೆಗೆ
ಲಯವೂ ಇಲ್ಲ ಸ್ವರವೂ ಇಲ್ಲ
ನಾನು ಆತ್ಮವಾದೆ
ಗಂಡೂ ಅಲ್ಲ
ಹೆಣ್ಣೂ ಅಲ್ಲ
ಬಿಲ್ಲಿನ ದಾರ ಮುರಿದು ಬರಿಯ
ಬಿದಿರು ಕಾಣತೊಡಗಿದ್ದು
ಸೋಜಿಗವಲ್ಲ
ನಾನು ಆತ್ಮವಾದೆ
ತುಟಿಗೆ ಕೆಂಪು
ಕಣ್ಣೊಳಗೆ ಕಪ್ಪು
ಎದೆಯೊಳಗೆ ಉರಿ
ನಾನು ಆತ್ಮವಾದೆ
ಗಂಡೂ ಅಲ್ಲ
ಹೆಣ್ಣೂ ಅಲ್ಲ
ಪತ್ರವನ್ನು ಬಿಟ್ಟು ಹೊರಟ ಜ್ಞಾನವಿಭು , ಸುಡಲಿಲ್ಲ ಹರಿಯಲಿಲ್ಲ ಓದಲೂ ಇಲ್ಲ ಚಿಂಗ್ರಿ ಕರೆಯುತ್ತಿದ್ದಳು "ಲೇ ಬಾರೆ ಬೇಗ!" ಜ್ಞಾನವಿಭು ಸೀರೆಗೆ ನೆರಿಗೆ ಹಾಕಿ ಭಿಕ್ಷೆಗೆ ಹೊರಟ

Rating
No votes yet

Comments

Submitted by kavinagaraj Tue, 11/25/2014 - 08:40

ಕುತೂಹಲಕಾರಿಯಾಗಿದೆ.

Submitted by Harish Athreya Wed, 11/26/2014 - 14:40

In reply to by kavinagaraj

ರೆಕ್ಕೆ ಸಂಕೇತರೂಪಿಯಷ್ಟೆ, ಪ್ರತಿಕ್ರಿಯೆಗೆ ಧನ್ಯವಾದಗು